ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡಿತ್ಯದ ನವನೀತ ನಾರಾಯಣ ದತ್ತ

Last Updated 25 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರಿನ ನಾಗಶ್ರೀ ಬುಕ್‌ ಹೌಸ್‌ನಲ್ಲಿ ಅಂದು ಯಾವುದೋ ಪುಸ್ತಕವನ್ನು ಹುಡುಕುತ್ತಿದ್ದೆ. ಮೆಲುದನಿ, ಆದರೆ ತುಂಬ ಸ್ಫುಟವಾದ ದನಿ;
 
ಸಂಸ್ಕೃತಸಾಹಿತ್ಯವನ್ನು ಕುರಿತು ಮಾತನಾಡುತ್ತಿದ್ದುದು ಕಿವಿಗೆ ಬಿದ್ದಿತು. ಕುತೂಹಲ ಹುಟ್ಟಿ ಆ ಕಡೆಗೆ ಇಣುಕಿದೆ. ತೆಳುವಾದ ದೇಹ; ಶುಭ್ರ ಶ್ವೇತವಸ್ತ್ರಧಾರಿ; ಸುಮಾರು ಎಂಬತ್ತು ವರ್ಷದ ಆಸುಪಾಸಿನ ವ್ಯಕ್ತಿಯೊಬ್ಬರು ಕಂಡರು. ಮಾತನಾಡುವಾಗ ‘ವಿಷಯವನ್ನು ಹೇಳಬೇಕು’ ಎನ್ನುವ ಒತ್ತಡಕ್ಕಿಂತಲೂ ‘ಹೇಗೆ ಹೇಳಬೇಕು, ಏನನ್ನು ಹೇಳಬೇಕು’ ಎಂಬ ಎಚ್ಚರಿಕೆಯೇ ಅವರ ಹಾವಭಾವದಲ್ಲಿ ಎದ್ದುಕಾಣುತ್ತಿತ್ತು.
 
ಸಹಜವಾಗಿಯೇ ಅವರ ಬಗ್ಗೆ, ಅವರ ಮಾತಿನ ಬಗ್ಗೆ ಆಸಕ್ತಿ ಮೂಡಿತಾದರೂ ಅವರನ್ನು ಮಾತನಾಡಿಸಲು ಆಗ ಆಗಲಿಲ್ಲ. ಅವರು ಅಲ್ಲಿಂದ ತೆರಳಿದ ಬಳಿಕ, ಅವರು ಯಾರು ಎಂದು ಆ ಅಂಗಡಿಯ ಮಾಲೀಕರನ್ನು ಕೇಳಿದೆ. ‘ಅರೇ! ಅವರು ನಿಮಗೆ ಪರಿಚಯವಿಲ್ಲವೆ? ಅವರೇ ನಾರಾಯಣ ದತ್ತ’ ಎಂದರು. ಈ ಹೆಸರನ್ನು ಎಲ್ಲೋ ಕೇಳಿದ ನೆನಪಾಯಿತಾದರೂ ‘ಅವರು ಯಾರು’ ಎಂದು ಆ ಕ್ಷಣ ಸ್ಪಷ್ಟವಾಗಲಿಲ್ಲ. ‘ಅವರು ಯೋಗನರಸಿಂಹ ಅವರ ಮಗ’ ಎಂದು ಹೇಳಿದಾಗ ಆದ ಪರಿಚಯಕ್ಕಿಂತ ‘ಎಚ್‌. ವೈ. ಶಾರದಾಪ್ರಸಾದ್‌ ಅವರ ತಮ್ಮ’ ಎಂದಾಗ ಹೆಚ್ಚು ಸ್ಪಷ್ಟವಾಯಿತು.
 
ಇದಾದ ಬಳಿಕ ಒಂದೆರಡು ತಿಂಗಳಲ್ಲಿ ಮತ್ತೆ ಅದೇ ಸ್ಥಳದಲ್ಲಿ ನಾರಾಯಣ ದತ್ತ ಕಂಡರು. ಅಂದು ಮಾತನಾಡಿಸಿದೆ; ಪರಿಚಯವಾಯಿತು. ಅನಂತರ ಸುಮಾರು ವರ್ಷ ಈ ಪರಿಚಯ ಬೆಳೆಯಿತು; ಗಟ್ಟಿಯಾಯಿತು; ಆತ್ಮೀಯತೆಯೂ ಸೇರಿತು; ಅವರ ಪ್ರೀತಿ–ಕಾಳಜಿಗಳೂ ಕೂಡಿಕೊಂಡವು. ವಯಸ್ಸು, ಜ್ಞಾನ, ಅನುಭವಗಳಲ್ಲಿ ಅವರಿಗಿಂತ ತುಂಬ ಕಿರಿಯನಾದ ನನ್ನನ್ನು ಒಬ್ಬ ಆಪ್ತ ಮಿತ್ರನಂತೆ ನಡೆಸಿಕೊಂಡರು. 
 
ನಾರಾಯಣ ದತ್ತ (ಫೆ. 17, 1929–ಜೂ. 1, 2014) ಅವರನ್ನು ನಾನು ಕಂಡದ್ದು ಅವರ ಕೊನೆಯ ವರ್ಷಗಳಲ್ಲಿ. ಹಿಂದಿ ಪತ್ರಿಕಾರಂಗದಲ್ಲಿ ದೊಡ್ಡ ಹೆಸರನ್ನು ಸಂಪಾದಿಸಿದ ಈ ತೆಲುಗು ಮನೆಮಾತಿನ ಕನ್ನಡಿಗನ ಸಾಧನೆಯನ್ನು ಕರ್ನಾಟಕದಲ್ಲಿ ಬಲ್ಲವರು ಕಡಿಮೆಯೇ. ಏಕೆಂದರೆ ಅವರ ಶಿಕ್ಷಣ, ವೃತ್ತಿ, ಸಾಧನೆಗಳೆಲ್ಲವೂ ಕರ್ನಾಟಕದ ಹೊರಗೇ ನಡೆದದ್ದು. 
 
ಎಚ್. ಯೋಗನರಸಿಂಹ ಮತ್ತು ಎಚ್‌. ವೈ. ಸರಸ್ವತೀ ದಂಪತಿಯ ಎಂಟು ಮಕ್ಕಳಲ್ಲಿ ಮೂರನೆಯವರು ನಾರಾಯಣ ದತ್ತ. ಯೋಗನರಸಿಂಹ ಸಂಸ್ಕೃತವಿದ್ವಾಂಸ, ಶಿಕ್ಷಣತಜ್ಞ, ತತ್ತ್ವಶಾಸ್ತ್ರಜ್ಞ ಮತ್ತು ಸಂಗೀತಜ್ಞ. ತಾಯಿ ಸರಸ್ವತಿಯವರ ತಂದೆ ವಾಜಪೇಯಂ ವೆಂಕಟಸುಬ್ಬಯ್ಯ; ಗೋಪಾಲಕೃಷ್ಣ ಗೋಖಲೆಯವರು ಸ್ಥಾಪಿಸಿದ ‘ಸರ್ವೆಂಟ್ಸ್‌ ಆಫ್‌ ಇಂಡಿಯಾ ಸೊಸೈಟಿ’ಯ ಸಕ್ರಿಯ ಸದಸ್ಯರಾಗಿದ್ದವರು. ಮಹಿಳೆ ಮತ್ತು ಮಕ್ಕಳ ಕ್ಷೇಮಕುಶಲಕ್ಕಾಗಿ  ಮೈಸೂರಿನಲ್ಲಿ ‘ಮೈಸೂರು ಮಕ್ಕಳ ಕೂಟ’ವನ್ನು ಸ್ಥಾಪಿಸಿದ್ದವರು ಸರಸ್ವತೀ.
 
ಹೀಗೆ ಮನೆಯಲ್ಲಿ ಪಾಂಡಿತ್ಯ, ಕಲೆ ಮತ್ತು ಸಮಾಜಸೇವೆಯ ವಾತಾವರಣ ಸಹಜವಾಗಿಯೇ ಇದ್ದಿತು. ಮೆಕಾಲೆ ಶಿಕ್ಷಣಪದ್ಧತಿ ಗಟ್ಟಿಯಾಗುತ್ತಿದ್ದ ಕಾಲವದು. ಒಬ್ಬ ಮಗನಿಗಾದರೂ ಆಧುನಿಕ ಶಿಕ್ಷಣದ ಜೊತೆ ಭಾರತೀಯ ಗುರುಕುಲ ಪದ್ಧತಿಯಲ್ಲೂ ವಿದ್ಯಾಭ್ಯಾಸವನ್ನು ಕೊಡಿಸಬೇಕೆಂಬ ತವಕ ಯೋಗನರಸಿಂಹ ಅವರದ್ದು. ದೂರದ ಕುರುಕ್ಷೇತ್ರದಲ್ಲಿ (ಈಗಿನ ಉತ್ತರಾಖಂಡದಲ್ಲಿದೆ) ಸ್ವಾಮಿ ಶ್ರದ್ಧಾನಂದರು ಅಂಥದೊಂದು ಗುರುಕುಲವನ್ನು ನಡೆಸುತ್ತಿದ್ದರು. ಅಲ್ಲಿಗೆ ಕಳುಹಿಸಲು ಅವರು ಆರಿಸಿಕೊಂಡದ್ದು, ಹನ್ನೆರಡು ವರ್ಷದ ನಾರಾಯಣ ದತ್ತರನ್ನು. ಅಲ್ಲಿ ಎಂಟು ವರ್ಷಗಳ ಶಿಕ್ಷಣದ ಬಳಿಕ ಹರಿದ್ವಾರದ ಕಾಂಗ್‌ಡೀ ಗುರುಕುಲಕ್ಕೆ ಉನ್ನತ ಅಧ್ಯಯನಕ್ಕಾಗಿ ತೆರಳಿದರು. ‘ವಿದ್ಯಾಲಂಕಾರ’ ಪದವಿಯನ್ನು ಮೊದಲ ರ್‍್ಯಾಂಕ್‌ನೊಂದಿಗೆ ಪಡೆದರು; ಸಂಸ್ಕೃತ, ಹಿಂದಿ, ರಾಜ್ಯಶಾಸ್ತ್ರ ಮತ್ತು ಇತಿಹಾಸಗಳಲ್ಲಿ ಪ್ರಭುತ್ವ ಸಂಪಾದಿಸಿದರು. 
 
ನಾರಾಯಣ ದತ್ತರು ವೃತ್ತಿಜೀವನವನ್ನು ಆರಂಭಿಸಿದ್ದು ಮುಂಬೈನಲ್ಲಿ; ಇಂಡಿಯನ್‌ ಎಕ್ಸ್‌ಪ್ರೆಸ್‌ ಸಮೂಹದ ಸಿನಿಮಾ ಮ್ಯಾಗ್‌ಜೈನ್‌ ‘ಸ್ಕ್ರೀನ್’ನ ಮೂಲಕ. ಅವರ ಅಣ್ಣ ಎಚ್‌. ವೈ. ಶಾರದಾಪ್ರಸಾದ್‌ ಕೂಡ ಮುಂಬೈನಲ್ಲೇ ಇದ್ದರು. (ಮುಂದೆ ಪ್ರಧಾನಿ ಇಂದಿರಾ ಗಾಂಧಿ ಮತ್ತು ರಾಜೀವ ಗಾಂಧಿಯವರ ಪತ್ರಿಕಾ ಸಲಹೆಗಾರರಾದವರು.) ಅನಂತರ ನಾರಾಯಣ ದತ್ತ ಪ್ರಸಿದ್ಧ ಹಿಂದಿ–ಡೈಜೆಸ್ಟ್‌್ ‘ನವನೀತ್’ಗೆ ಸಂಪಾದಕರಾದರು. ‘ಅಮೃತಭಾರತೀ’ ಮತ್ತು ‘ಧರ್ಮಯುಗ್‌’ ಪತ್ರಿಕೆಗಳ ಸಂಪಾದಕ ವರ್ಗದಲ್ಲಿ ಸೇವೆ ಸಲ್ಲಿಸಿದರು.
 
ಪಿ.ಟಿ.ಐ.ನ ಹಿಂದಿ ಫೀಚರ್‌ ಸರ್ವಿಸ್‌ನ ಪ್ರಧಾನ ಸಂಪಾದಕರಾಗಿ 1993ರಲ್ಲಿ ನಿವೃತ್ತರಾದರು. ಅವರು ಬೆಂಗಳೂರಿಗೆ ಹಿಂದಿರುಗಿದ್ದು 2000ದಲ್ಲಿ. ಹಿಂದೀ ಪತ್ರಿಕೋದ್ಯಮದಲ್ಲಿ ಅವರು ಸಾಧಿಸಿದ ಕೀರ್ತಿಯನ್ನು ಅಲ್ಲಿಯ ಹಲವು ಗಣ್ಯರು ಶ್ಲಾಘಿಸಿದ್ದಾರೆ. ಹಲವು ಪ್ರಶಸ್ತಿ–ಸಂಮಾನಗಳೂ ಅವರಿಗೆ ಸಂದಿವೆ. ಭೋಪಾಲ್‌ನ ಮಾಖನ್‌ಲಾಲ್‌ ಚತುರ್ವೇದಿ ನ್ಯಾಷನಲ್‌ ಜರ್ನಲಿಸಂ ಯೂನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್‌ ನೀಡಿತು. ಕೇಂದ್ರೀಯ ಹಿಂದೀ ಸಂಸ್ಥಾನ್‌ ಗಣೇಶ್‌ ಶಂಕರ್‌ ವಿದ್ಯಾರ್ಥಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಮುಂಬೈ ವಿಶ್ವವಿದ್ಯಾಲಯವು ಅವರ ಸ್ಮರಣಾರ್ಥ ಉಪನ್ಯಾಸಮಾಲೆಯೊಂದನ್ನು ಆರಂಭಿಸಿದೆ.
 
ಸಂಸ್ಕೃತ, ಹಿಂದಿ, ಇಂಗ್ಲಿಷ್‌, ಉರ್ದು, ಮರಾಠಿ, ಗುಜರಾತಿ ಸೇರಿದಂತೆ ಹಲವು ಭಾಷೆಗಳ ಮೇಲೆ ಅವರಿಗಿದ್ದ ಪ್ರಭುತ್ವ ಅಸಾಧಾರಣ. ಅವರ ಪುಸ್ತಕಸಂಗ್ರಹದಲ್ಲಿ ಹಲವು ಭಾಷೆಯ ಸಾವಿರಾರು ಗ್ರಂಥಗಳಿದ್ದವು.  ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿಯವರು ಸಮಾರಂಭವೊಂದರಲ್ಲಿ ಮಾತನಾಡುತ್ತ ‘ನಾರಾಯಣ ದತ್ತ ನನಗಿಂತಲೂ ಒಳ್ಳೆಯ ಹಿಂದಿಯನ್ನು ಮಾತನಾಡುತ್ತಾರೆ ಮತ್ತು ಬರೆಯುತ್ತಿದ್ದಾರೆ’ ಎಂದು ಉದ್ಗರಿಸಿದ್ದರಂತೆ! ಜನಪ್ರಿಯ ವಿಜ್ಞಾನದ ಬರಹಗಳು ದೇಶೀಭಾಷೆಗಳಲ್ಲಿ ಪ್ರಕಟವಾಗಬೇಕು ಎಂದು ಶ್ರಮಿಸಿದವರು ನಾರಾಯಣ ದತ್ತ; ಈ ದಿಸೆಯಲ್ಲಿ ಅವರು ಹಿಂದೀಭಾಷೆಗೆ ನೀಡಿದ ಕೊಡುಗೆಯನ್ನು ಹಲವರು ಪ್ರಶಂಸಿಸಿದ್ದಾರೆ. 
 
ಹಿಂದೀ ಸಾಹಿತ್ಯ ಮತ್ತು ಪತ್ರಿಕಾರಂಗದಲ್ಲಿ ಸಾಕಷ್ಟು ಹೆಸರುಗಳಿಸಿದ್ದರೂ ನಾರಾಯಣ ದತ್ತ ಎಂದಿಗೂ ಅದರ ಬಗ್ಗೆ ಸೊಲ್ಲೆತ್ತಿದವರೇ ಅಲ್ಲ; ಪ್ರತಿಭೆ–ಪಾಂಡಿತ್ಯಗಳ ಹೊರೆಯಿಂದ ನಲುಗದೆ ಸಾಮಾನ್ಯವ್ಯಕ್ತಿಯಂತೆ ಸರಳವಾಗಿ, ನಗುನಗುತ್ತ ಬದುಕಿದರು. ಮುಂಬೈನಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ಅವಘಡದ ಕಾರಣದಿಂದ ಅವರು ಕಣ್ಣೊಂದನ್ನು ಕಳೆದುಕೊಳ್ಳಬೇಕಾಯಿತು. ಆದರೆ ಅಧ್ಯಯನಶೀಲತೆಗೆ ಇದೊಂದು ಅಡ್ಡಿ ಎಂದೇ ಅವರು ಭಾವಿಸಲಿಲ್ಲ;
 
ಕೊನೆಯವರೆಗೂ ಒಬ್ಬ ಆದರ್ಶ ವಿದ್ಯಾರ್ಥಿಯಂತೆ ಕಲಿಕೆಯ ಶಿಸ್ತನ್ನೂ ತೀವ್ರತೆಯನ್ನೂ ಉಳಿಸಿಕೊಂಡರು. ಅವರ ಪಾಂಡಿತ್ಯಕ್ಕೆ ಒಂದು ಸಣ್ಣ ಉದಾಹರಣೆ ಎಂದರೆ ಅವರು ಓದಿರುವ ಪುಸ್ತಕಗಳು. ಅವರು ಉಪಯೋಗಿಸಿರುವ ಸಾವಿರಾರು ಪುಸ್ತಕಗಳಲ್ಲಿರುವ ಒಂದೊಂದು ಮುದ್ರಣದೋಷವನ್ನೂ – ಅಲ್ಪವಿರಾಮ, ಪೂರ್ಣವಿರಾಮಗಳ ಸಮೇತ – ಗುರುತು ಮಾಡಿದ್ದಾರೆ; ಅವುಗಳಲ್ಲಿರುವ ತಪ್ಪು ಮಾಹಿತಿಗಳನ್ನೂ ಪುಸ್ತಕಗಳ ಮಾರ್ಜಿನ್‌ನಲ್ಲಿ ಕಾಣಿಸಿದ್ದಾರೆ. ಕೊನೆಯಲ್ಲಿರುವ ಪ್ರಕಾಶಕರ ಪುಸ್ತಕಪಟ್ಟಿಯೂ ಅವರ ಈ ಸೂಕ್ಷ್ಮಾವಲೋಕನದಿಂದ ತಪ್ಪಿಸಿಕೊಂಡಿಲ್ಲ! ಅವರ ಅಚ್ಚುಕಟ್ಟುತನಕ್ಕೂ ಪಾಂಡಿತ್ಯಕ್ಕೂ ಈ ಪುಸ್ತಕಗಳೇ ಉತ್ತಮ ಸಾಕ್ಷ್ಯಗಳಾಗಿವೆ. ನಮ್ಮ ಕಲಿಕೆಗೂ ಇವು ಅಪೂರ್ವ ಕೈಪಿಡಿಗಳಾಗಬಲ್ಲವು.
 
ಒಮ್ಮೆ ನಾರಾಯಣ ದತ್ತ ಅವರು ವಿದ್ವಾನ್‌ ರಂಗನಾಥಶರ್ಮರನ್ನು ನೋಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರು. ಇದಕ್ಕೊಂದು ಹಿನ್ನೆಲೆಯಿದೆ. ನಾರಾಯಣ ದತ್ತರು ಸಂಸ್ಕೃತವಿದ್ವಾಂಸರು. ಸಂಸ್ಕೃತದ ಹಲವು ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಚೆನ್ನಾಗಿದ್ದ ಕಣ್ಣನ್ನು ಇದ್ದಕ್ಕಿದ್ದಂತೆ ಅವಘಡದಲ್ಲಿ ಕಳೆದುಕೊಂಡರು. ಆಗ ಅವರಿಗೆ ಅನಿಸಿತಂತೆ – ‘ನಾನಿನ್ನೂ ವಾಲ್ಮೀಕಿ ರಾಮಾಯಣವನ್ನೇ ಓದಿಲ್ಲ;  ಇರುವ ನನ್ನ ಇನ್ನೊಂದು ಕಣ್ಣು ಕೂಡ ಅದನ್ನು ಓದದೆಯೇ ಹೋದರೆ?’ ಕೂಡಲೇ ರಾಮಾಯಣದ ಓದಿನಲ್ಲಿ ತೊಡಗಿ ಮುಗಿಸಿದರು. ರಾಮಾಯಣವನ್ನು ಓದಿದಾಗ ಉಂಟಾದ ಆನಂದವನ್ನು ಅಲೌಕಿಕ ಅನುಭೂತಿ; ಅಂಥದೊಂದು ಮಹದಾನಂದವನ್ನು ಜೀವನದಲ್ಲಿ ಮೊದಲ ಸಲ ಅನುಭವಿಸಿದೆ – ಎಂದು ಅವರು ಸ್ಮರಿಸಿಕೊಳ್ಳುತ್ತಿದ್ದರು.
 
ಸಾಂಪ್ರದಾಯಿಕ ಕ್ರಮದಲ್ಲಿ ರಾಮಾಯಣದ ಪಾರಾಯಣವನ್ನೇ ಮಾಡಿದ್ದರು. ಸಮಗ್ರ ವಾಲ್ಮೀಕಿ ರಾಮಾಯಣವನ್ನು ಕನ್ನಡಕ್ಕೆ ಅನುವಾದಿಸಿದ್ದವರು ರಂಗನಾಥಶರ್ಮಾ. ಮಾತ್ರವಲ್ಲ, ಅವರ ಪಾಂಡಿತ್ಯದ ಬಗ್ಗೆಯೂ ಅಪಾರ ಗೌರವವಿದ್ದಿತು. ಹೀಗಾಗಿ ಅವರನ್ನು ನೋಡುವ ಹಂಬಲ ನಾರಾಯಣ ದತ್ತರದ್ದು. ಸ್ನೇಹಿತರೊಬ್ಬರೊಂದಿಗೆ ಶರ್ಮರ ಮನೆಗೆ ಹೋಗಿಬಂದೆವು. ಸುಮಾರು ಎಂಬತ್ತು ವರ್ಷವನ್ನು ದಾಟಿದ ದತ್ತರೂ ತೊಂಬತ್ತನ್ನು ದಾಟಿದ್ದ ಶರ್ಮರೂ ಅಂದು ಸಂಭಾಷಿಸಿದ್ದನ್ನು ನೋಡಿದ್ದು–ಕೇಳಿದ್ದು ನನ್ನ ಜೀವನದ ರಸಘಟ್ಟಗಳಲ್ಲಿ ಒಂದು. ಕೊನೆಯಲ್ಲಿ ನಾರಾಯಣ ದತ್ತ ಅವರು ರಂಗನಾಥಶರ್ಮರ ಹಸ್ತಾಕ್ಷರವನ್ನು ಕೇಳಿ ಪಡೆದ ದೃಶ್ಯವಂತೂ ಇಂದೂ ಕಣ್ಣಿಗೆ ಕಟ್ಟಿದಂತಿದೆ. ನಾರಾಯಣ ದತ್ತ ಅವರಿಗೆ ದೇವರಲ್ಲಿ ನಂಬಿಕೆ ಇರಲಿಲ್ಲ. ಆದರೆ ಅವರು ರಾಮಾಯಣವನ್ನು ಭಕ್ತಿಯಿಂದ ಓದಿ, ಒಬ್ಬ ಶ್ರದ್ಧಾಳುವಿನಂತೆ ನಡೆದುಕೊಂಡು ರಾಮಾಯಣಪರಂಪರೆಗೆ ಗೌರವವನ್ನು ಸಲ್ಲಿಸಿದ ರೀತಿ ಇಡೀ ಪ್ರಸಂಗದ ಮತ್ತೊಂದು ಸ್ವಾರಸ್ಯ.
 
‘ದೇವರ’ನ್ನು ನಂಬುವುದಷ್ಟೇ ‘ಆಸ್ತಿಕತೆ’ ಅಲ್ಲ; ‘ನಂಬದಿರುವುದು’ ಅಷ್ಟೇ ‘ನಾಸ್ತಿಕತೆ’ಯೂ ಅಲ್ಲ – ಎಂಬುದಕ್ಕೆ ಪ್ರಾತ್ಯಕ್ಷಿಕೆಯಂತೆ ಆ ಸಂದರ್ಭ ಕಾಣಿಸಿತು. ರಾಮಾಯಣ–ಮಹಾಭಾರತಗಳು ಅವರಿಗೆ ತುಂಬ ಪ್ರಿಯವಾದ ಕೃತಿಗಳು. ಮಹಾಭಾರತದ ಸ್ವಾರಸ್ಯಗಳನ್ನು ಅವರು ನೀಲಕಂಠೀಯವ್ಯಾಖ್ಯಾನ ಮತ್ತು ಧರ್ಮಶಾಸ್ತ್ರಗಳ ಹಿನ್ನೆಲೆಯಲ್ಲಿ ವಿವರಿಸುತ್ತಿದ್ದರು. ವೇದಗಳ ಬಗ್ಗೆಯೂ ಅವರದ್ದು ತಲಸ್ಪರ್ಶಿ ಅಧ್ಯಯನ. ವೇದದ ಭಾಷೆ ಮತ್ತು ವ್ಯಾಕರಣ ಅವರನ್ನು ತುಂಬ ಆವರಿಸಿಕೊಂಡಿತ್ತೆನಿಸುತ್ತದೆ. 
 
ನಾರಾಯಣ ದತ್ತ ದಿಟವಾದ ಗಾಂಧೀವಾದಿ. ಬಿಳಿಬಣ್ಣದ ಎರಡು ಜೊತೆ ಕುರ್ತಾ–ಪೈಜಾಮಗಳಷ್ಟೇ ಅವರಲ್ಲಿದ್ದ ಬಟ್ಟೆ. ಅವರೇ ಅವನ್ನು ಒಗೆದುಕೊಳ್ಳುತ್ತಿದ್ದರು; ಗಂಜಿ ಹಾಕಿ, ಇಸ್ತ್ರಿ ಮಾಡಿ ಅಚ್ಚಕಟ್ಟಾಗಿ ಧರಿಸುತ್ತಿದ್ದರು. ಗಾಂಧಿಯವರನ್ನು ಕುರಿತು ಬರೆಯುತ್ತಿದ್ದ ಲೇಖನಗಳಿಗೆ ಅವರು ಸಂಭಾವನೆಯನ್ನು ಪಡೆಯುತ್ತಿರಲಿಲ್ಲವಂತೆ! ದೇಶದ ಹಲವು ಭಾಗಗಳ ತಿಂಡಿ–ತಿನಿಸುಗಳ ತಯಾರಿಕೆಯನ್ನು ಕಲಿತಿದ್ದ ಅವರು ಅವನ್ನು ರುಚಿಕಟ್ಟಾಗಿಯೂ ಸಂಭ್ರಮದಿಂದಲೂ ಮಾಡಿ ಆತ್ಮೀಯರಿಗೆ ಉಣಬಡಿಸಿ ಸಂತೋಷಪಡುತ್ತಿದ್ದರು. ಮದುವೆಯಾಗದೆ ಒಂಟಿಯಾಗಿಯೇ ಉಳಿದರೂ, ಸ್ನೇಹಿತರೊಂದಿಗೂ ಬಂಧುಗಳೊಂದಿಗೂ ಪ್ರೀತಿಯಿಂದಲೂ ಕಾಳಜಿಯಿಂದಲೂ ನಡೆದುಕೊಂಡು ಎಲ್ಲರಿಗೂ ಬೇಕಾದವರಾಗಿ ವಿಶ್ವಕುಟುಂಬಿಯಂತೆ ಬಾಳಿದರು.
 
ಒಮ್ಮೆ ಹೀಗೆಯೇ ಮಾತನಾಡುತ್ತ ‘ನನ್ನಲ್ಲಿರುವ ಸಂಸ್ಕೃತಪುಸ್ತಕಗಳು ನಿಮಗೇ’ ಎಂದರು. ನಿಜವಾಗಿ ನಾನೂ ಆ ಮಾತನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ; ಏನೋ ಪ್ರಾಸಂಗಿಕವಾಗಿ ಹೇಳಿದ್ದಾರೆ ಎಂದುಕೊಂಡು ಅದನ್ನು ಮರೆತುಹೋದೆ ಕೂಡ. ಅವರು ತೀರಿಕೊಂಡ ದಿನ; ಕೊನೆಯ ದರ್ಶನಕ್ಕೆಂದು ಅವರ ತಮ್ಮ ಮುಕುಂದರ ಮನೆಗೆ ಹೋದೆ. ಅಲ್ಲಿ ನನಗೆ ಗೊತ್ತಾಗಿದ್ದು, ಅವರ  ಸಂಸ್ಕೃತಪುಸ್ತಕಗಳನ್ನು ನನಗೇ ಕೊಡುವಂತೆ ನಾರಾಯಣ ದತ್ತ ಮನೆಯವರಿಗೆಲ್ಲ ಹಲವು ಸಲ ಹೇಳಿ ಅದಕ್ಕೆ ವ್ಯವಸ್ಥೆಮಾಡಿದ್ದಾರೆಂದು! ನಾನು ಆ ಪುಸ್ತಕಗಳನ್ನು ಒಯ್ಯುವ ತನಕ ಅವರ ಕುಟುಂಬಸದಸ್ಯರಿಗೂ ನೆಮ್ಮದಿಯಾಗಲಿಲ್ಲವೆನ್ನಿ!
 
ತಾವು ನಿಧನರಾದ ಮೇಲೆ ಅಂತಿಮ ವಿಧಿ–ವಿಧಾನಗಳನ್ನು ಹೇಗೆ ಮಾಡಬೇಕೆಂದು ಬಹಳ ವರ್ಷಗಳ ಹಿಂದೆಯೇ ಬರೆದಿಟ್ಟಿದ್ದರು ನಾರಾಯಣ ದತ್ತ. ಯಾವುದೇ ಧಾರ್ಮಿಕ ಆಚರಣೆಗಳನ್ನು ಮಾಡಬಾರದೆಂದೂ ದುಬಾರಿ ವಸ್ತುಗಳನ್ನು ಬಳಸಬಾರದೆಂದೂ ತಿಳಿಸಿದ್ದರು. ಬಿದಿರಿನ ಚಟ್ಟದ ಮೇಲೆ ಶವವನ್ನಿಟ್ಟು ಅದನ್ನು ಹಗ್ಗದಿಂದ ಬಿಗಿಯಬಾರದೆಂದು ಸೂಚಿಸಿದ್ದರು. ಅದಕ್ಕೆ ಅವರು ಕೊಟ್ಟಿರುವ ಕಾರಣ – ಅದೊಂದು ಅನಾಗರಿಕವೂ ಸೌಂದರ್ಯವಿಹೀನವೂ ಆದ ಕ್ರಮ. ಶವಕ್ಕೆ ಹೂಗಳನ್ನಿಡುವುದನ್ನೂ ಅವರು ನಿರಾಕರಿಸಿದ್ದರು.
 
ಹೂವು ಜೀವಂತಿಕೆಗೆ ನಿದರ್ಶನ; ಜೀವ ಕಳೆದುಕೊಂಡಿರುವ ದೇಹದ ಮೇಲೆ ಅದನ್ನು ಇರಿಸುವುದು ಅನೌಚಿತ್ಯ; ಮಾತ್ರವಲ್ಲ, ಪಾಪ! ಅದಕ್ಕೆ ದುಃಖವೂ ಒದಗುವುದು ಎಂದಿದ್ದಾರೆ ಅವರು. ಬದುಕನ್ನು ಸರಳವಾಗಿ, ಆದರೆ ಸುಂದರವಾಗಿಯೂ ಅರ್ಥಪೂರ್ಣವಾಗಿಯೂ ಆದರ್ಶವಾಗಿಯೂ ಬಾಳಿದವರು ನಾರಾಯಣ ದತ್ತ. ಇಂದು ಬೆಳಿಗ್ಗೆ 11 ಗಂಟೆಗೆ  ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್ ಕಲ್ಚರ್‌ನಲ್ಲಿ ಉಪನ್ಯಾಸವನ್ನು ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT