ಸೋಮವಾರ, ಡಿಸೆಂಬರ್ 6, 2021
25 °C
ವಿಜ್ಞಾನ ವಿಶೇಷ

ಭೂಮಿಗೆ ಬಂಗಾರ ಬಂದಿದ್ದು ಹೇಗೆ?

ಎನ್‌. ವಾಸುದೇವ್‌ Updated:

ಅಕ್ಷರ ಗಾತ್ರ : | |

ಭೂಮಿಗೆ ಬಂಗಾರ ಬಂದಿದ್ದು ಹೇಗೆ?

ಅದು ಹೇಗೆ ಆಗಿರಲಿ, ಒಂದಂಶ ಸ್ಪಷ್ಟ: ಬಂಗಾರ ಭೂಮಿಯಲ್ಲೇ ಸೃಷ್ಟಿಯಾದದ್ದಂತೂ ಅಲ್ಲ, ಧರೆಯಲ್ಲೇ ಬಂಗಾರ ಸೃಷ್ಟಿಗೊಳ್ಳುವುದು ಸಾಧ್ಯವೇ ಇಲ್ಲ. ಅಷ್ಟೇ ಅಲ್ಲ. ಬಂಗಾರ ಪೃಥ್ವಿಯಲ್ಲಿ ಮಾತ್ರವೇ ಇರುವ ವಸ್ತುವೂ ಏನಲ್ಲ. ಘನ ತನುವಿನ ಯಾವುದೇ ಅಂತರಿಕ್ಷ ಕಾಯದಲ್ಲೂ ಎಂದರೆ ಗ್ರಹ, ಉಪಗ್ರಹ, ಕ್ಷುದ್ರ ಗ್ರಹ, ಕುಬ್ಜಗ್ರಹಗಳಲ್ಲೂ ಬಂಗಾರ ಇದ್ದೇ ಇದೆ.

ವಾಸ್ತವ ಏನೆಂದರೆ ವಿಶ್ವದಲ್ಲಿನ ಎಲ್ಲ ‘ಮೂಲವಸ್ತು’ಗಳೂ ಬಂಗಾರವೂ ಕೂಡ ಮೂಲತಃ ಮೈದಳೆಯುವುದೇ ನಕ್ಷತ್ರಗಳಲ್ಲಿ. ತಾರೆಗಳ ಅಂತರಾಳದಲ್ಲಿ, ಅಲ್ಲಿನ ಕಲ್ಪನಾತೀತ ತಾಪ ಒತ್ತಡಗಳಲ್ಲಿ ಅಲ್ಲಿ ನಿರಂತರ ಜರುಗುತ್ತಿರುವ ‘ಉಷ್ಣ ಜೈವಿಕ ಸಮ್ಮಿಲನ’ ಕ್ರಿಯೆಯಲ್ಲಿ ಜಲಜನಕದಿಂದ ಆರಂಭಗೊಂಡು ಕಬ್ಬಿಣದವರೆಗಿನ ಎಲ್ಲ ಹಗುರ ಲೋಹ– ಅಲೋಹ ಧಾತುಗಳೂ ಮೈದಳೆದು ಶೇಖರಗೊಳ್ಳುತ್ತವೆ. ಮುಂದೆ ಬಿಲಿಯಾಂತರ ವರ್ಷಗಳ ತಮ್ಮ ಜೀವಿತದ ಅಂತ್ಯದಲ್ಲಿ ದೈತ್ಯ ನಕ್ಷತ್ರಗಳು ಭೀಕರ ‘ಸೂಪರ್ ನೋವಾ’ ಸ್ಪೋಟದೊಡನೆ ಛಿದ್ರಗೊಳ್ಳುತ್ತವೆ (ಚಿತ್ರ 11, 12 ನೋಡಿ). ಹಾಗಾದಾಗ ಅವುಗಳೊಳಗೆ ಸಂಗ್ರಹವಾಗಿದ್ದ ಬಿಲಿಯಾಂತರ ಟನ್‌ಗಳಷ್ಟು ನಾನಾ ಹಗುರ ಮೂಲವಸ್ತುಗಳು ಧೂಳಿನ ಕಣಗಳಂತೆ ಅನೂಹ್ಯ ವೇಗದೊಡನೆ ಎರಚಲ್ಪಟ್ಟು ಅಂತರಿಕ್ಷದಲ್ಲಿ ಹರಡಿಕೊಳ್ಳುತ್ತವೆ, ವ್ಯೋಮ ದ್ರವ್ಯ ‘ಇಂಟರ್ ಸ್ಟೆಲ್ಲಾರ್ ಮ್ಯಾಟರ್’ನಲ್ಲಿ ಬೆಳೆಯುತ್ತವೆ (ಚಿತ್ರ –13). ಈ ದ್ರವ್ಯವೇ ಮುಂದೆಂದೋ ಭಾರೀ ಪ್ರಮಾಣದಲ್ಲಿ ಒಟ್ಟುಗೂಡಿ, ಸಾಂದ್ರಗೊಂಡು (ಚಿತ್ರ–14) ಕಡೆಗೆ ಹೊಸ ಸೌರವ್ಯೂಹಗಳ ಜನನಕ್ಕೆ ಕಾರಣವಾಗುತ್ತದೆ. ನಮ್ಮ ಸೌರವ್ಯೂಹದಲ್ಲಿರುವ, ನಮ್ಮ ಪೃಥ್ವಿಯಲ್ಲಿರುವ, ಇಲ್ಲಿನ ಎಲ್ಲ ಸಜೀವಿ–ನಿರ್ಜೀವಿಗಳಲ್ಲಿರುವ, ಕಡೆಗೆ ನಮ್ಮ ಶರೀರದಲ್ಲೂ ಇರುವ ಎಲ್ಲ ಮೂಲವಸ್ತುಗಳ ಮೂಲವೂ ಹೀಗೆ ಸೂಪರ್ ನೋವಾಗಳೇ ಆಗಿವೆ.

ಆದರೆ, ವಿಸ್ಮಯ ಏನೆಂದರೆ, ಕಬ್ಬಿಣದ ನಂತರದ ಅದರಲ್ಲೂ ಬಂಗಾರ ಮತ್ತಿತರ ಅತಿ ಭಾರದ ಮೂಲವಸ್ತುಗಳು ರೂಪುಗೊಳ್ಳಲು ಅತ್ಯಂತ ಅಪರೂಪದ, ಅತ್ಯಂತ ಶಕ್ತಿಶಾಲಿಯಾದ, ಅತಿ ವಿಶಿಷ್ಟ ತಾರಾ ವಿದ್ಯಮಾನವೊಂದು ಸಂಭವಿಸಬೇಕು. ನ್ಯೂಟ್ರಾನ್ ತಾರೆಗಳ ಸಂಘರ್ಷದ ಆ ವಿದ್ಯಮಾನ ಪರಮ ಸೋಜಿಗಮಯ.

ನಮ್ಮ ಸೂರ್ಯನಿಗಿಂತ ಬಹಳ ಪಟ್ಟು ಅಧಿಕ ದ್ರವ್ಯರಾಶಿಯ ಬೃಹತ್ ನಕ್ಷತ್ರಗಳು ‘ಸೂಪರ್ ಕೆಂಪು ದೈತ್ಯ’ ಹಂತವನ್ನು ದಾಟಿ ‘ಸೂಪರ್ ನೋವಾ’ ಆಗಿ ಸ್ಪೋಟಗೊಂಡ ನಂತರವೂ ಅದರ ಗರ್ಭದ ಒಂದಷ್ಟು ದ್ರವ್ಯ ಛಿದ್ರವಾಗದೆ ಉಳಿದಿರುತ್ತದೆ. ಒಂದೆರಡೇ ನೂರು ಕಿಲೋಮೀಟರ್ ವ್ಯಾಸದ ಅಂಥ ಅವಶೇಷದಲ್ಲಿ ನಮ್ಮ ಭೂಮಿಯ ಮಿಲಿಯಾಂತರ ಪಟ್ಟು ಆಗುವಷ್ಟು ದ್ರವ್ಯರಾಶಿ ಬರೀ ‘ನ್ಯೂಟ್ರಾನ್’ಗಳ ರೂಪದಲ್ಲಿ ಅತ್ಯಂತ ಸಾಂದ್ರವಾಗಿ ಸಂಗ್ರಹವಾಗಿರುತ್ತದೆ. ಎಷ್ಟೆಂದರೆ ಒಂದೇ ಒಂದು ಗೋಲಿ ಗಾತ್ರದ ಆ ದ್ರವ್ಯ ನಾಲ್ಕು–ಐದು ಶತಕೋಟಿ ಟನ್ ತೂಗುತ್ತದೆ. ಇಂತಹ ಸೂಪರ್ ನೋವಾ ಅವಶೇಷವೇ ‘ನ್ಯೂಟ್ರಾನ್ ನಕ್ಷತ್ರ’ (ಚಿತ್ರ 11ರಲ್ಲಿ ‘ಎಸ್’ ನೋಡಿ).

ಹೀಗೆ ಮಹಾಪ್ರಳಯದಲ್ಲಿ ಮೈದಳೆವ ನ್ಯೂಟ್ರಾನ್ ತಾರೆಗಳು ಅಂತರಿಕ್ಷದಲ್ಲಿ ಅವು ಮೈದಳೆದ ಗ್ಯಾಲಕ್ಸಿಯಲ್ಲಿ ‘ಅಲೆಮಾರಿ’ಗಳಾಗುತ್ತವೆ. ಹಾಗೆ ಅಲೆದಾಡುತ್ತಿರುವ ಒಂದು ನ್ಯೂಟ್ರಾನ್ ತಾರೆ ಅತ್ಯಪರೂಪವಾಗಿ, ಅತ್ಯಂತ ಆಕಸ್ಮಿಕವಾಗಿ ಮತ್ತೊಂದು ನ್ಯೂಟ್ರಾನ್ ತಾರೆಯ ಗುರುತ್ವಕ್ಕೆ ಸಿಲುಕುತ್ತದೆ, ಕೂಡಲೇ ಎರಡೂ ನ್ಯೂಟ್ರಾನ್ ತಾರೆಗಳು ‘ಯುಗಳ ನಕ್ಷತ್ರ’ಗಳಂತೆ ಪರಸ್ಪರರ ಗುರುತ್ವದಲ್ಲಿ ಬಂಧಿಗಳಾಗಿ ಒಂದನ್ನೊಂದು ಪರಿಭ್ರಮಿಸತೊಡಗುತ್ತವೆ. ಹಾಗೆ ಸುತ್ತುತ್ತ ಸುತ್ತತ್ತ, ಕ್ರಮೇಣ ಹತ್ತಿರವಾಗುತ್ತ, ಕಡೆಗೆ ನೂರಾರು ಕೋಟಿ ವರ್ಷ ಅವಧಿಯ ಅಂತ್ಯದಲ್ಲಿ ಪರಸ್ಪರ ಢಿಕ್ಕಿ ಹಾಕುತ್ತವೆ.

ನ್ಯೂಟ್ರಾನ್ ನಕ್ಷತ್ರಗಳೆರಡು ಢಿಕ್ಕಿ ಇಡುವ ಈ ವಿದ್ಯಮಾನ ಎಷ್ಟು ಅಪರೂಪವೆಂದರೆ ನಮ್ಮ ಕ್ಷೀರಪಥ ಅಥವಾ ಅಂತಹುದೇ ಯಾವುದೇ ಗ್ಯಾಲಕ್ಸಿಯಲ್ಲೂ ಇಂಥ ವಿದ್ಯಮಾನ (ಚಿತ್ರ.8) ಸಂಭವಿಸುವ ಸಾಧ್ಯತೆ ಇರುವುದು ಒಂದು ಲಕ್ಷ ವರ್ಷಗಳಲ್ಲಿ ಒಮ್ಮೆ ಮಾತ್ರ! (ಇಂತಹದೊಂದು ಘಟನೆ ಕ್ಷೀರಪಥದಲ್ಲೇ ನಮ್ಮಿಂದ 3.9 ಶತಕೋಟಿ  ಜ್ಯೋತಿವರ್ಷ ದೂರದಲ್ಲಿ ಸಂಭವಿಸಿದ್ದನ್ನು ಆಂತರಿಕ್ಷ ದೂರದರ್ಶಕಗಳು 2013ರ ಜೂನ್ 3 ರಂದು ಗ್ರಹಿಸಿವೆ).

ಎರಡು ನ್ಯೂಟ್ರಾನ್ ನಕ್ಷತ್ರಗಳು ಡಿಕ್ಕಿ ಹಾಕುವ ಪರಮ ಭೀಕರ ವಿದ್ಯಮಾನ ಪರಿಣಾಮಗಳು ಅತ್ಯದ್ಭುತ. ಈ ಘಟನೆ ಜರುಗಿದೊಡನೆ ಅತ್ಯಂತ ಕ್ಷಣಿಕವಾದ– ಒಂದು ಸಕೆಂಡ್‌ನ ಐದರ ಒಂದಂಶ ಅವಧಿಯನ್ನು ಮೀರದ ಅತ್ಯಂತ ಬೆಳಕು ಮಿಂಚುತ್ತದೆ. ಇಡೀ ಒಂದು ಗ್ಯಾಲಕ್ಸಿಯ ಹತ್ತು ಸಾವಿರಕೋಟಿ ನಕ್ಷತ್ರಗಳ ಒಟ್ಟೂ ಬೆಳಕನ್ನು ಮೀರುವಷ್ಟು ಉಜ್ವಲ ಬೆಳಕು ಅದು. ಈ ವಿದ್ಯಮಾನಕ್ಕೆ ‘ಗಾಮ ರೇ ಬರ್ಸ್ಟ್’ ಎಂದೇ ಹೆಸರು.

ನ್ಯೂಟ್ರಾನ್ ತಾರೆಗಳೆರಡು ಹೀಗೆ ಢಿಕ್ಕಿ ಇಟ್ಟೊಡನೆ ಅವು ಪರಸ್ಪರ ಬೆಸೆಗೊಂಡು ಅವುಗಳ ಬಹುಪಾಲು ದ್ರವ್ಯ ಬೆರೆತು ಕುಗ್ಗಿ ‘ಕಪ್ಪು ರಂಧ್ರ’ವಾಗಿ, ಉಳಿದ ದ್ರವ್ಯ ಧೂಳು, ಕಣಗಳ ರೂಪದಲ್ಲಿ ಎರಚಲ್ಪಡುತ್ತದೆ. ಬರೀ ‘ನ್ಯೂಟ್ರಾನ್’ಗಳೇ ಆದ ಆ ಕಣಗಳು ವಿವಿಧ ಭಾರಧಾತುಗಳ ಪರಮಾಣುಗಳಾಗುತ್ತವೆ. ಬಂಗಾರವೂ ರೂಪುಗೊಳ್ಳುತ್ತವೆ. ವಿಸ್ಮಯ ಏನೆಂದರೆ ನ್ಯೂಟ್ರಾನ್ ತಾರೆಗಳ ಢಿಕ್ಕಿಯಿಂದ ಮೈದಳೆವ ಬಂಗಾರದ ಪ್ರಮಾಣ ಕಲ್ಪನೆಗೂ ನಿಲುಕುವುದಿಲ್ಲ, ಅದು ನಮ್ಮ ಧರೆಯ ಇಡೀ ದ್ರವ್ಯರಾಶಿಯ ಕನಿಷ್ಠ ಇಪ್ಪತ್ತು ಪಟ್ಟು! (ನಮ್ಮ ಭೂಮಿಯ ದ್ರವ್ಯರಾಶಿ ಆರು ಸಾವಿರ ಕೋಟಿ ಕೋಟಿ ಕೋಟಿ ಕಿಲೋಗ್ರಾಂ).

ಹೀಗೆ ರೂಪುಗೊಳ್ಳುವ ಬಂಗಾರದ ಪರಮಾಣುಗಳು ಬಿರುಗಾಳಿಯಲ್ಲಿ ಚದರುವ ಧೂಳಿನ ಕಣಗಳಂತೆ ಚದರಿ ಇಂಟರ್ ಸ್ಟೆಲ್ಲಾರ್ ಮ್ಯಾಟರ್‌ನಲ್ಲಿ ಬೆರೆಯುತ್ತವೆ. ಹಾಗೆ ಬಂಗಾರ ಸಹಿತವಾಗಿದ್ದ ದ್ರವ್ಯದ ಮಹಾರಾಶಿಯಿಂದಲೇ ನಮ್ಮ ಸೌರವ್ಯೂಹವೂ ರೂಪುಗೊಂಡಿದ್ದು ತಾನೇ? ಸಹಜವಾಗಿಯೇ ಘನರೂಪದ ಭೌಮಿಕ ಗ್ರಹಗಳಲ್ಲೂ ಕ್ಷುದ್ರಗ್ರಹಗಳಲ್ಲೂ ಬಂಗಾರದ ಪರಮಾಣುಗಳು ಬೆರೆತೇ ಇವೆ. ವಿಶೇಷ ಏನೆಂದರೆ ನಮ್ಮ ಭೂಮಿ ಇನ್ನೂ ರೂಪುಗೊಳ್ಳುತ್ತಿದ್ದಾಗ ನಿರಂತರ ಎರಗುತ್ತಿದ್ದ ಕ್ಷುದ್ರಗ್ರಹಗಳೂ (ಚಿತ್ರ.9), ಕಣಗ್ರಹಗಳೂ ಭೂ ದ್ರವ್ಯದಲ್ಲಿ ಬೆರೆತು ಅವುಗಳಲ್ಲಿದ್ದ ಬಂಗಾರವೂ ಭೂಮಿಯಲ್ಲಿ ಸೇರಿದೆ.

ಹಾಗೆ ನೇರವಾಗಿ ವ್ಯೋಮ ದ್ರವ್ಯದಿಂದಲೂ ನಂತರ ಕ್ಷುದ್ರ ಗ್ರಹಗಳಿಂದಲೂ ಭೂಮಿಗೆ ಬಂದಿರುವ ಬಂಗಾರದ ಪ್ರಮಾಣ ಅಷ್ಟಿಷ್ಟಲ್ಲ. ಧರೆಯ ಎಲ್ಲ ಪದರಗಳಲ್ಲೂ– ಎಂದರೆ ಗರ್ಭ, ಕವಚ, ತೊಗಟೆಗಳಲ್ಲೂ (ಚಿತ್ರ 15) ಬಂಗಾರ ಸಂಗ್ರಹವಾಗಿದೆ. ಧರೆಯ ಬಂಗಾರ ಸಂಗ್ರಹ ಭೂ ಗರ್ಭದಲ್ಲೇ ಗರಿಷ್ಠ. ಅಲ್ಲಿರುವ ಎಲ್ಲ ಬಂಗಾರವನ್ನೂ  ಹೊರತೆಗೆದರೆ ಇಡೀ ಭೂ ಮೇಲ್ಮೈ ಅನ್ನು– ನೆಲ, ಕಡಲು ಎಲ್ಲವನ್ನೂ– ಕನಿಷ್ಠ ಹದಿಮೂರು ಅಡಿ ದಪ್ಪದ ಅಪ್ಪಟ ಚಿನ್ನದ ಪದರದಿಂದ ಮುಚ್ಚಬಹುದು!

ಭೂ ನೆಲದಲ್ಲಿ ನಾಲ್ಕು ಕಿಲೋಮೀಟರ್ ಆಳ ಮೀರದಷ್ಟು ಪ್ರದೇಶದಲ್ಲೇ ಮುವ್ವತ್ತೈದು ಶತಕೋಟಿ ಟನ್ ಬಂಗಾರ ಇದೆ. ಮತ್ತು ಕಡಲಲ್ಲಿ ಎಂಭತ್ತೇಳು ಶತಕೋಟಿ ಟನ್ ಬಂಗಾರ ಬೆರೆತಿದೆ. ಆದರೆ ಈ ಎಲ್ಲ ಚಿನ್ನವನ್ನೂ ಲಾಭದಾಯಕವಾಗಿ ಹೊರ ತೆಗೆಯುವುದು ಸಾಧ್ಯವಿಲ್ಲ. ಏಕೆಂದರೆ ನೆಲದಲ್ಲಿ ಒಂದು ಶತಕೋಟಿಯಲ್ಲಿ ಮುವ್ವತ್ತೊಂದು ಭಾಗದಷ್ಟೇ ಅಲ್ಪ ಪ್ರಮಾಣದಲ್ಲಿ ಬಂಗಾರ ಬೆರೆತಿದೆ. ಕಡಲ ಜಲದ ಚಿನ್ನವನ್ನು ಪ್ರತ್ಯೇಕಿಸುವ ಸರಳ ಕ್ರಮ ಯಾವುದೂ ಇನ್ನೂ ಸಿದ್ದಿಸಿಲ್ಲ.

ಭೂ ನೆಲದ ಒಳಗಿನ ಮತ್ತು ಹೊರಗಿನ ವಿವಿಧ ವಿದ್ಯಮಾನಗಳಿಂದಾಗಿ ಉದಾಹರಣೆಗೆ ಜ್ವಾಲಾಮುಖಿ ಚಟುವಟಿಕೆ (ಚಿತ್ರ.10), ಅಂತರ್ಜಲ ಸಂಚಲನ, ನದೀ ಪ್ರವಹನ, ಶಿಥಿಲೀಕರಣ ಇತ್ಯಾದಿಗಳಿಂದಾಗಿ ಭೂ ನೆಲದ ಬಂಗಾರದ ಕಣಗಳು ಒಟ್ಟುಗೂಡುತ್ತ ನೆಲದ ಶಿಲೆಗಳ ಬಿರುಕು – ಸಂಧಿಗಳಲ್ಲಿ ಪುಡಿ ರೂಪದಲ್ಲಿ (ಚಿತ್ರ–3), ಕಾಳು ಹರಳು ಗಟ್ಟಿಗಳ ರೂಪದಲ್ಲಿ (ಚಿತ್ರ 1,2,4,5) ಶೇಖರಗೊಳ್ಳುತ್ತದೆ. ನದಿ ತಳಗಳಲ್ಲೂ ಸಂಗ್ರಹವಾಗುತ್ತವೆ. ಅಂಥ ಸ್ಥಳಗಳಲ್ಲಿ ಅನ್ವೇಷಿಸುವವರ, ಗಣಿ ತೋಡುವವರ ಕೈ ಸೇರುತ್ತದೆ. ಅತ್ಯಾಕರ್ಷಕವಾಗಿ, ಆಭರಣಯೋಗ್ಯವಾಗಿ, ಅಪರೂಪದ ವಸ್ತುವಾಗಿ, ಸರ್ವೋತ್ತಮ ವಿದ್ಯುದ್ವಾಹಕವಾಗಿ, ರಾಸಾಯನಿಕ ನಿರೋಧಕ ಗುಣ ಪಡೆದು..... ಹಾಗೆಲ್ಲ ಒಟ್ಟಾರೆ ಪರಮ ಶ್ರೇಷ್ಠ ಲೋಹವಾಗಿರುವ ಬಂಗಾರ ನಾನಾ ಉಪಯೋಗಗಳನ್ನೂ ಪಡೆದಿದೆ (ಚಿತ್ರ 6,7). ಎಷ್ಟು ಅದ್ಭುತ ಅಲ್ಲವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.