7

ಉದ್ದೇಶಗಳು ಪ್ರಾಮಾಣಿಕವಾಗಿರದೇ ಇದ್ದರೆ...

Published:
Updated:
ಉದ್ದೇಶಗಳು ಪ್ರಾಮಾಣಿಕವಾಗಿರದೇ ಇದ್ದರೆ...

ದು ಕೇವಲ ಕಾಕತಾಳೀಯ ಇರಲಾರದು, ಆಕಸ್ಮಿಕವೂ ಆಗಿರಲಾರದು. ಆದರೆ, ಎಂಥ ವಿರೋಧಾಭಾಸ? ಒಂದು ಕಡೆ ತಾನು ಪ್ರಾಮಾಣಿಕ ಎಂದು ಸಾಬೀತುಪಡಿಸಲು ಸರ್ಕಾರ ಹೆಣಗುತ್ತದೆ. ಇನ್ನೊಂದು ಕಡೆ ಅತ್ಯಂತ ಅಪ್ರಾಮಾಣಿಕವಾದ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ. ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆಯನ್ನು ಒಂದು ಕಡೆ ರದ್ದು ಮಾಡುವ ರಾಜ್ಯ ಸರ್ಕಾರ ಇನ್ನೊಂದು ಕಡೆ ತೀವ್ರ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದ್ದ 362 ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ಆದೇಶ ನೀಡಲು ನಿರ್ಣಯಿಸುತ್ತದೆ.ಎರಡೂ ನಿರ್ಧಾರಗಳು 24 ಗಂಟೆಗಳ ನಡುವಿನ ಅವಧಿಯಲ್ಲಿ ಹೊರಗೆ ಬಿದ್ದಿವೆ. ಉಕ್ಕಿನ ಸೇತುವೆ ಯೋಜನೆ ಕೈ ಬಿಡಲು ಜನರ ಒತ್ತಡ ಕಾರಣ ಎಂದು ಸರ್ಕಾರ ಹೇಳಿಕೊಂಡರೂ ಯಾವ ಮಾಧ್ಯಮವೂ ಅದನ್ನು ಒಪ್ಪಿಕೊಳ್ಳಲಿಲ್ಲ. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಕೆ.ಗೋವಿಂದರಾಜ್‌  ಮನೆಯಲ್ಲಿ ಸಿಕ್ಕ, ಕಪ್ಪ ಕಾಣಿಕೆಯ ವಿವರಗಳು ಇದ್ದ, ಡೈರಿಯಲ್ಲಿನ ಅಂಶಗಳು ಬಹಿರಂಗವಾದುದೇ ಈ ಯೋಜನೆ ಕೈ ಬಿಡಲು ಕಾರಣ ಎಂದು ಎಲ್ಲ ಮಾಧ್ಯಮಗಳೂ ಬಣ್ಣಿಸಿದುವು. ಆ ಡೈರಿಯಲ್ಲಿ, ‘ಉಕ್ಕಿನ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ನೀಡಲು 65 ಕೋಟಿ ರೂಪಾಯಿ ಲಂಚ ತೆಗೆದುಕೊಳ್ಳಲಾಗಿದೆ’ ಎಂಬ ಅಂಶ ಇತ್ತು. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರು, ‘ಈ ಲಂಚದ ಹಣ ನೇರವಾಗಿ ಮುಖ್ಯಮಂತ್ರಿಗಳ ಕುಟುಂಬದ ಕೈಗೆ ಹೋಗಿದೆ’ ಎಂದು ಆರೋಪಿಸಿದ ಮರುದಿನವೇ ಉಕ್ಕಿನ ಸೇತುವೆ ಯೋಜನೆ ಮುರಿದು ಬಿದ್ದಿದೆ.ಉಕ್ಕಿನ ಸೇತುವೆ ಯೋಜನೆ ವಿರುದ್ಧ ಜನರು ಈಗ ಯಾವ ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ರಾಮಚಂದ್ರ ಗುಹಾ, ಎಸ್‌.ಜಿ.ವಾಸುದೇವ್‌, ಗಿರೀಶ್‌ ಕಾರ್ನಾಡ, ಅರುಂಧತಿ ನಾಗ್‌, ಸುರೇಶ್‌ ಹೆಬ್ಳೀಕರ್‌ ಅವರಂಥ ಸಾರಸ್ವತ ಲೋಕದ ಅನೇಕ ಹಿರಿಯರು ಬೀದಿಗೇ ಬಂದು ಉಕ್ಕಿನ ಸೇತುವೆ ‘ಬೇಡ’ ಎಂದು ಎಷ್ಟೇ ಘೋಷಣೆ ಕೂಗಿದ್ದರೂ ಸರ್ಕಾರ ಜಪ್ಪಯ್ಯ ಎಂದಿರಲಿಲ್ಲ. ಯಾರೋ ಬಾಡಿಗೆ ಬಂಟರನ್ನು ಕರೆಸಿ ‘ಸೇತುವೆ ಬೇಕು’ ಎಂದು ಆಗ್ರಹಿಸುವ ಇನ್ನೊಂದು ಪ್ರತಿ ತಂಡವನ್ನು ಅದು ಸೃಷ್ಟಿಸಿತ್ತು.ಉಕ್ಕಿನ ಸೇತುವೆ ಬೇಡ ಎನ್ನುವವರಿಗೆ ಇದ್ದ ಮುಖ್ಕ ಕಾಳಜಿ ಸೇತುವೆಗಾಗಿ 800 ಕ್ಕೂ ಹೆಚ್ಚು ಮರಗಳನ್ನು ರಕ್ಷಿಸುವ ಉದ್ದೇಶ. ಈಗಾಗಲೇ ಅಂಡರ್‌ ಪಾಸ್‌ಗಳಿಗಾಗಿ, ಮೇಲ್ಸೇತುವೆಗಳಿಗಾಗಿ ರಸ್ತೆ ಬದಿಯ ಅನೇಕ ವಿಶಾಲ ಮರಗಳನ್ನು ಕಳೆದುಕೊಂಡಿರುವ ಬೆಂಗಳೂರು ಈಗ ಬೆಂಕಿಯ ಉಂಡೆಯಾಗಿದೆ. ಉಕ್ಕಿನ ಸೇತುವೆ ನಿರ್ಮಿಸಿದರೆ ಒಂದು ಕಡೆ ರಸ್ತೆ ಬದಿಯ ಮರಗಳನ್ನು ಕತ್ತರಿಸಬೇಕಾಗುತ್ತದೆ, ಇನ್ನೊಂದು ಕಡೆ ಅಷ್ಟು ಪ್ರಮಾಣದ ಉಕ್ಕು ವಾತಾವರಣವನ್ನು ಮತ್ತಷ್ಟು ಬಿಸಿ ಮಾಡುತ್ತದೆ ಎನ್ನುವ ಚಿಂತೆ ಅವರದಾಗಿತ್ತು. ‘ವಿಮಾನ ನಿಲ್ದಾಣಕ್ಕೆ ಹೋಗುವವರ ಬಗೆಗೆ ಮಾತ್ರ ಸರ್ಕಾರಕ್ಕೆ ಏಕೆ ಕಾಳಜಿ, ಬೆಂಗಳೂರಿನ ಉಳಿದ ಕಡೆಗಳಲ್ಲಿ ಸಂಚಾರ ದಟ್ಟಣೆ ಇಲ್ಲವೇ? ಅಲ್ಲಿ ಯಾವ ಪರ್ಯಾಯಗಳನ್ನೂ ಏಕೆ ಯೋಚಿಸುತ್ತಿಲ್ಲ’ ಎನ್ನುವುದು ಕೂಡ ಹೋರಾಟಗಾರರ ಆಕ್ಷೇಪವಾಗಿತ್ತು. ಸಾವಿರಾರು ನಾಗರಿಕರು ಸ್ವಯಂ ಪ್ರೇರಣೆಯಿಂದ ಬೀದಿಗೆ ಬಂದು ಮಾನವ ಸರಪಳಿ ನಿರ್ಮಿಸಿ ‘ಉಕ್ಕಿನ ಸೇತುವೆ ಬೇಡ’ ಎಂದು ಪ್ರತಿಭಟನೆ ನಡೆಸಿದ್ದಾಗ ಸರ್ಕಾರ ಅದಕ್ಕೆ ಮನ್ನಣೆ ಕೊಟ್ಟು ಯೋಜನೆ ಕೈ ಬಿಡುವ ತೀರ್ಮಾನ ಪ್ರಕಟಿಸಿದ್ದರೆ ಅದಕ್ಕೂ ಗೌರವ ಬರುತ್ತಿತ್ತು. ಸಾರ್ವಜನಿಕರಿಗೂ ತಮ್ಮ ಹೋರಾಟಕ್ಕೆ ಬೆಲೆ ಸಿಕ್ಕಿತು ಎಂದು ಸಂತೋಷವಾಗುತ್ತಿತ್ತು.    ಆಗಲೂ, ‘ಸರ್ಕಾರದಲ್ಲಿ ಇದ್ದವರಿಗೆ ಲಂಚ ಸಂದಾಯವಾಗಿದೆ’ ಎಂಬ ಆರೋಪ ಇತ್ತು. ಅದಕ್ಕೆ ಸಾಕ್ಷ್ಯ ಇರಲಿಲ್ಲ ಅಷ್ಟೇ. ಈಗ ಗೋವಿಂದರಾಜ್‌ ಡೈರಿಯಲ್ಲಿ ಅದಕ್ಕೆ ಸಾಕ್ಷ್ಯ ಸಿಕ್ಕಿದೆ. ಅದನ್ನು ನಂಬಬೇಕೋ ಬೇಡವೋ ಎಂಬುದು ಬೇರೆ ವಿಚಾರ. ಆದರೆ, ಗೋವಿಂದರಾಜ್‌ ಅವರು ಅದು ತಮ್ಮ ಮನೆಯಲ್ಲಿ ಸಿಕ್ಕ ಡೈರಿ ಅಲ್ಲ ಎಂದು ಹೇಳಿಲ್ಲ. ತಮ್ಮ ಮನೆಗೆ ಬಂದವರು ಯಾರೋ ಅದನ್ನು ಬಿಟ್ಟು ಹೋಗಿದ್ದಾರೆ. ಅದು ‘ಮೈಸ್ಟೀರಿಯಸ್‌’ (!)  ಡೈರಿ ಎಂದು ಅವರು ಹೇಳಿದ್ದಾರೆ. ಆದರೆ, ಅವರ ಮನೆಗೆ ಯಾರು ಬಂದಿದ್ದರು? ಆ ಡೈರಿಯನ್ನು ಅವರೇಕೆ ಇವರ ಮನೆಯಲ್ಲಿ ಬಿಟ್ಟು ಹೋದರು? ಆದಾಯ ತೆರಿಗೆ ಅಧಿಕಾರಿಗಳು ಅವರ ಮನೆಗೆ ತಪಾಸಣೆಗೆ ಬಂದಾಗ ಆ ಡೈರಿ ಅವರಿಗೆ ಸಿಗುವ ವರೆಗೆ ಅದು ಎಲ್ಲಿ ಇತ್ತು? ಅವರ ಮನೆಗೆ ಬಂದವರು ಯಾರೋ ಅದನ್ನು ಪಡಸಾಲೆಯಲ್ಲಿ ಬಿಟ್ಟು ಹೋಗಿದ್ದರೆ ಅದನ್ನು ಗೋವಿಂದರಾಜ್‌ ಏಕೆ ಗಮನಿಸಲೇ ಇಲ್ಲ? ಪ್ರಶ್ನೆಗಳು ಏಳುವುದು ಸಹಜ. ಅದಕ್ಕೆ ಗೋವಿಂದರಾಜ್‌ ಇದುವರೆಗೆ ಕೊಟ್ಟ  ಉತ್ತರಗಳು ಸಮಾಧಾನಕರವಾಗಿಲ್ಲ.ಗೋವಿಂದರಾಜ್‌ ಅವರು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಮಾತ್ರವಲ್ಲ ಅವರ ಆಪ್ತ ವಲಯಕ್ಕೆ ಸೇರಿದ ಶಾಸಕರೂ ಹೌದು. ಅಂಥವರ ಮನೆಯಲ್ಲಿ ಸಿಕ್ಕ ಡೈರಿ ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡ ಒಂದು ಮಾಹಿತಿ ಹೀಗೆ ಬಹಿರಂಗವಾದುದನ್ನು ಗಮನಿಸಿದರೆ ಅದರ ಹಿಂದೆ, ಇಡೀ ದೇಶದಲ್ಲಿ ಇರುವ, ಏಕೈಕ ದೊಡ್ಡ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರವೂ ಎದ್ದು ಕಾಣುತ್ತದೆ. ಯುದ್ಧದಲ್ಲಿ, ಪ್ರೇಮದಲ್ಲಿ ಎಲ್ಲವೂ ಸರಿ. ಈಗ ಸಮರ ಕಾಲ. ಡೈರಿಯ ಅಂಶಗಳು ಬಹಿರಂಗವಾಗಿರುವುದು ಸಮರ ಕಾಲ ಇನ್ನೂ ಬೇಗ ಸನ್ನಿಹಿತವಾಗಬಹುದು ಎಂಬುದರ ಸಂಕೇತವೂ ಆಗಿರಬಹುದು.ಆದರೆ, ನಮ್ಮ ಆಡಳಿತ ವ್ಯವಸ್ಥೆ ಹೇಗೆ ಕೊಳೆಯುತ್ತಿದೆ ಎಂಬುದಕ್ಕೆ ಡೈರಿಯಲ್ಲಿನ ಅಂಶಗಳು ಕನ್ನಡಿ ಹಿಡಿದಿವೆ. ಅದರಲ್ಲಿ ಇರುವ ಸಂಕ್ಷಿಪ್ತ ಅಕ್ಷರಗಳು ಸಂಪುಟದಲ್ಲಿ ಇರುವ ಸಚಿವರ ಹೆಸರಿನ ಸಂಕ್ಷಿಪ್ತ ರೂಪಕ್ಕೂ ತಾಳೆ ಆಗುತ್ತವೆ. ‘ಆಯಾ ಸಚಿವರು ಅವರ  ಹೆಸರಿನ ಮುಂದೆ ಕಾಣಿಸಿದ ಮೊತ್ತವನ್ನು ಹೈಕಮಾಂಡಿಗೆ ತಲುಪಿಸಿದ್ದಾರೆ’ ಎಂಬ ಮಾಹಿತಿ ಡೈರಿಯಲ್ಲಿ ಇದೆ ಎಂಬ ಆರೋಪ ಕೇಳಿ ಬಂದಿದೆ. ಇದು ಹೊಸದೇನೂ ಅಲ್ಲ. ಎಲ್ಲ ಪಕ್ಷಗಳ ಸರ್ಕಾರಗಳಲ್ಲಿಯೂ ಇದು ನಡೆದಿದೆ. ಪ್ರಾದೇಶಿಕ ಪಕ್ಷಗಳ ಸರ್ಕಾರ  ಇದ್ದಾಗಲೂ ಪಕ್ಷದ ವ್ಯವಹಾರ ನೋಡಿಕೊಳ್ಳುವವರ ಮನೆಗಳಿಗೆ ಕಪ್ಪ ಸಂದಾಯ ಆಗಿಯೇ ಆಗುತ್ತದೆ.ಯಾರೂ ಮನೆಯಿಂದ ಹಣ ಹಾಕಿ ಚುನಾವಣೆ ಮಾಡಲು ಆಗುವುದಿಲ್ಲ. ಭ್ರಷ್ಟಾಚಾರದ ವಿಷವರ್ತುಲ ತಿರುಗಲು ಆರಂಭಿಸುವುದು ನಮ್ಮ ಹಾಲಿ ಚುನಾವಣೆ ವ್ಯವಸ್ಥೆಯ ಕಾರಣವಾಗಿ ಎನ್ನುವುದು ಸ್ಫಟಿಕ ಸ್ಪಷ್ಟವಾಗಿದೆ. ಬೃಹತ್‌ ಯೋಜನೆಗಳು ಹುಟ್ಟಿಕೊಳ್ಳುವುದು ಪಕ್ಷಕ್ಕೆ ಮತ್ತು ಸ್ವಂತಕ್ಕೆ ನಿಧಿ ಸಂಗ್ರಹಿಸಲು ಎಂಬುದೂ ಅಷ್ಟೇ ಸ್ಫಟಿಕ ಸ್ಪಷ್ಟವಾಗಿದೆ. ಉಕ್ಕಿನ ಸೇತುವೆ ನಿರ್ಮಾಣಕ್ಕಾಗಿ ಸರ್ಕಾರದಲ್ಲಿ ಇದ್ದವರಿಗೆ ಎಷ್ಟು ಲಂಚ ಸಿಕ್ಕಿದೆ ಎಂದು ಡೈರಿಯಲ್ಲಿ ಉಲ್ಲೇಖ ಇರುವುದು ಮತ್ತು ಸರ್ಕಾರ ಆ ಯೋಜನೆಯನ್ನು ಕೈ ಬಿಡಲು ನಿರ್ಣಯಿಸಿರುವುದು ಒಂದಕ್ಕೊಂದು ಸಂಬಂಧ ಇಲ್ಲದ ಸಂಗತಿ ಎಂದು ಹೇಗೆ ಅರ್ಥೈಸುವುದು?ಉಕ್ಕಿನ ಸೇತುವೆ ನಿರ್ಮಾಣದ ಯೋಜನೆಯನ್ನು ಸಾರ್ವಜನಿಕರ ಒತ್ತಡಕ್ಕೆ ಮಣಿದು ಕೈ ಬಿಟ್ಟಿದ್ದೇ ನಿಜವಾದರೆ ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾಗಿದ್ದ 2011ನೇ ತಂಡದ 362 ಜನ ಅಧಿಕಾರಿಗಳಿಗೆ ನೇಮಕ ಆದೇಶ ಕೊಡುವುದಕ್ಕೆ ಇದ್ದ ಸಾರ್ವಜನಿಕ ಅಭಿಪ್ರಾಯವನ್ನೂ ಸರ್ಕಾರ  ಗಣನೆಗೆ ತೆಗೆದುಕೊಳ್ಳಬೇಕಿತ್ತು.ಇವೆಲ್ಲ ಅಪ್ರಿಯ ಸತ್ಯಗಳು. ಅರಗಿಸಿಕೊಳ್ಳಲು ಆಗದ ಸತ್ಯಗಳು. ಈ ನೇಮಕ ಪ್ರಕ್ರಿಯೆ ಎಷ್ಟು ಭ್ರಷ್ಟವಾಗಿತ್ತು ಎಂಬುದಕ್ಕೆ ಒಂದಲ್ಲ ಎರಡಲ್ಲ ಅನೇಕ ಸಾಕ್ಷ್ಯಗಳು ಸಿಕ್ಕಿವೆ. ಆಗಿನ್ನೂ ರಾಜ್ಯದಲ್ಲಿ ಈಗಿನ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಿರಲಿಲ್ಲ. ವಿಧಾನಸಭೆ ಚುನಾವಣೆ ನಡೆಯುತ್ತಿತ್ತು. ಅದೇ ಸಮಯದಲ್ಲಿ ಈ 362 ಹುದ್ದೆಗಳ ನೇಮಕಕ್ಕೆ ಸಂದರ್ಶನವೂ ನಡೆಯುತ್ತಿತ್ತು. ‘ಸಂದರ್ಶನ ಮಾಡುವುದು ಚುನಾವಣೆ ನೀತಿ ಸಂಹಿತೆಗೆ  ವಿರುದ್ಧ; ನಿಲ್ಲಿಸಬೇಕು’ ಎಂದು ಚುನಾವಣೆ ಆಯೋಗ ಪತ್ರ ಬರೆದರೆ ಕೆಪಿಎಸ್‌ಸಿ ಆ ಕಡೆ ಕಣ್ಣೆತ್ತಿಯೂ ನೋಡಲಿಲ್ಲ. ಚುನಾವಣೆ ಆಯೋಗದಂಥ ಸಾಂವಿಧಾನಿಕ ಸಂಸ್ಥೆಯ ಸೂಚನೆಯನ್ನೂ ನಿರ್ಲಕ್ಷಿಸಿ ಸಂದರ್ಶನ ನಡೆಸಲು ಇದ್ದ ತರಾತುರಿಗೆ ಅನ್ಯ ಉದ್ದೇಶಗಳೇ ಇದ್ದುವು. ಸಂದರ್ಶನ ನಡೆಯುವಾಗಲೇ ಅಭ್ಯರ್ಥಿಗಳಿಗೆ ಕೆಪಿಎಸ್‌ಸಿ ಸದಸ್ಯರಿಂದ ಕರೆಗಳು ಹೋದುವು, ಅಭ್ಯರ್ಥಿಗಳಿಂದ ಸದಸ್ಯರ ಕಡೆಯವರಿಗೂ ಕರೆಗಳು ಬಂದುವು.ಆಯ್ಕೆಯಲ್ಲಿ ಅಕ್ರಮ ನಡೆಯುತ್ತಿದೆ ಎಂಬುದು ರಹಸ್ಯವಾಗಿಯೇನೂ ಉಳಿಯಲಿಲ್ಲ. ಈ ಸರ್ಕಾರ ಅಧಿಕಾರ ವಹಿಸಿಕೊಂಡು ಇನ್ನೂ ಒಂದು ತಿಂಗಳು ಕಳೆಯುವುದರ ಒಳಗೆಯೇ ಇಡೀ ಹಗರಣದ ಬಗೆಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗಿನ ಅಡ್ವೊಕೇಟ್‌ ಜನರಲ್‌ ಅವರು ಸರ್ಕಾರಕ್ಕೆ ಶಿಫಾರಸು ಮಾಡಿದರು. ಬದಲಿಗೆ, ಸರ್ಕಾರ ಸಿಐಡಿ ತನಿಖೆಗೆ ಆದೇಶ ಮಾಡಿತು. ಸಿಐಡಿ ಕೊಟ್ಟ ವರದಿಯ ಅಂಶಗಳೆಲ್ಲ ಈಗ ಬಹಿರಂಗವಾಗಿವೆ. ಕೆಪಿಎಸ್‌ಸಿಯ ಏಳು ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲು ಸಿಐಡಿ ಸಿದ್ಧತೆ ನಡೆಸಿದೆ. ಇವರ ವಿರುದ್ಧ ಮೊಕದ್ದಮೆ  ಹೂಡಿದ್ದು ರಾಜ್ಯ ಸರ್ಕಾರ ಎಂಬುದನ್ನು ಇಲ್ಲಿ ಉಲ್ಲೇಖಿಸಲೇಬೇಕು.ಈಗ ಸರ್ಕಾರ ಸಂಪೂರ್ಣವಾಗಿ ತನ್ನ ನಿಲುವನ್ನು ಬದಲಿಸಿದೆ. ಕರ್ನಾಟಕ ಆಡಳಿತ ಮಂಡಳಿ (ಕೆ.ಎ.ಟಿ) ಕೊಟ್ಟ ಆದೇಶವನ್ನು ನೆಪವಾಗಿ ಇಟ್ಟುಕೊಂಡು 46 ಮಂದಿ ಕಳಂಕಿತರೂ ಸೇರಿದಂತೆ ಎಲ್ಲ 362 ಮಂದಿಯನ್ನು ನೇಮಕ ಮಾಡಲು ಸಂಪುಟ ನಿರ್ಣಯಿಸಿದೆ. ಈ ಹಗರಣದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಿದ ಮಾತುಗಳು ಸಾರ್ವಜನಿಕ ಸ್ಮೃತಿಯಿಂದ ಇನ್ನೂ ಮರೆಯಾಗಿ ಹೋಗಿಲ್ಲ. ಅವರ ನಿಲುವು ಬದಲಾಗಲು ಏನು ಕಾರಣವಾಯಿತು? ಅವರು ತಾವೇ ನೇಮಿಸಿದ ಸಿಐಡಿ ತನಿಖೆಯ ವಿಚಾರಣೆಯನ್ನು ಅಲ್ಲಗಳೆದರೇ? ಆಗಿನ ಮತ್ತು ಈಗಿನ ಅಡ್ವೊಕೇಟ್‌  ಜನರಲ್‌ ಅವರು ಕೊಟ್ಟ ತಜ್ಞ ಅಭಿಪ್ರಾಯವನ್ನು ತಳ್ಳಿ ಹಾಕಿದರೇ?  ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಯ ಕಾರ್ಯದರ್ಶಿ ಮೊನ್ನೆ ನಡೆದ ಸಂಪುಟ ಸಭೆ ಮುಂದೆ ಮಂಡಿಸಿದ್ದ, 2011ನೇ ತಂಡದ ಆಯ್ಕೆ ಪ್ರಕ್ರಿಯೆಯ ಕರ್ಮಕಾಂಡವನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದ್ದ, 30 ಪುಟಗಳ ಸುದೀರ್ಘ ವರದಿಯನ್ನು  ಉಪೇಕ್ಷಿಸಿದರೇ?ಇದನ್ನೆಲ್ಲ ತಳ್ಳಿ ಹಾಕಲು ನಿರ್ಧರಿಸಿ, ಸಂಪುಟದ ಮುಂದೆ ಸಂಬಂಧಪಟ್ಟ ಕಡತವನ್ನು ಮಂಡಿಸಲು ಸೂಚಿಸಿ  ಮುಖ್ಯಮಂತ್ರಿಗಳು ಬರೆದಿರುವ ನೋಟ್‌ ಆಶ್ಚರ್ಯ ಹುಟ್ಟಿಸುತ್ತದೆ. ಯಾವುದೇ ಒಂದು ನೇಮಕಾತಿಗಾಗಿ ಅರ್ಜಿ ಸಲ್ಲಿಸಿದವರು ಆಯ್ಕೆ ಸಮಿತಿ ಸದಸ್ಯರನ್ನು ಸಂಪರ್ಕಿಸಿರುವುದು ಅವರ ನೇಮಕಾತಿಗೆ ಅಡ್ಡಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ,  ಆಯ್ಕೆ ಪ್ರಾಧಿಕಾರದ ಸದಸ್ಯರ ಜೊತೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿ ಸಂಪರ್ಕ ಸಾಧಿಸಲು ಯತ್ನಿಸುವುದು ಅವರ ನೇಮಕಕ್ಕೆ ಅನರ್ಹತೆ ಎಂದು ಪರಿಗಣಿಸಲಾಗುವುದು ಎಂದು ಅನೇಕ ನೇಮಕಾತಿ ಅರ್ಜಿ ಅಧಿಸೂಚನೆಯಲ್ಲಿ ಉಲ್ಲೇಖಿಸುವುದನ್ನು ಮುಖ್ಯಮಂತ್ರಿಗಳು ಗಮನಿಸಬೇಕಿತ್ತು.ಈ 362 ಮಂದಿಯಲ್ಲಿ ಕೆಲವರು ಕೆಪಿಎಸ್‌ಸಿ ಸದಸ್ಯರ ಜೊತೆಗೆ ದೂರವಾಣಿಯಲ್ಲಿ ಏನು ಮಾತನಾಡಿದರು ಎಂಬುದು ಗೊತ್ತಿಲ್ಲವಾದರೂ ಒಬ್ಬ ಅಭ್ಯರ್ಥಿ ಆಯ್ಕೆ ಪ್ರಾಧಿಕಾರದ ಸದಸ್ಯರ ಜೊತೆಗೆ ಉಭಯ ಕುಶಲೋಪರಿ ಮಾತನಾಡಲು ಕರೆ ಮಾಡುತ್ತಾರೆಯೇ? ಇನ್ನೂ ವಿಚಿತ್ರ ಎಂದರೆ ಕೆಪಿಎಸ್‌ಸಿ ಸದಸ್ಯರೇ ಅಭ್ಯರ್ಥಿಗಳಿಗೆ ಕರೆ ಮಾಡಿರುವುದು ಏನನ್ನು ಸೂಚಿಸುತ್ತದೆ? ಇದೆಲ್ಲ ಇಷ್ಟು ಅಮಾಯಕ ಎಂದು ಹೇಗೆ ನಂಬುವುದು?ಕೆ.ಎ.ಟಿಯ ಆದೇಶ ನೇಮಕಾತಿ ಪರವಾಗಿ ಇರುವುದು ನಿಜ. ಆದರೆ, ಕೆ.ಎ.ಟಿಯ ಆದೇಶವೇ ಅಂತಿಮವಲ್ಲ. ಅದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬೇಕಿತ್ತು. ನ್ಯಾಯದಾನ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿಯೂ ಅವರಿಗೆ ನೇಮಕಾತಿ ಆದೇಶ ಕೊಡಬೇಕು ಎಂಬ ತೀರ್ಪು ಬಂದಿದ್ದರೆ ಅದನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಈಗ ನೋಡಿದರೆ ಅಂಥ ಆಯ್ಕೆಗಳೇ ಸರ್ಕಾರಕ್ಕೆ ಬೇಡವಾಗಿತ್ತು ಎಂದು ಅನಿಸುತ್ತದೆ. ತರಾತುರಿಯಲ್ಲಿ ನೇಮಕಾತಿ ಆದೇಶ ಹೊರಡಿಸಬೇಕಿತ್ತು; ಹಾಗೆ ಆದೇಶ ಮಾಡಬೇಕು ಎಂಬ ಒತ್ತಡ ಮುಖ್ಯಮಂತ್ರಿಗಳ ಮೇಲೆ ಇತ್ತು. ಅದಕ್ಕೆ ಅವರು ಮಣಿದರು. ಈಗ ಏನಾಯಿತು ಎಂದರೆ ತೆರೆಯ ಮರೆಯಲ್ಲಿ ಇರುವ ಯಾರಿಗೋ ಮೂರನೆಯವರಿಗೆ ಇದರಿಂದ ಲಾಭವಾಯಿತು. ಸರ್ಕಾರಕ್ಕೆ ಕಳಂಕ ಅಂಟಿಕೊಂಡಿತು. ಇಂಥ ಕಳಂಕ ಪರಂಪರೆ ಮುಂದುವರಿಯಲು ಸರ್ಕಾರದ ಈಗಿನ ನಿರ್ಣಯ ದಾರಿ ಮಾಡಿಕೊಟ್ಟಿತು.ಭ್ರಷ್ಟಾಚಾರದ ವಿಷವರ್ತುಲ ಎಷ್ಟು ಪ್ರಬಲವಾಗಿರುತ್ತದೆ ಎಂದರೆ ಕಾನೂನನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಅದು ಮಣಿಸುತ್ತದೆ. ಇಲ್ಲಿ ಅನೇಕ ತಿಂಗಳುಗಳ ಕಾಲ ಕಷ್ಟಪಟ್ಟು ನಡೆಸಿದ ಸಿಐಡಿ ತನಿಖೆ ಅರ್ಥ ಕಳೆದುಕೊಳ್ಳುತ್ತದೆ. ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯಕ್ಕೆ ಬೆಲೆ ಇಲ್ಲದಂತೆ ಆಗುತ್ತದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಹಿರಿಯ ಅಧಿಕಾರಿ ಕೊಟ್ಟ ಸುದೀರ್ಘ ವರದಿ ಕಸದ ಬುಟ್ಟಿಗೆ ಸೇರುತ್ತದೆ. ದೊಡ್ಡ ದುರಂತ ಎಂದರೆ ಸಚಿವ ಸಂಪುಟ ತಾನೇ ತೆಗೆದುಕೊಂಡ ನಿರ್ಣಯವೂ ಮರೆತು ಹೋಗುತ್ತದೆ.ಈಗ ನೇಮಕಾತಿ ಆದೇಶ ಪಡೆಯಲಿರುವ ಪಟ್ಟಿಯಲ್ಲಿ 46 ಮಂದಿ ಕಳಂಕಿತರು ಇದ್ದಾರೆ ಎಂಬುದು ಜಗಜ್ಜಾಹೀರು ಆಗಿದೆ. ಅವರು ಸಹಾಯಕ  ಕಮಿಷನರ್‌ ಆಗಿಯೋ ಅಥವಾ ಇನ್ನಾವುದೋ ಉನ್ನತ ಅಧಿಕಾರಿಯೋ ಹೇಗೆ ಕಾರ್ಯ ನಿರ್ವಹಿಸುತ್ತಾರೆ ಎಂದು ಊಹಿಸುವುದು ಅಷ್ಟು ಕಷ್ಟವೇ? ಒಬ್ಬ ಅಧಿಕಾರಿ ಮೂರು ದಶಕಗಳಿಗಿಂತ ಹೆಚ್ಚು ಅವಧಿಗೆ ಅಧಿಕಾರದಲ್ಲಿ ಇರುತ್ತಾರೆ. ಈ ಅವಧಿಯಲ್ಲಿ ಜನರಿಗೆ ಎಷ್ಟು ಕಿರುಕುಳ ಕೊಡಬಹುದೋ ಅಷ್ಟು ಕಿರುಕುಳ ಕೊಡುತ್ತಾರೆ. ಎಷ್ಟು ಭ್ರಷ್ಟಾಚಾರ ಮಾಡಬಹುದೋ ಅಷ್ಟು ಭ್ರಷ್ಟಾಚಾರ ಮಾಡುತ್ತಾರೆ. ನಿನ್ನೆ ಮೊನ್ನೆಯ ಉದಾಹರಣೆಯನ್ನೇ ಕೊಡಬಹುದಾದರೆ ಒಬ್ಬ ಅಧಿಕಾರಿ ಮನೆಯಲ್ಲಿ 15 ಕೋಟಿ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಸಿಗುತ್ತದೆ, ಆಭರಣಗಳು ಸಿಗುತ್ತವೆ. ಇನ್ನೊಬ್ಬ ಅಧಿಕಾರಿಯ ಹೆಂಡತಿಯ ಬೀರುವಿನಲ್ಲಿ ಸಾವಿರಾರು  ರೇಷ್ಮೆ ಸೀರೆಗಳು ಸಿಗುತ್ತವೆ. ಎಷ್ಟು ಸಿಗುತ್ತವೆ ಎಂದರೆ ಒಂದು ಸಾರಿ ಉಟ್ಟುಕೊಂಡ ಸೀರೆಯನ್ನು ಮತ್ತೊಮ್ಮೆ ಉಟ್ಟುಕೊಳ್ಳಲು ಅವರಿಗೆ 15 ವರ್ಷ ಬೇಕಾಗುತ್ತವೆ!ಇದೆಲ್ಲ ಕಾಕತಾಳೀಯ ಇರಲಾರದು; ಆಕಸ್ಮಿಕವೂ ಆಗಿರಲಾರದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry