ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಗೊಬ್ಬರ ಖರೀದಿಗೆ ಹೊಸ ನೀತಿ

Last Updated 10 ಮಾರ್ಚ್ 2017, 20:13 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದಲ್ಲಿ ಕಸದಿಂದ ತಯಾರಾಗುವ ಸಾವಯವ ಗೊಬ್ಬರ ಖರೀದಿಗೆ ಸಂಬಂಧಪಟ್ಟಂತೆ ನೀತಿ ರೂಪಿಸಲು ಚಿಂತನೆ ನಡೆಸಲಾಗಿದೆ’ ಎಂದು ಬಿಬಿಎಂಪಿ ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಹೇಳಿದರು.

ಅಶೋಕ ಪರಿಸರ ಸಂಶೋಧನಾ ಹಾಗೂ ಸಂರಕ್ಷಣಾ ಸಂಸ್ಥೆ (ಏಟ್ರಿ) ವತಿಯಿಂದ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಘನತ್ಯಾಜ್ಯ ನಿರ್ವಹಣೆ ನೀತಿ’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಸ ವಿಂಗಡಣೆ ಮತ್ತು ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನಗಳ ಬಗ್ಗೆ ತಿಳಿಸಿಕೊಡಲು ಸಾವಯವ ಗೊಬ್ಬರ ಸಂತೆಯನ್ನು ಪ್ರತಿ ವಾರ್ಡ್‌ನಲ್ಲೂ ನಡೆಸಲಾಗುತ್ತಿದೆ. ಅಪಾರ್ಟ್‌ಮೆಂಟ್‌ಗಳ ಸಮುಚ್ಚಯಗಳಲ್ಲಿ ಉತ್ಪತ್ತಿಯಾಗುವ ಕಸದಿಂದ ಸಾವಯವ ಗೊಬ್ಬರ ತಯಾರಿಸುವುದನ್ನು ಕಡ್ಡಾಯ ಮಾಡಲಾಗಿದೆ. ನಗರದಲ್ಲಿ ತಯಾರಾಗುವ ಗೊಬ್ಬರವನ್ನು ಬಿಬಿಎಂಪಿ ಖರೀದಿಸಲಿದೆ. ಹೀಗಾಗಿ ಬೆಲೆ ನಿಗದಿ ಹಾಗೂ ಖರೀದಿ ಕುರಿತು ನೀತಿ ರೂಪಿಸಲು ಚರ್ಚೆ ನಡೆಸಲಾಗುತ್ತಿದೆ’ ಎಂದರು.

‘ಅಪಾರ್ಟ್‌ಮೆಂಟ್‌ಗಳ ಸಮುಚ್ಚಯಗಳಲ್ಲಿ ಅಗತ್ಯ ಉಪಕರಣಗಳನ್ನು ಅಳವಡಿಸಿಕೊಂಡು ಗೊಬ್ಬರ ತಯಾರಿಸಬಹುದು. ಇಲ್ಲವೇ ಈ ಹೊಣೆಯನ್ನು ಏಜೆನ್ಸಿಗಳಿಗೆ ವಹಿಸಬಹುದು. ಒಟ್ಟಿನಲ್ಲಿ ಅಲ್ಲಿನ ಕಸ ಅಲ್ಲೇ ಗೊಬ್ಬರವಾಗಿ ಪರಿವರ್ತನೆಯಾಗಬೇಕು’ ಎಂದು ಹೇಳಿದರು.

ಏಟ್ರಿ ಸಂಸ್ಥೆಯ ಮೇಘಾ ಶೆಣೈ ಮಾತನಾಡಿ, ‘2012ರಲ್ಲಿ ಜಾರಿಗೊಂಡ ಘನತ್ಯಾಜ್ಯ ನಿರ್ವಹಣೆ ನೀತಿಯ ಅನುಷ್ಠಾನ ಕುರಿತು 2016ರ ಮಾರ್ಚ್‌ನಲ್ಲಿ  ಅಧ್ಯಯನ ಆರಂಭಿಸಲಾಯಿತು. ಈ ಅಧ್ಯಯನ ತಂಡದಲ್ಲಿ ಐವರು ಸದಸ್ಯರಿದ್ದಾರೆ.  50ಕ್ಕಿಂತ ಹೆಚ್ಚಿನ ಫ್ಲ್ಯಾಟ್‌ಗಳನ್ನು ಒಳಗೊಂಡ ಅಪಾರ್ಟ್‌ಮೆಂಟ್‌ಗಳ ಸಮುಚ್ಚಯಗಳನ್ನು ಗುರಿಯಾಗಿಸಿಕೊಂಡು ಈ ಅಧ್ಯಯನ ನಡೆಸಲಾಗಿದೆ’ ಎಂದರು.

‘ಕೋರಮಂಗಲ, ಜಯನಗರ, ಮಲ್ಲೇಶ್ವರ ಹಾಗೂ ಚಲ್ಲಘಟ್ಟದಲ್ಲಿ ಅಧ್ಯಯನ ನಡೆಸಿದ್ದು, ಅಪಾರ್ಟ್‌ಮೆಂಟ್‌ ನಿವಾಸಿಗಳು, ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳನ್ನು ಮಾತನಾಡಿಸಲಾಗಿದೆ. ಈ ಬಗ್ಗೆ ಪ್ರಶ್ನಾವಳಿ ಸಿದ್ಧಪಡಿಸಿ ಮಾಹಿತಿ ಸಂಗ್ರಹಿಸಲಾಗಿದೆ. 74 ಜನರ ಸಂದರ್ಶನ ನಡೆಸಲಾಗಿದೆ’ ಎಂದರು.

‘ಗುತ್ತಿಗೆದಾರರ ಮಾಫಿಯಾದಿಂದ ಕಸ ವಿಂಗಡಣೆ ಹಾಗೂ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಅವರು ಒಣ ಹಾಗೂ ಹಸಿ ಕಸವನ್ನು ಮಿಶ್ರಣ ಮಾಡುತ್ತಾರೆ. ಅಪಾರ್ಟ್‌ಮೆಂಟ್‌ಗಳ ಸಮುಚ್ಚಯಗಳಲ್ಲಿ ಹಸಿ ಹಾಗೂ ಒಣಕಸ ವಿಂಗಡಣೆ ಸಮರ್ಪಕವಾಗಿ ಮಾಡಲಾಗುತ್ತಿದೆ. ಆದರೆ, ಸ್ಯಾನಿಟರಿ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ’ ಎಂದರು.

ಅಧ್ಯಯನ ತಂಡದ ಸದಸ್ಯರು: ಚೀನಾದ ಸಿಚುವಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಕ್ಸುವಾ ಜಾಂಗ್‌, ಏಟ್ರಿ ಸಂಸ್ಥೆಯ ಮೇಘಾ ಶೆಣೈ, ಡಾ.ಶ್ವೇತ್‌ಮಾಲಾ ಕಶ್ಯಪ್‌, ಡಾ.ಕೆ. ಪೂರ್ಣಿಮಾ ವಾಸ್ದಾನಿ, ಅಭಿಷೇಕ್‌ ವಿಜಯ್‌ ಗೋಪಾಲ್‌ ಅಧ್ಯಯನ ತಂಡದಲ್ಲಿದ್ದಾರೆ.

**

ಚೀನಾದಲ್ಲಿ ಜಾರಿ
ಕ್ಸುವಾ ಜಾಂಗ್‌ ಅವರು ಚೀನಾದಿಂದ ‘ಸ್ಕೈಪ್‌’ ಮೂಲಕ ಮಾತನಾಡಿ, ‘ಚೀನಾದಲ್ಲಿ ಕಸವನ್ನು ಸುಡಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಸಿದ್ದ ಘನತ್ಯಾಜ್ಯ ನಿರ್ವಹಣೆ ನೀತಿ ಕುರಿತ ಅಧ್ಯಯನದ ವರದಿಯನ್ನು ಚೀನಾದಲ್ಲಿ ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಈ ಬಗ್ಗೆ ಎನ್‌ಜಿಒಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಮುಂದಿನ ವಾರದಿಂದ ಕಸ ವಿಂಗಡಣೆ ಹಾಗೂ ಸಾವಯವ ಗೊಬ್ಬರ ತಯಾರಿಕೆಗೆ ಚಾಲನೆ ನೀಡಲಾಗುತ್ತದೆ’ ಎಂದರು.

‘ಕಸ ವಿಂಗಡಣೆ, ವಿಲೇವಾರಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇರುವಂತೆ ಚೀನಾದಲ್ಲೂ ಗುತ್ತಿಗೆದಾರ ಮಾಫಿಯಾ ಇದೆ. ಇದರಿಂದ ಕಸ ವಿಲೇವಾರಿ ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT