ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಕತ್ತು ಸಾಬೀತು

Last Updated 25 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ನಾಗಪುರ ನಗರಪಾಲಿಕೆಗೆ 1992ರ ಫೆಬ್ರುವರಿ 22ರಂದು ನಡೆದ ಚುನಾವಣೆಯಲ್ಲಿ ದೇವೇಂದ್ರ ಫಡಣವೀಸ್ ಎಂಬ ಯುವಕ ಕಾರ್ಪೊರೇಟರ್ ಆಗಿ ಆಯ್ಕೆಯಾದರು. ಇದಾದ 25 ವರ್ಷಗಳ ನಂತರ, ಅಂದರೆ 2017ರ ಫೆಬ್ರುವರಿ 23ರಂದು ಮುಖ್ಯಮಂತ್ರಿ ಫಡಣವೀಸ್ ಅವರು ಮಹಾರಾಷ್ಟ್ರದ ನಗರಪಾಲಿಕೆಗಳು, ಜಿಲ್ಲಾ ಪರಿಷತ್ತುಗಳು ಮತ್ತು ಪಂಚಾಯತ್ ಸಮಿತಿ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಜಯ ಸಾಧಿಸುವಂತೆ ಮಾಡಿ, ಪಕ್ಷವನ್ನು ನಂಬರ್ 1 ಸ್ಥಾನಕ್ಕೆ ತಂದರು. ಇಷ್ಟು ಮಾತ್ರವೇ ಅಲ್ಲ, ಏಷ್ಯಾದ ಅತಿದೊಡ್ಡ ಸ್ಥಳೀಯಾಡಳಿತ ಸಂಸ್ಥೆ ಎಂಬ ಹೆಸರು ಹೊತ್ತಿರುವ ಬೃಹತ್ ಮುಂಬೈ ಮಹಾನಗರ ಪಾಲಿಕೆಯಲ್ಲಿ (ಬಿಎಂಸಿ) ಶಿವಸೇನಾದ ಪ್ರಾಬಲ್ಯಕ್ಕೆ ಸವಾಲು ಒಡ್ಡಿದ್ದಾರೆ. 46ನೇ ವಯಸ್ಸಿನಲ್ಲಿ ಫಡಣವೀಸ್ ಅವರು ಕಾಲು ಶತಮಾನದ ರಾಜಕೀಯ ಜೀವನ ಅನುಭವಿಸಿದ್ದಾರೆ.

ಫಡಣವೀಸ್ ಅವರು ರಾಜಕೀಯದಲ್ಲಿ ಕ್ರಮಿಸಬೇಕಾದ ಹಾದಿ ಸಾಕಷ್ಟಿದೆ. ಆದರೆ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ ಅವರು, ಮರಾಠರ ಪ್ರಾಬಲ್ಯವಿರುವ ಮಹಾರಾಷ್ಟ್ರದ ರಾಜಕಾರಣದಲ್ಲಿ ತಮ್ಮ ತಾಕತ್ತು ಸಾಬೀತು ಮಾಡಿದ್ದಾರೆ.

ವಕೀಲಿಕೆ ಓದಿಕೊಂಡಿರುವ ಫಡಣವೀಸ್, ವ್ಯವಹಾರ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದುವರೆಗೆ ರಾಜ್ಯದ ಆಡಳಿತವನ್ನು ಚೆನ್ನಾಗಿ ನಡೆಸಿಕೊಂಡು ಬಂದಿದ್ದಾರೆ. ಶಿವಸೇನಾ ಪಕ್ಷವನ್ನೂ ಚೆನ್ನಾಗಿಯೇ ಇಟ್ಟುಕೊಂಡಿದ್ದಾರೆ. 2014ರ ಅಕ್ಟೋಬರ್ 31ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಅವರು ಮೊದಲು ಶಿವಸೇನಾ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಅಡೆತಡೆಗಳು ಆಗಾಗ ಎದುರಾಗುತ್ತಿದ್ದರೂ, ಕೇಸರಿ ಮೈತ್ರಿಕೂಟದ ದೋಣಿಯನ್ನು ಮುನ್ನಡೆಸುತ್ತಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ಫಡಣವೀಸ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ನಂಬಿಕೆಗೆ ಪಾತ್ರರಾಗಿದ್ದಾರೆ.

ತಳಮಟ್ಟದ ಮಾತುಗಳನ್ನು ಕೇಳಿಸಿಕೊಳ್ಳುವ, ಮಧ್ಯಮವರ್ಗದ ಪ್ರತಿನಿಧಿಯಂತಿರುವ ನಾಯಕ ಫಡಣವೀಸ್. ಬುದ್ಧಿಜೀವಿಯಾಗಿದ್ದೂ  ಜನಪ್ರಿಯತೆಯನ್ನು ಪಡೆದುಕೊಂಡಿರುವ ಅಪರೂಪದ ರಾಜಕಾರಣಿ ಇವರು. ಮೃದುಭಾಷಿ, ಉತ್ತಮ ಶಿಕ್ಷಣ ಪಡೆದಿರುವ ಫಡಣವೀಸ್ ಅವರಿಗೆ ಪ್ರಾಮಾಣಿಕ ಎಂಬ ಹಿರಿಮೆ ಕೂಡ ಇದೆ.

1999ರಿಂದಲೂ ಮಹಾರಾಷ್ಟ್ರ ವಿಧಾನಸಭೆಯ ಸದಸ್ಯರಾಗಿರುವ ಫಡಣವೀಸ್‌, ವಿರೋಧ ಪಕ್ಷದಲ್ಲಿದ್ದಾಗ ಸದನದಲ್ಲಿ ಹಲವು ಪ್ರಶ್ನೆಗಳನ್ನು ಎತ್ತಿ ಕಾಂಗ್ರೆಸ್–ಎನ್‌ಸಿಪಿ ಮೈತ್ರಿಕೂಟದ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು.

ಶಾಸಕರಾಗಿಯೂ ಇವರು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ವಿಲಾಸ್‌ರಾವ್‌ ದೇಶಮುಖ್, ಸುಶೀಲ್‌ ಕುಮಾರ್ ಶಿಂಧೆ, ಅಶೋಕ್ ಚವಾಣ್, ಪೃಥ್ವಿರಾಜ್ ಚವಾಣ್, ವಿರೋಧ ಪಕ್ಷದ ನಾಯಕರಾಗಿದ್ದ ನಾರಾಯಣ ರಾಣೆ, ರಾಮದಾಸ್ ಕದಂ ಮತ್ತು ಏಕನಾಥ ಖಡ್ಸೆ ಅವರು ಶಾಸಕ ಫಡಣವೀಸ್ ಕಾರ್ಯವೈಖರಿಯನ್ನು ಮೆಚ್ಚಿದ್ದರು.

ಫಡಣವೀಸ್ ಅವರು ಜನಿಸಿದ್ದು 1970ರ ಜುಲೈ 22ರಂದು. ಅವರ ತಂದೆ ಗಂಗಾಧರ ರಾವ್ ಫಡಣವೀಸ್ ಅವರು ನಾಗಪುರದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದರು. ತಾಯಿ ಸರಿತಾ ಅವರು ವಿದರ್ಭ ಗೃಹ ನಿರ್ಮಾಣ ಪತ್ತಿನ ಸಂಘದ ನಿರ್ದೇಶಕಿ ಆಗಿದ್ದರು.

ತಮ್ಮ ಪಕ್ಷದಲ್ಲಿ ಹಾಗೂ ತಮ್ಮ ಕ್ಷೇತ್ರದಲ್ಲಿ (ನಾಗಪುರ) ಫಡಣವೀಸ್ ಅವರು ಹಲವು ಬಾರಿ ನಾಯಕತ್ವದ ಗುಣ ತೋರಿದ್ದಾರೆ. ನಾಗಪುರ ನಗರ ಪಾಲಿಕೆಯ ಚುನಾಯಿತ ಸದಸ್ಯರಾಗಿ ಎರಡು ಬಾರಿ (1992 ಹಾಗೂ 1999ರಲ್ಲಿ) ಕರ್ತವ್ಯ ನಿಭಾಯಿಸಿದ್ದಾರೆ.

ನಾಗಪುರದ ಮೇಯರ್ ಆಗಿಯೂ ಕೆಲಸ ಮಾಡಿರುವ ಫಡಣವೀಸ್, ದೇಶದ ಎರಡನೆಯ ಅತಿ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ಅಂದಾಜು ಸಮಿತಿ, ನಗರಾಭಿವೃದ್ಧಿ ಮತ್ತು ವಸತಿಗೆ ಸಂಬಂಧಿಸಿದ ಸ್ಥಾಯಿ ಸಮಿತಿ, ನಿಯಮಗಳ ಸಮಿತಿ, ಸಾರ್ವಜನಿಕ ಉದ್ದಿಮೆಗಳ ಸಮಿತಿ ಸದಸ್ಯರಾಗಿ, ಮಹಾರಾಷ್ಟ್ರ ಜೀವನ್ ಪ್ರಾಧಿಕರಣ್‌ನ (ನೀರು ಸರಬರಾಜು) ಸದಸ್ಯರಾಗಿ ಕೂಡ ಕೆಲಸ ಮಾಡಿದ್ದಾರೆ. ಇವರು ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಆಗುವ ಮೊದಲು ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ್ದರು.

ಅನುಭವಿ ರಾಜಕಾರಣಿ ಆಗಿರುವ ಫಡಣವೀಸ್ ಅವರ ರಾಜಕೀಯ ಪರಿಣತಿ, ಕೌಶಲಗಳು ಹಲವು ಸಂದರ್ಭಗಳಲ್ಲಿ ವ್ಯಕ್ತವಾಗಿವೆ. ಅವರ ಕ್ಷಮತೆಯನ್ನು ಅಂತರರಾಷ್ಟ್ರೀಯ ಮಟ್ಟದ ವೇದಿಕೆಗಳೂ ಗುರುತಿಸಿವೆ. ಕಾಮನ್‌ವೆಲ್ತ್‌ ಸಂಸದೀಯ ಒಕ್ಕೂಟವು ಫಡಣವೀಸ್ ಅವರಿಗೆ ‘ಅತ್ಯುತ್ತಮ ಸಂಸದೀಯ ಪಟು’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.

ಫಡಣವೀಸ್ ಅವರ ಪತ್ನಿ ಅಮೃತಾ ಅವರು ಆ್ಯಕ್ಸಿಸ್ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ದಂಪತಿಯ ಪುತ್ರಿ ಹೆಸರು ದಿವಿಜಾ. ಫಡಣವೀಸ್ ಅವರು ಖಾದ್ಯಪ್ರಿಯ. ಆದರೆ ಈಗ ಆರೋಗ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದಾರೆ. ಸಂಗೀತ, ಸಿನಿಮಾ, ಕ್ರೀಡೆ, ಪ್ರಚಲಿತ ವಿದ್ಯಮಾನಗಳು, ಅಂತರ ರಾಷ್ಟ್ರೀಯ ವಿದ್ಯಮಾನಗಳು ಇವರ ಆಸಕ್ತಿಯ ಕ್ಷೇತ್ರಗಳು.

ತಳಮಟ್ಟದ ಕಾರ್ಯಕರ್ತರನ್ನು, ಕಂಪೆನಿಗಳಲ್ಲಿ ದೊಡ್ಡ ಹುದ್ದೆಗಳನ್ನು ಹೊಂದಿರುವವರನ್ನು, ರೈತರನ್ನು, ಕೋಪಾವಿಷ್ಟಗೊಂಡಿರುವ ಸಮೂಹವನ್ನು ಉದ್ದೇಶಿಸಿ ಸುಲಲಿತವಾಗಿ ಮಾತನಾಡಬಲ್ಲರು.

ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹಲವು ಸಮಸ್ಯೆಗಳನ್ನು ಅವರು ಎದುರಿಸಿದರು. ರೈತರ ಆತ್ಮಹತ್ಯೆಗಳು, ಮರಾಠವಾಡ ಪ್ರದೇಶದಲ್ಲಿ ಬರಗಾಲ, ತಮ್ಮ ಸಂಪುಟದ ಒಂದು ಡಜನ್ ಸಚಿವರ ಮೇಲೆ ಬಂದ ಭ್ರಷ್ಟಾಚಾರದ ಆರೋಪಗಳು ಇವುಗಳಲ್ಲಿ ಕೆಲವು. ಆದರೆ ಎಲ್ಲ ಸಮಸ್ಯೆಗಳನ್ನೂ ಅವರು ದಿಟ್ಟವಾಗಿ ನಿಭಾಯಿಸಿದರು. ಕೆಲವು ಹಿರಿಯ ನಾಯಕರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವಲ್ಲಿಯೂ ಯಶಸ್ಸು ಕಂಡರು.

ಇವೆಲ್ಲವುಗಳ ಜೊತೆಯಲ್ಲೇ, ವಿರೋಧ ಪಕ್ಷಗಳ ನಾಯಕರೊಂದಿಗೆ, ಅದರಲ್ಲೂ ಮುಖ್ಯವಾಗಿ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಜೊತೆ ಕೂಡ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT