ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ

ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌ ವತಿಯಿಂದ ‘ಜನಸ್ಪಂದನ –ಸಿಟಿಜನ್ಸ್‌ ಫಾರ್‌ ಚೇಂಜ್‌’
Last Updated 18 ಫೆಬ್ರುವರಿ 2017, 20:05 IST
ಅಕ್ಷರ ಗಾತ್ರ
ಬೆಂಗಳೂರು: ಒಳಚರಂಡಿ ನೀರು ಸೇರಿ ಕಲುಷಿತಗೊಂಡ ಕುಡಿಯುವ ನೀರು, ಉದ್ಯಾನಗಳ ಕಳಪೆ ನಿರ್ವಹಣೆ, ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ,   ಸರಗಳ್ಳರ ಸಮಸ್ಯೆ, ಪೋಲಿ ಹುಡುಗರ ಕಾಟ, ಮಂಗಗಳ ಹಾವಳಿ...
 
‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪ್ರತಿಕೆಗಳ ವತಿಯಿಂದ ಹಂಪಿನಗರದ ಚಂದ್ರಶೇಖರ ಆಜಾದ್‌ ಆಟದ ಮೈದಾನದಲ್ಲಿ ಶನಿವಾರ  ಏರ್ಪಡಿಸಿದ್ದ ವಿಜಯನಗರ ವಿಧಾನ ಸಭಾ ಕ್ಷೇತ್ರದ ಜನಸ್ಪಂದನ ಕಾರ್ಯಕ್ರಮದಲ್ಲಿ ನಾಗರಿಕರು ಪ್ರಸ್ತಾಪಿಸಿದ ಪ್ರಮುಖ ಸಮಸ್ಯೆಗಳಿವು. 
 
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದ ಸ್ಥಳೀಯ ಶಾಸಕರಾದ ಸಚಿವ ಎಂ.ಕೃಷ್ಣಪ್ಪ ಹಾಗೂ ಕ್ಷೇತ್ರದ ಎಂಟು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು  ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
 
ಉದ್ಯಾನದಲ್ಲಿ ಹಾವಿನ ಕಾಟ: ವಿವಿಧ ವಾರ್ಡ್‌ಗಳಲ್ಲಿರುವ ಉದ್ಯಾನಗಳು ನಿರ್ವಹಣೆ ಇಲ್ಲದೇ    ಅವ್ಯವಸ್ಥೆ ಆಗರವಾಗಿರುವ ಬಗ್ಗೆ ನಾಗರಿಕರು ಗಮನ ಸೆಳೆದರು. 
‘ಬಾಪೂಜಿನಗರ ವಾರ್ಡ್‌ನ ವಿವೇಕಾನಂದ ಉದ್ಯಾನದಲ್ಲಿ ಗಿಡಗಂಟಿಗಳು ಬೆಳೆದು ಹಾವುಗಳು ಸೇರಿಕೊಂಡಿವೆ. ಒಮ್ಮೆ ನನ್ನ ಮೈಮೇಲೆಯೇ ಹಾವು ಬಿದ್ದಿತ್ತು’ ಎಂದು ಹಿರಿಯ ನಾಗರಿಕರೊಬ್ಬರು ಗಮನ ಸೆಳೆದರು. 
 
‘ಮುನೇಶ್ವರ ದೇವಸ್ಥಾನದ ಬಳಿಯ ಉದ್ಯಾನ ಸಮರ್ಪಕ ನಿರ್ವಹಣೆ ಇಲ್ಲದೆ ಸೊರಗಿದೆ. ಇಲ್ಲೂ ಹಾವುಗಳ ಕಾಟ ವಿಪರೀತ ಇದೆ. ಜನ ಸಂಚರಿಸಲು ತ್ರಾಸ ಪಡಬೇಕಾದ ಸ್ಥಿತಿ ಇದೆ’ ಎಂದು ಶ್ರೀನಿವಾಸ ಮೂರ್ತಿ  ದೂರಿದರು. 
 
ವಾರ್ಡ್‌ನ  ಎರಡು ಉದ್ಯಾನಗಳ ಅಭಿವೃದ್ಧಿ ₹ 2 ಕೋಟಿ ಬಿಡುಗಡೆಯಾಗಿದೆ. ಅಂದಾಜು ಪಟ್ಟಿ ಸಿದ್ಧಪಡಿಸಿ ಒಂದು ತಿಂಗಳ ಒಳಗೆ ಟೆಂಡರ್‌ ಕರೆಯುತ್ತೇವೆ ಎಂದು ಬಿಬಿಎಂಪಿಯ ತೋಟಗಾರಿಕಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಿತಿನ್‌ ಭರವಸೆ ನೀಡಿದರು. 
 
ಮಕ್ಕಳ ಆಟಕ್ಕೆ ವ್ಯವಸ್ಥೆ ಕಲ್ಪಿಸಿ: ‘ಚಂದ್ರಾ ಲೇಔಟ್‌ನ ಯಾವುದೇ ಉದ್ಯಾನದಲ್ಲೂ ಮಕ್ಕಳಿಗೆ ಆಡಲು ವ್ಯವಸ್ಥೆ ಇಲ್ಲ.  ಒಂದು ಉದ್ಯಾನದಲ್ಲಾದರೂ ಮಕ್ಕಳ ಆಟಕ್ಕೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.
 
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಎಳೆ ವಯಸ್ಸಿನಲ್ಲಿ ಚೆನ್ನಾಗಿ ಆಡಿಕೊಂಡಿದ್ದ  ಹಿರಿಯ ನಾಗರಿಕರೆಲ್ಲ ಉದ್ಯಾನಕ್ಕೆ ಬೇಡಿಕೆ ಸಲ್ಲಿಸುತ್ತಾರೆ. ಮಕ್ಕಳಿಗೆ ಆಟದ ಮೈದಾನ ಬೇಕು ಎಂದು ಹೇಳುವವರು ಕಡಿಮೆ. ಸದಾ ಹೋಮ್‌ವರ್ಕ್‌, ಟ್ಯೂಷನ್‌ನಲ್ಲಿ ಮಗ್ನರಾಗಿರುವ ಮಕ್ಕಳಂತೂ ಯಾವುದೇ ಬೇಡಿಕೆ ಸಲ್ಲಿಸುವ ಸ್ಥಿತಿಯಲ್ಲಿಲ್ಲ. ಸದ್ಯ ನೀವಾದರೂ ಈ ಬಗ್ಗೆ ಕೇಳಿದರಲ್ಲ. ನಿಮ್ಮ ಬೇಡಿಕೆ ಈಡೇರಿಸೋಣ’ ಎಂದರು.   
 
ಚೌಡಪ್ಪ ಬಡಾವಣೆಯ ಉದ್ಯಾನದ ಬಳಿ ಕಸ ರಾಶಿಯಿಂದ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ  ಮಂಜುನಾಥ್ ಬೇಸರ ವ್ಯಕ್ತಪಡಿಸಿದರು. 
 
ಕುಡಿಯುವ ನೀರು ಕಲುಷಿತ: ‘ಮನೆಗೆ ಪೂರೈಕೆಯಾಗುವ ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರುತ್ತಿದೆ.  ಕಲುಷಿತ ನೀರು ಸೇವಿಸಿ ನನ್ನ ಆರೋಗ್ಯ ಹದಗೆಟ್ಟಿದೆ. ಆರು ತಿಂಗಳಿಂದ ಈ ಸಮಸ್ಯೆ ಇದೆ. ಅಧಿಕಾರಿಗಳ ಗಮನಕ್ಕೆ ತಂದರೂ ಸ್ಪಂದನೆ ಸಿಕ್ಕಿಲ್ಲ. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಾನು ಈ ಇಳಿವಯಸ್ಸಿನಲ್ಲಿ ಔಷಧಕ್ಕಾಗಿ ಸಾವಿರಾರು ರೂಪಾಯಿ ವ್ಯಯಿಸುವಂತಾಗಿದೆ’ ಎಂದು ಚೋಳರ ಪಾಳ್ಯ ನಿವಾಸಿ ರಾಮಮೂರ್ತಿ ಅಳಲು ತೋಡಿಕೊಂಡರು. 
 
ಕಾರ್ಯಕ್ರಮ ಮುಗಿದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸಚಿವರು ಜಲಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು. 
 
‘ಮರದ ಬೇರು ಹಾದು ಹೋಗಿದ್ದರಿಂದ ಒಳಚರಂಡಿ ಕೊಳವೆಮಾರ್ಗ ಹದಗೆಟ್ಟಿದೆ.  ದುರಸ್ತಿಗೊಳಿಸಲು  ಅನುದಾನವಿಲ್ಲ ಎಂದು  ಅಧಿಕಾರಿಗಳು ಹೇಳುತ್ತಾರೆ. ದುರ್ವಾಸನೆಯ ನಡುವೆಯೇ ಬದುಕಬೇಕಾದ ಸ್ಥಿತಿ ಇದೆ’ ಎಂದು ಹಂಪಿನಗರದ ಬೋರಯ್ಯ ದೂರಿದರು.
 
ಒಂದು ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಸುವುದಾಗಿ ಜಲಮಂಡಳಿಯ ಕಾರ್ಯಪಾಲಕ ಎಂಜಿನಿಯರ್‌ ಮಹೇಶ್‌ ಭರವಸೆ ನೀಡಿದರು. 
 
ಸರಗಳ್ಳರ ಹಾವಳಿ: ಕವಿಕಾ ಬಡಾವಣೆಯಲ್ಲಿ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಕೆಲವರಂತೂ ಚಾಕು  ತೋರಿಸಿ ಸರ ಕಿತ್ತುಕೊಂಡು ಹೋದ ಉದಾಹರಣೆಗಳಿವೆ ಎಂದು ಕಲಾವತಿ ದೂರಿದರು. 
 
ಬಡಾವಣೆಯಲ್ಲಿ ಪೋಲಿ ಹುಡುಗರ ಸಮಸ್ಯೆಯೂ ಹೆಚ್ಚಾಗಿದೆ. ಬೈಕ್‌ಗಳಲ್ಲಿ ಇಬ್ಬರು ಮೂವರು ಬಂದು ಹುಡುಗರು ಬಂದು ಕೀಟಲೆ ಮಾಡುತ್ತಾರೆ ಎಂದು ಲಕ್ಷ್ಮೀ ದೂರಿದರು.
 
‘ಈ ಪ್ರದೇಶದಲ್ಲಿ ಸರ ಕಳ್ಳತನ ನಡೆಸುತ್ತಿದ್ದ ತಂಡವೊಂದನ್ನು ಇತ್ತೀಚೆಗೆ ಬಂಧಿಸಿದ್ದೇವೆ. ಈ ಪ್ರದೇಶದಲ್ಲಿ ಹೊಯ್ಸಳ ವಾಹನ ಗಸ್ತು ಹೆಚ್ಚಿಸುತ್ತೇವೆ’ ಎಂದು ಕೆಂಗೇರಿ ಗೇಟ್‌ ಉಪವಿಭಾಗದ ಸಹಾಯಕ ಪೊಲೀಸ್‌ ಕಮೀಷನರ್‌ ಸಜಿತ್‌ ವಿ.ಜೆ. ತಿಳಿಸಿದರು. 
 
ಸಾರ್ವಜನಿಕ ತಾಣದಲ್ಲಿ ಕಸದ ರಾಶಿ:  ಸಾರ್ವಜನಿಕ ತಾಣಗಳಲ್ಲಿ ಕಿಡಿಗೇಡಿಗಳು ರಾತೋರಾತ್ರಿ ಕಸವನ್ನು ಸುರಿಯುವ ಬಗ್ಗೆ ಅನೇಕ ನಾಗರಿಕರು ದೂರಿದರು. 
 
‘ಹಂಪಿನಗರದ ಮಯೂರ ಕಾಂಡಿಮೆಂಟ್ಸ್‌ ಬಳಿ ರಾತ್ರಿ ವೇಳೆ ಕೆಲವರು ಕಸ ಸುರಿಯುತ್ತಾರೆ. ಇಲ್ಲಿ ಎರಡು ಶಾಲೆಗಳಿವೆ. ವಿದ್ಯಾರ್ಥಿಗಳು ಮೂಗನ್ನು  ಮುಚ್ಚಿಕೊಂಡು ಶಾಲೆಗೆ ಹೋಗಬೇಕಾದ ಸ್ಥಿತಿ ಇದೆ’ ಎಂದು ವಸಂತ ಕುಮಾರ್‌ ದೂರಿದರು.
 
ವಾರ್ಡ್‌ ವ್ಯಾಪ್ತಿಯಲ್ಲಿ ಸಿ.ಸಿ. ಟಿ.ವಿ ಕ್ಯಾಮೆರಾ ಹೆಚ್ಚಿಸಿ ರಾತೋರಾತ್ರಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು. 
 
 
**
ಮರ ಗಿಡ ಬೇಕೋ– ಯಾಗಶಾಲೆ ಬೇಕೋ? 
ಹಂಪಿನಗರ ವಾರ್ಡ್‌ನ ಸಂಕಷ್ಟಹರ ಗಣಪತಿ ದೇವಸ್ಥಾನ ಬಳಿ ಮರ ಗಿಡಗಳನ್ನು ತೆರವುಗೊಳಿಸಿ ಯಾಗಶಾಲೆ ನಿರ್ಮಿಸಲಾಗಿದೆ. ಹಸಿರು ಇದ್ದರೆ ಉಸಿರು. ನಮಗೆ ಮರಗಿಡ ಬೇಕೋ ಯಾಗಶಾಲೆ ಬೇಕೋ ಎಂದು ಜನ ಯೋಚಿಸಬೇಕು ಎಂದು ಸ್ಥಳೀಯ ನಿವಾಸಿ ಮಂಜುನಾಥ್‌ ಹೇಳಿದರು. 
 
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ  ಸ್ಥಳೀಯ ಪಾಲಿಕೆ ಸದಸ್ಯ ಆನಂದ ಸಿ.ಹೊಸೂರು, ‘ಜನರಿಂದ ಬೇಡಿಕೆ ಬಂದಿದ್ದರಿಂದಲೇ  ಅಲ್ಲಿ ಯಾಗಶಾಲೆ ನಿರ್ಮಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
 
‘ಯಾಗಶಾಲೆಯಿಂದ ಪುರೋಹಿತರಿಗೆ ಅನುಕೂಲ ಆಗಬಹುದು. ಜನರಿಗೆ ಯಾಗಶಾಲೆ ಬೇಕಾಗಿಲ್ಲ. ಗಿಡ ಮರಗಳನ್ನು ಉಳಿಸುವುದಕ್ಕೆ ಆದ್ಯತೆ ನೀಡಬೇಕು’ ಎಂದು ಮಂಜುನಾಥ್‌ ಹೇಳಿದರು. 
 
**
ಸಚಿವರ ಭರವಸೆಗಳು
* ಕ್ಷೇತ್ರದಾದ್ಯಂತ 500 ಕಡೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ
* ಚಂದ್ರಶೇಖರ್‌ ಆಜಾದ್‌ ಕ್ರೀಡಾಂಗಣ ಅಭಿವೃದ್ಧಿ 
* ₹50 ಕೋಟಿ ವೆಚ್ಚದಲ್ಲಿ ವಿಜಯ ನಗರ ಕ್ಷೇತ್ರದ ವ್ಯಾಪ್ತಿಯ ವೃಷಭಾವತಿ ರಾಜಕಾಲುವೆ ಅಭಿವೃದ್ಧಿ
* ₹2 ಕೋಟಿ ವೆಚ್ಚದಲ್ಲಿ ಹಂಪಿನಗರ ವಾರ್ಡ್‌ನಲ್ಲಿರುವ ಗ್ರಂಥಾಲಯ ಅಭಿವೃದ್ಧಿ
* ₹1.30 ಕೋಟಿ ವೆಚ್ಚದಲ್ಲಿ ಕೃಷ್ಣದೇವರಾಯ ರೈಲುನಿಲ್ದಾಣ ಅಭಿವೃದ್ಧಿ
*  ಬಡವರಿಗಾಗಿ 3 ಸಾವಿರ ಮನೆಗಳ ನಿರ್ಮಾಣ
* ಎಲ್‌್ಇಡಿ ಬಲ್ಬ್‌ ವಿತರಣೆ
* ₹2 ಕೋಟಿ ವೆಚ್ಚದಲ್ಲಿ ಹಂಪಿನಗರದಲ್ಲಿರುವ ಈಜುಕೊಳ, ₹6.90 ಕೋಟಿ ವೆಚ್ಚದಲ್ಲಿ ಹೊಸಹಳ್ಳಿ, ಗಾಳಿ ಆಂಜನೇಯ ವಾರ್ಡ್‌ನಲ್ಲಿ ಎರಡು ಹೊಸ ಈಜುಕೊಳ ನಿರ್ಮಾಣ
* ಕ್ಷೇತ್ರದ ಮೂರು ವಾರ್ಡ್‌ಗಳಲ್ಲಿ ‘ಬೆಂಗಳೂರು ಒನ್‌’ ಕೇಂದ್ರ ಪ್ರಾರಂಭ
* ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ತಿ
 
**
ಜನಸ್ಪಂದನದಲ್ಲಿ ಕೇಳಿಸಿದ್ದು... 
ವಿಜಯನಗರದಲ್ಲಿ ಪಾಲಿಕೆ ಬಜಾರ್‌
ಗಿರೀಶ್‌ ಮಳವಳ್ಳಿ (ಹೊಸಹಳ್ಳಿ ವಾರ್ಡ್‌)  
ವಿಜಯನಗರ ಪೊಲೀಸ್‌ ಠಾಣೆ ಬಳಿ ಸರ್ವೀಸ್‌ ರಸ್ತೆಯಲ್ಲಿರುವ ಪಾದಚಾರಿ ಮಾರ್ಗವನ್ನು ಬೀದಿ ವ್ಯಾಪಾರಿಗಳು ಆವರಿಸಿಕೊಂಡಿದ್ದಾರೆ. ಪಾದಚಾರಿ ಮಾರ್ಗ ತೆರವುಗೊಳಿಸಿ 
 
ವಿಶ್ವನಾಥ್‌, (ಬಿಬಿಎಂಪಿ ಜಂಟಿ ಆಯುಕ್ತ) 
ವಿಜಯನಗರ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌  ಪಾಳುಬಿದ್ದಿದೆ. ₹ 5 ಕೋಟಿ ವೆಚ್ಚದಲ್ಲಿ ಅಲ್ಲಿ ಸುಸಜ್ಜಿತ ಹವಾನಿಯಂತ್ರಿತ ‘ಪಾಲಿಕೆ ಬಜಾರ್‌’ ನಿರ್ಮಿಸಲು ಯೋಜನೆ ರೂಪಿಸಲಾಗಿದೆ.  ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು ಆರು ತಿಂಗಳಲ್ಲಿ 40 ಮಳಿಗೆಗಳು ನಿರ್ಮಾಣವಾಗಲಿವೆ.
 
ಗಿರೀಶ್‌:  ಕೆಳಮಾರ್ಗದಲ್ಲಿ ಬಜಾರ್‌ ನಿರ್ಮಿಸುವುದು ಎಷ್ಟು ಸರಿ?
 
 ಪಿ.ಕೃಷ್ಣಪ್ಪ (ಸಚಿವರು): ಇಂದ್ರಪ್ರಸ್ಥ ಹೋಟೆಲ್‌ ಬಳಿ ಇದ್ದ ಬೀದಿ ವ್ಯಾಪಾರಿಗಳನ್ನು ಹೈಕೋರ್ಟ್‌ ಆದೇಶದನ್ವಯ ತೆರವುಗೊಳಿಸಿದಾಗ ಸುಮ್ಮನಿದ್ದಿರಿ.  ಈಗ ಅನುಕೂಲ ಮಾಡಿಕೊಡುತ್ತೇವೆ ಎಂದರೆ ಏಕೆ,  ಪ್ರಶ್ನಿಸುತ್ತೀರಿ? ಎಲ್ಲವೂ ಸರಿ ಹೋಗುತ್ತದೆ. ಸಹಕಾರ ನೀಡಿ.
 
ಫ್ಲೆಕ್ಸ್‌ ಹಾವಳಿ
ನಿಂಗೇಗೌಡ (ವಿಜಯನಗರ ವಾರ್ಡ್‌):  ರಸ್ತೆ ಬದಿಯಲ್ಲಿ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ. ಕಾರ್ಯಕ್ರಮ ಮುಗಿದು ತಿಂಗಳ ಬಳಿಕವೂ ಫ್ಲೆಕ್ಸ್‌ಗಳು ಅಲ್ಲಿಯೇ ಬಿದ್ದಿರುತ್ತವೆ.
ಪ್ರಕಾಶ್‌ (ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್‌): ಮೂರು ದಿನಗಳಲ್ಲಿ ಈ ಭಾಗದಲ್ಲಿ ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವುಗೊಳಿಸುತ್ತೇವೆ
 
ಸಮಸ್ಯೆ ಕೇಳುವವರೇ ಗತಿ ಇಲ್ಲ
ಕೆ. ಶ್ರೀನಿವಾಸಮೂರ್ತಿ (ಬಾಪೂಜಿ ನಗರ): ವಾರ್ಡ್‌ ಕಚೇರಿಯಲ್ಲಿ ಕುಂದುಕೊರತೆ  ಆಲಿಸುವವರೇ ಗತಿ ಇಲ್ಲ. ಸರಿಯಾಗಿ ಸ್ಪಂದಿಸುವುದೂ ಇಲ್ಲ.
 
ಅಜ್ಮಲ್‌ ಬೇಗ್‌, (ಬಾಪೂಜಿ ನಗರ ಪಾಲಿಕೆ ಸದಸ್ಯ): ನೀವು ಒಮ್ಮೆಯೂ ನಮ್ಮ ವಾರ್ಡ್‌ ಕಚೇರಿಗೆ ಬಂದಿಲ್ಲ. ನಾನು ನಿಮ್ಮನ್ನು ನೋಡುತ್ತಿರುವುದು ಇದೇ ಮೊದಲು. ಕಚೇರಿ ಬನ್ನಿ, ಖುದ್ದು ನಾನೇ ನಿಮ್ಮ ಸಮಸ್ಯೆ ಆಲಿಸುತ್ತೇನೆ
 
*
ಮ್ಯಾನ್‌ಹೋಲ್‌ ಸಮಸ್ಯೆ
ವೆಂಕಟಪ್ಪ, (ವಿಜಯನಗರ ವಾರ್ಡ್‌): ಮನೆ ಬಳಿಯ ಮ್ಯಾನ್‌ಹೋಲ್‌  ಆಗಾಗ ತುಂಬಿ ಹರಿಯುತ್ತದೆ. ಕಳೆದ ವರ್ಷ ಜಲಮಂಡಳಿಗೆ ಅಲೆದಾಡಿ ಹಣ ಖರ್ಚು ಮಾಡಿ ಅದನ್ನು ಸರಿಪಡಿಸಿದ್ದೆ. ಎರಡು ತಿಂಗಳಿನಿಂದ ಮತ್ತೆ ಸಮಸ್ಯೆ ಉಂಟಾಗಿದೆ.
 
ಮಹೇಶ್‌, (ಜಲಮಂಡಳಿ  ಕಾರ್ಯನಿರ್ವಾಹಕ ಎಂಜಿನಿಯರ್‌): ಮ್ಯಾನ್‌ಹೋಲ್‌ ದುರಸ್ತಿ ಕೆಲಸ 15 ದಿನಗಳಲ್ಲಿ ಪ್ರಾರಂಭವಾಗಲಿದೆ. 
 
*
ಟ್ರಾನ್ಸ್‌ಫಾರ್ಮರ್‌ ಬದಲಿಸಿ  
ಎಂ. ಆರ್‌. ಬಸವರಾಜ್‌, ( ಹೊಸಹಳ್ಳಿ ವಾರ್ಡ್‌)
ಟ್ರಾನ್‌ಫಾರ್ಮರ್ ಹಾಳಾಗಿದೆ. ಪ್ರಾಣಭೀತಿಯಲ್ಲಿ ಓಡಾಡುತ್ತಿದ್ದೇವೆ.  ಅಧಿಕಾರಿಗಳಿಗೆ ಸರಿಯಾಗಿ ಸಂಬಳ ಸಿಗುತ್ತಿಲ್ಲ ಎನ್ನಿಸುತ್ತದೆ. ಅದಕ್ಕೆ ಕೆಲಸ ಮಾಡುವುದನ್ನೇ ಮರೆತಿದ್ದಾರೆ
ರಜಪೂತ್‌, (ಬೆಸ್ಕಾಂ  ಇಇ): ನೀವು ಆ ಬಗ್ಗೆ ನಮಗೊಂದು ಮನವಿ ನೀಡಿ, ಶೀಘ್ರ ಬಗೆಹರಿಸುತ್ತೇವೆ.
 
*
ಕ್ರಯಪತ್ರ ಹಂಚಿಕೆ ಮಾಡಿ
ಚಿಕ್ಕಬೋರಯ್ಯ, ( ಹಂಪಿನಗರ ವಾರ್ಡ್‌): ಯಾವುದೇ ಸರ್ಕಾರ ಬಂದರೂ ನಮಗೆ ಸ್ಪಂದಿಸಿಲ್ಲ. ಅಜ್ಞಾತವಾಸದಲ್ಲಿದ್ದೇವೆ. ನಾವಿರುವ ಮನೆಗಳಿಗೆ ಕ್ರಯಪತ್ರ ನೀಡಬೇಕು
ಕೃಷ್ಣಪ್ಪ, ಸಚಿವರು:  ಶೀಘ್ರ ಹಕ್ಕು ಪತ್ರ ನೀಡಲು ವ್ಯವಸ್ಥೆ ಮಾಡುತ್ತೇವೆ. ನಾವು ಕೆಲಸಕ್ಕೆ ಬಾರದ ಗುರುತುಪತ್ರ ಕೊಟ್ಟು ನಿಮ್ಮನ್ನು ವಂಚಿಸುವುದಿಲ್ಲ. ಕ್ರಯಪತ್ರವನ್ನೇ ಮಾಡಿಸಿಕೊಡುತ್ತೇವೆ.
 
**
ಕೋತಿ ಕಾಟದಿಂದ ಮುಕ್ತಿ ಕೊಡಿಸಿ
‘ಏನಾದರೂ ಮಾಡಿ, ಮಂಗಗಳ ಹಾವಳಿಯಿಂದ ಮುಕ್ತಿ ಕೊಡಿಸಿ’ ಎಂದು ಮಹಿಳೆಯೊಬ್ಬರು ಅಲವತ್ತುಕೊಂಡರು.
 
‘ಆರ್‌ಪಿಸಿ ಬಡಾವಣೆ ಹಾಗೂ ರೆಮ್ಕೊ ಬಡಾವಣೆಗಳಲ್ಲಿ 40ಕ್ಕೂ ಹೆಚ್ಚು ಮಂಗಗಳಿವೆ. ಈ ಬಗ್ಗೆ ಪಾಲಿಕೆ ವನ್ಯಜೀವಿ ವಿಭಾಗದ ಸ್ವಯಂಸೇವಕರೊಬ್ಬರ ಬಳಿ  ಮಂಗ ಹಿಡಿಯುವಂತೆ ಕೋರಿದೆವು.  ಆಹಾರ ಸಿಗದಂತೆ ಮಾಡಿದರೆ ಅವು  ಜಾಗ ಖಾಲಿ ಮಾಡುತ್ತವೆ ಎಂದು ಸಲಹೆ  ನೀಡಿದರೇ ಹೊರತು ಅವುಗಳನ್ನು ಹಿಡಿಯಲಿಲ್ಲ.  ಮನೆಯಲ್ಲಿ ಏನನ್ನು ಇಟ್ಟರೂ ಅವು ಕಿತ್ತುಕೊಂಡು ಹೋಗುತ್ತವೆ. ದಯವಿಟ್ಟು  ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಿ’ ಎಂದು  ಅವರು ಅಂಗಲಾಚಿದರು.
 
 ಕೋತಿಗೆ ಯಾರಪ್ಪಾ ವಾರಸು ದಾರರು?: ‘ಕೋತಿಗೆ ಯಾರಪ್ಪಾ ವಾರಸುದಾರರು.  ನಾಯಿಗಳಿಗಾದರೆ ಸುಪ್ರೀಂ ಕೋರ್ಟ್‌ ವಾರಸುದಾರ. ನಾಯಿ ಕೊಲ್ಲಬೇಡಿ ಎಂದು ಕೋರ್ಟ್‌ ಹೇಳಿದೆ. ಈ ಕೋತಿಗಳಿಗೆ ಯಾರಪ್ಪಾ ವಾರಸುದಾರರು’ ಎಂದು ಸಚಿವ ಕೃಷ್ಣಪ್ಪ ಕೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು. 
 
ಕೋತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳುವಂತೆ ಬಿಬಿಎಂಪಿ ವನ್ಯಜೀವಿ ವಿಭಾಗದ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.  
 
**
ವಿಜಯನಗರ ವೈಭವ
ಕ್ಷೇತ್ರದಲ್ಲಿ ಹಾದುಹೋಗಿರುವ 6.5 ಕಿ.ಮೀ ಉದ್ದದ ಮೆಟ್ರೊ ಮಾರ್ಗದುದ್ದಕ್ಕೂ ವಿಜಯನಗರ ಸಾಮ್ರಾಜ್ಯದ ವೈಭವ ಸಾರುವ ಸಲುವಾಗಿ ‘ವಿಜಯನಗರ ವೈಭವ’ ಎಂಬ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ಸಚಿವ ಎಂ.ಕೃಷ್ಣಪ್ಪ ತಿಳಿಸಿದರು.  
 
‘ಬೆಂಗಳೂರು ಮೆಟ್ರೊ ರೈಲು ಅಭಿವೃದ್ಧಿ ನಿಗಮ (ಬಿಎಂಆರ್‌ಸಿಎಲ್‌) ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ₹ 50 ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. ಮಾರ್ಗದುದ್ದಕ್ಕೂ ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ದೇವಾಲಯ ಸೇರಿದಂತೆ ಪ್ರಮುಖ ಕಲಾಕೃತಿಗಳನ್ನು ನಿರ್ಮಿಸಲಾಗುತ್ತದೆ. ಪಾದಚಾರಿ ಮಾರ್ಗಗಳೂ ಸುಂದರವಾಗಲಿವೆ. ಮೆಟ್ರೊ ಮಾರ್ಗದ ಪಕ್ಕದಲ್ಲಿ ಬರುವ 20 ಬುಲೇವಾರ್ಡ್‌  ಉದ್ಯಾನಗಳನ್ನು  ಅಭಿವೃದ್ಧಿಪಡಿಸುತ್ತೇವೆ’ ಎಂದರು. 
 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT