7

ರಾಜಕೀಯವಾಗಿ ಅಪ್ರಸ್ತುತ ಆಗುವತ್ತ ಕಾಂಗ್ರೆಸ್ ಹೆಜ್ಜೆ!

Published:
Updated:

ರಾಜಕೀಯ ಪಕ್ಷಗಳ ಸಾವು ಹೇಗೆ ಬರುತ್ತದೆ? ಕಾಂಗ್ರೆಸ್ಸಿನ ನಿಧಾನಗತಿಯ, ದೀರ್ಘಾವಧಿಯ ಸಾವನ್ನು ಗಮನಿಸುವ ಸಂದರ್ಭದಲ್ಲಿ ಈ ವಿಚಾರ ಕುತೂಹಲ ಮೂಡಿಸುತ್ತದೆ. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷ ಜನ್ಮತಾಳಿದ್ದು 132 ವರ್ಷಗಳ ಹಿಂದೆ.

 

ಪಕ್ಷ ಮೂರು ವರ್ಷಗಳಿಂದ ಅಧಿಕಾರ ಕೇಂದ್ರದಿಂದ ಹೊರಗಿದೆ. ಆದರೆ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಸತ್ತಿಲ್ಲದಿದ್ದರೂ, ಸ್ಮೃತಿ ಕಳೆದುಕೊಂಡಿದೆ. ಪಕ್ಷದ ಬ್ರ್ಯಾಂಡ್ ಹಾಳಾಗಿದೆ, ಧನಾತ್ಮಕವಾದ ಬಹುತೇಕ ಸಂಗತಿಗಳನ್ನು ಕಳೆದುಕೊಂಡಿದೆ. ತನ್ನ ಸಣ್ಣ ಮತದಾರರ ಸಮೂಹಕ್ಕೆ ಯಾವುದೇ ರಾಜಕೀಯ ಸಂದೇಶವನ್ನು ಪಕ್ಷ ನೀಡುತ್ತಿಲ್ಲ. ರಾಷ್ಟ್ರಮಟ್ಟದ ರಾಜಕೀಯ ಶಕ್ತಿ ಎಂಬ ಅಸ್ತಿತ್ವವನ್ನು ಕಳೆದುಕೊಂಡರೆ (ಅಂದರೆ, ಹಸ್ತದ ಚಿಹ್ನೆಯನ್ನು ಉಳಿಸಿಕೊಳ್ಳಲು ಬೇಕಿರುವಷ್ಟು ಮತ ಪಡೆಯದಿದ್ದರೆ), ಅಂಥ ಸ್ಥಿತಿ ತಲುಪುವ ಮೊದಲ ಪಕ್ಷ ಎಂಬ ಪಟ್ಟವೇನೂ ಕಾಂಗ್ರೆಸ್ಸಿನದ್ದಾಗಿರುವುದಿಲ್ಲ.

 

ಪಕ್ಷವಾಗಿ ಉಳಿದಿರಲು ಕಾರಣಗಳೇ ಇಲ್ಲವಾದ ನಂತರ ಅಖಿಲ ಭಾರತ ಮುಸ್ಲಿಂ ಲೀಗ್ ರಾಜಕೀಯವಾಗಿ ಸತ್ತುಹೋಯಿತು. ಮುಸ್ಲಿಮರಿಗೆ ರಾಜಕೀಯ ಹಕ್ಕುಗಳನ್ನು ಕೊಡಿಸುವ, ವಸಾಹತುಶಾಹಿ ಶಕ್ತಿಯ ಜೊತೆ ರಾಜಕೀಯ ಭಾಗವಹಿಸುವಿಕೆ ಹೊಂದುವ ಉದ್ದೇಶದಿಂದ ಮುಸ್ಲಿಂ ಲೀಗ್‌ 20ನೇ ಶತಮಾನದ ಆರಂಭದಲ್ಲಿ ಜನ್ಮತಾಳಿತು.

 

ಕಾಂಗ್ರೆಸ್ ಜೊತೆ ಅಧಿಕಾರ ಹಂಚಿಕೊಳ್ಳಲು ಪ್ರಯತ್ನ ನಡೆಸಿ, ವೈಫಲ್ಯ ಕಂಡಿತು (ಅಂದಿನ ದಿನಗಳಲ್ಲಿ, ಮುಸ್ಲಿಮರಲ್ಲಿ ಹಲವರು ಕಾಂಗ್ರೆಸ್ಸನ್ನು ಹಿಂದೂಗಳ ಪಕ್ಷವೆಂದು ಭಾವಿಸುತ್ತಿದ್ದರು. ಈಗಿನ ಬಿಜೆಪಿಯನ್ನು ಕಂಡಂತೆ). ಒಪ್ಪಂದಕ್ಕೆ ಬರಲಾಗದ ಪರಿಣಾಮವಾಗಿ ದೇಶ ವಿಭಜನೆ ಆಯಿತು. ಭಾರತದಲ್ಲಿ ಮುಸ್ಲಿಂ ಲೀಗ್‌ ಬಹುತೇಕ ಅಳಿಸಿಹೋಯಿತು. ಪಕ್ಷದ ಹೆಸರು ದೇಶದ ವಿಭಜನೆಯ ಜೊತೆ ಬೆಸೆದುಕೊಂಡಿದ್ದ ಕಾರಣ ಹೀಗಾಯಿತು.

 

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಹೆಸರಿನಲ್ಲಿ ಪಕ್ಷವನ್ನು ಹಲವು ವರ್ಷಗಳ ಕಾಲ ಒಬ್ಬ ಸಂಸದ ಮಾತ್ರ ಪ್ರತಿನಿಧಿಸುತ್ತಿದ್ದರು. ಜಿ.ಎಂ. ಬನತ್ವಾಲಾ ಎಂಬುದು ಅವರ ಹೆಸರು. ಅವರು ಕೇರಳದಿಂದ ಮತ್ತೆ ಮತ್ತೆ ಚುನಾಯಿತರಾಗುತ್ತಿದ್ದರೂ, ಅವರು ಗುಜರಾತಿ. ವಿಭಜನೆಯ ನಂತರ ಮುಸ್ಲಿಂ ಲೀಗ್‌ ಪಾಕಿಸ್ತಾನದಲ್ಲಿ ಒಂದು ದಶಕ ಆಡಳಿತ ನಡೆಸಿತು. ಹಲವರು ಪ್ರಧಾನಿ ಹುದ್ದೆಗೆ ಬಂದರು.

 

ಆದರೆ, ಮುಸ್ಲಿಂ ಬಹುಸಂಖ್ಯಾತರ ದೇಶದಲ್ಲಿ ಪಕ್ಷದ ‘ದ್ವಿರಾಷ್ಟ್ರ ಸಿದ್ಧಾಂತ’ಕ್ಕೆ ಅಸ್ತಿತ್ವ ಇಲ್ಲವಾಯಿತು. ಪಾಕಿಸ್ತಾನ ರಚನೆಯಾದ ತುಸು ಅವಧಿಯಲ್ಲೇ ಪಕ್ಷದ ಇಬ್ಬರು ನಾಯಕರು ಮೃತಪಟ್ಟರು. ಕ್ಷಯ ರೋಗದಿಂದ ಬಳಲುತ್ತಿದ್ದ ಗವರ್ನರ್ ಜನರಲ್ ಜಿನ್ನಾ 1948ರ ಸೆಪ್ಟೆಂಬರ್ 11ರಂದು ಸಾವನ್ನಪ್ಪಿದರು. ಪ್ರಧಾನಿ ಲಿಯಾಖತ್ ಅವರನ್ನು 1951ರ ಅಕ್ಟೋಬರ್ 16ರಂದು ಸಾರ್ವಜನಿಕ ಸಮಾರಂಭವೊಂದರಲ್ಲಿ ಹತ್ಯೆ ಮಾಡಲಾಯಿತು.

 

ಕೆಲವು ವರ್ಷಗಳ ನಂತರ ಜನರಲ್ ಅಯೂಬ್ ಖಾನ್ ಅವರು ಅಧಿಕಾರ ಹಿಡಿದರು. ಜಿನ್ನಾ ಮುನ್ನಡೆಸಿದ್ದ ಪಕ್ಷ ಆಗ ಹೋಳಾಯಿತು. ಕನ್ವೆನ್‌ಷನ್ ಮುಸ್ಲಿಂ ಲೀಗ್ ಪಕ್ಷ ರಚನೆಯಾಯಿತು. ಇದು ಪಾಕಿಸ್ತಾನದಲ್ಲಿ ಆ ಪಕ್ಷದ ಹಲವು ಅವತಾರಗಳ ಪೈಕಿ ಮೊದಲನೆಯದು. ಪಕ್ಷ ಒಡೆಯುವುದು, ಮಿಲಿಟರಿ ಆಡಳಿತಗಾರರಿಗೆ ಬೆಂಬಲ ನೀಡುವ ರೀತಿಯಲ್ಲಿ ಮತ್ತೊಂದು ರೂಪ ಪಡೆಯುವುದು ದಶಕಗಳ ಕಾಲ ಮುಂದುವರಿಯಿತು. ಜನರಲ್ ಜಿಯಾ ಉಲ್ ಹಖ್ ಅವರು ನೇಮಿಸಿದ ಪ್ರಧಾನಿ ಜುನೇಜೊ ಅವರು ಮುಸ್ಲಿಂ ಲೀಗ್ (ಜೆ) ಸ್ಥಾಪಿಸಿದರು. ಜನರಲ್ ಮುಷರಫ್ ಅವರು ಮುಸ್ಲಿಂ ಲೀಗ್ (ಕ್ಯೂ) ಬೆಂಬಲ ಪಡೆದರು. ಪಾಕಿಸ್ತಾನದಲ್ಲಿ ಇಂದು ಅಧಿಕಾರದಲ್ಲಿರುವ ಮುಸ್ಲಿಂ ಲೀಗ್ (ನವಾಜ್) ಕೂಡ ಜಿಯಾ ಅವಧಿಯಲ್ಲೇ ಜನಿಸಿದ್ದು.

 

ಭಾರತದಲ್ಲಿ, ಕಾಂಗ್ರೆಸ್ ಪಕ್ಷ ರಾಷ್ಟ್ರಮಟ್ಟದಲ್ಲಿ ಬಹುತೇಕ ಒಂದಾಗಿಯೇ ಇತ್ತು. ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಸಾವು ಹಾಗೂ ಇಂದಿರಾ ಗಾಂಧಿ ಅವರು ಅಧಿಕಾರ ಹಿಡಿದ ನಂತರ ಪಕ್ಷ ದೊಡ್ಡ ಮಟ್ಟದಲ್ಲಿ ಒಡೆಯಿತು. ನೆಹರೂ ಜೊತೆ ಕೆಲಸ ಮಾಡಿದ್ದ ಪಕ್ಷದ ಹಿರಿಯರು ತಮ್ಮದೇ ಆದ ಕಾಂಗ್ರೆಸ್ ಸ್ಥಾಪಿಸಿದರು. ಆದರೆ, ಇಂದಿರಾ ಗಾಂಧಿ ಅವರು ತಮ್ಮ ವರ್ಚಸ್ಸು ಹಾಗೂ ಜನಪ್ರಿಯತೆಯಿಂದ ಪಕ್ಷವನ್ನು ಹಿಡಿತಕ್ಕೆ ತೆಗೆದುಕೊಂಡರು.

 

ಇಂದಿರಾ ಅವರನ್ನು ಸೋಲಿಸಿದ್ದ ಜನತಾ ಪಕ್ಷವು ಪ್ರಾದೇಶಿಕ ಪಕ್ಷಗಳ ತೇಪೆ ಮೈತ್ರಿಕೂಟದಂತೆ ಇತ್ತು. ಕಾಂಗ್ರೆಸ್ ವಿರೋಧ ಹಾಗೂ ಸಮಾಜವಾದ ಜನತಾ ಪಕ್ಷದ ಸಿದ್ಧಾಂತವಾಗಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜನಿಸಿದ ಜನತಾ ಪಕ್ಷ, ಆ ಕಾಲಘಟ್ಟದ ನಂತರ ಪ್ರಸ್ತುತವಾಗಿ ಉಳಿಯಲಿಲ್ಲ. ಕಾಂಗ್ರೆಸ್ ವಿರೋಧಿ ಧೋರಣೆಯನ್ನು ಉಳಿಸಿಕೊಳ್ಳಲು ಜನತಾ ಪಕ್ಷದ ಕೆಲವು ಅಂಗಪಕ್ಷಗಳು ಜನತಾ ದಳದ ಮೂಲಕ ಯತ್ನಿಸಿದವು. ಆದರೆ, ಒಗ್ಗೂಡಿಸುವ ಶಕ್ತಿ ಇರಲಿಲ್ಲವಾದ ಕಾರಣ, ಜನತಾ ದಳವು ಉತ್ತರ ಹಾಗೂ ದಕ್ಷಿಣದ ಭಾಗಗಳಾಗಿ ಒಡೆಯಿತು.

 

ರಾಮ ಜನ್ಮಭೂಮಿ ಚಳವಳಿಯ ಮೂಲಕ ಲಾಲ್‌ ಕೃಷ್ಣ ಅಡ್ವಾಣಿ ಅವರು ಭಾರತದ ರಾಜಕೀಯವನ್ನು ಬದಲಾಯಿಸಿದರು. ಜನತಾ ಪಕ್ಷದ ಹೋಳುಗಳ ಕಾಂಗ್ರೆಸ್ ವಿರೋಧಿ ಭಾವನೆ, ಹಿಂದುತ್ವ ವಿರೋಧಿಯಾಗಿ ಬದಲಾದವು. ಬಿಜೆಪಿ ಹಾಗೂ ಅದು ಪ್ರತಿಪಾದಿಸುತ್ತಿದ್ದ ವಿಚಾರಗಳ ಬಗ್ಗೆ ಇದ್ದ ಭೀತಿಯ ಕಾರಣದಿಂದ ಹೀಗಾಯಿತು. ಈ ವೇಳೆಗೆ ರಾಜೀವ್ ಗಾಂಧಿ ಅವರ ನೇತೃತ್ವದ ಕಾಂಗ್ರೆಸ್ ಹೆಚ್ಚಿನದೇನನ್ನೂ ಪ್ರತಿನಿಧಿಸುತ್ತಿರಲಿಲ್ಲ. ಪಕ್ಷಕ್ಕೆ ನೈಜ ಸಿದ್ಧಾಂತ ಎಂಬುದು ಇರಲಿಲ್ಲ. ಈ ಸ್ಥಿತಿ ಪಿ.ವಿ. ನರಸಿಂಹ ರಾವ್ ಹಾಗೂ ಮನಮೋಹನ್ ಸಿಂಗ್ ಅವಧಿಯಲ್ಲೂ ಮುಂದುವರಿಯಿತು.

 

ರಾಜ್ಯಗಳನ್ನು ಕಳೆದುಕೊಂಡ ಪರಿಣಾಮವಾಗಿ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲೂ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. 2004ರಿಂದ 2014ರವರೆಗಿನ ಕಾಂಗ್ರೆಸ್ಸಿನ ಅಧಿಕಾರದ ಅವಧಿಯು ಕೆಲವು ಸಂಗತಿಗಳನ್ನು ಮುಚ್ಚಿಡುತ್ತದೆ. ಉತ್ತರ ಭಾರತದ ಬಹುತೇಕ ಕಡೆ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನದಲ್ಲಿ ಶಾಶ್ವತವಾಗಿ ಕುಳಿತಿದೆ. ಗುಜರಾತಿನಲ್ಲಿ ಮೂರು ದಶಕಗಳಿಂದ ಪಕ್ಷ ಚುನಾವಣೆ ಗೆದ್ದಿಲ್ಲ. ಇನ್ನೂ ಅನೇಕ ದೊಡ್ಡ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ ಅಥವಾ ವಿರೋಧ ಪಕ್ಷದ ಸ್ಥಾನದಲ್ಲಿದೆ. ಆದರೆ ಕಾಂಗ್ರೆಸ್ ನಾಲ್ಕು ಅಥವಾ ಐದನೆಯ ಸ್ಥಾನದಲ್ಲಿದೆ. ಅಂದರೆ ರಾಜಕೀಯವಾಗಿ ಅಪ್ರಸ್ತುತವಾಗಿದೆ.

 

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ತಾನು ಅಂದುಕೊಂಡಿದ್ದಕ್ಕಿಂತ ವೇಗವಾಗಿ ಬಿಜೆಪಿಗೆ ನೆಲೆ ಬಿಟ್ಟುಕೊಡುತ್ತಿದೆ. ಹಿಂದುತ್ವ ಸಿದ್ಧಾಂತ ತಮಿಳುನಾಡು ಮತ್ತು ಕೇರಳದಲ್ಲಿ ನಿಧಾನವಾಗಿ ಮುನ್ನಡೆ ಕಾಣುತ್ತಿದೆ. ಪಕ್ಷಕ್ಕೆ ಸಾವು ಹತ್ತಿರವಾಗುತ್ತಿರುವುದನ್ನು ಪ್ರಾದೇಶಿಕ ನಾಯಕರು ಈ ಹಿಂದೆಯೇ ಕಂಡಿದ್ದರು. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯಂತಹ ನಾಯಕರು ಪಕ್ಷದ ಸಂಘಟನೆಯ ಮೇಲೆ ಹಿಡಿತ ಸ್ಥಾಪಿಸಿದರು. ಮಹಾರಾಷ್ಟ್ರದಲ್ಲಿ ಶರದ್ ಪವಾರ್‌ ಅವರಿಗೆ ಈ ಮಟ್ಟದ ಯಶಸ್ಸು ಸಿಗಲಿಲ್ಲ. ಆದರೆ, ತಮ್ಮ ಎನ್‌ಸಿಪಿಯನ್ನು ಕಾಂಗ್ರೆಸ್ ಜೊತೆ ವಿಲೀನಗೊಳಿಸಲು ಪವಾರ್‌ ಅವರಿಗೆ ಕಾರಣಗಳು ಇಲ್ಲ. ಏಕೆಂದರೆ ಕಾಂಗ್ರೆಸ್ ಬ್ರ್ಯಾಂಡ್‌ಗೆ ಕಳಂಕ ಅಂಟಿಕೊಂಡಿದೆ. ಮೊದಲೇ ಹೇಳಿದಂತೆ, ಈ ಪಕ್ಷ ಈಗ ಯಾವುದನ್ನೂ ಪ್ರತಿನಿಧಿಸುತ್ತಿಲ್ಲ.

 

ಮಹಾರಾಷ್ಟ್ರದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಂಡಿತು. ಈ ಚುನಾವಣೆ ಎದುರಿಸಲು ಅಭ್ಯರ್ಥಿಗಳಿಗೆ ಕಾಂಗ್ರೆಸ್ಸಿನಿಂದ ಆರ್ಥಿಕ ನೆರವು ಸಿಕ್ಕಿರಲಿಲ್ಲ ಎಂದು ವರದಿಗಳು ಹೇಳುತ್ತಿವೆ. ಇದು ತೀರಾ ಅಪಾಯಕಾರಿ. ಆದರೆ ಈ ಬಗ್ಗೆ ಅಲ್ಲಿ ಗಮನ ಹರಿಸುವವರು ಇದ್ದಂತಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಗೊಣಗಾಟ ಮುಂದುವರಿಯುತ್ತದೆ. ಏಕೆಂದರೆ, ಕುಟುಂಬದ ಮಾಲೀಕತ್ವದಲ್ಲಿರುವ ಪಕ್ಷದಲ್ಲಿ ಉತ್ತರದಾಯಿತ್ವ ಇಲ್ಲ.

 

ಕಾಂಗ್ರೆಸ್ ಪಕ್ಷವು ಬೇರೊಂದು ನಾಯಕತ್ವದ ಅಡಿ ಪುನಶ್ಚೇತನ ಕಾಣುವ ಸಾಧ್ಯತೆ ಇದೆ. ಆದರೆ ರಾಹುಲ್ ಗಾಂಧಿ ಅವರು ವೃದ್ಧರೇನೂ ಅಲ್ಲ. ಅವರು ಇನ್ನೂ ಕೆಲವು ದಶಕಗಳ ಕಾಲ ಕ್ರಿಯಾಶೀಲರಾಗಿ ಇರಲು ಅವಕಾಶವಿದೆ. ಆ ಪಕ್ಷಕ್ಕೆ ಇದೇ ತೊಂದರೆಯಾಗಿ ಕಾಡಲಿದೆ. ಪಕ್ಷ ರಾಷ್ಟ್ರ­ಮಟ್ಟದಲ್ಲಿ ಅಪ್ರಸ್ತುತ ಆಗುವತ್ತ ಸರಿಯಲಿದೆ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ) 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry