ಭಾನುವಾರ, ಮೇ 9, 2021
25 °C

ಕುಂದು ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದು ಕೊರತೆ

ಬೆಂಗಳೂರು ಒನ್ ಕೇಂದ್ರ ಆರಂಭಿಸಿ

ಬಿಬಿಎಂಪಿ 42ನೇ ವಾರ್ಡ್‌ ಮತ್ತು 69ನೇ ವಾರ್ಡ್‌ ಎರಡಕ್ಕೂ ಹಂಚಿಕೆಯಾಗಿರುವ ವಿಧಾನಸೌಧ ಬಡಾವಣೆ ಕಳೆದ 10 ವರ್ಷಗದಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ ಹಾಗೂ ಜನಸಂಖ್ಯೆಯೂ ಹೆಚ್ಚಳಗೊಂಡಿದೆ.

ವಿಧಾನಸೌಧ ಬಡಾವಣೆಯ ಸಾರ್ವಜನಿಕರು ತೆರಿಗೆ ತುಂಬಲು ಹಾಗೂ ವಿವಿಧ ಬಿಲ್‌ಗಳನ್ನು ಪಾವತಿ ಮಾಡಲು ಬೆಂಗಳೂರು ಒನ್ ಕೇಂದ್ರ ಹುಡುಕಿಕೊಂಡು ಮೂರು ಕಿ.ಮೀ ದೂರದ  ನಂದಿನಿ ಬಡಾವಣೆಗೆ ಹೋಗಬೇಕಿದೆ.

ಸಂಬಂಧಪಟ್ಟ ಅಧಿಕಾರಿಗಳು ವಿಧಾನಸೌಧ ಬಡಾವಣೆಯಲ್ಲಿ ‘ಬೆಂಗಳೂರು ಒನ್’ ಕೇಂದ್ರ ನಿರ್ಮಿಸಿ ಇಲ್ಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ.

–ಸ್ಥಳೀಯ ನಿವಾಸಿಗಳು

***

ಬಸ್‌ ಸೌಲಭ್ಯ ಕಲ್ಪಿಸಿ

ಲಗ್ಗೆರೆ ಮತ್ತು ನಂದಿನಿ ಬಡಾವಣೆಗೆ ಸಮೀಪವಿರುವ ವಿಧಾನಸೌಧ ಬಡಾವಣೆಗೆ ಬಸ್‌ಗಳ ಕೊರತೆಯಿದೆ. ಇಲ್ಲಿನ ನಿವಾಸಿಗಳು ಕೆ.ಆರ್.ಪೇಟೆಗೆ ಹೋಗಲು ಯಾವುದೇ ಬಸ್ ಸೌಲಭ್ಯ ಇಲ್ಲ. ಬಿ.ಎಂ.ಟಿ.ಸಿ ಅಧಿಕಾರಿಗಳು ಬಡಾವಣೆಯ ಜನಸಂಖ್ಯೆ ಮತ್ತು ಅವರ ಅವಶ್ಯಕತೆಯನ್ನು ಮನಗೊಂಡು ಶೀಘ್ರವಾಗಿ ಬಸ್ ಸಂಪರ್ಕ ಕಲ್ಪಿಸಲು ಮನವಿ.

–ರಾಜಾರಾಂ, ವಿಧಾನಸೌಧ ಬಡಾವಣೆ

***

ಒಳಚರಂಡಿ ಸರಿಪಡಿಸಿ

ಬನಶಂಕರಿ 2ನೇ ಹಂತ, ಅಗ್ನಿಶಾಮಕ ಘಟಕದ ಮುಂಭಾಗದ ಅಶೋಕವನ ಉದ್ಯಾನದ ರಸ್ತೆ ಕಾಮಗಾರಿಗೆಂದು ತೆರೆದಿದ್ದ ಒಳಚರಂಡಿಯನ್ನು ಮುಚ್ಚದೆ ಇರುವುದರಿಂದ ಸ್ಥಳೀಯರಿಗೆ ತೊಂದರೆಯಾಗಿದೆ.

ಚರಂಡಿಯಿಂದ ಸುತ್ತಮುತ್ತಲು ದುರ್ನಾತ ಹರಡಿದ್ದು, ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ರಿಪೇರಿ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ, ತೆರೆದಿರುವ ಒಳಚರಂಡಿಯನ್ನು ಮುಚ್ಚಬೇಕೆಂದು ಮನವಿ.

–ನಿವಾಸಿಗಳು, ಗಣೇಶ ಮಂದಿರ ವಾರ್ಡ್

**

ದಿನವೂ ಹಸಿಕಸ ತೆಗೆದುಕೊಳ್ಳಿ

ರಾಜಾಜಿನಗರ ಶಿವನಗರದಲ್ಲಿ ಪ್ರತಿದಿನ ಕಸ ತೆಗೆದುಕೊಂಡ ಹೋಗಲು ಬರುವ  ಆಟೊಗಳಲ್ಲಿ ತಿಂಗಳ ಎರಡನೇ ಶನಿವಾರ ಮತ್ತು ಬುಧವಾರ ಒಣಕಸವನ್ನು ಮಾತ್ರ ಪಡೆಯುತ್ತಾರೆ. ಇದರಿಂದ ಮನೆಗಳಲ್ಲಿ ಹಸಿಕಸ ಹೆಚ್ಚು ಉಳಿಯುತ್ತದೆ. ಸೊಳ್ಳೆ, ನೊಣ, ಜಿರಳೆಗಳು ಹೆಚ್ಚಾಗಲು ಕಾರಣವಾಗುತ್ತದೆ.

ಆದ್ದರಿಂದ ಒಣಕಸದ ಜೊತೆಗೂ ಹಸಿಕಸವನ್ನು ಪ್ರತಿದಿನವೂ ಕೊಂಡೊಯ್ಯುವಂತೆ ಮಾಡಿದರೆ ಒಳಿತು. ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಬೇಂದು ಮನವಿ ಮಾಡುತ್ತೇನೆ.

–ಶಿವು, ಶಿವನಗರ

***

ಕರೆಂಟ್‌ ತೆಗೆಯಬೇಡಿ

ಇದು ಪರೀಕ್ಷೆ ಸಮಯವಾದ್ದರಿಂದ ಸಂಜೆ ವೇಳೆ ವಿದ್ಯುತ್ ಕಡಿತ ಮಾಡಬೇಡಿ. ಟ್ರಾನ್ಸ್‌ಫಾರ್ಮರ್‌ ಸುಟ್ಟುಹೋದರೆ ಗಂಟೆಗಟ್ಟಲೇ ಕರೆಂಟ್‌ ತೆಗೆಯುತ್ತಾರೆ. ಸಮಯಕ್ಕೆ ಸರಿಯಾಗಿ ಟ್ರಾನ್ಸ್‌ಫಾರ್ಮರ್‌ ಸರಿಪಡಿಸಿ ಅಥವಾ ಹೊಸ ಟ್ರಾನ್ಸ್‌ಫಾರ್ಮರ್‌ ಅಳವಡಿಸಿ. ಕರೆಂಟ್‌ ತೆಗೆದು ವಿದ್ಯಾರ್ಥಿಗಳಿಗೆ ತೊಂದರೆ ಆಗುವುದನ್ನು ತಪ್ಪಿಸಿ.

–ಕೆಂಪೇಗೌಡ, ಭದ್ರಪ್ಪ ಬಡಾವಣೆ

***

ಸುಲಭ ದರ್ಶನ ಪ್ರಾಪ್ತಿಯಾಗಲಿ

ಪ್ರತಿವರ್ಷದ  ಶಿವರಾತ್ರಿ, ವೈಕುಂಠ ಏಕಾದಶಿ, ನವರಾತ್ರಿಯಂತಹ ಪ್ರಮುಖ ಹಬ್ಬ ದಿನಗಳಂದು ನಗರದ  ದೇವಾಲಯಗಳಲ್ಲಿ ದೇವರ ದರ್ಶನ ಪಡೆಯಲು ಸಹಸ್ರಾರು ಭಕ್ತರು ಸರದಿ ಸಾಲಿನಲ್ಲಿ ಕಾಯುವುದು ಮಾಮೂಲು.

ಆದರೆ ಈ ರೀತಿ ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಲ್ಲಲು ಹಿರಿಯ ನಾಗರಿಕ ಭಕ್ತಾದಿಗಳಿಗೆ ಸಾಧ್ಯವಾಗುವುದಿಲ್ಲ. ಹಣ ಇರುವವರು, ಶುಲ್ಕ ಕೊಟ್ಟು ವಿಶೇಷ ದರ್ಶನ ಪಡೆಯುತ್ತಾರೆ. ಆದರೆ ಎಲ್ಲಾ ಹಿರಿಯ ನಾಗರಿಕರಿಗೂ ಇದು ಸಾಧ್ಯವಾಗದು, ದೇವರ ದರ್ಶನ ಪಡೆಯಲು ಭಕ್ತಿ–ಶ್ರದ್ಧೆ ಇದ್ದರೂ, ಗಂಟೆಗಟ್ಟಲೆ ಸಾಮಾನ್ಯ ಸರದಿಯ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ಸಾಧ್ಯವಾಗದೆ, ನಿರಾಶರಾಗುತ್ತಾರೆ.

ಆದ್ದರಿಂದ ಬೆಂಗಳೂರು ಮಹಾನಗರವೂ ಸೇರಿದಂತೆ ಎಲ್ಲಾ ಪ್ರಮುಖ ದೇವಾಲಯಗಳಲ್ಲೂ ಹಿರಿಯ ನಾಗರಿಕರಿಗೆಂದೇ ಒಂದು ಪ್ರತ್ಯೇಕ ಸರದಿ ಸಾಲಿನ ವ್ಯವಸ್ಥೆ ಕಲ್ಪಿಸಿ, ಅವರು ನಿರಾಳವಾಗಿ, ಶ್ರಮವಿಲ್ಲದೆ, ಸಂತೋಷದಿಂದ ದೇವರ ದರ್ಶನ ಮಾಡಿ ಬರುವ ಉತ್ತಮ ವ್ಯವಸ್ಥೆಯನ್ನು ತಕ್ಷಣದಿಂದ ಮಾಡಲು ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಒಂದು ಸುತ್ತೋಲೆ ಹೊರಡಿಸಿ. ಇದನ್ನು ಸರ್ಕಾರಿ, ಖಾಸಗಿ ದೇವಾಲಯಗಳೂ ಜಾರಿಗೆ ತರುವಂತೆ ಮಾಡಬೇಕೆಂದು ವಿನಂತಿ.

-ಎ.ಕೆ. ಅನಂತಮೂರ್ತಿ, ಬೆಂಗಳೂರು

**

‘ಜನಸ್ಪಂದನ’ದ ಫಲಶ್ರುತಿ

‘ಪ್ರಜಾವಾಣಿ’ ಕಳೆದ ತಿಂಗಳು ಆಯೋಜಿಸಿದ್ದ ‘ಜನಸ್ಪಂದನ’ ಕಾರ್ಯಕ್ರಮದಿಂದ ನಮ್ಮದೊಂದು ಸಮಸ್ಯೆ ನಿವಾರಣೆಯಾಗಿದೆ.

ಸಾರ್ವಜನಿಕರು ನೀಡಿದ ಮನವಿಗೆ ಸ್ಪಂದಿಸಿರುವ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಾಪೂಜಿನಗರದ 134ನೇ ವಾರ್ಡ್‌ನಲ್ಲಿ ‘ಬೆಂಗಳೂರು ಒನ್’ ಕೇಂದ್ರ ಆರಂಭಿಸಿದ್ದಾರೆ. ಹಂಪಿ ನಗರ ವಾರ್ಡ್ ನಂ. 133ರಲ್ಲಿ ‘ಬೆಂಗಳೂರು ಒನ್’ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಫಲಕಗಳನ್ನು ಅಳವಡಿಸಲಾಗಿದೆ. ಧನ್ಯವಾದಗಳು.

–ರವಿಕುಮಾರ್ ಎಚ್. ‘ಬಿಪ್ಯಾಕ್’

**

ರಸ್ತೆ ರಿಪೇರಿ ಮಾಡಿಸಿ

ಸಿಬಿಐ ರಸ್ತೆ, ಗಂಗಾನಗರ ಬಳಿಯ ಲಕ್ಷ್ಮಯ್ಯ ಬ್ಲಾಕ್ 3ನೇ ಕ್ರಾಸ್‌ನಲ್ಲಿ ರಸ್ತೆಯ ಟಾರು ಕಿತ್ತು ಹೋಗಿ ಗುಂಡಿಗಳು ನಿರ್ಮಾಣವಾಗಿವೆ. ರಸ್ತೆಗೆ ಹಾಕಿದ್ದ ಜಲ್ಲಿಕಲ್ಲುಗಳು ಹೊರಬಂದು ವಾಹನ ಸಂಚಾರ ಕಷ್ಟಕರವಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನವಹಿಸುತ್ತಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ವಹಿಸಬೇಕಾಗಿ ವಿನಂತಿ.

–ಹೇಮಚಂದ್ರ ರೈ, ಗಂಗಾನಗರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.