ಭಾನುವಾರ, ನವೆಂಬರ್ 17, 2019
27 °C

‘ಹೃದಯ’ಸ್ಪರ್ಶಿ ನಿರ್ಧಾರ

Published:
Updated:
‘ಹೃದಯ’ಸ್ಪರ್ಶಿ ನಿರ್ಧಾರ

ಹೃದ್ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಸ್ಟೆಂಟ್‌ಗಳನ್ನು ಕೇಂದ್ರ ಸರ್ಕಾರ ಈಗ ‘ಬೆಲೆ ನಿಯಂತ್ರಣ’ದ ವ್ಯಾಪ್ತಿಗೆ ತಂದಿದೆ. ಇದರಿಂದ ಇವುಗಳ ಬೆಲೆ ಸರಾಸರಿ ಶೇ 85ರಷ್ಟು ಇಳಿದಿದೆ. ಸರ್ಕಾರದ ಈ ಕ್ರಮದಿಂದ ರೋಗಿಗಳಿಗೆ ಅನುಕೂಲವಾಗಿದೆ. ಆದರೆ ಸ್ಟೆಂಟ್ ತಯಾರಿಕಾ ಕ್ಷೇತ್ರದಲ್ಲಿ ಈ ಕ್ರಮ ಹೊಸ ಪ್ರಯೋಗಗಳಿಗೆ ಅಡ್ಡಿಯಾಗಲಿದೆ ಎಂದು ತಯಾರಕರು ದೂರುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆಗೆ ಅಗತ್ಯವಾದ ದುಬಾರಿ ಸ್ಟೆಂಟ್ ಆಮದು ಕಷ್ಟವಾಗುತ್ತದೆ ಎಂದೂ ಕೆಲವು ವೈದ್ಯರೂ ಹೇಳುತ್ತಿದ್ದಾರೆ. ಈ ಕುರಿತ ವಾದಗಳ ಹಿಂದಿರುವ ತರ್ಕಗಳೇನು?

ಜೀವಾಧಾರ ‘ಸ್ಟೆಂಟ್‌’ಗಳ ದರ ಇಳಿಕೆ ಕೇಂದ್ರ ಸರ್ಕಾರದ ‘ಹೃದಯ’ಸ್ಪರ್ಶಿ ನಿರ್ಧಾರ. ಹೃದ್ರೋಗಿಗಳ ಪಾಲಿಗೆ ಸಂಜೀವಿನಿ. ಆದರೆ, ಹೃದಯ ಚಿಕಿತ್ಸೆಗೆ ಅಳವಡಿಸುವ ಈ ಸಾಧನದ ಹೆಸರಿನಲ್ಲಿ ಹಣ ಲೂಟಿ ಹೊಡೆಯುವ ಆಸ್ಪತ್ರೆ, ಔಷಧ ಮಳಿಗೆ, ಕಾರ್ಡಿಯಾಕ್ ಸೆಂಟರ್‌ಗಳಿಗೆ ಜೀರ್ಣಿಸಿಕೊಳ್ಳಲಾಗದ ಶಾಕ್‌!ಸ್ಟೆಂಟ್‌ ವಿನ್ಯಾಸ, ನಿರ್ಮಾಣ, ಆಮದು–ರಫ್ತು, ಮಾರಾಟ ವಿಭಾಗಗಳ ಅಧ್ಯಯನ ನಡೆಸಿದ ಬಳಿಕ ರಾಷ್ಟ್ರೀಯ ಔಷಧ ದರ ಪ್ರಾಧಿಕಾರ (ಎನ್‌ಪಿಪಿಎ- National Pharmaceutical Pricing Authority) ಗರಿಷ್ಠ ಬೆಲೆ ನಿಗದಿಪಡಿಸಿದೆ. ಪರಿಣಾಮವಾಗಿ, ದುಬಾರಿಯಾಗಿದ್ದ ಸ್ಟೆಂಟ್‌ ದರ ಭಾರಿ ಪ್ರಮಾಣದಲ್ಲಿ ಇಳಿದಿದೆ.ಆರೋಗ್ಯ ಭದ್ರತೆ ಒದಗಿಸುವ ಬದ್ಧತೆಗೆ ಪೂರಕವಾಗಿ ತೆಗೆದುಕೊಂಡ ಈ ತೀರ್ಮಾನದ ಅನುಷ್ಠಾನದಲ್ಲೂ ಕೇಂದ್ರ ಸರ್ಕಾರ ಅಷ್ಟೇ ಕಾಳಜಿ ಹೊಂದಿರುವುದು ಸ್ಪಷ್ಟ. ಬಡವರಷ್ಟೇ ಅಲ್ಲ, ಮಧ್ಯಮ, ಮೇಲ್‌ಮಧ್ಯಮ ವರ್ಗದ ರೋಗಿಗಳಿಗೂ ಇದರಿಂದ ಅನುಕೂಲವಾಗಿದೆ. ಆದರೆ, ಸ್ಟೆಂಟ್ ನಿರ್ಮಾಣ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳಿಗೆ ಈ ಕ್ರಮ ಅಡ್ಡಿಯಾಗಲಿದೆ ಎನ್ನುವುದು ತಯಾರಕರ ಆತಂಕ.

ಗುಣಮಟ್ಟದ ಚಿಕಿತ್ಸೆಗೆ ಅಗತ್ಯವಾದ ದುಬಾರಿ ಸುಧಾರಿತ ಸ್ಟೆಂಟ್ ಆಮದು ಮಾಡಿಕೊಳ್ಳುವುದು ಕಷ್ಟವಾಗಬಹುದು ಎಂಬ ವಾದವೂ ಆರೋಗ್ಯ ವಲಯದಲ್ಲಿ ಹುಟ್ಟಿಕೊಂಡಿದೆ. ಹೃದ್ರೋಗಿಗಳ ಆಂಜಿಯೊಪ್ಲಾಸ್ಟಿ ಚಿಕಿತ್ಸೆಯಲ್ಲಿ ಹೃದಯ ನಾಳಗಳಿಗೆ ಅಳವಡಿಸಲಾಗುವ ಜೀವರಕ್ಷಕ ಕೊರೊನರಿ ಸ್ಟೆಂಟ್‌ಗಳಿಗೆ ಇಷ್ಟು ದಿನ ಆಸ್ಪತ್ರೆಯವರು, ವಿತರಕರು ಹೇಳಿದ್ದೇ ಬೆಲೆಯಾಗಿತ್ತು. 2017ರ ಫೆಬ್ರುವರಿ 14ರಿಂದಲೇ ಹೊಸ ದರ ಜಾರಿಗೆ ಬಂದಿದೆ.ಬೆಲೆ ಮೇಲೆ ಮಿತಿ ಹೇರಿರುವುದರಿಂದ ಯಾವುದೇ ರೀತಿಯ ಸ್ಟೆಂಟ್‌ಗಳನ್ನು (ಆಮದು ಮಾಡಿಕೊಂಡಿದ್ದರೂ) ನಿಗದಿತ ದರ ಮೀರಿ ಮಾರಾಟ ಮಾಡಲು ಅವಕಾಶ ಇಲ್ಲ. ಮೌಲ್ಯವರ್ಧಿತ ತೆರಿಗೆ (ವ್ಯಾಟ್‌), ಸ್ಥಳೀಯ ತೆರಿಗೆ ಸೇರಿಸಿ ಹೊಸ ಬೆಲೆಯನ್ನು ಅನ್ವಯಿಸಲಾಗಿದೆ.

ಸ್ಟೆಂಟ್‌ಗಳ ಪೂರೈಕೆದಾರರು ಮತ್ತು ಆಸ್ಪತ್ರೆಗಳು ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದಡಿ ಬರುವ ಎನ್‌ಪಿಪಿಎ ಎಚ್ಚರಿಕೆ ನೀಡಿರುವುದು ಖಾಸಗಿ ಆಸ್ಪತ್ರೆಗಳ ಮಾಲೀಕರ ಹೃದಯ ಬಡಿತ ಹೆಚ್ಚಿಸಿದೆ.ಸ್ಟೆಂಟ್‌ಗಳ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆ ವಿಧಿಸುವುದನ್ನು ತಡೆಯುವ ಉದ್ದೇಶದಿಂದ, ತಯಾರಕ ಉದ್ಯಮಗಳು ಮೂರು ವರ್ಷಗಳಲ್ಲಿ ಎಷ್ಟು ಸ್ಟೆಂಟ್‌ಗಳನ್ನು ಪೂರೈಕೆ ಮಾಡಿವೆಯೋ ಮುಂದಿನ ಒಂದು ವರ್ಷ ಅಷ್ಟೇ ಪ್ರಮಾಣದ ಸ್ಟೆಂಟ್‌ಗಳನ್ನು ತಯಾರು ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆಯನ್ನೂ ಸಚಿವಾಲಯ ನೀಡಿದೆ. ಹೀಗಾಗಿ ಸ್ಟೆಂಟ್‌ ಹೆಸರಿನಲ್ಲಿ ಲೂಟಿ ಹೊಡೆಯುತ್ತಿದ್ದ ವೈದ್ಯಕೀಯ ಸಂಸ್ಥೆಗಳು ಎಚ್ಚೆತ್ತುಕೊಳ್ಳಲೇಬೇಕಾದ ಅನಿವಾರ್ಯ ಎದುರಾಗಿದೆ.‘ಆರೋಗ್ಯ ರಂಗದಲ್ಲಿ ಇದು ಕ್ರಾಂತಿಕಾರಿ ಹೆಜ್ಜೆ’ ಎನ್ನುತ್ತಾರೆ ಹಿರಿಯ ಹೃದ್ರೋಗ ತಜ್ಞ ಡಾ. ಎನ್‌.ಎಸ್‌.ಹಿರೇಗೌಡರ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೊರೊನರಿ ರಕ್ತನಾಳ ಕಾಯಿಲೆ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಸ್ಟೆಂಟ್‌ಗಳಿಗೆ ಬೇಡಿಕೆಯೂ ಬಂದಿದ್ದು, ಬಡ ರೋಗಿಗಳಿಗೆ ಆಂಜಿಯೊಪ್ಲಾಸ್ಟಿ ಚಿಕಿತ್ಸೆ ಕೈಗೆಟುಕದ ಸಂಗತಿಯಾಗಿತ್ತು. ಸ್ಟೆಂಟ್‌ಗಳ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕ ವಲಯದ ಒತ್ತಾಸೆಯೂ ಇತ್ತು.ರಾಷ್ಟ್ರೀಯ ಅತ್ಯವಶ್ಯಕ ಔಷಧಗಳ ಪಟ್ಟಿಯಲ್ಲಿ (National List of Essential Medicines- 2015) ಇದುವರೆಗೆ ಸ್ಟೆಂಟ್‌ಗಳು ಸೇರಿರಲಿಲ್ಲ. ಹೀಗಾಗಿ ತಯಾರಿಕಾ ವೆಚ್ಚ ಕಡಿಮೆ ಇದ್ದರೂ, ದುಬಾರಿ ಬೆಲೆಗೆ ಅವುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕೇಂದ್ರ ಆರೋಗ್ಯ ಇಲಾಖೆ 2016ರ ಜುಲೈನಲ್ಲಿ ಸ್ಟೆಂಟ್‌ಗಳನ್ನು ಈ ಪಟ್ಟಿಗೆ ಸೇರಿಸಿದೆ. ಹಾಗಾಗಿ ಸ್ಟೆಂಟ್‌ ಬೆಲೆ ನಿಯಂತ್ರಿಸಲು ಎನ್‌ಪಿಪಿಎಗೆ ಅವಕಾಶ ಸಿಕ್ಕಿದೆ.‘ಉತ್ಪಾದನಾ ವೆಚ್ಚ ಕಡಿಮೆ ಇರುವುದರಿಂದ ಸ್ಟೆಂಟ್‌ ತಯಾರಿಸುವ ಉದ್ಯಮಗಳ ಮೇಲೆ ಅಂತಹ ಪರಿಣಾಮ ಉಂಟಾಗದು’ ಎಂದೂ ಡಾ. ಹಿರೇಗೌಡರ ಅಭಿಪ್ರಾಯಪಡುತ್ತಾರೆ.ನಮ್ಮಲ್ಲೇ ತಯಾರಾಗುತ್ತಿರುವ ಸ್ಟೆಂಟ್‌ಗಳ ಜೊತೆಗೆ ಹೊರ ರಾಷ್ಟ್ರಗಳಿಂದಲೂ ಅವು ಪೂರೈಕೆಯಾಗುತ್ತವೆ. ಅಮೆರಿಕದಿಂದ ಹೆಚ್ಚಿನ ಪ್ರಮಾಣದಲ್ಲಿ ಆಮದು ಆಗುತ್ತಿದೆ. ಸ್ಟೆಂಟ್ ವಿನ್ಯಾಸದಲ್ಲಿ ಸುಧಾರಿತಮಟ್ಟ ಹೊರತುಪಡಿಸಿದರೆ ದೇಶ ಮತ್ತು ವಿದೇಶದಲ್ಲಿ ತಯಾರಾದ ಸ್ಟೆಂಟ್‌ಗಳ ಬೆಲೆಯಲ್ಲಿ ಅಂತಹ ವ್ಯತ್ಯಾಸ ಇಲ್ಲ. ಆದರೂ ವಿದೇಶದಿಂದ ಆಮದಾಗುತ್ತಿದ್ದ ಸ್ಟೆಂಟ್‌ಗಳಿಗೆ ವಿತರಕರು ಇಷ್ಟ ಬಂದಂತೆ ಎಂಆರ್‌ಪಿ (ಗರಿಷ್ಠ ಮಾರಾಟ ಬೆಲೆ) ನಿಗದಿಪಡಿಸುತ್ತಿದ್ದರು.

ತಯಾರಿಕಾ ಉದ್ಯಮಗಳು ವಿತರಕರಿಗೆ ಪೂರೈಸಿದರೆ, ಅದನ್ನು ಅವರು ನೇರವಾಗಿ ಆಸ್ಪತ್ರೆಗಳಿಗೆ ತಲುಪಿಸುತ್ತಿದ್ದರು. ಬೆಲೆ ನಿಯಂತ್ರಣ ಎಂದೂ ಇರಲಿಲ್ಲ. ಆದರೆ, ವಿದೇಶಗಳಲ್ಲಿ ನಿಯಂತ್ರಣ ಇತ್ತು. ಅದಕ್ಕೆ ಅಲ್ಲಿನ ಆರೋಗ್ಯ ವಿಮಾ ಯೋಜನೆಗಳು ಕಾರಣ.

ನಮ್ಮಲ್ಲೂ ರಾಜ್ಯ ಸರ್ಕಾರದ ಯಶಸ್ವಿನಿ, ಆರೋಗ್ಯಶ್ರೀ, ವಾಜಪೇಯಿ ಆರೋಗ್ಯ ಭಾಗ್ಯ ಯೋಜನೆಗಳಡಿ ಸ್ಟೆಂಟ್‌ ಅಳವಡಿಸಿದವರಿಗೆ ಕಡಿಮೆ ದರ ವಿಧಿಸಲಾಗುತ್ತಿದೆ. ಈ ಯೋಜನೆಗಳ ಪ್ರಯೋಜನವನ್ನು ಉತ್ತರ ಕರ್ನಾಟಕ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಂಡಿದ್ದಾರೆ. ಈ ಯೋಜನೆಗಳಡಿ ಸ್ಟೆಂಟ್‌ ಅಳವಡಿಕೆಗೆ ರಾಜ್ಯ ಸರ್ಕಾರ ₹ 27 ಸಾವಿರ ನೀಡುತ್ತಿದೆ. ಉನ್ನತ ಗುಣಮಟ್ಟದ (ಹೈ ಎಂಡ್‌) ಸ್ಟೆಂಟ್‌ ಹಾಕಿದರೂ ಅಷ್ಟೇ ಹಣ ಸರ್ಕಾರದಿಂದ ಮಂಜೂರಾಗುತ್ತಿದೆ. ಆದರೆ ಅದೇ ಸ್ಟೆಂಟ್ ಅಳವಡಿಸಲು ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ವೆಚ್ಚವಾಗುತ್ತಿತ್ತು. ಸ್ಟೆಂಟ್‌ನ ನಿಜವಾದ ಬೆಲೆ ವೈದ್ಯರೂ ಸೇರಿದಂತೆ ಯಾರಿಗೂ ಗೊತ್ತಿರಲಿಲ್ಲ ಎಂದು ಹಿರೇಗೌಡರ ಹೇಳುತ್ತಾರೆ.ಸ್ಟೆಂಟ್‌ ಎಷ್ಟು ಬೆಲೆಗೆ ಆಮದು ಆಗುತ್ತಿದೆ ಎಂದು ಮಾಹಿತಿ ಪಡೆದು ಕೇಂದ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ವಿತರಕರನ್ನು ನಂಬಿಕೊಂಡು ವಿದೇಶಿ ಸ್ಟೆಂಟ್ ತಯಾರಿಕಾ ಕಂಪೆನಿಗಳು ವ್ಯವಹಾರ ನಡೆಸುತ್ತಿವೆ. ವಿತರಕರು ಎಂಆರ್‌ಪಿ ನಿಗದಿಪಡಿಸಿ ಪೂರೈಕೆ ಮಾಡಲು ಸ್ವತಂತ್ರರಾಗಿದ್ದರು. ಹೀಗಾಗಿ ಅವರು ತಮಗಿಷ್ಟ ಬಂದ ದರ ವಿಧಿಸುತ್ತಿದ್ದರು.

ನಿಜವಾದ ಬೆಲೆಯು ತಯಾರಿಕಾ ಉದ್ಯಮಗಳು ಮತ್ತು ವಿತರಕರಿಗೆ ಮಾತ್ರ ಗೊತ್ತಿರುತ್ತಿತ್ತು. ಆಮದು ಪರವಾನಗಿ ಪಡೆದ ಪೂರೈಕೆದಾರರಿಂದ ಸರಿಯಾದ ದರ ತಿಳಿದುಕೊಂಡ ಕೇಂದ್ರ ಸರ್ಕಾರ, ಎರಡು ವರ್ಷದಿಂದ ಈ ಕುರಿತು ಅಧ್ಯಯನ  ಮಾಡಿದೆ.ಒಂದೊಮ್ಮೆ ಮಾರಾಟಗಾರರು ಸ್ಟೆಂಟ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿದರೆ, ಆ ದುಬಾರಿ ಬೆಲೆ ಮೇಲೆ ಶೇ 15ರಷ್ಟು ದಂಡ ವಿಧಿಸಿ ಹಣ ವಸೂಲಿ ಮಾಡಲಾಗುವುದು. ಜತೆಗೆ ಅಂಥ ಮಾರಾಟಗಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಮಾರಾಟ ಪರವಾನಗಿ ರದ್ದುಪಡಿಸಲು ಕಾನೂನಿನಡಿ ಅವಕಾಶ ಇದೆ. ನಿಯಮ ಉಲ್ಲಂಘಿಸಿದ ಕೆಲವು ಆಸ್ಪತೆಗಳ ಮೇಲೆ ಈಗಾಗಲೇ ಚಾಟಿ ಬೀಸಲಾಗಿದೆ.ದರ ನಿಯಂತ್ರಣದ ಬಳಿಕ ಕೆಲವು ಆಸ್ಪತ್ರೆಗಳಲ್ಲಿ ಸ್ಟೆಂಟ್‌ನ ಕೃತಕ ಅಭಾವ ಸೃಷ್ಟಿಸಲಾಗಿತ್ತು. ತಕ್ಷಣವೇ ಎಚ್ಚರಿಕೆ ಸಂದೇಶ ರವಾನಿಸಿದ ಕೇಂದ್ರ ಸರ್ಕಾರ, ಉತ್ಪಾದಕ ಕಂಪೆನಿಗಳ ಮೇಲೆ ನಿಗಾ ವಹಿಸಿದೆ. ಈ ದಂಧೆಯಲ್ಲಿ ತೊಡಗುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಘೋಷಿತ ದರದ ಅನುಸಾರ, ಅಗತ್ಯ ಪ್ರಮಾಣದ ಸ್ಟೆಂಟ್‌ನ ಶೀಘ್ರ ಲಭ್ಯತೆಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಎನ್‌ಪಿಪಿಎ, ಡ್ರಗ್‌ ಕಂಟ್ರೋಲರ್‌ ಜನರಲ್‌ (ಡಿಸಿಜಿ) ಮತ್ತು ಆರೋಗ್ಯ ಸಚಿವಾಲಯಕ್ಕೆ ರಾಸಾಯನಿಕ ಸಚಿವಾಲಯ ಸೂಚನೆ ನೀಡಿದೆ. ಇದು ಪರಿಣಾಮ ಉಂಟು ಮಾಡಿದೆ ಎನ್ನುವ ವಸ್ತುಸ್ಥಿತಿಯನ್ನು ರಾಜ್ಯ ಔಷಧ ನಿಯಂತ್ರಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಹಂಚಿಕೊಂಡರು.‘ಸ್ಟೆಂಟ್‌ಗಳ ವಿತರಕರು ಮತ್ತು ಆಮದುದಾರರು ಆಸ್ಪತ್ರೆಗಳಿಗೆ ನೇರವಾಗಿ ಸಾಧನಗಳನ್ನು ಪೂರೈಸುತ್ತಾರೆ. ಅವುಗಳ ಗುಣಮಟ್ಟ ಪರಿಶೀಲನೆಯಷ್ಟೇ ನಮ್ಮ ವ್ಯಾಪ್ತಿಯಲ್ಲಿದೆ. ದರ ಕಡಿಮೆ ಮಾಡಿದ ಬಳಿಕ ಹೆಚ್ಚು ಹಣ ವಸೂಲಿ ಮಾಡಿದ ಬಗ್ಗೆ ಯಾವುದೇ ದೂರು ನಮಗೆ ಬಂದಿಲ್ಲ. ಹೆಚ್ಚು ವಸೂಲಿಗಿಳಿದರೆ ನಾವು ಅಪರಾಧ ಪ್ರಕರಣ ದಾಖಲಿಸಬಹುದು. ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರ ಕೇಂದ್ರದ್ದು’ ಎಂದು ರಾಜ್ಯ ಔಷಧ ನಿಯಂತ್ರಕ ಭಾಗೋಜಿ ಟಿ. ಖಾನಾಪುರೆ ಹೇಳುತ್ತಾರೆ.‘ಸ್ಟೆಂಟ್ ಔಷಧ ಮಳಿಗೆಗಳಲ್ಲಿ ಮಾರಾಟಕ್ಕೆ ಇಡುವ ವಸ್ತುವಲ್ಲ. ಹೃದ್ರೋಗ ಚಿಕಿತ್ಸಾ ಕೇಂದ್ರಗಳು ಅದನ್ನು ಪೂರೈಸುವಂತೆ ವಿತರಕರ ಮೂಲಕ ತಯಾರಕ ಉದ್ಯಮಗಳನ್ನು ಸಂಪರ್ಕಿಸುತ್ತವೆ. ಹಣ ಪಾವತಿ ನೇರವಾಗಿ ನಡೆಯುತ್ತದೆ. ಯಾವುದೇ ಲೆಕ್ಕ ನಮ್ಮಲ್ಲಿಗೆ ಬರುವುದಿಲ್ಲ. ಗುಣಮಟ್ಟಕ್ಕೆ ಸಂಬಂಧಿಸಿ ದೂರು ಬಂದರೆ ಸ್ಯಾಂಪಲ್ ತರಿಸಿಕೊಂಡು ನೋಡುತ್ತೇವೆ.

ಸ್ಟೆಂಟ್‌ ದರ ಇಳಿಸಿದ ಬಳಿಕ ಹೆಚ್ಚು ಹಣ ವಸೂಲು ಮಾಡಿದ ಕರ್ನಾಟಕದ ಆಸ್ಪತ್ರೆಗಳ ವಿರುದ್ಧ ದೂರು ದಾಖಲಾಗಿರುವ ಮಾಹಿತಿಯೂ ನಮ್ಮಲ್ಲಿ ಇಲ್ಲ. ಯಾರು ದೂರು ಕೊಟ್ಟಿದ್ದಾರೆ ಎಂದೇ ಗೊತ್ತಿಲ್ಲ. ಆದರೆ, ಹೆಚ್ಚು ಬೆಲೆ ವಿಧಿಸದಂತೆ ನಿರ್ದೇಶನ ನೀಡಿದ್ದೇನೆ. ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ’ ಎನ್ನುತ್ತಾರೆ ಖಾನಾಪುರೆ.‘ಬಡವರಿಗೆ ಆರೋಗ್ಯ ಸೌಲಭ್ಯ ಒದಗಿಸುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ. ಹೃದ್ರೋಗ ಎಂದಾಕ್ಷಣ ಎದೆಬಡಿತ ಹೆಚ್ಚುತ್ತದೆ. ಅಂಥದ್ದರಲ್ಲಿ ಸ್ಟೆಂಟ್ ಬಗ್ಗೆ ಅರಿವಿಲ್ಲದವರಿಗೆ ಹೃದಯದೊಳಗೆ ನಳಿಕೆಯೊಂದನ್ನು (ಸ್ಟೆಂಟ್‌) ತೂರಿಸಬೇಕು ಎಂದಾಗ ಅದಕ್ಕೆ ತಗಲುವ ವೆಚ್ಚ ನೆನಪಿಸಿಕೊಂಡು ಅರ್ಧಜೀವ ಆಗುತ್ತಾರೆ.

ದರ ಇಳಿಸಿರುವುದರಿಂದ ಇನ್ನು ಆ ಭಯ ಇಲ್ಲವೇನೊ. ಆದರೆ, ಈ ಬಗ್ಗೆ ಜನಜಾಗೃತಿ ಮೂಡಬೇಕು. ಸ್ಟೆಂಟ್ ಬೆಲೆ ಸಾಕಷ್ಟು ಕಡಿಮೆಯಾಗಿದೆ ಎಂಬುದು ಸಾರ್ವತ್ರಿಕ ಸುದ್ದಿ ಆಗಬೇಕು. ಆಗಷ್ಟೇ ಅದರ ಪ್ರಯೋಜನ ತಳಮಟ್ಟದ ಜನರಿಗೆ ತಲುಪಲು ಸಾಧ್ಯ’ ಎನ್ನುತ್ತಾರೆ ವಕೀಲೆ ಅಖಿಲಾ ವಿದ್ಯಾಸಂದ್ರ.‘ಈ ಬಗ್ಗೆ ಅರಿವಿನ ಕೊರತೆ ನೀಗಿಸುವ ಕೆಲಸ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳಿಂದ ಆಗಬೇಕು. ಬೆಲೆ ಕಡಿಮೆ ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ತೊಂದರೆಯಾದರೆ ರೋಗಿ ಸೋಂಕು ತಗುಲಿ ಸತ್ತು ಹೋಗುವ ಅಪಾಯ ಇರುತ್ತದೆ. ಹೀಗಾಗದಂತೆ ಎಚ್ಚರಿಕೆ ಅಗತ್ಯ’ ಎನ್ನುವ ದೂರದೃಷ್ಟಿ ಅವರದು.

‘ಸ್ಟೆಂಟ್‌ ತಯಾರಿಸುವ ಎರಡು ಉದ್ಯಮಗಳಷ್ಟೇ ಕರ್ನಾಟಕದಲ್ಲಿವೆ (ಮೈಸೂರಿನಲ್ಲಿ ‘ಎಸ್‌3ವಿ ವ್ಯಾಸ್ಕ್ಯುಲರ್‌ ಟೆಕ್ನಾಲಜಿ’ ಮತ್ತು ದೊಡ್ಡಬಳ್ಳಾಪುರದಲ್ಲಿ ‘ವ್ಯಾಸ್ಕ್ಯುಲರ್‌ ಕಾನ್ಸೆಪ್ಟ್‌). ಗುಜರಾತಿನಲ್ಲಿ 50ಕ್ಕೂ ಹೆಚ್ಚು ಇಂಥ ಉದ್ಯಮಗಳಿವೆ.

ಸ್ಟೆಂಟ್‌ ಎಂದರೇನು?

ಹೃದಯಕ್ಕೆ ರಕ್ತ ಸರಬರಾಜು ಮಾಡಲು ಅಪಧಮನಿಗಳಲ್ಲಿ ಅಳವಡಿಸಲಾಗುವ ಕೊಳವೆ ಆಕಾರದ ಸಣ್ಣ ಉಪಕರಣವೇ ಕೊರೊನರಿ ಸ್ಟೆಂಟ್‌

ಹೃದ್ರೋಗಕ್ಕೆ ಕಾರಣ

ಮಧುಮೇಹ, ಧೂಮಪಾನ, ರಕ್ತದೊತ್ತಡ, ಆನುವಂಶೀಯತೆ, ಜೀವನಶೈಲಿ, ಕಾರ್ಬೊಹೈಡ್ರೇಟ್‌ಯುಕ್ತ ಆಹಾರದ ಅತಿಯಾದ ಸೇವನೆ, ದೈಹಿಕ ವ್ಯಾಯಾಮದ ಕೊರತೆ.

ಪ್ರತಿಕ್ರಿಯಿಸಿ (+)