7

ವಿಮೋಚನೆಯ ನಿರೀಕ್ಷೆಯಲ್ಲಿ ಪೂರ್ವಾಂಚಲ

ಶೇಖರ್‌ ಗುಪ್ತ
Published:
Updated:

ಹಲವು ಕಾರಣಗಳಿಗೆ ಕುಖ್ಯಾತವಾಗಿರುವ ಅನೇಕ ಪ್ರದೇಶಗಳು ಉತ್ತರಪ್ರದೇಶದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಯಮುನಾ ನದಿಗುಂಟದ ಪ್ರದೇಶ ಮತ್ತು ಬುಂದೇಲ್‌ಖಂಡ ಹಾಗೂ ಇಟಾವಾದ ಸುತ್ತಮುತ್ತಲಿನ ಬರಡು ಭೂಮಿ, ಕೊರಕಲು ಕಣಿವೆಗಳು ಅಕ್ಷರಶಃ ಕೆಟ್ಟ ಭೂಪ್ರದೇಶ ಎನ್ನುವ ಕುಖ್ಯಾತಿಗೆ ಹೆಸರಾಗಿವೆ.  ಕಾನೂನು ಸುವ್ಯವಸ್ಥೆ  ಎನ್ನುವುದು ಇಲ್ಲಿ ಇಲ್ಲವೇ ಇಲ್ಲ.  ರಾಜ್ಯದಲ್ಲಿ ಇನ್ನಷ್ಟು ಪೂರ್ವಕ್ಕೆ ಹೋಗುತ್ತಿದ್ದಂತೆ ಸಮೃದ್ಧವಾಗಿರುವ, ಹೆಚ್ಚು ಸುಸಂಬದ್ಧವಾದ, ನೀರಿನ ಹರಿವಿನಿಂದ ಕೂಡಿದ ಫಲವತ್ತಾದ ಭೂ ಪ್ರದೇಶ ಕಾಣಲು ಸಿಗುತ್ತದೆ. ಆದರೆ, ಇಲ್ಲಿಯೂ ಜೀವನದ ಗುಣಮಟ್ಟ ಕುಸಿಯುತ್ತಿರುವ ವೇಗದಲ್ಲಿಯೇ ಕಾನೂನು ಸುವ್ಯವಸ್ಥೆ ಕೂಡ ಕುಸಿಯುತ್ತಲೇ ಸಾಗಿದೆ.ತುಂಬಿ ಹರಿಯುತ್ತಿರುವ ಚರಂಡಿ­ಗಳು, ರಸ್ತೆ ಮೇಲೆಯೇ ಹರಿಯುವ ಕೊಳಚೆ ನೀರು, ತಲೆಮೇಲೆ ಜೋತು ಬಿದ್ದಿರುವ ತಂತಿಗಳು, ವಾತಾವರಣದಲ್ಲಿ ಸದಾ ಕಾಲ ಇರುವ ದುರ್ವಾಸನೆ, ರಸ್ತೆ ಗುಂಡಿಗಳು, ಅತಿಕ್ರಮಣಗಳು, ಗುಳಿಬಿದ್ದ ಕೆನ್ನೆಗಳ ವಯಸ್ಕರು, ವೈರಾಣು ಸೋಂಕಿ­ನಿಂದ ಪ್ರತಿ ವರ್ಷ  ಅನೇಕರ ಸಾವುಗಳು ಈ ಅಭಿವೃದ್ಧಿ ವಂಚಿತ ಪ್ರದೇಶದ ದೈನೇಸಿ ಸ್ಥಿತಿಗೆ ಕನ್ನಡಿ ಹಿಡಿಯುತ್ತವೆ. ಬಾಟಲಿ, ತಟ್ಟೆ, ಚೀಲಗಳಿಂದ  ಮಿಶ್ರಣಗೊಂಡಿರುವ  ಪ್ಲಾಸ್ಟಿಕ್‌ ಕಸ ರಸ್ತೆ ಬದಿ ಗುಡ್ಡೆಯಾಗಿ ಬಿದ್ದಿರುವುದು ಕಣ್ಣಿಗೆ ರಾಚುತ್ತದೆ.ಗೋರಖ್‌ಪುರ ಮತ್ತು ಸುತ್ತ­ಮುತ್ತಲಿನ ಪ್ರದೇಶದಲ್ಲಿನ ಶಾಪಿಂಗ್‌ ಮಾಲ್, ರೆಸ್ಟೊರೆಂಟ್‌ ಮತ್ತು ಸ್ಪಾ ಕೇಂದ್ರಗಳು ಇರುವ ಪ್ರದೇಶದಲ್ಲಿ ಮಾತ್ರ ಸ್ವಚ್ಛತೆ ಕಂಡು ಬರುತ್ತದೆ. ಇತರೆಡೆಗಳಲ್ಲಿ ತಿಪ್ಪೆಯ ರಾಶಿಯೇ ಎದುರುಗೊಳ್ಳುತ್ತದೆ. ಉತ್ತರ ಪ್ರದೇಶದ ತೀವ್ರ ನಿರ್ಲಕ್ಷಿತ ಪ್ರದೇಶವಾಗಿರುವ ಪೂರ್ವಾಂಚಲದ ಪ್ರಮುಖ ನಗರವಾಗಿ ಗೋರಖ್‌ಪುರ ಗಮನ ಸೆಳೆಯುತ್ತದೆ.  ಉತ್ತರದಲ್ಲಿ  ನೇಪಾಳಕ್ಕೆ ಹೊಂದಿಕೊಂಡಿರುವ ಮುಕ್ತ ಗಡಿ, ಪಶ್ಚಿಮ ಬಿಹಾರಕ್ಕೆ ಹೊಂದಿಕೊಂಡಿರುವ ಪೂರ್ವದಲ್ಲಿನ ಕುಶಿನಗರ ಜಿಲ್ಲೆ ಮತ್ತು ಅವ್ಯವಸ್ಥೆಯ ದೇವೊರಿಯಾ, ಅಜಂಗಢ, ಬಲಿಯಾ, ಜೌನಪುರ  ಜಿಲ್ಲೆಗಳನ್ನು ಈ ಪ್ರದೇಶ ಒಳಗೊಂಡಿದೆ.ದೇಶದ ಈಶಾನ್ಯ ರಾಜ್ಯಗಳು ಅವಗಣನೆಗೆ ಒಳಗಾಗಿರುವ ಪ್ರದೇಶ ಎಂದು ನಾವೆಲ್ಲ ಪರಿಗಣಿಸುತ್ತ ಬಂದಿದ್ದೇವೆ. ಆದರೆ, ಉತ್ತರ ಪ್ರದೇಶ­ದಲ್ಲಿನ ಪೂರ್ವಾಂಚಲವು ಅದರಲ್ಲೂ ವಿಶೇಷವಾಗಿ ಗೋರಖ್‌ಪುರದಲ್ಲಿಯೂ ನಾವು  ಅದೇ ಬಗೆಯ ಪರಿಸ್ಥಿತಿಯನ್ನು  ಕಾಣಬಹುದಾಗಿದೆ.ಗೋರಖ್‌ಪುರದ ಬಗ್ಗೆ ಎರಡು ಬಗೆಯ ಚಿತ್ರಣಗಳಿವೆ. ನೀವು ಎಲ್ಲಿ ನೋಡುವಿರಿ ಎನ್ನುವುದನ್ನು ಆಧರಿಸಿ ಈ ನಗರದ ಚಿತ್ರಣವು ತನ್ನ ನಿಜ ಸ್ವರೂಪವನ್ನು ಪ್ರದರ್ಶಿಸುತ್ತದೆ. ರಸ್ತೆ ಮೇಲೆ ದೃಷ್ಟಿ ನೆಟ್ಟರೆ ಬರೀ ಕೊಳಕು ಕಣ್ಣಿಗೆ ರಾಚುತ್ತದೆ. ತಲೆ ಮೇಲೆತ್ತಿ ಎತ್ತ ನೋಡಿದರೂ ಸಾಧನ ಸಂಪತ್ತು ಕಣ್ಣಿಗೆ ಕುಕ್ಕುತ್ತದೆ. ಇಲ್ಲಿನ ಗೋಡೆಗಳ ಮೇಲಿನ ಬರಹ ಲೆಕ್ಕಕ್ಕೆ ತೆಗೆದುಕೊಂಡರೆ 15 ವರ್ಷಗಳ ಹಿಂದೆಯೇ ಇಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಗಮನಾರ್ಹವಾಗಿ ತಲೆ­ಎತ್ತಿರುವುದು ಹಾಗೂ  ಇಂಗ್ಲಿಷ್‌ ಮಾಧ್ಯಮ ಶಾಲೆಗಳು ಮತ್ತು ತರಬೇತಿ ಕೇಂದ್ರಗಳು ಗರಿಷ್ಠ ಸಂಖ್ಯೆಯಲ್ಲಿ ಇರುವುದು ಅನುಭವಕ್ಕೆ ಬರುತ್ತದೆ.1991ರ ಆರ್ಥಿಕ ಸುಧಾರಣಾ ಕ್ರಮಗಳ ಜಾರಿ ನಂತರದ ದಿನಗಳಲ್ಲಿ  ಸಣ್ಣ  ಪುಟ್ಟ ನಗರ – ಪಟ್ಟಣಗಳಲ್ಲಿ ಶಿಕ್ಷಣವು ಗ್ರಾಹಕ ಉತ್ಪನ್ನದಂತೆ ಆಗಿದೆ.  ಪೂರ್ವ ಉತ್ತರ ಪ್ರದೇಶ ಅಥವಾ ಪೂರ್ವಾಂಚಲವು ಈ ವಿಷಯದಲ್ಲಿ ಸಂಪೂರ್ಣ ಭಿನ್ನವಾಗಿದ್ದು, ಭಾರಿ ಬದಲಾವಣೆಗೆ ಒಡ್ಡಿಕೊಂಡಿರುವುದು ಕಂಡು ಬರುತ್ತದೆ.  ಹೈದರಾಬಾದ್‌ನಲ್ಲಿ ಕಂಡುಬರುವ  ಟಾಲಿವುಡ್‌ನ ಸಿನಿಮಾ ಜಾಹೀರಾತು ನೆನಪಿಸುವ ಭಾರಿ ಗಾತ್ರದ ಫಲಕಗಳು, ಗೋಡೆಗಳಿಗೆ ಅಂಟಿಸಿರುವ ಭಿತ್ತಿಪತ್ರಗಳು, ಉದ್ಯೋಗ ಅವಕಾಶಗಳ ಪ್ರಚಾರ ಫಲಕಗಳು ಗಮನ ಸೆಳೆಯುತ್ತವೆ.ರಾತ್ರಿ ಹೊತ್ತು ವಸತಿ ಪ್ರದೇಶದಲ್ಲಿ ವಿಹಾರಕ್ಕೆ ಹೋದಾಗ ನಾನು ಲೆಕ್ಕ ಹಾಕಿದ ಎಲ್ಲ ಬಗೆಯ ಜಾಹೀರಾತುಗಳ ಸಂಖ್ಯೆ 200ರಷ್ಟಿತ್ತು.  ಅವುಗಳ ಪೈಕಿ 170 ಜಾಹೀರಾತುಗಳು ಶಿಕ್ಷಣ, ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ, ಇಂಗ್ಲಿಷ್‌ ಕಲಿಕೆಗೆ ಸಂಬಂಧಿಸಿದ್ದವು.  ಹಿಂದಿ ಭಾಷೆಯಲ್ಲಿದ್ದ  ‘ನಿಮಗೆ ಇಂಗ್ಲಿಷ್‌ ಭಾಷಾ ಕೌಶಲ ಬೇಕಾಗಿಲ್ಲ ಎಂದು ನೀವು ಭಾವಿಸುವಿರಾ’ (‘ಕ್ಯಾ ಆಪ್‌ ಸಮ್‌ಜಾತೆ ಹೈ ಆಪ್‌ಕೋ ಅಂಗ್ರೇಜಿಕಿ  ಜರೂರತ್‌ ನಹಿ ಹೈ’) ಎಂದು ಅಣಕಿಸುವ ಧಾಟಿಯಲ್ಲಿನ ಜಾಹೀರಾತು ಕೂಡ ಅವುಗಳಲ್ಲಿ ಒಂದಾಗಿತ್ತು.ಡಾ. ರಾಹುಲ್ ರಾಯ್‌ ಒಡೆತನದ ಪಿಎಂಟಿ ಕೋಚಿಂಗ್‌ನ ಜಾಹೀರಾತಿನಲ್ಲಿ, ‘18 ವರ್ಷಗಳಲ್ಲಿ ಪೂರ್ವಾಂಚಲದಿಂದ 1,012 ವೈದ್ಯರನ್ನು ಕೊಡುಗೆಯಾಗಿ ನೀಡಿದ ಹೆಗ್ಗಳಿಕೆ ನಮ್ಮದು’ ಎನ್ನುವ ಮಾಹಿತಿ ಗಮನ ಸೆಳೆಯುತ್ತದೆ. ಇದು ಪಟ್ನಾದ ಪ್ರತಿಷ್ಠಿತ ಎಂಜಿನಿಯರಿಂಗ್‌ ತರಬೇತಿ ಕೇಂದ್ರ ‘ಸೂಪರ್‌ 30’ನಂತೆ ಇದೆ. ಹೊಸ ಅವಕಾಶಗಳ ಹುಡುಕಾಟದಲ್ಲಿ ಈ  ಪ್ರದೇಶದಿಂದ ಪಾರಾಗುವ ಹಂಬಲ ಪೂರ್ವಾಂಚಲದ ಯುವ ಜನತೆಯಲ್ಲಿ ಕಂಡು ಬರುತ್ತಿದೆ.ಕೆಲವರು ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡು ಹೊಸ ಬದುಕು ಕಂಡುಕೊಂಡಿದ್ದರೆ, ಉಳಿದವರು ಮಹಾನಗರಗಳ ಉಪ ನಗರಗಳಲ್ಲಿ, ಕೊಳೆಗೇರಿಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ರಿಕ್ಷಾ ಎಳೆಯುತ್ತ, ಕಟ್ಟಡ ನಿರ್ಮಾಣ ಚಟುವಟಿಕೆಗಳಲ್ಲಿ ಕೂಲಿಗಳಾಗಿ, ತಳ್ಳುವ ಗಾಡಿಗಳಲ್ಲಿ ಹಣ್ಣು, ತರಕಾರಿ, ಗೂಡಂಗಡಿಗಳಲ್ಲಿ ಚಹ ಮಾರುತ್ತ ಬದುಕಿನ ಬಂಡಿ ಎಳೆಯುತ್ತಿದ್ದಾರೆ. ಇಲ್ಲಿಯ ಯುವ ಜನರಲ್ಲಿನ ಬಹುಸಂಖ್ಯಾತರು ಇಲ್ಲಿಂದ ಹಾರಿ ಹೋಗುವ ಏಕೈಕ ಉದ್ದೇಶ ಹೊಂದಿದ್ದರೂ,  6 ಕೋಟಿಗೂ ಹೆಚ್ಚು ಜನಸಂಖ್ಯೆಯ ಈ ನಿರ್ಲಕ್ಷಿತ ಪ್ರದೇಶದ ಬಗ್ಗೆ ಯಾವೊಬ್ಬ ಚಿತ್ರ ನಿರ್ಮಾಪಕನೂ ‘ಉಡ್ತಾ ಪೂರ್ವಾಂಚಲ’ದ ಹೆಸರಿನಲ್ಲಿ ಚಿತ್ರ ನಿರ್ಮಿಸಲು ಮುಂದಾಗಿಲ್ಲ.ವಿಶಿಷ್ಟ ಭಾಷಣ ಕಲೆ ರೂಢಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅದ್ಭುತ ಭಾಷಣಕಾರ ಎಂದ ಮಾತ್ರಕ್ಕೆ ಸಾರ್ವಜನಿಕರ ಜೊತೆ ಸಂವಹನ ನಡೆಸುವ ಅವರ ಪ್ರತಿಭೆಗೆ ನ್ಯಾಯ ಕೊಟ್ಟಂತೆ ಆಗುವುದಿಲ್ಲ. ಜನರು ಯಾವ ಬಗೆಯಲ್ಲಿ, ಯಾವಾಗ ಏನನ್ನು ಕೇಳಲು ಬಯಸುತ್ತಾರೆ ಎನ್ನುವುದನ್ನು ಮೋದಿ ಚೆನ್ನಾಗಿ ತಿಳಿದುಕೊಂಡಿದ್ದಾರೆ.  ಮಾತಿನ ಓಘದಲ್ಲಿ ಏರಿಳಿತ, ಎರಡೂ ಕೈಗಳನ್ನು ಬೀಸುತ್ತ ಮಾತನಾಡುವ ಭಂಗಿಯೇ  ಸಭಿಕರನ್ನು ಮಂತ್ರಮುಗ್ಧಗೊಳಿಸಿ ಬಿಡುತ್ತದೆ. ರಾಹುಲ್‌ ಗಾಂಧಿ ಅವರು ಈ ಹಿಂದಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಆಡಿದ ಮಾತುಗಳನ್ನು ಅರ್ಥೈಸಿ­ಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವು.  2012ರ ಚುನಾವಣೆಯಲ್ಲಿ ರಾಹುಲ್‌ ಟೀಕಿಸಿದಂತೆ, ಮೋದಿ ಅವರು ಕೂಡ ಈ ಬಾರಿ, ಪೂರ್ವಾಂಚಲಕ್ಕೆ ತಟ್ಟಿದ ಆರ್ಥಿಕ ವಲಸೆಯ ಶಾಪದ ಬಗ್ಗೆ ಮಾತನಾಡಿದ್ದಾರೆ.  ನೀವು ನೆಲೆಸಿರುವ ಸ್ಥಳದಲ್ಲಿಯೇ ಕೆಲಸ ಸಿಗಬೇಕು. ಬೇರೆ ಪ್ರದೇಶಕ್ಕೆ ವಲಸೆ ಹೋಗಬಾರದು ಎಂದು ನೀವು ಬಯಸುವುದಿಲ್ಲವೇ ಎಂದು ಮೋದಿ ಯುವಕರನ್ನು ಪ್ರಶ್ನಿಸುತ್ತಾರೆ. ಇಂತಹ ಪ್ರಶ್ನೆ ಕೇಳಿ ಕ್ಷಣ ಕಾಲ ಮೌನದ ಮೊರೆ ಹೋಗುವ ಮೋದಿ, ಅದಕ್ಕೆ ಸಭಿಕರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಾರೆ. ಜನರ ಮೌನವು ಅವರನ್ನು ಆಶ್ಚರ್ಯಚಕಿತಗೊಳಿಸಿದರೂ ಪೂರ್ವಾಂಚಲ ಜನರ ಹತಾಶೆಯನ್ನು ತಿಳಿದುಕೊಳ್ಳುವಲ್ಲಿ ವಿಫಲರಾಗುತ್ತಾರೆ.ಪೂರ್ವಾಂಚಲದಲ್ಲಿ  ಶಿಕ್ಷಣ ಅಥವಾ ಉದ್ಯೋಗ ಅವಕಾಶಗಳೊಂದೇ ಸಮಸ್ಯೆಯಾಗಿ ಕಾಡುತ್ತಿಲ್ಲ. ದುಡಿಯುವ ಸಾಮರ್ಥ್ಯಕ್ಕೆ ಹೋಲಿಸಿದರೆ ಕಳಪೆ ಜೀವನ ಮಟ್ಟವೂ ಸ್ಥಳೀಯರನ್ನು ಕಾಡುತ್ತಿದೆ.  ತೆರೆದ ಚರಂಡಿಗಳು ಮಳೆ­ಗಾಲದಲ್ಲಿ ಕಾಲುವೆಗಳಾಗಿ ಪರಿ­ವರ್ತನೆ­ಗೊಳ್ಳುತ್ತವೆ.  ದೂಳಿನಿಂದ ತುಂಬಿದ ಗಾಳಿಯನ್ನೇ ನಿರಂತರವಾಗಿ ಉಸಿ­ರಾಡಬೇಕಾಗುತ್ತದೆ.  ನಡೆಯುವಾಗ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದರೆ ಹಲವು ಸೊಳ್ಳೆಗಳನ್ನು ನುಂಗ­ಬೇಕಾಗುತ್ತದೆ.  ಉತ್ತರ ಪ್ರದೇಶದ ಕೆಲ ಪ್ರದೇಶಗಳು ಅದರಲ್ಲೂ ವಿಶೇಷವಾಗಿ ಪೂರ್ವಾಂಚಲದಲ್ಲಿನ ಜನರ ಜೀವನ ಮಟ್ಟವು ಸಾಮಾಜಿಕ ಬದುಕಿನ ಮಾನದಂಡಗಳ ಪ್ರಕಾರ ತೀರ ಕೆಳಮಟ್ಟದಲ್ಲಿ ಇರುವುದನ್ನು ಮೋದಿ ಅವರೂ ಒಪ್ಪಿಕೊಂಡಿದ್ದಾರೆ.ಈ ಪ್ರದೇಶದ ಶಾಪವು ಇಲ್ಲಿನ ಭೌಗೋಳಿಕ ಸ್ವರೂಪದಲ್ಲಿ  ಅಡಗಿದೆ. ಗೋರಖ್‌ಪುರ ಪ್ರದೇಶವು ದೇಶದ ಇತರ ಭಾಗಗಳಿಂದ ಪ್ರಮುಖವಾಗಿ ಸಂಪರ್ಕ ಸೌಲಭ್ಯದಿಂದ ವಂಚಿತಗೊಂಡಿದೆ. ರೈಲು ಅಥವಾ ಹೆದ್ದಾರಿ ಸಂಪರ್ಕ ಜಾಲದಿಂದ ಈ ಭಾಗ ಬಹುದೂರದಲ್ಲಿ ಇದೆ. ಇತ್ತೀಚಿನ ಕೆಲ ವರ್ಷಗಳವರೆಗೂ ಇದು  ಮೀಟರ್‌ಗೇಜ್‌ ಪ್ರದೇಶವಾಗಿತ್ತು. ಇಲ್ಲಿಯ ಜನರು ಪ್ರತಿಭಾನ್ವಿತರು, ಕಠಿಣ ಪರಿಶ್ರಮ ಜೀವಿಗಳು  ಮತ್ತು ಬಂಡಾಯ ಪ್ರವೃತ್ತಿಯವರೂ ಆಗಿದ್ದಾರೆ.

ಗೋರಖ್‌ಪುರ ಮತ್ತು ದೇವೊರಿಯಾ ಮಧ್ಯೆ ಬರುವ ಚೌರಿ ಚೌರಾ ಪ್ರದೇಶವು ಸ್ವಾತಂತ್ತ್ಯ ಪೂರ್ವದಲ್ಲಿಯೇ ಬಂಡಾಯಕ್ಕೆ ಖ್ಯಾತವಾಗಿತ್ತು. 1922ರ ಫೆಬ್ರುವರಿ ತಿಂಗಳಲ್ಲಿ ಸ್ಥಳೀಯರ ಗುಂಪು ಪೊಲೀಸ್‌ ಠಾಣೆಯ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ 23  ಪೊಲೀಸರನ್ನು ಸಜೀವವಾಗಿ ಸುಟ್ಟು ಹಾಕಿತ್ತು.  ಈ ಘಟನೆಯ ಪರಿಣಾಮವಾಗಿ ಮಹಾತ್ಮಾ ಗಾಂಧಿ ಅವರು ತಮ್ಮ ಮೊದಲ ಅಸಹಕಾರ ಚಳವಳಿಯನ್ನು ಸ್ಥಗಿತಗೊಳಿಸಿ  ಪ್ರಾಯಶ್ಚಿತ್ತಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಬ್ರಿಟಿಷರು ಸೇನಾ ಕಾಯ್ದೆ ಜಾರಿಗೊಳಿಸಿ ಪ್ರತೀಕಾರಕ್ಕೆ ಮುಂದಾಗಿದ್ದರು.  ಇದನ್ನು ಪ್ರತಿಭಟಿಸಲು ಅಲ್ಲಿಗೆ ಭೇಟಿ ನೀಡಿದ್ದ ಜವಾಹರಲಾಲ್‌ ನೆಹರೂ ಅವರನ್ನು ಬಂಧಿಸಲಾಗಿತ್ತು.  ಗೋರಖ್‌ಪುರ ಜೈಲಿನಲ್ಲಿ ಖ್ಯಾತ ಕ್ರಾಂತಿಕಾರಿ ರಾಮ್‌ ಪ್ರಸಾದ್‌ ಬಿಸ್ಮಿಲ್‌ನನ್ನು ನೇಣಿಗೆ ಹಾಕಲಾಗಿತ್ತು.  ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರಿಗೆ ನಡುಕ ಮೂಡಿಸಿದ್ದ ಈ ಪ್ರದೇಶ ಈಗಲೂ ನಿರ್ಲಕ್ಷಿತ ಪ್ರದೇಶವಾಗಿಯೇ ಉಳಿದಿದೆ. ಪೂರ್ವಾಂಚಲದ ಬಹುತೇಕ ಪ್ರದೇಶದಲ್ಲಿ ಅಭಿವೃದ್ಧಿಯ ಕುರುಹೂ ಕಂಡು ಬರುವುದಿಲ್ಲ.ಹಿಂದೊಮ್ಮೆ ಕ್ರಾಂತಿಕಾರಿಗಳ ನೆಲೆವೀಡಾಗಿದ್ದ ಪ್ರದೇಶದಲ್ಲಿ ಈಗ ಮಾಫಿಯಾ ತಂಡಗಳು ವಿಜೃಂಭಿಸುತ್ತಿವೆ. ಹರಿಶಂಕರ್‌ ತಿವಾರಿ ಮತ್ತು ವಿರೇಂದ್ರ ಪ್ರತಾಪ್‌ ಶಾಹಿ ಅವರು ಬ್ರಾಹ್ಮಣರು ಮತ್ತು ರಜಪೂತರ ದುಷ್ಟಕೂಟ (ಮಾಫಿಯಾ) ರಚಿಸಿಕೊಂಡು ರಕ್ತಪಾತ ಹರಿಸಿದ್ದರು.  ಸದ್ಯಕ್ಕೆ ಅವರ ಉಪಟಳವೇನೂ ಇಲ್ಲ. ಆದರೆ, ಸಣ್ಣ ಪುಟ್ಟ ತಂಡಗಳ ದುಷ್ಕೃತ್ಯದ ಹಾವಳಿ ಮತ್ತು ಸುಪಾರಿ ಕೊಲೆಗಳು ಅವ್ಯಾಹತವಾಗಿ ನಡೆಯುತ್ತಲೇ ಇವೆ.

ವಿಶಾಲ್‌ ಭಾರದ್ವಾಜ್‌ ಅವರ ‘ಇಷ್ಕಿಯಾ’ ಚಲನಚಿತ್ರದಲ್ಲಿ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದ ಪಾತಕಿಗಳ ಪಾತ್ರ ನಿರ್ವಹಿಸಿರುವ ನಾಸಿರುದ್ದೀನ್‌ ಶಾ ಮತ್ತು   ಅರ್ಷದ್‌ ವಾರ್ಸಿ ನಡುವಣ ಸಂಭಾಷಣೆಯು ಇಲ್ಲಿಯ ಪರಿಸ್ಥಿತಿಯನ್ನು ಸಮರ್ಥವಾಗಿ ಬಿಂಬಿಸುತ್ತದೆ. ಸಂಬಂಧಿಕರಾದ ಈ ಇಬ್ಬರೂ ಅಪರಾಧಿಗಳು  ಗೋರಖ್‌­ಪುರದಲ್ಲಿ ತಲೆಮರೆಸಿಕೊಳ್ಳಲು ಹವ­ಣಿಸುವ ಸಂದರ್ಭದಲ್ಲಿ ಅವರಿಬ್ಬರ ನಡುವೆ ಈ ಸಂಭಾಷಣೆ ನಡೆದಿರುತ್ತದೆ.‘ಮಾಮು, ನಾವು ಇಲ್ಲಿಂದಲೂ ಪಾರಾಗಬೇಕು. ಇದು ಸುರಕ್ಷಿತ ಸ್ಥಳವಲ್ಲ.  ನಮ್ಮ ಭೋಪಾಲ್‌ನಲ್ಲಿ ಶಿಯಾ ಮತ್ತು ಸುನ್ನಿಗಳಷ್ಟೇ ಪರಸ್ಪರ ಕಾದಾಡುತ್ತಾರೆ. ಇಲ್ಲಿ ಬ್ರಾಹ್ಮಣರು, ರಜಪೂತರು, ಯಾದವರು ಮತ್ತು ಜಾಟರು ಖಾಸಗಿ ಸೇನೆ ಕಟ್ಟಿಕೊಂಡು ಪರಸ್ಪರ  ಕತ್ತಿ ಮಸೆಯುತ್ತಾರೆ’ ಎಂದು ಅರ್ಷದ್‌ ವಾರ್ಸಿ ಹೇಳುತ್ತಾರೆ.  ಪೂರ್ವಾಂಚಲಕ್ಕೆ  ಕೆಟ್ಟ ನೆಲ ಎನ್ನುವ ವಿಶೇಷಣ ಅಂಟಿ­ಕೊಂಡಿರುವುದು ಏಕೆ ಎನ್ನುವುದು ಇದರಿಂದ ವೇದ್ಯವಾಗುತ್ತದೆ.ಗೋರಖ್‌ಪುರದ ಸಾರ್ವಭೌಮತ್ವದ ಆಳ್ವಿಕೆಯು ಜಮೀನುದಾರಿ ಅಥವಾ ಮಾಫಿಯಾ ತಂಡಗಳ ನಿಯಂತ್ರಣದಲ್ಲಿ ಇಲ್ಲ. ಕೇಸರಿ ವಸ್ತ್ರಧಾರಿ, ಚತುರ ಮಾತುಗಾರ ಯೋಗಿ ಆದಿತ್ಯನಾಥ ಅವರು ಈ ಪ್ರದೇಶದ ಮೇಲೆ ಬಿಗಿ ಹಿಡಿತ ಹೊಂದಿದ್ದಾರೆ.   ಪ್ರಭಾವಿ ಗೋರಖ್‌­ನಾಥ ಮಠದ ವಂಶಪಾರಂಪರ್ಯ ಉತ್ತರಾಧಿಕಾರಿಯಾಗಿರುವ ಆದಿತ್ಯನಾಥ ಅವರು ಬಿಜೆಪಿಯ ಸಂಸದ. ಐದು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.  ಜಿಲ್ಲೆಯಲ್ಲಿನ ಬಹುತೇಕ ವಿಧಾನ ಸಭಾ ಸ್ಥಾನಗಳನ್ನು ಗೆಲ್ಲಿಸಿಕೊಡುವ ನಿರೀಕ್ಷೆಯಲ್ಲಿ ಅವರಿದ್ದಾರೆ.  ಗೋರಖ್‌ನಾಥ ಮಠ ಮತ್ತು ದೇವಾಲಯವು  ಈ ಪ್ರದೇಶದ ಪ್ರಮುಖ ಹೆಗ್ಗುರುತಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಸ್ವಚ್ಛ ತಾಣವೂ ಆಗಿದೆ.ದೊಡ್ಡ ಪರಂಪರೆಯೇ ಇರುವ ಮಠದ ಗೋಡೆಯ ತುಂಬ ಹಿಂದಿನ ಮುಖ್ಯಸ್ಥರ ಭಾವಚಿತ್ರಗಳು ಇರುವ ಸಭಾಂಗಣದಲ್ಲಿ ಯೋಗಿ ಆದಿತ್ಯನಾಥ  ಅವರೊಂದಿಗೆ ನಮ್ಮ ಭೇಟಿ ನಿಗದಿಯಾಗಿತ್ತು.‘ಬಿಜೆಪಿಯು ಈ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನೇಕೆ ಕಣಕ್ಕೆ ಇಳಿಸಿಲ್ಲ’ ಎನ್ನುವ ನಮ್ಮ ಪ್ರಶ್ನೆಗೆ, ‘ಗೆಲುವಿನ ಅರ್ಹತೆಯೇ ಮುಖ್ಯ ಮಾನದಂಡವಾಗಿರುವುದರಿಂದ ಅವರನ್ನು ಪರಿಗಣಿಸಿಲ್ಲ. ಬಿಜೆಪಿ ಪಟ್ಟಿಯಲ್ಲಿ ಮುಸ್ಲಿಂ ಅಭ್ಯರ್ಥಿ ಇಲ್ಲದಿದ್ದರೆ ಏನಂತೆ. ಈ ಪ್ರದೇಶದಲ್ಲಿ ಯಾವತ್ತೂ ಕೋಮುಗಲಭೆಗಳು ನಡೆದಿಲ್ಲ’ ಎಂದರು.‘ ಕೋಮು ಗಲಭೆಗಳು ನಡೆಯದೇ ಇರಲು ಪ್ರಮುಖ ಕಾರಣ ಏನು’?  ಎಂಬುದು ನಮ್ಮ ಎರಡನೆಯ ಪ್ರಶ್ನೆಯಾಗಿತ್ತು. ‘ಅದಕ್ಕೆ ನಮ್ಮ ನ್ಯಾಯಯುತ ಆಡಳಿತ ಮತ್ತು ಭಯ’ ಕಾರಣ ಎಂದು ಉತ್ತರಿಸಿದರು. ‘ಭಯ ಏಕೆ? ಯಾರ ಭಯ’ ಎಂದು ನಾವು ಮರು ಪ್ರಶ್ನಿಸಿದೆವು. ಆ ಪ್ರಶ್ನೆಯನ್ನು ಅವರು ಉಪೇಕ್ಷಿಸಿದರು.ಉತ್ತರ ಪ್ರದೇಶವನ್ನು ಸಣ್ಣ, ಸಣ್ಣ ರಾಜ್ಯಗಳಾಗಿ ವಿಭಜನೆ ಮಾಡುವ ಪ್ರಸ್ತಾವದ ಬಗ್ಗೆ  ಪ್ರಶ್ನೆ ಕೇಳಿದಾಗ ಅವರ ಕಣ್ಣುಗಳಲ್ಲಿ ಹೊಳಪು ಕಾಣಿಸಿಕೊಂಡಿತು. ಹಾಗೊಂದು ವೇಳೆ  ಉತ್ತರ ಪ್ರದೇಶ ವಿಭಜನೆಯಾಗಿ ಹೊಸ ರಾಜ್ಯ ಅಸ್ತಿತ್ವಕ್ಕೆ ಬಂದರೆ, ಪೂರ್ವಾಂಚಲವೂ ಅವುಗಳಲ್ಲಿ ಒಂದಾಗಿರುತ್ತದೆ. ‘ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಈಗ ವಿಭಜನೆ ಬಗ್ಗೆ ಚರ್ಚೆ ಬೇಡ’ ಎಂದು ಅವರು ಉತ್ತರಿಸಿದರು. ಮುಂಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವ ಬಗ್ಗೆ ಅವರು ಈ ಸಂದರ್ಶನ ಸಂದರ್ಭದಲ್ಲಿ ಅವರು ಸಾಕಷ್ಟು ಸುಳಿವುಗಳನ್ನು ನೀಡಿದರು.  ತಾವೇ ಪೂರ್ವಾಂಚಲದ ಮೊದಲ ಮುಖ್ಯಮಂತ್ರಿಯಾಗುವ ಹಂಬಲ ಅವರ ಮಾತುಗಳಲ್ಲಿ ಇರುವುದು ನಮಗೆ ಸ್ಪಷ್ಟವಾಗಿತ್ತು.  ಉತ್ತರ ಪ್ರದೇಶದ ಗೋಡೆಗಳ ಮೇಲೆ ಸದ್ಯಕ್ಕಂತೂ ಇಂತಹ ರಾಜ್ಯ ವಿಭಜನೆಯ ಬರಹ ಸ್ಪಷ್ಟವಾಗಿ ಕಂಡು  ಬರುತ್ತಿದೆ. (ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry