4

ರಾಷ್ಟ್ರೀಯ ಅಲೆ ಮೂಡಿಸಲಿರುವ ಫಲಿತಾಂಶ

ಡಾ. ಸಂದೀಪ್‌ ಶಾಸ್ತ್ರಿ
Published:
Updated:
ರಾಷ್ಟ್ರೀಯ ಅಲೆ ಮೂಡಿಸಲಿರುವ ಫಲಿತಾಂಶ

ಇಂದು ಮಧ್ಯಾಹ್ನದ ಹೊತ್ತಿಗೆ ಐದು ಮಹತ್ವದ ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶದ ಚಿತ್ರಣವು ಬಹುತೇಕ ಸ್ಪಷ್ಟಗೊಂಡಿರುತ್ತದೆ.  2019ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಮೊದಲ ಸೆಮಿಫೈನಲ್‌ ಇದಾಗಿದೆ ಎಂದೂ ಅನೇಕರು ಪ್ರತಿಪಾದಿಸುತ್ತಿದ್ದಾರೆ.  ಮುಂದಿನ ವರ್ಷ ಇನ್ನೂ ಕೆಲ  ಪ್ರಮುಖ ರಾಜ್ಯಗಳ ವಿಧಾನಸಭೆಗೆ ನಡೆಯಲಿರುವ ಚುನಾವಣೆಯು ಎರಡನೇ ಸೆಮಿಫೈನಲ್‌ ಆಗಿರಲಿದೆ. ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಊಹಿಸುವ ಬದಲಿಗೆ  ನಾನು ಇಲ್ಲಿ ಈ ಸುತ್ತಿನ ಚುನಾವಣೆಯ ಮಹತ್ವಕ್ಕೆ ಹೆಚ್ಚು ಒತ್ತು ನೀಡಿರುವೆ.  ರಾಷ್ಟ್ರೀಯ ರಾಜಕಾರಣದ ಮೇಲೆ ಇದು ಬೀರಲಿರುವ  ಪ್ರಭಾವದ ಕುರಿತು  ವಿಶ್ಲೇಷಿಸಿರುವೆ.

ದೇಶದ ಜನಸಂಖ್ಯೆಯ  ಆರನೇ ಒಂದರಷ್ಟು  ಜನರು ನೆಲೆಸಿರುವ ಅತಿದೊಡ್ಡ  ರಾಜ್ಯ ಉತ್ತರ ಪ್ರದೇಶದಲ್ಲಿ  ಅನಾವರಣಗೊಂಡ ಚುನಾವಣಾ ಸಮರವು ಹಲವಾರು ಕಾರಣಗಳಿಗೆ ಮಹತ್ವದ್ದಾಗಿದೆ. ಮೊದಲನೆಯದಾಗಿ ಇದು ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿಯ ಪಾಲಿಗೆ ಪ್ರತಿಷ್ಠೆಯ ಕದನವಾಗಿತ್ತು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ  ಅದ್ಭುತ ಸಾಧನೆ ತೋರಿ,  ಕೇಂದ್ರದಲ್ಲಿ ಅಧಿಕಾರದ ಗದ್ದುಗೆಗೆ ಏರಿದ್ದ ಪಕ್ಷವು ಈ ಚುನಾವಣೆಯಲ್ಲಿಯೂ  ತನ್ನೆಲ್ಲ ಸಾಮರ್ಥ್ಯವನ್ನು ಪಣಕ್ಕೊಡ್ಡಿದೆ.

ರಾಜ್ಯದಲ್ಲಿನ ಗೆಲುವು ಅಥವಾ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಂತಹದ್ದು ಮುಂದೆ  ಗುಜರಾತ್‌, ಮಧ್ಯಪ್ರದೇಶ, ಛತ್ತೀಸಗಡ, ರಾಜಸ್ತಾನಗಳಲ್ಲಿ ಅಧಿಕಾರ ಉಳಿಸಿಕೊಳ್ಳುವ,  ಕರ್ನಾಟಕವನ್ನು ಕಾಂಗ್ರೆಸ್‌ನಿಂದ ಕಸಿದುಕೊಳ್ಳುವ ಹಾಗೂ  ಕೇಂದ್ರದಲ್ಲಿ 2019ರಲ್ಲಿ ಮರಳಿ ಅಧಿಕಾರಕ್ಕೆ ಬರುವ ಪಕ್ಷದ ಹಾದಿಯನ್ನು ಸುಗಮಗೊಳಿಸಲಿದೆ.

ಒಂದು ವೇಳೆ ಬಿಜೆಪಿಗೆ ಉತ್ತರ  ಪ್ರದೇಶದಲ್ಲಿ ಹಿನ್ನಡೆ ಉಂಟಾದರೆ 2019ರ ಚುನಾವಣೆಯಲ್ಲಿ ಪಕ್ಷವು ಹಲವಾರು ಅನಿಶ್ಚಿತತೆಗಳಿಗೆ ಮುಖಾಮುಖಿಯಾಗಬೇಕಾದ ಅನಿವಾರ್ಯ ಎದುರಾಗಲಿದೆ.

ರಾಜ್ಯಗಳಿಗೆ ಸೀಮಿತವಾದ ಪಕ್ಷಗಳ ನೇತೃತ್ವದಲ್ಲಿನ ಬಿಜೆಪಿ ವಿರೋಧಿ ಮೈತ್ರಿಕೂಟ ಅಸ್ತಿತ್ವಕ್ಕೆ ಬರುವ ಸಾಧ್ಯತೆಗಳಿಗೂ  ಉತ್ತರ ಪ್ರದೇಶವು  ಪ್ರಮುಖ  ಪ್ರಯೋಗ ಶಾಲೆಯಾಗಿರಲಿದೆ. ಒಂದು ವೇಳೆ, ಸಮಾಜವಾದಿ ಪಕ್ಷ (ಎಸ್‌ಪಿ) ನೇತೃತ್ವದ ಮೈತ್ರಿಕೂಟವು ಉತ್ತಮ ಸಾಧನೆ ಪ್ರದರ್ಶಿಸಿದರೆ, 2015ರಲ್ಲಿ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ  ಕಂಡುಬಂದಂತೆ,   ಪ್ರಾದೇಶಿಕ  ಪಕ್ಷಗಳ ನಡುವಣ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳಲಿದೆ. ಅಂತಹ ಪರಿಸ್ಥಿತಿಯಲ್ಲಿ, ಕಾಂಗ್ರೆಸ್‌ ಪಕ್ಷವು  ಬಿಜೆಪಿಗೆ ಪ್ರಮುಖ ಪ್ರತಿಪಕ್ಷವಾಗಿ ನಿಲ್ಲುವುದರಿಂದ ಹಿಂದೆ ಸರಿಯಬೇಕಾಗುತ್ತದೆ ಎನ್ನುವುದು ಇನ್ನೊಂದು ಆಸಕ್ತಿದಾಯಕ ಬೆಳವಣಿಗೆಯಾಗಿರಲಿದೆ.

ಉತ್ತರ ಪ್ರದೇಶ, ಬಿಹಾರದಂತಹ ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್‌, ಪ್ರಾದೇಶಿಕ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕಾದ ಪರಿಸ್ಥಿತಿ ಉದ್ಭವಿಸಿದರೆ, ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟದ ನಾಯಕತ್ವಒಪ್ಪಿಕೊಳ್ಳುವುದೂ  ಆ ಪಕ್ಷಕ್ಕೆ ಅನಿವಾರ್ಯವಾಗಲಿದೆ.

ಉತ್ತರ ಪ್ರದೇಶದಲ್ಲಿನ ಚುನಾವಣಾ ಫಲಿತಾಂಶವು ಇತರ ಬಹುತೇಕ ರಾಜ್ಯಗಳಲ್ಲಿನ ಚುನಾವಣೆಯಲ್ಲಿಯೂ  ಪ್ರತಿಫಲಿಸುವಂತಾದರೆ, ಎರಡು ಮುಂಚೂಣಿ ಪಕ್ಷಗಳಿಂದ ಸಾಕಷ್ಟು ಅಂತರ ಕಾಯ್ದುಕೊಂಡಿರುವ ಮೂರನೇ ಪಕ್ಷವೊಂದು ಸ್ಪರ್ಧೆಯಲ್ಲಿ ಇರುವುದು ನಿಶ್ಚಿತವಾಗಿರಲಿದೆ.

ಪಂಜಾಬ್‌ನಲ್ಲಿನ ಫಲಿತಾಂಶವು ಆಡಳಿತಾರೂಢ ಪಕ್ಷದ ದುರಾಡಳಿತ, ಸ್ವಜನಪಕ್ಷಪಾತ ಮತ್ತು ಕೌಟುಂಬಿಕ ಆಡಳಿತ ವಿರುದ್ಧದ ಸ್ಪಷ್ಟ ಜನಾಭಿಪ್ರಾಯ ಆಗಿರಲಿದೆ.  ಇಲ್ಲಿ ಕಾಂಗ್ರೆಸ್‌ ಬಹುಶಃ ಜನಾಕ್ರೋಶದ ಪ್ರಯೋಜನವನ್ನು ಗಮನಾರ್ಹವಾಗಿ ಬಾಚಿಕೊಳ್ಳುವ ಸಾಧ್ಯತೆ ಇದೆ.  ಇದು, ಬಿಜೆಪಿಯ ‘ಕಾಂಗ್ರೆಸ್‌ ಮುಕ್ತ ಭಾರತ’ದ ರಾಜಕೀಯ ಉದ್ದೇಶವನ್ನು ಮಸುಕುಗೊಳಿಸಲಿದೆ.  ಪಂಜಾಬ್‌ ಜನರ ತೀರ್ಪು ರಾಷ್ಟ್ರೀಯ ರಾಜಕಾರಣದ ಮೇಲೂ ದೀರ್ಘಾವಧಿಯ ಪರಿಣಾಮ ಬೀರಲಿದೆ.

ಆಡಳಿತಾರೂಢ ಪಕ್ಷವು ದಶಕದ ಕೊನೆಯಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುವಂತಹ ಸಂದರ್ಭದಲ್ಲಿ ಅದು ತಳಮಟ್ಟದಲ್ಲಿ  ಜನರಿಗೆ ಸೇವೆ ಒದಗಿಸಲು ಮುಂದಾಗುವುದು ನಾಗರಿಕರ ಗಮನಕ್ಕೆ ಬಂದರೂ ಅವರು ಅದನ್ನು  ಸಹಜವಾಗಿಯೇ  ನಿರ್ಲಕ್ಷಿಸಿರುತ್ತಾರೆ. ಒಂದೇ ಕುಟುಂಬವು ರಾಜಕಾರಣದ ಲಾಭಗಳನ್ನೆಲ್ಲ ಅನುಭವಿಸಲು ಮುಂದಾಗುವುದು ಮತ್ತು ಅಧಿಕಾರದ ನಿರ್ಲಜ್ಜ  ದುರ್ಬಳಕೆ ಮಾಡಿಕೊಳ್ಳುವುದನ್ನು ಮತದಾರರ ಪ್ರಜಾಸತ್ತಾತ್ಮಕ ಸೂಕ್ಷ್ಮಜ್ಞತೆ  ಉದಾರವಾಗಿ ಪರಿಗಣಿಸುವುದಿಲ್ಲ. ಇಂತಹ ತಪ್ಪಿಗೆ ತಕ್ಕ ಪಾಠ ಕಲಿಸಲು ಮುಂದಾಗಲಿದೆ.

ಎರಡು ಪ್ರಮುಖ ರಾಜಕೀಯ ಪಕ್ಷಗಳ ಮೈತ್ರಿಕೂಟ ಸರ್ಕಾರದ ಕುರಿತು ಮತದಾರರಲ್ಲಿ ಮಡುಗಟ್ಟಿರುವ ಅತೃಪ್ತಿ ಮತ್ತು ಅಸಮಾಧಾನವನ್ನೇ ಬಂಡವಾಳವಾಗಿಸಿಕೊಂಡು ರಾಜ್ಯದಲ್ಲಿ ಹೊಸ ರಾಜಕೀಯ ಶಕ್ತಿಯಾಗಿ ಬೇರುಬಿಡಲು ಆಮ್‌ ಆದ್ಮಿ ಪಾರ್ಟಿ(ಎಎಪಿ) ಪ್ರಯತ್ನಿಸಿದೆ. ಇಂತಹ ಏಕೈಕ ಉದ್ದೇಶದಿಂದ ಚುನಾವಣಾ ಕಣಕ್ಕೆ ಧುಮುಕಿರುವುದು ಅದಕ್ಕೆ ದೊಡ್ಡ ರಾಜಕೀಯ ಲಾಭ ತಂದುಕೊಡಲಿಕ್ಕಿಲ್ಲ. ಮುಖ್ಯ ಪ್ರವಾಹದ ರಾಜಕೀಯದಲ್ಲಿನ ಪರ್ಯಾಯ ಶಕ್ತಿಯಾಗಿ ಎಎಪಿಯು ಹೊರಹೊಮ್ಮಬಹುದೇ ಹೊರತು, ದೇಶದ ಮುಖ್ಯ ಪ್ರವಾಹದ ರಾಜಕೀಯಕ್ಕೇ ಅದು ಪರ್ಯಾಯವಾಗಿರಲಾರದು.

ಇನ್ನು ಉತ್ತರಾಖಂಡ ರಾಜ್ಯವು ಅಸ್ತಿತ್ವಕ್ಕೆ ಬಂದ ದಿನದಿಂದ ತೋರಿಸುತ್ತಿರುವ ರಾಜಕೀಯ ಅಲೆಯನ್ನೇ ಈ ಬಾರಿಯೂ ಪುನರಾವರ್ತನೆ ಮಾಡುವ ಸಾಧ್ಯತೆ ಇದೆ.  ರಾಜ್ಯ ರಚನೆಯಾದ ದಿನದಿಂದ ನಡೆದ ಪ್ರತಿಯೊಂದು ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಮತ್ತು ಬಿಜೆಪಿಗಳನ್ನು ಪ್ರತಿ ಐದು ವರ್ಷಕ್ಕೊಮ್ಮೆ ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳುತ್ತ ಬಂದಿದ್ದಾರೆ.

ಈ ಬಾರಿಯ ಮತದಾರರ ತೀರ್ಪು, ರಾಜಕೀಯ ಪಕ್ಷಗಳ ಪಾಲಿಗೆ ತೃಪ್ತಿ ನೀಡಲಿದೆಯೇ ಎನ್ನುವ ಪ್ರಶ್ನೆಗೂ ಎಡೆಮಾಡಿಕೊಟ್ಟಿದೆ. ರಾಜಕಾರಣಿಗಳು, ಯಾಂತ್ರಿಕವಾಗಿ ಅಧಿಕಾರ ಬದಲಾಗುವ ಅಥವಾ ಆಡಳಿತಾರೂಢ ಪಕ್ಷವಾಗಿ ಅಧಿಕಾರಕ್ಕೆ ಏರುವ ತಮ್ಮ ಅವಕಾಶವನ್ನು ಎದುರು ನೋಡುತ್ತ ನೇಪಥ್ಯದಲ್ಲಿ ಕಾಯುತ್ತ ಕೂರಬಹುದು.  ಯಾವುದೇ ಒಂದು ಸರ್ಕಾರ, ಜನಪರವಾದ  ಉತ್ತಮ ಆಡಳಿತ ನೀಡಿದ್ದರೆ ಮಾತ್ರ ರಾಜ್ಯ ರಾಜಕಾರಣದಲ್ಲಿ ಸಾಮಾನ್ಯವಾಗಿ ಕಂಡುಬರುವ ‘ಪರ್ಯಾಯ ಅಧಿಕಾರದ ಅಲೆ’ಯನ್ನು ಬದಲಿಸಬಹುದು.

ಗೋವಾ ಮತ್ತು ಮಣಿಪುರ ರಾಜ್ಯಗಳೂ ಹೊಸ ಸರ್ಕಾರವನ್ನು ಆಯ್ಕೆ ಮಾಡಲಿವೆ. ಎಲ್ಲರ ಗಮನ ಉತ್ತರ ಪ್ರದೇಶ ಮತ್ತು ಪಂಜಾಬ್‌ ಮೇಲೆ ಕೇಂದ್ರೀಕೃತಗೊಂಡಿರುವಾಗ, ಈ ಎರಡೂ ಸಣ್ಣ ರಾಜ್ಯಗಳನ್ನು ಕೆಲಮಟ್ಟಿಗೆ ನಿರ್ಲಕ್ಷಿಸಲಾಗಿದೆ. ದೇಶದಲ್ಲಿ 29 ರಾಜ್ಯಗಳು ಇವೆ. ಸಂಖ್ಯೆಗಳ ಲೆಕ್ಕದಲ್ಲಿ ಸಣ್ಣ ರಾಜ್ಯಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇವೆ. ತೀವ್ರ ಹಣಾಹಣಿ ನಡೆಯುವ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಈ ರಾಜ್ಯಗಳಲ್ಲಿನ ಮತದಾರರ ಒಲವು – ನಿಲುವುಗಳೂ ತುಂಬ ಮಹತ್ವದ್ದಾಗಿರುತ್ತವೆ.

ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ನಡೆದಿದ್ದು, ಎಎಪಿ ಕೂಡ ತನ್ನ ರಾಜಕೀಯ ಸಾಮರ್ಥ್ಯ  ಪರೀಕ್ಷಿಸಲು  ಮುಂದಾಗಿದೆ.

ಸಣ್ಣ ರಾಜ್ಯವೊಂದರಲ್ಲಿನ ಅಭಿವೃದ್ಧಿ ಕಾರ್ಯಗಳ ಮೇಲೆ ಸ್ಥಳೀಯ ಸಾಮಾಜಿಕ ಸ್ವರೂಪವು   ಪ್ರಭಾವ ಬೀರಲಿದೆ ಎನ್ನುವುದಷ್ಟೇ ಮುಖ್ಯವಾಗಲಾರದು. ರಾಷ್ಟ್ರಮಟ್ಟದ ಅಲೆ ಮತ್ತು ರಾಜ್ಯದ ಆಚೆಗಿನ ರಾಷ್ಟ್ರೀಯ ನಾಯಕತ್ವ ಬೀರುವ ಪ್ರಭಾವ ಕೂಡ  ಮುಖ್ಯವಾಗಿ ಪರಿಗಣನೆಗೆ ಬರಲಿದೆ ಎನ್ನುವುದಕ್ಕೆ ಉತ್ತಮ ನಿದರ್ಶನವಾಗಿರಲಿದೆ. ಇತರ ಸಣ್ಣ ರಾಜ್ಯಗಳ ವಿಷಯದಲ್ಲಿಯೂ ಈ ಮಾತು ಅನ್ವಯಿಸುತ್ತದೆ.

ಒಂದೂವರೆ ದಶಕದ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್‌ ಪಕ್ಷವನ್ನೇ ರಾಜ್ಯದ ಮತದಾರರು ಮತ್ತೆ ಅಪ್ಪಿಕೊಳ್ಳುವರೇ ಎನ್ನುವ ಕುತೂಹಲ ಮಣಿಪುರದಲ್ಲಿ ಕಂಡು ಬರಲಿದೆ. ಚುನಾವಣಾ ಪ್ರಚಾರದಲ್ಲಿ ಸ್ಥಳೀಯ ವಿಷಯಗಳೇ ಪ್ರಧಾನವಾಗಿ ಚರ್ಚೆಗೆ ಒಳಪಟ್ಟಿವೆ. ಜನರು ನೀಡುವ ತೀರ್ಪು, ಈ ಸಂಕೀರ್ಣ ವಿಷಯಗಳನ್ನು ನಿರ್ವಹಿಸುವ ರಾಜಕೀಯ ಪಕ್ಷಗಳ ಸಾಮರ್ಥ್ಯದ ಬಗ್ಗೆ ಮತದಾರರು ಹೊಂದಿರುವ ನಂಬಿಕೆಯ ಪ್ರತೀಕವಾಗಿರಲಿದೆ.

ಅಧಿಕಾರದಲ್ಲಿ ಇರುವ ಗೋವಾ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಆಡಳಿತದ ಗದ್ದುಗೆ ಏರಲು ಬಿಜೆಪಿ ಈ ಬಾರಿ ನಡೆಸಿದ ಪ್ರಯತ್ನಗಳೂ ತುಂಬ ಆಸಕ್ತಿದಾಯಕವಾಗಿವೆ. ಪಕ್ಷದ ರಾಷ್ಟ್ರೀಯ ನಾಯಕರ ವರ್ಚಸ್ಸನ್ನೇ ಬಂಡವಾಳ ಮಾಡಿಕೊಳ್ಳುವ ಉದ್ದೇಶದಿಂದ ತುಂಬ ವ್ಯವಸ್ಥಿತ ಪ್ರಚಾರ ಕಾರ್ಯತಂತ್ರ ರೂಪಿಸಿರುವುದು ಫಲ ನೀಡಿತೆ ಎನ್ನುವುದು ಇಂದು ಸಂಜೆ ಹೊತ್ತಿಗೆ ಸ್ಪಷ್ಟವಾಗಿರುತ್ತದೆ.

ಉತ್ತರಪ್ರದೇಶ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳಲ್ಲಿನ ಆಡಳಿತಾರೂಢ ಪಕ್ಷಗಳನ್ನು ಅಧಿಕಾರದಿಂದ ಕೆಳಗಿಳಿಸಲು ಹೊರಟಿರುವ ಬಿಜೆಪಿಯು ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸದೆ, ಪಕ್ಷದ ರಾಷ್ಟ್ರೀಯ ಮುಖಂಡರ ವರ್ಚಸ್ಸನ್ನೇ ಆಧರಿಸಿ ಚುನಾವಣೆ ಗೆಲ್ಲಬೇಕೆಂದು  ಪ್ರಜ್ಞಾಪೂರ್ವಕವಾಗಿ ನಿರ್ಧಾರಕ್ಕೆ ಬಂದಿರುವಂತಿದೆ.

ಒಂದು ವೇಳೆ ಈ ಕಾರ್ಯತಂತ್ರ ಯಶಸ್ವಿಯಾದರೆ,  ರಾಜ್ಯಗಳ ರಾಜಕೀಯವು ರಾಜ್ಯಗಳನ್ನೇ ಅವಲಂಬಿಸಿರದೆ, ಕೇಂದ್ರವನ್ನೇ ನೆಚ್ಚಿಕೊಳ್ಳುವ ಹಳೆಯ ರಾಜಕೀಯ ವ್ಯವಸ್ಥೆಗೆ ಮರಳಿ ಹೋದಂತೆ ಆಗಲಿದೆ. ಈ ಚುನಾವಣಾ ಕಾರ್ಯತಂತ್ರವು ವಿಫಲಗೊಂಡರೆ, ಅದು ಪ್ರಾದೇಶಿಕ ಮಟ್ಟದ ಮುಖಂಡರ ಹೆಚ್ಚುತ್ತಿರುವ ಮಹತ್ವವನ್ನು ಸೂಚಿಸಲಿದೆ.  ಈ ಬೆಳವಣಿಗೆಯು ರಾಷ್ಟ್ರ ರಾಜಕಾರಣದಲ್ಲಿ  ಇನ್ನೂ ಕೆಲವು ವರ್ಷಗಳ ಕಾಲ ಪ್ರಭಾವಶಾಲಿಯಾಗಿಯೇ ಇರಲಿದೆ.

ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ವಿರುದ್ಧ ದೊಡ್ಡ ಶಕ್ತಿಯಾಗಿ ರೂಪುಗೊಳ್ಳುವ ಮಹತ್ವದ ಪಾತ್ರದ ಬಗ್ಗೆ ಈ ಸುತ್ತಿನ ಚುನಾವಣೆಗಳು ಸಾಕಷ್ಟು ಬೆಳಕು ಚೆಲ್ಲಲಿವೆ.

ಈ ಸೆಮಿಫೈನಲ್‌ ಫಲಿತಾಂಶವು ಮುಂದಿನ ಸೆಮಿಫೈನಲ್‌ ಮತ್ತು 2019ರ ಅಂತಿಮ ಸ್ಪರ್ಧೆಯ ರಾಜಕೀಯ ಕಾರ್ಯತಂತ್ರವನ್ನೂ ನಿರ್ಧರಿಸಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry