ಹರ ಹರ, ಕೈಲಾಸ ಪರ್ವತ ಏಕಿಷ್ಟು ದೂರ?

7

ಹರ ಹರ, ಕೈಲಾಸ ಪರ್ವತ ಏಕಿಷ್ಟು ದೂರ?

ಸುಧೀಂದ್ರ ಬುಧ್ಯ
Published:
Updated:
ಹರ ಹರ, ಕೈಲಾಸ ಪರ್ವತ ಏಕಿಷ್ಟು ದೂರ?

ಇದು ಹೊಸತೇನಲ್ಲ. ಈ ಹಿಂದೆಯೂ ಟಿಬೆಟ್ ಮತ್ತು ದಲೈಲಾಮಾ ವಿಷಯದಲ್ಲಿ ಚೀನಾ ಹೀಗೆಯೇ ಪ್ರತಿಕ್ರಿಯಿಸಿತ್ತು. ಕಳೆದ ಆರು ದಶಕಗಳಿಂದ ಚೀನಾ, ಕಣ್ರೆಪ್ಪೆ ಬಡಿಯದೆ ದಲೈಲಾಮಾ ಚಲನವಲನವನ್ನು ಗಮನಿಸುತ್ತಿದೆ. ದಲೈಲಾಮಾ ಎಲ್ಲಿದ್ದಾರೆ, ಯಾರನ್ನು ಭೇಟಿಯಾದರು, ಯಾವ ವಿಷಯ ಚರ್ಚಿಸಲಾಯಿತು ಎಂಬುದು ಚೀನಾಕ್ಕೆ ತಿಳಿಯಲೇಬೇಕು.ಟಿಬೆಟ್ ವಿಷಯವಾಗಿ ಮೂರನೆಯವರು ಬಾಯಿ ತೆರೆಯಕೂಡದು ಎಂದು ಚೀನಾ ಬಯಸುತ್ತದೆ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ರಾಷ್ಟ್ರ, ದಲೈಲಾಮಾ ಅವರಿಗೆ ಹತ್ತಿರವಾದರೆ ಚೀನಾದ ಬತ್ತಳಿಕೆಯಿಂದ ಪ್ರತಿಭಟನೆ, ಧಮಕಿ, ದಿಗ್ಬಂಧನದ ಅಸ್ತ್ರ ಚಿಮ್ಮಿ ಬರುತ್ತದೆ.ಫೆಬ್ರುವರಿ 2ರಂದು ಅಮೆರಿಕದ ಸ್ಯಾನ್ ಡಿಯಾಗೊನಲ್ಲಿರುವ ‘ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ’ ಪ್ರಕಟಣೆಯೊಂದನ್ನು ಹೊರಡಿಸಿತು. ಈ ಬಾರಿಯ ಘಟಿಕೋತ್ಸವದಲ್ಲಿ ದಲೈಲಾಮಾ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿಶ್ವವಿದ್ಯಾಲಯ ಹೇಳಿತು.ತಕ್ಷಣವೇ ಚೀನಾದ ಆಡಳಿತ ಪಕ್ಷದ ಮುಖವಾಣಿ ‘ಗ್ಲೋಬಲ್ ಟೈಮ್ಸ್’ ವಿಶ್ವವಿದ್ಯಾಲಯದ ನಿಲುವನ್ನು ಖಂಡಿಸಿತು. ಮರುದಿನ ಚೀನಾ ಮೂಲದ ವಿದ್ಯಾರ್ಥಿ ಒಕ್ಕೂಟ, ಕುಲಪತಿಗಳ ವಿರುದ್ಧ ಪ್ರತಿಭಟಿಸಿತು. ಕೊನೆಗೆ ಲಾಸ್ ಏಂಜಲೀಸ್‌ನಲ್ಲಿರುವ ಚೀನಾದ ದೂತಾವಾಸ ಕಚೇರಿಗೂ ಆ ಬಗ್ಗೆ ದೂರು ನೀಡಲಾಯಿತು.ನಂತರ ಸಿಟ್ಟು ಭಾರತದ ಕಡೆ ತಿರುಗಿತು. ಕಾರಣ, ವಿಶ್ವವಿದ್ಯಾಲಯದ ಕುಲಪತಿ ಪ್ರದೀಪ್ ಖೋಸ್ಲಾ ಭಾರತ ಮೂಲದವರು. ಅದನ್ನು ಪ್ರಸ್ತಾಪಿಸಿ, ‘ಅಮೆರಿಕ ಮತ್ತು ಐರೋಪ್ಯ ರಾಷ್ಟ್ರಗಳಲ್ಲಿ ದಲೈಲಾಮಾ ಅವರಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವವರು ಭಾರತೀಯ ಮೂಲದವರು. ದಲೈಲಾಮಾ ಧರ್ಮಗುರುವಿನ ವೇಷದಲ್ಲಿರುವ ಚೀನಾದ ಪ್ರತ್ಯೇಕತಾವಾದಿ. ಪಶ್ಚಿಮ ರಾಷ್ಟ್ರಗಳು ಚೀನಾ ದ್ವೇಷವನ್ನು ಟಿಬೆಟ್‌ಗೆ ಸಹಾನುಭೂತಿ ತೋರುವುದರ ಮೂಲಕ ಹೊರಹಾಕುತ್ತಿವೆ’ ಎಂದು ‘ಗ್ಲೋಬಲ್ ಟೈಮ್ಸ್’ ಬರೆಯಿತು.ಇತ್ತೀಚೆಗೆ ಟಿಬೆಟ್ ವಿಷಯದಲ್ಲಿ ಸಣ್ಣ ಪುಟ್ಟ ಸಂಗತಿಗಳಿಗೂ ಚೀನಾ ವ್ಯಗ್ರ ಪ್ರತಾಪ ತೋರುತ್ತಿದೆ. ಕಳೆದ ಡಿಸೆಂಬರ್‌ನಲ್ಲಿ ದಲೈಲಾಮಾ ಮತ್ತು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಭೇಟಿಯಾದಾಗ ಚೀನಾ ಅಪಸ್ವರ ತೆಗೆದಿತ್ತು. ಅಮೆರಿಕದ ಭಾರತ ರಾಯಭಾರಿ ರಿಚರ್ಡ್ ವರ್ಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ಇತ್ತಾಗ ಸಿಟ್ಟಾಗಿದ್ದ ಚೀನಾ, ‘ಗಡಿ ವಿವಾದದಲ್ಲಿ ವಾಷಿಂಗ್ಟನ್ ಮಧ್ಯಪ್ರವೇಶಿಸಿದರೆ ಗಡಿಯಲ್ಲಿನ ಶಾಂತಿಗೆ ಭಂಗ ಉಂಟಾಗುತ್ತದೆ’ ಎಂಬ ಎಚ್ಚರಿಕೆಯ ಸಂದೇಶ ರವಾನಿಸಿತ್ತು.ಬಿಡಿ, ಕಳೆದ ನೂರು ವರ್ಷಗಳಲ್ಲಿ ಭಾರತ ಮತ್ತು ಚೀನಾ ಸಂಬಂಧ ಸಮಸ್ಥಿತಿಯಲ್ಲೇನೂ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಎರಡೂ ದೇಶಗಳ ನಡುವೆ ಸಹಾನುಭೂತಿ ಇತ್ತು. ವಸಾಹತು ಶಕ್ತಿಗಳಿಂದ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿ ಅವು ಇದ್ದವು. 1947- 58ರ ಅವಧಿಯಲ್ಲಿ ಸ್ನೇಹ ಕುದುರಿತು, 59- 69ರ ನಡುವೆ ಹಗೆ ಬೆಳೆಯಿತು, 70ರಿಂದ 98ರವರೆಗೆ ಭಾರತ- ಚೀನಾ ಮುಖ ಸಡಿಲಿಸಲಿಲ್ಲ, 2001ರ ನಂತರ ಹಲವು ಯೋಜನೆಗಳಲ್ಲಿ ಸಹಭಾಗಿತ್ವ ಸಾಧ್ಯವಾದರೂ ಗಡಿ ವಿಷಯದಲ್ಲಿ ಒಮ್ಮತ ಮೂಡಲಿಲ್ಲ.ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ, ಸ್ವಾತಂತ್ರ್ಯ ಗಳಿಸದೆ ಯಾವುದೇ ಯುದ್ಧದಲ್ಲಿ ಭಾಗಿಯಾಗಬಾರದು ಎಂಬ ಭಾರತದ ನಿಲುವನ್ನು ಚೀನಾ ಬೆಂಬಲಿಸಿತ್ತು. ಆದರೆ ನಂತರ ಭಾರತದ ಮಿಲಿಟರಿ ಸಹಾಯ ಕೋರುವ ಪರಿಸ್ಥಿತಿ ಚೀನಾಕ್ಕೆ ಬಂತು. ಚೀನಾ ಅಧ್ಯಕ್ಷ ಚಿಯಾಂಗ್ ಕೈ ಷೇಕ್ 1940ರಲ್ಲಿ ಭಾರತಕ್ಕೆ ಭೇಟಿ ಕೊಟ್ಟರು. ನಂತರ ನೆಹರೂ ಚೀನಾಕ್ಕೆ ಮೂರು ಬಾರಿ ಹೋಗಿಬಂದರು, ಹೀಗೆ ಸಹಾನುಭೂತಿ ಸ್ನೇಹವಾಗಿ ಮಾರ್ಪಟ್ಟಿತು.ಮುಖ್ಯವಾಗಿ ನೆಹರೂ, ಭಾರತ ಮತ್ತು ಚೀನಾ ಒಂದಾದರೆ ಏಷ್ಯಾದ ಪುನರುತ್ಥಾನ ಸಾಧ್ಯ ಎಂದು ನಂಬಿದ್ದರು. ಬಾಹ್ಯ ಶಕ್ತಿಗಳ ಆಕ್ರಮಣವನ್ನು ಉಭಯ ದೇಶಗಳು ಸೇರಿ ಎದುರಿಸಬೇಕು ಎಂಬುದು ನೆಹರೂ ವಿಚಾರಧಾರೆಯಾಗಿತ್ತು.ಎರಡೂ ದೇಶಗಳು ಪರಸ್ಪರ ಗೌರವಯುತವಾಗಿ ವರ್ತಿಸಬೇಕು, ಆಕ್ರಮಣಕ್ಕೆ ಇಳಿಯಬಾರದು, ಆಂತರಿಕ ವಿಷಯಗಳಲ್ಲಿ ಮಧ್ಯಪ್ರವೇಶಿಸಬಾರದು, ಇಬ್ಬರಿಗೂ ಅನುಕೂಲವಾಗುವಂತೆ ವ್ಯವಹರಿಸಬೇಕು, ಶಾಂತಿ ಮತ್ತು ಸಹಬಾಳ್ವೆಯ ಆಶಯಕ್ಕೆ ಬದ್ಧವಾಗಿರಬೇಕು ಎಂಬ ‘ಪಂಚಶೀಲ’ ತತ್ವಗಳನ್ನು ನೆಹರೂ ಮುಂದಿಟ್ಟರು. ಆ ನಿಲುವುಗಳಿಗೆ ಎರಡೂ ದೇಶಗಳು 25 ವರ್ಷ ಬದ್ಧವಾಗಿರಬೇಕು ಎಂಬುದು ನೆಹರೂ ಆಶಯವಾಗಿತ್ತು. ಆದರೆ ಚೀನಾ 5 ವರ್ಷ ಸಾಕು ಎಂದಿತು.‘ಪಂಚಶೀಲ’ ತತ್ವಗಳ ಅಡಿಯಲ್ಲಿ ಚೀನಾ- ಭಾರತ ಕೈ ಕೈ ಹಿಡಿದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಚೀನಾಕ್ಕಿರಲಿ ಎಂದು ಭಾರತ ಒತ್ತಾಯಿಸಿತು. ಬ್ರಿಟಿಷರ ಹಿಡಿತದಲ್ಲಿದ್ದ ಪ್ರದೇಶಗಳಿಂದ ಸೇನೆಯನ್ನು ವಾಪಸ್‌ ಕರೆಸಿಕೊಂಡು, ಕನಿಷ್ಠ ಕೊಡುಕೊಳ್ಳುವ ಮಾತುಕತೆ ನಡೆಸದಷ್ಟು ನೆಹರೂ ಉದಾರಿಯಾದರು. ಚೀನಾ ತನ್ನದಲ್ಲದ ಭೂಪ್ರದೇಶದಲ್ಲಿ ರಸ್ತೆ ನಿರ್ಮಿಸಿತು, ಅಂಚೆ ಕಚೇರಿ, ದೂರವಾಣಿ ಕೇಂದ್ರ ಹೀಗೆ ಒಂದೊಂದೇ ಸಂಸ್ಥೆ ತೆರೆಯುತ್ತಾ ಪೂರ್ಣ ಹಿಡಿತ ಸಾಧಿಸಿತು.‘ಹಿಂದಿ- ಚೀನಿ ಭಾಯಿ ಭಾಯಿ’ ಘೋಷಣೆಯ ಉಮೇದಿನಲ್ಲಿ ಚೀನಾದ ‘ತಂತ್ರ’ ಏನು ಎಂಬುದು ಪ್ರಧಾನಿಯ ಗಮನಕ್ಕೆ ಬರಲಿಲ್ಲ. ‘ಪಂಚಶೀಲ’ದ ಕರಾರಿಗೆ 5 ವರ್ಷ ತುಂಬುವ ಹೊತ್ತಿಗೇ, ಚೀನಾದ ಸೈನಿಕರು ಟಿಬೆಟ್‌ ಆಕ್ರಮಿಸಿಕೊಂಡಿದ್ದರು. ಬೌದ್ಧ ಸನ್ಯಾಸಿಗಳ ಹತ್ಯೆ, ಧರ್ಮ, ಭಾಷೆ, ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಯಿತು. ದಲೈಲಾಮಾ ಸಹಿತ ಸಾವಿರಾರು ಬೌದ್ಧ ಭಿಕ್ಷುಗಳು ಭಾರತಕ್ಕೆ ವಲಸೆ ಬಂದರು. ಭಾರತವು ಚೀನಾ ಕ್ರಮವನ್ನು ಗಟ್ಟಿದನಿಯಲ್ಲಿ ವಿರೋಧಿಸಲಿಲ್ಲ!ಅದಾಗಲೇ ದೈಹಿಕವಾಗಿ ಕುಗ್ಗಿದ್ದ ಸರ್ದಾರ್ ಪಟೇಲ್ 1950ರ ನವೆಂಬರ್ 7ರಂದು ಪತ್ರ ಪರೆದು ‘ಟಿಬೆಟಿಯನ್ನರು ಭಾರತವನ್ನೇ ನಂಬಿದ್ದಾರೆ. ನಾವು ಅವರ ಕೈಬಿಡಬಾರದು’ ಎಂಬ ಸಲಹೆ ಇತ್ತರು. ಆ ಹಿಂದೆಯೂ ಗೋಪಾಲಸ್ವಾಮಿ ಅಯ್ಯಂಗಾರ್, ರಾಜಾಜಿ, ಪಟೇಲ್ ಒಳಗೊಂಡ ವಿದೇಶಾಂಗ ವ್ಯವಹಾರ ಸಲಹಾ ಸಮಿತಿ ನೆಹರೂರ ‘ಟಿಬೆಟ್ ನೀತಿ’ಯನ್ನು ವಿರೋಧಿಸಿತ್ತು. ಆದರೆ ‘ಅಲಿಪ್ತ ಒಕ್ಕೂಟ’ ಎಂಬ ಅಂತರ ರಾಷ್ಟ್ರೀಯ ವೇದಿಕೆಯಲ್ಲಿ ಬಿಳಿ ಪಾರಿವಾಳ ಹಾರಿಬಿಡುತ್ತಿದ್ದ ನೆಹರೂ, ಚೀನಾ ಪಂಚಶೀಲ ತತ್ವದಿಂದ ಆಚೆ ಸರಿಯಲಾರದು ಎಂದೇ ನಂಬಿದ್ದರು, ಆದರೆ ಚೀನಾ ಯುದ್ಧಕ್ಕೆ ಇಳಿಯಿತು. 1962ರ ಯುದ್ಧವನ್ನು ನೆಹರೂ ನಿರೀಕ್ಷಿಸಿರಲಿಲ್ಲ.ಯುದ್ಧದ ಸೋಲಿನೊಂದಿಗೆ, ತಾವು ರೂಪಿಸಿದ ಯೋಜನೆಗಳ ವೈಫಲ್ಯ ನೆಹರೂ  ಆರೋಗ್ಯದ ಮೇಲೆ ಪರಿಣಾಮ ಬೀರಿತು. ನಂತರ ಬಂದ ಪ್ರಧಾನಿಗಳೂ ಚೀನಾದ ಬಗ್ಗೆ ಗಟ್ಟಿ ನಿಲುವು ತಳೆಯಲಿಲ್ಲ. ವೈರಿ ಎಂದರೆ ಪಾಕಿಸ್ತಾನ ಎಂದು ಬಾಣ ಹೂಡಿ ನಿಂತ ಭಾರತಕ್ಕೆ, ಚೀನಾ ಗೆಳೆಯನ ವೇಷ ತೊಟ್ಟೇ ಬರೆ ಎಳೆಯುವ ಕೆಲಸ ಮಾಡಿತು.ಟಿಬೆಟ್ ಅತಂತ್ರವಾಯಿತು, ಭೂಪಟದಲ್ಲಿ ಚೀನಾದ ಪರಿಧಿಯೊಳಗೆ ಗುರುತಾಯಿತು. ನಂತರ ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್’ ಎಂದು ಚೀನಾ ಕರೆಯಿತು. ಚೀನೀಯರು ಬಹುಸಂಖ್ಯೆಯಲ್ಲಿರುವ ಜಮ್ಮು ಕಾಶ್ಮೀರದ ಒಂದು ಭಾಗವನ್ನೂ ತನ್ನದು ಎಂದು ಇತ್ತೀಚೆಗೆ ಗುರುತು ಮಾಡಿಕೊಂಡಿದೆ. ಆದರೂ ಟಿಬೆಟ್ ವಿಷಯ ಬಂದರೆ ಈಗಲೂ ಉರಿದುಬೀಳುತ್ತಿದೆ.ಹಾಗಾದರೆ ಟಿಬೆಟ್ ಬಗೆಗಿನ ಚೀನಾ ಮಮಕಾರಕ್ಕೆ ವಿಶೇಷ ಕಾರಣಗಳಿವೆಯೇ? ಮುಖ್ಯವಾಗಿ ಟಿಬೆಟ್, ಏಷ್ಯಾದ ನೀರಿನ ಆಕರ. ಏಷ್ಯಾದ 10 ಪ್ರಮುಖ ನದಿಗಳ ಮೂಲ. ಸಟ್ಲೇಜ್, ಬ್ರಹ್ಮಪುತ್ರದಂತಹ ಮುಖ್ಯ ನದಿಗಳ ಉಗಮ ಸ್ಥಾನ. ಹಾಗಾಗಿ ಟಿಬೆಟ್ ಜೊತೆಗಿದ್ದರೆ ಗಂಟಲು ಒಣಗುವುದಿಲ್ಲ. ಚೀನಾ ಈಗಾಗಲೇ SNWP ಯೋಜನೆ ಮೂಲಕ, ಟಿಬೆಟ್ ನದಿಗಳನ್ನು ಉತ್ತರ ಚೀನಾ ಕಡೆಗೆ ತಿರುಗಿಸುವ ಕಾರ್ಯ ಮಾಡುತ್ತಿದೆ. ಬೃಹತ್ ಅಣೆಕಟ್ಟುಗಳ ಮೂಲಕ ನೀರಿನ ಪ್ರವಾಹಕ್ಕೆ ತಡೆಯೊಡ್ಡಿದೆ.ಭಾರತಕ್ಕೆ ಹರಿದು ಬರುವ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ, ಭಾರತ- ಭೂತಾನ್ ಗಡಿಗೆ ಸನಿಹದಲ್ಲೇ ಅಣೆಕಟ್ಟು ನಿರ್ಮಾಣವಾಗಿದೆ. ಹಾಗಾಗಿ ನೀರನ್ನೂ ಅಸ್ತ್ರವನ್ನಾಗಿ ಚೀನಾ, ಭಾರತದ ವಿರುದ್ಧ ಬಳಕೆ ಮಾಡಿಕೊಳ್ಳಬಹುದೇ ಎಂಬ ಆತಂಕ ಇದೆ. ಅಲ್ಲದೆ, ವಿವಾದಿತ ಪ್ರದೇಶಗಳಲ್ಲಿ ರಸ್ತೆ, ರೈಲು ಮಾರ್ಗ, ಸೇನಾ ನೆಲೆಗಳನ್ನು ನಿರ್ಮಿಸಿದೆ. ದುರಾಸೆಗೆ ಬಿದ್ದು ಖನಿಜ ಸಂಪತ್ತನ್ನು ಅಗೆದು ತೆಗೆಯುತ್ತಿದೆ. ಈ ಅಭಿವೃದ್ಧಿ ಕಾರ್ಯಗಳಿಂದ ಹಿಮಾಲಯದ ತಪ್ಪಲಿನಲ್ಲಿ ಪರಿಸರ ಸಮತೋಲನ ತಪ್ಪುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಹಾಗಾಗಿ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ.ಈಗಾಗಲೇ ಭಾರತದ 45,000 ಚದರ ಕಿ.ಮೀ ಭೂಮಿಯನ್ನು ಚೀನಾ ಆಕ್ರಮಿಸಿಕೊಂಡಿದ್ದರೂ ಅದರ ವಿಸ್ತರಣಾ ದಾಹ ತಣಿದಂತಿಲ್ಲ. ಸಿಕ್ಕಿಂ- ಭೂತಾನ್- ಟಿಬೆಟ್ ಕೂಡು ಪ್ರದೇಶದತ್ತ ಚೀನಾ ಗಮನ ಇಟ್ಟಿದೆ. ಈ ಪ್ರದೇಶ ಈಶಾನ್ಯ ರಾಜ್ಯಗಳನ್ನು ಭಾರತದೊಂದಿಗೆ ಬೆಸೆದಿದೆ. ಒಂದೊಮ್ಮೆ ಈ ಕೂಡು ಪ್ರದೇಶ ಚೀನಾ ವಶವಾದರೆ, ಭಾರತದ ಈಶಾನ್ಯ ರಾಜ್ಯಗಳು ಕತ್ತರಿಸಿ ಹೋಗುತ್ತವೆ. ಜೊತೆಗೆ ಏಷ್ಯಾದ ಮಟ್ಟಿಗೆ ಭಾರತವನ್ನು ಏಕಾಂಗಿಯಾಗಿಸುವ ಪ್ರಯತ್ನವನ್ನು ಚೀನಾ ಮಾಡುತ್ತಲೇ ಇದೆ.ಪ್ರಾಂತೀಯ ಮತ್ತು ಜಾಗತಿಕ ಸಂಸ್ಥೆಗಳಲ್ಲಿ ಭಾರತ ಪೂರ್ಣಾವಧಿ ಸದಸ್ಯತ್ವ ಹೊಂದುವುದನ್ನು ಚೀನಾ ವಿರೋಧಿಸುತ್ತಿದೆ. ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸದಸ್ಯತ್ವ ಹೊಂದಲು ಚೀನಾ ಮುಖ್ಯ ತೊಡಕಾಗಿದೆ.ಇನ್ನು, ಭಾರತದೊಂದಿಗೆ ಭಾವನಾತ್ಮಕವಾಗಿ ಗುರುತಿಸಿಕೊಳ್ಳುವ ಟಿಬೆಟ್ ಜನರನ್ನು ಒಡೆಯಲು ಹೊಸದೊಂದು ತಂತ್ರ ಹೆಣೆದಿದೆ. ದಲೈಲಾಮಾ ಅವರಿಗೆ ಪರ್ಯಾಯವಾಗಿ ಮತ್ತೊಬ್ಬ ಧರ್ಮಗುರುವನ್ನು ಬೆಳೆಸುವ ಕೆಲಸವನ್ನು ಬೀಜಿಂಗ್ ಈಗಾಗಲೇ ಮಾಡಿದೆ. ಆ ಮೂಲಕ ಟಿಬೆಟ್ ಜನರನ್ನು ಚೀನಾ ಪರ ಒಲಿಸಿಕೊಳ್ಳುವ ಕಸರತ್ತು ನಡೆಸಿದೆ. ಕಳೆದ ಜುಲೈನಲ್ಲಿ ಹೊಸ ಧರ್ಮಗುರುವಿನ ನೇತೃತ್ವದಲ್ಲಿ ಕಾಲಚಕ್ರ ಪೂಜೆ ಏರ್ಪಡಿಸಿ, ಪೂಜೆಯಲ್ಲಿ ಭಾಗವಹಿಸುವಂತೆ ಚೀನಾದಲ್ಲಿರುವ ಸಾವಿರಾರು ಟಿಬೆಟಿಯನ್ನರಿಗೆ ಚೀನಾ ಸರ್ಕಾರ ಒತ್ತಡ ಹೇರಿತ್ತು.ಹಾಗಾಗಿಯೇ 2017ರ ಜನವರಿ ಆರಂಭದಲ್ಲಿ ಬೋಧಗಯಾದಲ್ಲಿ ನಡೆದ ಕಾಲಚಕ್ರ ಪೂಜೆಯಲ್ಲಿ ಭಾಗವಹಿಸಬಾರದು, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಟಿಬೆಟಿಯನ್ನರ ಮೇಲೆ  ಕಠಿಣ ಕ್ರಮ ಕೈಗೊಳ್ಳುವುದಾಗಿ ಚೀನಾ ಆಡಳಿತ ಎಚ್ಚರಿಸಿತ್ತು. ಎಷ್ಟರಮಟ್ಟಿಗೆ ಎಂದರೆ, ಬೋಧಗಯಾಕ್ಕೆ ಹೋದರೆ ಪಾಸ್‌ಪೋರ್ಟ್ ಮತ್ತು ಪಡಿತರ ಚೀಟಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಬೆದರಿಸಿತ್ತು.ಹಾಗಾಗಿ ಪಶ್ಚಿಮ ಚೀನಾ ಭಾಗದಿಂದ ಸಾವಿರಾರು ಟಿಬೆಟಿಯನ್ನರು ಬೋಧಗಯಾ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸಾಧ್ಯವಾಗಲಿಲ್ಲ. ಜೊತೆಗೆ, ತನ್ನ ಗಡಿಯನ್ನು ಪಾಕಿಸ್ತಾನದೊಂದಿಗೆ ತೆರೆದಿಟ್ಟಿರುವ ಚೀನಾ, ಟಿಬೆಟ್ ಮತ್ತು ಭಾರತದ ಗಡಿಯನ್ನು ಬಿಗಿ ಮಾಡಿದೆ. ಗಡಿ ಪ್ರದೇಶದ ಜನರಿಗೆ ಹೊಸದೊಂದು ಗುರುತಿನ ಚೀಟಿ ವ್ಯವಸ್ಥೆ ತಂದಿದೆ. ಭಾರತದೊಂದಿಗೆ ಟಿಬೆಟ್ ಸಖ್ಯವನ್ನು ಸಂಪೂರ್ಣವಾಗಿ ಕಡಿದುಹಾಕುವ ಕ್ರಮ ಎಂದು ಹೇಳಲಾಗುತ್ತಿದೆ. ಹೀಗೆ ಚೀನಾ ಹೊರಜಗತ್ತಿಗೆ ಸಹಬಾಳ್ವೆ ಬಯಸುವ ಮುಗ್ಧ ಮುಖ ತೋರಿಸಿ, ಆಂತರ್ಯದಲ್ಲಿ ಹಗೆ, ಕುತಂತ್ರಗಳನ್ನು ಪೋಷಿಸುತ್ತಿದೆ. ಮೊನ್ನೆ ಭಾರತದ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್, ಚೀನಾ ಪ್ರತಿನಿಧಿಯೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿದ್ದಾರೆ.ಟಿಬೆಟನ್ನು ಪಕ್ಕಕ್ಕೆ ಸರಿಸಿ ಯಾವ ಮಾತುಕತೆ ನಡೆಸಿದರೂ ಅದರಿಂದ ಭಾರತಕ್ಕೆ ಅಷ್ಟೇನೂ ಪ್ರಯೋಜನವಾಗಲಾರದು. ಇನ್ನಾದರೂ ಟಿಬೆಟ್ ಭೂಭಾಗವನ್ನು ಟಿಬೆಟ್ ಎಂದೇ ಗುರುತಿಸುವ, ಭಾರತ- ಟಿಬೆಟ್ ಗಡಿ ಎಂದು ಭೂಪಟದಲ್ಲಿ ಗುರುತು ಮಾಡುವ ಧೈರ್ಯ ಮಾಡಬೇಕಿದೆ.‘ಒಂದೇ ಚೀನಾ’ ತತ್ವಕ್ಕೆ ಬದ್ಧರಾಗಿ ಎಂದು ಚೀನಾ ಒತ್ತಾಯಿಸಿದರೆ, ಗೋಣಲ್ಲಾಡಿಸುವ ಮೊದಲು ಕಾಶ್ಮೀರದ ವಿಷಯದಲ್ಲಿ ‘ಒಂದೇ ಭಾರತ’ ನಿಲುವಿಗೆ ಬೆಂಬಲ ಸೂಚಿಸಿ ಎಂದು ಕೇಳಬೇಕಿದೆ. ನದಿ ತಿರುವು ಯೋಜನೆಯನ್ನು ಜಾಗತಿಕ ವೇದಿಕೆಯಲ್ಲಿ ಭಾರತ ಗಟ್ಟಿಯಾಗಿ ವಿರೋಧಿಸಬೇಕಿದೆ. ಮಿಗಿಲಾಗಿ ಟಿಬೆಟ್  ಭಾವನಾತ್ಮಕವಾಗಿ ಭಾರತಕ್ಕೆ ಮುಖ್ಯ. ಹಿಂದೂ, ಬೌದ್ಧ, ಜೈನರ ಪವಿತ್ರ ಕ್ಷೇತ್ರ ಕೈಲಾಸ ಮಾನಸ ಸರೋವರ ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿದೆ.ಇದೀಗ ನಿರ್ದಿಷ್ಟ ಅವಧಿಗೆ, ಸೀಮಿತ ಜನರನ್ನು ಆ ಪ್ರದೇಶಕ್ಕೆ ಮಾರ್ಗ ಬದಲಿಸಿ ಬಿಡಲಾಗುತ್ತಿದೆ. ಟಿಬೆಟ್ ಮೇಲಿನ ಚೀನಾ ಹಿಡಿತ ಬಿಗಿಯಾದರೆ, ಕೈಲಾಸ ಪರ್ವತ ತಲುಪಲು ಶಿವ ಶಿವ ಎಂದು ಏದುಸಿರು ಬಿಡಬೇಕಾಗುತ್ತದೆ. ಚೀನಾದಂತಹ ಆಕ್ರಮಣಕಾರಿ ಮನೋಭಾವದ, ದೈತ್ಯ ರಾಷ್ಟ್ರದ ಮಗ್ಗುಲಿನಲ್ಲಿ ಹೂಂಕರಿಸದೇ ಬದುಕುವುದು ಕಷ್ಟ ಕಷ್ಟ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry