ಗುರುವಾರ , ನವೆಂಬರ್ 21, 2019
22 °C

ಆಲ್ಟೊ ಬೆಲೆಗೆ ಬಿಎಂಡಬ್ಲ್ಯು ಸಿಗುತ್ತಾ?!

Published:
Updated:
ಆಲ್ಟೊ ಬೆಲೆಗೆ ಬಿಎಂಡಬ್ಲ್ಯು ಸಿಗುತ್ತಾ?!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಳಸುವ ಬಿಎಂಡಬ್ಲ್ಯು- 7 ಸರಣಿಯ ಕಾರನ್ನು ಮಾರುತಿ ಆಲ್ಟೊ ಕಾರಿನ ಬೆಲೆಗೆ ಮಾರಾಟ ಮಾಡಲು ಸಾಧ್ಯವೇ? ಇದು ಹೃದ್ರೋಗ ತಜ್ಞರು, ಆಸ್ಪತ್ರೆಗಳ ಮುಖ್ಯಸ್ಥರು ಹಾಗೂ ಸ್ಟೆಂಟ್‌ ವಿತರಕರು ಕೇಳುತ್ತಿರುವ ಪ್ರಶ್ನೆ.ನಮ್ಮ ದೇಶದಲ್ಲಿ ಬಿಎಂಡಬ್ಲ್ಯು ಸರಣಿಯ ಕಾರುಗಳ ಬೆಲೆ ₹ 35 ಲಕ್ಷದಿಂದ ₹ 2 ಕೋಟಿಯವರೆಗೆ ಇದೆ. ಮಾರುತಿ ಆಲ್ಟೊ ಕಾರುಗಳ ಬೆಲೆ ₹ 4 ಲಕ್ಷದ ಆಜುಬಾಜಿನಲ್ಲಿದೆ. ‘ಬೆಲೆ ನಿಯಂತ್ರಣ’ ವ್ಯಾಪ್ತಿಗೆ ತಂದು ಇವೆರಡನ್ನೂ ಒಂದೇ ಬೆಲೆಗೆ ಮಾರಲು ಸಾಧ್ಯವಿಲ್ಲ. ಸ್ಟೆಂಟ್‌ ಬೆಲೆ ನಿಗದಿಯಲ್ಲಿ ಕೇಂದ್ರ ಸರ್ಕಾರ ಈ ರೀತಿ ಮಾಡಿದೆ ಎಂಬುದು ವೈದ್ಯಕೀಯ ಕ್ಷೇತ್ರದ ಪರಿಣತರ ಅಸಮಾಧಾನಕ್ಕೆ ಕಾರಣ.

‘ಬೆಲೆ ನಿಗದಿ ಮಾಡುವ ಮೂಲಕ ಕೇಂದ್ರ ಸರ್ಕಾರ ಉತ್ತಮ ಹೆಜ್ಜೆ ಇಟ್ಟಿದೆ. ಲಾಭಕೋರ ಆಸ್ಪತ್ರೆಗಳ ಧನದಾಹಕ್ಕೆ ತಕ್ಕಮಟ್ಟಿಗೆ ಕಡಿವಾಣ ಬಿದ್ದಿದೆ. ಆದರೆ, ಎಲ್ಲ ಸ್ಟೆಂಟ್‌ಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ದರ ನಿಗದಿ ಮಾಡಿದ್ದು ಸರಿಯಲ್ಲ. ಹೃದಯ ವೈಶಾಲ್ಯ ತೋರಿ ವೈಜ್ಞಾನಿಕವಾಗಿ ಬೆಲೆ ನಿಗದಿ ಮಾಡಬೇಕಿತ್ತು’ ಎಂಬುದು ಅವರ ಅಭಿಮತ.ಸರ್ಕಾರದ ನಿರ್ಧಾರದಿಂದ ಕಳಪೆ ಗುಣಮಟ್ಟದ ಹಾಗೂ ಹಳತಾದ ತಾಂತ್ರಿಕತೆಯ ಸಾಧನಗಳು ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ದಾಂಗುಡಿ ಇಡಲಿವೆ ಎಂದು ಕಳವಳ ವ್ಯಕ್ತಪಡಿಸುತ್ತಾರೆ ಅವರು.ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಹಾಗೂ ಕಾರ್ಪೊರೇಟ್‌ ಆಸ್ಪತ್ರೆಗಳಲ್ಲಿ ಹೃದ್ರೋಗ ಚಿಕಿತ್ಸೆ ದುಬಾರಿ ಆಗಿದೆ. ಅದು ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಇದರೊಂದಿಗೆ ಎಲ್ಲ ರೋಗಿಗಳನ್ನೂ ಒಂದೇ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ ಎಂಬುದು ಅವರ ಅನಿಸಿಕೆ. ಕೇಂದ್ರದ ಈ ನಿರ್ಧಾರದಿಂದಾಗಿ ನಾವು 20 ವರ್ಷಗಳಷ್ಟು ಹಿಂದಕ್ಕೆ ಹೋಗಿದ್ದೇವೆ ಎನ್ನುತ್ತಾರೆ ತಜ್ಞರು.‘ಹೊಸ ಬಟ್ಟೆ ಖರೀದಿಗೆ ಬಟ್ಟೆ ಅಂಗಡಿಗೆ ಹೋಗುತ್ತೇವೆ. ಅಲ್ಲಿ ₹ 100 ಬೆಲೆಯ ಬಟ್ಟೆಗಳ ಜೊತೆಗೆ, ₹ 5 ಸಾವಿರದ ಬೆಲೆಯವೂ ಇರುತ್ತವೆ.  ನಮಗೆ ಬೇಕಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಅದು ಗ್ರಾಹಕರ ಆಯ್ಕೆ ಸ್ವಾತಂತ್ರ್ಯ. ಅದಕ್ಕೆ ಕಡಿವಾಣ ಹಾಕಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥ ಕಳೆದುಕೊಳ್ಳುತ್ತದೆ’ ಎಂಬುದು ಸ್ಟೆಂಟ್‌ ವಿತರಕರ ವಾದ.ರಕ್ತನಾಳದಲ್ಲಿ ತಡೆ ಉಂಟಾದಾಗ ಆಂಜಿಯೊಪ್ಲಾಸ್ಟಿ ಮಾಡಿ ಸ್ಟೆಂಟ್‌ ಅಳವಡಿಸುತ್ತಾರೆ. ಸಾಮಾನ್ಯವಾಗಿ ಒಂದು ಅಥವಾ ಎರಡು ರಕ್ತನಾಳಗಳಲ್ಲಿ ತಡೆ ಉಂಟಾದಾಗ ಆಂಜಿಯೊಪ್ಲಾಸ್ಟಿ ಮಾಡಲಾಗುತ್ತದೆ. ಹೃದಯಾಘಾತ ಉಂಟಾದಾಗ  ಸ್ಟೆಂಟ್‌ ಹಾಕುವುದು ಹೆಚ್ಚು ಪರಿಣಾಮಕಾರಿ. ಇದು ಅತ್ಯುತ್ತಮ ವಿಧಾನ. ಮೂರು ಅಥವಾ ನಾಲ್ಕು ರಕ್ತನಾಳಗಳಲ್ಲಿ ತಡೆ ಉಂಟಾದರೆ ಅನಿವಾರ್ಯವಾಗಿ ಬೈಪಾಸ್‌ ಶಸ್ತ್ರಚಿಕಿತ್ಸೆ ಮೊರೆ ಹೋಗಬೇಕಾಗುತ್ತದೆ.ಪಾಲಿಯೆಸ್ಟರ್ ಸ್ಟೆಂಟ್, ಔಷಧ ರವಾನಿಸುವ ಸ್ಟೆಂಟ್‌ ಸೇರಿದಂತೆ ಬಗೆ ಬಗೆಯ ಸ್ಟೆಂಟ್‌ಗಳಿವೆ. ರಕ್ತದಲ್ಲಿ ತಾನಾಗಿ ಕ್ರಮೇಣ ಕರಗಿ ಕಣ್ಮರೆಯಾಗಬಲ್ಲ ಜೈವಿಕ ಸ್ಟೆಂಟ್‌ಗಳೂ ಇತ್ತೀಚೆಗೆ ಬಂದಿವೆ. ಈಗ ಹೆಚ್ಚು ಬಳಕೆಯಾಗುವುದು ಎರಡು ಹಾಗೂ ಮೂರನೇ ತಲೆಮಾರಿನ ಈ ವೈದ್ಯಕೀಯ ಸಾಧನಗಳು.

ಪ್ರತಿವರ್ಷ ಇವುಗಳ ತಾಂತ್ರಿಕತೆ ಬದಲಾಗುತ್ತಿರುತ್ತದೆ. 2015ರ ತಂತ್ರಜ್ಞಾನ ಈಗ ಪರಿಣಾಮಕಾರಿ ಅಲ್ಲ. ಈ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು, ಆವಿಷ್ಕಾರಗಳು ನಡೆಯುತ್ತಿವೆ.ನಾಲ್ಕನೇ ತಲೆಮಾರಿನ ಉಪಕರಣಗಳು ಈಗಷ್ಟೇ ಭಾರತೀಯ ಮಾರುಕಟ್ಟೆಗೆ ಬರಲು ಆರಂಭಿಸಿದ್ದವು. ಆಗಲೇ ಕೇಂದ್ರ ಸರ್ಕಾರದ ನಿರ್ಧಾರ ಬರಸಿಡಿಲಿನಂತೆ ಅಪ್ಪಳಿಸಿತು. ಇದರಿಂದಾಗಿ ನವೀನ ಸ್ಟೆಂಟ್‌ಗಳ ಪೂರೈಕೆ ಸ್ಥಗಿತಗೊಂಡಿದೆ. ನಮ್ಮಲ್ಲಿನ ದಾಸ್ತಾನು ಬಹುತೇಕ ಮುಗಿದಿದೆ ಎಂದು ಬೆಂಗಳೂರಿನ ಹಿರಿಯ ಹೃದ್ರೋಗ ತಜ್ಞರೊಬ್ಬರು ವಿಶ್ಲೇಷಿಸುತ್ತಾರೆ.ಈ ವೈದ್ಯಕೀಯ ಸಾಧನಗಳಲ್ಲಿ ಕಡಿಮೆ ದರ್ಜೆ, ಮಧ್ಯಮ ದರ್ಜೆ ಹಾಗೂ ಉನ್ನತ ದರ್ಜೆ ಎಂಬ ವಿಧಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ರಕ್ತನಾಳದ ಸರಳ ತಡೆಗೆ (ಬ್ಲಾಕ್‌) ಕಡಿಮೆ ಅಥವಾ ಮಧ್ಯಮ ದರ್ಜೆಯ ಸ್ಟೆಂಟ್‌ಗಳನ್ನು ಅಳವಡಿಸಲಾಗುತ್ತದೆ. ರೋಗಿಯ ಸ್ಥಿತಿ ಗಂಭೀರವಾಗಿದ್ದರೆ (ಹೈ ರಿಸ್ಕ್‌) ಉನ್ನತ ದರ್ಜೆಯ ಉಪಕರಣಗಳ ಮೊರೆ ಹೋಗಬೇಕಾಗುತ್ತದೆ. ಅಲ್ಲದೆ, ಎಲ್ಲ ರೋಗಿಗಳ ರಕ್ತನಾಳಗಳು ಒಂದೇ ರೀತಿ ಇರುವುದಿಲ್ಲ. ರಕ್ತನಾಳದ ತಡೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಸ್ಟೆಂಟ್‌ಗಳ ಸುರಕ್ಷೆ, ಕಾರ್ಯಶೈಲಿಯಲ್ಲೂ ವ್ಯತ್ಯಾಸ ಇರುತ್ತದೆ.ಈ ಸಾಧನಗಳು ಭಾರತದಲ್ಲೂ ತಯಾರಾಗುತ್ತವೆ. ಆದರೆ, ಉನ್ನತ ದರ್ಜೆಯ ಸಾಧನಗಳು ತಯಾರಾಗುವುದು ಅಮೆರಿಕ ಹಾಗೂ ಐರೋಪ್ಯ ರಾಷ್ಟ್ರಗಳಲ್ಲಿ ಮಾತ್ರ. ಗುಣಮಟ್ಟದ ವಿಷಯದಲ್ಲಿ ಅಮೆರಿಕದ ತಯಾರಕರು ರಾಜಿ ಮಾಡಿಕೊಳ್ಳುವುದಿಲ್ಲ. ನಮ್ಮಲ್ಲಿ ಸ್ಟೆಂಟ್‌ಗಳಿಗೆ ಗರಿಷ್ಠ ದರ ನಿಗದಿ ಮಾಡಲಾಗಿದೆ. ಇದರಿಂದಾಗಿ ಉನ್ನತ ದರ್ಜೆಯ ಈ ಸಾಧನಗಳಿಂದ ನಮ್ಮ ರೋಗಿಗಳು ವಂಚಿತರಾಗಬೇಕಾಗುತ್ತದೆ ಎಂಬುದು ಅವರ ವಾದ.

‘ಕಡಿಮೆ ಹಾಗೂ ಮಧ್ಯಮ ದರ್ಜೆಯ ಸಾಧನದ ಅಳವಡಿಕೆಯಿಂದ ರಕ್ತನಾಳಗಳು ಮತ್ತೆ ಕಟ್ಟಿಕೊಳ್ಳುವ ಸಾಧ್ಯತೆ ಶೇ 20ರಿಂದ 25ರಷ್ಟು ಇರುತ್ತದೆ. ಆಂಜಿಯೊಪ್ಲಾಸ್ಟಿ ಆದ 6ರಿಂದ 9 ತಿಂಗಳಲ್ಲೇ ಮತ್ತೊಮ್ಮೆ ಸ್ಟೆಂಟ್ ಹಾಕುವ ಪ್ರಮೇಯವೂ ಎದುರಾಗುತ್ತದೆ. ಆಗ ಆಸ್ಪತ್ರೆಗಳಿಗೆ ಮತ್ತಷ್ಟು ಹಣ ತೆರಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹೃದಯಾಘಾತ ಉಂಟಾಗಿ ರೋಗಿ ಮೃತಪಡುವ ಅಪಾಯವೂ ಇದೆ.

ಉನ್ನತ ದರ್ಜೆಯ ಸ್ಟೆಂಟ್‌ಗಳಲ್ಲಿ ಈ ಪ್ರಮಾಣ ಶೇ 2ರಷ್ಟೇ ಇರುತ್ತದೆ. ಸಾಕಷ್ಟು ಆವಿಷ್ಕಾರಗಳ ಬಳಿಕವೂ ಅದನ್ನು ಶೂನ್ಯಕ್ಕಿಳಿಸಲು ಸಾಧ್ಯವಾಗಿಲ್ಲ’ ಎಂದು ಹೃದ್ರೋಗ ತಜ್ಞರೂ ಆಗಿರುವ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಎಸ್‌. ರವೀಂದ್ರನಾಥ ವಿಶ್ಲೇಷಿಸುತ್ತಾರೆ.‘ದೇಶಕ್ಕೆ ಸರಬರಾಜು ಆಗುವಾಗ ಜೈವಿಕ ಸ್ಟೆಂಟ್‌ಗಳ ಬೆಲೆ ₹ 60 ಸಾವಿರದಿಂದ ₹ 70 ಸಾವಿರ ಇರುತ್ತದೆ. ಬಳಿಕ ಇಲ್ಲಿ ನಿರ್ವಹಣಾ ಖರ್ಚು ಇರುತ್ತದೆ. ನಮಗೂ ಸ್ವಲ್ಪ ಲಾಭಾಂಶ ಬೇಕು. ಪರಿಸ್ಥಿತಿ ಹೀಗಿರುವಾಗ ಅದನ್ನು ಇಷ್ಟೊಂದು ಕಡಿಮೆ ಬೆಲೆಗೆ ಮಾರಲು ಸಾಧ್ಯವೇ’ ಎಂದು ಬೆಂಗಳೂರಿನ ವಿತರಕ ರಣದೀಪ್‌ ಪ್ರಶ್ನಿಸುತ್ತಾರೆ. ‘ಕೇಂದ್ರದ ನಿರ್ಧಾರದಿಂದಾಗಿ ಆಮದು ಪ್ರಮಾಣ ಕಡಿಮೆಯಾಗಿದೆ’ ಎನ್ನುತ್ತಾರೆ ಅವರು.‘ಸ್ವದೇಶಿ ತಂತ್ರಜ್ಞಾನ ಬಳಸಿ ಸ್ಟೆಂಟ್‌ ತಯಾರಿಸುವ ನಾಲ್ಕೈದು ಕಂಪೆನಿಗಳು ಮಾತ್ರ ನಮ್ಮಲ್ಲಿವೆ. ಬೆಲೆ ನಿಯಂತ್ರಣದಿಂದ ಆವಿಷ್ಕಾರ ಚಟುವಟಿಕೆಗೂ ಹೊಡೆತ ಬಿದ್ದಿದೆ. ‘ಭಾರತದಲ್ಲೇ ತಯಾರಿಸಿ’ ಎಂದು ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ವ್ಯವಸ್ಥೆ ಹಾಳುಗೆಡಹುತ್ತಿದೆ’ ಎಂದು ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.‘ವೈದ್ಯಕೀಯ ಪ್ರವಾಸೋದ್ಯಮ ನಮ್ಮಲ್ಲಿ ಈಗಷ್ಟೇ ಕಣ್ಣು ಬಿಡುತ್ತಿದೆ. ಅದಕ್ಕೆ ಇನ್ನಷ್ಟು ಉತ್ತೇಜನ ಸಿಗಬೇಕಿತ್ತು.  ಕೇಂದ್ರದ ನಿರ್ಧಾರದಿಂದ ಇದಕ್ಕೆ ಪೆಟ್ಟು ಬೀಳಲಿದೆ’ ಎಂಬುದು ಅವರ ಅನಿಸಿಕೆ. ನೂರಾರು ವೈದ್ಯರು ಉದ್ಯೋಗ ಅರಸಿ ವಿದೇಶಗಳಿಗೆ ವಲಸೆ ಹೋಗಿದ್ದಾರೆ. ಉನ್ನತ ತಂತ್ರಜ್ಞಾನ ಹಾಗೂ ಆವಿಷ್ಕಾರದ ಫಲವಾಗಿ ಈಗ ಅನೇಕ ಮಂದಿ ಸ್ವದೇಶಕ್ಕೆ ಮರಳಲು ಬಯಸುತ್ತಿದ್ದಾರೆ. ಸರ್ಕಾರದ ನಡೆ ಅವರಲ್ಲಿ ನಿರುತ್ಸಾಹ ಮೂಡಿಸಿದೆ’ ಎಂದು ವಿವರಿಸಿದರು. ‘ಖಾಸಗಿ ಆಸ್ಪತ್ರೆಗಳ ಏಕೈಕ ಉದ್ದೇಶ ಲಾಭ ಮಾಡಿಕೊಳ್ಳುವುದು. ಮೂರು ದಿನ ಜ್ವರ ಬಂದರೂ ದಾಖಲಿಸಿಕೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಾರೆ. ವಾರಕ್ಕೆ ₹ 50 ಸಾವಿರ ಬಿಲ್‌ ಮಾಡುತ್ತಾರೆ. ಡೆಂಗಿ ಬಂದರಂತೂ ರೋಗಿಯ ಕಥೆ ಮುಗಿಯಿತು. ದುಡ್ಡು ಮಾಡಿಕೊಳ್ಳಲು ನಾನಾ ದಾರಿಗಳನ್ನು ಹುಡುಕಿದ್ದಾರೆ. ಸ್ಟೆಂಟ್‌ ಬೆಲೆ ನಿಯಂತ್ರಣಕ್ಕೆ ಮುನ್ನ ಇವುಗಳಿಗೆ ಕಡಿವಾಣ ಹಾಕಬೇಕಿತ್ತು’ ಎಂದು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೃದ್ರೋಗ ತಜ್ಞರೊಬ್ಬರು ಅಭಿಪ್ರಾಯಪಡುತ್ತಾರೆ.‘ಸಾಧನದ ಬೆಲೆ ನಿಯಂತ್ರಣದ ಮೂಲಕ ಖಾಸಗಿ ಆಸ್ಪತ್ರೆಗಳ ಲಾಭಕೋರತನಕ್ಕೆ ಕಡಿವಾಣ ಹಾಕಬಹುದು ಎಂಬುದು ಮರೀಚಿಕೆ. ಈಗಲೂ ಕೆಲವು ಖಾಸಗಿ ಆಸ್ಪತ್ರೆಗಳು ಅಡ್ಡದಾರಿ ಹಿಡಿದಿವೆ. ಒಂದು ಸ್ಟೆಂಟ್‌ ಅಳವಡಿಕೆ ಸಾಕಿದ್ದರೂ 2–3 ಹಾಕುತ್ತಿವೆ. ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ರೋಗಿಗಳಿಗೇ ತೊಂದರೆ’ ಎಂದು ಅವರು ವಿಶ್ಲೇಷಿಸುತ್ತಾರೆ.‘ಕೆಲವು ರೋಗಿಗಳಂತೂ ಉನ್ನತ ದರ್ಜೆಯ ಸಾಧನಗಳನ್ನೇ ಬಯಸುತ್ತಾರೆ. ದುಡ್ಡಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಇಂಟರ್‌ನೆಟ್‌ನಿಂದ ಮಾಹಿತಿ ಪಡೆದು ಬಂದು, ಇಂತಹುದನ್ನೇ  ಕೊಡಿ ಎನ್ನುತ್ತಾರೆ. ಬೆಲೆ ನಿಯಂತ್ರಣದಿಂದಾಗಿ ಅವರು ಕೇಳಿದ್ದನ್ನು ಕೊಡಲಾಗದು. ಸಾಧನಗಳ ಪೂರೈಕೆಯೇ ಆಗದಿದ್ದರೆ ನಾವೇನು ಮಾಡಲು ಸಾಧ್ಯ’ ಎಂದು ಕಾರ್ಪೊರೇಟ್‌ ಆಸ್ಪತ್ರೆಯ ವೈದ್ಯರೊಬ್ಬರು ಕೇಳುತ್ತಾರೆ.ದಿನದಿಂದ ದಿನಕ್ಕೆ ಡಾಲರ್‌ ಎದುರು ರೂಪಾಯಿ ಅಪಮೌಲ್ಯ ಆಗುತ್ತಿದೆ. ಇದರಿಂದ  ಆಮದಾಗುವ ಸ್ಟೆಂಟ್‌ಗಳು ದುಬಾರಿ ಆಗುತ್ತವೆ. ಬೆಲೆ ನಿಯಂತ್ರಣದ ಸಂದರ್ಭದಲ್ಲಿ ಈ ಅಂಶವನ್ನೂ ಪರಿಗಣನೆಗೆ ತೆಗೆದುಕೊಳ್ಳಬೇಕಿತ್ತು ಎಂದು ಅವರು ಹೇಳುತ್ತಾರೆ.‘ಸರ್ಕಾರದ ನಿರ್ಧಾರದಿಂದ ರೋಗಿಗಳ ಆಯ್ಕೆ ಸೀಮಿತಗೊಂಡಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ವೈದ್ಯಕೀಯ ಸೌಲಭ್ಯ ಒದಗಿಸಲು ಸರ್ಕಾರ ಪರ್ಯಾಯ ಕ್ರಮ ಕೈಗೊಳ್ಳಬೇಕು’ ಎಂಬುದು ‘ಅದ್ವಮೆಡ್ ಇಂಡಿಯಾ’ (ಉನ್ನತ ವೈದ್ಯಕೀಯ ತಂತ್ರಜ್ಞಾನ ಸಂಸ್ಥೆ) ಸಂಸ್ಥೆಯ ಪದಾಧಿಕಾರಿಗಳ ಅಭಿಮತ.ಪ್ರಸ್ತುತ ಸ್ಟೆಂಟ್‌ಗಳಿಗೆ ಶೇ 20 ಆಮದು ಸುಂಕ ವಿಧಿಸಲಾಗುತ್ತಿದೆ. ಅದು ಈ ಹಿಂದೆ ಶೇ 12 ಇತ್ತು. ತೆರಿಗೆ ಶೇ 10ರಷ್ಟು ಇದೆ. ಸಾಗಣೆ ವೆಚ್ಚ ಶೇ 15ರಷ್ಟಾಗುತ್ತದೆ. ಇವುಗಳನ್ನು ಕಡಿಮೆ ಮಾಡಲು ಸರ್ಕಾರ ಮುಂದಾಗಬೇಕು. ಆಗ ಸ್ಟೆಂಟ್‌ಗಳ ಬೆಲೆ ತನ್ನಿಂದ ತಾನೇ ಇಳಿಮುಖವಾಗುತ್ತದೆ ಎಂಬುದು ಅವರ ಸಲಹೆ.

ದೊಡ್ಡ ಮಾರುಕಟ್ಟೆಯಲ್ಲ

ಸ್ಟೆಂಟ್‌ಗಳಿಗೆ ಭಾರತ ಜಗತ್ತಿನ ದೊಡ್ಡ ಮಾರುಕಟ್ಟೆ ಅಲ್ಲ ಎಂಬುದು ಹೃದ್ರೋಗ ತಜ್ಞರ ಅಭಿಮತ.  ನಮ್ಮಲ್ಲಿ ವರ್ಷಕ್ಕೆ ಆಂಜಿಯೊಪ್ಲಾಸ್ಟಿ ಮಾಡಿಸಿಕೊಳ್ಳುವವರ ಸಂಖ್ಯೆ ಸುಮಾರು 5 ಲಕ್ಷ ಇದ್ದರೆ, ಜಪಾನ್‌ನಲ್ಲಿ ದುಪ್ಪಟ್ಟು ಇದೆ. ಅಮೆರಿಕದಲ್ಲಿ 20 ಲಕ್ಷ ಇದೆ.ಜಪಾನ್‌ನ ಜನರು ಬೌದ್ಧ ಧರ್ಮದ ಅನುಯಾಯಿಗಳು. ದೇವರು ಹೃದಯದಲ್ಲಿ ಇದ್ದಾರೆ ಎಂಬ ನಂಬಿಕೆ ಅವರದು. ಹೀಗಾಗಿ ಅವರು ಬೈಪಾಸ್‌ ಸರ್ಜರಿ ಮಾಡಿಸಿಕೊಳ್ಳುವುದಿಲ್ಲ. ಹೃದಯಾಘಾತವಾದಾಗ  ಆಂಜಿಯೊಪ್ಲಾಸ್ಟಿ ಮೊರೆ ಹೋಗುತ್ತಾರೆ ಎಂದು ಹೃದ್ರೋಗ ತಜ್ಞರೊಬ್ಬರು ಮಾಹಿತಿ ನೀಡುತ್ತಾರೆ.

ಪ್ರತಿಕ್ರಿಯಿಸಿ (+)