ರೈತರ ಯೋಗಕ್ಷೇಮ: ಈ ಬಾರಿಯ ಬಜೆಟ್‌ನಲ್ಲಿಯೂ ಅನುದಾನದ ಕೊರತೆ

7

ರೈತರ ಯೋಗಕ್ಷೇಮ: ಈ ಬಾರಿಯ ಬಜೆಟ್‌ನಲ್ಲಿಯೂ ಅನುದಾನದ ಕೊರತೆ

Published:
Updated:
ರೈತರ ಯೋಗಕ್ಷೇಮ: ಈ ಬಾರಿಯ ಬಜೆಟ್‌ನಲ್ಲಿಯೂ ಅನುದಾನದ ಕೊರತೆ

ಸ್ವಾತಂತ್ರ್ಯ ನಂತರದ 70 ವರ್ಷಗಳಲ್ಲಿ ಕರ್ನಾಟಕವು ಹಿಂದೆಂದೂ ನೋಡದ   ಭೀಕರ ಬರಗಾಲವನ್ನು ಇದೇ ಮೊದಲ ಬಾರಿಗೆ ಎದುರಿಸಿದೆ. ರೈತರು ಕುಡಿಯಲು ನೀರು, ತಿನ್ನಲು ಅಹಾರ, ಜಾನುವಾರುಗಳಿಗೆ ಮೇವು. ಇತ್ಯಾದಿಗಳನ್ನು ಭರಿಸಲಾಗದೆ ಕಂಗಾಲಾಗಿದ್ದಾರೆ. ದೀರ್ಘಾವಧಿ ಸಾಲಗಳನ್ನು ತೀರಿಸಲೂ ಸಾಧ್ಯವಾಗುತ್ತಿಲ್ಲ. ಭಾರತದ ಮುಖ್ಯನ್ಯಾಯಮೂರ್ತಿ ನೇತೃತ್ವದ ಪೀಠ ಕೇಂದ್ರ ಸರ್ಕಾರಕ್ಕೆ (ದಿನಾಂಕ: 04-03-2017 ಪ್ರಜಾವಾಣಿ) ಸೂಕ್ತ ನಿರ್ದೇಶನ ನೀಡಿ, ರೈತರು ಮತ್ತು ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡ ನಂತರ ಕುಟುಂಬಗಳಿಗೆ ಅನುದಾನವನ್ನು ಕೊಡುವ ಬದಲು ಆತ್ಮಹತ್ಯೆ  ತಡೆಯುವ ಬಗ್ಗೆ ಕಾರ್ಯತಂತ್ರ ರೂಪಿಸಿ ಜಾರಿಗೊಳಿಸುವುದು ಸೂಕ್ತ ಎಂದು ನಿರ್ದೇಶನ ಕೊಟ್ಟಿರುತ್ತಾರೆ.

2015ರಲ್ಲಿ ಭಾರತದಲ್ಲಿ 12,602 ರೈತರು ಹಾಗೂ ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡರೆ, ಕರ್ನಾಟಕವೊಂದರಲ್ಲಿ 1569 (ಶೇ 12.45ರಷ್ಟು) ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಾಲಿನಲ್ಲಿ ಕೇಂದ್ರ ಸರ್ಕಾರವೇ ಆಗಲಿ ಇಂದಿನ ಕರ್ನಾಟಕದ ಬಜೆಟ್‌ನಲ್ಲಿ  ಮಂಜೂರು ಮಾಡಿರುವ ಹಣ ಕೃಷಿ ಮತ್ತು ರೈತರ ಯೋಗಕ್ಷೇಮಕ್ಕೆ ಏನೇನೂ ಸಾಲದು. ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳ ಅಭಿವೃದ್ಧಿಗೆ 2016-17ನೇ ಸಾಲಿನಲ್ಲಿ ರಾಜ್ಯ ಸರ್ಕಾರವು ₹7652 ಕೋಟಿ  (ಕೃಷಿ ಇಲಾಖೆ ₹ 4344 ಕೋಟಿ, ತೋಟಗಾರಿಕೆ ಇಲಾಖೆ ₹753 ಕೋಟಿ, ಪಶುಸಂಗೋಪನೆ ಇಲಾಖೆ ₹1886 ಕೋಟಿ, ರೇಷ್ಮೆ ಇಲಾಖೆ ₹ 367 ಕೋಟಿ ಹಾಗೂ ಮೀನುಗಾರಿಕೆಗೆ ₹ 302 ಕೋಟಿ) ಮಂಜೂರು ಮಾಡಿತ್ತು. ಈ ಸಾಲಿನಲ್ಲಿ (2017-18) ಒಟ್ಟು ಅಂದಾಜು ₹ 9382 ಕೋಟಿ ನಿಗದಿಮಾಡಿರುವುದು ನಿಜಕ್ಕೂ ನಿರಾಶಾದಾಯಕ.

ಈ ವರ್ಷ ಮಾತ್ರ ದೀರ್ಘಾವಧಿ ಸಾಲವನ್ನು ಮನ್ನಾ ಮಾಡಬೇಕಿತ್ತು. ಸ್ವಾಮಿನಾಥನ್ ವರದಿ ಜಾರಿಗೆ ತಂದು ವೈಜ್ಞಾನಿಕ ಬೆಲೆ ನಿಗದಿ ಮಾಡುವ ಮೂಲಕ ರೈತರ ಆತ್ಮಹತ್ಯೆ ತಡೆಯಬೇಕಿತ್ತು. ಬೆಳೆ, ಜಾನುವಾರು ವಿಮೆಯ ಹಣವನ್ನು ಕೂಡಲೇ ರೈತರಿಗೆ ಪಾವತಿಸಲು, ಉತ್ಪಾದನಾ ರೈತ ಸಂಘಗಳನ್ನು ಪ್ರಾರಂಭಿಸಲು, ಒಕ್ಕಣೆ ಹಾಗೂ ದಾಸ್ತಾನು ಮಾಡಲು ಪ್ರತಿ ಗ್ರಾಮಕ್ಕೆ ಅಗತ್ಯ ಕಣ ಮತ್ತು ಸಂಗ್ರಹಣಾಧಾರಕಗಳನ್ನು (ಕಣಜ) ಒದಗಿಸಲು ವಿಶೇಷ ಬಜೆಟ್ ಅವಶ್ಯಕತೆಯಿತ್ತು. ವಿಶ್ರಾಂತ ಕುಲಪತಿಗಳ ವೇದಿಕೆ ಮತ್ತು ಕೃಷಿವಿಶ್ವವಿದ್ಯಾಲಯದ ಹಿರಿಯ ವಿದ್ಯಾರ್ಥಿಗಳು ಇದನ್ನು ಸ್ಷಷ್ಟಪಡಿಸಿ ಸರ್ಕಾರಕ್ಕೆ ಮನವಿಮಾಡಿಕೊಂಡಿದ್ದರು.

ಕಳೆದ ವರ್ಷದ ₹ 7562 ಕೋಟಿಯ ಬದಲು ಈ ವರ್ಷ ₹20 ಸಾವಿರ ಕೋಟಿಯ ನಿರೀಕ್ಷೆ ಇತ್ತು. ಈಗಲೂ ಇದನ್ನು ಸರಿಪಡಿಸುವ ಪ್ರಯತ್ನ ಸರ್ಕಾರ ಪರಿಶೀಲಿಸಬೇಕೆಂಬುದು ಗ್ರಾಮೀಣರ ಮತ್ತು ಅನ್ನದಾತರ ಸಂಕಷ್ಟವನ್ನು ಹತ್ತಿರದಿಂದ ನೋಡುತ್ತಿರುವವರ ಆಸೆಯಾಗಿದೆ.

ಕಡಿಮೆ ಬಡ್ಡಿಯಲ್ಲಿ ರೈತರಿಗೆ ಸಾಲ ಸೌಲಭ್ಯ ಮುಂದುವರಿಕೆ, ಗ್ರಾಮೀಣಪ್ರದೇಶಗಳಿಗೆ ಉಚಿತ ವೈ-ಫೈ, ಮಹಿಳೆಯರಿಗೆ  ಬಿಸಿಯೂಟ, ಹೊಸ ಗ್ರಾಮಪಂಚಾಯತಿ ಮತ್ತು 49 ಹೊಸ ತಾಲ್ಲೂಕುಗಳ ಮೂಲಕ ಗ್ರಾಮೀಣರು ಅಲೆದಾಡ ಬೇಕಾಗುತ್ತಿದ್ದ ಬವಣೆಯನ್ನು ಕಡಿಮೆ ಮಾಡುತ್ತಿರುವುದು, ರೈತ ಸಾರಥಿ ಯೋಜನೆ, ಕೆರೆಗಳಲ್ಲಿ ಹೂಳೆತ್ತುವುದು, ಬೆಳೆಗಳ ಮೇಲಿನ ತೆರಿಗೆ ವಿನಾಯಿತಿ ಮುಂದುವರಿಕೆ, ‘ಕೃಷಿ ಯಂತ್ರಧಾರೆ ಕಾರ್ಯಕ್ರಮ’, ರಾಜ್ಯದ ಎಲ್ಲ ಹಳ್ಳಿಗಳಿಗೆ ಪರಿಣಿತ ಹಾಗೂ ಸುಧಾರಿತ ಪಶು ವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಗುರಿಯೊಂದಿಗೆ, ಹಂತ ಹಂತವಾಗಿ 1,512 ಪ್ರಾಥಮಿಕ ಪಶು ವೈದ್ಯಕೀಯ ಕೇಂದ್ರಗಳನ್ನು ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿರುವುದು, ಮಹಿಳಾ ಸ್ವಸಹಾಯ ಸಂಘಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸ್ವಾಗತಾರ್ಹ. 

ಬರಪೀಡಿತ ಪ್ರದೇಶದವರಿಗೆ ₹ 845 ಕೋಟಿ ಅತ್ಯಂತ ಕಡಿಮೆ.  ಮೋಡ ಬಿತ್ತನೆಯಿಂದ ಈವರೆಗೆ ಪ್ರಯೋಜನ ಪಡೆದ ಉದಾರಣೆಗಳಿಲ್ಲ. ಗ್ರಾಮೀಣ ಪ್ರದೇಶಗಳಿಗೆ ಪಾಲಿಟೆಕ್ನಿಕ್ ಇವೆಲ್ಲಾ ರೈತರು ಬೆಳೆದ ಬೆಳೆಗಳಿಗೆ ಮೌಲ್ಯ ಹೆಚ್ಚಿಸುವಲ್ಲಿ ಮತ್ತು ಯುವಕರು ನಗರಗಳಿಗೆ ವಲಸೆ ಹೋಗುವುದನ್ನು ತಡೆಗಟ್ಟುವುದರಲ್ಲಿ ನಿಜಕ್ಕೂ ಪರಿಣಾಮ ಬೀರಬಲ್ಲ  ಯೋಜನೆಗಳಾಗಿವೆ. ನೀರಾವರಿ ಬಗ್ಗೆ ಬಜೆಟ್ ಆಶಾದಾಯಕವಾಗಿದೆ. ಆದರೆ ನೀರನ್ನು ಪೋಲು ಮಾಡುವುದನ್ನು ತಪ್ಪಿಸಿ ವೈಜ್ಞಾನಿಕ ಬಳಕೆಯ ಅರಿವು ಉಂಟುಮಾಡದಿದ್ದರೆ ಈ ನಿಯೋಜನೆ ಮತ್ತೆ ನೀರಿನ ಬಳಕೆ  ವ್ಯರ್ಥವಾಗುವುದರಲ್ಲಿ ಸಂದೇಹವಿಲ್ಲ.
ಈ ದಿನಗಳಲ್ಲಿ ವಿಜ್ಞಾನ ಮತ್ತು ತಾಂತ್ರಿಕತೆ ಇಡೀ ವಿಶ್ವದ ಸುಮಾರು ದೇಶಗಳಲ್ಲಿ ಆಯಾ ದೇಶದ ಎಲ್ಲ ವರ್ಗದ ನಾಗರಿಕರ ಜೀವನ ಶೈಲಿಯನ್ನು ಸುಧಾರಿಸುವಲ್ಲಿ ಬಹಳ ಪರಿಣಾಮಕಾರಿಯಾಗಿರುವುದು ಸರ್ವವೇದ್ಯ.

ವಿಜ್ಞಾನ ಮತ್ತು ತಾಂತ್ರಿಕತೆಯ ಪ್ರಯೋಜನ ರೈತರಿಗೆ ಸಿಗದಿರುವುದು ವಿಷಾದನೀಯ. ಭಾರತದ ರೈತಾಪಿ ಜನರು ವಂಚಿತರಾಗಿರುವುದು ವಿಪರ್ಯಾಸ! ಒಂದು ಉದಾಹರಣೆಯೆಂದರೆ, ಕಂಪ್ಯೂಟರ್ ಬಳಕೆಯ ಅರಿವು, ಕಳೆದ ವರ್ಷದ ಅಂಕಿಅಂಶಗಳ ಪ್ರಕಾರ ಭಾರತದ ಗ್ರಾಮೀಣರಲ್ಲಿ ಕೇವಲ ಶೇ 8.8 ಜನರಿಗೆ ಮಾತ್ರ ಲಭಿಸಿದೆ (ಶೇ 32.6 ರಷ್ಟು ಇರುವ ಕೇರಳ  ಒಂದನ್ನು ಹೊರತುಪಡಿಸಿ).

ರಾಷ್ಟ್ರ ಮಟ್ಟದಲ್ಲಿ ನಗರ ವಾಸಿಗಳಿಗಳಲ್ಲಿ ಶೇ30.2 ಜನರಿಗೆ ಅರಿವಿದೆ. ಆದ್ದರಿಂದ ಕರ್ನಾಟಕದ ಗ್ರಾಮೀಣರನ್ನು ಈ ನೂತನ ಸಾಧನಗಳ ಬಳಕೆಯಲ್ಲಿ ತರಬೇತಿ ನೀಡಲೂ ಸಹ ಹೆಚ್ಚು ಅನುದಾನದ ಅವಶ್ಯಕತೆ ಇದೆ. ಅದಕ್ಕಾಗಿ ಒತ್ತುಕೊಟ್ಟು ವಿಶೇಷ ಅನುದಾನ ನಿಯೋಜಿಸಿ ರಾಜ್ಯದಾದ್ಯಂತ ವಿಶ್ವವಿದ್ಯಾಲಯಗಳ ಮತ್ತು ತಜ್ಞರ ಮೂಲಕ ಕೃಷಿಯನ್ನು ಚೈನಾ, ಕೊರಿಯಾ, ಇಸ್ರೇಲ್, ಬ್ರೆಜಿಲ್ ಮುಂತಾದ ರಾಷ್ಟ್ರಗಳಂತೆ ಕರ್ನಾಟಕವೂ ಯೋಜಿಸಿದ್ದರೆ ಪರಿಣಾಮಕಾರಿಯಾದೀತು.

ಭಾರತದಲ್ಲಿ ಈಗ ಎರಡು ಕೇಂದ್ರೀಯ ಕೃಷಿವಿಶ್ವವಿದ್ಯಾಲಯಗಳಿದ್ದು ಮೂರನೇ ಕೇಂದ್ರೀಯ ಕೃಷಿವಿಶ್ವವಿದ್ಯಾಲಯ ಸ್ಥಾಪನೆ ಕೇಂದ್ರ ಸರ್ಕಾರದ  ಮುಂದಿನ ಗುರಿಯಾಗಿದೆ. ಇಂತಹ ವಿಶ್ವವಿದ್ಯಾಲಯಕ್ಕೆ ದಕ್ಷಿಣ ಭಾರತದಲ್ಲೇ ಅತ್ಯಂತ ಯೋಗ್ಯವಾದ, ದಕ್ಷಿಣ ಭಾರತದ  ಎಲ್ಲಾ ಹವಾಮಾನ ಮತ್ತು ಮಣ್ಣು ಜೈವಿಕ ವೈವಿಧ್ಯದ ಪ್ರಾತಿನಿಧಿಕ ಮಾದರಿಯನ್ನು ಹೊಂದಿರುವ  ಸ್ಥಳವೆಂದರೆ ಚಾಮರಾಜನಗರ ಜಿಲ್ಲೆ. ಈ ಜಿಲ್ಲೆಯಲ್ಲಿ ಕೇಂದ್ರೀಯ ಕೃಷಿ ವಿಶ್ವವಿದ್ಯಾಲವನ್ನು ಸ್ಥಾಪಿಸಲು 2010ರಿಂದಲೂ   ಪ್ರಸ್ತಾವನೆ ಇದೆ.

ಅದರ ಬಗ್ಗೆ ಈವರೆಗೆ ಏನು  ಪ್ರಗತಿಯಿಲ್ಲದಿರುವುದು ವಿಷಾದನೀಯ. ಕರ್ನಾಟಕದ ರೈತರಿಗೆ ಸಿಗಬಹುದಾದ ಅವಕಾಶ ಬೇರೆ ರಾಜ್ಯಕ್ಕೆ ಹೋಗುವ ಹಂತ ತಲುಪಿದ್ದರೂ ಇರಬಹುದು. ಆರ್ಥಿಕವಾಗಿ ಹೊರೆಯಿಲ್ಲದೆ ನಮ್ಮ ಸರ್ಕಾರವು  ಕೇವಲ ಭೂಮಿಯನ್ನು ಮಾತ್ರ ಕೊಟ್ಟರೆ ಸಿಗುವ ಈ ಸೌಲಭ್ಯದಿಂದ ಕರ್ನಾಟಕದ ರೈತರು ವಂಚಿರಾಗದಿರಲಿ ಎಂಬುದು ನನ್ನ ಕಳಕಳಿ.

(ವಿಶ್ರಾಂತ ಕುಲಪತಿ, ಕೃಷಿವಿಶ್ವವಿದ್ಯಾಲಯ,ಧಾರವಾಡ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry