ಮುಳ್ಯಯ್ಯನಗಿರಿಯಲ್ಲಿ ಕಾಡ್ಗಿಚ್ಚು: ಹುಲ್ಲುಗಾವಲು ಭಸ್ಮ

ಬುಧವಾರ, ಜೂಲೈ 17, 2019
23 °C

ಮುಳ್ಯಯ್ಯನಗಿರಿಯಲ್ಲಿ ಕಾಡ್ಗಿಚ್ಚು: ಹುಲ್ಲುಗಾವಲು ಭಸ್ಮ

Published:
Updated:
ಮುಳ್ಯಯ್ಯನಗಿರಿಯಲ್ಲಿ ಕಾಡ್ಗಿಚ್ಚು: ಹುಲ್ಲುಗಾವಲು ಭಸ್ಮ

ಚಿಕ್ಕಮಗಳೂರು: ಚಾರಣಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ ತಪ್ಪಲಿಗೆ ಶನಿವಾರ ಸಂಜೆ ಕಾಡ್ಗಿಚ್ಚು ಹರಡಿದ್ದು, ಅಂದಾಜು 25 ಹೆಕ್ಟೇರ್‌ಗೂ ಹೆಚ್ಚಿನ ಶೋಲಾ ಹುಲ್ಲುಗಾವಲು ಮತ್ತು ಶೋಲಾ ಅರಣ್ಯ ಬೆಂಕಿಗೆ ಆಹುತಿಯಾಗಿದೆ.

ಸಂಜೆ ಸುಮಾರು 4 ಗಂಟೆಯಲ್ಲಿ ಮುಳ್ಳಯ್ಯನಗಿರಿ ಶ್ರೇಣಿಯ ಸೀತಾಳಯ್ಯನಗಿರಿಯಲ್ಲಿ ಬೆಂಕಿ ಕಾಣಿಸಿಕೊಂಡಿತು. 7 ಗಂಟೆ ಸುಮಾರಿಗೆ ಕಾಡ್ಗಿಚ್ಚಿ ಅಬ್ಬರ ಜೋರಾಯಿತು. ಬೆಂಕಿಯ ಕೆನ್ನಾಲಿಗೆ ಹುಲ್ಲುಗಾವಲು, ಅಪರೂಪದ ಸಸ್ಯ ಸಂಕುಲ ಭಸ್ಮವಾಗಿದೆ. ವಲಯಾರಣ್ಯಾಧಿಕಾರಿ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಗಾಳಿಯ ರಭಸ ಹೆಚ್ಚಿದ್ದರಿಂದ ರಾತ್ರಿಯಾದರೂ ಬೆಂಕಿ ನಿಯಂತ್ರಣಕ್ಕೆ ಬರಲಿಲ್ಲ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಭಾಗದಲ್ಲಿ ಕಂದಾಯ ಭೂಮಿ ಮತ್ತು ಸರ್ಕಾರಿ ಭೂಮಿಯ ಹೆಚ್ಚು ಇದೆ. ಈ ಭಾಗದಲ್ಲಿ ಬೆಂಕಿ ತಡೆಯಲು ‘ಫೈರ್‌ಲೈನ್‌’ ನಿರ್ಮಿಸುತ್ತಿಲ್ಲ. ಇಲ್ಲಿರುವ ಅಪರೂಪದ ಹುಲ್ಲುಗಾವಲು, ಶೋಲಾ ಅರಣ್ಯ ಪ್ರತಿ ವರ್ಷ ಕಿಡಿಗೇಡಿಗಳು ಹಚ್ಚುವ ಕಾಡ್ಗಿಚ್ಚಿಗೆ ಬಲಿಯಾಗುತ್ತಿದೆ. ಈ ಬಾರಿಯೂ ಕಿಡಿಗೇಡಿಗಳು ಗಿರಿಗೆ ಬೆಂಕಿ ಇಟ್ಟಿರುವ ಶಂಕೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಸಂಜೆ 6.30ರ ವೇಳೆಗೆ ಸಾರ್ವಜನಿಕರು ಮುಳ್ಳಯ್ಯನಗಿರಿಗೆ ಬೆಂಕಿ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿತು. ತಕ್ಷಣ ಕಾರ್ಯಪ್ರವೃತ್ತರಾಗಿ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ. ಬೆಂಕಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮುತ್ತೋಡಿ ವಲಯದಿಂದಲೂ ಹೆಚ್ಚಿನ ಸಿಬ್ಬಂದಿಯನ್ನು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಕರೆಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry