ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಗೇಡು ಹತ್ಯೆಯ ಸುತ್ತ...

Last Updated 18 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಬಾಲ್ಯದ ಸ್ನೇಹಿತರಾದ ಪ್ರಕಾಶ್‌ ಮತ್ತು ಸ್ನೇಹಾ ಕಾಲೇಜು ಮೆಟ್ಟಿಲು ಏರುತ್ತಲೇ ಮದುವೆಯಾಗುವ ನಿರ್ಧಾರಕ್ಕೆ ಬಂದರು. ಸ್ನೇಹಾ ಮೇಲ್ಜಾತಿ ಹಾಗೂ ಪ್ರಕಾಶ್‌ ಕೆಳಜಾತಿಯ ಹುಡುಗ ಎಂದು ಸಮಾಜದಲ್ಲಿ ಗುರುತಿಸಿಕೊಂಡವರು. ಅದಕ್ಕಾಗಿ ಸ್ನೇಹಾಳ ಮನೆಯಲ್ಲಿ ಈ ಸಂಬಂಧ ಒಪ್ಪಲಿಲ್ಲ. ಆದರೆ ಒಬ್ಬರನ್ನೊಬ್ಬರು ಬಿಟ್ಟು ಇರದಷ್ಟು ಗಾಢ ಪ್ರೇಮ ಬೆಳೆಸಿಕೊಂಡ ಸ್ನೇಹಾ– ಪ್ರಕಾಶ್‌ ಮದುವೆಯಾಗಲು ನಿರ್ಧರಿಸಿ  ಮನೆಯಲ್ಲಿ  ಯಾರಿಗೂ ಹೇಳದೆ ಓಡಿಹೋದರು.

ವಿಷಯ ತಿಳಿದ ಸ್ನೇಹಾಳ ಅಪ್ಪ  ಬಸವರಾಜು ಕೆಂಡಾಮಂಡಲ ಆದರು.  ರಾಜಕೀಯ ವಲಯದಲ್ಲಿ  ಅವರು ಸಾಕಷ್ಟು ಗುರುತಿಸಿಕೊಂಡವರು. ‘ಕೆಳಜಾತಿಯ ಹುಡುಗ ಪ್ರಕಾಶ ಎಂಬಾತ ನನ್ನ ಮಗಳನ್ನು ವಂಚಿಸಿ ಅಪಹರಿಸಿಕೊಂಡು ಹೋಗಿದ್ದಾನೆ’ ಎಂದು  ಪೊಲೀಸ್ ಠಾಣೆಯಲ್ಲಿ ಅವರು ದೂರು ದಾಖಲಿಸಿದರು. ಪೊಲೀಸರ ತನಿಖೆ ಶುರುವಾಯಿತು. ಹಲವಾರು ದಿನಗಳ ಕಾಲ ಹುಡುಕಾಡಿದರು. ಕೊನೆಗೂ ಪ್ರಕಾಶನ ಮೊಬೈಲ್ ಫೋನ್‌  ಕರೆಯ ಜಾಡು ಪೊಲೀಸರಿಗೆ ಸಿಕ್ಕಿತು. ಆ ಜಾಡು ಹಿಡಿದು ಆತನ ಸಂಬಂಧಿಕರ ಮನೆಯಲ್ಲಿ  ಇದ್ದ ಇಬ್ಬರನ್ನೂ ಬಂಧಿಸಿದರು.

ಸ್ನೇಹಾಳನ್ನು ವಿಚಾರಣೆಗೆ ಒಳಪಡಿಸಿದಾಗ ತಾನು ಪ್ರಾಪ್ತ ವಯಸ್ಕಳಾಗಿದ್ದು, ಸ್ವಇಚ್ಛೆಯಿಂದ ಪ್ರಕಾಶನ ಜೊತೆ ಹೋಗಿರುವುದಾಗಿ ತಿಳಿಸುತ್ತಾಳೆ. ಪ್ರಕಾಶನ ಸಂಬಂಧಿಕರ ನೆರವಿನೊಂದಿಗೆ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕಾನೂನುಬದ್ಧವಾಗಿ ಮದುವೆಯಾಗಿರುವ ಬಗ್ಗೆಯೂ ವಿವರಿಸುತ್ತಾಳೆ. ಇಬ್ಬರೂ ಪ್ರಾಪ್ತರಾಗಿರುವ ಕಾರಣ ಹಾಗೂ ಇದು ಬಲವಂತದ ಮದುವೆಯಾಗಲೀ, ಅಪಹರಣವಾಗಲೀ ಅಲ್ಲ ಎನ್ನುವುದು ತಿಳಿದುಬಂದ ಕಾರಣದಿಂದ ಪೊಲೀಸರು ಅವಳನ್ನು ಗಂಡನ ಜೊತೆಗೆ ಕಳುಹಿಸಿಕೊಡದೆ ಬೇರೆ ವಿಧಿ ಇರುವುದಿಲ್ಲ. ಖುಷಿಯಿಂದ ಸ್ನೇಹಾ ಗಂಡನ ಮನೆ ಸೇರುತ್ತಾಳೆ. ಆಕೆಯ ತಂದೆ ಕೋಪದಿಂದ ಕುದಿಯುತ್ತಲೇ ಇದ್ದರೂ ಏನೂ ಮಾಡಲಾಗದ ಅಸಹಾಯಕತೆಯಿಂದ ಸುಮ್ಮನೇ ಇರುತ್ತಾರೆ.

ಹೀಗೇ ಒಂದು ವರ್ಷ ಕಳೆಯುತ್ತದೆ. ಮಗಳ ಮನೆ ತೀರಾ ಸಮೀಪವೇ ಇದ್ದರೂ ಸ್ನೇಹಾಳ ಪೋಷಕರು ಅಲ್ಲಿಗೆ ಹೋಗುವುದಿಲ್ಲ, ಆಕೆಯನ್ನೂ ತಮ್ಮ ಮನೆಗೆ ಬರಗೊಡುವುದಿಲ್ಲ.

ಈ ಮಧ್ಯೆ ಸ್ನೇಹಾ ಗರ್ಭಿಣಿಯಾಗುತ್ತಾಳೆ. ಮಗಳು ತಾಯಿಯಾಗುವ, ತಾವು ಅಜ್ಜ–ಅಜ್ಜಿಯಾಗುವ ವಿಷಯ ಕೇಳಿದಾಗ ಎಂಥ ಪೋಷಕರೂ ಹಿಂದಿನ ದ್ವೇಷವನ್ನೆಲ್ಲಾ ಮರೆಯುವುದು ಸಹಜ. ಅದೇ ರೀತಿ, ತಾನು ತಾಯಿಯಾಗುವ ಸುದ್ದಿ ಕೇಳಿ ಅಪ್ಪ–ಅಮ್ಮ ಖುಷಿಪಟ್ಟು  ಹಿಂದಿನದ್ದೆಲ್ಲ ಮರೆತು ತನ್ನನ್ನು ಮನೆಗೆ ಕರೆಯುತ್ತಾರೆ, ಬಯಕೆಯ ಊಟವನ್ನು ಹಾಕುತ್ತಾರೆ ಎಂದು ಸ್ನೇಹಾ ಕನಸು ಕಾಣುತ್ತಾಳೆ. ತಾನು ಗರ್ಭಿಣಿ ಎಂಬ ಸುದ್ದಿಯನ್ನು ಹೇಗಾದರೂ ಮಾಡಿ ಮಾರನೆಯ ದಿನ ಪೋಷಕರಿಗೆ ತಲುಪಿಸುವ ಯೋಚನೆಯಲ್ಲೇ ನಿದ್ದೆ ಹೋಗುತ್ತಾಳೆ.

ಮರುದಿನ ಎಂದಿನಂತೆ ಚಹಾ ಸೇವಿಸಿ ಎಂಟು ಗಂಟೆ ಸುಮಾರಿಗೆ ಬಹಿರ್ದೆಸೆಗೆಂದು ಸಾರ್ವಜನಿಕ ಶೌಚಾಲಯಕ್ಕೆ ಸ್ನೇಹಾ ಹೋಗುತ್ತಾಳೆ. ಆಕೆ ಹೋದ ಸ್ವಲ್ಪ ಸಮಯದಲ್ಲಿಯೇ  ಶೌಚಾಲಯದ ಕಡೆಯಿಂದ ಹೆಣ್ಣು ಮಗಳೊಬ್ಬಳು ಕಿಟಾರನೆ ಕಿರುಚಿಕೊಂಡ ಶಬ್ದ ಅವಳ ಅತ್ತೆಗೆ ಕೇಳುತ್ತದೆ. ರೊಟ್ಟಿ ತಟ್ಟುತ್ತ ಕುಳಿತ ಅವಳ ಅತ್ತೆ ಕಮಲಾಬಾಯಿ ಓಡಿ ಬಂದು ನೋಡುವಷ್ಟರಲ್ಲಿ ಸ್ನೇಹಾ ರಕ್ತದ ಮಡುವಿನಲ್ಲಿ ಒದ್ದಾಡುತ್ತಿರುತ್ತಾಳೆ. ಜನ ಸೇರಿ ಸ್ನೇಹಾಳ ಬಾಯಿಗೆ ಒಂದಿಷ್ಟು ನೀರು ಬಿಡುವಷ್ಟರಲ್ಲಿ ಅವಳ ಪ್ರಾಣಪಕ್ಷಿ ಹಾರಿಹೋಗುತ್ತದೆ.

ಪೊಲೀಸರು ತನಿಖೆ ಶುರುವಿಟ್ಟುಕೊಳ್ಳುತ್ತಾರೆ. ಬೆಳಿಗ್ಗೆ ಅಕ್ಕಪಕ್ಕದ ಜನರ ಎದುರೇ ಈ ಕೊಲೆ ನಡೆದಿದ್ದರೂ ಯಾರೊಬ್ಬರೂ ತಾವು ಇದನ್ನು ನೋಡಿರುವುದಾಗಿ ಹೇಳುವುದಿಲ್ಲ.  ಆದರೆ ಕಮಲಾಬಾಯಿ ಮಾತ್ರ ನಡೆದ ಘಟನೆಯನ್ನು ಪೊಲೀಸರ ಎದುರು ಹೇಳುತ್ತಾರೆ. ‘ಸ್ನೇಹಾ ಕಿರುಚಿದ ತಕ್ಷಣ ನಾನು ಹೊರಗೆ ಓಡಿಬಂದೆ. ಆಗ ಅವಳ ತಂದೆ ಬಸವರಾಜು ಕೈಯಲ್ಲಿ ರಕ್ತಸಿಕ್ತವಾದ ಕುಡುಗೋಲನ್ನು ಹಿಡಿದುಕೊಂಡು ಶೌಚಾಲಯದಿಂದ ಹೊರಗೆ ಓಡಿ ಹೋಗುತ್ತಿದ್ದರು. ನಂತರ ಕುಡುಗೋಲನ್ನು ಅಲ್ಲೇ ಎಸೆದುಹೋದರು’ ಎನ್ನುತ್ತಾರೆ.

ಇಷ್ಟು ಮಾಹಿತಿ ಸಿಗುತ್ತಲೇ ಪೊಲೀಸರು ಬಸವರಾಜು ಅವರನ್ನು ಬಂಧಿಸುತ್ತಾರೆ. ಆರು ತಿಂಗಳ ಅವಧಿಯಲ್ಲಿ ಅವರ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸುತ್ತಾರೆ.

ಬಸವರಾಜು ಅವರೇ ಕೊಲೆ ಮಾಡಿದ್ದಾರೆ ಎನ್ನುವುದಕ್ಕೆ ಇದ್ದ ಏಕೈಕ ಸಾಕ್ಷಿ ಎಂದರೆ ಕಮಲಾಬಾಯಿ ಮಾತ್ರ. ಸೊಸೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಕಮಲಾಬಾಯಿ, ಕೋರ್ಟ್‌ನಲ್ಲಿ ಸಾಕ್ಷಿ ನುಡಿದು ಬಸವರಾಜು ಅವರಿಗೆ ಕಠೋರವಾದ ಶಿಕ್ಷೆಯಾಗಬೇಕು ಎಂದು ಹೇಳುತ್ತಾರೆ.

ತಾವೇ ಕೊಲೆ ನೋಡಿರುವುದಾಗಿ ಕೋರ್ಟ್‌ನಲ್ಲಿ ಸಾಕ್ಷಿ ಹೇಳಿಬಿಟ್ಟರೆ ಮುಗಿಯಿತೇ? ಅಂಥ ಸಾಕ್ಷಿದಾರರ ಹೇಳಿಕೆಗಳಿಗೂ ನ್ಯಾಯಾಲಯಗಳಿಗೆ ಸೂಕ್ತ ಸಾಕ್ಷ್ಯಾಧಾರ ಬೇಕಲ್ಲ...! ಆರೋಪಿ ಪರ ವಕೀಲರು ಸುಮ್ಮನೆ ಬಿಟ್ಟುಬಿಡುತ್ತಾರೆಯೇ? ಕಪ್ಪುಕಾಗೆಯನ್ನೂ ಬಿಳಿಕಾಗೆ ಮಾಡುವ ತಾಕತ್ತು ಇರುವ ಕ್ರಿಮಿನಲ್‌ ವಕೀಲರು ಮಂಡಿಸುವ ವಾದದ ಮೇಲೆಯೇ ಕೋರ್ಟ್‌ಗಳು ತೀರ್ಪು ನೀಡುವುದು ಇಂದಿನ ವಾಸ್ತವ. ಕೆಲವು ವಕೀಲರು ಕೇಳುವ ಉಲ್ಟಾಪಲ್ಟಾ ಪ್ರಶ್ನೆಗಳಿಗೆ ಕಟಕಟೆಯಲ್ಲಿ ನಿಂತ ಎಂಥ ಸಾಕ್ಷಿದಾರರೂ ಬೆದರಿ ತೊದಲುವುದು ಮಾಮೂಲು. ಅಷ್ಟು ತೊದಲಿದರೆ ಮುಗಿಯಿತು, ಎಷ್ಟೋ ಪ್ರಕರಣಗಳಲ್ಲಿ ಅಲ್ಲಿ ಕೇಸು ಬಿದ್ದುಹೋದಂತೆಯೇ! ಅಷ್ಟಕ್ಕೂ ಇಂಥ ವಕೀಲರಿಗೆ ಪೊಲೀಸರ ನಾಮಕಾವಸ್ತೆ ತನಿಖೆಗಳೂ ಸಾಕಷ್ಟು ನೆರವು ನೀಡುತ್ತವೆ.

ಇಲ್ಲೂ ಹಾಗೆಯೇ ಆಯಿತು. ಬಸವರಾಜು ಪರ ವಕೀಲರು ಒಂದರ ಮೇಲೊಂದು ಪ್ರಶ್ನೆ ಕೇಳಲು ಶುರುವಿಟ್ಟುಕೊಂಡರು. ‘ಕುಡುಗೋಲಿನಿಂದ ಬಸವರಾಜು ಅವರು ಹತ್ಯೆ ಮಾಡಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ. ಈ ಹತ್ಯೆ ನಡೆದ ಸಂದರ್ಭದಲ್ಲಿ ನೀವು ಎಲ್ಲಿ ಇದ್ದಿರಿ? ಆ ಸಮಯದಲ್ಲಿ ಏನು ಮಾಡುತ್ತಿದ್ದಿರಿ? ಈ ಕೊಲೆ ನಡೆದ ಸ್ಥಳ ನಿಮ್ಮ ಮನೆಯಿಂದ ಎಷ್ಟು ದೂರದಲ್ಲಿದೆ...?’ ಎಂಬ ಪಾಟಿಸವಾಲು ಕಮಲಾಬಾಯಿ ಅವರಿಗೆ ಎದುರಾಯಿತು.  ಅದಕ್ಕೆ ಕಮಲಾಬಾಯಿ ಅವರು, ‘ಕೊಲೆ ನಡೆದಾಗ ನಾನು ಅಡುಗೆ ಮನೆಯಲ್ಲಿ ರೊಟ್ಟಿ ಮಾಡುತ್ತಿದ್ದೆ. ಕೊಲೆ ನಡೆದ ಸ್ಥಳ ಅಂದರೆ ಶೌಚಾಲಯವು ನಮ್ಮ ಮನೆಯಿಂದ ಸುಮಾರು 200 ಮಿಟರ್ ದೂರದಲ್ಲಿದೆ. ಕಿರುಚಿದ ಶಬ್ದ ಕೇಳಿ ಓಡಿ ಹೋದಾಗ ಬಸವರಾಜು ಅವರನ್ನು ನೋಡಿದೆ...’ ಎಂದರು.

‘ಅಷ್ಟು ದೂರದಲ್ಲಿ ಕೊಲೆ ನಡೆದಿದೆ ಎನ್ನುತ್ತೀರಿ. ನಿಮ್ಮ ಸೊಸೆ ಕಿರುಚಿದಾಗ ನಿಮಗಷ್ಟೇ ಹೇಗೆ ಕೇಳಿಸಿತು? ಅಕ್ಕಪಕ್ಕದಲ್ಲಿ ಎಷ್ಟೆಲ್ಲಾ ಮನೆಗಳು ಇದ್ದರೂ ಅವರಿಗೆ ಏಕೆ ಕೇಳಿಸಲಿಲ್ಲ. ಅಷ್ಟಕ್ಕೂ ಬೆಳಿಗ್ಗೆ ಸುಮಾರು 8 ಗಂಟೆಗೆ ಕೊಲೆ ನಡೆದಿದೆ ಎನ್ನುತ್ತಿದ್ದೀರಿ. ಹಾಗಿದ್ದರೆ ಆ ಸಮಯದಲ್ಲಿ ಅಲ್ಲಿ ಯಾರೂ ಇರಲಿಲ್ಲವೇ? ನಿಮಗೊಬ್ಬರಿಗೇ ಬಸವರಾಜು ಹೇಗೆ ಕಂಡರು’ ಎಂದು ಆರೋಪಿ ಪರ ವಕೀಲರು ಸವಾಲು ಎಸೆದರು. ತಾವು ಕಂಡದ್ದನ್ನು ಇದ್ದ ಹಾಗೆಯೇ ಕಮಲಾಬಾಯಿ ಅವರು ಹೇಳಿದರೂ, ಬೇರೆಯವರಿಗೆ ಕೊಲೆ ನಡೆದದ್ದು ಹೇಗೆ ಗೊತ್ತಾಗಲಿಲ್ಲ ಎಂಬ ಬಗ್ಗೆ ವಿವರಿಸಲು ತಡವರಿಸಿದರು. (ಕಿರುಚಾಟ ಕೇಳಿಸಿಕೊಂಡವರು, ಕೊಲೆ ನಡೆದಿದ್ದನ್ನು ನೋಡಿದವರು ತುಂಬಾ ಮಂದಿ ಇದ್ದರೂ ತಮಗೇನೂ ಗೊತ್ತಿಲ್ಲದಂತೆ ಜಾಣಕಿವುಡು, ಜಾಣಕುರುಡು ಆಗಿದ್ದರಲ್ಲ... ಅದನ್ನು ಹೇಗೆ ಕಮಲಾಬಾಯಿ ವಿವರಿಸಿಯಾರು...?)
ಕಮಲಾಬಾಯಿಯವರು ಯಾವಾಗ ತಡವರಿಸಿದರೋ ಆಗ ಆರೋಪಿ ಪರ ವಕೀಲರು ಮತ್ತಷ್ಟು ಉತ್ಸಾಹಭರಿತರಾಗಿ... ‘ಸ್ನೇಹಾ ಅವರ ತಂದೆಯೇ ಈ ಕೊಲೆಯನ್ನು ಮಾಡಿದ್ದಾರೆ ಎಂದು ನೀವು ಹೇಳುತ್ತಿರುವಿರಿ. ಕೊಲೆಗೆ ಕುಡುಗೋಲು ಬಳಸಲಾಗಿದೆ ಎಂದೂ ಹೇಳಿರುವಿರಿ. ಹಾಗಿದ್ದರೆ ಕುಡುಗೋಲಿನ ಮೇಲೆ ಕೊಲೆಗಾರನ ಕೈಬೆರಳ ಗುರುತುಗಳು ಮೂಡಿರಬೇಕು. ಆದರೆ ಕೊಲೆಗೆ ಬಳಕೆಯಾಗಿದೆ ಎನ್ನಲಾದ ಕುಡುಗೋಲಿನ ಮೇಲೆ ಬಸವರಾಜು ಅವರ ಕೈಬೆರಳಿನ ಗುರುತುಗಳೇ ಇಲ್ಲ. ಇದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ಸಾಬೀತಾಗಿದೆ. ಇದಕ್ಕೇನು ಹೇಳುವಿರಿ’? ಎಂದಾಗ ಕಮಲಾಬಾಯಿ ಅವರು ಅವಾಕ್ಕಾಗಿ ನಿಂತರು!

ಅಷ್ಟಕ್ಕೆ ಸುಮ್ಮನಾಗದ ವಕೀಲರು, ‘ಬಸವರಾಜು ಅವರ ರಾಜಕೀಯ ವಿರೋಧಿಗಳು ಈ ಕೊಲೆ ಮಾಡಿದ್ದಾರೆ. ಈ ಕೊಲೆ ಸಂಚಿಗೆ ನೀವು ಸಹಾಯ ಮಾಡುತ್ತಿರುವಿರಿ. ಅದಕ್ಕಾಗಿ ಸುಳ್ಳು ಸಾಕ್ಷಿ ನುಡಿಯುತ್ತಿದ್ದೀರಿ. ಸ್ವಂತ ಮಗಳನ್ನೇ ಕೊಲೆ ಮಾಡುವುದು ಎಂದರೆ ನಂಬಲು ಸಾಧ್ಯವೇ? ಬಸವರಾಜು ಅಪರಾಧಿ ಹಿನ್ನೆಲೆಯ ಮನೋಭಾವದ ವ್ಯಕ್ತಿಯಲ್ಲ. ಬೇರೆ ಯಾರೋ ಮಾಡಿದ ಕೊಲೆಯನ್ನು ಬಸವರಾಜು ಅವರ ತಲೆಗೆ ಕಟ್ಟಿ ರಾಜಕೀಯವಾಗಿ ಮುಗಿಸಬೇಕು ಎಂಬ ಷಡ್ಯಂತ್ರದಲ್ಲಿ ನೀವೂ ಪಾಲುದಾರರಾಗಿದ್ದೀರಿ’ ಎಂದರು. ಆಗ ತಬ್ಬಿಬ್ಬಾದ ಕಮಲಾಬಾಯಿ, ‘ನಾನು ಸುಳ್ಳು ಹೇಳುತ್ತಿಲ್ಲ. ನನ್ನ ಸೊಸೆಯನ್ನು ಬಸವರಾಜುವೇ ಹತ್ಯೆ ಮಾಡಿರುವುದು. ನಾನು ಹೇಳುತ್ತಿರುವುದು ನಿಜ...’ ಎಂದು ಹೇಳತೊಡಗಿದರು.

ಅವರ ಮಾತಿಗೆ ಅಲ್ಲಿ ಬೆಲೆ ಸಿಗಲಿಲ್ಲ. ಬಸವರಾಜು ಪರ ವಕೀಲರ ಮಾತು ಗೆದ್ದಿತು. ಸಂಶಯದ ಲಾಭ (ಬೆನಿಫಿಟ್ ಆಫ್ ಡೌಟ್) ಆಧಾರದ ಮೇಲೆ ಬಸವರಾಜು ಅವರು ನಿರಪರಾಧಿ ಎಂದು ಕೋರ್ಟ್‌ ಆದೇಶ ಹೊರಡಿಸಿತು.

ಈ ಆದೇಶವನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಘಟನೆಯ ಮತ್ತಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿದರು. ಕುಡುಗೋಲಿನಿಂದ ಬೆರಳಚ್ಚಿನ ಗುರುತು ಮಾಯವಾದ ಬಗ್ಗೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಇನ್ನಷ್ಟು ಆಳವಾಗಿ ಅಧ್ಯಯನ ನಡೆಸಿದರು.

ಹೈಕೋರ್ಟ್‌ನಲ್ಲಿ ಈ ಪ್ರಕರಣ ವಿಚಾರಣೆಗೆ ಬಂತು. ತಾವು ಕಲೆಹಾಕಿದ್ದ ಸಾಕ್ಷ್ಯಾಧಾರಗಳನ್ನು ಒಂದೊಂದಾಗಿ ಬಿಚ್ಚಿಟ್ಟ ಪ್ರಾಸಿಕ್ಯೂಟರ್‌ ಅವರು, ‘ಕೊಲೆಗೆ ಬಳಸಿದ್ದ ಕುಡುಗೋಲನ್ನು ಘಟನೆ ನಡೆದ ಸುಮಾರು 20 ದಿನಗಳ ನಂತರ ತಿಪ್ಪೆಗುಂಡಿಯಿಂದ ಜಪ್ತಿ ಮಾಡಲಾಗಿತ್ತು. ಆದ್ದರಿಂದ ಆ ವೇಳೆಗೆ ಬೆರಳಿನ ಗುರುತು ಅಳಿಸಿಹೋಗಿತ್ತು. ಇದನ್ನೇ ಬಸವರಾಜು ಪರ ವಕೀಲರು ಅಸ್ತ್ರವಾಗಿ ಬಳಸಿಕೊಂಡರು’ ಎಂದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಅವರು ಕೋರ್ಟ್‌ ಮುಂದಿಟ್ಟು, ಸ್ನೇಹಾಳ ಬಟ್ಟೆಗೆ ಮೆತ್ತಿಕೊಂಡ ರಕ್ತ ಹಾಗೂ ಕುಡುಗೋಲಿನ ಮೇಲಿದ್ದ ರಕ್ತ ಒಂದೇ ಎಂಬ ಬಗ್ಗೆ ಉಲ್ಲೇಖ ಇದ್ದುದನ್ನು ಗಮನಕ್ಕೆ ತಂದರು.

ಅದೂ ಅಲ್ಲದೆ, ಬಸವರಾಜು ಅವರು ಘಟನೆ ನಡೆದ ದಿನದಿಂದಲೇ ತಲೆಮರೆಸಿಕೊಂಡಿರುತ್ತಾರೆ.

ತೀವ್ರ ಹುಡುಕಾಟದ ನಂತರ ಇಪ್ಪತ್ತು ದಿನಗಳ ಮೇಲೆ ಪೊಲೀಸರು ಅವರನ್ನು ಬಂಧಿಸುತ್ತಾರೆ.  ಇದನ್ನೂ ಅಸ್ತ್ರವಾಗಿಸಿಕೊಂಡ ಪ್ರಾಸಿಕ್ಯೂಟರ್‌, ‘ಒಂದು ವೇಳೆ ಬಸವರಾಜು ಕೊಲೆ ಮಾಡದೇ ಹೋಗಿದ್ದಲ್ಲಿ ಹೀಗೆ ತಲೆಮರೆಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಅದೂ ಮಗಳ ಕೊಲೆಯಾದಾಗ ಯಾವ ತಂದೆ ನಾಪತ್ತೆಯಾಗುತ್ತಾನೆ? ಇದು ಕೂಡ ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ ಎಂದು ವಾದಿಸುತ್ತಾರೆ. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾಗ ಕೊಲೆ ಮಾಡಿದ್ದನ್ನು ಒಪ್ಪಿಕೊಂಡಿದ್ದು ಹಾಗೂ ಅವರು ನೀಡಿದ ಸುಳಿವಿನ ಆಧಾರದ ಮೇಲೆಯೇ ಕುಡುಗೋಲನ್ನು ತಿಪ್ಪೆಗುಂಡಿಯಿಂದ ವಶಪಡಿಸಿಕೊಂಡಿದ್ದು  ಎಲ್ಲವನ್ನೂ ವಿವರಿಸುತ್ತಾರೆ.

ಇದನ್ನೆಲ್ಲ ಗಮನಿಸಿದ ಕೋರ್ಟ್‌ಗೆ ಕೆಳಜಾತಿಯ ಹುಡುಗನನ್ನು ಮದುವೆ ಮಾಡಿಕೊಂಡಿದ್ದೇ ಕೊಲೆಗೆ ಕಾರಣ ಎಂದು ತಿಳಿಯುತ್ತದೆ. ತಾವು ಮಾಡಿದ ಕೊಲೆಯನ್ನು ಮರೆಮಾಚಲು ಸಾಕ್ಷಿದಾರರ ಮೇಲೆ ಒತ್ತಡ ಹೇರಿದ್ದೂ ಬಹಿರಂಗಗೊಳ್ಳುತ್ತದೆ. ಹೀಗಾಗಿ ಇದು ಉದ್ದೇಶಪೂರ್ವಕವಾಗಿ ನಡೆದ ಕೊಲೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಬಸವರಾಜು ಅವರಿಗೆ ಜೀವಾವಧಿ ಶಿಕ್ಷೆಯನ್ನು ನೀಡಿತು.

ಇಂದು ಇದ್ದು ನಾಳೆ ಸಾಯುವ ಈ ದೇಹಕ್ಕೊಂದು ಜಾತಿ, ಧರ್ಮ ಎಂಬ ಹೆಸರು ಕಟ್ಟಿ ಈ ರೀತಿ ಮರ್ಯಾದೆಗೇಡು ಹತ್ಯೆಗಳು ಆಗಾಗ್ಗೆ ನಡೆಯುತ್ತಲೇ ಇರುವುದು ದುರದೃಷ್ಟಕರ. ಅಂತರ್ಜಾತಿ, ಅಂತರ್‌ ಧರ್ಮೀಯರನ್ನು ಮದುವೆಯಾಗಿಬಿಟ್ಟರೆ ಸಮಾಜ ಏನನ್ನುತ್ತದೆ? ಸಮಾಜಕ್ಕೆ ಮುಖ ಹೇಗೆ ತೋರಿಸುವುದು ಎಂದುಕೊಳ್ಳುತ್ತಲೇ, ಸಮಾಜ ಅಸಹ್ಯಪಡುವಂತಹ ಕೃತ್ಯ ಎಸಗಿದ್ದರು ಬಸವರಾಜು.

ಹೆತ್ತ ಮಗಳನ್ನು ಕಳೆದುಕೊಂಡು, ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವಂತೆ ಆದ ಬಸವರಾಜು ಕೊನೆಗೆ ಸಾಧಿಸಿದ್ದು ಏನನ್ನು... ಎಂಬ ಪ್ರಶ್ನೆ, ಈ ಪ್ರಕರಣದ ವಿಚಾರಣೆ ವೇಳೆ ಕೋರ್ಟ್‌ನಲ್ಲಿ ಹಾಜರಿದ್ದ ನನ್ನನ್ನು ಬಹುವಾಗಿ ಕಾಡಿತು.

ಲೇಖಕ ನ್ಯಾಯಾಂಗ ಇಲಾಖೆ ಅಧಿಕಾರಿ
(ಹೆಸರುಗಳನ್ನು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT