ಆದ್ಯತಾ ಕ್ಷೇತ್ರಗಳಿಗೆ ಈ ಬಾರಿಯೂ ಸಿಕ್ಕಿದೆ ಹೆಚ್ಚಿನ ಪ್ರಾತಿನಿಧ್ಯ

7

ಆದ್ಯತಾ ಕ್ಷೇತ್ರಗಳಿಗೆ ಈ ಬಾರಿಯೂ ಸಿಕ್ಕಿದೆ ಹೆಚ್ಚಿನ ಪ್ರಾತಿನಿಧ್ಯ

Published:
Updated:
ಆದ್ಯತಾ ಕ್ಷೇತ್ರಗಳಿಗೆ ಈ ಬಾರಿಯೂ ಸಿಕ್ಕಿದೆ ಹೆಚ್ಚಿನ ಪ್ರಾತಿನಿಧ್ಯ

ಬಜೆಟ್‌ನ ಅಂಕಿ–ಅಂಶಗಳನ್ನು ಮಾತ್ರ ಪ್ರತ್ಯೇಕಿಸಿ ಕಂಡರೆ, ಅವು ಹೆಚ್ಚಿನ ಅರ್ಥ ನೀಡುವುದಿಲ್ಲ. ಹಾಗಾಗಿ, ಬಜೆಟ್‌ ಕಸರತ್ತಿನ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳುವುದು ಬಹುಮುಖ್ಯ. ಕರ್ನಾಟಕದ ಈ ವರ್ಷದ ಬಜೆಟ್‌ ಪೂರ್ವಾಪರ ಅರ್ಥ ಮಾಡಿಕೊಳ್ಳಲು ಪ್ರಮುಖವಾಗಿ ಮೂರು ಸಂಗತಿಗಳನ್ನು ಗಮನಿಸಬೇಕು.   ಸರ್ಕಾರ ಮಂಡಿಸಿದ ಕೊನೆಯ ಬಜೆಟ್ ಇದು ಎಂಬುದು ಅವುಗಳಲ್ಲಿ ಒಂದು. ಹಾಗಾಗಿ, ದೀರ್ಘಾವಧಿಯಲ್ಲಿ ಸಂಪತ್ತು ಸೃಷ್ಟಿಸುವ ಗುರಿ ಹೊಂದಿರುವ ಘೋಷಣೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಏಕೆಂದರೆ, ಈ ವರ್ಷದ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ಮುಂದೆ ಬರುವ ಸರ್ಕಾರ ರದ್ದುಪಡಿಸುವ ಸಾಧ್ಯತೆಗಳಿವೆ.

ಕರ್ನಾಟಕದ ವರಮಾನದ ಮೇಲೆ ದೂರಗಾಮಿ ಪರಿಣಾಮ ಬೀರುವ ಪ್ರಮುಖ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜುಲೈ 1ರಿಂದ ಜಾರಿಗೆ ಬರಲಿದೆ ಎಂಬುದು ಎರಡನೆಯ ಸಂಗತಿ. ತೆರಿಗೆ ವ್ಯವಸ್ಥೆಯಲ್ಲಿ ಬರಲಿರುವ ಬದಲಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಈ ಬಾರಿಯ ಬಜೆಟ್‌ ಸಿದ್ಧಪಡಿಸಬೇಕಾದ ಸ್ಥಿತಿ ಇತ್ತು. 14ನೇ ಹಣಕಾಸು ಆಯೋಗದ ಶಿಫಾರಸುಗಳು ಅನುಷ್ಠಾನಕ್ಕೆ ಬಂದ ನಂತರದ ಮೂರನೆಯ ಬಜೆಟ್ ಇದು ಎಂಬುದು ಮೂರನೆಯ ಸಂಗತಿ. ಈ ಶಿಫಾರಸುಗಳ ಅನ್ವಯ, ಕೇಂದ್ರದಿಂದ ರಾಜ್ಯಗಳಿಗೆ ಹೆಚ್ಚಿನ ಹಣಕಾಸಿನ ಪಾಲು ಸಿಗುತ್ತದೆ. ಹಣ ವೆಚ್ಚ ಮಾಡುವಾಗ ತಮ್ಮ ಆದ್ಯತಾ ವಲಯ ಯಾವುದಿರಬೇಕು ಎಂಬುದನ್ನು ರಾಜ್ಯಗಳೇ ತೀರ್ಮಾನಿಸಿಕೊಳ್ಳಬಹುದು.

ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ಬಜೆಟ್‌ ಹೇಗಿದೆ ಎನ್ನಬಹುದು?

ರಾಜ್ಯದ ಆದಾಯ: ರಾಜ್ಯದ ಆದಾಯ ಸಂಗ್ರಹ ಪ್ರಮಾಣದಲ್ಲಿ ಶೇಕಡ 9.4ರಷ್ಟು ಹೆಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೆಕ್ಕ ನೀಡಿದ್ದಾರೆ. ಇದರಲ್ಲಿ ಬಹುಪಾಲು ಮೊತ್ತ ಬಂದಿರುವುದು ಮೌಲ್ಯವರ್ಧಿತ ತೆರಿಗೆ (ವ್ಯಾಟ್), ಮದ್ಯ ಮಾರಾಟದ ಮೇಲಿನ ತೆರಿಗೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ. ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯ ರಾಜ್ಯದ ಪಾಲಿನಲ್ಲಿ ಶೇಕಡ 11ರಷ್ಟು ಹೆಚ್ಚಳ ಆಗಿದೆ. ಹಾಗಾಗಿ, ಕೇಂದ್ರದಿಂದ ರಾಜ್ಯಕ್ಕೆ ಷರತ್ತುರಹಿತವಾಗಿ ಬರುವ ಹಣದ ಮೊತ್ತ ₹ 31,908 ಕೋಟಿ. ಕೇಂದ್ರದಿಂದ ಸಿಗುವ ಮೊತ್ತದಲ್ಲಿ 14ನೇ ಹಣಕಾಸು ಆಯೋಗದ ಶಿಫಾರಸುಗಳ ಅನ್ವಯ ಕಳೆದ ವರ್ಷ ಶೇಕಡ 20ರಷ್ಟು ಹೆಚ್ಚಳ ಆಗಿತ್ತು. ಅದರ ಹಿಂದಿನ ವರ್ಷದಲ್ಲಿ ಶೇಕಡ 63ರಷ್ಟು ಹೆಚ್ಚಳ ಆಗಿತ್ತು ಎಂಬುದನ್ನು ಮರೆಯಬಾರದು.

ರಾಜ್ಯದ ಆದಾಯ ಮತ್ತು ಕೇಂದ್ರದಿಂದ ಸಿಗುವ ಹಣವನ್ನು ಒಟ್ಟು ಮಾಡಿದರೆ, ರಾಜ್ಯದ ಒಟ್ಟು ಆದಾಯ ₹ 1.44 ಲಕ್ಷ ಕೋಟಿ ಆಗುತ್ತದೆ, ಕಳೆದ ವರ್ಷಕ್ಕಿಂತ ಶೇಕಡ 9ರಷ್ಟು ಹೆಚ್ಚಳ ಆಗುತ್ತದೆ ಎಂಬುದು ಸಿದ್ದರಾಮಯ್ಯ ಅವರ ಅಂದಾಜು. ಇದು ಶುಭ ಸುದ್ದಿ. ಅಲ್ಲದೆ, ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರವೂ ತೆರಿಗೆ ಆದಾಯ ಹೆಚ್ಚಳವಾಗಲಿದೆ ಎಂಬ ನಿರೀಕ್ಷೆ ರಾಜ್ಯದ್ದು. ಜಿಎಸ್‌ಟಿ ವ್ಯವಸ್ಥೆಗೆ ಹೊರಳಿಕೊಳ್ಳುವ ವಿಚಾರದಲ್ಲಿ ಕರ್ನಾಟಕ ಹೇಗೆ ಮುಂಚೂಣಿಯಲ್ಲಿದೆ ಎಂಬುದನ್ನು ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ಭಾಷಣದಲ್ಲಿ ವಿವರಿಸಿದ್ದಾರೆ. ರಾಜ್ಯದಲ್ಲಿ ಸೇವಾ ವಲಯ ಬೃಹತ್ ಪ್ರಮಾಣದಲ್ಲಿ ಬೆಳೆದಿರುವ ಕಾರಣ, ಜಿಎಸ್‌ಟಿ ವ್ಯವಸ್ಥೆ ಹೆಚ್ಚಿನ ಪ್ರಯೋಜನ ತರಲಿದೆ ಎಂಬ ನಿರೀಕ್ಷೆ ಇದೆ.

ರಾಜ್ಯದ ವೆಚ್ಚಗಳು ಹೇಗೆ ಬದಲಾದವು?:  ಬಂಡವಾಳ ವೆಚ್ಚದಲ್ಲಿ (ರಸ್ತೆ, ಶಾಲೆ, ಆಸ್ಪತ್ರೆ ಮತ್ತಿತರ ಮೂಲಸೌಕರ್ಯಕ್ಕೆ ಮಾಡಿರುವ ಖರ್ಚು) ಶೇಕಡ 29ರಷ್ಟು ಹೆಚ್ಚಳ ಆಗಿದೆ. ಇದರ ಮೊತ್ತ ₹ 32,033 ಕೋಟಿ. ಆಡಳಿತ ವೆಚ್ಚಗಳು (ವೇತನ ಪಾವತಿ, ಅಲ್ಪಾವಧಿ ಖರ್ಚುಗಳಿಗೆ ನೀಡಿದ ಹಣ ಮುಂತಾದವು) ಶೇ 9ರಷ್ಟು ಹೆಚ್ಚಳ ಕಂಡಿವೆ. ಇವುಗಳ ಮೊತ್ತ ₹ 1,44,755 ಕೋಟಿ.

ನಗರಾಭಿವೃದ್ಧಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ, ನೀರು ಪೂರೈಕೆ, ನೈರ್ಮಲ್ಯ ಕ್ಷೇತ್ರಗಳಿಗೆ ಅನುದಾನ ನೀಡಿಕೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡುಬಂದಿದೆ. ಈ ಕ್ಷೇತ್ರಗಳಿಗೆ ನಿಗದಿ ಮಾಡುವ ಅನುದಾನದಲ್ಲಿ ಕಳೆದ ವರ್ಷ ಕೂಡ ಗಣನೀಯ ಹೆಚ್ಚಳ ಆಗಿತ್ತು. ಹಾಗಾಗಿ, ಈ ಕ್ಷೇತ್ರಗಳು ಇಂದಿನ ಸರ್ಕಾರದ ಆದ್ಯತಾ ವಲಯಗಳು ಎಂಬುದು ಸ್ಪಷ್ಟವಾಗುತ್ತದೆ.

ನೀರಾವರಿ, ಪ್ರವಾಹ ನಿಯಂತ್ರಣ ಮತ್ತು ನೀರು ಪೂರೈಕೆ ಕ್ಷೇತ್ರಗಳಲ್ಲಿ ಬಂಡವಾಳ ವೆಚ್ಚ ಮತ್ತು ಆಡಳಿತ ವೆಚ್ಚಗಳನ್ನು ಎರಡು ವರ್ಷಗಳಿಂದ ಹೆಚ್ಚಿಸುತ್ತಿರುವುದನ್ನು ಗಮನಿಸಿದರೆ, ಈ ಸರ್ಕಾರ ಸಂಪತ್ತು ಸೃಷ್ಟಿಸುವುದು ಹಾಗೂ ಅಲ್ಪಾವಧಿ ವೆಚ್ಚಗಳನ್ನು ನಿಭಾಯಿಸುವುದರ ಮೇಲೆ ಗಮನ ಕೇಂದ್ರೀಕರಿಸಲು ಸಿದ್ಧವಿದೆ ಎಂಬುದು ಗೊತ್ತಾಗುತ್ತದೆ. ಬೆಂಗಳೂರು ಮತ್ತು ಇತರ ನಗರಗಳಿಗೆ ಮುಖ್ಯಮಂತ್ರಿಯವರು ಹಲವು ಯೋಜನೆಗಳನ್ನು ಘೋಷಿಸಿರುವ ಕಾರಣ, ನಗರಾಭಿವೃದ್ಧಿ ಕ್ಷೇತ್ರದ ಬಂಡವಾಳ ವೆಚ್ಚದಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಕರ್ನಾಟಕದಲ್ಲಿ ನಗರೀಕರಣ ಇನ್ನಷ್ಟು ಆಗಬೇಕಿರುವ ಕಾರಣ ಈಗ ಕೈಗೊಂಡಿರುವುದು ಸರಿಯಾದ ನಿರ್ಧಾರ.

ಸಂಪತ್ತು ಸೃಷ್ಟಿಸುವ ಉದ್ದೇಶದಿಂದ ಹಣ ವೆಚ್ಚ ಮಾಡುವುದು ಒಳ್ಳೆಯದು. ಆದರೆ ಇದೇ ವೇಳೆ, ವಿದ್ಯುತ್, ಆಹಾರ, ವಸತಿ ಮತ್ತು ಕೃಷಿ ಕ್ಷೇತ್ರಗಳಿಗೆ ಇನ್ನಷ್ಟು ಕೊಡುಗೆ ಘೋಷಿಸಿರುವ ಕಾರಣ, ಸಬ್ಸಿಡಿ ರೂಪದಲ್ಲಿ ಸರ್ಕಾರ ನೀಡಬೇಕಿರುವ ಹಣದ ಮೊತ್ತ ಶೇಕಡ 30ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೀಡುವ ಅನುದಾನದಲ್ಲಿ ಸತತ ಎರಡು ವರ್ಷಗಳಿಂದ ಅಲ್ಪ ಪ್ರಮಾಣದ ಬದಲಾವಣೆ ಮಾತ್ರ ಆಗಿದೆ ಎಂಬುದನ್ನು ಗಮನಿಸಬೇಕು. ದೇಶಕ್ಕೆ ಅಭಿವೃದ್ಧಿಯಲ್ಲಿ ಮಾರ್ಗದರ್ಶಕ ಆಗುವ ಆಕಾಂಕ್ಷೆ ಹೊಂದಿರುವ, ಮಧ್ಯಮ ಗಾತ್ರದ ಆದಾಯ ಹೊಂದಿರುವ ಕರ್ನಾಟಕಕ್ಕೆ ಶಿಕ್ಷಣ ಮತ್ತು ಆರೋಗ್ಯ ಪ್ರಮುಖ ಕ್ಷೇತ್ರಗಳು. ಈ ಬಜೆಟ್‌ ಸಿದ್ಧಗೊಂಡ ಹಿನ್ನೆಲೆಯನ್ನು ಗಮನಿಸಿದರೆ, ಇದು ಕೂಡ ಮುಂದುವರಿಕೆ ಬಜೆಟ್‌ ಅನಿಸುತ್ತದೆ. ಅಂದರೆ, ಕಳೆದ ವರ್ಷ ಗುರುತಿಸಿದ ಆದ್ಯತಾ ಕ್ಷೇತ್ರಗಳಿಗೆ ಈ ವರ್ಷವೂ ಹೆಚ್ಚಿನ ಗಮನ ನೀಡಲಾಗಿದೆ.

(ಲೇಖಕ ಬೆಂಗಳೂರಿನ ತಕ್ಷಶಿಲಾ ಸಂಸ್ಥೆಯಲ್ಲಿ ಸಂಶೋಧಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry