5

ಎಲ್ಲ ಕೆಲಸಕ್ಕೂ ನೆರವಾಗುವ ಲೆನ್ಸ್

ಯು.ಬಿ. ಪವನಜ
Published:
Updated:
ಎಲ್ಲ ಕೆಲಸಕ್ಕೂ ನೆರವಾಗುವ ಲೆನ್ಸ್

ಒಂದಾನೊಂದು ಕಾಲದಲ್ಲಿ ಫಿಲ್ಮ್ ಕ್ಯಾಮೆರಾಗಳಿದ್ದವು. ನಂತರದ ಕಾಲದಲ್ಲಿ ಡಿಜಿಟಲ್ ಕ್ಯಾಮೆರಾಗಳು ಬಂದವು.  ಫಿಲ್ಮ್ ಕ್ಯಾಮೆರಾಗಳಂತೆ ಡಿಜಿಟಲ್ ಕ್ಯಾಮೆರಾಗಳಲ್ಲೂ ಪ್ರಮುಖವಾಗಿ ಎರಡು ನಮೂನೆಗಳಿವೆ.

ಯಾವ ಆಯ್ಕೆಗಳೂ ಇಲ್ಲದ ಸರಳವಾದ ಏಮ್-ಆಂಡ್-ಶೂಟ್ ಕ್ಯಾಮೆರಾಗಳು ಮತ್ತು ಪರಿಣತರು ಬಳಸುವ, ಹಲವು ಆಯ್ಕೆಗಳಿರುವ, ಲೆನ್ಸ್‌ಗಳನ್ನು ಬದಲಿಸಬಹುದಾದ ಎಸ್‌ಎಲ್‌ಆರ್ ಕ್ಯಾಮೆರಾಗಳು. ಈ ಎರಡನೇ ನಮೂನೆಯ ಡಿಜಿಟಲ್ ಕ್ಯಾಮೆರಾಗಳನ್ನು ಡಿಎಸ್‌ಎಲ್‌ಆರ್ ಕ್ಯಾಮೆರಾ, ಅಂದರೆ Digital Single Lens Reflect (DSLR) ಎನ್ನುತ್ತಾರೆ.

ಈ ನಮೂನೆಯ ಕ್ಯಾಮೆರಾಗಳಲ್ಲಿ ಯಾವುದರ ಫೋಟೊ ತೆಗೆಯುತ್ತೇವೋ ಅದನ್ನು ಕ್ಯಾಮೆರಾದ ಮೂಲಕ ನೋಡಲು ಪ್ರತ್ಯೇಕ ವ್ಯೂಫೈಂಡರ್ ಇರುವುದಿಲ್ಲ. ಮುಖ್ಯ ಲೆನ್ಸ್ ಮೂಲಕವೇ ದೃಶ್ಯವನ್ನು ನೋಡಬೇಕು. ಅದಕ್ಕಾಗಿ 45 ಡಿಗ್ರಿ ಕೋನದಲ್ಲಿ ಇರುವ ಒಂದು ಕನ್ನಡಿಯ ಬಳಕೆ ಆಗುತ್ತದೆ. ಮುಖ್ಯ ಲೆನ್ಸ್‌ನಿಂದ ಬಂದ ಬೆಳಕು ಈ ಕನ್ನಡಿಯ ಮೂಲಕ ಪ್ರತಿಬಿಂಬಿತವಾಗಿ ಒಂದು ಪಟ್ಟಕದ ಮೂಲಕ ಹಾದು ಕಣ್ಣನ್ನು ಪ್ರವೇಶಿಸುತ್ತದೆ. ಆದ್ದರಿಂದಲೇ ಈ ನಮೂನೆಯ ಕ್ಯಾಮೆರಾಗಳಿಗೆ ಸಿಂಗಲ್ ಲೆನ್ಸ್ ರಿಫ್ಲೆಕ್ಟ್ ಎಂಬ ಹೆಸರು.

ಡಿಎಸ್‌ಎಲ್‌ಆರ್ ಕ್ಯಾಮೆರಾಗಳ ಒಂದು ಪ್ರಮುಖ ಸಾಧಕವೆಂದರೆ, ಲೆನ್ಸ್‌ಗಳನ್ನು ಬದಲಿಸಬಹುದು. ಈ ಲೆನ್ಸ್‌ಗಳಲ್ಲೂ ಹಲವು ನಮೂನೆಗಳಿವೆ. ಸ್ಥಿರ ಫೋಕಲ್ ಲೆಂತ್‌ನ ಲೆನ್ಸ್‌ಗಳು ಮತ್ತು ಲೆನ್ಸ್‌ನ ಫೋಕಲ್ ಲೆಂತ್ ಅನ್ನು ಬದಲಿಸಬಹುದಾದ ಲೆನ್ಸ್‌ಗಳು. ಈ ಎರಡನೆಯ ನಮೂನೆಯ ಲೆನ್ಸ್‌ಗಳಿಗೆ ಝೂಮ್ ಲೆನ್ಸ್ ಎನ್ನುತ್ತಾರೆ. ಉದಾಹರಣೆಗೆ 70-300 ಮಿ.ಮೀ. ಝೂಮ್. ಇದರ ಅರ್ಥ ಲೆನ್ಸ್‌ನ ಫೋಕಲ್ ಲೆಂತ್ 70 ಮಿ.ಮೀ.ಯಿಂದ 300 ಮಿ.ಮೀ. ತನಕ ಬದಲಿಸಬಹುದು ಎಂದು. ಈ ನಮೂನೆಯ ಲೆನ್ಸ್‌ಗಳನ್ನು ಹಲವು ಕೆಲಸಗಳಿಗೆ ಬಳಕೆ ಮಾಡಬಹುದು. ಅಂತಹ ಒಂದು ಲೆನ್ಸ್ ಸಿಗ್ಮ 18-300 ಮಿ.ಮೀ. ಝೂಮ್ ಲೆನ್ಸ್ (Sigma 18-300mm F/3.5-6.3 DC HSM Lens) ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು
ಸಿಗ್ಮ ಕಂಪೆನಿಯದು, ಪೂರ್ತಿ ಫ್ರೇಂ ಡಿಎಸ್‌ಎಲ್‌ಆರ್ ಕ್ಯಾಮೆರಾಕ್ಕೆ ಜೋಡಿಸಿದರೆ, 18 ರಿಂದ 300 ಮಿ.ಮೀ. ­ಫೋಕಲ್ ಲೆಂತ್. 35 ಮಿ.ಮೀ. ಕ್ಯಾಮೆರಾಕ್ಕೆ ಹೋಲಿಸುವುದಾದರೆ 28.8 ರಿಂದ 480 ಮಿ.ಮೀ. F/3.5-6.3. 17 ಪ್ರತ್ಯೇಕ ಅಂಗಗಳಿವೆ, ಅತಿ ಕಡಿಮೆ ಅಪೆರ್ಚರ್ ಎಫ್/22. ಫಿಲ್ಟರ್ ವ್ಯಾಸ 72 ಮಿ.ಮೀ. 79 x 101.5 ಮಿ.ಮೀ ಗಾತ್ರ. 585 ಗ್ರಾಂ ತೂಕ. ನಿಕಾನ್, ಕ್ಯಾನನ್, ಹಾಗೂ ಇತರೆ ಖ್ಯಾತ ಕ್ಯಾಮೆರಾಗಳಿಗೆ ಸರಿಹೊಂದುವ ಜೋಡಣೆ (mount) ಸಮೇತ ದೊರೆಯುತ್ತದೆ. ಬೆಲೆ ಸುಮಾರು 55 ರಿಂದ 65 ಸಾವಿರ ರೂಪಾಯಿ.

ಈ ಲೆನ್ಸ್ ಉತ್ತಮ ವಿನ್ಯಾಸ ಮತ್ತು ರಚನೆಯನ್ನು ಒಳಗೊಂಡಿದೆ. ಕಪ್ಪನೆಯ ದೇಹವಿದ್ದು, ಉದ್ದನೆಯ ಸೀಳುಗಳ ದೇಹವಿದೆ. ಇದು ಲೆನ್ಸ್ ಅನ್ನು ಝೂಮ್ ಮಾಡುವಾಗ ಕೈಗೆ ಉತ್ತಮ ಹಿಡಿತ ಸಿಗಲು ಸಹಾಯ ಮಾಡುತ್ತದೆ. ಝೂಮ್ ಮಾಡುವಾಗ ಸ್ವಲ್ಪ ಜಾಸ್ತಿ ಶಕ್ತಿ ಹಾಕಬೇಕು. ಯಾಕೆಂದರೆ ಇದು ಸ್ವಲ್ಪ ಹೆಚ್ಚಿಗೆಯೇ ಅನ್ನುವಷ್ಟು ಬಿಗಿಯಾಗಿದೆ. ಇದು ಒಂದು ರೀತಿ ಒಳ್ಳೆಯದೇ. ಯಾಕೆಂದರೆ ಝೂಮ್ ಮಾಡಿದ ನಂತರ ಇತರೆ ಆಯ್ಕೆಗಳನ್ನು ಬದಲಿಸುವಾಗ ಝೂಮ್ ಮಾಡಿದ ಫೋಕಲ್ ಲೆಂತ್ ಬದಲಾವಣೆಯಾಗುವುದಿಲ್ಲ.

ಝೂಮ್ ಮಾಡಿದಂತೆಲ್ಲ, ಯಾವ ಫೋಕಲ್ ಲೆಂತ್ ಎಂಬುದನ್ನು ಸೂಚಿಸಲು ಹಲವು ಗೆರೆಗಳು ಮತ್ತು ಫೋಕಲ್ ಲೆಂತ್‌ನ ಮೌಲ್ಯವನ್ನು ದೇಹದ ಮೇಲೆ ಬರೆದಿದ್ದಾರೆ. ಆಟೋಫೋಕಸ್ ಮತ್ತು ಮ್ಯಾನ್ಯುವಲ್ ಎಂಬ ಎರಡು ವಿಧಾನಗಳಿವೆ. ಹಾಗೆಯೇ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದೆ. ಇವನ್ನು ಆಯ್ಕೆ ಮಾಡಿಕೊಳ್ಳಲು ಬಟನ್‌ಗಳಿವೆ. ಮುಂಭಾಗದಲ್ಲಿ ಮ್ಯಾನ್ಯುವಲ್ ಫೋಕಸ್ ರಿಂಗ್ ಇದೆ. ಲೆನ್ಸ್‌ಗೆ ಹುಡ್ ಕೂಡ ಇದೆ. ಇದನ್ನು ತಿರುಗಿಸಿ ಹಾಕಲೂಬಹುದು. 18 ಮಿ.ಮೀ. ಫೋಕಲ್ ಲೆಂತ್‌ಗೆ ಲೆನ್ಸ್ ಅನ್ನು ಝೂಮ್ ಮಾಡಿದಾಗ ಲೆನ್ಸ್‌ ಅನ್ನು ಆ ಜಾಗದಲ್ಲೇ ಸ್ಥಿರಗೊಳಿಸಲು ಒಂದು ಲಾಕ್ ಬಟನ್ ಕೂಡ ಇದೆ. ಇದು ಕ್ಯಾಮೆರಾವನ್ನು ಕುತ್ತಿಗೆಗೆ ಹಾಕಿಕೊಂಡು ನಡೆದಾಡುವಾಗ ಲೆನ್ಸ್ ಹೊರಗೆ ಬಾರದಂತೆ ತಡೆಯುತ್ತದೆ. 

ನನ್ನಲ್ಲಿ ಇರುವುದು ಪ್ರವೇಶ ಮಟ್ಟದ ಕ್ಯಾನನ್ 1000ಡಿ ಡಿಎಸ್‌ಎಲ್‌ಆರ್ ಕ್ಯಾಮೆರಾ. ಇದು ಪೂರ್ತಿ ಫ್ರೇಂ ಡಿಎಸ್‌ಎಲ್‌ಆರ್ ಕ್ಯಾಮೆರಾ ಅಲ್ಲ. ಈ ಲೆನ್ಸ್‌ನ ಪೂರ್ತಿ ಪ್ರಯೋಜನ ಪಡೆಯಬೇಕಾದರೆ ಇದನ್ನು ಪೂರ್ತಿ ಫ್ರೇಂ ಡಿಎಸ್‌ಎಲ್‌ಆರ್ ಕ್ಯಾಮೆರಾಕ್ಕೆ ಜೋಡಿಸಬೇಕು. ನನಗೆ ವಿಮರ್ಶೆಗೆ ಬಂದುದು ಕ್ಯಾನನ್ ಡಿಎಸ್‌ಎಲ್‌ಆರ್ ಕ್ಯಾಮೆರಾದ ಜೋಡಣೆಯೊಂದಿಗೆ ಇರುವಂಥದ್ದು.

ಡಿಎಸ್‌ಎಲ್‌ಆರ್ ಲೆನ್ಸ್‌ಗಳಲ್ಲಿ ಹಲವು ನಮೂನೆಗಳಿವೆ– ಕಡಿಮೆ (ಸ್ಥಿರ) ಫೋಕಲ್ ಲೆಂತ್‌ನ (18-24 ಮಿ.ಮೀ.) ವೈಡ್ ಆ್ಯಂಗಲ್, ಮಧ್ಯಮ (ಸ್ಥಿರ) ಫೋಕಲ್ ಲೆಂತ್‌ನ (50–70 ಮಿ.ಮೀ.) ಪ್ರೈಮ್ ಲೆನ್ಸ್, ಫೋಕಲ್ ಲೆಂತ್ ಬದಲಿಸಬಹುದಾದ ಝೂಮ್ ಲೆನ್ಸ್‌ಗಳು ಹಾಗೂ ಹಕ್ಕಿಗಳ ಅಥವಾ ದೂರದ ವಸ್ತುಗಳ ಫೋಟೊ ತೆಗೆಯಲು ಬಳಸುವ ಹೆಚ್ಚಿನ ಫೋಕಲ್ ಲೆಂತ್ (>250 ಮಿ.ಮೀ.) ಇರುವ ಟೆಲಿಲೆನ್ಸ್‌ಗಳು. ಈ ಸಿಗ್ಮ ಲೆನ್ಸ್ 18 ಮಿ.ಮೀ.ಯಿಂದ ಹಿಡಿದು 300 ಮಿ.ಮೀ. ತನಕ ಫೋಕಲ್ ಲೆಂತ್ ಇದೆ. ಅಂದರೆ ಇದು ಒಂದು ರೀತಿಯಲ್ಲಿ ಎಲ್ಲ ನಮೂನೆಯ ಕೆಲಸಗಳಿಗೆ ಬಳಕೆಯಾಗುವಂಥದ್ದು.
ಲೆನ್ಸ್‌ನ ಗುಣಮಟ್ಟ ಉತ್ತಮವಾಗಿದೆ.

ಎಲ್ಲ ಶ್ರೇಣಿಗೂ (range) ಬಳಕೆಯಾಗುವ ಲೆನ್ಸ್ ಆಗಿರುವುದರಿಂದ  ಒಂದು ರೀತಿಯಲ್ಲಿ ರಾಜಿ (compromise) ಲೆನ್ಸ್ ಅನ್ನಬಹುದು. ನಿಮಗೆ ನಿಜಕ್ಕೂ ಅತ್ಯುತ್ತಮ ಗುಣಮಟ್ಟದ ಲೆನ್ಸ್ ಬೇಕಿದ್ದರೆ ಬೇರೆ ಬೇರೆ ಲೆನ್ಸ್ ಕೊಳ್ಳುವುದೇ ಉತ್ತಮ. ಆಗ ನಿಮ್ಮ ಕ್ಯಾಮೆರಾ ಬ್ಯಾಗ್ ತುಂಬ ದೊಡ್ಡದಾಗುತ್ತದೆ ಮಾತ್ರವಲ್ಲ ನಿಮ್ಮ ಹಣದ ಚೀಲವೂ ದೊಡ್ಡದಿರಬೇಕಾಗುತ್ತದೆ! ಎಲ್ಲ ನಮೂನೆಯ ಫೋಟೊಗಳನ್ನು ತೆಗೆದು ನೋಡಿದೆ. ಫೋಟೊ ಮತ್ತು ಬಣ್ಣ ನಿಖರವಾಗಿ ಬರುತ್ತವೆ. ಕಡಿಮೆ ಬೆಳಕಿನಲ್ಲಿ ಮಾತ್ರ ಫೋಕಸ್ ಆಗಲು ಸ್ವಲ್ಪ ಒದ್ದಾಡುತ್ತದೆ. ಅತಿ ಹತ್ತಿರದ ವಸ್ತುಗಳ ಫೋಟೊವನ್ನು ಕೂಡ ತೆಗೆಯಬಹುದು. ಸಾಮಾನ್ಯವಾಗಿ 300 ಮಿ.ಮೀ. ಫೋಕಲ್ ಲೆಂತ್ ಇರುವ ಲೆನ್ಸ್‌ನಲ್ಲಿ 37 ಇಂಚಿನಷ್ಟು ಹತ್ತಿರದಿಂದ ಫೋಟೊ ತೆಗೆಯಲು ಆಗುವುದಿಲ್ಲ. ಆದರೆ ಈ ಲೆನ್ಸ್‌ನಲ್ಲಿ ಆಗುತ್ತದೆ. ಒಟ್ಟಿನಲ್ಲಿ ಇದು ರಾಜಿ ಲೆನ್ಸ್ ಅಂದುಕೊಂಡರೂ ನೀಡುವ ಹಣಕ್ಕೆ ಮೋಸವಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry