ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಪತಿಯ ಮೋಹಕ ನೃತ್ಯಪ್ರಸ್ತುತಿ

ನಾದನೃತ್ಯ
Last Updated 5 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಅಭಿನಯಪ್ರಧಾನ ನೃತ್ಯಕೃತಿಗಳನ್ನೇ ಆಯ್ದುಕೊಂಡು ಜೀವತುಂಬಿದ ನೃತ್ಯ ಕಲಾವಿದೆ ಪೂಜಾ ಅನೀಶ್ ರಾವ್ ಇತ್ತೀಚಿಗೆ ವಿಜಯನಗರದ ಕಾಸಿಯಾ ಭವನದಲ್ಲಿ ‘ರಂಗಪ್ರವೇಶ’ ಮಾಡಿದಳು. ಈಕೆ, ನಾಟ್ಯಗುರು ಸಂಧ್ಯಾ ಕೇಶವರಾವ್ ಅವರ ಸೊಸೆ ಹಾಗೂ ಶಿಷ್ಯೆ.

ಆದಿವಂದ್ಯ ಗಣೇಶಸ್ತುತಿ (ರಾಗಮಾಲಿಕೆ) ‘ಗಜಮುಖನೆ ವಂದಿಸುವೆ’ ಕೃತಿಯ ಪ್ರಸ್ತುತಿಯಲ್ಲಿ ಗಣೇಶನ ಜನ್ಮವೃತ್ತಾಂತಕವನ್ನು ಸುಂದರವಾಗಿ ನಿರೂಪಿಸಿದಳು ಪೂಜಾ. ನೃತ್ತಗಳೊಂದಿಗೆ ಗಣಪನ ಹುಟ್ಟಿನ ಕಥೆ, ಸಂಚಾರಿಯಲ್ಲಿ ವಿಷದವಾಗಿ ಸಾಗಿದ್ದು ವಿಶೇಷ.

ಪ್ರತಿಘಟನೆಯ ವಿವರಗಳು ಪರಿಣಾಮಕಾರಿಯಾಗಿ ಮೂಡಿಬಂದವು. ಪಾರ್ವತಿಯ ಸ್ನಾನಗೃಹದ ಬಾಗಿಲಲ್ಲಿ ಕಾವಲು ನಿಂತ ಗಣಪನನ್ನು ಶಿವ ಕೆಕ್ಕರಿಸುವ ರೀತಿ, ಕೋಪಾಧಿಕ್ಯ, ಸಿಟ್ಟಿನ ಹೆಜ್ಜೆ, ಪ್ರಹಾರದ ಅಭಿನಯ ಮನೋಜ್ಞವಾಗಿತ್ತು.

ಹಂಸಧ್ವನಿಯ ‘ಬ್ರಹ್ಮಸಂಧಿ ಕೌತ್ವಂ’ (ಖಂಡಛಾಪು ತಾಳ) ಕೃತಿಯಲ್ಲಿ ಗಾಯತ್ರಿ, ಸಾವಿತ್ರಿ ಮತ್ತು ಸರಸ್ವತಿಯರ ವರ್ಣನೆಯನ್ನು, ಆಕರ್ಷಕ ಭಂಗಿ ಹಾಗೂ ಅರ್ಥಪೂರ್ಣ ಹಸ್ತಚಲನೆ ಕೂಡಿದ ನೃತ್ಯದಲ್ಲಿ ಕಲಾವಿದೆ ಭಾವಸ್ಫುರಣವಾದ ಅಭಿನಯ ನೀಡಿದಳು.

ಮುಂದೆ ‘ರಾಮಾಯಣ ಶಬ್ದಂ’, ಸೀತಾ ಕಲ್ಯಾಣ, ಮಾರೀಚ ವಧೆ ಮತ್ತು ಸೀತಾಪಹರಣದ ಕಥೆ, ರಾಗಮಾಲಿಕೆ, ಮಿಶ್ರಛಾಪು  ತಾಳದಲ್ಲಿ ಅತ್ಯಂತ ಭಾವಪೂರಿತವಾಗಿ ಅನಾವರಣಗೊಂಡಿತು. ರಾಮನ ಸಾತ್ವಿಕಾಭಿನಯ, ಸೀತೆಯ ಲಜ್ಜಾನಿತ ಬೆಡಗು ಶಿವಧನಸ್ಸು ಛೇದನದ ದೃಶ್ಯದಲ್ಲಿ ಕಂಡರೆ, ಮಾರೀಚವಧೆಯಲ್ಲಿ ಸೀತೆಯ ಜಿಂಕೆ ಪ್ರೀತಿ ತಂದ ಕಷ್ಟ, ಸೀತಾಪಹರಣದ ಘಟನೆಯಲ್ಲಿ ಮಾನಿನಿಯ ಭಯ-ವೇದನೆಗಳನ್ನು ಪೂಜಾ ಅನನ್ಯವಾಗಿ ಅಭಿವ್ಯಕ್ತಿಸಿದಳು.

ರಾಘವನ ಧೀಮಂತ ನಡೆಯನ್ನು ಒಪ್ಪವಾಗಿ ತೋರಿದವಳು, ರಾವಣನಾದಾಗ ಪೌರುಷದಿಂದ ಕೆನೆದು ಹಾಕಿದ ದೈತ್ಯ ಹೆಜ್ಜೆಗಳು, ತೋರಿದ ಭೀಕರ ಸ್ವರೂಪ  ಕಲಾವಿದೆಯ ಪ್ರತಿಭೆಗೆ ಕನ್ನಡಿ ಹಿಡಿದವು.

ವಿಪ್ರಲಂಭ ಶೃಂಗಾರದ ವಿರಹೋತ್ಖಂಠಿತ ವಲ್ಲಿದೇವಿ, ಪಳನಿಪುರವಾಸಿ ಷಣ್ಮುಖನಲ್ಲಿ ಪ್ರೇಮ ನಿವೇದಿಸುವ ಅಪರೂಪದ ಹಿಂದೋಳ ರಾಗದ ‘ವರ್ಣ’ ಕೃತಿಯನ್ನು ಕಲಾವಿದೆ ಹೃದಯಸ್ಪರ್ಶಿಯಾಗಿ ನಿರೂಪಿಸಿದಳು. ಪ್ರಿಯತಮನನ್ನು ಕಾಣುವ ಸಂತಸ, ಸಿದ್ಧತೆಯ ಸಂಭ್ರಮ, ನಲಿವಿನ ಚಲನೆಗಳು ಚೇತೋಹಾರಿಯಾಗಿದ್ದವು. ನಿರೀಕ್ಷೆಯ ಕನವರಿಕೆಯಲ್ಲಿ ನಾಯಕಿ ತೂಕಡಿಸುವಂಥ ನವಿರು ಸೂಕ್ಷ್ಮಗಳನ್ನು ಸಂಯೋಜಿಸಿರುವ ಕಲಾಪ್ರಜ್ಞೆ ಮೆಚ್ಚುಗೆಗೆ ಪಾತ್ರವಾಗುತ್ತದೆ.

ನಂತರ ಪೂಜಾ, ತನ್ನ ಪತಿ ಅನೀಶ್ ರಾವ್ ಅವರೊಡನೆ ಸಾದರಪಡಿಸಿದ ‘ಶಿವತಾಂಡವ’ (ಪೂರ್ವೀಕಲ್ಯಾಣಿ ರಾಗ) ನೃತ್ಯ, ಪದ್ಮಚರಣ್ ಅವರ ವಿಶಿಷ್ಟ ರಚನೆ ‘ಪ್ರದೋಷ ಸಮಯದಿ...’ ಅದ್ಭುತವಾಗಿತ್ತು. ಅಜಾನುಬಾಹು ಧೃಢ ಕಾಯದ ಅನೀಶ್ ರುದ್ರತಾಂಡವದ ಅಡವುಗಳನ್ನು ಬಿರುಸಿನಿಂದ ಹಾಕುತ್ತ, ರುದ್ರ-ರಮಣೀಯ ಅಭಿನಯ ತೋರಿದರು. ದೈವೀಕತೆಯನ್ನು ಹೊರಸೂಸಿದ ಯುಗಳ ನೃತ್ಯ ಮನಸೂರೆಗೊಂಡಿತು. ಲವಲವಿಕೆಯ ಜತಿಸ್ವರಗಳಿಗೆ ಅನುಗುಣವಾಗಿ ಹೆಜ್ಜೆಯಿಟ್ಟ ಪದಗತಿಯ ಸೌಂದರ್ಯ, ಆಕರ್ಷಕ ಭಂಗಿಗಳ ಮೋಡಿ ಕಲಾಪ್ರೌಡಿಮೆಯನ್ನು ಸಾರಿತು.

ಪುರಂದರ ದಾಸರ ‘ಪೋಗದಿರಲೋ  ರಂಗ...’ ದೇವರನಾಮದಲ್ಲಿ ಪೂಜಾ, ತನ್ನ ಸ್ಮಿತವದನದ ಭಾವಗಳಿಂದ ಬಾಲಕೃಷ್ಣನ ತುಂಟಾಟಗಳನ್ನು, ಕಾಳಿಂಗಮರ್ಧನದ ಘಟನೆಯನ್ನು ಕಣ್ಣಮುಂದೆ ತಂದು ನಿಲ್ಲಿಸಿದಳು.

ಶಿವರಂಜಿನಿ ರಾಗದಲ್ಲಿ ಮೂಡಿಬಂದ ಕೊಲ್ಲೂರು ಮೂಕಾಂಬಿಕೆಯ ಮಹಿಮೆಯನ್ನು ಸಾರುವ ಕೃತಿಯಲ್ಲಿ, ದೇವಿಯ ವಿವಿಧ ರೂಪಗಳು ಶಿಲ್ಪಾಕೃತಿಯಲ್ಲಿ ಅವತರಿಸಿದವು. ಭೈರವಿ, ತ್ರಿಶೂಲಧಾರಿಣಿ, ರಣಭಯಂಕರಿಯ ರೌದ್ರತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಂತೆ, ಮೃದುಭಾಷಿಣಿಯ ಕೋಮಲತೆಯನ್ನೂ ಅಷ್ಟೇ ಸಮರ್ಪಕವಾಗಿ ಅಭಿವ್ಯಕ್ತಿಸಿದಳು.

ಪ್ರಸ್ತುತಿಯ ಅಂತಿಮ ಹಂತದಲ್ಲಿ, ಸ್ಕಂದನನ್ನು ಸ್ತುತಿಸುವ ‘ತಿಲ್ಲಾನ’ದಲ್ಲಿ ಪೂಜಾ, ತನ್ನ ತಾಜಾತನದ ಮೆರುಗಿನಿಂದ ಶುದ್ಧ ನೃತ್ತ-ನೃತ್ಯಗಳ ವಿನ್ಯಾಸಗಳನ್ನು ತೋರಿದ್ದು ಶ್ಲಾಘನೀಯವಾಗಿತ್ತು.

ಹಿಮ್ಮೇಳದಲ್ಲಿ ನಾಟ್ಯಗುರು ಸಂಧ್ಯಾ ಕೇಶವ ರಾವ್ (ಗಾಯನ), ಅನೀಶ್ ರಾವ್ (ನಟುವಾಂಗ), ಜನಾರ್ಧನ ರಾವ್ (ಮೃದಂಗ), ಮಧುಸೂದನ್ (ಪಿಟೀಲು), ನಿತೀಶ್ (ಕೊಳಲು) ಮತ್ತು ರಾಧಾಕೃಷ್ಣ ರಾವ್ (ಕೀಬೋರ್ಡ್) ಇಡೀ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT