7

ಹಿಮ್ಮುಖ ಚಲನೆಯಲ್ಲಿ ಆಂತರಿಕ ಭದ್ರತೆ

ಶೇಖರ್‌ ಗುಪ್ತ
Published:
Updated:
ಹಿಮ್ಮುಖ ಚಲನೆಯಲ್ಲಿ ಆಂತರಿಕ ಭದ್ರತೆ

ಸರಿಸುಮಾರು ದಶಕದ ಹಿಂದೆ ಭಾರತಕ್ಕೆ ಬಾಹ್ಯ ಮತ್ತು ಆಂತರಿಕ ಬೆದರಿಕೆ  ಈಗಿನಷ್ಟು ಇದ್ದಿರಲಿಲ್ಲ ಎನ್ನುವುದು ಹೆಚ್ಚು ಸಮಂಜಸವಾದ ವಾದವಾಗಿದೆ. ಅದೊಂದು ಕಾಲಘಟ್ಟವನ್ನು ನಾವೆಲ್ಲ ಈಗ ಹಾದು ಬಂದಿದ್ದೇವೆ. ಅಹಿತವಾದುದನ್ನೇ ನಯವಾದ ಮಾತುಗಳಲ್ಲಿ ಹೇಳುವುದಾದರೆ, ವರ್ಷಗಳ ಹಿಂದೆ ಗಡಿಯಲ್ಲಿ ಮತ್ತು ದೇಶದ ಒಳಗೆ ಹೊಸ ಬೆದರಿಕೆಗಳಾಗಲಿ ಮತ್ತು ತೊಂದರೆಗಳಾಗಲಿ ಎದುರಾಗಿರಲಿಲ್ಲ ಎಂದು ಸುತ್ತಿಬಳಸಿ ಹೇಳಬೇಕಾಗುತ್ತದೆ. ಗಡಿ ನಿಯಂತ್ರಣ ರೇಖೆಗುಂಟ ಕೆಲ ದಿನಗಳ ಹಿಂದೆ ಸಂಘರ್ಷ ನಡೆದರೂ ಗಡಿ ಪ್ರದೇಶದಲ್ಲಿನ ಪರಿಸ್ಥಿತಿಯು ಸದ್ಯಕ್ಕೆ ಈ ಮೊದಲಿನಂತೆಯೇ ಇದೆ. ದೇಶದ ಒಳಗಿನ ಹಳೆಯ ಸಮಸ್ಯೆಗಳೇ ಮತ್ತೆ ಭುಗಿಲೆದ್ದು ಆಂತರಿಕ ಭದ್ರತೆಗೆ ಬೆದರಿಕೆ ಒಡ್ಡುತ್ತಿವೆ. ಗಡಿ ಭಾಗದಲ್ಲಿ ಬಹುತೇಕ ಶಾಂತಿ ನೆಲೆಸಿದ್ದು, ಗಡಿ ಪ್ರದೇಶವು ಹೆಚ್ಚು ಕಡಿಮೆ ಸುರಕ್ಷಿತವಾಗಿವೆ. ಯಾವುದೇ ಹೊಸ ಬೆದರಿಕೆಗಳಿಲ್ಲ. ಆದರೆ, ಆಂತರಿಕ ಭದ್ರತಾ ಪರಿಸ್ಥಿತಿ ಮಾತ್ರ ದಿನೇ ದಿನೇ ಉಲ್ಬಣಿಸುತ್ತಿರುವುದು ತೀವ್ರ ಕಳವಳಕ್ಕೆ ಎಡೆಮಾಡಿದೆ.

 

2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ ಆಂತರಿಕ ಭದ್ರತಾ ಪರಿಸ್ಥಿತಿ ಹೆಚ್ಚುಕಡಿಮೆ ನೆಮ್ಮದಿಯ ಮಟ್ಟದಲ್ಲಿತ್ತು. ಅದು ಹೊಸ ಸರ್ಕಾರಕ್ಕೆ ಹಿಂದಿನ ಸರ್ಕಾರದ ಬಳುವಳಿ ರೂಪದಲ್ಲಿ ಬಂದಿತ್ತು. ಕಾಶ್ಮೀರದಲ್ಲಿ ಹೆಚ್ಚುಕಡಿಮೆ ಶಾಂತಿ ನೆಲೆಸಿತ್ತು. ಈಶಾನ್ಯ ರಾಜ್ಯಗಳೂ ಬಹುಮಟ್ಟಿಗೆ ಸುದ್ದಿಗೆ ಆಹಾರವಾಗುವುದರಿಂದ ದೂರ ಉಳಿದಿದ್ದವು. ಆದರೆ, ‘ಎಡಪಂಥೀಯ ಉಗ್ರವಾದದ ನೆಲೆ’ ಎಂದು ಕೇಂದ್ರ ಸರ್ಕಾರ ಬಣ್ಣಿಸುವ ನಕ್ಸಲರ ಉಪಟಳವು ಹೆಚ್ಚು ಕಳವಳಕ್ಕೆ ಎಡೆಮಾಡಿಕೊಟ್ಟಿತ್ತು.

 

ಯುಪಿಎ ಸರ್ಕಾರವು ಮಾವೊವಾದಿಗಳ ಶಸ್ತ್ರಸಜ್ಜಿತ ಹೋರಾಟವನ್ನು ತೀವ್ರ ವಿರೋಧಾಭಾಸದಿಂದಲೇ ಎದುರಿಸಿತ್ತು. ನಕ್ಸಲರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಗೊಂದಲ ಇತ್ತು. ಅಂದಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ನಕ್ಸಲರ ಸಮಸ್ಯೆಯು  ದೇಶದ ಅತ್ಯಂತ ಪ್ರಮುಖ ಭದ್ರತಾ ಬೆದರಿಕೆ ಎಂದೇ ಖಚಿತವಾಗಿ ಪರಿಗಣಿಸಿದ್ದರು.  ಪೊಲೀಸರು ಮತ್ತು ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿ ಗರಿಷ್ಠ ಸಂಖ್ಯೆಯಲ್ಲಿ ಸಾವು ನೋವಿಗೆ ಗುರಿಯಾಗಿದ್ದರು. ರಾಜಕಾರಣಿಗಳೂ ಹತ್ಯೆಗೆ ಒಳಗಾಗುವ ಭೀತಿಯಲ್ಲಿಯೇ ದಿನದೂಡುತ್ತಿದ್ದರು. ನಕ್ಸಲರು ಕಾನೂನುಬಾಹಿರವಾಗಿ ತೆರಿಗೆ ಸಂಗ್ರಹಿಸುತ್ತಿದ್ದರು. ಸುಲಿಗೆಯಂತೂ ಎಗ್ಗಿಲ್ಲದೇ ನಡೆಯುತ್ತಿತ್ತು. ಇದರ ಜತೆಗೆ, ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಜಿಹಾದಿಗಳ ಮತ್ತು ಸ್ಥಳೀಯ ವಿದ್ರೋಹಿಗಳ ಬೆದರಿಕೆಯೂ ನಿರಂತರವಾಗಿತ್ತು. ಆದರೆ, 2008ರ ನಂತರ ಇಂತಹ ಬೆದರಿಕೆಗಳು ಕೆಲಮಟ್ಟಿಗೆ ತಗ್ಗಿದ್ದವು. 

 

ಎರಡೂವರೆ ವರ್ಷಗಳಲ್ಲಿ ಆಂತರಿಕ ಭದ್ರತಾ ಪರಿಸ್ಥಿತಿಯ ಚಿತ್ರಣವು ಗಮನಾರ್ಹವಾಗಿ  ಬದಲಾಗಿದೆ.  ಮಾವೊವಾದಿಗಳ ಪ್ರಭಾವ ಇರುವ ಪ್ರದೇಶದಲ್ಲಿನ ಹಿಂಸೆಯು ಕೆಲಮಟ್ಟಿಗೆ ತಹಬಂದಿಗೆ ಬಂದಿದೆ.  ಭದ್ರತಾ ಪಡೆಗಳ ಸಾವು – ನೋವಿನ ಸಂಖ್ಯೆ ಕಡಿಮೆಯಾಗಿದೆ.  ಎನ್‌ಕೌಂಟರ್‌ಗಳಲ್ಲಿ ನಡೆದ ಹತ್ಯೆ, ಬಂಧನ ಹಾಗೂ ಗರಿಷ್ಠ ಸಂಖ್ಯೆಯಲ್ಲಿನ ಶರಣಾಗತಿಗಳಿಂದಾಗಿ ಸಶಸ್ತ್ರ ಬಂಡುಕೋರರ ಹಾವಳಿಯು ನಿಯಂತ್ರಣಕ್ಕೆ ಬಂದಿದೆ. ರಾಜ್ಯ ಸರ್ಕಾರಗಳ ಹಿಡಿತ  ಹೆಚ್ಚುತ್ತಿದೆ. ಗಣಿಗಾರಿಕೆ ಚಟುವಟಿಕೆಗಳು ಕ್ರಮೇಣ ಗರಿಗೆದರುತ್ತಿವೆ.  ಆದರೆ,  ಕಾಶ್ಮೀರ, ಈಶಾನ್ಯ ರಾಜ್ಯಗಳ ಸಮಸ್ಯೆ ಮತ್ತು ಐಎಸ್‌ಐ, ಐಎಂ, ಐಎಸ್‌ ಭಯೋತ್ಪಾದಕರ ಬೆದರಿಕೆಗಳು ಈ ಮೊದಲಿನಂತೆಯೇ ಮತ್ತೆ ತೀವ್ರಗೊಂಡಿವೆ.

 

ಹಿಂಸಾಚಾರ ಮರುಕಳಿಸಿರುವುದಕ್ಕೆ ಸಂಬಂಧಿಸಿ ಹೇಳುವುದಾದರೆ, ದಶಕದ ನಂತರ ಕಾಶ್ಮೀರ ಸಮಸ್ಯೆ ಮತ್ತೆ ಮುಂಚೂಣಿಗೆ ಬಂದು ನಿಂತಿದೆ.   ಪಾಕಿಸ್ತಾನದ ಜತೆಗಿನ ಬಾಂಧವ್ಯವು ಸದಾ ಏರಿಳಿತ ಕಾಣುತ್ತಲೇ ಬಂದಿದ್ದು, ಸದ್ಯಕ್ಕಂತೂ ಈ ಸಂಬಂಧ ಇನ್ನಷ್ಟು ಹಳಸಿದೆ. ಇದಕ್ಕೆ ಭಾರತ ರಾಜಕೀಯವಾಗಿ ಕೈಗೊಂಡ ನಿರ್ಧಾರ ಕಾರಣವಾಗಿದೆ. ಹಿಂದಿನ ಕೆಲ ತಿಂಗಳುಗಳಲ್ಲಿ ಕಾಶ್ಮೀರದಲ್ಲಿ ನಡೆದ ಬೆಳವಣಿಗೆಗಳು 2010–11ರ ಕರಾಳ ದಿನಗಳನ್ನು ಮತ್ತೆ ನೆನಪಿಸಿವೆ. ಶಾಂತಿಯುತವಾಗಿ ನಡೆದ ಚುನಾವಣೆಯ ಯಶಸ್ಸು ಮತ್ತು ರಾಜಕೀಯ ಸಂಧಾನ ಪ್ರಕ್ರಿಯೆ ಪುನರಾರಂಭದ ಪ್ರಯತ್ನಗಳನ್ನೆಲ್ಲ ಈ ವಿದ್ಯಮಾನಗಳು ಹಾಳು ಮಾಡಿವೆ.

 

ಸೈದ್ಧಾಂತಿಕವಾಗಿ ವಿಭಿನ್ನ ರಾಜಕೀಯ ಪಕ್ಷಗಳಾದ ಪಿಡಿಪಿ ಮತ್ತು ಬಿಜೆಪಿ ನಡುವಣ ಮೈತ್ರಿಯಿಂದ ಮುತ್ಸದ್ದಿತನದ ರಾಜಕೀಯವನ್ನು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಅಂತಹ ಪ್ರಯತ್ನ ಕಾಣದೇ ಮೈತ್ರಿಕೂಟ ರಚನೆಯ ಉದ್ದೇಶ ಕಾರ್ಯಗತಗೊಳ್ಳದೆ ವಿಫಲಗೊಂಡಿದೆ. ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್ ರಾವತ್‌ ಸ್ಥಳೀಯರ ವಿರುದ್ಧ ತೀವ್ರ ಕೋಪತಾಪ ವ್ಯಕ್ತಪಡಿಸಿ, ಸುದ್ದಿಗೆ ಆಹಾರವಾಗಿದ್ದಾರೆ. ಆದರೆ, ಕಾಶ್ಮೀರ ಕಣಿವೆಯಲ್ಲಿನ ವಸ್ತುಸ್ಥಿತಿ ಬೇರೆಯದೇ ಚಿತ್ರಣ ನೀಡುತ್ತದೆ. ಸ್ಥಳೀಯರಲ್ಲಿ ಮಡುಗಟ್ಟಿರುವ ಹತಾಶ ಭಾವನೆ ದಿನೇ ದಿನೇ ಹೆಚ್ಚುತ್ತಲೇ ಇದೆ.

 

ಯುದ್ಧ ಕಾರ್ಯತಂತ್ರದಲ್ಲಿ ಪ್ರಾವೀಣ್ಯ ಸಾಧಿಸಿರುವ ಸೇನೆ, ರಣರಂಗದಲ್ಲಿನ ಯುದ್ಧವನ್ನು ಉತ್ಸಾಹದಿಂದಲೇ ಎದುರಿಸಲಿದೆ.  ಆದರೆ ಯುದ್ಧಭೂಮಿಯ ಹೋರಾಟಕ್ಕೆ ಹೋಲಿಸಿದರೆ ಕಡಿಮೆ ತೀವ್ರತೆಯ, ನಗರ ಪ್ರದೇಶದಲ್ಲಿನ ಕಾರ್ಯಾಚರಣೆ ಅದರಲ್ಲೂ ವಿಶೇಷವಾಗಿ ಕೋಪೋದ್ರಿಕ್ತ ಸಾವಿರಾರು ನಾಗರಿಕರನ್ನು ನಗರದ ಬೀದಿಗಳಲ್ಲಿ ಎದುರಿಸುವುದು ಸೇನೆಯ ಪಾಲಿಗೆ ತುಂಬ ಭಿನ್ನವಾದ ಪರಿಸ್ಥಿತಿಯಾಗಿರುತ್ತದೆ. ರಕ್ತಪಾತಕ್ಕೆ ಎಡೆಮಾಡಿ ಕೊಡದ ರೀತಿಯಲ್ಲಿ ನಾಗರಿಕರನ್ನು ಎದುರಿಸಲು ಸೇನೆಯ ಬಳಿ ಸೂಕ್ತ ಸಾಧನಗಳಿಲ್ಲ. ಕಲ್ಲುಗಳನ್ನು ತೂರುವುದೇ ಜನಜಂಗುಳಿಯ ಬಳಿ ಇರುವ ಅತ್ಯಂತ ಅಪಾಯಕಾರಿ ಅಸ್ತ್ರವಾಗಿದೆ. ಸ್ವಯಂಚಾಲಿತ ರೈಫಲ್‌ವೊಂದೇ ಸೇನೆಯ ಬಳಿ ಇರುವ ಅತ್ಯಂತ ಕಡಿಮೆ ಅಪಾಯದ ಶಸ್ತ್ರವಾಗಿದೆ. ಸಮರದಲ್ಲಿ ಹೋರಾಡಲು ತರಬೇತಿ ಪಡೆದಿರುವ ಸೇನೆಗೆ ನಾಗರಿಕರ ಹಿಂಸಾಚಾರ ಎದುರಿಸುವುದು ಅಷ್ಟು ಸುಲಭವಲ್ಲ. ಇಂತಹ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಸೇನೆ ಇದುವರೆಗೂ ಯಶಸ್ಸು ಕಂಡಿಲ್ಲ. 

 

ಇಸ್ರೇಲ್‌ ಸೇನೆಯ ಸೇನಾ ನೈಪುಣ್ಯವು ಯಾವ ಮಟ್ಟದಲ್ಲಿ ಇದೆ ಎನ್ನುವುದು ಜನರ ಪ್ರತಿಭಟನೆ ಸಂದರ್ಭದಲ್ಲಿ ಸಾಬೀತಾಗಿದೆ. ಇಸ್ರೇಲ್‌ ಸೇನೆ, ನಮ್ಮ ಸೇನೆಗಿಂತ ಹೆಚ್ಚು ಕಠಿಣ ರೀತಿಯಲ್ಲಿ ಜನರನ್ನು ದಂಡಿಸಿದ ನಿದರ್ಶನಗಳಿವೆ. ಭಾರತದ ಸೇನೆಯು ತನ್ನದೇ ನೆಲದಲ್ಲಿ ತನ್ನದೇ ಜನರ ವಿರುದ್ಧ ಹೆಚ್ಚು ಅಪಾಯಕಾರಿಯಾದ ಕ್ರಮಗಳನ್ನು ಕೈಗೊಳ್ಳಲು ಅವಕಾಶವೇ ಇಲ್ಲ.

 

ಕಾಶ್ಮೀರದ ಜನರು ಅದರಲ್ಲೂ ವಿಶೇಷವಾಗಿ ಯುವಕರು ಭವಿಷ್ಯದ ಬಗ್ಗೆ ಆಶಾವಾದ ತಳೆಯುವಂತೆ ಮಾಡುವಲ್ಲಿ ಕೇಂದ್ರದಲ್ಲಿನ ಎನ್‌ಡಿಎ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿನ ಪಿಡಿಪಿ– ಬಿಜೆಪಿ ಮೈತ್ರಿಕೂಟ ಸರ್ಕಾರ ವಿಫಲಗೊಂಡಿವೆ. ಕಾಶ್ಮೀರ ಈಗ, 2002ರ ಮುಂಚಿನ ರಕ್ತಪಾತದ ದಿನಗಳಿಗೆ ಮರಳಿದಂತಾಗಿದೆ. ಕಾಶ್ಮೀರ ಸಮಸ್ಯೆಯನ್ನು ಈಗಲೂ ಭದ್ರತಾ ಸಮಸ್ಯೆ ಎಂದೇ ನಿರ್ವಹಿಸಲಾಗುತ್ತಿದೆ. ಬೇಹುಗಾರಿಕಾ ಪಡೆಗಳನ್ನು ನಿಯಂತ್ರಣ ಕೋಣೆಗೆ ಸೀಮಿತಗೊಳಿಸಿ ಸೇನೆಯೇ ಮುಂಚೂಣಿಯಲ್ಲಿದ್ದುಕೊಂಡು ಪರಿಸ್ಥಿತಿ ನಿಯಂತ್ರಿಸುತ್ತಿದೆ. ವಾಸ್ತವದಲ್ಲಿ, ಕಾಶ್ಮೀರ ಸಮಸ್ಯೆಗೆ ಅಟಲ್‌ ಬಿಹಾರಿ ವಾಜಪೇಯಿ ಅವರ ಪರಿಹಾರ ಸೂತ್ರ ಇದಾಗಿರಲಿಲ್ಲ. ಆದರೆ, ಮೋದಿ ಅವರು ಮಾತ್ರ ವಾಜಪೇಯಿ ಅವರ ಕಾಶ್ಮೀರ ನೀತಿಯೇ ತಮಗೆ ಸ್ಫೂರ್ತಿಯಾಗಿದೆ ಎಂದು ಹೇಳಿಕೊಳ್ಳುತ್ತಾರೆ. ಕಾಶ್ಮೀರದ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳುವುದು ವಾಜಪೇಯಿ ಅವರ ಆಶಯವಾಗಿತ್ತೇ ಹೊರತು ಸೇನಾ ಪರಿಹಾರವಲ್ಲ. 

 

ಕೇಂದ್ರೀಯ ಸಶಸ್ತ್ರ ಪೊಲೀಸ್‌ ಪಡೆಗಳ (ಸಿಎಪಿಎಸ್‌) ವಿಸ್ತರಣೆಯೇ ದೇಶದ ಆಂತರಿಕ ಸುರಕ್ಷೆಗೆ ಕನ್ನಡಿ ಹಿಡಿಯುತ್ತದೆ. ಈ ಪಡೆಗಳ ಸಾಮರ್ಥ್ಯ ಈಗ 10 ಲಕ್ಷ ದಾಟಿದ್ದು, ವಿಶ್ವದಲ್ಲಿಯೇ ಅತಿದೊಡ್ಡ ಪಡೆಯಾಗಿದೆ. ನಮ್ಮ ಸೇನಾಪಡೆ ಸಿಬ್ಬಂದಿ ಸಂಖ್ಯೆ 13 ಲಕ್ಷ ಇದೆ. ಸಶಸ್ತ್ರ ಪಡೆಗಳನ್ನು ಈಗ ರಾಜ್ಯ ವಿಧಾನಸಭಾ ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಲಾಗಿದೆ. ಚಳಿಗಾಲ ಕೊನೆಗೊಳ್ಳುತ್ತಿದ್ದಂತೆ ಕಾಶ್ಮೀರದಲ್ಲಿ ಮತ್ತೆ ಜನರ ಅಸಹನೆ ಬೀದಿಗೆ ಬರಲಿದೆ. ರಾಜಕೀಯ ಪ್ರಕ್ರಿಯೆ ಆರಂಭಿಸದಿದ್ದರೆ ಜನರ ಪ್ರತಿಭಟನೆ ನಿರಂತರವಾಗಿ ಮುಂದುವರೆಯಲಿದೆ. 

 

ದೀರ್ಘ ಸಮಯದವರೆಗೆ ನಿರ್ಲಕ್ಷಿಸಿದ್ದ ಈಶಾನ್ಯ ರಾಜ್ಯಗಳಲ್ಲಿನ ಬಂಡಾಯ ಚಟುವಟಿಕೆಗಳಿಗೆ ಈಗ ಮತ್ತೆ ಜೀವ ಬಂದಿದೆ. ವಿವಿಧ ರಾಜ್ಯಗಳಲ್ಲಿನ ಬಂಡುಕೋರರು ಈಗ ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. 1980ರ ದಶಕದಲ್ಲಿ ರಾಜೀವ್‌ ಗಾಂಧಿ ಮಿಜೊರಾಂನ ದಂಗೆಕೋರರು ಮತ್ತು ಅಸ್ಸಾಂ ಚಳವಳಿಗಾರರ ಜತೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಫಲವಾಗಿ ಆಗ ಕೆಲಮಟ್ಟಿಗೆ ಬಂಡಾಯ ತಣ್ಣಗಾಗಿತ್ತು.  ಈಶಾನ್ಯ ರಾಜ್ಯಗಳಲ್ಲಿ ಈಗ ಉಲ್ಬಣಿಸಿರುವ ಬಿಕ್ಕಟ್ಟು ಈ ಹಿಂದಿನಂತೆ ಸೇನೆಯ ಸಮಸ್ಯೆಯಾಗಿರದೆ ರಾಜಕೀಯ ಬಣ್ಣ ಪಡೆದಿರುವುದರಿಂದ ಅದನ್ನು ಬಗೆಹರಿಸುವುದು ಹೆಚ್ಚು ಸವಾಲಿನ ಕೆಲಸವಾಗಿದೆ. ಮಣಿಪುರ ಅಂತರ್‌ ಜನಾಂಗೀಯ ಕಲಹದಿಂದ ನಲುಗಿ ಹೋಗಿದೆ. ಹೀಗಾಗಿ ಆ ರಾಜ್ಯಕ್ಕೆ ಕೇಂದ್ರೀಯ ಸಶಸ್ತ್ರ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರವಾನಿಸಲಾಗಿದೆ.  ಇಂಫಾಲ ಕಣಿವೆಯಲ್ಲಿನ ದಿಗ್ಬಂಧನದ ಕಾರಣಕ್ಕೆ ಭಾರತೀಯ ವಾಯುಪಡೆಯ ಸರಕು ಸಾಗಣೆ ವಿಮಾನದ ಮೂಲಕ ಡೀಸೆಲ್ ಸಾಗಿಸುವ ಪರಿಸ್ಥಿತಿ ಉದ್ಭವಿಸಿತ್ತು.

 

ಆಂತರಿಕ ಭದ್ರತಾ ಪರಿಸ್ಥಿತಿ ಈ ಪರಿ ಕೈಮೀರಿ ಹೋಗುತ್ತದೆ ಎಂದು ಯಾರೊಬ್ಬರೂ ಎಣಿಸಿರಲಿಲ್ಲ. ಪ್ರತ್ಯೇಕತೆಯ ಬಂಡಾಯ ವರ್ಷಗಳ ಕಾಲ ಗುಣಪಡಿಸಲಾಗದ ಗಾಯವಾಗಿ ಬೆಳೆಯುತ್ತಲೇ ಇದೆ. ಇದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯಗಳು ಗಂಭೀರ ಪ್ರಯತ್ನವನ್ನೇ ಮಾಡದಿರುವುದು ಸರ್ಕಾರಗಳ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ, ತಮ್ಮ ತಮ್ಮ ರಾಜಕೀಯ ಲಾಭದ ದೃಷ್ಟಿಯಿಂದಲೇ ಈ ಸಮಸ್ಯೆಗಳನ್ನು ನೋಡುತ್ತ ಕಾಲ ಕಳೆಯುತ್ತಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನಗಳೇ ನಡೆದಿಲ್ಲ. 

 

ನಾಗಾಲ್ಯಾಂಡ್‌ನ ಕತೆ ಇನ್ನೊಂದು ಬಗೆಯದು. ಹೆಚ್ಚು ಸಂಕೀರ್ಣವೂ, ನಿರಾಶೆಯನ್ನೂ ಮೂಡಿಸುವ ವಿದ್ಯಮಾನಗಳು ಅಲ್ಲಿ ನಡೆಯುತ್ತಿವೆ. ಅತಿದೊಡ್ಡ ಪ್ರತ್ಯೇಕತಾವಾದಿ ಗುಂಪಿನ ಜತೆ ಮಾಡಿಕೊಂಡಿರುವ ಒಪ್ಪಂದವು ಶಾಂತಿ ಪ್ರಕ್ರಿಯೆಯನ್ನು ಹಳ್ಳ ಹಿಡಿಸಿದೆ. ಪರಸ್ಪರರ ಜತೆ ಸಂಘರ್ಷದಲ್ಲಿ ಮುಳುಗಿರುವ ಬಣಗಳೂ ತಮ್ಮ ತಮ್ಮ ಸಾಮರ್ಥ್ಯ ಮತ್ತು ಪ್ರಭಾವ ವೃದ್ಧಿಸಿಕೊಳ್ಳಲು ಇದು ಸಮಯಾವಕಾಶ ನೀಡಿದಂತಾಗಿದೆ. ಈ ಎಲ್ಲ ಬಣಗಳ ಕಾರ್ಯಕರ್ತರು ಯಾವುದೇ  ಹಿಂಜರಿಕೆ ಇಲ್ಲದೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ತಿರುಗುತ್ತಿದ್ದಾರೆ. ಸರ್ಕಾರದ ಅಸ್ತಿತ್ವವನ್ನೇ ಪ್ರಶ್ನಿಸುವ ರೀತಿಯಲ್ಲಿ ಜನರಿಂದ ಬಲವಂತವಾಗಿ ತೆರಿಗೆ ಸಂಗ್ರಹಿಸುತ್ತಿದ್ದಾರೆ. ಪ್ರತಿಯೊಂದು ಬಣ ತನ್ನದೇ ಆದ ಪ್ರತ್ಯೇಕ ಪ್ರದೇಶದ ಮೇಲೆ ಹಿಡಿತ ಸಾಧಿಸಿದೆ. ಅವರನ್ನು ಯಾರೊಬ್ಬರೂ ಪ್ರಶ್ನಿಸಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  ಸ್ಥಳೀಯರ ಜತೆ ಬೆರೆತುಕೊಂಡಿರುವ ಈ ಬಣಗಳು ತಮ್ಮ ಪ್ರಭಾವವನ್ನು ಅರುಣಾಚಲ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲೂ ವಿಸ್ತರಿಸುವ ಹುನ್ನಾರದಲ್ಲಿ ತೊಡಗಿವೆ. ಉತ್ತರ ಅಸ್ಸಾಂನ ಸಂಪದ್ಭರಿತ ತೈಲ ಸಂಪನ್ಮೂಲಗಳ ಜಿಲ್ಲೆಗಳಿಗೂ ಪ್ರತ್ಯೇಕತಾ ಬಂಡುಕೋರ ಬಣಗಳ ಪ್ರಭಾವ ಯಾವ ಹೊತ್ತಿನಲ್ಲಾದರೂ ವಿಸ್ತರಿಸುವ ಸಾಧ್ಯತೆ ಇದೆ. 

 

ಈಶಾನ್ಯ ಭಾರತವು ಎರಡು ದಶಕಗಳ ನಂತರ ಈಗ ಮತ್ತೆ ಹೆಚ್ಚು ಅಪಾಯಕಾರಿ ವಲಯವಾಗಿ ಬೆಳೆಯುತ್ತಿದೆ. ಹೀಗಾಗಿ ದೇಶದ ಒಟ್ಟಾರೆ ಆಂತರಿಕ ಭದ್ರತಾ ವ್ಯವಸ್ಥೆಯನ್ನು ಸಾಕಷ್ಟು ಪ್ರಮಾಣದಲ್ಲಿ ಬಲಪಡಿಸುವ ತುರ್ತು ಸದ್ಯಕ್ಕೆ ಎದುರಾಗಿದೆ. 

 

ಕಾಶ್ಮೀರ ಕಣಿವೆಯ ಜನರ ಅಸಹನೆ ಮತ್ತು ನಮ್ಮ ಸೇನಾ ಮುಖ್ಯಸ್ಥರ ಆಕ್ರೋಶಭರಿತ ಮಾತು ನನಗೆ 1989ರಲ್ಲಿ ಬೂಟಾ ಸಿಂಗ್ ಅವರ ಜತೆಗಿನ ಸಂವಾದವನ್ನು ನೆನಪಿಸುತ್ತದೆ. ರಾಜೀವ್‌ ಗಾಂಧಿ ಅವರ ಸಂಪುಟದಲ್ಲಿ ಗೃಹ ಸಚಿವರಾಗಿದ್ದ ಬೂಟಾ ಸಿಂಗ್‌ ನನ್ನ ಅಂದಿನ ಸಂಪಾದಕರಾಗಿದ್ದ ಅರುಣ್‌ ಪುರಿ ಮತ್ತು ನನ್ನನ್ನು  ಔತಣಕ್ಕೆ ಆಹ್ವಾನಿಸಿದ್ದರು. ತಾವು ಮತ್ತು ತಮ್ಮ ಮಗ ಭಾಗಿಯಾಗಿದ್ದ ಹಲವು ಹಗರಣಗಳ ಬಗ್ಗೆ ತಮ್ಮ ನಿಲುವು ಸಮರ್ಥಿಸಿಕೊಳ್ಳಲು ಅವರು ನಮ್ಮೊಂದಿಗೆ ಮಾತನಾಡಲು ಇಚ್ಛಿಸಿದ್ದರು. 

 

ಮಾತಿನ ಮಧ್ಯೆ ಅವರು, ರಷ್ಯಾದ ವಿದೇಶಾಂಗ ಸಚಿವ ಎಡ್ವರ್ಡ್‌ ಷೆವರ್ಡನಾಡ್ಜೆ ಜತೆಗಿನ ತಮ್ಮ ಮಾತುಕತೆಯ ವಿವರವನ್ನೂ ನಮ್ಮೊಂದಿಗೆ ಹಂಚಿಕೊಂಡಿದ್ದರು. ಭಾರಿ ಸಂಖ್ಯೆಯಲ್ಲಿ ಸೇರುವ ಪ್ರತಿಭಟನಾಕಾರರನ್ನು ಭಾರತವು ಸಮರ್ಥವಾಗಿ ನಿರ್ವಹಿಸುವ ಬಗ್ಗೆ ಎಡ್ವರ್ಡ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ. ಜಾರ್ಜಿಯಾದ ಟ್ಬಿಬ್ಲಿಸಿಯಲ್ಲಿ ಇದೇ ಬಗೆಯ ಪ್ರತಿಭಟನೆ ನಡೆಯುತ್ತಿದ್ದಾಗ ಜನರನ್ನು ಚದುರಿಸಲು ರಷ್ಯಾದ ಸೇನಾಪಡೆಯು ವಿಷಪೂರಿತ ಅನಿಲ ಬಳಸಿದ್ದರಿಂದ ಅನೇಕರು ಸಾವನ್ನಪ್ಪಿದ್ದರು. ಇದೇ ಕಾರಣಕ್ಕೆ ರಷ್ಯಾ, ಜಾರ್ಜಿಯಾವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಯಿತು ಎಂಬುದನ್ನು ಎಡ್ವರ್ಡ್‌ ಅವರು ಸಿಂಗ್‌ ಅವರ ಗಮನಕ್ಕೆ ತಂದಿದ್ದರು.

 

‘ಪ್ರತಿಭಟನಾನಿರತ ಜನಸಮೂಹವನ್ನು ನಿಯಂತ್ರಿಸಲು ನಾವು ಯಾವತ್ತೂ ಸೇನೆಯನ್ನು ಬಳಸಿಲ್ಲ. ಜನರನ್ನು ನಿಯಂತ್ರಿಸುವ ಉದ್ದೇಶಕ್ಕೆಂದೇ ನಾವು ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌)  ಹೊಂದಿದ್ದೇವೆ. ನೀವು ಇಚ್ಛೆಪಟ್ಟರೆ ನಿಮ್ಮವರಿಗೆ ತರಬೇತಿ ನೀಡಲು ‘ಸಿಆರ್‌ಪಿಎಫ್‌’ನ ಕೆಲ ಬೆಟಾಲಿಯನ್‌ಗಳನ್ನು ಕಳಿಸಿಕೊಡಲು ನಾನು ಸಿದ್ಧನಿರುವೆ’ ಎಂದು ಬೂಟಾ ಸಿಂಗ್ ಅವರು ಎಡ್ವರ್ಡ್‌ ಅವರಿಗೆ ಹೇಳಿದ್ದರಂತೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry