7

ಹಗುರವಾದ ಬ್ಲೂಟೂತ್ ಸ್ಟಿರಿಯೊ ಹೆಡ್‌ಸೆಟ್

ಯು.ಬಿ. ಪವನಜ
Published:
Updated:
ಹಗುರವಾದ ಬ್ಲೂಟೂತ್ ಸ್ಟಿರಿಯೊ ಹೆಡ್‌ಸೆಟ್

ಮೊಬೈಲ್ ಫೋನ್ ಬಳಸುವವರೆಲ್ಲ ಹ್ಯಾಂಡ್ಸ್‌ಫ್ರೀ ಬಳಸಿಯೇ ಇರುತ್ತೀರ. ಇವುಗಳಲ್ಲಿ ಕೇಬಲ್ ಮೂಲಕ ಜೋಡಣೆಗೊಳ್ಳುವ  (ವಯರ್‌ಡ್) ಮತ್ತು ನಿಸ್ತಂತು (ಬ್ಲೂಟೂತ್ ವಯರ್‌ಲೆಸ್) ಎಂಬ ಎರಡು ನಮೂನೆಗಳಿವೆ. ಈ ಬ್ಲೂಟೂತ್ ಹೆಡ್‌ಸೆಟ್‌ಗಳಲ್ಲಿ ಮತ್ತೆ ಹಲವು ನಮೂನೆಗಳಿವೆ. ಕೇವಲ ಮಾತನಾಡಲು ಬಳಸುವ ಮೋನೊ ಮತ್ತು ಸಂಗೀತ ಆಲಿಸಲಿಕ್ಕೂ ಬಳಸಬಹುದಾದ ಸ್ಟಿರಿಯೊ ಹೆಡ್‌ಸೆಟ್‌ಗಳು. ಈ ಸಲ ನಾವು ವಿಮರ್ಶೆ ಮಾಡುತ್ತಿರುವುದು ಸ್ಕಲ್‌ಕ್ಯಾಂಡಿ ಇಂಕ್ಡ್‌ ವಯರ್‌ಲೆಸ್‌ ಬ್ಲೂಟೂತ್ ಹೆಡ್‌ಸೆಟ್ (Skullcandy S2IKW-J509 Ink'd Bluetooth Headphone).ಗುಣವೈಶಿಷ್ಟ್ಯಗಳು

ಬ್ಲೂಟೂತ್ ಸ್ಟಿರಿಯೊ ಹೆಡ್‌ಸೆಟ್, ಕಿವಿಕಾಲುವೆಯೊಳಗೆ ಕುಳಿತುಕೊಳ್ಳುವಂತಹದ್ದು (earbud), ಎರಡು ಪ್ರತಿ ಕುಶನ್‌ಗಳು, 85 ಡೆಸಿಬೆಲ್ (dB), ಕುತ್ತಿಗೆಗೆ ನೇತುಹಾಕುವಂತದ್ದು, ಸುಮಾರು 25 ಸೆಂ.ಮೀ. ಉದ್ದದ ಕೇಬಲ್, ರೀಚಾರ್ಜೆಬಲ್ ಬ್ಯಾಟರಿ, ನಾಲ್ಕು ಬಣ್ಣಗಳಲ್ಲಿ ಲಭ್ಯ, ಇತ್ಯಾದಿ. ನಿಗದಿತ ಬೆಲೆ ₹3,999. ಸುಮಾರು ₹3,000ಕ್ಕೆ ದೊರೆಯುತ್ತದೆ (ಅಮೆಜಾನ್).ಇದು ಕುತ್ತಿಗೆಗೆ ನೇತುಹಾಕವಂತಹ ಪಟ್ಟಿಯಂತಹ ವಿನ್ಯಾಸವುಳ್ಳದ್ದು. ಈ ಪಟ್ಟಿ ಸುಮಾರು 3 ಮಿ.ಮೀ ದಪ್ಪವಿದ್ದು, ಸುಮಾರು 8 ಮಿ.ಮೀ. ಅಗಲವಾಗಿದೆ. ಈ ಪಟ್ಟಿಯ ಒಂದು ತುದಿಯಲ್ಲಿ ದಪ್ಪನೆಯ ಅಂಗವಿದ್ದು ಅದರಲ್ಲಿ ಮೂರು ಬಟನ್‌ಗಳಿವೆ. ಮಧ್ಯದ ಬಟನ್ ಹಲವು ಕೆಲಸಗಳನ್ನು ಮಾಡುತ್ತದೆ. ಆನ್/ಆಫ್, ಫೋನ್ ಜೊತೆ ಬಳಸುವಾಗ ಕರೆ ಸ್ವೀಕರಿಸುವುದು ಮತ್ತು ನಿಲ್ಲಿಸುವುದು, ಸಂಗೀತ ಆಲಿಸುವಾಗ ತಾತ್ಕಾಲಿಕವಾಗಿ ನಿಲ್ಲಿಸುವುದು (pause) ಮತ್ತು ಪುನಃ ಪ್ರಾರಂಭಿಸುವುದು, ಇತ್ಯಾದಿ ಕೆಲಸಗಳನ್ನು ಈ ಒಂದೇ ಬಟನ್ ಮಾಡುತ್ತದೆ.

ಈ ಬಟನ್‌ನ ಮೇಲಕ್ಕೆ ವಾಲ್ಯೂಮ್ ಹೆಚ್ಚಿಸುವ ಮತ್ತು ಕೆಳಗೆ ವಾಲ್ಯೂಮ್ ಕಡಿಮೆ ಮಾಡುವ ಬಟನ್ ಇದೆ. ಈ ಬಟನ್‌ಗಳು ಸಂಗೀತ ಆಲಿಸುವಾಗ ಮುಂದಿನ ಮತ್ತು ಹಿಂದಿನ ಹಾಡುಗಳಿಗೆ ಹೋಗಲೂ ಬಳಕೆಯಾಗುತ್ತವೆ.

ಕೆಳಭಾಗದಲ್ಲಿ ಚಾರ್ಜ್ ಮಾಡಲು ಮೈಕ್ರೊ ಯುಎಸ್‌ಬಿ ಕಿಂಡಿಯಿದೆ. ಈ ಎಲ್ಲ ಬಟನ್‌ಗಳು ಇರುವ ಅಂಗ ಪಟ್ಟಿಯ ಎಡ ತುದಿಯಲ್ಲಿದ್ದು ಸ್ವಲ್ಪ ದಪ್ಪನಾಗಿದೆ. ಅದನ್ನು ಬ್ಯಾಲೆನ್ಸ್ ಮಾಡಲು ಬಲತುದಿಯಲ್ಲೂ ಅದೇ ಗಾತ್ರದ ದಪ್ಪದ ಅಂಗವಿದೆ. ಆದರೆ ಅದಕ್ಕೆ ಯಾವುದೇ ಕೆಲಸವಿಲ್ಲ.

ಕುತ್ತಿಗೆಗೆ ನೇತುಹಾಕುವ ಪಟ್ಟಿ ಮತ್ತು ಅದಕ್ಕೆ ಜೋಡಣೆಯಾಗಿರುವ ಇಯರ್‌ಬಡ್‌ಗಳ ಒಟ್ಟು ತೂಕ ತುಂಬ ಕಡಿಮೆಯಿದೆ. ಇದು ಕುತ್ತಿಗೆಯಲ್ಲಿದೆ ಎಂಬ ಭಾವನೆ ಬರುವುದಿಲ್ಲ. ಪಟ್ಟಿಯ ಗುಣಮಟ್ಟ ಚೆನ್ನಾಗಿದೆ. ನೋಡಲು ಕಳಪೆ ಗುಣಮಟ್ಟದ ಸಾಧನದಂತೆ ಕಂಡರೂ ಇದರ ಗುಣಮಟ್ಟ ಉತ್ತಮವಾಗಿದೆ. ಈ ಪಟ್ಟಿಯನ್ನು ಮಡಚಿ ಅಥವಾ ಸುತ್ತಿದಂತೆ ಮಾಡಿ ಕಿಸೆಯೊಳಗೆ ಇಟ್ಟುಕೊಳ್ಳಬಹುದು.

ಪಟ್ಟಿಯನ್ನು ಇಯರ್‌ಬಡ್‌ಗಳಿಗೆ ಜೋಡಿಸುವ ಕೇಬಲ್ ಪಟ್ಟಿಯಾಕಾರದಲ್ಲಿದ್ದರೆ ಉತ್ತಮವಿತ್ತು. ಈಗಿರುವ ಕೇಬಲ್ ತುಂಬ ತೆಳ್ಳಗಾಯಿತು ಎಂದು ನನ್ನ ಅಭಿಪ್ರಾಯ. ಈ ಕೇಬಲ್ ಮತ್ತು ಅದರ ಜೋಡಣೆಗಳು (ಇಯರ್‌ಬಡ್‌ಗೆ ಮತ್ತು ಪಟ್ಟಿಗೆ) ಎಷ್ಟು ಕಾಲ ಸುಭದ್ರವಾಗಿರಬಹುದು ಎಂದು ಈಗಲೇ ಹೇಳಲು ಕಷ್ಟ. ಯಾಕೆಂದರೆ ಈ ಹೆಡ್‌ಸೆಟ್ ಕೊಂಡುಕೊಂಡು ಒಂದು ವಾರವಾಯಿತಷ್ಟೆ.

ಈ ಹೆಡ್‌ಸೆಟ್ ಅನ್ನು ಹಾಕಿಕೊಂಡು ಓಡಬಹುದು, ವ್ಯಾಯಾಮ ಮಾಡಬಹುದು ಎಂದು ಕಂಪೆನಿಯವರು ತಮ್ಮ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನಾನೂ ಇದನ್ನು ಹಾಕಿಕೊಂಡು ನಡೆಯುವುದು, ಚಿಕ್ಕಪುಟ್ಟ ವ್ಯಾಯಾಮ ಮಾಡುವುದು ಎಲ್ಲ ಮಾಡಿ ನೋಡಿದೆ. ಅದು ಕಿವಿಯಿಂದ ಬೀಳಲಿಲ್ಲ. ಯಾವುದೇ ರೀತಿಯ ಕಿರಿಕಿರಿ ಅನ್ನಿಸಲಿಲ್ಲ, ಇದು ನೀರಿಗೆ ಬಿದ್ದರೆ ಅಥವಾ ತುಂಬ ಬೆವರು ಇದಕ್ಕೆ ವ್ಯಾಪಿಸಿದರೆ ಇದು ತಡೆದುಕೊಳ್ಳುತ್ತದೋ ಎಂದು ತಿಳಿದಿಲ್ಲ.

ಆನ್/ಆಫ್ ಬಟನ್‌ ಅನ್ನು 5 ಸೆಕೆಂಡುಗಳಷ್ಟು ಕಾಲ ಒತ್ತಿ ಹಿಡಿದರೆ ಇದು ಬ್ಲೂಟೂತ್ ಪೇರಿಂಗ್ ಮೋಡ್‌ಗೆ ಹೋಗುತ್ತದೆ. ಅಂದರೆ ಬ್ಲೂಟೂತ್ ಸೌಲಭ್ಯವಿರುವ ಇನ್ನೊಂದು ಸಾಧನದ ಜೊತೆ ಸಂಪರ್ಕಗೊಳ್ಳಲು ಸಿದ್ಧವಾಗಿದೆ ಎಂದು ಅರ್ಥ. ಇದನ್ನು ಮೊಬೈಲ್ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಜೊತೆ ಸಂಪರ್ಕಿಸಿ ಬಳಸಬಹುದು.

ಇದರಲ್ಲಿ A2DP ಮತ್ತು AVRCP ಸೌಲಭ್ಯಗಳಿವೆ. ಅಂದರೆ ಇದು ಬ್ಲೂಟೂತ್ ವಿಧಾನದಲ್ಲಿ ಸಂಪರ್ಕಗೊಂಡಾಗ ಸ್ಟಿರಿಯೊ ವಿಧಾನದಲ್ಲಿ ಕೆಲಸ ಮಾಡುತ್ತದೆ ಹಾಗೂ ಸಂಗೀತ ಆಲಿಸುವಾಗ ಹಿಂದಿನ ಮತ್ತು ಮುಂದಿನ ಹಾಡುಗಳಿಗೆ ಲಾಗ ಹಾಕಬಹುದು ಎಂದು ಅರ್ಥ. ವಾಲ್ಯೂಮ್ ಹೆಚ್ಚಿಸುವ ಬಟನ್‌ ಅನ್ನು ಒತ್ತಿ ಹಿಡಿದರೆ ಮುಂದಿನ ಹಾಡಿಗೆ ಹೋಗುತ್ತದೆ. 

ಇದರ ಜೊತೆ ಒಂದು ಹೆಚ್ಚಿಗೆ ಜೊತೆ ಕುಶನ್ ನೀಡಿದ್ದಾರೆ. ಸಾಮಾನ್ಯವಾಗಿ ಇಯರ್‌ಬಡ್ ಮಾದರಿಯ ಹೆಡ್‌ಸೆಟ್‌ನೊಂದಿಗೆ ಮೂರು ಜೊತೆ ಕುಶನ್ ನೀಡುತ್ತಾರೆ.  ಆದರೆ ಇದರಲ್ಲಿರುವುದು ಎರಡು ಜೊತೆ ಮಾತ್ರ. ಇದರ ಜೊತೆ ನೀಡಿರುವ ದೊಡ್ಡ ಕುಶನ್ ನನ್ನ ಕಿವಿಗೆ ಸರಿಯಾಗುತ್ತದೆ. ನನ್ನದು ಕಿರುಗಾತ್ರದ ಕಿವಿ ಕಾಲುವೆ. ಅಂದರೆ ದೊಡ್ಡ ಕಿವಿಕಾಲುವೆಯಿರುವವರಿಗೆ ಬೇಕಾದ ದೊಡ್ಡ ಕುಶನ್ ಇವರು ನೀಡಿಲ್ಲ.

ಉತ್ತಮ ಬಾಸ್ ಧ್ವನಿ ಪಡೆಯಬೇಕಿದ್ದರೆ ಅಂದರೆ ಕಡಿಮೆ ಕಂಪನಾಂಕದ ಧ್ವನಿಯನ್ನು (ಮದ್ದಳೆ, ಮೃದಂಗ, ಡ್ರಮ್, ಇತ್ಯಾದಿಗಳ ಧ್ವನಿ) ತೃಪ್ತಿದಾಯಕವಾಗಿ ಆಲಿಸಲು ಕುಶನ್ ಕಿವಿ ಕಾಲುವೆಗೆ ಬಿರಟೆ ಹಾಕಿದಂತೆ ಕುಳಿತುಕೊಳ್ಳುವುದು ಅತೀ ಅಗತ್ಯ.

ಧ್ವನಿಯ ಗುಣಮಟ್ಟ ತೃಪ್ತಿದಾಯಕವಾಗಿದೆ. ಕಡಿಮೆ ಕಂಪನಾಂಕದ ಧ್ವನಿಯ (bass) ಪುನರುತ್ಪತ್ತಿ ಒಂದು ಮಟ್ಟಿಗೆ ಚೆನ್ನಾಗಿದೆ. ಮಾನವ ಧ್ವನಿಯ ಪುರುತ್ಪತ್ತಿ ಚೆನ್ನಾಗಿದೆ. ಅಧಿಕ ಕಂಪನಾಂಕದ ಧ್ವನಿಯ (treble) ಪುನರುತ್ಪತ್ತಿಯ ಗುಣಮಟ್ಟ ಇನ್ನೂ ಸ್ವಲ್ಪ ಚೆನ್ನಾಗಿದ್ದರೆ ಒಳ್ಳೆಯದಿತ್ತು. ಸ್ಕಲ್‌ಕ್ಯಾಂಡಿ ಜಾಗತಿಕ ಮಟ್ಟದಲ್ಲಿ ಒಂದು ಖ್ಯಾತ ಹೆಸರು.

ಆ ನಿಟ್ಟಿನಲ್ಲಿ ಹೋಲಿಸಿದರೆ ಮತ್ತು ನೀಡುವ ಬೆಲೆಗೆ ಹೋಲಿಸಿದರೆ ಇದರ ಧ್ವನಿಯ ಗುಣಮಟ್ಟ ಇನ್ನೂ ಸ್ವಲ್ಪ ಚೆನ್ನಾಗಿದ್ದರೆ ಒಳ್ಳೆಯದಿತ್ತು ಎಂದು ನನ್ನ ಅಭಿಪ್ರಾಯ. ಮಾತನಾಡಲು ಉತ್ತಮ ಹಾಗೂ ಸಂಗೀತಕ್ಕೆ ಒಂದು ಮಟ್ಟಿಗೆ ತೃಪ್ತಿದಾಯಕ, ಬ್ಲೂಟೂತ್ ಸ್ಟಿರಿಯೊ ಹೆಡ್‌ಸೆಟ್, ಇಯರ್‌ಬಡ್ ಮಾದರಿಯದು, ಹಗುರವಾದುದು –ಈ ಎಲ್ಲ ನಿಮ್ಮ ಅಗತ್ಯಗಳಾದರೆ ನೀವಿದನ್ನು ಕೊಳ್ಳಬಹುದು. 

ವಿಡಿಯೊ ವಿಮರ್ಶೆ:

ವಾರದ ಆ್ಯಪ್ -ಫೋಲ್ಡರ್ ಪ್ಲೇಯರ್
ಇಂತಹ ಅನುಭವ ನಿಮಗೂ ಆಗಿರಬಹುದು. ಪ್ರಯಾಣ ಹೋಗುವ ಸ್ವಲ್ಪವೇ ಮೊದಲು ಮೊಬೈಲ್ ಫೋನಿನಲ್ಲಿ ಕೆಲವು ಆಯ್ದ ಸಂಗೀತವನ್ನು ಒಂದು ಫೋಲ್ಡರ್ ಮಾಡಿ ಅದರಲ್ಲಿ ಹಾಕಿರುತ್ತೀರಿ. ಪ್ರಯಾಣ ಮಾಡುತ್ತಿದ್ದಂತೆ ಈ ಫೋಲ್ಡರಿನಲ್ಲಿರುವ ಹಾಡುಗಳನ್ನು ಆಲಿಸೋಣ ಎಂದು ಮ್ಯೂಸಿಕ್ ಪ್ಲೇಯರ್ ತೆರೆದರೆ ಅದು ಫೋಲ್ಡರ್ ಪ್ರಕಾರ ಪ್ಲೇ ಮಾಡುವುದಿಲ್ಲ. ಬದಲಿಗೆ, ಕಲಾವಿದ, ಆಲ್ಬಂ ಪ್ರಕಾರ ಮಾತ್ರವೇ ಪ್ಲೇ ಮಾಡುತ್ತದೆ.

ನಿಮಗೆ ತುಂಬ ಕೋಪ ಬರುತ್ತದೆ. ಫೋಲ್ಡರ್ ಪ್ರಕಾರದ ಸಂಗೀತವನ್ನು ಪ್ಲೇ ಮಾಡುವ ಪ್ಲೇಯರ್ ಬೇಕೇ? ಹಾಗಿದ್ದರೆ ಗೂಗಲ್‌ ಪ್ಲೇ ಸ್ಟೋರಿನಲ್ಲಿ Folder Player ಎಂದು ಹುಡುಕಿ ಅಥವಾ bit.ly/gadgetloka269 ಜಾಲತಾಣಕ್ಕೆ ಭೇಟಿ ನೀಡಿ. ಹೆಸರೇ ಹೇಳುವಂತೆ ಇದು ಫೋಲ್ಡರ್ ಪ್ರಕಾರ ಸಂಗೀತವನ್ನು ಪ್ಲೇ ಮಾಡುತ್ತದೆ. ಇತರೆ ಪ್ಲೇಯರ್‌ಗಳಲ್ಲಿರುವಂತೆ ಇದರಲ್ಲೂ ಮುಂದಿನ ಹಾಡಿಗೆ ಹೋಗುವುದು, ಗ್ರಾಫಿಕ್ ಇಕ್ವಲೈಸರ್, ಇತ್ಯಾದಿ ಸೌಕರ್ಯಗಳಿವೆ. ನಿಜಕ್ಕೂ ಒಂದು ಉತ್ತಮ ಕಿರುತಂತ್ರಾಂಶ (ಆ್ಯಪ್).

*
ಗ್ಯಾಜೆಟ್‌ ಸುದ್ದಿ -ಕಿಂಗ್‌ಸ್ಟನ್‌ನಿಂದ ಗೇಮಿಂಗ್ ಕೀಬೋರ್ಡ್
ಯುಎಸ್‌ಬಿ ಡ್ರೈವ್ ಮತ್ತು ಇತರೆ ಮೆಮೊರಿಗಳನ್ನು ತಯಾರಿಸುವುದರಲ್ಲಿ ಒಂದು ಖ್ಯಾತ ಹೆಸರು ಕಿಂಗ್‌ಸ್ಟನ್ ಟೆಕ್ನಾಲಜಿ. ಹೈಪರ್‌ಎಕ್ಸ್ ಎನ್ನುವುದು ಕಿಂಗ್‌ಸ್ಟನ್ ಕಂಪೆನಿಯ ಗೇಮಿಂಗ್ ಸಾಧನಗಳನ್ನು ತಯಾರಿಸುವ ವಿಭಾಗ. ಅವರು ಇತ್ತೀಚೆಗೆ ಹೊಸ ಹೈಪರ್‌ಎಕ್ಸ್ ಗೇಮಿಂಗ್ ಕೀಬೋರ್ಡ್ ಅನ್ನು (HyperX Alloy FPS Mechanical Gaming Keyboard) ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಇದು ಭಾರತದಲ್ಲಿ ಅಮೆಜಾನ್ ಮೂಲಕ ₹8,999ಕ್ಕೆ ಲಭ್ಯ. ಆಟ ಆಡುವವರಿಗಾಗಿ ಈ ಕೀಬೋರ್ಡ್ ಅನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಕೀಗಳ ಒಳಗೆ ಎಲ್‌ಇಡಿ ಅಳವಡಿಸಲಾಗಿದೆ. ಯಾವ ಕೀ ಒತ್ತಿದ್ದೀರಿ ಎಂಬುದನ್ನು ಎಲ್‌ಇಡಿ ಸ್ವಲ್ ಜಾಲ ಬೆಳಗಿ ತೋರಿಸುವಂತೆ ಆಯ್ಕೆ ಮಾಡಿಕೊಳ್ಳಬಹುದು. ಆಟ ಆಡಲು ಹೆಚ್ಚಾಗಿ ಬಳಕೆಯಾಗುವ ಕೆಲವು ಕೀಗಳನ್ನು ಮಾತ್ರವೇ ಬೆಳಗುವಂತೆಯೂ ಆಯ್ಕೆ ಮಾಡಿಕೊಳ್ಳಬಹುದು.

*
ಗ್ಯಾಜೆಟ್‌ ಸಲಹೆ -ಪ್ರಶ್ನೆ: ನಾವು ಒಂದು ಊರಿಗೆ ಹೋಗಬೇಕು ಅಂದುಕೊಂಡಿದ್ದೇವೆ. ಆ ಸ್ಥಳದಲ್ಲಿ ಇಂಟರ್‌ನೆಟ್ ಸಂಪರ್ಕ ಇದ್ದಂತಿಲ್ಲ. ಆ ಜಾಗದಲ್ಲಿ ಗೂಗಲ್ ಮ್ಯಾಪ್ ಅನ್ನು ಬಳಸುವುದು ಹೇಗೆ?
ಉ: ಗೂಗಲ್ ಮ್ಯಾಪ್‌ನಲ್ಲಿ offline areas (ಆಫ್‌ಲೈನ್ ಪ್ರದೇಶಗಳು) ಎಂಬ ಆಯ್ಕೆ ಇದೆ. ನೀವು ಪ್ರಯಾಣ ಹೊರಡುವ ಮೊದಲು, ಉತ್ತಮ ಅಂತರಜಾಲ ಸಂಪರ್ಕ ಇರುವಲ್ಲಿ, ನಿಮಗೆ ಬೇಕಾದ ಸ್ಥಳವನ್ನು ಆಯ್ಕೆ ಮಾಡಿಕೊಂಡು ಅಲ್ಲಿಯ ಮ್ಯಾಪ್ ಅನ್ನು ಡೌನ್‌ಲೋಡ್ ಮಾಡಿಟ್ಟುಕೊಳ್ಳಿ. ನಂತರ ಆ ಸ್ಥಳಕ್ಕೆ ಹೋದಾಗ ನಿಮಗೆ ಅಲ್ಲಿ ಅಂತರಜಾಲ ಸಂಪರ್ಕ ಇಲ್ಲದಿದ್ದರೂ ನಿಮಗೆ ಅಲ್ಲಿಯ ನಕ್ಷೆ ದೊರೆಯುತ್ತದೆ.

*
ಗ್ಯಾಜೆಟ್‌ ತರ್ಲೆ -ಹಲ್ಲುಜ್ಜಲೂ ಸೋಮಾರಿತನವೇ?
ಹಲ್ಲುಜ್ಜಲೂ ಸೋಮಾರಿಯಾದ ತಂತ್ರವ್ಯಸನಿಯೊಬ್ಬ (geek) ಏನು ಮಾಡಿದ ಗೊತ್ತೆ? ಆಡ್ರಿನೋ ಮೂಲಕ ಆದೇಶ ಪಡೆದು ಕೆಲಸ ಮಾಡುವ ಹಲ್ಲುಜ್ಜುವ ಬ್ರಶ್ ಒಂದನ್ನು ಹೆಲ್ಮೆಟ್ ಒಂದಕ್ಕೆ ಜೋಡಿಸಿದ. ಈ ಹೆಲ್ಮೆಟ್ ತಲೆ ಮೇಲೆ ಧರಿಸಿದರೆ ಬ್ರಶ್ ಹಲ್ಲನ್ನು ಉಜ್ಜುತ್ತದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry