7

ಮಾನವ ಹಕ್ಕುಗಳ ವಿರುದ್ಧ ಟ್ರಂಪ್ ಯುದ್ಧ

Published:
Updated:
ಮಾನವ ಹಕ್ಕುಗಳ ವಿರುದ್ಧ ಟ್ರಂಪ್ ಯುದ್ಧ

ನಾನು ಆಮ್ನೆಸ್ಟಿ ಇಂಡಿಯಾ ಸಂಸ್ಥೆ ಪರ ಕೆಲಸ ಮಾಡುತ್ತೇನಾದರೂ, ಈ ಅಂಕಣದಲ್ಲಿ ವ್ಯಕ್ತವಾಗುವುದು ನನ್ನ ವೈಯಕ್ತಿಕ ಅಭಿಪ್ರಾಯ. ಆದರೆ, ಇಂದಿನ ಅಂಕಣದಲ್ಲಿ ಆಮ್ನೆಸ್ಟಿ ಸಂಸ್ಥೆಯ ಅಭಿಪ್ರಾಯ ಬರೆದಿದ್ದೇನೆ.

ಡೊನಾಲ್ಡ್‌ ಟ್ರಂಪ್‌ ಅವರು ಭೀತಿ, ಅನ್ಯರಾಷ್ಟ್ರಗಳ ಜನರ ಬಗ್ಗೆ ಅಸಹನೆ ಮತ್ತು ದ್ವೇಷವನ್ನು ಅಡಿಗಲ್ಲಾಗಿಸಿಕೊಂಡು ಅಮೆರಿಕದ ಅಧ್ಯಕ್ಷ ಸ್ಥಾನ ಗೆದ್ದ ವಿದ್ಯಮಾನವನ್ನು ಭೀತಿಯಿಂದ ಗಮನಿಸಿದವರಲ್ಲಿ ಒಂದು ಆಶಾವಾದ ಇತ್ತು. ಟ್ರಂಪ್‌ ಅವರ ವಿಷಕಾರಿ ಚುನಾವಣಾ ಅಭಿಯಾನ, ಮತಗಳನ್ನು ಗೆಲ್ಲುವ ತಂತ್ರ ಮಾತ್ರ ಆಗಿರಬಹುದು ಎಂಬ ನಂಬಿಕೆ ಅವರಲ್ಲಿತ್ತು. ಅವರು ತಮ್ಮ ಮಾತುಗಳನ್ನು ಹಾಗೇ ಸುಮ್ಮನೆ ಆಡಿರಬೇಕು, ಅವು ಪದಗಳಾಗಿ ಮಾತ್ರ ಉಳಿಯುತ್ತವೆ ಎಂಬ ಆಸೆಯಿತ್ತು. ಜನರ ಒಂದಿಡೀ ಸಮೂಹವನ್ನು ಕೆಟ್ಟದ್ದಾಗಿ ಚಿತ್ರಿಸುವುದರಿಂದ ವಾಸ್ತವದಲ್ಲಿ ಕೆಟ್ಟ ಪರಿಣಾಮಗಳು ಇರಲಿಕ್ಕಿಲ್ಲ ಎಂಬ ನಿರೀಕ್ಷೆ ಇತ್ತು.

ಕಳೆದ ಕೆಲವು ವಾರಗಳಿಂದ ಅಮೆರಿಕದಲ್ಲಿ ಭಾರತ ಮೂಲದವರ ಮೇಲೆ ಹಾಗೂ ಅನಿವಾಸಿ ಭಾರತೀಯ ಪ್ರಜೆಗಳ ಮೇಲೆ ನಡೆಯುತ್ತಿರುವ ದ್ವೇಷದ ದಾಳಿಗಳನ್ನು ಭಾರತದಲ್ಲಿ ಕಳವಳದಿಂದ ಗಮನಿಸಲಾಗುತ್ತಿದೆ. ಅಧ್ಯಕ್ಷ ಟ್ರಂಪ್‌ ಅವರು ತಾಳಿರುವ ವಲಸೆ ವಿರೋಧಿ ನಿಲುವು ಅಮೆರಿಕದಲ್ಲಿ ಅನ್ಯರಾಷ್ಟ್ರಗಳ ಜನರ ಬಗ್ಗೆ ಅಸಹನೆ ಬೆಳೆಯಲು ಕೊಡುಗೆ ನೀಡಿರುವುದು ಸ್ಪಷ್ಟವಾಗಿದೆ. ಇದರಿಂದಾಗಿ ಅಲ್ಲಿನ ಅಲ್ಪಸಂಖ್ಯಾತ ಸಮುದಾಯದ ಜನರ ಮೇಲೆ ಹಿಂಸೆ, ಹಲ್ಲೆಗಳು ಹೆಚ್ಚಾಗಿವೆ.

ಅಮೆರಿಕದ ಹೊಸ ಅಧ್ಯಕ್ಷರು ತಮ್ಮ ದೇಶದ ನೀತಿಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ದ್ವೇಷದ ಸಂಕಥನಕ್ಕೆ ಇಂಬು ನೀಡುವಂತೆ ಕೈಗೊಂಡಿದ್ದಾರೆ. ಇವು ಮಾನವ ಹಕ್ಕುಗಳ ಮೇಲೆ ಗಂಭೀರವಾದ, ತಕ್ಷಣದ ಪರಿಣಾಮ ಬೀರಲಿವೆ– ಅಮೆರಿಕದಲ್ಲಿಯೂ, ಅಮೆರಿಕದ ಆಚೆಯೂ.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಮೊದಲ ಎರಡು ತಿಂಗಳಲ್ಲಿ ಟ್ರಂಪ್‌ ಅವರು ಹೊರಡಿಸಿರುವ ಪ್ರತಿಗಾಮಿ ಕಾರ್ಯಕಾರಿ ಆದೇಶಗಳು ದೂರಗಾಮಿ, ಅಪಾಯಕಾರಿ ಪರಿಣಾಮ ಬೀರಲಿವೆ. ಇದು ಅಮೆರಿಕಕ್ಕೆ ಮಾತ್ರ ಸಂಬಂಧಿಸಿದ ಸಮಸ್ಯೆ ಅಲ್ಲ. ಸಮಸ್ಯೆ ಅದರಾಚೆಯೂ ಕಾಣಿಸಲಿದೆ. ಟ್ರಂಪ್‌ ಅವರ ಶ್ವೇತಭವನ ಕೈಗೊಳ್ಳುವ ತೀರ್ಮಾನಗಳು ವಿಶ್ವದ ಎಲ್ಲೆಡೆ ಪರಿಣಾಮ ಉಂಟುಮಾಡಲಿವೆ, ದುರ್ಬಲರ ಮೇಲೆ ಹೆಚ್ಚಿನ ಆಘಾತ ಉಂಟಾಗಲಿದೆ.

ಟ್ರಂಪ್‌ ಅವರು ಚುನಾವಣಾ ಪ್ರಚಾರದ ವೇಳೆ ಮುಸ್ಲಿಮರು ಮತ್ತು ನಿರಾಶ್ರಿತರನ್ನು ಮಾತಿನ ದಾಳಿಯ ಗುರಿ ಮಾಡಿಕೊಂಡಿದ್ದರು. ಅಧ್ಯಕ್ಷರಾದ ನಂತರವೂ ಅವರ ಗುರಿ ಈ ಎರಡು ವರ್ಗಗಳೇ ಆಗಿರುವುದು ಆಶ್ಚರ್ಯದ ಸಂಗತಿಯೇನೂ ಅಲ್ಲ. ಅಮೆರಿಕದಲ್ಲಿ ಈಗ ನಿರಾಶ್ರಿತನೊಬ್ಬ ಮುಸ್ಲಿಮನೂ ಆಗಿದ್ದರೆ ಆತನ ಪರಿಸ್ಥಿತಿ ತೀರಾ ದುರ್ಭರ.

‘ವಿದೇಶಿ ನಾಗರಿಕರು ದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸದಂತೆ ತಡೆಯಲು’ ಎಂದು ಹೇಳುವ ಜನವರಿ 27ರ ಆದೇಶದ ಮೂಲಕ ಟ್ರಂಪ್ ಅವರು ವಿಶ್ವದೆಲ್ಲೆಡೆಯ ಮುಸ್ಲಿಂ ನಿರಾಶ್ರಿತರ ಮೇಲೆ ಯುದ್ಧ ಘೋಷಿಸಿದರು. ಈ ಆದೇಶವನ್ನು ಗೊತ್ತುಗುರಿ ಇಲ್ಲದೆ ಅನುಷ್ಠಾನಕ್ಕೆ ತರಲು ಮುಂದಾಗಿದ್ದು ಭಯ ಮತ್ತು ಗೊಂದಲಗಳಿಗೆ ಕಾರಣವಾಯಿತು.

ವಲಸಿಗರ ವಿರುದ್ಧದ ತಾರತಮ್ಯದ ಆದೇಶಕ್ಕೆ ಅಮೆರಿಕದ ಜಿಲ್ಲಾ ನ್ಯಾಯಾಲಯವೊಂದು ರಾಷ್ಟ್ರವ್ಯಾಪಿ ತಡೆ ನೀಡಿ ಫೆಬ್ರುವರಿ 3ರಂದು ಆದೇಶ ಹೊರಡಿಸಿದಾಗ, ತುಸು ನೆಮ್ಮದಿ ಸಿಕ್ಕಿತ್ತು. ಆದರೆ ಆ ನೆಮ್ಮದಿ ಅಲ್ಪಾವಧಿಯದ್ದಾಗಿತ್ತು. ಕೆಲವು ವಾರಗಳ ಅನಿಶ್ಚಿತತೆಯ ನಂತರ ಪರಿಷ್ಕೃತ ಆದೇಶವೊಂದನ್ನು ಶ್ವೇತಭವನ ಮಾರ್ಚ್‌ 6ರಂದು ಹೊರಡಿಸಿತು. ಹಳೆಯ ಆದೇಶಕ್ಕಿಂತ ತುಸು ಭಿನ್ನ ಎಂಬುದನ್ನು ಹೊರತುಪಡಿಸಿದರೆ, ಇದು ನ್ಯಾಯಾಂಗವನ್ನು ಪರೋಕ್ಷವಾಗಿ ಹೀಗಳೆಯುವಂತಿದೆ, ಬೇರೊಂದು ಹೆಸರಿನಲ್ಲಿ ಮುಸ್ಲಿಮರ ಮೇಲಿನ ನಿಷೇಧದ ಮುಂದುವರಿಕೆಯಂತಿದೆ.

ಒಂದೇ ಒಂದು ಸಹಿಯ ಮೂಲಕ ಅಧ್ಯಕ್ಷ ಟ್ರಂಪ್ ಅವರು ಸಿರಿಯಾ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್ ಮತ್ತು ಯೆಮನ್ ದೇಶಗಳ ನಿರಾಶ್ರಿತರೂ ಸೇರಿದಂತೆ ಆ ದೇಶಗಳ ಪ್ರತಿ ನಾಗರಿಕನಿಗೆ ಅಮೆರಿಕದ ಬಾಗಿಲು ಮುಚ್ಚಿದ್ದಾರೆ. ಇವು ಮುಸ್ಲಿಂ ಬಾಹುಳ್ಯದ ರಾಷ್ಟ್ರಗಳು ಮಾತ್ರವಲ್ಲ, ಸಂಘರ್ಷ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯ ಕಾರಣ ಆಶ್ರಯ ಬೇಡಿ ಬರುತ್ತಿರುವವರಲ್ಲಿ ಇಲ್ಲಿನವರೇ ಹೆಚ್ಚು.

ಹೊಸ ಆದೇಶದ ವ್ಯಾಪ್ತಿಯನ್ನು ಹಳೆಯದಕ್ಕಿಂತ ತುಸು ಕಿರಿದಾಗಿಸುವ ಮೂಲಕ ಟ್ರಂಪ್ ಆಡಳಿತವು ಹಳೆಯದರಲ್ಲಿ ಇದ್ದ ಸಾಂವಿಧಾನಿಕ ಲೋಪಗಳನ್ನು ಸರಿಪಡಿಸಿರಬಹುದು. ಆದರೆ ಹೊಸ ಆದೇಶ ಕೂಡ ತೀರಾ ತಾರತಮ್ಯದಿಂದ ಕೂಡಿದೆ, ಮೊದಲಿನ ಆದೇಶದಲ್ಲಿ ಇದ್ದ ಬಹುಪಾಲು ಕೆಟ್ಟ ಅಂಶಗಳು ಇದರಲ್ಲೂ ಇವೆ.

ಅಮೆರಿಕಕ್ಕೆ ತೊಂದರೆ ಕೊಡಬಹುದಾದ ಭಯೋತ್ಪಾದಕರ ಪ್ರವೇಶವನ್ನು ತಡೆದಿರುವುದಾಗಿ ಟ್ರಂಪ್‌ ಹೇಳಿಕೊಳ್ಳುತ್ತಿದ್ದಾರೆ. ಆದರೆ ನಿರಾಶ್ರಿತರು (ಅವರು ಮುಸ್ಲಿಮರಾಗಿರಬಹುದು ಅಥವಾ ಇನ್ಯಾರೇ ಆಗಿರಬಹುದು) ಅಮೆರಿಕದ ಪ್ರಜೆಗಳಿಗಿಂತ ಹೆಚ್ಚು ಭಯೋತ್ಪಾದಕ ಕೃತ್ಯ ಎಸಗುತ್ತಾರೆ ಎನ್ನಲು ಅಂಕಿ–ಅಂಶಗಳ ಆಧಾರ ಇಲ್ಲ. ವರ್ಷಕ್ಕೆ 50 ಸಾವಿರಕ್ಕಿಂತ ಹೆಚ್ಚಿನ ನಿರಾಶ್ರಿತರನ್ನು ಅಮೆರಿಕಕ್ಕೆ ಬಿಟ್ಟುಕೊಳ್ಳುವಂತಿಲ್ಲ ಎಂಬ ಮಿತಿಯನ್ನು ಟ್ರಂಪ್ ಹೇರಿದ್ದಾರೆ. ಆದರೆ, ಈ ವರ್ಷ 1.10 ಲಕ್ಷ ನಿರಾಶ್ರಿತರಿಗೆ ನೆಲೆ ಕಲ್ಪಿಸುವುದಾಗಿ ಹಿಂದಿನ ಒಬಾಮ ಆಡಳಿತ ಘೋಷಿಸಿದ್ದ ಕಾರಣ, 2017ರಲ್ಲಿ ಒಟ್ಟು 60 ಸಾವಿರ ನಿರಾಶ್ರಿತರು ತೊಂದರೆ ಅನುಭವಿಸಲಿದ್ದಾರೆ.

ಯುದ್ಧ ಮತ್ತು ದೌರ್ಜನ್ಯದ ಕಾರಣ 6.5 ಕೋಟಿ ಜನ ನೆಲೆ ಕಳೆದುಕೊಂಡಿದ್ದಾರೆ. ಈ ನಡುವೆಯೇ ಟ್ರಂಪ್ ಇಂಥದ್ದೊಂದು ಆದೇಶ ಹೊರಡಿಸಿದ್ದಾರೆ. ಇದು, ಆದೇಶ ಎಷ್ಟು ನಿರ್ದಯವಾಗಿದೆ ಎಂಬುದನ್ನು ತೋರಿಸುತ್ತದೆ.

ಆದರೆ ‘ಸುಳ್ಳು ಸುದ್ದಿ’ಗಳ, ‘ಪರ್ಯಾಯ ವಾಸ್ತವ’ಗಳ ಯುಗದಲ್ಲಿ ಅಮೆರಿಕದ ಅಧ್ಯಕ್ಷರಿಗೆ ‘ಸತ್ಯ’ದ ಬಗ್ಗೆ ಆಸಕ್ತಿ ಖಂಡಿತ ಇಲ್ಲ.

ಜೀವನ ಮತ್ತು ಮರಣದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಎದುರಿಸುತ್ತಿರುವ ನಿರಾಶ್ರಿತರಿಗೆ ಸೋಗುಹಾಕುವಿಕೆ ಮತ್ತು ಕಪಟತನದ ಮೊರೆ ಹೋಗಲು ಸಾಧ್ಯವಿಲ್ಲ. ಕೆಲವು ದೇಶಗಳ ಪ್ರಜೆಗಳಿಗೆ ಅಮೆರಿಕ ಪ್ರವೇಶ ಇಲ್ಲ ಎಂದು ಮೊದಲ ಬಾರಿಯ ಆದೇಶ ಹೊರಬಿದ್ದ ನಂತರ, ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಜನ ಅನುಭವಿಸುತ್ತಿರುವ ಯಾತನೆಗಳನ್ನು ಆಮ್ನೆಸ್ಟಿ ಮತ್ತು ಇತರ ಸಂಘಟನೆಗಳು ಗಮನಿಸಿವೆ. ಕುಟುಂಬಗಳು ಹೋಳಾಗಿರುವುದನ್ನು, ಜೀವನವೇ ಸ್ಥಗಿತಗೊಂಡಿರುವುದನ್ನು, ಹೊಸ ಆರಂಭದ ಆಸೆ ಆರಿಹೋಗಿರುವುದನ್ನು ಕಂಡಿವೆ.

ತಂದೆಯ ಅಂತ್ಯಸಂಸ್ಕಾರಕ್ಕೆ ಇರಾನ್‌ಗೆ ತೆರಳಿದ್ದ ವ್ಯಕ್ತಿಗೆ ಮತ್ತೆ ಅಮೆರಿಕಕ್ಕೆ ಮರಳಲು ಸಾಧ್ಯವಾಗದ ಸ್ಥಿತಿ ಎದುರಾಯಿತು. ನ್ಯೂಯಾರ್ಕ್‌ನಲ್ಲಿರುವ ಯೆಮನ್‌ ಮೂಲದ ಕುಟುಂಬವೊಂದರ ಒಂದು ವರ್ಷದ ಮಗು ಸಾವಿರಾರು ಮೈಲು ದೂರದಲ್ಲಿರುವ ಮಲೇಷ್ಯಾದಲ್ಲಿದೆ. ಅಮೆರಿಕ ಪ್ರವೇಶದ ಮೇಲಿನ ನಿಷೇಧದ ಕಾರಣ ಮಗುವನ್ನು ಅಲ್ಲೇ ಬಿಡಲಾಗಿದೆ. ದೌರ್ಜನ್ಯಕ್ಕೆ ಗುರಿಯಾಗಿ ಈಜಿಪ್ಟ್‌ನಲ್ಲಿ ಭೂಗತನಾಗಿರುವ ಸುಡಾನ್‌ ಮೂಲದ ಪತ್ರಕರ್ತ, ಅಮೆರಿಕದಲ್ಲಿ ಆಶ್ರಯ ಬೇಡುವುದು ಈಗ ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆ ಕೇಳಲಾರಂಭಿಸಿದ್ದಾನೆ.

ಇಷ್ಟೇ ಅಲ್ಲ, ವಿಶ್ವದ ಇನ್ನೊಂದೆಡೆ – ಅಂದರೆ ಪ್ರಪಂಚದ ದಕ್ಷಿಣ ಭಾಗದಲ್ಲಿ – ಇರುವ ದೊಡ್ಡ ಸಂಖ್ಯೆಯ ನಿರಾಶ್ರಿತರಿಗೆ ಈಗ ವಿಶ್ವ ಸಮುದಾಯ ತಮ್ಮ ಕೈಬಿಟ್ಟಿದೆ ಎಂದು ಅನಿಸಲು ಆರಂಭವಾಗಿದೆ. ಟ್ರಂಪ್‌ ಆದೇಶವು ನಿರಾಶ್ರಿತರನ್ನು ಒತ್ತಾಯದಿಂದ ಹೊರಹಾಕುತ್ತಿರುವ ದೇಶಗಳ ಮೇಲೆ ಕೂಡ ಪರಿಣಾಮ ಬೀರಲಿದೆಯೇ?

ನಿರಾಶ್ರಿತರಿಗೆ ಬೆಂಬಲ ನೀಡುವ ಮನಸ್ಸಿರುವ ಜಗತ್ತಿನ ಲಕ್ಷಾಂತರ ಮಂದಿಗೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆಯ ‘ನಾನು ಸ್ವಾಗತಿಸುತ್ತೇನೆ’ ಅಭಿಯಾನ ಒಂದು ಶಕ್ತಿಯುತ ವೇದಿಕೆ. ದ್ವೇಷ ಮತ್ತು ಭೀತಿಯ ನೆಲೆಯಿಂದ ಮೂಡಿರುವ ಗಡಿಗಳನ್ನು ಭದ್ರಪಡಿಸಿಕೊಳ್ಳುವ ಟ್ರಂಪ್‌ ನೀತಿಗಳು ಈ ಅಭಿಯಾನದ ಜೊತೆ ನೇರ ಸಂಘರ್ಷಕ್ಕೆ ಇಳಿದಿವೆ.

ಅಧಿಕಾರಕ್ಕೆ ಬಂದ ಆರು ವಾರಗಳಲ್ಲಿ ಟ್ರಂಪ್ ಅವರು ಮಾನವ ಹಕ್ಕುಗಳ ಮೇಲೆ ತಮ್ಮೆಲ್ಲ ಶಕ್ತಿ ಉಪಯೋಗಿಸಿ ಯುದ್ಧ ಸಾರಿದ್ದಾರೆ. ಇದಕ್ಕೆ ಕೋಪದಿಂದ ಪ್ರತಿಕ್ರಿಯೆ ನೀಡಿದರೆ ಸಾಕಾಗದು. ಮಾನವ ಹಕ್ಕುಗಳನ್ನು ಪ್ರೀತಿಯಿಂದ ಕಾಣುವವರೆಲ್ಲರೂ ತಿರುಗಿ ನಿಂತು ಹೋರಾಡಬೇಕಾದ ಕಾಲ ಇದು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry