7

ಐತಿಹಾಸಿಕ ಒಳನೋಟ: ಹೀಗೊಂದು ತೌಲನಿಕ ಚರ್ಚೆ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:

ಕಳೆದ ವಾರ ಮೈಸೂರಿನಲ್ಲಿ ಅಪರೂಪದ ಅಂತರರಾಷ್ಟ್ರೀಯ ವಿಚಾರ ಸಂಕಿರಣವೊಂದು ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಆಶ್ರಯದಲ್ಲಿ ನಡೆಯಿತು. ‘ದಕ್ಷಿಣ ಭಾರತದ ದೇಶಿ ಸಂಸ್ಥಾನಗಳಲ್ಲಿ ಅಧಿಕಾರ, ಪ್ರತಿರೋಧ ಮತ್ತು ಪ್ರಭುತ್ವ’ ಎಂಬ ಶೀರ್ಷಿಕೆಯ ಈ ವಿಚಾರ ಸಂಕಿರಣವು ವಿಶೇಷವಾಗಿ ವಸಾಹತುಶಾಹಿ ಸಂದರ್ಭದಲ್ಲಿನ ಅಧಿಕಾರ ಹಸ್ತಾಂತರದ (ಬ್ರಿಟಿಷರಿಗೆ ಅಧಿಕಾರ ದೊರಕುವಾಗಿನ ಮತ್ತು 1947ರಲ್ಲಿ ಭಾರತದ ಒಕ್ಕೂಟಕ್ಕೆ ಸೇರುವಾಗಿನ ಸಂದರ್ಭಗಳಲ್ಲಿ ಉದ್ಭವಿಸಿದ) ಪ್ರಶ್ನೆಗಳನ್ನು ಗಂಭೀರವಾಗಿ ಚರ್ಚಿಸಿತು.ಮೈಸೂರು, ಹೈದರಾಬಾದ್, ತಿರುವಾಂಕೂರು, ಕೊಚ್ಚಿ ಮತ್ತು ಕೊಡುಗುಗಳ ಐತಿಹಾಸಿಕ ಅನುಭವಗಳನ್ನು ಭಾರತದ ಮತ್ತು ವಿಶ್ವದ ವಿವಿಧ ಭಾಗಗಳಿಂದ ಬಂದಿದ್ದ 14  ವಿದ್ವಾಂಸರು ತಮ್ಮ ಪ್ರಬಂಧಗಳಲ್ಲಿ ಮಂಡಿಸಿದರು.ವಿಚಾರ ಸಂಕಿರಣದ ಸಂಘಟನೆ ಮತ್ತು ಪರಿಕಲ್ಪನೆಯ ಹೇಳಿಕೆಯನ್ನು ಬರೆಯುವುದರಲ್ಲಿ ನಾನು ಪಾಲ್ಗೊಂಡಿದ್ದೆ. ಆ ಹಿನ್ನೆಲೆಯಲ್ಲಿ ಮೂರು ಮುಖ್ಯ ವಿಚಾರಗಳನ್ನು ಓದುಗರೊಡನೆ ಹಂಚಿಕೊಳ್ಳಲು ಬಯಸುತ್ತೇನೆ. ಮೊದಲ ಎರಡು ಅಂಶಗಳು ಸಂಘಟನಾತ್ಮಕ ಆಯಾಮಗಳನ್ನು ಕುರಿತವುಗಳಾದರೆ ಮೂರನೆಯದು, ವಿಚಾರ ಸಂಕಿರಣದಲ್ಲಿ ಚರ್ಚಿತವಾದ ಬೌದ್ಧಿಕ ವಿಷಯಗಳಿಗೆ ಸಂಬಂಧಪಟ್ಟಿದ್ದು.ಈ ವಿಚಾರ ಸಂಕಿರಣದ ಮೊದಲ ವೈಶಿಷ್ಟ್ಯವೆಂದರೆ ಕರ್ನಾಟಕದ ಇತಿಹಾಸ ಸಂಶೋಧಕರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ವಾಂಸರೊಡನೆ ಅನುಸಂಧಾನ ಮಾಡಲು ಅನುವು ಮಾಡಿಕೊಡುವ ವೇದಿಕೆಯೊಂದನ್ನು ಸೃಷ್ಟಿಸಿದ್ದು. ಇಂದು ಕರ್ನಾಟಕದಲ್ಲಿ ನಡೆಯುತ್ತಿರುವ ಸಮಾಜವಿಜ್ಞಾನಗಳ ಸಂಶೋಧನೆಯು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟಗಳಲ್ಲಿನ ಯಾವ ಬೆಳವಣಿಗೆ, ಪ್ರವೃತ್ತಿಗಳನ್ನೂ ಗಮನಿಸುತ್ತಿಲ್ಲ. ನಮ್ಮ ಸಂಶೋಧನೆಗಳ ಗುಣಮಟ್ಟ ಕುಸಿದಿದೆ, ಕೃತಿಚೌರ್ಯ ನಡೆಯುತ್ತಿದೆ ಎನ್ನುವ ಸಲುವಾಗಿ ಈ ಮಾತನ್ನು ಬರೆಯುತ್ತಿಲ್ಲ.ನಮಗೆ ಇಂದು ನಿಜವಾಗಿಯೂ ಗಾಬರಿ ಹುಟ್ಟಿಸುವ ವಿಚಾರವೆಂದರೆ, ಸಂಶೋಧನೆಗೆ ಪ್ರಶ್ನೆ-ವಿಷಯಗಳನ್ನು ಗುರುತಿಸುವಾಗ, ಆಕರಗಳನ್ನು ಅಭ್ಯಸಿಸಿ ವಿಶ್ಲೇಷಣೆ ಮಾಡುವಾಗ ಮತ್ತು ಹೊಸ ಜ್ಞಾನವನ್ನು ಓದುಗನ ಮುಂದಿಡುವ ಸಂದರ್ಭಗಳಲ್ಲಿ ಯಾವುದೇ ಮಾನದಂಡಗಳಿಲ್ಲದೆ, ಈಗಾಗಲೇ ನಡೆದಿರುವ ಸಂಶೋಧನೆಯ ಬಗ್ಗೆ ಯಾವುದೇ ಅರಿವಿಲ್ಲದೆ ನಮ್ಮ ಸಮಾಜ, ಸಂಸ್ಕೃತಿ ಮತ್ತು ಇತಿಹಾಸಗಳ ಬಗ್ಗೆ ಸಂಶೋಧನಾ ಪ್ರಬಂಧಗಳು ರಚಿತವಾಗುತ್ತಿವೆ.ಇಂತಹ ಸನ್ನಿವೇಶದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ಜಗತ್ತಿನ ಪ್ರಮುಖ ವಿದ್ವಾಂಸರು ತಮ್ಮ ವಿಚಾರಗಳನ್ನು ಹಂಚಿಕೊಳ್ಳುವ ಅವಕಾಶ ಮೈಸೂರಿನಲ್ಲಿ ಸೃಷ್ಟಿಯಾಗಿದ್ದು ಅಪರೂಪದ ವಿಚಾರವೇ ಸರಿ. ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕಿ ಮತ್ತು ಆಧುನಿಕ ಮೈಸೂರಿನ ಇತಿಹಾಸದ ಬಗ್ಗೆ ಮಹತ್ವಪೂರ್ಣ ಗ್ರಂಥಗಳನ್ನು ಬರೆದಿರುವ ಹಿರಿಯ ಸಂಶೋಧಕಿ ಜಾನಕಿ ನಾಯರ್ ತಮಗೆ ಕರ್ನಾಟಕದೊಳಗಿನ ವಿಶ್ವವಿದ್ಯಾಲಯವೊಂದರಲ್ಲಿ ತಮ್ಮ ಪ್ರಬಂಧ ಮಂಡಿಸಲು ಮೊದಲ ಬಾರಿಗೆ ಅವಕಾಶ ದೊರಕಿದೆ ಎಂದು ಹರ್ಷಿಸಿದರು. ಈ ಚರ್ಚೆಗಳಲ್ಲಿ ಇತಿಹಾಸ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.ನಾನು ಗುರುತಿಸಬೇಕಿರುವ ಎರಡನೆಯ ಅಂಶವೆಂದರೆ, ಈ ವಿಚಾರ ಸಂಕಿರಣವು ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕ ದಿವಂಗತ ಡಿ.ಎಸ್. ಅಚುತ ರಾವ್ ಶತಮಾನೋತ್ಸವ ಆಚರಣೆಯ ಅಂಗವಾಗಿ, ಅವರ ಕುಟುಂಬ ವರ್ಗದವರ ಆರ್ಥಿಕ ಸಹಾಯ ಮತ್ತು ಸಕ್ರಿಯ ಭಾಗವಹಿಸುವಿಕೆಯೊಡನೆ ನಡೆಯಿತು.ಪ್ರೊ. ಅಚುತ ರಾವ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಮೊದಲ ವರ್ಗದಲ್ಲಿ ಪಡೆದು, 1940ರಿಂದ 1965ರವರೆಗೆ ಮಹಾರಾಜ ಕಾಲೇಜೂ ಸೇರಿದಂತೆ ಮೈಸೂರು ವಿಶ್ವವಿದ್ಯಾಲಯದ ಹಲವು ಕಾಲೇಜುಗಳಲ್ಲಿ ಮತ್ತು ಮಾನಸ ಗಂಗೋತ್ರಿಯ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಪ್ರತಿಭಾವಂತ ವಿದ್ಯಾರ್ಥಿ, ಜನಪ್ರಿಯ ಅಧ್ಯಾಪಕ ಮತ್ತು ಬದ್ಧತೆಯಿದ್ದ ಸಂಶೋಧಕರಾಗಿದ್ದ ಪ್ರೊ. ರಾವ್ ತಮ್ಮ ಸಂಶೋಧನಾ ಬರಹಗಳಲ್ಲಿ ಮೈಸೂರಿನ ವಸಾಹತುಪೂರ್ವ ಇತಿಹಾಸದ ಕುರಿತಾಗಿ ಹೊಸ ಒಳನೋಟಗಳನ್ನು ನೀಡಿದವರು.1965ರಲ್ಲಿ ತಮ್ಮ 47ನೆಯ ವಯಸ್ಸಿನಲ್ಲಿಯೇ ತೀರಿಕೊಂಡರು. ಪ್ರೊ. ರಾವ್ ಅವರ ಜನ್ಮಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಲೆಂದು ಅವರ ಕುಟುಂಬ ವರ್ಗದವರು ಅಂತರ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದ ಎಲ್ಲ ಖರ್ಚು ವೆಚ್ಚಗಳನ್ನು ಭರಿಸಿದರು. ಅಲ್ಲದೆ ಮೈಸೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಮಹಾರಾಜ ಕಾಲೇಜಿನಲ್ಲಿ ಇತಿಹಾಸ ಅಧ್ಯಯನಕ್ಕೆ ಸಂಬಂಧಿಸಿದ ಬೌದ್ಧಿಕ ಚಟುವಟಿಕೆಗಳು ನಿಯಮಿತವಾಗಿ ನಡೆಯಬೇಕೆಂದು ದತ್ತಿ ಸ್ಥಾಪಿಸಿದ್ದಾರೆ.ಜೊತೆಗೆ ಮಣಿಪಾಲ್ ವಿಶ್ವವಿದ್ಯಾಲಯದ ಪ್ರೆಸ್ (ಪ್ರಸಾರಾಂಗ) ಮೂಲಕ ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳ ಪ್ರಕಟಣೆಗೆ ಕೂಡ ದತ್ತಿಯೊಂದನ್ನು ಸ್ಥಾಪಿಸಿದ್ದಾರೆ. ಅದರ ಅಂಗವಾಗಿಯೇ ಅಚುತ ರಾವ್ ಅವರ ಸಂಶೋಧನೆಗಳನ್ನು ಮಣಿಪಾಲ್ ವಿಶ್ವವಿದ್ಯಾಲಯವು ಪ್ರಕಟಿಸಿದೆ. ಇವುಗಳಲ್ಲಿ ಒಂದು ಕೃತಿಯನ್ನು ಪ್ರೊ. ರಾವ್ ಅವರ ವಿದ್ಯಾರ್ಥಿಯೂ ಆಗಿದ್ದ ಪ್ರೊ. ಷ.ಶೆಟ್ಟರ್ ಅವರು ಸಂಪಾದಿಸಿದ್ದಾರೆ.ಹೀಗೆ ಹಿರಿಯ ವಿದ್ಯಾರ್ಥಿ ಮತ್ತು ಅಧ್ಯಾಪಕರೊಬ್ಬರ ಸ್ಮರಣೆಯಲ್ಲಿ ಅಪರೂಪದ ಕಾರ್ಯಕ್ರಮವೊಂದನ್ನು ಮೈಸೂರು ವಿಶ್ವವಿದ್ಯಾಲಯವು ನಡೆಸಿತು ಎನ್ನುವುದು ಒಂದು ವೈಶಿಷ್ಟ್ಯವಾದರೆ, ತಮ್ಮ ತಂದೆಯವರು ಬೌದ್ಧಿಕ ಬದುಕಿನ ಬಗ್ಗೆ ಹೊಂದಿದ್ದ ಬದ್ಧತೆಯನ್ನು ಒಂದು ಪರಂಪರೆಯಾಗಿ ಬೆಳೆಸಲು ಪ್ರೊ. ರಾವ್ ಅವರ ಕುಟುಂಬ ವರ್ಗವು ಮೈಸೂರು ವಿಶ್ವವಿದ್ಯಾಲಯಕ್ಕೆ ಅನುವು ಮಾಡಿಕೊಟ್ಟಿತು ಎನ್ನುವುದು ಮತ್ತೊಂದು ಶ್ಲಾಘನೀಯ ವಿಚಾರ.ಸಂಘಟನೆಯ ನೆಲೆಯ ಈ ಆಯಾಮಗಳು ಹೆಚ್ಚು ಅರ್ಥಪೂರ್ಣತೆಯನ್ನು ಪಡೆದದ್ದು ವಿಚಾರ ಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳ ಹಾಗೂ ನಂತರದ ಚರ್ಚೆಯ ಗುಣಮಟ್ಟಗಳ ಕಾರಣದಿಂದ. ಮೂರು ತಲೆಮಾರುಗಳಿಗೆ ಸೇರಿದ 14 ಆಹ್ವಾನಿತ ಸಂಶೋಧಕರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.ಐದು ದಶಕಗಳಿಂದಲೂ ವಸಾಹತುಶಾಹಿ ಕಾಲದ ದಕ್ಷಿಣ ಭಾರತದ ಇತಿಹಾಸದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಡೇವಿಡ್ ವಾಶ್‌ಬ್ರುಕ್ (ಆಕ್ಸ್‌ಫರ್ಡ್‌ ಮತ್ತು ಕೇಂಬ್ರಿಜ್‌ ವಿಶ್ವವಿದ್ಯಾಲಯ ಗಳೆರಡರಲ್ಲೂ ಪ್ರಾಧ್ಯಾಪಕರಾಗಿದ್ದವರು), ಮೇಲೆ ಹೆಸರಿಸಿದ ಜಾನಕಿ ನಾಯರ್, ಹೈದರಾಬಾದಿನ ಇತಿಹಾಸ ಪರಿಣತರಾದ ಎರಿಕ್ ಬೆವರ್ಲಿ (ಸ್ಟೇಟ್ ಯೂನಿವರ್ಸಿಟಿ ಆಫ್‌ ನ್ಯೂಯಾರ್ಕ್, ಸ್ಟೋನಿಬ್ರುಕ್) ಮತ್ತು ಬೆಂಜಮಿನ್ ಕೊಹೆನ್ (ಯೂಟ ವಿಶ್ವವಿದ್ಯಾಲಯ), ಮೈಸೂರು ರಾಜ್ಯದ ರಾಜಕೀಯ ಸಂಸ್ಕೃತಿಯನ್ನು ಅಭ್ಯಸಿಸುವ ಅಯಾ ಇಕಾಗಾಮೆ (ಟೋಕಿಯೊ ವಿಶ್ವವಿದ್ಯಾಲಯ) ಮತ್ತು ತಿರುವಾಂಕೂರನ್ನು  ಅಧ್ಯಯನ ಮಾಡುತ್ತಿರುವ ಯುವ ಸಂಶೋಧಕ ಶರತ್ ಪಿಳ್ಳೈ (ಷಿಕಾಗೊ ವಿಶ್ವವಿದ್ಯಾಲಯ), ಕರ್ನಾಟಕದವರೇ ಆದ ವಿಜಯ್ ತಂಬಂಡ ಪೂಣಚ್ಚ, ಕೆ.ಸದಾಶಿವ ಮತ್ತಿತರರು ಪ್ರಬಂಧ ಮಂಡಕರ ಪಟ್ಟಿಯಲ್ಲಿದ್ದವರು.ವಿಚಾರ ಸಂಕಿರಣದ ಪರಿಕಲ್ಪನಾ ಹೇಳಿಕೆ (ಕಾನ್ಸೆಪ್ಟ್ ನೋಟ್) ಬರೆಯುವಾಗ ನಮ್ಮ ಮನಸ್ಸಿನಲ್ಲಿದ್ದ ಅಂಶಗಳಿವು. ವಸಾಹತುಶಾಹಿ ಕಾಲಘಟ್ಟದ ದೇಶಿ ಸಂಸ್ಥಾನಗಳ ಇತಿಹಾಸ ಪ್ರೊ. ರಾವ್ ಅವರಿಗೂ ಪ್ರಿಯವಾದ ಸಂಶೋಧನೆಯ ವಿಚಾರ. ಅದಕ್ಕಿಂತಲೂ ಮಿಗಿಲಾಗಿ ಭಾರತದ ರಾಷ್ಟ್ರೀಯತೆಯ ಇತಿಹಾಸದ ಬರವಣಿಗೆಗಳಲ್ಲಿ ಬ್ರಿಟಿಷ್ ಇಂಡಿಯಾದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ ಹಾಗೂ ರಾಷ್ಟ್ರೀಯತೆ ಕುರಿತಾದ ಚಿಂತನೆಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿದೆ. ಈ ಬರಹಗಳಲ್ಲಿ ದೇಶಿ ಸಂಸ್ಥಾನಗಳನ್ನು ಬಹುಮಟ್ಟಿಗೆ ಬ್ರಿಟಿಷ್ ವಸಾಹತುಶಾಹಿಯ ಜೊತೆಗೆ ಸಹಕರಿಸಿದವರು ಎಂದೋ ಇಲ್ಲವೆ 1947ರಲ್ಲಿ ಭಾರತದ ಒಕ್ಕೂಟಕ್ಕೆ ಅನಿವಾರ್ಯವಾಗಿ ಸೇರಿದ ರಾಜ್ಯಗಳು ಎಂದು ಪರಿಗಣಿಸಲಾಗಿದೆ.ಈ ಕಥನಗಳಲ್ಲಿ ದೇಶಿ ಸಂಸ್ಥಾನಗಳ ಸ್ವಾಯತ್ತ ಚರಿತ್ರೆ, ಅಲ್ಲಿ ನಡೆದ ಹೊಸ ಬಗೆಯ ಪ್ರಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ವಿಚಾರ ಸಂಕಿರಣದ ಆಶಯ ಭಾಷಣ ಮಾಡಿದ ಪ್ರೊ. ವಾಶ್‌ಬ್ರುಕ್ ಹೇಳಿದಂತೆ ದೇಶಿ ಸಂಸ್ಥಾನಗಳಲ್ಲಿ ಕೈಗಾರಿಕಾ ವಲಯದಲ್ಲಿ ಬಂಡವಾಳ ಹೂಡಿಕೆ, ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸುಧಾರಣೆ ಮತ್ತು ಆಧುನಿಕ ಶಿಕ್ಷಣಗಳಿಗೆ ಸಂಬಂಧಿಸಿದಂತೆ ಸ್ವಾಯತ್ತ ಪ್ರಯೋಗಗಳು ನಡೆದವು.

ಇಂತಹ ಹಲವು ಸಂಸ್ಥಾನಗಳಲ್ಲಿ ಆಧುನಿಕತೆಯ ದೇಶಿ ಮಾದರಿಗಳ ಅನ್ವೇಷಣೆ ಸಹ ನಡೆಯಿತು. ಸ್ವತಂತ್ರ ಭಾರತವು ಈ ಎಲ್ಲ ಪ್ರಯೋಗಗಳ, ಅನ್ವೇಷಣೆಗಳ ಲಾಭವನ್ನು ಪಡೆಯಿತು. ಭಾರತದ ರಾಷ್ಟ್ರೀಯತೆಗೆ ಹೊಸ ಆಯಾಮ ನೀಡಬಲ್ಲ ವಿಚಾರ, ವಿದ್ಯಮಾನಗಳು ದೇಶಿ ಸಂಸ್ಥಾನಗಳಲ್ಲಿ ನಡೆದವು.ಈ ಹಿನ್ನೆಲೆಯಲ್ಲಿ ನಾವು ಕೇಳಬೇಕೆಂದುಕೊಂಡ ಹೊಸ ಪ್ರಶ್ನೆಗಳೆಂದರೆ: ಈ ದೇಶಿ ಸಂಸ್ಥಾನಗಳಲ್ಲಿ ಅಧಿಕಾರದ ಹಂಚಿಕೆ ಬ್ರಿಟಿಷರು, ರಾಜಮನೆತನದವರು, ಮಂತ್ರಿ-ಅಧಿಕಾರ ವರ್ಗದವರು ಮತ್ತಿತರರ ನಡುವೆ ಹೇಗಿತ್ತು?  ಪ್ರತಿಭಟನೆಯ ಸ್ವರೂಪ ಮತ್ತು ಆಯಾಮಗಳಾವುವು? ಅಂತರ ರಾಷ್ಟ್ರೀಯ ಕಾನೂನಿನಲ್ಲಿ ಹಾಗೂ ಸಾಂಕೇತಿಕ ರೂಪದಲ್ಲಿ ಇದ್ದ ಪ್ರಭುತ್ವದ ಪರಿಕಲ್ಪನೆಗಳೇನು? ಅಧಿಕಾರ, ಪ್ರತಿರೋಧ ಮತ್ತು ಪ್ರಭುತ್ವಕ್ಕೆ ಸಂಬಂಧಿಸಿದ ವಿಚಾರಗಳು, ವಿದ್ಯಮಾನಗಳನ್ನು ದಕ್ಷಿಣ ಭಾರತದ ಸಂದರ್ಭದಲ್ಲಿ ತೌಲನಿಕವಾಗಿ ನೋಡಬೇಕೆನ್ನುವುದು ನಮ್ಮ ಉದ್ದೇಶವಾಗಿತ್ತು.ಈ ತೌಲನಿಕ ಚರ್ಚೆ ಕೆಲವು ಕುತೂಹಲಕರವಾದ ಪ್ರಶ್ನೆಗಳನ್ನೂ ಎತ್ತಿತು. ಎರಿಕ್ ಬೆವರ್ಲಿ ಮತ್ತು ಶರತ್ ಪಿಳ್ಳೈ, ಹೈದರಾಬಾದ್ ಹಾಗೂ ತಿರುವಾಂಕೂರು ಸಂಸ್ಥಾನಗಳು ಬ್ರಿಟಿಷರೊಡನೆ ಮಾಡಿಕೊಂಡಿದ್ದ ಒಪ್ಪಂದಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಇವುಗಳ ಮೂಲಕ ಹೊರಹೊಮ್ಮುವ ಪ್ರಭುತ್ವದ ಪರಿಕಲ್ಪನೆಗಳ ಬಗ್ಗೆ ಮುಖ್ಯವಾದ ವಿಚಾರಗಳನ್ನು ಎತ್ತಿದರು. ಈ ಒಪ್ಪಂದಗಳು ಸಾಮ್ರಾಜ್ಯ ವಿಸ್ತರಣೆಗೆ ಕಾನೂನಿನ ಚೌಕಟ್ಟನ್ನು ಒದಗಿಸಿದರೆ, ಬೆವರ್ಲಿ ತೋರಿಸುವಂತೆ ಹೈದರಾಬಾದ್ 1950ರ ದಶಕದ ಆರಂಭದಲ್ಲಿ ತಾನು ಸ್ವತಂತ್ರ ರಾಜ್ಯವೆನ್ನುವ ವಾದವನ್ನು ವಿಶ್ವಸಂಸ್ಥೆಯ ಮುಂದೆ ಮಾಡಲು ಸಹ ಅನುವು ಮಾಡಿಕೊಟ್ಟಿತು.ತಿರುವಾಂಕೂರಿನ ರಾಜರ ಪ್ರಭುತ್ವದ ಸ್ವರೂಪವನ್ನು ಚರ್ಚಿಸಿದ ಪಿಳ್ಳೈ, ಬ್ರಿಟಿಷ್ ಮತ್ತು ದೇಶಿ ಸಂಸ್ಥಾನಗಳ ನಡುವಣ ಒಪ್ಪಂದಗಳ ಭಾಷೆಯನ್ನು ನೋಡಿದಾಗ, ರಾಜ ಮತ್ತು ರಾಜ್ಯಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಗುರುತಿಸಿದರು. ಹಾಗಾಗಿ ರಾಜಕೀಯ ಸುಧಾರಣೆಗಳನ್ನು ಮಾಡಬೇಕೆಂದರೆ ರಾಜ ಹೊಸ ಬಗೆಯ ಸಾಂವಿಧಾನಿಕ ವ್ಯವಸ್ಥೆಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ, ಇದನ್ನು ತಿರುವಾಂಕೂರಿನ ಇತಿಹಾಸದಲ್ಲಿ ನೋಡಬಹುದು ಎನ್ನುವುದು ಅವರ ವಾದವಾಗಿತ್ತು. ಆದರೆ ಅಧಿಕಾರ ಹಂಚಿಕೆಯ ಸಾಂವಿಧಾನಿಕ ವ್ಯವಸ್ಥೆಗಳನ್ನು ಮಾಡಿಕೊಂಡ ಮೈಸೂರಿನಲ್ಲಿ ತಂದ ಸುಧಾರಣೆಗಳು ಕೇವಲ ಒಕ್ಕಲಿಗ- ಲಿಂಗಾಯತ ಸಮುದಾಯಗಳು ರಾಜಕೀಯ ಪ್ರಾಬಲ್ಯ ಮತ್ತು ಅಧಿಕಾರಶಾಹಿಯಲ್ಲಿ ಸ್ಥಾನಮಾನ ಪಡೆಯಲು ಅನುವು ಮಾಡಿಕೊಟ್ಟವು.

ನಿಮ್ನವರ್ಗ, ಆದಿವಾಸಿ ಮತ್ತಿತರರಿಗೆ ಶಿಕ್ಷಣದಲ್ಲಿ ಕೆಲವು ಅವಕಾಶಗಳು ದೊರಕಿದರೂ, ನಿಜವಾದ ಅಧಿಕಾರದ ಹಂಚಿಕೆಯಾಗಲಿಲ್ಲ. ಹಾಗಾಗಿ ಮೈಸೂರಿನ ಪ್ರಗತಿಪರ ಸುಧಾರಣೆಗಳು ಸೀಮಿತ ಉದ್ದೇಶದವು ಎನ್ನುವುದು ನನ್ನ ಪ್ರಬಂಧದ ಮುಖ್ಯಾಂಶವಾಗಿತ್ತು. ದಕ್ಷಿಣ ಭಾರತದ ದೇಶಿ ಸಂಸ್ಥಾನಗಳ ಈ ತೌಲನಿಕ ಚರ್ಚೆಯು ಪುಸ್ತಕ ರೂಪದಲ್ಲಿ ಓದುಗರಿಗೆ ದೊರಕಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry