ಮೈತ್ರಿ ಮಾಡಿಕೊಳ್ಳದೇ ಕೈಸುಟ್ಟುಕೊಂಡ ಪ್ರತಿಪಕ್ಷಗಳು

7

ಮೈತ್ರಿ ಮಾಡಿಕೊಳ್ಳದೇ ಕೈಸುಟ್ಟುಕೊಂಡ ಪ್ರತಿಪಕ್ಷಗಳು

ಡಿ.ಉಮಾಪತಿ
Published:
Updated:
ಮೈತ್ರಿ ಮಾಡಿಕೊಳ್ಳದೇ ಕೈಸುಟ್ಟುಕೊಂಡ ಪ್ರತಿಪಕ್ಷಗಳು

ನವದೆಹಲಿ: ನರೇಂದ್ರ ಮೋದಿಯವರ ಹೊಚ್ಚ ಹೊಸ ಘನ ವಿಜಯ ಘೋರ ಪರಾಭವವೂ ಆಗಬಹುದಿತ್ತು! ಅಂದುಕೊಂಡಿರುವಷ್ಟೇನೂ ಅಜೇಯ ಅಲ್ಲ ಪ್ರಧಾನಿ ಮೋದಿ ಎನ್ನುತ್ತದೆ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದ ಅಂಕಿ ಅಂಶಗಳ ವಿಶ್ಲೇಷಣೆ.

 

ಬಿಹಾರ ಮಾದರಿಯ ಮಹಾಮೈತ್ರಿಕೂಟವೊಂದು ಮೊನ್ನೆ ಉತ್ತರಪ್ರದೇಶದಲ್ಲಿ ಬಿಜೆಪಿಗೆ ಎದುರಾಗಿ ಮೈದಳೆದಿದ್ದರೆ ನರೇಂದ್ರ ಮೋದಿ ಪವಾಡ ಜರುಗುತ್ತಲೇ ಇರಲಿಲ್ಲ. ಬಿಹಾರದ ಮಾದರಿಯ ಫಲಿತಾಂಶಗಳೇ ಹೊರಬೀಳುತ್ತಿದ್ದವು. ಬಿಜೆಪಿ ಮತ್ತೊಮ್ಮೆ ಮಹಾಮುಖಭಂಗ ಎದುರಿಸಬೇಕಿತ್ತು. ದೇಶ ರಾಜಕಾರಣ, ಈ ಹೊತ್ತಿಗೆ ಹೊಸ ದಿಕ್ಕು ದೆಸೆಗಳ ಹುಡುಕಾಟದಲ್ಲಿ ತೊಡಗಿರುತ್ತಿತ್ತು.

 

ಒಟ್ಟು 403ರ ಪೈಕಿ 324 ಕ್ಷೇತ್ರಗಳಲ್ಲಿ ಆರಿಸಿ ಬಂದಿರುವ ಬಿಜೆಪಿಯ ಗೆಲುವು ಐತಿಹಾಸಿಕ. ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ಅವರ ಸಮಾಜವಾದಿ ಪಾರ್ಟಿ-ಕಾಂಗ್ರೆಸ್ ಮೈತ್ರಿಕೂಟದ ಸಾಧನೆ ಕೇವಲ 54 ಸೀಟುಗಳಿಗೆ ಸೀಮಿತವಾಯಿತು. ಮಾಯಾವತಿ ಅವರ ಬಹುಜನ ಸಮಾಜ ಪಾರ್ಟಿಯಂತೂ 19 ಸೀಟುಗಳ ಹೊಸ ಪಾತಾಳಕ್ಕೆ ಕುಸಿಯಿತು.

 

2015ರ ಕಡೆಯ ಭಾಗದಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿಯೂ ಮೋದಿ ಪ್ರಚಂಡ ಪ್ರಚಾರ ನಡೆಸಿದ್ದರು. ಕೋಮು ಧ್ರುವೀಕರಣದ ಕಿಡಿಗಳೂ ಸಿಡಿದಿದ್ದವು. ಮೋದಿ ಸೋತರೆ ಪಾಕಿಸ್ತಾನದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಲಾಗುತ್ತದೆ ಎಂದಿದ್ದರು ಅಮಿತ್ ಷಾ.

 

ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡಲಿದ್ದಾರೆ ನಿತೀಶ್- ಲಾಲೂ ಎಂದು ಹೆದರಿಸಿದ್ದರು ಮೋದಿ. ಬಿಜೆಪಿಯನ್ನು ಗೆಲ್ಲಿಸಿದರೆ ಬಿಹಾರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡುವ ಆಮಿಷವನ್ನೂ ಒಡ್ಡಲಾಗಿತ್ತು.

 

ಆದರೂ ಬಿಹಾರ ಮೋದಿಯವರಿಗೆ ಒಲಿಯಲಿಲ್ಲ. ಯಾದವೇತರ ಹಿಂದುಳಿದ ವರ್ಗಗಳು, ದಲಿತರು ಮತ್ತು ಮಹಾದಲಿತ ಜನವರ್ಗಗಳನ್ನು ನಿತೀಶ್ ಕುಮಾರ್ ಅದಾಗಲೇ ಸಂಯುಕ್ತ ಜನತಾದಳದ ತೆಕ್ಕೆಗೆ ತೆಗೆದುಕೊಂಡು ಆಗಿತ್ತು. ಇಂತಹ ನಿತೀಶ್ ಕುಮಾರ್ ಜೊತೆ ಕೈ ಜೋಡಿಸಿದ್ದರು ಲಾಲೂ.ಮುಸಲ್ಮಾನರನ್ನೂ ಸೆಳೆದು ಯಾದವ ಮತ ಭಂಡಾರಕ್ಕೆ ಜೋಡಿಸುವ ಶಕ್ತಿ ಜೋಡಿಗೆ ಇತ್ತು. ಜೊತೆ ಸೇರಿತ್ತು ಕಾಂಗ್ರೆಸ್ ಪಕ್ಷ. ಪರಿಣಾಮವಾಗಿ ಎದ್ದು ನಿಂತ ಮಹಾಮೈತ್ರಿ ಕೂಟ ಮೋದಿ ಹಾದಿಯ ಅಡ್ಡಗಲ್ಲಾಯಿತು. 273 ಸ್ಥಾನಗಳ ಪೈಕಿ ಮಹಾಮೈತ್ರಿ ಕೂಟ 179ನ್ನು ಗೆದ್ದುಕೊಂಡಿತ್ತು.

 

ಉತ್ತರಪ್ರದೇಶದಲ್ಲೂ ಇಂತಹುದೇ ಮಹಾಮೈತ್ರಿಕೂಟ ತಲೆ ಎತ್ತಿದ್ದರೆ ಚುನಾವಣಾ ಫಲಿತಾಂಶಗಳು ತಿರುವು ಮುರುವಾಗುತ್ತಿದ್ದವು. ಸಮಾಜವಾದಿ ಪಾರ್ಟಿ(ಎಸ್.ಪಿ)- ಕಾಂಗ್ರೆಸ್ ಜೊತೆಗೆ ಬಹುಜನಸಮಾಜ ಪಾರ್ಟಿ (ಬಿ.ಎಸ್.ಪಿ.) ಸೇರಿ ಚುನಾವಣೆಗೆ ಮುನ್ನವೇ ಸೀಟು ಹಂಚಿಕೆ ಮಾಡಿಕೊಂಡು ಸ್ಪರ್ಧಿಸಿದ್ದರೆ ದೊಡ್ಡ ಗೆಲುವಿನತ್ತ ಸಾಗುತ್ತಿದ್ದವು ಎಂಬ ಸಂಗತಿಯನ್ನು ಫಲಿತಾಂಶ ವಿಶ್ಲೇಷಣೆ ನಿಚ್ಚಳವಾಗಿ ಸೂಚಿಸುತ್ತದೆ.

 

403ರ ಪೈಕಿ ಪ್ರತಿ ಕ್ಷೇತ್ರದಲ್ಲಿಯೂ ಬಿಜೆಪಿ ಅಥವಾ ಮಿತ್ರಪಕ್ಷಗಳೇ ಎಸ್.ಪಿ. ಅಥವಾ ಬಿ.ಎಸ್.ಪಿ. ಎದುರಾಳಿಗಳು. 203 ಸೀಟುಗಳಲ್ಲಿ ಎಸ್.ಪಿ.-ಕಾಂಗ್ರೆಸ್ ಕೂಟ ಎರಡನೆಯ ಸ್ಥಾನದಲ್ಲಿದ್ದರೆ, 116ರಲ್ಲಿ ಬಿ.ಎಸ್.ಪಿ.ಯದು ಎರಡನೆಯ ಸ್ಥಾನ.

 

ಎರಡನೆಯ ಮತ್ತು ಮೂರನೆಯ ಸ್ಥಾನದಲ್ಲಿರುವ ಈ ಎರಡೂ ಪಕ್ಷಗಳು ಗಳಿಸಿದ ಮತಗಳನ್ನು ಒಟ್ಟುಗೂಡಿಸಿದರೆ ವಿಜಯೀ ಅಭ್ಯರ್ಥಿ ಗಳಿಸಿದ ಮತಗಳ ಪ್ರಮಾಣವನ್ನು ಮೀರುತ್ತದೆ. ಇಂತಹ ಕ್ಷೇತ್ರಗಳ ಸಂಖ್ಯೆ 198. ಎಸ್.ಪಿ. ಮತ್ತು ಕಾಂಗ್ರೆಸ್ ಕೂಟ ಗೆದ್ದಿರುವ ಕ್ಷೇತ್ರಗಳ ಸಂಖ್ಯೆ 54. ಬಿ.ಎಸ್.ಪಿ. 19 ಕ್ಷೇತ್ರಗಳಲ್ಲಿ ಗೆದ್ದಿದೆ.

 

ಈ ಮೂರೂ ಸಂಖ್ಯೆಗಳನ್ನು ಕೂಡಿದರೆ ದೊರೆಯುವ ಮೊತ್ತ 271. ಮೈತ್ರಿಕೂಟಕ್ಕೆ ರಾಷ್ಟ್ರೀಯ ಲೋಕದಳ ಸೇರಿದ್ದರೆ 271ಕ್ಕೆ ಇನ್ನೂ ಹತ್ತು ಸೀಟುಗಳು ಸೇರ್ಪಡೆಯಾಗುತ್ತಿದ್ದವು. ಅಂದ ಹಾಗೆ ಉತ್ತರಪ್ರದೇಶ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ ಬೇಕಿರುವ ಸ್ಥಾನಗಳು 202.

 

ಈ ಲೆಕ್ಕಾಚಾರದಂತೆ ಬಿಜೆಪಿ ಗೆಲುವು 125 ಸೀಟುಗಳಿಗಿಂತ ಮೇಲಕ್ಕೆ ಏರುತ್ತಿರಲಿಲ್ಲ. 2012 ರಲ್ಲಿ 47 ಸೀಟುಗಳನ್ನು ಗೆದ್ದಿದ್ದ ಬಿಜೆಪಿ ಈ ಸಲ 265 ಹೆಚ್ಚು ಸೀಟುಗಳನ್ನು ಗಳಿಸಿದೆ.

 

ಮಹಾಮೈತ್ರಿ ಏರ್ಪಟ್ಟಿದ್ದರೆ ಕೋಮು ಧ್ರುವೀಕರಣದ ತಂತ್ರ ಕೂಡ ಫಲ ನೀಡುತ್ತಿರಲಿಲ್ಲ. ಉದಾಹರಣೆಗೆ ಸಂಗೀತ್ ಸೋಮ್ ಈ ತಂತ್ರದಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ತಲೆಯಾಳುಗಳಲ್ಲಿ ಒಬ್ಬರು. ಅವರು ಸ್ಪರ್ಧಿಸಿದ್ದ ಸರ್ಧಾನ ಕ್ಷೇತ್ರದಲ್ಲಿಯೂ ಈ ಉಪಾಯದ ಪ್ರಯೋಗ ನಡೆದು 97,921 ಮತಗಳನ್ನು ಗಳಿಸಿ ಆರಿಸಿ ಬಂದಿದ್ದರು ಸೋಮ್.

 

ಆದರೆ ಎರಡು ಮತ್ತು ಮೂರನೆಯ ಸ್ಥಾನದಲ್ಲಿದ್ದ ಎಸ್.ಪಿ. ಮತ್ತು ಬಿ.ಎಸ್.ಪಿ. ಗಳಿಸಿದ ಮತಗಳು ಅನುಕ್ರಮವಾಗಿ 76,296 ಮತ್ತು 57,239 ಎರಡನ್ನೂ ಕೂಡಿದರೆ 1,33,535 ಇದೇ ಲೆಕ್ಕಾಚಾರದಂತೆ ಕೋಮುವಾದಿ ಕಿಚ್ಚು ಹೊತ್ತಿ ಉರಿದ ಮುಝಫ್ಫರ್‌ ನಗರ ಕ್ಷೇತ್ರದಲ್ಲಿಯೂ ಎಸ್.ಪಿ. ಮತ್ತು ಬಿ.ಎಸ್.ಪಿ. ಕೈ ಜೋಡಿಸಿ ಗೆಲ್ಲಬಹುದಿತ್ತು ಎಂಬುದನ್ನು ಅಂಕಿ ಅಂಶಗಳು ಹೇಳುತ್ತವೆ.

 

324 ಸ್ಥಾನ ಗೆದ್ದಿರುವ ಬಿಜೆಪಿ ಗಳಿಸಿದ ಮತಗಳ ಶೇಕಡಾವಾರು ಪ್ರಮಾಣ 39.7. ಕಡಿಮೆ ಸೀಟು ಗೆದ್ದರೂ ಈ ಲೆಕ್ಕದಲ್ಲಿ ಬಿ.ಎಸ್.ಪಿ. ಎರಡನೆಯ ಸ್ಥಾನದಲ್ಲಿದೆ. ಈ ಪಕ್ಷ ಗಳಿಸಿದ ಮತಗಳು ಶೇ 22.2ರಷ್ಟು. ಎಸ್.ಪಿ. ಶೇ 21.8ರಷ್ಟು ಮತ ಗಳಿಸಿದರೆ ಕಾಂಗ್ರೆಸ್ಸಿನ ಗಳಿಕೆ ಶೇ 6.2. ಮಹಾಮೈತ್ರಿ ಕೂಟ ಘಟಿಸಿದ್ದರೆ ಎಸ್.ಪಿ.- ಬಿ.ಎಸ್.ಪಿ.- ಕಾಂಗ್ರೆಸ್ ನ ಒಟ್ಟು ಶೇಕಡಾವಾರು ಮತಗಳಿಕೆ 50.2ರಷ್ಟಾಗುತ್ತಿತ್ತು.

 

ಕಾಂಗ್ರೆಸ್ಸಿನ ಪ್ರಥಮ ಕುಟುಂಬದ ಭದ್ರಕೋಟೆ ಎನಿಸಿದ್ದ ಅಮೇಠಿ, ಎಸ್.ಪಿ. ಮತ್ತು ಕಾಂಗ್ರೆಸ್ ಕೈ ತಪ್ಪಿ ಬಿಜೆಪಿಗೆ ದಕ್ಕಿದ್ದೂ ಮತಗಳು ಹಂಚಿ ಹೋದ ಕಾರಣದಿಂದ. ಈ ಕ್ಷೇತ್ರದಲ್ಲಿ ಎಸ್.ಪಿ. ಮತ್ತು ಕಾಂಗ್ರೆಸ್ ನಡುವೆ ಮೈತ್ರಿ ಏರ್ಪಡಲಿಲ್ಲ. ಎಸ್.ಪಿ. ಅಭ್ಯರ್ಥಿಗೆ 59 ಸಾವಿರ, ಬಿ.ಎಸ್.ಪಿ.ಗೆ 30 ಸಾವಿರ ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ 20 ಸಾವಿರ ಮತಗಳು ದೊರೆತವು. ವಿಜಯಿಯಾದ ಬಿಜೆಪಿ ಅಭ್ಯರ್ಥಿ ಗಳಿಸಿದ ಮತಗಳು 64 ಸಾವಿರ.

 

ಮುಸಲ್ಮಾನರ ಮತಗಳು ಹೆಚ್ಚಾಗಿ ಎಸ್.ಪಿ.-ಕಾಂಗ್ರೆಸ್ ಕೂಟದತ್ತ ವಾಲಿದ್ದರೂ, ಏಕಶಿಲೆಯಂತೆ ಒಂದೇ ಪಕ್ಷಕ್ಕೆ ಬೀಳದೆ ಹಂಚಿ ಹೋಗಿರುವ ಅಂಶವೂ ಈ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಸಂಭಲ್ ಕ್ಷೇತ್ರದಲ್ಲಿ ಎಸ್.ಪಿ. ಅಭ್ಯರ್ಥಿ ಇಕ್ಬಾಲ್ ಮಹ್ಮದ್ 79,248 ಮತ ಗಳಿಸಿ ಗೆದ್ದಿದ್ದಾರೆ.ಈ ಕ್ಷೇತ್ರದಲ್ಲಿ ಎರಡನೆಯ ಸ್ಥಾನದಲ್ಲಿರುವ ಅಭ್ಯರ್ಥಿ ಆಲ್ ಇಂಡಿಯಾ ಮಜ್ಲೀಸ್ ಇತ್ತೇಹದುಲ್ ಮುಸ್ಲಿಮೀನ್‌ಗೆ ಸೇರಿದವರು. ಅವರಿಗೆ ಬಿದ್ದಿರುವ ಮತಗಳು 60,426. ಚಾಮ್ರಾವ ಕ್ಷೇತ್ರದಲ್ಲಿ ಗೆದ್ದ ಅಭ್ಯರ್ಥಿ ಎಸ್.ಪಿ.ಗೆ ಸೇರಿದ್ದರೆ ಎರಡನೆಯ ಸ್ಥಾನದಲ್ಲಿದ್ದ ಉಮೇದುವಾರ ಬಿ.ಎಸ್.ಪಿ.ಗೆ ಸೇರಿದವರು. ಇಬ್ಬರೂ ಮುಸಲ್ಮಾನರು.

 

ಎಸ್.ಪಿ. ಮತ್ತು ಬಿ.ಎಸ್.ಪಿ ಎರಡೂ ಪಕ್ಷಗಳು ಮುಸಲ್ಮಾನ ಅಭ್ಯರ್ಥಿಗಳನ್ನೇ ಹೂಡಿದ ಫಲವಾಗಿ ಹಿಂದೂ ಮತಗಳು ಧ್ರುವೀಕರಣಗೊಂಡು ಬಿಜೆಪಿ ಗೆದ್ದಿರುವ ಉದಾಹರಣೆಗಳು ಅನೇಕ. ಉದಾಹರಣೆಗೆ ಕಾಂತ್ ಕ್ಷೇತ್ರದಲ್ಲಿ ಎಸ್.ಪಿ. ಮತ್ತು ಬಿ.ಎಸ್.ಪಿ. ಸೇರಿದ್ದರೆ ಬಿಜೆಪಿ ಅಭ್ಯರ್ಥಿ 40 ಸಾವಿರ ಮತಗಳ ಅಂತರದ ಸೋಲನ್ನು ಎದುರಿಸಬೇಕಿತ್ತು.

 

ಫಿರೋಜಾಬಾದ್, ದೇವಬಂದ್, ಬುಧಾನ ಬುಲಂದ್ ಶಹರ್, ಬಾಂಗೆರ್ ಮಾವು ಹಾಗೂ ಗುನ್ನಾರ ಎಂಬ ಕ್ಷೇತ್ರಗಳದೂ ಇದೇ ಕತೆ.ಆದರೆ ಗೋಮಾಂಸ ತಿಂದ ಅಪಾದನೆ ಮೇರೆಗೆ ಇಖ್ಲಾಕ್ ಅಹ್ಮದ್ ಹತ್ಯೆಗೀಡಾದ ದಾದ್ರಿ ಕ್ಷೇತ್ರದಲ್ಲಿ ಬಿಜೆಪಿ 40 ಸಾವಿರ ಮತಗಳ ಅಂತರದ ಭಾರಿ ಗೆಲುವು ಗಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry