7

ಎಎಪಿಗೆ ಕಾಡಿದ ಭೂತಕಾಲದ ‘ಭೂತ’

ಶೇಖರ್‌ ಗುಪ್ತ
Published:
Updated:
ಎಎಪಿಗೆ ಕಾಡಿದ ಭೂತಕಾಲದ ‘ಭೂತ’

ಸೋಲು ಅನಾಥ ಎನ್ನುವುದು ಮನುಕುಲದ ಇತಿಹಾಸದ ಉದ್ದಕ್ಕೂ ಸಾಬೀತಾಗುತ್ತಲೇ ಬಂದಿದೆ. ಬ್ರಿಟಿಷ್‌ ಪತ್ರಕರ್ತೆ ಮೈರಾ ಮ್ಯಾಕ್‌ ಡೊನಾಲ್ಡ್‌ ಅವರು ಪಾಕಿಸ್ತಾನದ ಇತ್ತೀಚಿನ ಇತಿಹಾಸದ ಕುರಿತು ಬರೆದಿರುವ ‘ಡಿಫೀಟ್‌ ಈಸ್‌ ಆ್ಯನ್‌ ಆರ್ಫನ್‌: ಹೌ ಪಾಕಿಸ್ತಾನ್‌ ಲಾಸ್ಟ್‌ ದಿ ಗ್ರೇಟ್‌ ಸೌತ್‌ ಏಷ್ಯನ್‌ ವಾರ್‌’ ಪುಸ್ತಕ ಓದುತ್ತಿದ್ದರಿಂದಲೂ ನನ್ನ ಮನಸ್ಸಿಗೆ ತಕ್ಷಣ ಈ ಭಾವ ಹೊಳೆದಿರಬಹುದು.

ಅರವಿಂದ ಕೇಜ್ರಿವಾಲ್‌ ಅವರ ಆಮ್‌ ಆದ್ಮಿ ಪಾರ್ಟಿಯು (ಎಎಪಿ) ಪಂಜಾಬ್‌ ಮತ್ತು ಗೋವಾ ರಾಜ್ಯಗಳಲ್ಲಿ ಸೋಲು ಕಂಡು ತೀವ್ರ ಹಿನ್ನಡೆ ಅನುಭವಿಸಿರುವುದು ಕೂಡ ಈ ಮೇಲಿನ ಮಾತಿಗೆ ಪುಷ್ಟಿ ನೀಡುತ್ತದೆ.

ಈ ಎರಡೂ ರಾಜ್ಯಗಳಲ್ಲಿ ಪಕ್ಷವು ಭದ್ರವಾಗಿ ನೆಲೆಯೂರಲು ಭಾರಿ ಪ್ರಯತ್ನಪಟ್ಟಿತ್ತು. ಪಕ್ಷವು ತನ್ನದೇ ಆದ ಮೂಲಗಳಿಂದ ನಡೆಸಿದ್ದ ಸಮೀಕ್ಷೆಯ ಪ್ರಕಾರ ಗೆಲುವು ಸಾಧಿಸುವ ಆತ್ಮವಿಶ್ವಾಸದಿಂದ ಬೀಗುತ್ತಿತ್ತು. ಆದರೆ ಅಂತಿಮ ಫಲಿತಾಂಶವು ಅದರ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿದೆ.    ಗೋವಾದಲ್ಲಿ ಪಕ್ಷದ ಮುನ್ನಡೆಗೆ ದೊಡ್ಡ ಅಡ್ಡಿ ಎದುರಾಗಿದೆ. ಪಂಜಾಬ್‌ನಲ್ಲಿ ಎಎಪಿಯು  ಇನ್ನೂ ಉತ್ತಮ ಸಾಧನೆ ಮಾಡಬಹುದಿತ್ತು ಎಂದು ಪಕ್ಷದ ಎದುರಾಳಿಗಳು ಮತ್ತು ಟೀಕಾಕಾರರು (ನಾನೂ ಸೇರಿದಂತೆ) ನಿರೀಕ್ಷಿಸಿದ್ದರು. ಪಕ್ಷದ ಸಾಧನೆ ಮೊದಲ ಅಥವಾ ಎರಡನೇ ಸ್ಥಾನದಲ್ಲಿ ಇರಲಿದೆ ಎಂದು ನಾನು ಎಣಿಕೆ ಹಾಕಿದ್ದೆ. 40ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದೂ ಭಾವಿಸಿದ್ದೆ.

ಕೇರಳದಂತೆ ರಾಜಕೀಯವಾಗಿ ಧ್ರುವೀಕರಣಗೊಂಡಿರುವ ರಾಜ್ಯದಲ್ಲಿ  ಹೊರಗಿನ ಮತ್ತು ಹೊಸ ಪಕ್ಷವೊಂದು ಕೇವಲ 20 ಸ್ಥಾನಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಚುನಾವಣೆಯ ಮೊದಲೇ ಗೆದ್ದೇ ಬಿಟ್ಟೆವು ಎನ್ನುವ ಸಂಭ್ರಮಾಚರಣೆಯಲ್ಲಿದ್ದ ಪಕ್ಷಕ್ಕೆ ಇದೊಂದು ದೊಡ್ಡ ಅವಮಾನವಾಗಿದೆ.ಈ ಚುನಾವಣೆ ನಂತರ ಎಎಪಿ ಪಾಲಿಗೆ ಎದುರಾಗಿರುವ ಹಲವಾರು ಕಠಿಣ ಸವಾಲುಗಳನ್ನು ಪರಿಗಣಿಸುವುದಾದರೆ, ಕೇಜ್ರಿವಾಲ್‌ ಅವರು ಭಾರತದ ಕ್ರಿಕೆಟ್‌ನಲ್ಲಿ ಮಿಂಚಿ ಮರೆಯಾದ ವಿನೋದ್‌ ಕಾಂಬ್ಳಿ ಅವರಂತೆ ಕ್ರಮೇಣ ಮಹತ್ವ ಕಳೆದುಕೊಳ್ಳಬಹುದೇ? ಆರಂಭದಲ್ಲಿ ಪ್ರಖರವಾಗಿ ಮಿಂಚಿದ, ಎಲ್ಲ ಸವಾಲುಗಳನ್ನು ಗೆಲ್ಲುವ ಭರವಸೆ ಮೂಡಿಸಿದ್ದ ಕಾಂಬ್ಳಿ, ಕ್ರಮೇಣ ಅಪ್ರಸ್ತುತವಾಗುತ್ತ ಹೋದರು. ಸೋಲು ಯಾವಾಗಲೂ ಅನಾಥ ಎನ್ನುವುದನ್ನು ಯಾರೊಬ್ಬರೂ ಮರೆಯಲೇಬಾರದು.ಎಎಪಿ ಸೋಲಲು ಕಾರಣಗಳೇನು, ಪಕ್ಷ ಎಲ್ಲಿ ಎಡವಿತು ಎನ್ನುವುದರ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಪಕ್ಷವು ರಾಜಕೀಯ ತಂತ್ರಗಾರಿಕೆಯನ್ನು ಸರಿಯಾಗಿಯೇ ಹೆಣೆದಿತ್ತು ಎನ್ನುವುದನ್ನು ನಾವು ಮರೆಯಬಾರದು. ರಾಜ್ಯ ಎದುರಿಸುತ್ತಿದ್ದ ಸಮಸ್ಯೆಗಳನ್ನು ಸರಿಯಾಗಿಯೇ ಬಿಂಬಿಸಿತ್ತು. ಅವಸಾನದತ್ತ ಸಾಗಿದ್ದ ಪಂಜಾಬ್‌, ನಿರುದ್ಯೋಗ ಹಾವಳಿ, ಸರ್ಕಾರದ ಬಗ್ಗೆ ಜನಸಾಮಾನ್ಯರು ರೋಸಿ ಹೋಗಿದ್ದುದು, ಜನರ ಸ್ವಾಭಿಮಾನಕ್ಕೆ ಉಂಟಾಗಿದ್ದ ಧಕ್ಕೆಯನ್ನು ಪಕ್ಷವು ತನ್ನ ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡಿತ್ತು.

ರಾಜ್ಯದ ಎಲ್ಲ ಅನಿಷ್ಟಗಳಿಗೆ ಶಿರೋಮಣಿ ಅಕಾಲಿ ದಳದ ದುರಾಡಳಿತವೇ ಕಾರಣ ಎಂದೂ ದೂಷಿಸಿತ್ತು. ಬಾದಲ್‌ ಕುಟುಂಬದ ಸದಸ್ಯರು ನ್ಯಾಯಯುತ ಪ್ರಜಾಸತ್ತಾತ್ಮಕವಾದ, ಧರ್ಮಶಾಸ್ತ್ರ ಆಧಾರಿತ, ಧಾರ್ಮಿಕ ‘ಪಾಂಥಿಕ್‌’ ಪಕ್ಷವನ್ನು ಸಂಪೂರ್ಣವಾಗಿ ಹಾಳು ಮಾಡಿದ್ದರು.ಪಕ್ಷವು ಚುನಾವಣಾ ಸಿದ್ಧತೆಗಳನ್ನು ತುಂಬ ಮೊದಲೇ ಆರಂಭಿಸಿತ್ತು. ಸಾಮಾಜಿಕ ಮಾಧ್ಯಮಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಎಲ್ಲರಿಗಿಂತ ಮುಂಚೆಯೇ ಮುಂದಡಿ ಇಟ್ಟಿತ್ತು. ಪಂಜಾಬ್‌ ಸಂಸ್ಕೃತಿಯ ಪ್ರತಿಭಾನ್ವಿತ ಯುವಕರನ್ನು ನೇಮಿಸಿಕೊಂಡಿತ್ತು. ಈ ಎಲ್ಲ ಕ್ರಮಗಳಿಂದ ಮತದಾರರನ್ನು ಬಹುವಾಗಿ ಆಕರ್ಷಿಸಿತ್ತು. ಎಡಪಂಥೀಯ ಮತ್ತು ಬಲಪಂಥೀಯ ತೀವ್ರವಾದಿಗಳ ಜತೆಗೂ ವಿನೂತನ ರೀತಿಯಲ್ಲಿ ಮೈತ್ರಿ ಕುದುರಿಸಿಕೊಂಡಿತ್ತು.ಪಂಜಾಬ್‌, ದೇಶದಲ್ಲಿಯೇ ಅತಿ ಹೆಚ್ಚಿನ ದಲಿತ ಮತದಾರರನ್ನು ಹೊಂದಿರುವ (ಶೇ 33.4) ರಾಜ್ಯವಾಗಿದೆ. ಇವರಲ್ಲಿ ಬಹುಸಂಖ್ಯಾತರು ಜಾಟ್‌ ಸಿಖ್‌ರ ಪ್ರಾಬಲ್ಯ ತಡೆಯಲು ಪರಂಪರಾಗತವಾಗಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತ ಬಂದಿದ್ದಾರೆ. ಜಾಟ್‌ ಸಿಖ್‌ರನ್ನು ನಿಯಂತ್ರಿಸದಿದ್ದರೆ ಅವರ ಪುಂಡಾಟಿಕೆಗೆ ಕಡಿವಾಣ ಹಾಕಲು ಸಾಧ್ಯವಿಲ್ಲ ಎನ್ನುವುದನ್ನೂ ಎಎಪಿ ಬಂಡವಾಳ ಮಾಡಿಕೊಳ್ಳಲು ಮುಂದಾಗಿತ್ತು.ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಸ್ಥಾಪಕ  ಕಾನ್ಶಿರಾಂ ಅವರು ಪಂಜಾಬ್‌ನವರೇ ಆಗಿದ್ದರೂ, ರಾಜ್ಯದ ದಲಿತರು ಯಾವತ್ತೂ ಅವರನ್ನು ತಮ್ಮವ ಎಂದು ಅಪ್ಪಿಕೊಂಡಿರಲಿಲ್ಲ. ಕೇಜ್ರಿವಾಲ್‌ ಅವರು ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾರಿ ಪ್ರಮಾಣದಲ್ಲಿ ಜನರನ್ನು ಆಕರ್ಷಿಸುತ್ತಿದ್ದರು. ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷವು 33 ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಪ್ರದರ್ಶಿಸಿತ್ತು. ಆ ಸಾಧನೆಯನ್ನೂ ಸರಿಗಟ್ಟಲು ಪಕ್ಷಕ್ಕೆ ಈಗ ಸಾಧ್ಯವಾಗಿಲ್ಲ.

ಎಎಪಿಯನ್ನು ಸುಶಿಕ್ಷಿತ, ಚುರುಕಿನ ಯುವಜನರ ದೊಡ್ಡ ಪಡೆಯೇ ಮುನ್ನಡೆಸುತ್ತಿತ್ತು.  ಅವರಲ್ಲಿ ಬಹುಸಂಖ್ಯಾತರು ಕಾರ್ಯಕರ್ತರು ಅಥವಾ ಹೆಚ್ಚು ಸ್ಪಷ್ಟವಾಗಿ ಹೇಳುವುದಾದರೆ, ಪ್ರಜಾಪ್ರಭುತ್ವ ಪರ ಶ್ರದ್ಧೆಯಿಂದ ಕೆಲಸ ಮಾಡುವ ಬದ್ಧತೆ ತೋರುವ ಕಾರ್ಯಕರ್ತರಾಗಿದ್ದರು.ರಾಜ್ಯದಲ್ಲಿನ ಚುನಾವಣಾ ಪ್ರಚಾರ ವೈಖರಿಯನ್ನು ನಾನು ವರದಿ ಮಾಡುತ್ತಿದ್ದಾಗ, ಎಎಪಿಯ ರಾಜಕಾರಣವು ಮೂರು ಮುಖ್ಯ ಸಂಗತಿಗಳ ಸುತ್ತ ಕೇಂದ್ರೀಕೃತಗೊಂಡಿತ್ತು. ಭ್ರಷ್ಟಾಚಾರ, ಪ್ರತೀಕಾರ ಮತ್ತು ಯುವಜನರನ್ನು ಕೇಂದ್ರೀಕರಿಸಿಕೊಂಡು ಅದು ಚುನಾವಣಾ ಕಾರ್ಯತಂತ್ರ ಹೆಣೆದಿತ್ತು.

ಲೋಕಸಭಾ ಚುನಾವಣೆ ಬೆನ್ನಲ್ಲೇ ನರೇಂದ್ರ ಮೋದಿ ಅವರ ಭಾರಿ ಯಶಸ್ಸಿನ ಅಲೆಯ ಮೇಲೆ ಸಾಗಿದ್ದ ಬಿಜೆಪಿಗೆ ದೆಹಲಿ ವಿಧಾನಸಭೆಯಲ್ಲಿ ಮರ್ಮಾಘಾತ ನೀಡುವಲ್ಲಿ ಗಣನೀಯ ಯಶಸ್ಸು ಕಂಡಿತ್ತು. ಆನಂತರ ಪಂಜಾಬ್‌ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಭರ್ಜರಿ ಸದ್ದು ಮಾಡಿತ್ತು. ಆದರೆ, ಫೆಬ್ರುವರಿ 4ರಂದು ನಡೆದ ಮತದಾನದ ಸಂದರ್ಭದಲ್ಲಿ ಚುನಾವಣೆ ಪೂರ್ವದ ಸದ್ದನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ವಿಫಲವಾಗಿತ್ತು.

ಎಎಪಿಯ ಜಾಣ ಚಿಂತಕರ ಚಾವಡಿಯು ಸೋಲಿಗೆ ಹೆಚ್ಚು ಸಮಂಜಸವಾದ ಕಾರಣಗಳನ್ನು ಹುಡುಕುವ ಬದಲು, ಮತಯಂತ್ರಗಳಲ್ಲಿನ ದೋಷಗಳ ಮೇಲೆ ಹೊಣೆ ಹೊರೆಸಿದೆ. ಪಕ್ಷದ ಸೋಲಿಗೆ ನಾನು ಒಂದೇ ಒಂದು ಕಾರಣ ನೀಡಲು ಬಯಸುತ್ತೇನೆ. ಪಂಜಾಬ್‌ ರಾಜ್ಯವನ್ನು ಶುದ್ಧ ಕೋಮು ಭಾವನೆಯಿಂದ ನೋಡಿದ ಎಎಪಿ ಗುರುತರ ತಪ್ಪು ಎಸಗಿರುವುದು ಸಾಬೀತಾಗಿದೆ. ನಾನು ತುಂಬ ಎಚ್ಚರಿಕೆಯಿಂದಲೇ ಈ ಮಾತನ್ನು ಹೇಳುತ್ತಿರುವೆ.ಪೇಟ, ಭಾಂಗ್ರಾ ನೃತ್ಯ, ಬಲ್ಲೆ ಬಲ್ಲೆ ಮತ್ತು ಸುವರ್ಣ ಮಂದಿರ– ಇವು ಪಂಜಾಬ್‌ನ ಪ್ರಮುಖ ಲಕ್ಷಣಗಳಾಗಿವೆ.  ಆದರೆ, ಪಂಜಾಬ್‌ ಬರೀ ಸಿಖ್‌ರಿಗೆ ಸೇರಿದ ರಾಜ್ಯವಲ್ಲ. ಇಲ್ಲಿಯ ಜನಸಂಖ್ಯೆಯಲ್ಲಿ ಶೇ 48ರಷ್ಟು ಜನರು ಹಿಂದೂಗಳಿದ್ದಾರೆ. ಸಿಖ್‌ರು ಪಂಜಾಬಿಗಳಾಗಿರುವಂತೆ ಹಿಂದೂಗಳೂ ಅದೇ ಸಂಸ್ಕೃತಿ ಅನುಸರಿಸುತ್ತ ಪಂಜಾಬಿಗಳೇ ಆಗಿದ್ದಾರೆ.ಪಂಜಾಬ್‌ ಜನರು ಸ್ನೇಹಮಯಿ ಸ್ವಭಾವದವರು. ಹೊರಗಿನವರನ್ನು ಆತ್ಮೀಯವಾಗಿಯೇ ಸ್ವಾಗತಿಸಿದರೂ, ಅವರ ಸಂಕೀರ್ಣ ಸ್ವರೂಪದ ವ್ಯಕ್ತಿತ್ವವನ್ನು ಕೊಂಚ ಅನುಮಾನದಿಂದಲೇ ನೋಡುತ್ತಾರೆ. ತಲೆ ಮೇಲೆ ಸರಿಯಾಗಿ ಕೂರದ ಪೇಟ ತೊಟ್ಟು, ಜಂಬದಿಂದ ನಡೆಯುತ್ತ, ಸಿಖ್‌ರಂತೆ ಸೋಗು ಹಾಕುವ, ಅದರಲ್ಲೂ ತಮ್ಮಿಂದ ವೋಟು ಪಡೆಯಲು ಇನ್ನಿಲ್ಲದ ಗಿಮಿಕ್‌ ಮಾಡುವ ಹೊರಗಿನವರನ್ನು ಅವರು ಹೆಚ್ಚು ನಂಬಲಿಲ್ಲ.

ಹೊರಗಿನವರ ಈ ಎಲ್ಲ ನಾಟಕೀಯ ವರ್ತನೆಯು ಅವರಿಗೆ ರಂಜನೀಯವೂ ಮತ್ತು ಒಗಟಾಗಿಯೂ ಕಾಡಿತ್ತು. ಚುನಾವಣೆಗೆ ಮುಂಚೆಯೇ ಪಂಜಾಬಿಗಳ ಪ್ರತಿಕ್ರಿಯೆಯನ್ನು ಸರಿಯಾಗಿಯೇ ಊಹಿಸಬಹುದಾಗಿತ್ತು. ‘ಈತ (ಎಎಪಿ) ಹೊರಗಿನವನು ಎನ್ನುವುದು ನನಗೆ ಗೊತ್ತು. ಆದರೂ ನಾನು ಆತನನ್ನು ಇಷ್ಟಪಡುತ್ತೇನೆ. ಆದಾಗ್ಯೂ ಆತ ಫ್ಯಾನ್ಸಿ ಡ್ರೆಸ್‌ ಹಾಕಿಕೊಂಡು ನನ್ನನ್ನು ಮೆಚ್ಚಿಸಲು ಇನ್ನಿಲ್ಲದ ತಿಪ್ಪರಲಾಗ ಹಾಕುವುದು ಏಕೆ?’ ಎನ್ನುವ ಪ್ರಶ್ನೆ ಪಂಜಾಬ್‌ ಜನರನ್ನು ಕಾಡುತ್ತಿತ್ತು.ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬರಬೇಕೆಂದರೆ, ಮೊದಲು ಸಿಖ್‌ರ ಹೃದಯ ಗೆಲ್ಲಬೇಕು. ಅದಕ್ಕೆ ತಕ್ಕಂತೆ ರಾಜಕೀಯ ಕಾರ್ಯತಂತ್ರ ರೂಪಿಸಬೇಕು ಎಂದು ಎಎಪಿ ತುಂಬ ಮೊದಲೇ ನಿರ್ಧರಿಸಿದಂತಿತ್ತು. ಇದೇ ಕಾರಣಕ್ಕೆ ಪಕ್ಷವು ಸಹಜವಾಗಿಯೇ ದೊಡ್ಡ ತಪ್ಪು ಎಸಗಿತು. ಎಂಬತ್ತರ ದಶಕದಲ್ಲಿ ನಡೆದ ಸಿಖ್‌ ವಿರೋಧಿ ಗಲಭೆಯ ಗಾಯವನ್ನು ಕೆದಕಲು ಮುಂದಾಗಿತ್ತು.

ಸಿಖ್‌ರ ಪವಿತ್ರ ಯಾತ್ರಾ ಸ್ಥಳವಾದ ಸುವರ್ಣ ಮಂದಿರವನ್ನು ‘ಬ್ಲೂಸ್ಟಾರ್‌’ ಸೇನಾ ಕಾರ್ಯಾಚರಣೆ ಸಂದರ್ಭದಲ್ಲಿ ಅಪವಿತ್ರಗೊಳಿಸಿದ್ದನ್ನು ಮತ್ತು ಇಂದಿರಾ ಗಾಂಧಿ ಹತ್ಯೆಯ ನಂತರ ದೆಹಲಿಯಲ್ಲಿ ನಡೆದ ಸಿಖ್‌ರ ಮಾರಣಹೋಮವನ್ನು ಮತ್ತೆ ನೆನಪಿಸಲು ಹೊರಟಿತ್ತು.1984ರ ಗಲಭೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನ್ಯಾಯ ಒದಗಿಸಲು ಶ್ರಮಿಸುತ್ತಿರುವ ದೆಹಲಿಯ ಖ್ಯಾತ ನ್ಯಾಯವಾದಿ ಎಚ್‌.ಎಸ್‌.ಫೂಲ್ಕಾ ಅವರನ್ನು ಪಕ್ಷವು ಪಂಜಾಬ್‌ಗೆ ಕರೆದುಕೊಂಡು ಹೋಗಿತ್ತು. ಅವರು ಪಂಜಾಬ್‌ನಲ್ಲಿ ಅಷ್ಟೇನೂ ಜನಾನುರಾಗಿ ಆಗಿರಲಿಲ್ಲ. ಆದರೆ, ಅವರನ್ನು ಮುಂದಿಟ್ಟುಕೊಂಡೇ ಪಕ್ಷವು ಚುನಾವಣೆ ಎದುರಿಸಲು ಮುಂದಾಗಿತ್ತು. ಬ್ಲೂಸ್ಟಾರ್‌ ಕಾರ್ಯಾಚರಣೆ ವಿರೋಧಿಸಿ  ನಡೆದ ಪ್ರತೀಕಾರದ ಭಾವನೆಗಳನ್ನು ಮತ್ತೆ ಬಡಿದೆಬ್ಬಿಸಿ, ಖಲಿಸ್ತಾನ್ ಬೇಡಿಕೆ ಉತ್ತುಂಗದಲ್ಲಿದ್ದ ದಿನಗಳ ಹಳವಂಡಗಳನ್ನು ಮತ್ತೆ ನೆನಪಿಸುವ ರೀತಿಯಲ್ಲಿ ಎಎಪಿ ತನ್ನ ಚುನಾವಣಾ ಕಾರ್ಯತಂತ್ರ ಹೆಣೆದಿತ್ತು.ಎಎಪಿಯ ಈ ಚುನಾವಣಾ ಕಾರ್ಯತಂತ್ರಕ್ಕೆ ಅನಿವಾಸಿ ಸಿಖ್‌ರು ನೀರೆರೆದು ಬೆಂಬಲಕ್ಕೆ ನಿಂತಿದ್ದರು. ಅದರಲ್ಲೂ ವಿಶೇಷವಾಗಿ ಕೆನಡಾದವರು ಹಣಕಾಸು ನೆರವು ನೀಡುವುದರ ಜತೆಗೆ ಪ್ರಚಾರ ನಡೆಸಲು ಸ್ವದೇಶಕ್ಕೂ ಬಂದಿದ್ದರು. ಅಲ್ಲಿನ ಶ್ರೀಮಂತ ಗುರುದ್ವಾರಗಳಲ್ಲಿ ಈಗಲೂ  ಖಲಿಸ್ತಾನದ ಕನಸನ್ನು ಪೋಷಿಸಿಕೊಂಡು ಬರಲಾಗುತ್ತಿದೆ.

ಈ ಎಲ್ಲ ಬೆಳವಣಿಗೆಗಳು ಸಿಖ್‌ ಮತಗಳನ್ನು ಒಟ್ಟುಗೂಡಿಸಿ ಎಎಪಿ ಪರ ಚಲಾವಣೆಗೊಳ್ಳಲಿವೆ ಎಂದು ಬಹುವಾಗಿ ನಿರೀಕ್ಷಿಸಲಾಗಿತ್ತು.  ಉಳಿದಂತೆ, ಅಕಾಲಿದಳದ ಪ್ರಬಲ ನೆಲೆಗಳಿಂದ ಅದರ ಮತಗಳನ್ನು ಸೆಳೆದರೆ ಚುನಾವಣಾ ಸಮರದಲ್ಲಿ ಗೆದ್ದಂತೆಯೇ ಎಂದು ಎಎಪಿ ಲೆಕ್ಕ ಹಾಕಿತ್ತು. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಹುತೇಕ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಜಯಭೇರಿ ಬಾರಿಸಿದಂತೆ, ಪಂಜಾಬ್‌ನಲ್ಲಿಯೂ ತನ್ನ ಭರ್ಜರಿ ಗೆಲುವು ಕಟ್ಟಿಟ್ಟ ಬುತ್ತಿ ಎಂದೇ ಎಎಪಿ ಭಾವಿಸಿತ್ತು.ತೀವ್ರವಾದಿಗಳ ಜತೆಗಿನ ಎಎಪಿಯ ಸಂಬಂಧ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವುದನ್ನು ನಾನು 2014ರ ಲೋಕಸಭಾ ಚುನಾವಣೆಯಲ್ಲಿಯೇ ಮೊದಲ ಬಾರಿಗೆ ಗಮನಿಸಿದ್ದೆ. ಬಹುತೇಕ ಮರೆತೇ ಹೋಗಿದ್ದ ಹೆಸರುಗಳು ಎಎಪಿ ದೆಸೆಯಿಂದಾಗಿ ಮತ್ತೆ ಚಲಾವಣೆಗೆ ಬಂದಿದ್ದವು.ಗುರುದಾಸ್‌ಪುರದಲ್ಲಿ ವಿನೋದ್‌ ಖನ್ನಾ ವಿರುದ್ಧ ಸ್ಪರ್ಧಿಸಿದ್ದ ಸಚ್ಚಾ ಸಿಂಗ್‌ ಛೋಟೆಪುರ ಅವರು, ಮಾಜಿ ತೀವ್ರವಾದಿಗಳಲ್ಲಿ ಒಬ್ಬರಾಗಿದ್ದರು. ಮಾಜಿ ರಾಜತಾಂತ್ರಿಕ ಹರಿಂದರ್‌ ಸಿಂಗ್‌ ಖಾಲ್ಸಾ ಅವರು ಫತೇಗಡ ಸಾಹಿಬ್‌ನಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದರು.

ಇವರು, ‘ಬ್ಲೂಸ್ಟಾರ್‌’ ಕಾರ್ಯಾಚರಣೆ ವಿರೋಧಿಸಿ ನಾರ್ವೆಯಲ್ಲಿನ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯ ಆಶ್ರಯ ಪಡೆದುಕೊಂಡಿದ್ದರು. ಖಾಲ್ಸಾ ಅವರು ಈಗ ಯಾವುದೇ ಭಾರತೀಯನಂತೆ ದೇಶಭಕ್ತರಾಗಿದ್ದಾರೆ ಎಂದು ನಾನೇ ಬೇಕಾದರೆ ಪ್ರಮಾಣ ಮಾಡುವೆ. ಆದರೆ, ಇತಿಹಾಸವು ಜನರ ಮನಸ್ಸಿನಿಂದ ಅಷ್ಟು ಸುಲಭವಾಗಿ ಮಾಸುವುದಿಲ್ಲ.ಅಮೃತಸರದಲ್ಲಿ ನನಗೆ ಖಲಿಸ್ತಾನದ ಮಾಜಿ ಸಮರ್ಥಕ ಮೊಹಕಂ ಸಿಂಗ್‌ ಅವರನ್ನು ಭೇಟಿಯಾಗುವ ಅವಕಾಶ ದೊರೆತಿತ್ತು. ಜರ್ನೇಲ್‌ ಸಿಂಗ್‌ ಭಿಂದ್ರನ್‌ವಾಲೆಯ ಅಂತರಂಗದ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದ ಮೊಹಕಂ ಅವರದ್ದು ನನಗೆ ತುಂಬ ಹಳೆಯ ಪರಿಚಯ. ಈಗ ಅವರು ತೀವ್ರವಾದಿಗಳ ಸಂಘದ ಸಂಚಾಲಕರಾಗಿದ್ದಾರೆ.

ಎಎಪಿಗೆ ಬೆಂಬಲ ಘೋಷಿಸಿದ್ದ ಅವರು, ಭಿಂದ್ರನ್‌ವಾಲೆಯ ಭಾವಚಿತ್ರದ ಕೆಳಗೆ ಕುಳಿತುಕೊಂಡೇ ನನ್ನ ಜತೆ ಮುಕ್ತವಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದರು. ಅವರ ಹೊಸ ಕಾರ್‌ನ ಸಂಖ್ಯೆ ಪಿಬಿ–2–ಎ–1984 ಎಂದು ಇರುವುದೂ ನನ್ನ ಗಮನಕ್ಕೆ ಬಂದಿತ್ತು. ‘ಬ್ಲೂಸ್ಟಾರ್‌’ ಕಾರ್ಯಾಚರಣೆ ನಡೆದ ವರ್ಷ ಮತ್ತು ಭಿಂದ್ರನ್‌ವಾಲೆ ಸಾವು ಅವನ ಹಿಂಬಾಲಕರಲ್ಲಿ ಇನ್ನೂ ಹಸಿರಾಗಿರುವುದು ಇದರಿಂದ ವೇದ್ಯವಾಗುತ್ತದೆ.ಕೆನಡಾದ ಸಿಖ್‌ರು ಎಎಪಿಗೆ ಬೆಂಬಲ ನೀಡಿರುವುದು ಹಿಂದೂಗಳಲ್ಲಿ ಭಯದ ಬೀಜ ಬಿತ್ತಿತ್ತು. ಹೀಗಾಗಿ ಅವರೆಲ್ಲ ಎಎಪಿಯನ್ನು ಸೋಲಿಸಲು ನಿರ್ಧರಿಸಿದ್ದರು ಎಂದು ಭಾಸವಾಗುತ್ತದೆ.2014ರಲ್ಲಿ ಯೋಗೇಂದ್ರ ಯಾದವ್‌ ಎಎಪಿ ಜತೆಯಲ್ಲಿ  ಇದ್ದರು. ‘ಹಳೆಯ ತೀವ್ರವಾದಿಗಳನ್ನು ರಾಜಕೀಯದ ಮುಖ್ಯ  ಪ್ರವಾಹಕ್ಕೆ ಎಳೆದು ತರಲು ಇದೊಂದು ಮಾರ್ಗವಾಗಿದೆ. ಹಳೆಯ ಸಂಕಟಗಳಿಗೆ ಅಹಿಂಸೆ ಮತ್ತು ಪ್ರಜಾಸತ್ತಾತ್ಮಕ ರೀತಿಯಲ್ಲಿ ಸಾಂತ್ವನ ಹೇಳುವ ವಿಧಾನವೂ ಇದಾಗಿದೆ’ ಎಂದು ಅವರು ಪ್ರತಿಪಾದಿಸಿದ್ದರು. 1979ರಿಂದ 1994ರ ಅವಧಿಯಲ್ಲಿ ನಡೆದ ಹಿಂಸಾಕೃತ್ಯಗಳಿಂದ ನಲುಗಿದ್ದ ಪಂಜಾಬಿಗಳು, ಹಿಂದೂಗಳು, ಸಿಖ್‌ರಲ್ಲಿ ಈ ಮಾತು ಕೇಳುವ ಸಹನೆಯೇ ಇದ್ದಿರಲಿಲ್ಲ.ಖಲಿಸ್ತಾನ್ ಪರ ಇರುವವರು, ಅದರಲ್ಲೂ ವಿಶೇಷವಾಗಿ ಕೆನಡಾದವರು ಹೊರಗಿನ, ಸುಲಭವಾಗಿ ಮೋಸ ಹೋಗುವ ಎಎಪಿಯನ್ನು ಬಳಸಿಕೊಂಡು ಅಕಾಲಿಗಳನ್ನು ನಾಶಪಡಿಸುವ, ಅವರ ವಶದಲ್ಲಿದ್ದ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ  (ಎಸ್‌ಜಿಪಿಸಿ) ಮೇಲೆ ಹಿಡಿತ ಸಾಧಿಸುವ ಉದ್ದೇಶ ಹೊಂದಿದ್ದರು.

ಒಂದೊಮ್ಮೆ ಗುರುದ್ವಾರಗಳ ಮೇಲೆ ತಮ್ಮ ನಿಯಂತ್ರಣ ಸಾಧಿಸುತ್ತಿದ್ದಂತೆ, ದುರಂತದಲ್ಲಿ ಕೊನೆಯಾಗುತ್ತಿದ್ದ ಹಳೆಯ ಸಿನಿಮಾಗಳ ಹೊಸ ಅವತರಣಿಕೆ ತರಲು ಮುಂದಾಗುತ್ತಿದ್ದರು. ಪಂಜಾಬ್‌ನಲ್ಲಿ ಯಾರೊಬ್ಬರೂ, ಅದರಲ್ಲೂ ವಿಶೇಷವಾಗಿ ಸಿಖ್‌ರು ಅದಕ್ಕೆ ಅವಕಾಶ ಮಾಡಿಕೊಡಲು ಸಿದ್ಧರಿರಲಿಲ್ಲ. ರಾಜ್ಯದ ಜನ ಹಳೆಯದನ್ನು ಮರೆತು ಕ್ಷಮಿಸಿರದಿದ್ದರೆ ಹಿಂಸಾಚಾರದಿಂದ ಹೊರಬಂದು ಚೇತರಿಸಿಕೊಳ್ಳಲು ಪಂಜಾಬ್‌ಗೆ ದಶಕಗಳೇ ಬೇಕಾಗುತ್ತಿತ್ತು.ಕಾಂಗ್ರೆಸ್‌ ಈಗ ಮತ್ತೆ ಅಧಿಕಾರಕ್ಕೆ ಬಂದಿದೆ. ಅಕಾಲಿದಳದ ವಿಭಜಕರು ಠೇವಣಿ ಕಳೆದುಕೊಂಡಿದ್ದಾರೆ. ಹಳೆಯ ದಿನಗಳಿಗೆ ಮರಳಿ ಹೋಗಲು ಯಾರೊಬ್ಬರೂ ಇಚ್ಛಿಸುವುದಿಲ್ಲ. ಭೂತಕಾಲದ ಬಗ್ಗೆಯೇ ಪದೇಪದೇ ಪ್ರಸ್ತಾಪಿಸುವುದರ ಬದಲಿಗೆ ರಾಜ್ಯದ ಜನರಲ್ಲಿ ಉತ್ತಮ ಭವಿಷ್ಯದ ಭರವಸೆ ಬಿತ್ತಿದ್ದರೆ, ರಾಜ್ಯದಲ್ಲಿ ಎಎಪಿಯ ಚುನಾವಣಾ ಸಾಧನೆ ಇನ್ನಷ್ಟು ಸುಧಾರಿಸುವ ಸಾಧ್ಯತೆ ಇತ್ತು.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry