ಸೋಮವಾರ, ಮಾರ್ಚ್ 30, 2020
19 °C
ನಾದನೃತ್ಯ

ತಂಜಾವೂರು ಪರಂಪರೆಯ ಕೊಂಡಿ ‘ಕಲಾಸಿಂಧು’

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

ತಂಜಾವೂರು ಪರಂಪರೆಯ ಕೊಂಡಿ ‘ಕಲಾಸಿಂಧು’

ಪ್ರತಿ ನೃತ್ಯ ಪ್ರಕಾರಕ್ಕೂ ಪರಂಪರೆ  ಎಂಬುದಿದೆ. ಭರತನಾಟ್ಯ ಅಂತ ಬಂದಾಗ ತಂಜಾವೂರು ಮತ್ತು ಮೈಸೂರು ಶೈಲಿ ಎಂಬ ಎರಡು ಪರಂಪರೆಯಿದೆ. 

ತಂಜಾವೂರು ಪರಂಪರೆಯನ್ನು ಪರಿಚಯಿಸಿದ ತಂಜಾವೂರು ಸಹೋದರರ ಕುಟುಂಬದ ಕಲಾವಿದ ಗುರು ಕಿಟ್ಟಪ್ಪ ಪಿಳ್ಳೈ. ಬೆಂಗಳೂರಿನಲ್ಲಿಯೇ ನೆಲೆಸಿದ್ದರು. ಹಾಗಾಗಿ ಕರ್ನಾಟಕದಲ್ಲಿ ತಂಜಾವೂರು ಪರಂಪರೆಯನ್ನು ಬೆಳೆಸಿದವರಲ್ಲಿ ಕಿಟ್ಟಪ್ಪ ಪಿಳ್ಳೈ ಪ್ರಮುಖರು.ಕಿಟ್ಟಪ್ಪ ಪಿಳ್ಳೈ ಅವರ ಶಿಷ್ಯ ಪರಂಪರೆಯಲ್ಲಿ ಕೆ. ವೆಂಕಟಲಕ್ಷ್ಮಮ್ಮ, ಡಾ. ಲಲಿತಾ ಶ್ರೀನಿವಾಸನ್‌ ಪ್ರಮುಖರು. ಈ ಪರಂಪರೆಯ ಕೊನೆಯ ಕೊಂಡಿಯಾಗಿದ್ದವರು ನರ್ಮದಾ. ತಂಜಾವೂರು ಮತ್ತು ಮೈಸೂರು ಶೈಲಿ ಎರಡನ್ನೂ ಸೇರಿಸಿ ಹೊಸ ಪರಂಪರೆ ಹುಟ್ಟು ಹಾಕಿದವರು ಗುರು ನರ್ಮದಾ. ಈ ಪರಂಪರೆಯನ್ನು ಮುಂದುವರಿಸುತ್ತಿರುವವರು ನರ್ಮದಾ ಅವರ ಶಿಷ್ಯೆ ಪೂರ್ಣಿಮಾ ಗುರುರಾಜ್‌.ಚಿಕ್ಕಂದಿನಿಂದಲೇ ನೃತ್ಯ ತರಬೇತಿ ಪಡೆದ ಪೂರ್ಣಿಮಾ ಅವರು ಮದುವೆಯಾದ ನಂತರ ಪತಿಯ ಜೊತೆ ಬೋಸ್ಟನ್‌ಗೆ ತೆರಳುತ್ತಾರೆ. ಆದರೆ ಅಲ್ಲಿಯೂ ಅವರ ನೃತ್ಯ ಕೈಂಕರ್ಯ ಮುಂದುವರಿಯುತ್ತದೆ. ಬೋಸ್ಟನ್‌ನಲ್ಲಿ ‘ಪಲ್ಲವಿ ಸ್ಕೂಲ್‌ ಆಫ್‌ ಡಾನ್ಸ್‌’ ಆರಂಭಿಸುತ್ತಾರೆ. 

18 ವರ್ಷಗಳ ನಂತರ 2002ರಲ್ಲಿ ಸಂಸಾರ ಸಮೇತರಾಗಿ ಬೆಂಗಳೂರಿಗೆ ಬಂದು  ಗುರು ನರ್ಮದಾ ಅವರ ಬಳಿ ತಂಜಾವೂರು ನೃತ್ಯ ಶೈಲಿಯನ್ನು  ಕಲಿತು, ಅವರ ಜೊತೆ ಕಾರ್ಯಕ್ರಮಗಳನ್ನೂ ನೀಡಿರುತ್ತಾರೆ.ನರ್ಮದಾ ಅವರ ನಿಧನಾನಂತರ ‘ಕಲಾಸಿಂಧು ಅಕಾಡೆಮಿ’ಯನ್ನು ಕಟ್ಟಿ  ಅಲ್ಲಿ ಮಕ್ಕಳಿಗೆ ಸಾಂಪ್ರದಾಯಿಕವಾಗಿ ದೇವಾಲಯ ನೃತ್ಯಗಳನ್ನು ಕಲಿಸುತ್ತಿದ್ದಾರೆ. ತಂಜಾವೂರಿನ ದೇವಾಲಯಗಳಿಗೆ ಕರೆದೊಯ್ದು ಅಲ್ಲಿನ ಶಿಲ್ಪಕಲೆಯ ಭಂಗಿಗಳ ಪರಿಚಯ ಮಾಡಿಸುತ್ತಾರೆ.‘ತಮಿಳುನಾಡಿನ ಚಿದಂಬರಂ, ತಿರುವಾಂಕೂರು, ತಂಜಾವೂರು ಮತ್ತು ಮನ್ನಾರ್‌ಗುಡಿ, ನಗರದ ಹಲಸೂರಿನ ಸೋಮೇಶ್ವರ ದೇವಾಲಯಗಳಲ್ಲಿರುವ  ಶಿಲ್ಪಕಲಾಕೃತಿಗಳು ತಂಜಾವೂರು ನೃತ್ಯ ಪರಂಪರೆಯ ಮಾದರಿಗಳು. ತಂಜಾವೂರು ಪರಂಪರೆಗೆ ಸಾಕಷ್ಟು ದಾಖಲೆಗಳಿವೆ. 1700 ಹಸ್ತಪ್ರತಿಗಳು ಸಿಗುತ್ತವೆ. ಕ್ರಿ. ಶ. 1010ರಲ್ಲಿ ರಾಜರಾಜ ಚೋಳ ಸ್ಥಾಪಿಸಿದ ತಂಜಾವೂರಿನ ಬೃಹದೇಶ್ವರ ದೇವಸ್ಥಾನದಲ್ಲಿ  ಭರತನಾಟ್ಯದ 108 ಕರಣಗಳನ್ನು ಶಿಲ್ಪದಲ್ಲಿ ಕೆತ್ತಲಾಗಿದೆ.ಇದು ತಂಜಾವೂರು ನೃತ್ಯ ಪರಂಪರೆಯ ಬಹುದೊಡ್ಡ ದಾಖಲೆಯಾಗಿದೆ. ಆದರೆ, ಕರ್ನಾಟಕದ ನೃತ್ಯ ಪರಂಪರೆಯನ್ನು ದಾಖಲಿಸುವ ಕೆಲಸ ನಡೆದಿಲ್ಲ. ದೇವಸ್ಥಾನದ ಶಿಲ್ಪಕಲೆಗಳಿಂದ  ತೆಗೆದುಕೊಂಡಿರುವ ಭಂಗಿಗಳು ಮಾತ್ರ ದಾಖಲೆಗಳಾಗಿವೆ. ಕರ್ನಾಟಕದ ನೃತ್ಯ ಪರಂಪರೆಯನ್ನು ದಾಖಲಿಸುವ ಅಗತ್ಯವಿದೆ’ ಎಂದು ಪೂರ್ಣಿಮಾ ಹೇಳುತ್ತಾರೆ.‘ರಾಜರ ಆಳ್ವಿಕೆ ಕೊನೆಗೊಂಡ ನಂತರ ಆಸ್ಥಾನದಲ್ಲಿ ಆಶ್ರಯ ಪಡೆದಿದ್ದ ರಾಜನರ್ತಕಿಯರು ಅತಂತ್ರರಾಗುತ್ತಾರೆ. ಆಗ ಅವರಿಗೆ ರಕ್ಷಣೆ ನೀಡಿದವರು  ಗರಡಿಯಲ್ಲಿದ್ದ ಕುಸ್ತಿ ಪಟುಗಳು. ಹೀಗಾಗಿ ಕರ್ನಾಟಕದ ನೃತ್ಯ ಶೈಲಿ ಜಾನಪದದ ಜೊತೆಗೆ ಬೆರೆತು ಹೋಗಿದೆ’ ಎಂದು ಅವರು ಗುರುತಿಸುತ್ತಾರೆ.***

ಪ್ರತಿವರ್ಷ ಗುರು ನರ್ಮದಾ ಅವರ ನೆನಪಿನಲ್ಲಿ ನೃತ್ಯ ಕಾರ್ಯಕ್ರಮ ಆಯೋಜಿಸುತ್ತಿರುವ ಕಲಾಸಿಂಧು ಅಕಾಡೆಮಿ, ಇದೇ 11,12ರಂದು  ‘ನಿರಂತರ ನರ್ಮದಾ’ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದೆ.ಗುರು ಕಿಟ್ಟಪ್ಪ ಪಿಳ್ಳೈ ಅವರ ಮಗ ಮತ್ತು ಮೊಮ್ಮಗಳು ನೃತ್ಯ ಪ್ರದರ್ಶನ ನೀಡಲಿದ್ದಾರೆ. ಮೂರು ತಲೆಮಾರಿನ ನರ್ಮದಾ ಅವರ ಶಿಷ್ಯಂದಿರು  ಒಂದೇ ವೇದಿಕೆಯಲ್ಲಿ  ನರ್ತಿಸುತ್ತಿರುವುದು ವಿಶೇಷ. ಪೂರ್ಣಿಮಾ ಅವರೂ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಪೂರ್ಣಿಮಾ ಅವರ ಸಂಪರ್ಕಕ್ಕೆ: 99005 79347

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)