ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗರಣೆಗೆ ಜೊತೆಯಾಗುವ ಚಿತ್ರಗಳು

Last Updated 24 ಏಪ್ರಿಲ್ 2019, 5:43 IST
ಅಕ್ಷರ ಗಾತ್ರ
ಬೇಡರ ಕಣ್ಣಪ್ಪ
‘ಶಿವಪ್ಪ ಕಾಯೋ ತಂದೆ, ಮೂರು ಲೋಕ ಸ್ವಾಮಿ ದೇವ...’ ಎಲ್ಲ ಶಿವರಾತ್ರಿಗಳಲ್ಲೂ ಮೊಳಗುವ ಹಾಡು ಇದು. ಈ ಹಾಡು ‘ಬೇಡರ ಕಣ್ಣಪ್ಪ’ ಚಿತ್ರದ್ದು. ಅಂದಹಾಗೆ ಇದು ಡಾ.ರಾಜಕುಮಾರ್, ಪಂಢರಿಬಾಯಿ ಮತ್ತು ನರಸಿಂಹರಾಜು ಅವರಿಗೆ ತಾರಾಪಟ್ಟ ಕೊಟ್ಟ ಚಿತ್ರ.
ಗುಬ್ಬಿ ಕಂಪೆನಿ ನಿರ್ಮಾಣದ ‘ಬೇಡರ ಕಣ್ಣಪ್ಪ’ 1954ರಲ್ಲಿ ತೆರೆ ಕಂಡಿತು. ಕನ್ನಡ ಚಿತ್ರರಂಗದ ದೆಸೆ ಬದಲಿಸಿದ ಚಿತ್ರವೆಂದೇ ಇದು ಪ್ರಖ್ಯಾತವಾಯಿತು.
ಭಕ್ತನೊಬ್ಬ ತನ್ನ ಆರಾಧ್ಯ ದೈವವಾದ ಶಿವನನ್ನು ಮೆಚ್ಚಿಸಲು ತನ್ನೆರಡು ಕಣ್ಣುಗಳನ್ನು ಕಿತ್ತುಕೊಡುವ ಕಥೆಯನ್ನು ಈ ಚಿತ್ರ ಹೊಂದಿದೆ. ಇದೇ ಚಿತ್ರ ನಂತರದ ದಿನಗಳಲ್ಲಿ ‘ಕಾಳಹಸ್ತಿ ಮಹಾತ್ಮ್ಯಂ’ ಹೆಸರಿನಿಂದ ತೆಲುಗಿನಲ್ಲೂ ರಿಮೇಕ್ ಆಯಿತು.
ಶಿವ ಮೆಚ್ಚಿದ ಕಣ್ಣಪ್ಪ
‘ಬೇಡರ ಕಣ್ಣಪ್ಪ’ ಚಿತ್ರದ ಮತ್ತೊಂದು ಅವತರಣಿಕೆಯಾಗಿ ‘ಶಿವ ಮೆಚ್ಚಿದ ಕಣ್ಣಪ್ಪ’ 1988ರಲ್ಲಿ ತೆರೆ ಕಂಡಿತು. ಶಿವರಾಜಕುಮಾರ್ ಮುಖ್ಯಪಾತ್ರದಲ್ಲಿದ್ದ ಈ ಚಿತ್ರದ ಹಾಡುಗಳು ಜನಪ್ರಿಯವಾದವು. ಇಂದಿಗೂ ಎಫ್‌ಎಂ ಚಾನೆಲ್‌ಗಳಲ್ಲಿ ಶ್ರೋತೃಗಳ ಬೇಡಿಕೆ ಮೇರೆಗೆ ಪದೇಪದೆ ಬಿತ್ತರಗೊಳ್ಳುವ ‘ಕಣ್ಣಿಂದ ನೀ ಬಾಣ ಬೀಸಿದಾಗ’ ಹಾಡು ಇದೇ ಸಿನಿಮಾದ್ದು.
ಸಿನಿಮಾ ನೋಡಲು ಯುಟ್ಯೂಬ್ ಕೊಂಡಿ: http://bit.ly/2lCbFrF
ಗಂಗೆ ಗೌರಿ
‘ಇಬ್ಬರು ಹೆಂಡತಿಯರನ್ನು ಮದುವೆಯಾಗಿ ಅನುಭವಿಸುವ ಸುಖ ಯಾರಿಗೂ ಬೇಡ’ ಎಂದು ಸಾಕ್ಷಾತ್ ಪರಶಿವನೂ ನಿಟ್ಟುಸಿರು ಬಿಡುವುದನ್ನು ಬಿಂಬಿಸುವ ಚಿತ್ರ ‘ಗಂಗೆ ಗೌರಿ’.
ಜನಪ್ರಿಯ ಜಾನಪದ ಕಥೆಗಳನ್ನು ಆಧರಿಸಿ ಹೆಣೆದ ಚಿತ್ರಕಥೆಗೆ ಜೀವ ತುಂಬಿದವರು ನಿರ್ದೇಶಕ ಬಿ.ಆರ್.ಪಂತುಲು. 1967ರಲ್ಲಿ ಬಿಡುಗಡೆಯಾದ ಚಿತ್ರದಲ್ಲಿ ಶಿವನಾಗಿ ಡಾ.ರಾಜಕುಮಾರ್, ಪಾರ್ವತಿಯಾಗಿ ಲೀಲಾವತಿ ಮತ್ತು ಗಂಗೆಯಾಗಿ ಭಾರತಿ ಅಭಿನಯಿಸಿರುವ ಚಿತ್ರವಿದು.
ಎಸ್. ಜಾನಕಿ ದನಿಯ ಜನಪ್ರಿಯ ಗೀತೆ ‘ತುಂಗಭದ್ರ ಕಾವೇರಿ ಗಂಗೆ ಪೂಜೆ ಮಾಡೋಣ’ ಇದೇ ಚಿತ್ರದ್ದು. ಭಕ್ತಿರಸ ಪ್ರಧಾನ ಚಿತ್ರವಾದರೂ ಹಾಸ್ಯಕ್ಕೆ ಏನೂ ಕೊರತೆಯಿಲ್ಲ. ಶಿವರಾತ್ರಿಯಂದು ಮನೆಮಂದಿಯೆಲ್ಲಾ ಕಲೆತು, ನಕ್ಕು ನಲಿಯಲು ಈ ಚಿತ್ರ ನೋಡಬಹುದು. ಸಿನಿಮಾ ನೋಡಲು ಯುಟ್ಯೂಬ್ ಕೊಂಡಿ: http://bit.ly/2kDGJaT
ಭಕ್ತ ಮಾರ್ಕಂಡೇಯ
ಮುಗ್ಧ ಭಕ್ತಿಯ ಎದುರು ಸಾವೂ ಮಂಡಿಯೂರುವ ಅಪರೂಪದ ಕಥೆ ಮಾರ್ಕಂಡೇಯನದ್ದು. ಮುದ್ದು ಮಗುವೊಂದು ಸಾವು ಜಯಿಸುವ ಈ ಕಥೆ ಏಕಕಾಲಕ್ಕೆ ಮಕ್ಕಳಿಗೂ ಹಿರಿಯರಿಗೂ ಖುಷಿ ಕೊಡುತ್ತದೆ. ಚಿತ್ರ 1956ರಲ್ಲಿ ತೆರೆಕಂಡಿತು.
ಸಿನಿಮಾ ನೋಡಲು ಯುಟ್ಯೂಬ್ ಕೊಂಡಿ: http://bit.ly/2kPSoi7
ಶ್ರೀಮಂಜುನಾಥ
ಭಕ್ತಿ ಪ್ರಧಾನ ಚಿತ್ರ ನಿರ್ದೇಶನಕ್ಕೆ ಆಂದ್ರ ಪ್ರದೇಶದಲ್ಲಿ ಮನೆಮಾತಾದವರು ಕೆ.ರಾಘವೇಂದ್ರರಾವ್‌. ಇವರ ನಿರ್ದೇಶನದ ‘ಶ್ರೀಮಂಜುನಾಥ’ ಚಿತ್ರವು ಸೌಂದರ್ಯ ಮತ್ತು ಅರ್ಜುನ್ ಸರ್ಜಾ ಅವರ ಮನೋಜ್ಞ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು. ಚಿರಂಜೀವಿ, ಮೀನಾ, ಸುಧಾರಾಣಿ, ಅಭಿಜಿತ್‌, ಅಂಬರೀಷ್, ಸುಮಲತಾ ತಾರಾಗಣ ದಲ್ಲಿದ್ದರು. ಹಂಸಲೇಖ ಸಂಗೀತ ನಿರ್ದೇಶದಲ್ಲಿ ಶಂಕರ್‌ ಮಹಾದೇವನ್‌ ಕಂಠದಲ್ಲಿ ಮೂಡಿಬಂದ ಹಾಡುಗಳ ಭಕ್ತರನ್ನು ಭಾವಪರವಶನ್ನಾಗಿಸಿದ್ದವು.
ನಾಸ್ತಿಕನಾಗಿದ್ದ ವ್ಯಕ್ತಿಯೊಬ್ಬ ಹೆಂಡತಿಯ ಪ್ರೇರಣೆಯಿಂದ ಆಸ್ತಿಕನಾಗಿ ಪರಿವರ್ತನೆಗೊಳ್ಳುವ ಕತೆ ‘ಶ್ರೀಮಂಜುನಾಥ’ ಚಿತ್ರದಲ್ಲಿ ತೆರೆದುಕೊಳ್ಳುತ್ತದೆ. ಬಾಕ್ಸ್‌ ಆಫೀಸ್‌ನಲ್ಲೂ ಯಶಸ್ವಿಯಾದ ಚಿತ್ರವಿದು. ಸಿನಿಮಾ ನೋಡಲು ಯುಟ್ಯೂಬ್ ಕೊಂಡಿ: http://bit.ly/2kDzqA9
ಭಕ್ತ ಸಿರಿಯಾಳ
‘ದಾನವೇ ತಪ, ದಾನವೇ ಜಪ’ ಎಂದು ನಂಬಿದ ಸಿರಿಯಾಳನ ಕತೆಯನ್ನು ಹಲವು ತತ್ವಪದಗಳು, ಹರಿಕಥೆಗಳು ಸಾರಿ ಹೇಳುತ್ತವೆ. ಇಂಥ ಕಥೆಗಳನ್ನು ಆಧರಿಸಿದ ಚಿತ್ರ ‘ಭಕ್ತ ಸಿರಿಯಾಳ’. 1980ರಲ್ಲಿ ತೆರೆ ಕಂಡ ಈ ಚಿತ್ರದಲ್ಲಿ ಲೋಕೇಶ್ ಮತ್ತು ಆರತಿ ಮುಖ್ಯ ಭೂಮಿಕೆಯಲ್ಲಿದ್ದರು.
ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ಈ ಚಿತ್ರದ ಹಾಡುಗಳನ್ನು ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದರು. ಇಂದಿಗೂ ರಾಜ್ಯದಲ್ಲಿ ಜನಪ್ರಿಯವಾಗಿರುವ ‘ಶಿವ ಶಿವ ಎಂದರೆ ಭಯವಿಲ್ಲ’ ಹಾಡು ಇದೇ ಚಿತ್ರದ್ದು. ಸಿನಿಮಾ ನೋಡಲು ಯುಟ್ಯೂಬ್ ಕೊಂಡಿ: http://bit.ly/2m3nGE4
ಇನ್ನಷ್ಟು ಚಿತ್ರಗಳು
ಓಹಿಲೇಶ್ವರ, ಭೂಕೈಲಾಸ, ಶಿವರಾತ್ರಿ ಮಹಾತ್ಮೆ, ಶಿವಗಂಗೆ ಮಹಾತ್ಮೆ, ಪಾರ್ವತಿ ಕಲ್ಯಾಣ ಸೇರಿದಂತೆ ಹಲವು ಚಿತ್ರಗಳು ಶಿವಭಕ್ತಿಯ ಪಾರಮ್ಯ ಹೇಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT