3

ಕ್ಯಾಮೆರಾ ಇದರ ಹೆಗ್ಗಳಿಕೆ

ಯು.ಬಿ. ಪವನಜ
Published:
Updated:
ಕ್ಯಾಮೆರಾ ಇದರ ಹೆಗ್ಗಳಿಕೆ

ನಮ್ಮ ದೇಶದಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಬಹುತೇಕ ಫೋನ್‌ಗಳು ಚೀನಾ ದೇಶದವು. ಅಂತಹ ಒಂದು ಕಂಪೆನಿ ಹೋನರ್ (Honor). ಈ ಕಂಪೆನಿಯ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಈ ಅಂಕಣದಲ್ಲಿ ನೀಡಲಾಗಿತ್ತು. ಇತರೆ ಕಂಪೆನಿಗಳಂತೆ ಹೋನರ್ ಕೂಡ ಹಲವು ನಮೂನೆಯ ಮತ್ತು ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ನಾಲ್ಕು ವಾರಗಳ ಹಿಂದೆ ಇದೇ ಅಂಕಣದಲ್ಲಿ ಹೋನರ್ 6 ಎಕ್ಸ್ ಫೋನಿನ ವಿಮರ್ಶೆ ನೀಡಲಾಗಿತ್ತು. ಮಧ್ಯಮ ಬೆಲೆಗೆ ಉತ್ತಮ ಕ್ಯಾಮೆರಾ ಇರುವ ಫೋನ್ ಎಂದು ಅದರ ಬಗ್ಗೆ ಬರೆಯಲಾಗಿತ್ತು. ಈ ಸಲ ನಾವು ವಿಮರ್ಶಿಸುತ್ತಿರುವುದು ಹೋನರ್ 8 (Honor 8).

ಗುಣವೈಶಿಷ್ಟ್ಯಗಳು

2.3 ಮತ್ತು 1.8 ಗಿಗಾಹರ್ಟ್ಸ್ ವೇಗದ ಎಂಟು ಹೃದಯಗಳ ಪ್ರೊಸೆಸರ್ (HiSilicon Kirin 950), 4+32/64 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕುವ ಸೌಲಭ್ಯ, 5.2 ಇಂಚು ಗಾತ್ರದ ಎಲ್‌ಟಿಪಿಎಸ್ ಪರದೆ (LTPS LCD), 1920 x 1080 ಪಿಕ್ಸೆಲ್ ರೆಸೊಲೂಶನ್, 12+12 ಮೆಗಾಪಿಕ್ಸೆಲ್ ಎರಡು ಲೆನ್ಸ್‌ಗಳ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮೆರಾಗಳು, ಎರಡು ಕ್ಯಾಮೆರಾಗಳಿಗೂ ಎಲ್‌ಇಡಿ ಫ್ಲಾಶ್, ಒಂದು ನ್ಯಾನೊಸಿಮ್, 2ಜಿ/3ಜಿ/4ಜಿ, 145.5 x 71.0 x 7.45 ಮಿ.ಮೀ. ಗಾತ್ರ, 153 ಗ್ರಾಂ ತೂಕ, ಬ್ಲೂಟೂತ್, ವೈಫೈ, ಜಿಪಿಎಸ್, ಯುಎಸ್‌ಬಿ ಓಟಿಜಿ ಸವಲತ್ತು ಇದೆ, 3000mAh ಶಕ್ತಿಯ ಬ್ಯಾಟರಿ, ಆಂಡ್ರಾಯ್ಡ್ 6.0, ಇತ್ಯಾದಿ. 4+32 ಗಿಗಾಬೈಟ್ ಮಾದರಿಯ ನಿಗದಿತ ಬೆಲೆ ₹29,999.

ಇದರ ಗಾತ್ರ ನೋಡಿದಾಗ ಸ್ವಲ್ಪ ಚಿಕ್ಕದು ಎಂದು ಅನ್ನಿಸುತ್ತದೆ. ಯಾಕೆಂದರೆ ಇದು 5.2 ಇಂಚು ಗಾತ್ರದ ಪರದೆಯನ್ನು ಒಳಗೊಂಡಿದೆ. ದಪ್ಪವೂ ಕಡಿಮೆ ಇದೆ. 5.5 ಇಂಚು ಗಾತ್ರದ ಪರದೆ ಇರುವ ಫೋನ್ ದೊಡ್ಡದಾಯಿತು ಎನ್ನುವವರಿಗೆ ಇದು ಉತ್ತಮ ಆಯ್ಕೆ. ಇದನ್ನು ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಇದರ ಹಿಂಭಾಗದಲ್ಲೂ ಗಾಜಿನ ಹೊದಿಕೆ ಇದೆ. ಇದರಿಂದಾಗಿ ಇದು ತುಂಬ ನುಣುಪಾಗಿದೆ. ಕೈಯಿಂದ ಜಾರಿ ಬೀಳುವ ಭಯ ಖಂಡಿತ ಇದೆ. ಗಾತ್ರ ಸ್ವಲ್ಪ ಕಡಿಮೆ ಇರುವುದರಿಂದ ಒಂದು ಕೈಯಲ್ಲಿ ಹಿಡಿದು ಬಳಸುವುದು ಸುಲಭ. ಆದರೆ ನುಣುಪಾಗಿರುವುದರಿಂದ ಜಾರಿ ಬೀಳುವ ಭಯವಿದೆ.ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಕೆಳಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿ ಮತ್ತು ಯುಎಸ್‌ಬಿ-ಸಿ ನಮೂನೆಯ ಕಿಂಡಿಗಳಿವೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಒಂದು ನ್ಯಾನೋಸಿಮ್ ಮತ್ತು ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಲು ಬಳಸಲಾಗುತ್ತದೆ. ಎರಡು ಸಿಮ್ ಬೇಕು ಎನ್ನುವವರಿಗೆ ಈ ಫೋನ್ ಹೇಳಿದ್ದಲ್ಲ. ಯುಎಸ್‌ಬಿ ಓಟಿಜಿ ಸವಲತ್ತು ಇದೆ. ಇದನ್ನು ಬಳಸಲು ನೀವು ಯುಎಸ್‌ಬಿ-ಸಿ ನಮೂನೆಯ ಓಡಿಜಿ ಕೇಬಲ್ ಅಥವಾ ಅಡಾಪ್ಟರ್ ಕೊಳ್ಳಬೇಕು. ಫ್ರೇಂನ ಕೆಳಭಾಗ ಒಂದು ಗ್ರಿಲ್‌ಇದ್ದು ಸ್ಪೀಕರ್ ಅದರೊಳಗಿದೆ. ಹಿಂಭಾಗದ ಮಧ್ಯಭಾಗದಲ್ಲಿ ಕ್ಯಾಮೆರಾ ಇದೆ. ಅದರ ಕೆಳಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ.

ಈ ಫೋನಿನ ಹೆಚ್ಚುಗಾರಿಕೆ ಇರುವುದು ಇದರ ಕ್ಯಾಮೆರಾದಲ್ಲಿ. ಇದರಲ್ಲಿ ಎರಡು ಕ್ಯಾಮೆರಾಗಳಿವೆ. ಒಂದು ಬಣ್ಣದಲ್ಲಿ ಮತ್ತು ಇನ್ನೊಂದು ಕಪ್ಪು ಬಿಳುಪಿನಲ್ಲಿ ದೃಶ್ಯವನ್ನು ಗ್ರಹಿಸಿ ಫೋನ್ ಅವುಗಳನ್ನು ಸಂಯೋಜಿಸಿ ಅಂತಿಮ ಚಿತ್ರ ನೀಡುತ್ತದೆ. ಒಂದು ಕ್ಯಾಮೆರಾ ಹತ್ತಿರದ ವಸ್ತುವನ್ನು ನಿಖರವಾಗಿ ಫೋಕಸ್ ಮಾಡುವಾಗ ಇನ್ನೊಂದು ಕ್ಯಾಮೆರಾ ಅದರ ಹಿನ್ನೆಲೆಯನ್ನು ಫೋಕಸ್ ಮಾಡುತ್ತದೆ. ನಾಲ್ಕು ವಾರಗಳ ಹಿಂದೆ ಇದೇ ಅಂಕಣದಲ್ಲಿ ವಿಮರ್ಶೆ ಮಾಡಿದ್ದ ಹೋನರ್ 6 ಎಕ್ಸ್ ಫೋನಿನಲ್ಲೂ ಇದೇ ಮಾದರಿಯಲ್ಲಿ ಎರಡು ಕ್ಯಾಮೆರಾಗಳಿವೆ. ಈ ಫೋನಿನ ಕ್ಯಾಮೆರಾಗಳು ಅದಕ್ಕಿಂತ ಉತ್ತಮವಾಗಿವೆ.ಇವರ ಕ್ಯಾಮೆರಾ ಕಿರುತಂತ್ರಾಂಶದಲ್ಲಿ (ಆ್ಯಪ್) ಒಂದು ವಿಶೇಷ ಸವಲತ್ತಿದೆ. ಅದು ವೈಡ್ ಅಪೆರ್ಚರ್. ಅದನ್ನು ಬಳಸಿ ಫೋಟೊ ತೆಗೆದರೆ ನಂತರ ಫೋಟೊದ ಬೇರೆ ಬೇರೆ ಜಾಗಗಳ ಮೇಲೆ ಬೆರಳಿಟ್ಟು ಆಯಾ ಜಾಗಕ್ಕೆ ಫೋಕಸ್ ಮಾಡಬಹುದು. ಅಂದರೆ ನಿಮಗೆ ವ್ಯಕ್ತಿ ಮಾತ್ರ ಬೇಕಿದ್ದರೆ ಹಿನ್ನೆಲೆಯನ್ನು ಮಸುಕಾಗಿಸಬಹುದು ಮತ್ತು ಅಗತ್ಯವಿದ್ದಾಗ ಹಿನ್ನೆಲೆಯನ್ನು ಸ್ಪಷ್ಟಮಾಡಬಹುದು. ಕ್ಯಾಮೆರಾ  ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಮೋಡ್ ಆಯ್ಕೆ ಕೂಡ ಇದೆ. ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ಉತ್ತಮ ಎನ್ನಬಹುದಾದ ಫೋಟೊ  ಬರುತ್ತದೆ. ಈ ಫೋನಿನ ಹೆಚ್ಚುಗಾರಿಕೆ ಇರುವುದು ಇದರ ಕ್ಯಾಮೆರಾದಲ್ಲೇ. ಸ್ವಂತೀ ಕ್ಯಾಮೆರಾ ಕೂಡ ಚೆನ್ನಾಗಿದೆ. ಇಷ್ಟೆಲ್ಲ ಇದ್ದರೂ ಇದು 4k ವಿಡಿಯೊ ಚಿತ್ರೀಕರಣ ಮಾಡುವುದಿಲ್ಲ.

5.2 ಇಂಚು ಗಾತ್ರದ ಪರದೆಯಾದರೂ ಇದು ಹೈಡೆಫಿನಿಶನ್ ಪರದೆ. ಇದರ ಗುಣಮಟ್ಟವೂ ಉತ್ತಮವಾಗಿದೆ. ಇದರಲ್ಲಿರುವುದು ಹುವಾವೆಯವರು ತಯಾರಿಸಿದ ತಮ್ಮದೇ ಪ್ರೊಸೆಸರ್. ಫೋನಿನ ಕೆಲಸದ ವೇಗ ಹೋನರ್ 6 ಎಕ್ಸ್‌ಗಿಂತ ಚೆನ್ನಾಗಿದೆ. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ಉತ್ತಮವಾಗಿವೆ. ಅಧಿಕ ಶಕ್ತಿ ಬೇಡುವ ಮೂರು ಆಯಾಮದ ಆಟಗಳನ್ನು ಕೂಡ ತೃಪ್ತಿದಾಯಕವಾಗಿ ಆಡಬಹುದು. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊಗಳ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ.

ಜಿಯೋ ಸಿಮ್ ಕೆಲಸ ಮಾಡುತ್ತದೆ. ಆಂಡ್ರಾಯ್ಡ್ 6.0 ಆಗಿರುವುದರಿಂದ ಕನ್ನಡ ಸರಿಯಾಗಿರಬೇಕಿತ್ತು. ಆದರೆ ಇದರಲ್ಲಿ ಕನ್ನಡದ ಯೂಸರ್ ಇಂಟರ್‌ಫೇಸ್ ಇಲ್ಲ. ಹಿಂದಿ ಇದೆ. ಇದರ ಬೆರಳಚ್ಚು ಸ್ಕ್ಯಾನರ್ ವಿಶೇಷ ಬಟನ್ ಆಗಿಯೂ ಕೆಲಸ ಮಾಡುತ್ತದೆ. ಅದನ್ನು ಬಳಸಿ ಹಲವು ಕೆಲಸಗಳನ್ನು ಮಾಡಬಹುದು ಮತ್ತು ಯಾವ ಕೆಲಸ ಮಾಡಬಹುದು ಎಂಬುದನ್ನು ನಾವೇ ಆಯ್ಕೆ ಮಾಡಿಕೊಳ್ಳಬಹುದು.

ಉತ್ತಮ ಕ್ಯಾಮೆರಾ ಎಂಬುದೊಂದೇ ಇದರ ಹೆಗ್ಗಳಿಕೆ. ಇದೇ ಬೆಲೆಗೆ ದೊರೆಯುವ ಒನ್‌ಪ್ಲಸ್ 3/3T ಫೋನ್‌ ಇದಕ್ಕಿಂತ ಉತ್ತಮ ಎಂದು ನನ್ನ ಅಭಿಪ್ರಾಯ. ಯಾಕೆಂದರೆ ಎರಡರ ಕ್ಯಾಮೆರಾಗಳೂ ಬಹುತೇಕ ಒಂದೇ ನಮೂನೆಯಲ್ಲಿ ಉತ್ತಮ ಫೋಟೊ ತೆಗೆಯುತ್ತವೆ. ಒನ್‌ಪ್ಲಸ್ 4k ವಿಡಿಯೊ ಚಿತ್ರೀಕರಣ ಮಾಡುತ್ತದೆ, ಅಧಿಕ ಮೆಮೊರಿ, ಕೆಲಸದ ವೇಗ ಚೆನ್ನಾಗಿದೆ.

ವಿಡಿಯೊ ವಿಮರ್ಶೆ:

***

ವಾರದ ಆ್ಯಪ್

 ಫೋನಿನ ವೇಗ ಅಳೆಯಿರಿ

ನೀವು ಒಂದು ಫೋನ್ ಕೊಂಡುಕೊಂಡಾಗ ಅದು ಎಷ್ಟು ಚೆನ್ನಾಗಿದೆ ಎಂದು ತಿಳಿಯಲು ಪ್ರಯತ್ನಿಸುತ್ತೀರಿ ತಾನೆ? ಅದು ಎಷ್ಟು ವೇಗವಾಗಿ ಕೆಲಸ ಮಾಡಬಲ್ಲುದು? ಇದನ್ನು ಅಳತೆ ಮಾಡಲು ಏನಾದರೂ ಸವಲತ್ತು ಇದೆಯೇ? ಎಂದೆಲ್ಲ ಆಲೋಚಿಸುತ್ತಿದ್ದೀರಾ? ಇದಕ್ಕೆ ಉತ್ತರ ರೂಪವಾಗಿ Antutu Benchmark ಎಂಬ ಕಿರುತಂತ್ರಾಂಶ (ಆ್ಯಪ್) ನಿಮಗೆ ಗೂಗಲ್ ಪ್ಲೇ ಸ್ಟೋರಿನಲ್ಲಿ ದೊರೆಯುತ್ತದೆ. ಗ್ಯಾಜೆಟ್‌ಲೋಕದಲ್ಲಿ ವಿಮರ್ಶೆ ಮಾಡುವ ಎಲ್ಲ ಫೋನ್‌ಗಳನ್ನು ಇದೇ ಕಿರುತಂತ್ರಾಂಶ ಮೂಲಕ ಪರೀಕ್ಷಿಸುತ್ತೇನೆ. ಉದಾಹರಣೆಗೆ, ಈ ಸಲ ವಿಮರ್ಶೆ ಮಾಡಿರುವ ಹೋನರ್ 8 ಫೋನಿನ ಅಂಟುಟು ಬೆಂಚ್‌ಮಾರ್ಕ್ ಸ್ಕೋರ್ 90102. ಹೋಲಿಕೆಗೆ ಒನ್‌ಪ್ಲಸ್ 3ರ ಸ್ಕೋರು 154062. ಈ ಸ್ಕೋರು ಜಾಸ್ತಿ ಇದ್ದಷ್ಟೂ ನಿಮ್ಮ ಫೋನ್‌ನ ಕೆಲಸದ ವೇಗ ಚೆನ್ನಾಗಿದೆ ಎಂದು ತಿಳಿಯಬಹುದು.

***

ಗ್ಯಾಜೆಟ್‌ ಸುದ್ದಿ

ಮೂರು ಆಯಾಮ ಮುದ್ರಣದ ಮೂಲಕ ಮನೆ ತಯಾರಿ

ಮೂರು ಆಯಾಮದ ಮುದ್ರಣದ ಮೂಲಕ ಸಣ್ಣ ಪುಟ್ಟ ಮಾದರಿಗಳನ್ನು ತಯಾರಿಸುವುದು ನಿಮಗೆಲ್ಲ ತಿಳಿದಿರಬಹುದು. ಈಗಷ್ಟೆ ಬಂದ ಸುದ್ದಿಯೇನೆಂದರೆ, ಸಾನ್ ಫ್ರಾನ್ಸಿಸ್ಕೊದ ಕಂಪೆನಿಯೊಂದು ಮೂರು ಆಯಾಮದ ಮುದ್ರಣದ ಮೂಲಕ ಮನೆಯನ್ನೇ ತಯಾರಿಸಿದೆ ಎಂದು. ಇಡಿಯ ಮನೆಯನ್ನು ಸುಮಾರು 24 ಗಂಟೆಗಳಲ್ಲಿ ನಿರ್ಮಿಸಿದ್ದಾರೆ.

ಮನೆಯ ಗೋಡೆ ಮತ್ತು ಇತರೆ ಭಾಗಗಳನ್ನು ಗಣಕದಲ್ಲಿ ವಿನ್ಯಾಸ ಮಾಡಿ ಅವುಗಳನ್ನು ಮೂರು ಆಯಾಮದ ಮುದ್ರಣದ ಮೂಲಕ ತಯಾರಿಸಿ ಜೋಡಿಸಿದ್ದಾರೆ. ಅಂತಿಮವಾಗಿ ನೀರಿನ ಪೈಪುಗಳು, ವಿದ್ಯುತ್ ತಂತಿ, ಇತ್ಯಾದಿಗಳನ್ನು ಮಾತ್ರ ಜನರೇ ಜೋಡಿಸಿದ್ದಾರೆ. ಸುಮಾರು 400 ಚದರ ಅಡಿಯ ಇಡಿಯ ಮನೆ ತಯಾರಿಗೆ ತಗುಲಿದ ಖರ್ಚು ₹6,73,860. ತಂತ್ರಜ್ಞಾನ ಕ್ಷೇತ್ರದಲ್ಲಿ ದಿನಕ್ಕೊಂದು ಹೊಸ ಕಂಪೆನಿ ಹುಟ್ಟುಹಾಕುತ್ತಿರುವ ಬೆಂಗಳೂರಿನ ಸ್ಟಾರ್ಟ್‌ಅಪ್ ಪ್ರಿಯರಿಗೆ ಒಂದು ಹೊಸ ಐಡಿಯಾ ಇಲ್ಲಿದೆ.

***

ಗ್ಯಾಜೆಟ್‌ ಸಲಹೆ

ತೇಜಸ್ ಅವರ ಪ್ರಶ್ನೆ: ಆ್ಯಪ್‌ಗಳನ್ನು ಮೆಮೊರಿಯಿಂದ ಎಸ್‌ಡಿ ಕಾರ್ಡ್‌ಗೆ ವರ್ಗಾಯಿಸುವುದು ಹೇಗೆ ಎಂದು ಪ್ರಶ್ನಿಸಿದಾಗ ನೀವು ಹಿಂದೊಮ್ಮೆ App to SD ಆ್ಯಪ್ ಸೂಚಿಸಿದ್ದಿರಿ. ಆದರೆ ಈಗ ಅದು ಕೆಲಸ ಮಾಡುತ್ತಿಲ್ಲ. ಏನು ಪರಿಹಾರ?
ಉ: ನೀವು ಆಂಡ್ರಾಯ್ಡ್‌ನ ಯಾವ ಆವೃತ್ತಿ ಬಳಸುತ್ತಿರುವುದೆಂದು ತಿಳಿಸಿಲ್ಲ. ಇತ್ತೀಚಿನ ಆವೃತ್ತಿಗಳಲ್ಲಿ ಆಂಡ್ರಾಯ್ಡ್‌ನಲ್ಲೇ ಆ್ಯಪ್‌ ಅನ್ನು ಎಸ್‌ಡಿ ಕಾರ್ಡ್‌ಗೆ ವರ್ಗಾಯಿಸುವ ಸವಲತ್ತು ನೀಡಿದ್ದಾರೆ. App to SD ಅಗತ್ಯವಿಲ್ಲ.

ಆದರೆ ಹಲವು ಆ್ಯಪ್‌ಗಳನ್ನು ಮೆಮೊರಿಯಲ್ಲೇ ಇನ್‌ಸ್ಟಾಲ್ ಮಾಡಬೇಕು. ಅವುಗಳನ್ನು ಎಸ್‌ಡಿ ಕಾರ್ಡ್‌ಗೆ ವರ್ಗಾಯಿಸಲು ಸಾಧ್ಯವಿಲ್ಲ. ಬಹುಶಃ ನೀವು ಅಂಥ ಆ್ಯಪ್‌ಗಳನ್ನು ವರ್ಗಾಯಿಸಲು ಪ್ರಯತ್ನಿಸಿರಬಹುದು.

***

ಗ್ಯಾಜೆಟ್‌ ತರ್ಲೆ

ಫ್ರಿಜ್‌ ಒಳಗೊಂದು ಕ್ಯಾಮೆರಾ


ನಿಮ್ಮ ತಂಗಳು ಪೆಟ್ಟಿಗೆಯ (ರೆಫ್ರಿಜರೇಟರ್) ಒಳಗೆ ಏನಿದೆ ಎಂದು ನೋಡಬೇಕಾದರೆ ಏನು ಮಾಡಬೇಕು? ಅದರಲ್ಲಿಟ್ಟ ಆಹಾರ ವಸ್ತುಗಳು (ಉದಾ – ಹಾಲು) ಮುಗಿದಿದೆಯೇ ಎಂದು ತಿಳಿಯುವುದು ಹೇಗೆ? ಬಾಗಿಲು ತೆರೆದು ನೋಡಬೇಕು ಎನ್ನುತ್ತೀರಾ? ನೀವು ಮನೆಯಲ್ಲಿದ್ದರೆ ಅದನ್ನು ಮಾಡಬಹುದು. ಕಚೇರಿಯಲ್ಲಿದ್ದರೆ?
ಈಗ ಅದಕ್ಕೂ ಪರಿಹಾರ ಬಂದಿದೆ. ಫ್ರಿಜ್‌ನ ಒಳಗೆ ಇಡಬಲ್ಲ, ವೈಫೈ ಮೂಲಕ, ಅಂತರಜಾಲದ ಮೂಲಕ, ನಿಮ್ಮ ಸ್ಮಾರ್ಟ್‌ಫೋನಿಗೆ ಸಂಪರ್ಕಗೊಳ್ಳಬಲ್ಲ ಕ್ಯಾಮೆರಾ ಬಂದಿದೆ. ಅದನ್ನು ಫ್ರಿಜ್ ಒಳಗೆ ಇಟ್ಟು ಕಚೇರಿಯಲ್ಲಿ ಕುಳಿತೇ ನಿಮ್ಮ ಫ್ರಿಜ್‌ನ ಒಳಾಂಗಣ ವೀಕ್ಷಣೆ ಮಾಡಬಹುದು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry