ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿಯತ್ತ ಐಎನ್‌ಎಸ್‌ ವಿರಾಟ್ ನೌಕೆ

ಅತ್ಯಂತ ದೀರ್ಘಕಾಲ ಸೇವೆಯಲ್ಲಿದ್ದ ಬ್ರಿಟನ್ ನಿರ್ಮಿತ ಹಡಗು
Last Updated 12 ಮಾರ್ಚ್ 2017, 16:21 IST
ಅಕ್ಷರ ಗಾತ್ರ
ADVERTISEMENT

ಮುಂಬೈ: ವಿಶ್ವದ ಅತ್ಯಂತ ಹಳೆಯ ಯುದ್ಧವಿಮಾನ ವಾಹಕ ನೌಕೆ ಐಎನ್‌ಎಸ್ ವಿರಾಟ್‌ ಮಾರ್ಚ್‌ 6 ರಂದು ಭಾರತೀಯ ನೌಕಾಪಡೆಯ ಸೇವೆಯಿಂದ ನಿವೃತ್ತಿಯಾಗಲಿದೆ. ಅತ್ಯಂತ ದೀರ್ಘಕಾಲ ಸೇವೆಯಲ್ಲಿದ್ದ ಯುದ್ಧನೌಕೆ ಎಂಬ ಗಿನ್ನೆಸ್‌ ದಾಖಲೆ ಈ ನೌಕೆ ಹೆಸರಿನಲ್ಲಿದೆ.

ಬ್ರಿಟನ್ ನಿರ್ಮಿತ ಈ ನೌಕೆ ಈವರೆಗೆ 56 ವರ್ಷ ಸೇವೆ ಸಲ್ಲಿಸಿದೆ. ಮೊದಲಿಗೆ ಬ್ರಿಟನ್‌ನ ನೌಕಾ ಪಡೆ  ‘ರಾಯಲ್‌ ನೇವಿ’ಯಲ್ಲಿ ಸೇವೆಯಲ್ಲಿದ್ದ ಈ ನೌಕೆಯನ್ನು ಆಗ ಎಚ್‌ಎಂಎಸ್‌ ಹರ್ಮಿಸ್ ಎಂದು ಕರೆಯಲಾಗುತ್ತಿತ್ತು. ಭಾರತೀಯ ನೌಕಾಪಡೆ ಇದನ್ನು ಖರೀದಿಸಿದ ನಂತರ ‘ಐಎನ್‌ಎಸ್ ವಿರಾಟ್’ ಎಂದು ಮರುನಾಮಕರಣ ಮಾಡಲಾಗಿತ್ತು.

ಮುಂಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಅವರ ಅಧ್ಯಕ್ಷತೆಯಲ್ಲಿ ನೌಕಾಪಡೆಯ ಸಿಬ್ಬಂದಿ ನೌಕೆಗೆ ವಿದಾಯ ಹೇಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬ್ರಿಟನ್‌ ರಾಯಲ್‌ ನೇವಿಯ 20 ಅಧಿಕಾರಿಗಳು ಭಾಗವಹಿಸಲಿದ್ದಾರೆ.

ರಾಜಕುಮಾರನ ಹೆಸರು: 1975ರಲ್ಲಿ ಬ್ರಿಟನ್ ರಾಜಕುಮಾರ ಚಾರ್ಲ್ಸ್‌, ಈ ನೌಕೆಯಲ್ಲೇ ತಮ್ಮ ಸೇನಾ ಪೈಲಟ್‌ ವೃತ್ತಿಯನ್ನು ಆರಂಭಿಸಿದ್ದರು. ಈ ನೆನಪಿಗಾಗಿ ನೌಕೆಯ ಒಂದು ಕೊಠಡಿಗೆ ರಾಜಕುಮಾರನ ಹೆಸರನ್ನು ಇಡಲಾಗಿದೆ.

* ಒಟ್ಟು 56 ವರ್ಷ ಸೇವೆ.
* ಮಾರ್ಚ್‌ 6ರಂದು ಮುಂಬೈನಲ್ಲಿ ಸೇವೆಯಿಂದ ನಿವೃತ್ತಿ.
*ಬ್ರಿಟನ್‌ನ ರಾಯಲ್ ನೇವಿಯ 20 ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿ.

ದೀರ್ಘ ಪಯಣ
1944: ನೌಕೆಯ ನಿರ್ಮಾಣಕ್ಕೆ ಚಾಲನೆ
1959: ರಾಯಲ್ ನೇವಿಗೆ ಸೇರ್ಪಡೆ
1986: ರಾಯಲ್ ನೇವಿಯಿಂದ ನೌಕೆ ಖರೀದಿಸಿದ ಭಾರತ
1987: ಭಾರತೀಯ ನೌಕಾಪಡೆಯ ಸೇವೆಗೆ ನಿಯೋಜನೆ
1989: ಶ್ರೀಲಂಕಾ  ಶಾಂತಿ ಪಾಲನಾ ಕಾರ್ಯಾಚರಣೆಯಲ್ಲಿ ಭಾಗಿ
1999: ಕಾರ್ಗಿಲ್ ಯುದ್ಧ– ಆಪರೇಷನ್ ವಿಜಯ್‌ನಲ್ಲಿ ಭಾಗಿ
2017, ಮಾರ್ಚ್ 6: ಸೇವೆಯಿಂದ ನಿವೃತ್ತಿಯಾಗಲಿದೆ.

ವಿಶೇಷತೆ
*ವಿಶ್ವದ ಹಳೆಯ ಯುದ್ಧನೌಕೆ 
*29 ವರ್ಷ ಭಾರತದ ಸೇವೆಯಲ್ಲಿ
*ಬ್ರಿಟನ್‌ ಮತ್ತು ಭಾರತದ ನೌಕಾ ಪಡೆಯಲ್ಲಿದ್ದಾಗ ನಾಲ್ಕು ಪ್ರಮುಖ ಯುದ್ಧ ಮತ್ತು  ಕಾರ್ಯಾಚರಣೆಗಳಲ್ಲಿ ನೌಕೆ ಬಳಕೆ.
*27ವರ್ಷ ಬ್ರಿಟನ್ ಸೇವೆಯಲ್ಲಿ.

ನಿವೃತ್ತಿ ನಂತರ ನೌಕೆಯ ಕತೆ ಏನು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ
7,000 ಪರೋಟಗಳು

ನೌಕೆ ಸೇವೆಯಲ್ಲಿದ್ದಾಗ ಪ್ರತಿದಿನ ಅದರ ಸಿಬ್ಬಂದಿಯ ಊಟೋಪಚಾರಕ್ಕೆ ಮಾಡುತ್ತಿದ್ದ  ಅಡುಗೆಯ ಪಟ್ಟಿ ದೊಡ್ಡದಿದೆ. 350 ಕೆ.ಜಿ ಅಕ್ಕಿ ಬಳಸಿ ಅನ್ನ, ಏಳು ಸಾವಿರ ಪರೋಟ, 200 ಕೆ.ಜಿ ಮಾಂಸ, 80 ಕೆ.ಜಿ ಬೇಳೆ ಮತ್ತು 300 ಕೆ.ಜಿ ತರಕಾರಿ ಬಳಸಿ ಸಾರು. ಇದು ಪ್ರತಿದಿನದ ಅಡುಗೆಗೆ ಬಳಕೆಯಾಗುತ್ತದೆ.

ಪ್ರಾರ್ಥನಾಲಯ...
ಇದು ಬ್ರಿಟನ್‌ ನಿರ್ಮಿತ ನೌಕೆ ಆದ್ದರಿಂದ ಇದರಲ್ಲಿ ಪ್ರಾರ್ಥನಾಲಯ ಇದೆ. ಭಾರತೀಯ ನೌಕಾಪಡೆಯ ಬೇರೆ ಯಾವ ನೌಕೆಗಳಲ್ಲೂ ಪ್ರಾರ್ಥನಾಲಯಗಳಿಲ್ಲ. ಆದರೆ ಈ ನೌಕೆಯಲ್ಲಿದ್ದ ಪ್ರಾರ್ಥನಾಲಯವನ್ನು ಭಾರತೀಯ ನೌಕಾಪಡೆ ಉಳಿಸಿಕೊಂಡಿದೆ. ಇದರ ಜತೆಯಲ್ಲೇ ಬ್ರಿಟನ್‌ ಸೈನಿಕರ ಒಂದು ಸ್ಮಾರಕವೂ ಈ ನೌಕೆಯಲ್ಲಿದೆ.

ಸರ್ವ ಸವಲತ್ತುಗಳು
*ದಂತ ಚಿಕಿತ್ಸಾಲಯ.
*ಎರಡು ಚಿಕಿತ್ಸಾ ಕೊಠಡಿಗಳ ಆಸ್ಪತ್ರೆ.
*ಗ್ರಂಥಾಲಯ, ಟಿ.ವಿ.
*10 ತಜ್ಞ ವೈದ್ಯರು.
*ಪ್ರತಿದಿನ 800 ಸಮವಸ್ತ್ರ ಶುಚಿಗೊಳಿಸುವ ಸಾಮರ್ಥ್ಯ.
*ವ್ಯಾಯಾಮ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT