ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ ಮಾಡಿದ ಸಾಲ ₹90 ಸಾವಿರ ಕೋಟಿ

Last Updated 10 ಮಾರ್ಚ್ 2017, 19:27 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಕಳೆದ 4 ವರ್ಷಗಳಲ್ಲಿ ₹90 ಸಾವಿರ ಕೋಟಿ ಸಾಲ ಮಾಡಿದೆ.

2012–13ರಲ್ಲಿ ರಾಜ್ಯ ಸರ್ಕಾರದ  ಒಟ್ಟು ಹೊಣೆಗಾರಿಕೆ ಮೊತ್ತ ₹1,18,155 ಕೋಟಿಯಷ್ಟಿತ್ತು. ಇದೇ 15ರಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಮಂಡಿಸುತ್ತಿರುವ 5 ನೇ ಬಜೆಟ್‌ನ ಹೊತ್ತಿಗೆ ಈ ಮೊತ್ತ ₹2,08,557 ಕೋಟಿ ದಾಟಲಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಅಂತರ್ಜಾಲ ತಾಣದಲ್ಲಿ 2016ರ ಡಿಸೆಂಬರ್‌ನಲ್ಲಿ  ಪ್ರಕಟವಾಗಿರುವ ಅಂಕಿ ಅಂಶ ಈ ಮಾಹಿತಿ ಬಹಿರಂಗಪಡಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಸಾಲದ ಮೊತ್ತ ಏರಿಕೆಯಾಗುತ್ತಿರುವ ಕುರಿತು ಅಂದಿನ ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದುಂಟು. ಕರ್ನಾಟಕ ವಿತ್ತೀಯ ಹೊಣೆಗಾರಿಕೆಯ ಅಧಿನಿಯಮದ ಮಿತಿಯನ್ನೂ ಮೀರಿ ಸಾಲ ಮಾಡಲಾಗುತ್ತಿದೆ ಎಂದು ದೂಷಿಸಿದ್ದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲದ ಮೊತ್ತ ಪ್ರತಿ ವರ್ಷ ಸರಿಸುಮಾರು ₹12 ಸಾವಿರ ಕೋಟಿಗಳಷ್ಟು ಏರಿಕೆಯಾಗುತ್ತಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಪ್ರತಿ ವರ್ಷ ಸಾಲ ಪಡೆಯುತ್ತಿರುವ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿರುವುದು ಅಂಕಿ ಅಂಶ ಬಹಿರಂಗ ಪಡಿಸಿದೆ.

ಮೊದಲ ವರ್ಷ ₹20 ಸಾವಿರ ಕೋಟಿ, ಎರಡನೇ ವರ್ಷ ₹21 ಸಾವಿರ ಕೋಟಿ, ಮೂರನೇ ವರ್ಷ ₹21 ಸಾವಿರ ಕೋಟಿ ಹಾಗೂ ನಾಲ್ಕನೇ ವರ್ಷ ₹28 ಸಾವಿರ ಕೋಟಿ ಮೊತ್ತವನ್ನು ವಿವಿಧ ಮೂಲಗಳಿಂದ ಸಾಲ ಪಡೆಯಲಾಗಿದೆ. 

ಮುಖ್ಯಮಂತ್ರಿಯಾದ ಬಳಿಕ 2013ರ ಜುಲೈ 12ರಂದು ತಮ್ಮ ಮೊದಲ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಾಲ ಎತ್ತುವಳಿಯಲ್ಲಿ ತೋರಿದ ಉದಾರತೆಯನ್ನು ವ್ಯಂಗ್ಯವಾಡಿದ್ದರು.

‘ರಾಜಸ್ವ ಸಂಗ್ರಹಣೆಗೆ ಆದ್ಯತೆ ನೀಡಿದ್ದರೆ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಲ ಎತ್ತುವಳಿ ಅವಲಂಬನೆ ಕಡಿಮೆಯಾಗುತ್ತಿತ್ತು. ದುಬಾರಿಯಾಗಿರುವ ಸಾಲಗಳನ್ನು ತೆಗೆದುಕೊಂಡರೆ ಮುಂದಿನ ಪೀಳಿಗೆಯ ಮೇಲೆ ಬೃಹತ್‌ ಸಾಲದ ಹೊರೆಯನ್ನು ಹೊರಿಸಲಾಗುತ್ತದೆ. ಸಾಲದ ಎತ್ತುವಳಿ ಹೊಣಿಗಾರಿಕೆ ಮೊತ್ತ 2006ರಿಂದ 2012ರ ಅವಧಿಯಲ್ಲಿ ದುಪ್ಪಟ್ಟಾಗಿದೆ’ ಎಂದು ಬಜೆಟ್‌ನಲ್ಲಿ ಆಕ್ಷೇಪಿಸಿದ್ದರು.

ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾಗಿದ್ದ ಅವಧಿ (2005–06) ರಾಜ್ಯದ ಒಟ್ಟು ಹೊಣೆಗಾರಿಕೆ ಮೊತ್ತ ₹56,027 ಕೋಟಿಯಷ್ಟಿತ್ತು.

2007ರಲ್ಲಿ ರಾಜ್ಯದ ಸಾಲ ₹63,844 ಕೋಟಿಗೆ ತಲುಪಿತ್ತು. ಈಗ ₹2,08,557 ಕೋಟಿಗೆ ತಲುಪಿದ್ದರಿಂದಾಗಿ ಸಾಲದ ಮೊತ್ತ ಕಳೆದ 10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಳವಾದಂತಾಗಿದೆ.

ಮಿತಿಯ ಗಡಿ ತಲುಪಿದ ಸಾಲ: ರಾಜ್ಯ ವಿಧಾನಮಂಡಲಗಳಲ್ಲಿ ಅನುಮೋದನೆ ಪಡೆದ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಅನುಸಾರ ಸರ್ಕಾರದ ಸಾಲದ ಮಿತಿ ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ)ದ ಶೇ25ರ ಮಿತಿಯಲ್ಲಿರಬೇಕು.

2012ರಲ್ಲಿ ಶೇ22.61ರಷ್ಟಿದ್ದ ಸಾಲದ  ಮಿತಿ 2017ರ ಏಪ್ರಿಲ್‌ ಹೊತ್ತಿಗೆ ಶೇ 24.94ಕ್ಕೆ ತಲುಪಲಿದೆ.

**

ಸಾಲ ಸಿಗುತ್ತದೆ ಎಂದು ಸಾಲ ಮಾಡಬಾರದು. ಗೊತ್ತುಗುರಿಯಿಲ್ಲದ ಸಾಲ ಎತ್ತುವಳಿ ನಮ್ಮ ಆರ್ಥಿಕ ವ್ಯವಸ್ಥೆಗೆ ಮಾರಕ
–ಸಿದ್ದರಾಮಯ್ಯ, ಮುಖ್ಯಮಂತ್ರಿ, (2013ರ ಬಜೆಟ್‌ನಲ್ಲಿ ಹೇಳಿದ್ದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT