3

ಅಗರ್ತಲಾ ಟು ಮಾಮಿಟ್ ವಯಾ ಜಂಪೀ ಹಿಲ್ಸ್

Published:
Updated:
ಅಗರ್ತಲಾ ಟು ಮಾಮಿಟ್ ವಯಾ ಜಂಪೀ ಹಿಲ್ಸ್

ಈಶಾನ್ಯ ಭಾರತದ ಜನಜೀವನದ ಸೊಗಸನ್ನು ಕಟ್ಟಿಕೊಡುವ ಈ ವಿಶಿಷ್ಟ ಚಿತ್ರಪಟ ಕಥನ, ‘ಇರುವುದೆಲ್ಲವ ಬಿಟ್ಟು’ ತ್ರಿಪುರಾದೆಡೆಗೆ ಹೊರಡುವಂತೆ ಓದುಗರನ್ನು ಪ್ರೇರೇಪಿಸುವಂತಿದೆ.

ಅಗರ್ತಲಾದಲ್ಲಿ ಬೆಳಿಗ್ಗೆ ಐದು ಗಂಟೆ ಸುಮಾರಿಗೇ ಬೆಳಕು ಹರಿದಿತ್ತು, ಕೊರೆಯುವ ಚಳಿ. ಮಂಜು ಬೇರೆ ಬಿದ್ದಿತ್ತು. ಮೂಗುಬಾಯಿಯಲ್ಲೆಲ್ಲಾ ಹೊಗೆ. ನಮ್ಮ ಉತ್ಸಾಹಕ್ಕೆ ಇವ್ಯಾವೂ ಅಡ್ಡಿ ಬರಲಿಲ್ಲ. ಯೂತ್ ಹಾಸ್ಟೆಲ್‌ನಿಂದ ಹೊರಬರುತ್ತಿದ್ದಂತೆಯೇ ರಸ್ತೆ ಪಕ್ಕ ಈಚಲು ಮರಗಳು ಕಣ್ಣಿಗೆ ಬಿದ್ದವು. ನೀರಾ ಇಳಿಸಲು ನಮ್ಮೂರಿನ ಮರಗಳಿಗೆ ಕೊರೆದಂತೆಯೇ ಇಲ್ಲಿನ ಮರಗಳಿಗೂ ತ್ರಿಕೋಣಾಕಾರದ ರಂಧ್ರ ಕೊರೆಯಲಾಗಿತ್ತು.ರಸ್ತೆ ಪಕ್ಕದಲ್ಲಿ ಕುಳಿತಿದ್ದ ತಾತ ಏನೋ ಮಾರುತ್ತಿತ್ತು. ನೋಡಿದರೆ ಈಚಲು ನೀರಾ. ಲೋಕಲ್ ಹೆಸರು ‘ಖೆಜೂರ್ ಜ್ಯೂಸ್’. ಇದಂತೂ ನಮ್ಮೂರಲ್ಲಿ ಕಾಣದ ದೃಶ್ಯ. ಲೋಟವೊಂದಕ್ಕೆ ಹತ್ತೇ ರುಪಾಯಿ. ಎಂಥಾ ರುಚಿ, ಏನ್ ಕತೆ! ಎಳನೀರಿಗೂ ಮಿಗಿಲು.

ಹೆಣ್ಣುಮಕ್ಕಳು, ಮಿಲಿಟರಿ ಅಧಿಕಾರಿಗಳು, ಯುವಕರಾದಿಯಾಗಿ ಎಲ್ಲರೂ ಕುಡಿದುಹೋಗುತ್ತಿದ್ದರು. ಐದಕ್ಕೆ ಶುರುವಾಗಿ ಒಂಬತ್ತು ಗಂಟೆಗೆಲ್ಲಾ ತಾತನ ವ್ಯಾಪಾರ ಬಂದ್. ಕೆಲವರು ಲೀಟರ್‌ಗಟ್ಟಲೆ ಒಯ್ಯುತ್ತಿದ್ದರು, ಕೇಳಿದರೆ ಬೆಲ್ಲ ಮಾಡುತ್ತೇವೆಂಬ ಉತ್ತರ. ಈಚಲು ಬೆಲ್ಲ ತಯಾರಿಕೆ ಅಲ್ಲಿನ ಗೃಹೋದ್ಯಮ.ಆ ರಸ್ತೆಯ ಹೆಸರೇ ‘ವಿಐಪಿ ರೋಡ್’. ಫರ್ಲಾಂಗು ಮುಂದಕ್ಕೆ ರಾಜಭವನ, ಫರ್ಲಾಂಗು ಹಿಂದಕ್ಕೆ ವಿಧಾನಸೌಧ. ಏರಿಯಾ ಹೆಸರು ‘ಖೆಜೂರ್ ಭಾಗನ್’ (ಈಚಲು ತೋಟ). ಅದಕ್ಕೆ ಸಾಕ್ಷಿಯಾಗಿ ಏಳೆಂಟು ಮರಗಳ ತೋಪೇ ಕಂಡಿತು. ಎಲ್ಲ ಮರಗಳಿಗೂ ನೀರಾ ಇಳಿಸಲು ಮಡಕೆ ಕಟ್ಟಲಾಗಿತ್ತು. ಕಾಜಾಣ, ಗೊರವಂಕ ಹಕ್ಕಿಗಳು ಮರದಿಂದ ಮಡಕೆಗೆ ಜಿನುಗುವಾಗಲೇ ರುಚಿ ನೋಡಿ ಥರಾವರಿ ಗಲಾಟೆ ಮಾಡುತ್ತಿದ್ದವು. ಅವಕ್ಕೇನು ಖುಷಿಯೋ.ಈ ರೀತಿಯ ಶುಭ ಶಕುನದೊಂದಿಗೆ ನಮ್ಮ ತ್ರಿಪುರಾ–ಮಿಜೋರಂ ಗುಡ್ಡಗಾಡು ಅಲೆದಾಟ ಆರಂಭವಾಯಿತು. ಅಗರ್ತಲಾದ ಪ್ರವಾಸಿ ತಾಣಗಳಾದ ‘ನೀರಮಹಲ್’, ‘ಪ್ಯಾಲೇಸ್’, ‘ಮ್ಯೂಸಿಯಂ’ಗಳ ಸುದ್ದಿಗೆ ಹೋಗದ ನಮ್ಮ ಗಾಡಿ ಹೊರಟಿದ್ದು ‘ಜಂಪೀ ಹಿಲ್ಸ್’ ಕಡೆಗೆ.ಊರು ಬಿಡುತ್ತಿದ್ದಂತೆ ರಸ್ತೆಯ ಎರಡೂ ಕಡೆ ಇಟ್ಟಿಗೆ ಹಾಕುವ ದೃಶ್ಯ. ತ್ರಿಪುರಾದಲ್ಲಿ ಜಲ್ಲಿಕಲ್ಲಿಗೆ ಪರ್ಯಾಯವಾಗಿ ಇಟ್ಟಿಗೆ ಬಳಕೆ ಕಂಡೆವು. ರಸ್ತೆಗೆ ಇಟ್ಟಿಗೆ ಜೋಡಿಸಿ ಮೇಲೆ ಟಾರು ಹಾಕುವುದು ಸಾಮಾನ್ಯ. ಇಟ್ಟಿಗೆಯನ್ನು ಚೂರು ಮಾಡಿ ಸಣ್ಣಜಲ್ಲಿಯಂತೆ ಬಳಸಲಾಗುತ್ತದೆ.ರಸ್ತೆ ಎಷ್ಟು ತಿರುವು ಮುರುವಾಗಿತ್ತೆಂದರೆ ಅಂಬಾಸಾದಲ್ಲಿ ನಾಷ್ಟಾಕ್ಕೆ ನಿಲ್ಲಿಸಿದ ತಕ್ಷಣ ನುಗ್ಗಿದ್ದು ಮೆಡಿಕಲ್ ಶಾಪಿಗೆ. ನುಂಗಿದ್ದು ‘ಅವಾಮಿನ್’. ನಮ್ಮ ಹೊಟ್ಟೆ ಖಾಲಿ ಇಟ್ಟುಕೊಂಡರೂ ಕ್ಯಾಮೆರಾ ಹೊಟ್ಟೆ ತುಂಬಿಸತೊಡಗಿದೆವು. ಅದಕ್ಕೇನೂ ವಾಂತಿಯ ಚಿಂತೆ ಇಲ್ಲವಲ್ಲ. ತರಹೇವಾರಿ ಕಾಡುಬಾಳೆ, ತಲೆಗಾತ್ರದ ತೆಂಗು, ರಟ್ಟೆಗಾತ್ರದ ಮೂಲಂಗಿ, ಸೋರೆಬಳ್ಳಿ ಸೊಪ್ಪು, ಮುಳ್ಳುಬದನೆ, ಗೇಣುದ್ದದ ನೆಲ್ಲವರೆ, ಬಾಳೆಲೆಯಲ್ಲಿ ಸುತ್ತಿದ ಹುಣಸೆಹಣ್ಣು, ಗಡ್ಡೆಗೆಣಸುಗಳ ಅಪರೂಪದ ಸಂತೆ, ಜೊತೆಗೆ ಅವುಗಳನ್ನು ಮಾರುವ ಬಹುರೂಪದ ಬುಡಕಟ್ಟು ಜನ.ಮುಂದೆ ನಮಗೆ ಕಂಡಿದ್ದು ಕಾಡುಬಾಳೆಯ ವಿಶ್ವರೂಪ. ತಿರುವು, ಕಣಿವೆ, ಬಾರೆ, ಕೊರಕಲು, ಗುಡ್ಡದ ತುದಿ, ಬಯಲುಗಳಲ್ಲೆಲ್ಲ ಬಾಳೆಯದೇ ನೋಟ. ಹತ್ತು ಅಡಿಗಿಂತಲೂ ಎತ್ತರ, ವ್ಯಕ್ತಿಯೊಬ್ಬ ಆರಾಮಾಗಿ ಮಲಗಬಹುದಾದಷ್ಟು ಅಗಲದ ಎಲೆಗಳು. ಬುಡಕಟ್ಟು ಜನರು ಬಾಳೆಯ ಹೂವು, ದಿಂಡು, ಕಾಯಿ, ಹೆಬ್ಬೆರಳು ಗಾತ್ರದ ಆಲೂಗಡ್ಡೆ, ಹಣ್ಣುಗಳ ಚಿಪ್ಪು ಮಾರಾಟ ಮಾಡುತ್ತಾರೆ. ಅದೇ ಅವರ ಜೀವನೋಪಾಯ.ತ್ರಿಪುರಾದಲ್ಲಿ ಹಲವು ರೀತಿಯ ಬುಡಕಟ್ಟು ಜನರಿದ್ದಾರೆ. ‘ಕುಮ್ರಿ ಬೇಸಾಯ’ (ಸ್ಥಳೀಯ ಭಾಷೆಯಲ್ಲಿ ‘ಝಮ್’) ಅವರ ಕಸುಬು. ಅಂದರೆ ಕಾಡಿನ ಒಂದಿಷ್ಟು ಭಾಗವನ್ನು ಸುಟ್ಟು ತರಕಾರಿ, ಆಹಾರ ಧಾನ್ಯ ಮುಂತಾದ ಅಲ್ಪಾವಧಿ ಬೆಳೆ ಹಾಕಿ ಮುಂದಿನ ವರ್ಷ ಬೇರೆಡೆಗೆ ಹೋಗುತ್ತಾರೆ. ಈಗೀಗ ಕುಮ್ರಿ ಬೇಸಾಯದಲ್ಲಿ ಅಡಿಕೆ, ರಬ್ಬರ್ ಬೆಳೆಗಳು ಬಂದಿವೆ.‘ಅವಾಮಿನ್’ ಪ್ರಭಾವಕ್ಕೆ ಜೊಂಪು ಹತ್ತಿ ಗಂಟೆಹೊತ್ತು ಕಣ್ಣು ಮುಚ್ಚಿದೆವು, ಗಾಡಿ ನಿಂತಾಗ ಕಂಡಿದ್ದು ಕಂಚನಪುರ. ಪರವಾಯಿಲ್ಲ, ನಮ್ಮ ನಾಲಿಗೆ ತಿರುಗುವಂತಹ ಉಚ್ಚಾರಣೆಯ ಊರು. ಅಲ್ಲೊಂದು ಟೀ ವಿರಾಮ. ನಾವು ನೋಡಿದ ಕಡೆಯೆಲ್ಲಾ ಟೀ ಮಾಡುವ ವಿಧಾನ ವಿಶಿಷ್ಟ. ತಗಡು ಮರೆಯ ಸೀಮೆ ಎಣ್ಣೆ ಸ್ಟೌ – ಅದರ ಮೇಲೆ ಮೊದಲೇ ಕಾಸಿದ ನೀರಿನ ಕೆಟಲ್.ಗಾಜಿನಲೋಟಗಳಿಗೆ ಬಿಸಿನೀರು ಹಾಕಿ ಅಲ್ಲಾಡಿಸಿ ಚೆಲ್ಲಿ ಒಂದು ಡಬ್ಬಾದಿಂದ ಸಕ್ಕರೆ, ಮತ್ತೊಂದು ಡಬ್ಬಾದಿಂದ ಹಾಲಿನ ಪುಡಿ ಹಾಕಿ, ಇನ್ನೊಂದು ಕೆಟಲ್‌ನಿಂದ ಮೊದಲೇ ತಯಾರಾದ ಡಿಕಾಕ್ಷನ್ ಸುರಿದು ಚಮಚದಿಂದ ತಿರುಗಿಸಿ, ಇನ್ನೂ ಒಂದು ಡಬ್ಬಾದಿಂದ ಮತ್ತೆಂತದೋ ಪುಡಿ ಹಾಕಿ ಮತ್ತೆ ಕಲಕಿದರೆ ಚಾಯ್ ರೆಡಿ. ಆ ಮತ್ತೊಂದು ಪುಡಿ ಏನೆಂದು ಮೂಸಿದರೆ ‘ಬ್ರೂಕಾಫಿ’. ‘ಅರೆರೆ’ ಎಂಬ ಉದ್ಗಾರ ನಮ್ಮಿಂದ, ‘ಟೀ ಮಂದವಾಗಿ ರುಚಿಯಾಗಿರುತ್ತದೆ’ ಎಂಬ ಉತ್ತರ ಅವರಿಂದ.‘ಚಾಫಿ’ ಕುಡಿದು ಹೊರಟ ತುಸು ಹೊತ್ತಿನಲ್ಲೇ ವಾತಾವರಣ ಚಿಲ್ ಆದ ಅನುಭವ. ಜಂಪೀ ಹಿಲ್ಸ್ ಆರಂಭವಾಗಿತ್ತು. ಪದರ ಪದರವಾಗಿ ಹಬ್ಬಿರುವ ಗುಡ್ಡಗಳ ಸಮೂಹವದು. ಅಲ್ಲಿನ ಒಂದು ಗುಡ್ಡದ ಮೇಲೆ ಸರ್ಕಾರದ ಪ್ರವಾಸೋದ್ಯಮ ಇಲಾಖೆ ‘ಈಡನ್ ಟೂರಿಸ್ಟ್ ಲಾಡ್ಜ್’ ನಿರ್ಮಿಸಿದೆ. ಅಲ್ಲಿ ನಮ್ಮ ವಾಸ್ತವ್ಯ. ಅಗರ್ತಲಾದಿಂದ ಅಲ್ಲಿಗೆ ಇನ್ನೂರು ಕಿಲೋಮೀಟರ್. ನಾನ್‌ಸ್ಟಾಪ್ ಬಂದರೆ ಐದು ತಾಸು. ನಾವು ನಾನಾ ಸ್ಟಾಪ್ ತೆಗೆದುಕೊಂಡಿದ್ದರಿಂದ ಏಳು ತಾಸು ಬೇಕಾಯಿತು.ಹೋಟೆಲ್ಲಿಗೆ ತುಸುವೇ ದೂರದಲ್ಲಿ ವಾಂಗ್ಮನ್ ಹಳ್ಳಿ ಇದೆ. 1945ರ ಎರಡನೇ ಮಹಾಯುದ್ಧದ ಸಂದರ್ಭ. ಫೆಬ್ರುವರಿ ತಿಂಗಳು, ಹೊತ್ತಿ ಉರಿಯುತ್ತಿದ್ದ ಯುದ್ಧ ವಿಮಾನಗಳಿಂದ ಇಬ್ಬರು ಅಮೆರಿಕಾ ಪೈಲಟ್‌ಗಳು ಜಿಗಿಯುತ್ತಾರೆ, ಆ ಸ್ಥಳವೇ ವಾಂಗ್ಮನ್ ಹಳ್ಳಿ. ಇಲ್ಲಿನ ಬುಡಕಟ್ಟು ಯುವಕರು ಅವರನ್ನು ರಕ್ಷಿಸಿ ಪ್ರಾಣ ಉಳಿಸುತ್ತಾರೆ.ತ್ರಿಪುರಾದಲ್ಲಿ ತುಂಬಾ ಬೆಂಗಾಲಿಗಳಿದ್ದಾರೆ. ಭಾಷೆ–ಸಂಸ್ಕೃತಿಯಲ್ಲೂ ಅವರ ಪ್ರಭಾವವಿದೆ. ನಮಗೆ ಅಪ್ಪಟ ಬುಡಕಟ್ಟು ಚಹರೆ ಶುರುವಾಗಿದ್ದು ವಾಂಗ್ಮನ್ ಹಳ್ಳಿಯಿಂದಲೇ. ಹಳ್ಳಿಯ ಹೆಸರುಗಳೂ ವಿಭಿನ್ನ. ಹಾಗಾಗಿ ಸೀದಾ ಹಳ್ಳಿ ನೋಡಲು ನಡೆದೆವು.ಸ್ವಚ್ಛ ಹಳ್ಳಿ, ಸಣ್ಣಕಣ್ಣಿನ, ಗುಂಡು ಮುಖದ ಜನ. ಒಂದು ಮನೆ ಕಂ ಹೋಟೆಲ್ಲಿಗೆ ಹೋದೆವು. ನಾಲ್ಕು ತಲೆಮಾರು ಅಲ್ಲಿತ್ತು. ಥೇಟು ‘ಡಾ. ಬೀನ್’ ಸಿನಿಮಾದ ವಿಷ್ಲರ್ಸ್ ಮದರ್ ಥರ ಇದ್ದ ಅಜ್ಜಿ, ಮಗಳು–ಅಳಿಯ, ಅವರ ಮಗಳು ಮತ್ತು ಆಕೆಯ ಪುಟ್ಟ ಮಗು. ನಾವು ಚಾಫಿ ಕುಡಿಯುತ್ತಿದ್ದಾಗ ಅಮ್ಮ–ಮಗಳು ‘ಮೊಮೊ’ ಮಾಡಹತ್ತಿದರು (ಮೊಮೊ – ಈಶಾನ್ಯ ಭಾರತದ ಜನಪ್ರಿಯ ತಿನಿಸು, ಕಡುಬಿನ ತರ ಇರುತ್ತದೆ).

ತಿನ್ನುವ ಆಸೆಯಾಯಿತು. ಅದು ವೆಜ್ಜೋ ನಾನ್‌ವೆಜ್ಜೋ ಎಂಬ ಗೊಂದಲ. ಕನ್ನಡ ಆಕ್ಸೆಂಟಿನ ಹಿಂದಿಯಲ್ಲಿ ಕೇಳಿದೆವು. ಬೆಂಗಾಲಿ ಫ್ಲೇವರಿನ ಬುಡಕಟ್ಟು ಭಾಷೆಯಲ್ಲಿ ಉತ್ತರ ಬಂತು. ಅಳಿಯನನ್ನು ಕೇಳಿದೆವು, ಪ್ರತಿಕ್ರಿಯೆ ಡಿಟ್ಟೊ. ಜೊತೆಗೆ ಅವರ ಮುಖದಲ್ಲಿ ಎಂಥದ್ದೋ ಗೊಂದಲ. ವಾಪಸು ಬರುವಾಗ ನಮ್ಮ ಜೊತೆ ಬಂದಿದ್ದ ಸ್ಥಳೀಯ ಹುಡುಗ ದಾಸ್ ‘ಅದು ಬೀಫ್ ಮೊಮೊ ಸಾರ್’ ಎಂದ. ಅವರ ಗೊಂದಲದ ಮುಖಗಳಿಗೆ ಕಾರಣ ತಿಳಿದು ನಮ್ಮ ಗೊಂದಲ ಪರಿಹಾರವಾಯಿತು.ಈಗ್ಗೆ ಕೇವಲ ಐದಾರು ವರ್ಷಗಳವರೆಗೂ ಜಂಪೀ ಬೆಟ್ಟಸಾಲು ವಿಶಿಷ್ಟ ಸ್ವಾದದ ಕಿತ್ತಳೆಗೆ ಪ್ರಸಿದ್ಧ. ನವೆಂಬರ್–ಡಿಸೆಂಬರ್ ತಿಂಗಳಿಡೀ ನಡೆಯುತ್ತಿದ್ದ ಕಿತ್ತಳೆ ಹಬ್ಬಕ್ಕೆ ಪ್ರವಾಸಿಗರ ದಂಡೇ ಬರುತ್ತಿತ್ತು. ವೈರಸ್ ರೋಗಕ್ಕೆ ತುತ್ತಾಗಿ ಇಂದು ಬಹುತೇಕ ತೋಟಗಳು ನಾಶವಾಗಿವೆ. ಹಬ್ಬವೂ ನಿಂತಿದೆ. ತ್ರಿಪುರಾದ ಅತಿ ಎತ್ತರದ ಬೆಟ್ಟಸಾಲಿದು.ಈಡನ್ನಿನಲ್ಲಿ ಊಟ ಮಾಡುವಾಗ ಮೊಸರು ನೆನಪಾಯಿತು. ಕಳೆದ ನಾಲ್ಕು ದಿವಸಗಳಿಂದಲೂ ನಮ್ಮ ಮೊಸರನ್ವೇಷಣೆಗೆ ಜಯ ಸಿಕ್ಕಿರಲಿಲ್ಲ. ತ್ರಿಪುರಾದಲ್ಲಿ ದನಗಳೇ ಕಡಿಮೆ. ಅಗರ್ತಲಾದಲ್ಲಿ ಕೆಲವರು ಸಾಕಿದ್ದಾರೆ. ಆದರೆ ಹಾಲು–ಮೊಸರಿನ ಬಳಕೆ ತೀರಾ ಕಡಿಮೆ.ಬೆಳಿಗ್ಗೆ ನಮ್ಮ ಗಮನ ಮಿಜೋರಾಂನತ್ತ. ಘಟ್ಟ ಇಳಿಯತೊಡಗಿದೆವು. ಕಚ್ಚಾ ಮಣ್ಣಿನ ರಸ್ತೆ, ಅದೆಷ್ಟು ಕಚ್ಚಾ ಎಂದರೆ ಗೂಗಲ್ ಮ್ಯಾಪಿನಲ್ಲಿಯೂ ದಾಖಲಾಗಿಲ್ಲ. ಹತ್ತಡಿಗೂ ಎತ್ತರದ ಕಾಡು ಏಲಕ್ಕಿ ಅಚ್ಚರಿ ಹುಟ್ಟಿಸಿತು. ಘಟ್ಟ ಹತ್ತುವಾಗ ಸಿಕ್ಕಿದ್ದೇ ಆ ಹಳ್ಳಿ. ಹೆಸರು ತುಮ್‌ಲೈ. ಹಸುಗೂಸುಗಳನ್ನು ಬೆನ್ನಿಗೆ ಕಟ್ಟಿಕೊಂಡು ಎದುರಾಬದುರಾ ನಿಂತು ಭತ್ತ ಕುಟ್ಟುವ ಹೆಣ್ಣುಮಕ್ಕಳು. ಬಿದಿರನ್ನೇ ಹಾಸಿಹೊದ್ದ ಮನೆಗಳು.ಬಿದಿರು ತಡಿಕೆ, ಬಿದಿರು ಮಾಡು, ಬಿದಿರು ಗಳ, ಭತ್ತ ತುಂಬಲು ಬಿದಿರು ಪಣತ, ಅಡುಗೆಗೆ ಬಿದಿರು ಕಳಲೆ, ಕಾಡಿಗೆ ಒಯ್ಯಲು ಬಿದಿರು ಬುಟ್ಟಿ. ಬಿದಿರಿನದೇ ನೆಲಹಾಸು, ನೆಲಹಾಸಿನ ಒಂದು ಕಡೆ ಅಷ್ಟಗಲ ಮಣ್ಣಿನ ದಿಂಡು ಹಾಕಿ ಅದರ ಮೇಲೆ ಒಲೆ. ಮನೆ ಪಕ್ಕ ಮತ್ತೊಂದು ಪುಟ್ಟ ಮನೆ, ಹಂದಿಗಳಿಗಾಗಿ.ಇದು ನಾವು ಕಂಡ ಬಹುತೇಕ ಬುಡಕಟ್ಟು ಹಳ್ಳಿಗಳ ಮನೆಗಳ ರಚನೆ. ಇಟ್ಟಿಗೆ, ಸಿಮೆಂಟು, ಕಬ್ಬಿಣದ ಬಳಕೆಯೇ ಇಲ್ಲ. ನೆಲದಿಂದ ಮೂರು–ನಾಲ್ಕು ಅಡಿ ಎತ್ತರಕ್ಕೆ ಕವೆಗಳನ್ನು ನಿಲ್ಲಿಸಿ ಅದರ ಮೇಲೆ ಮನೆ ನಿರ್ಮಿಸುತ್ತಾರೆ. ಗೆದ್ದಲು ಹತ್ತಬಾರದೆಂದು ಈ ಉಪಾಯವೆನಿಸುತ್ತದೆ.

ತುಸು ದೊಡ್ಡ ಹಳ್ಳಿಗಳಲ್ಲಿ ಜಿಂಕ್ ಶೀಟು ಹೊದ್ದ ಕೆಲವು ಮನೆಗಳೂ ಕಂಡವು. ನಗರಕ್ಕೆ ಹತ್ತಿರವಾದಂತೆಲ್ಲಾ ಮಣ್ಣಿನ ಗೋಡೆಗಳ ಮನೆಗಳನ್ನು ಕಾಣಬಹುದು. ಆ ಗೋಡೆಗಳನ್ನೂ ತಿದ್ದಿತೀಡಿ ಆಕರ್ಷಕವಾಗಿಟ್ಟುಕೊಂಡಿರುತ್ತಾರೆ. ಜೊತೆಜೊತೆಗೇ ಜೀನ್ಸ್ ಬಟ್ಟೆಗಳು, ಪ್ಲಾಸ್ಟಿಕ್ ವಸ್ತುಗಳು, ಮೊಬೈಲುಗಳು, ಪಾರ್ಲೆ–ಜಿ, ಸೆಂಟರ್ ಫ್ರೆಶ್‌ಗಳು ಕಾಡೊಳಗಿನ ಹಳ್ಳಿಗಳಲ್ಲೂ ಇವೆ.ಬುಡಕಟ್ಟು ಜನರ ಸಹಜ ಸ್ವಭಾವವೇನೂ ಕುಂದಿಲ್ಲ. ಅದರ ಹಲವು ಅನುಭವಗಳು ನಮಗಾದವು. ನಮ್ಮೊಂದಿಗೆ ಮಾತಾಡುತ್ತಲೇ ಮಗುವಿಗೆ ಮೊಲೆಯುಣ್ಣಿಸತೊಡಗಿದ ತುಮ್ ಲೈನ ರೊಮೊತಿ, ಲಂಕೈ ನದಿದಡದಲ್ಲಿ ಗಂಡಸರ ಎದುರೇ ಮೈತೊಳೆದುಕೊಳ್ಳುತ್ತಿದ್ದ ನಡುವಯಸ್ಸಿನ ಹೆಣ್ಣುಮಗಳು, ಹಾದಿ ಪಕ್ಕ ಬಿದಿರು ತಡಿಕೆ ಮಾಡುತ್ತಿದ್ದವರ ಫೋಟೊ ತೆಗೆಯಬೇಕಾದರೆ ಅಲ್ಲಿಯೇ ಕುಳಿತು ಕಾಲುಮಡಿಯಹತ್ತಿದ ಹೆಂಗಸು, ಎಳೆಬಿಸಿಲು ಕಾಯಿಸುತ್ತಾ ಹುಕ್ಕಾ ಎಳೆಯುವ ಮುದುಕಮ್ಮಗಳು ಅದಕ್ಕೆ ಸಾಕ್ಷಿ. ದಾರಿ ಪಕ್ಕ ವ್ಯಾಪಾರ ಮಾಡುತ್ತಿದ್ದವರಲ್ಲಿ ಮಹಿಳೆಯರೇ ಹೆಚ್ಚು. ಮಹಿಳಾ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ಹಲವು ಕಡೆ ಕಂಡೆವು.ಮುಂದೆ ಸಿಕ್ಕಿದ್ದು ಶಿಮ್ಲಂಗ್ ಹಳ್ಳಿ. ಅದರ ಮಗ್ಗುಲಲ್ಲೇ ಲಂಕೈ ನದಿ. ಅದಕ್ಕೊಂದು ಉಕ್ಕಿನ ಸೇತುವೆ. ಅದನ್ನು ದಾಟಿದರೆ   ಮಿಜೋರಾಂ ರಾಜ್ಯ. ದಾಟುವ ಮುನ್ನ ಚಾಫಿ ವಿರಾಮ ಕೊಟ್ಟೆವು. ನಾವೇನೋ ಸದ್ದಿಲ್ಲದೆ ಕುಡಿಯುತ್ತಿದ್ದೆವು, ಎಲ್ಲಿಂದಲೋ ಗುಳುಗುಳು ಸದ್ದು. ಸದ್ದು ಹಿಂಬಾಲಿಸಿದ ಕಣ್ಣುಗಳಿಗೆ ಬಿದ್ದಿದ್ದು ಮಕ್ಕತ್ತಲಲ್ಲಿ ಕುಳಿತ ಸುಕ್ಕುಮುಖದ ಅಜ್ಜಿ, ಬಾಯಲ್ಲಿ ಮೊಳದುದ್ದದ ಹುಕ್ಕಾ. ಎರಡೂ ಕಟವಾಯಿಗಳಿಂದ ಬುಸುಬುಸು ಊದರ ಬಿಡುತ್ತಾ ಸುಖಪಡುತ್ತಿತ್ತು. ಚಾಫಿ ಪಕ್ಕಕ್ಕಿಟ್ಟು ಕ್ಯಾಮೆರಾ ಝಳಪಿಸಿದೆವು.ಅದೊಂದು ವಿಶಿಷ್ಟ ಹುಕ್ಕಾ. ಅಂದಾಜು ಎರಡೂವರೆ ಅಡಿ ಉದ್ದದ ಬಿದಿರಿನ ತುಂಡಿನಿಂದ ಮಾಡಿದ್ದು. ನಮ್ಮ ಪ್ರವಾಸದುದ್ದಕ್ಕೂ ಹಲವು ಹಳ್ಳಿಗಳಲ್ಲಿ ಗಂಡಸರು–ಹೆಂಗಸರು ಬೆಳ್ಳಂಬೆಳಿಗ್ಗೆ ಸೇದುವುದನ್ನು ಕಂಡೆವು. ನಮ್ಮ ಗುಂಪಿನ ಮೂವರು ಯಾವುದೋ ಹಳ್ಳಿಯಲ್ಲಿ ಮೂರು ಹುಕ್ಕಾ ಕೊಂಡರು.

ಅಜ್ಜಿಯನ್ನು ಅದರಪಾಡಿಗೆ ಸುಖಪಡಲು ಬಿಟ್ಟು ಮುಂದುವರಿದೆವು. ಲಂಕೈ ನದಿ ದಾಟುವಾಗ ಅವರು ಕಂಡರು. ಮಿಲಿಟರಿಯವರು ಇರಬೇಕೆಂದುಕೊಂಡೆವು.

ಹಾಗಿತ್ತು ಅವರ ದಿರಿಸು. ಸೊಂಟದಲ್ಲೊಂದು ಚಿತ್ತಾರದ ಚಾಕು ಬೇರೆ. ಮಾತನಾಡಿಸಿದಾಗ ಮಿಜೋರಾಂನ ಅರಣ್ಯ ಇಲಾಖೆಯವರೆಂದು ತಿಳಿಯಿತು. ಇತ್ತೀಚೆಗೆ ಇಲಾಖೆಯ ಹೆಸರು ‘ಪರಿಸರ, ಜೀವವೈವಿಧ್ಯ ಮತ್ತು ಹವಾಮಾನ ವೈಪರೀತ್ಯ ಇಲಾಖೆ’ ಎಂದು ಬದಲಾಗಿದೆಯಂತೆ. ಶೇಕಡ 70ರಷ್ಟು ಅರಣ್ಯ ಪ್ರದೇಶವಿರುವ ಅವರಿಗಿಂತ, ಶೇ 20ಕ್ಕಿಂತಲೂ ಕಡಿಮೆ ಕಾಡು ಮಾಡಿಕೊಂಡಿರುವ ನಾವಲ್ಲವೇ ಆ ರೀತಿ ಬದಲಾಯಿಸಬೇಕಾದ್ದು!ಮಿಜೋರಾಂ ರಸ್ತೆ ಚೆನ್ನಾಗಿತ್ತು, ಟಾರು ಹಾಕಿದ್ದರು. ತಾಳೆ ತೋಪುಗಳು ಆರಂಭವಾದವು. ಪಟ್ಟಣ ಎನ್ನಬಹುದಾದ ಟಾಡಮ್ ಊರು ದಾಟಿದೆವು. ಅರ್ಧ ಗಂಟೆ ಪ್ರಯಾಣಿಸಿದರೆ ಜಿಲ್ಲಾ ಕೇಂದ್ರ ಮಾಮಿಟ್ ಸಿಗುವುದರಿಂದ ಒಂದೇ ಸಲ ಅಲ್ಲೇ ಊಟ ಮಾಡುವ ಒಕ್ಕೊರಲ ತೀರ್ಮಾನವಾಯಿತು. ಡಾಲಿಕ್ ಹೆಸರಿನ ಮತ್ತೊಂದು ಹಳ್ಳಿ. ಕೆಸರು ತುಂಬಿದ ಹೊಂಡದಲ್ಲಿ ದಂಪತಿಗಳು ಸುಖವಾಗಿ ಮೀನು ಹಿಡಿಯುತ್ತಿದ್ದರು. ಅವರ ಪುಟ್ಟ ಮಗ ತೊಡೆಯವರೆಗೂ ಕೆಸರಿನಲ್ಲಿ ಹೂತುಕೊಂಡು ಮೀನು ಹುಡುಕುತ್ತಿದ್ದ. ಅವರು ಡೋಂಟ್‌ಕೇರ್ ಆಗಿದ್ದರು.ಘಟ್ಟ ಏರತೊಡಗಿದೆವು. ಅಲ್ಲೊಂದು ಸುಂದರ ಕೆರೆ. ಕೆರೆ ದಡದಲ್ಲಿದ್ದ ಪುಟ್ಟ ಮನೆಯೂ, ನೀರಿನ ನಡೂಮಧ್ಯೆ ನಿರ್ಮಿಸಿದ್ದ ಅಟ್ಟವೂ, ಸುತ್ತಣ ಕಾಡಿನ ಹಸುರೂ ಕೆರೆಯಲ್ಲಿ ಪ್ರತಿಫಲಿಸಿ ಕಾಡೊಳಗೆ ಕೆರೆಯೋ ಕೆರೆಯೊಳಗೆ ಕಾಡೋ ಎಂಬ ಭ್ರಮೆ ಉಂಟಾಯಿತು. ಹಸಿದ ಹೊಟ್ಟೆಯೂ ಈ ಭ್ರಮೆಗೆ ಕಾರಣವಿದ್ದೀತು. ತುಸು ಹೊತ್ತಿಗೇ ದೂರದಲ್ಲಿ ಕಂಡಿತು ಮಾಮಿಟ್.

ಜಿಲ್ಲಾ ಕೇಂದ್ರವಾದ್ದರಿಂದ ಇಡ್ಲಿ ಸಿಕ್ಕರೂ ಸಿಗಬಹುದೆಂಬ ಆಶಾವಾದ, ಅಟ್‌ಲೀಸ್ಟ್ ಅನ್ನ–ತಿಳಿಸಾರಿಗೇನೂ ಮೋಸವಿಲ್ಲ ಎಂಬ ಸಮತಾವಾದ, ‘ಇಡ್ಲಿ ತಿನ್ನೋಕೆ ಅಲ್ಲಿಂದ ಇಲ್ಲೀವರ್ಗೂ ಬರ್ಬೇಕಾ, ಲೋಕಲ್ ಟೇಸ್ಟ್ ನೋಡ್ಬೇಕ್ರೀ’ ಎಂಬ ಪ್ರತಿವಾದಗಳೂ ನಡೆದವು.

ಆದರೆ ಎಲ್ಲ ವಾದಗಳು ಬರ್ಬಾದಾದ ಘಟನೆಯೊಂದು ನಡೆಯಿತು. ನಗರದ ಅಂಚಿನ ರಸ್ತೆ ಪಕ್ಕದಲ್ಲಿಯೇ ಹೆಣ್ಣುಮಗಳೊಬ್ಬಳು ಇಡೀ ನಾಯಿಯನ್ನು ಹದವಾಗಿ ಸುಡುತ್ತಾ ಕುಳಿತಿದ್ದಳು. ಹಿಂಬದಿಯಿಂದ ಮುಂಬದಿಯವರೆಗೂ ಕಬ್ಬಿಣದ ಸರಳನ್ನು ತೂರಿಸಿ ಎರಡು ಕವೆಗಳ ಮೇಲೆ ಅದನ್ನಿಟ್ಟು ಎಡಗೈಲಿ ತಿರುಗಿಸುತ್ತಾ ಬಲಗೈಲಿ ಬೆಂಕಿ ಹಿಡಿದು ‘ಬಾರ್ಬಿಕ್ಯೂ’ ಮಾಡುತ್ತಿತ್ತು. ನಾಲಿಗೆ ಹೊರಹಾಕಿದ್ದ ಅದರ ಬಾಯೋ, ಸೆಟೆದುಕೊಂಡಿದ್ದ ಅದರ ಕಾಲುಗಳೋ.

ಫೋಟೊ ತೆಗೆಯಬೇಕೋ ಬೇಡವೋ ಎಂಬ ಗೊಂದಲ. ಅದರಲ್ಲೂ ನಮ್ಮ ಜಗದೀಶನ ಲೆನ್ಸ್ ಕ್ಯಾಮೆರಾ ಯಾವ ‘ಏ.ಕೆ. 47’ಗೂ ಕಮ್ಮಿ ಇರಲಿಲ್ಲ. ಆದರೂ ಅಪರೂಪದ ದೃಶ್ಯ ಬಿಡಬಾರದೆಂದು ಇಳಿದೆವು. ಮನೆಯಿಂದ ಮತ್ತೊಂದು ಹೆಂಗಸು ಹೊರಬಂದು ‘ನೀವು ಜರ್ನಲಿಸ್ಟಾ’ ಎಂದಿತು. ನಂತರ, ಏನಾದರೂ ಮಾಡಿಕೊಳ್ಳಿ ಎಂಬ ತೀರಾ ನಿರ್ಲಕ್ಷ್ಯ ಮುಖಭಾವದಲ್ಲಿ ಒಳಗೆ ಹೋದಳು.‘ಬೌಬೌ ಬಿರಿಯಾನಿ’ ಬಗ್ಗೆ ಕೇಳಿದ್ದೆವು, ಜೋಕು ಮಾಡಿದ್ದೆವು, ಆದರೆ ಈ ರೀತಿ ಸಾಕ್ಷಾತ್ಕಾರವಾಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಅವರ ಆಹಾರಪದ್ಧತಿಯ ಬಗ್ಗೆ ಗೌರವ ಇಟ್ಟುಕೊಂಡೇ ಅಲ್ಲಿನ ಹೋಟೆಲ್ಲುಗಳಲ್ಲಿ ಊಟ ಮಾಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಸುದೀರ್ಘ ಚರ್ಚೆಗಳಾದವು. ಲೋಕಲ್ ಟೇಸ್ಟ್ ಪರ ವಾದ ಮಂಡಿಸಿದ್ದವರೂ ಸಹ ತೀರಾ ಅಷ್ಟೊಂದು ಲೋಕಲ್ಲಿಗಿಳಿಯಲು ಧೈರ್ಯ ಮಾಡಲಿಲ್ಲ.

‘ಜಸ್ಟ್ ಫ್ರೂಟ್ಸ್ ಸಾಕು’ ಎಂಬುದಕ್ಕೆ ಬಹುಮತ ಬಿತ್ತು. ನೂರು ಕಿಲೋಮೀಟರ್ ಬಂದಿದ್ದೆವು. ಐದು ತಾಸು ಪ್ರಯಾಣ. ವಾಪಸು ಅಷ್ಟೇ ದೂರ ಹೋಗಬೇಕಿತ್ತು. ಡ್ರೈವರ್ ಅಮಿತ್ ಸಹ ಏನೂ ತಿಂದಿರಲಿಲ್ಲವಾದ್ದರಿಂದ ಸತತ ಹುಡುಕಾಟದ ನಂತರ ಹೆಣ್ಣುಮಕ್ಕಳೇ ನಡೆಸುತ್ತಿದ್ದ ಹೋಟೆಲೊಂದರಲ್ಲಿ ಹುರಿದ ಅನ್ನ ತಿಂದೆವು.ಮಾಮಿಟ್ ಬೀದಿಗಳಲ್ಲಿನ ಅಂಗಡಿಮುಂಗಟ್ಟುಗಳ ಹೆಸರು ಗಮನಸೆಳೆದವು: ‘ಜೊಜೊ ಐರನ್ ಶಾಪ್’, ‘ಜಮ್ ಜಮ್ ರೆಸ್ಟೋರೆಂಟ್’, ‘ರಿಮ್ ರಿಮ್ ಟೆಕ್ಸ್ಟ್‌ಟೈಲ್ಸ್’...ಹೊರಡುವ ಮುಂಚೆ ನಗರ ಸುತ್ತುವ ಆಸೆಯಾಯಿತು. ಗಾಡಿಯಲ್ಲಿಯೇ ಒಂದು ರೌಂಡ್ ಬಂದೆವು. ನಮ್ಮ ನಿರೀಕ್ಷೆ ನಿಜವಾಗಿತ್ತು. ಒಂದು ನಾಯಿಕುನ್ನಿಯೂ ಕಣ್ಣಿಗೆ ಬೀಳಲಿಲ್ಲ.

ಇಡೀ ಈಶಾನ್ಯ ಭಾರತ ವೈವಿಧ್ಯಮಯ ಬಿದಿರಿನಿಂದ ಸಮೃದ್ಧ. ತ್ರಿಪುರಾ ರಾಜ್ಯದಲ್ಲಿಯೇ 20ಕ್ಕೂ ಅಧಿಕ ಜಾತಿಯ ಬಿದಿರುಗಳಿವೆ. ಅಕ್ಕಿಕಾಳಿನಷ್ಟು ಸಣ್ಣ ಹಾಗೂ ನಿಂಬೆಹಣ್ಣಿನಷ್ಟು ದೊಡ್ಡ ಗಾತ್ರದ ಬೀಜವುಳ್ಳ ಬಿದಿರು ವೈವಿಧ್ಯವಿದೆ. ನಾವು ಬಂದ ದಾರಿಯಲ್ಲಿ ಕಂಚನಪುರಕ್ಕೂ ಹಿಂದೆ ಸಿಗುವ ಕುಮರ್ ಘಾಟ್ ಬಿದಿರು ವಹಿವಾಟಿನ ಜನಪ್ರಿಯ ಜಂಕ್ಷನ್. ಉದ್ದುದ್ದದ ಬಿದಿರುಗಳನ್ನು ಅಲ್ಲಿನ ನದಿಯಲ್ಲಿ ನೆನೆಹಾಕಿದ ದೃಶ್ಯ ನಯನಮನೋಹರ.

ಬಿದಿರು ಜನರ ಪ್ರಮುಖ ಆದಾಯದ ಮೂಲ. ಬಿದಿರಿನ ಕಿರುಸೇತುವೆಗಳು ಅಲ್ಲಿನ ಸಂಪರ್ಕಸೇತು. ತ್ರಿಪುರಾ ವಿಶ್ವವಿದ್ಯಾಲಯದಲ್ಲಿ ಬಿದಿರಿಗೆ ಸಂಬಂಧಿಸಿ ಆರು ತಿಂಗಳ ಕೋರ್ಸ್ ಸಹ ಇದೆ. ‘ತ್ರಿಪುರಾ ಬ್ಯಾಂಬೂ ಮಿಷನ್’ ಮೂಲಕ ಸರ್ಕಾರ ಬಿದಿರಿನ ದಾಖಲಾತಿ, ಉಳಿವು ಮತ್ತು ಮೌಲ್ಯವರ್ಧನೆಯ ಹಲವು ಕೆಲಸ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry