ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಎಂಬ ಆಶಾಕಿರಣ

Last Updated 21 ಮಾರ್ಚ್ 2017, 19:30 IST
ಅಕ್ಷರ ಗಾತ್ರ
ಗೆಳೆಯರೊಂದಿಗೆ ಇತ್ತೀಚೆಗೆ ದೆಹಲಿಗೆ ಹೋಗಿದ್ದೆ. ಅಲ್ಲಿದ್ದ ನಾಲ್ಕು ದಿನಗಳಲ್ಲಿ, ಆ ನಗರದಲ್ಲಿರುವ ಹೆಚ್ಚೂಕಡಿಮೆ ಎಲ್ಲ ಸ್ಮಾರಕಗಳಿಗೂ ಹೋಗಿ ಬಂದೆ. ಆ ಸಂದರ್ಭದಲ್ಲಿ ನನಗಾದ ಆಶ್ಚರ್ಯವೆಂದರೆ, ಈ ಸ್ಮಾರಕಗಳಿಗೆ ಭೇಟಿ ಕೊಡುವ ಸಂದರ್ಶಕರ ಅತ್ಯಂತ ಹೆಚ್ಚು ಜನಸಂದಣಿ ಕಂಡದ್ದು ಗಾಂಧಿ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ. ಇಳಿಸಂಜೆಯ ಹೊತ್ತಿನಲ್ಲೂ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿತ್ತು.
 
ಸಾರ್ವಜನಿಕ ಜೀವನದಲ್ಲಿ ಗಾಂಧಿ ಕಾಲ ಮುಗಿದಿದೆ ಎಂಬ ನಂಬಿಕೆ ಸರ್ವವ್ಯಾಪಿಯಾಗುತ್ತಿರುವ ಮತ್ತು ಇದಕ್ಕೆ ತಕ್ಕಂತೆ ರಾಷ್ಟ್ರ ರಾಜಕಾರಣವು ನಿರ್ಣಾಯಕ ತಿರುವೊಂದನ್ನು ತೆಗೆದುಕೊಳ್ಳುತ್ತಿರುವಂತೆ ತೋರುತ್ತಿರುವ ಈ ದಿನಗಳಲ್ಲಿ, ಗಾಂಧಿಗೆ ಗೌರವ ತೋರುವ ಜನರ ಈ ವಿಶೇಷ ಆಸಕ್ತಿ ಕುತೂಹಲಕರ  ಸಂಗತಿಯೇ ಆಗಿದೆ.

ಇಲ್ಲಿ ನಾನು ಕಂಡ ಇನ್ನೊಂದು ವಿಶೇಷ ಸಂಗತಿಯೆಂದರೆ, ರಾಜ್‌ಘಾಟ್‌ಗೆ ಭೇಟಿ ನೀಡುವ ಈ ಜನಸಮೂಹದಲ್ಲಿ, ಇತರ ಸ್ಮಾರಕಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುವ ಆಧುನಿಕ ದಿರಿಸು ಧರಿಸಿದ ಮೇಲ್ಮಧ್ಯಮ ಮತ್ತು ಪ್ರತಿಷ್ಠಿತ ವರ್ಗಕ್ಕೆ ಸೇರಿದವರಂತೆ ತೋರುವ ಜನ ಕಡಿಮೆ. ಭಾರತದ ಸಾಮಾನ್ಯ ಜನ, ಬಡಬಗ್ಗರು, ಆದಿವಾಸಿಗಳು, ಮಹಿಳೆಯರು ಮತ್ತು ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚು.
 
ಇದರಿಂದ ಗೊತ್ತಾಗುವುದೇನೆಂದರೆ, ನಮ್ಮ ರಾಜಕಾರಣ ಗಾಂಧಿಯ ಚಿತ್ರವನ್ನು ಎಷ್ಟೇ ವಿರೂಪಗೊಳಿಸಿದ್ದರೂ, ನಮ್ಮ ಜನಮಾನಸದಲ್ಲಿ ನಾವು ಸರಳವಾಗಿ ಮತ್ತು ಸುಲಭವಾಗಿ ವಿವರಿಸಲಾಗದ ಯಾವುದೋ ಒಂದು ಆಳದ ಕಾರಣದಿಂದಾಗಿ ಗಾಂಧಿ ಇನ್ನೂ ಜೀವಂತವಿದ್ದಾರೆ.

ಸಾಮಾನ್ಯ ಜನ ಅವರಲ್ಲಿ ಗೌರವ, ಶ್ರದ್ಧೆಗಳನ್ನಾಗಲೀ ಅಥವಾ ಪ್ರೀತಿ, ಆಸಕ್ತಿಗಳನ್ನಾಗಲೀ ಕಳೆದುಕೊಂಡಿಲ್ಲ. ಇಂದಿನ ಕಲುಷಿತ ರಾಜಕಾರಣ ಮತ್ತು ಸಾರ್ವಜನಿಕ ಜೀವನವನ್ನು ಗಾಂಧಿ ಚಿಂತನೆಗಳ ಮೂಲಕ ತಕ್ಕಮಟ್ಟಿಗಾದರೂ ಸಹನೀಯಗೊಳಿಸಿ ತಹಬಂದಿಗೆ ತರಬಹುದೆಂದು ನಂಬಿದವರಿಗೆ ಇಲ್ಲಿದೆ ಒಂದು ಆಶಾಕಿರಣ ಎಂದು, ಗಾಂಧಿ ಸಮಾಧಿಗೆ ಭೇಟಿಕೊಟ್ಟು ಹೊರಬರುತ್ತಿದ್ದ ಜನಸಮೂಹದ ಮುಖಚರ್ಯೆಗಳನ್ನು ಗಮನಿಸಿದಾಗ ನನಗನ್ನಿಸಿತು. 
 
ಆದರೆ ಅದೇ ಸಮಯದಲ್ಲಿ, ಇಂದಿನ ಸವಾಲುಗಳನ್ನು ಎದುರಿಸಲು ಇಂದು ನಮಗೆ ಬೇಕಾದ ಗಾಂಧಿಯನ್ನು ಪುನರ್‌ ಅನ್ವೇಷಿಸಿಕೊಳ್ಳಲು ಅಧ್ಯಯನಶೀಲತೆ, ವಿವೇಕ, ಜಾಣ್ಮೆ ಬೇಕು. ಜೊತೆಗೇ ಗಾಂಧಿ ಯುಗದ ಜೀವನ ದೃಷ್ಟಿ ಮತ್ತು ಮೌಲ್ಯಗಳು, ಅರ್ಪಣಾ ಮನೋಭಾವ, ಸಂಘಟನಾಶೀಲತೆ, ಶ್ರದ್ಧೆ ಮತ್ತು ಶಿಸ್ತುಗಳ ಅಗತ್ಯವೂ ಇದೆ ಎಂದು ಅನ್ನಿಸಿದ್ದನ್ನೂ ಇಲ್ಲಿ ದಾಖಲಿಸಬೇಕು.
ಡಿ.ಎಸ್.ನಾಗಭೂಷಣ,  ಶಿವಮೊಗ್ಗ
 
ಚಾಣಾಕ್ಷ ಕಂಪೆನಿಗಳು
‘ನೂರು ಚಾನೆಲ್‌ಗಳನ್ನು ವೀಕ್ಷಿಸುವ ಸೌಲಭ್ಯ ನೀಡಿದಲ್ಲಿ ₹ 130 ಶುಲ್ಕ ವಿಧಿಸಬೇಕು. ಅದಕ್ಕಿಂತ ಹೆಚ್ಚು ಪಡೆದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 21). ಈ ಕಾನೂನು ಕೇವಲ ಕೇಬಲ್ ಟಿ.ವಿ.ಯವರಿಗೆ ಅನ್ವಯವಾಗುತ್ತದೆ. 
 
ವಿವಿಧ ಚಾನೆಲ್‌ ವೀಕ್ಷಣೆಗೆ ಸಂಬಂಧಿಸಿದಂತೆ ಟಾಟಾ ಸ್ಕೈ, ಏರ್‌ಟೆಲ್, ವಿಡಿಯೊಕಾನ್‌ನಂತಹ ಬೃಹತ್ ಕಂಪೆನಿಗಳು ಹಲವಾರು ಯೋಜನೆಗಳನ್ನು ನಮ್ಮ ಮುಂದಿಡುತ್ತವೆ ಹಾಗೂ ಒಂದೊಂದು ಯೋಜನೆಗೂ ₹ 300ಕ್ಕೂ ಹೆಚ್ಚು ದರ ವಿಧಿಸುತ್ತವೆ; ಅಲ್ಲದೆ, ಬಹು ಚಾಣಾಕ್ಷ ಬುದ್ಧಿಯುಳ್ಳ ಈ ಕಂಪೆನಿಗಳು ನಮಗೆ ಬೇಕಾದ ಚಾನೆಲ್‌ಗಳನ್ನು ಒಂದೇ ಯೋಜನೆಯಡಿ ನೀಡುವುದೇ ಇಲ್ಲ. ಅವುಗಳಿಗಾಗಿ ಬೇರೆ ಬೇರೆ ಯೋಜನೆಗಳಿರುತ್ತವೆ ಹಾಗೂ ಯೋಜನೆಯ ಹೊರತಾಗಿ ಬೇಕಾಗುವ ಪ್ರತಿಯೊಂದು ಚಾನೆಲ್‌ಗೂ ₹ 40ರಂತೆ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡುತ್ತವೆ. 
 
ಹೀಗೆ, ನಮ್ಮ ಆಸಕ್ತಿಯಂತೆ ಚಾನೆಲ್‌ಗಳನ್ನು ಪಡೆಯಲು ನಾವು ಕನಿಷ್ಠ ನಾಲ್ಕು ಯೋಜನೆಗಳನ್ನಾದರೂ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಅರ್ಥಾತ್, ನಾವು ಈ ಬೃಹತ್ ಕಂಪೆನಿಗಳಿಗೆ ಕನಿಷ್ಠ ₹ 450 ತೆರಬೇಕಾಗುತ್ತದೆ. ಆದರೆ, ಕೇಬಲ್‌ನವರು ಈ ಸೌಲಭ್ಯಕ್ಕೆ ಪಡೆಯುವ ಮೊತ್ತ ₹ 300 ಮಾತ್ರ. ಹೀಗಾಗಿ, ಸರ್ಕಾರ ಬೃಹತ್ ಕಂಪೆನಿಗಳು ವಿಧಿಸುವ ಬೆಲೆಯನ್ನೂ ನಿಯಂತ್ರಿಸುವ ಧೈರ್ಯ ಮಾಡಬೇಕು.
ಉಡುಪಿ ಅನಂತೇಶ ರಾವ್,  ಬೆಂಗಳೂರು
 
ನಕಲಿ ಸಂಸ್ಥೆ: ಎಚ್ಚರವಿರಲಿ
ದೇಶದಲ್ಲಿ 23 ನಕಲಿ ವಿಶ್ವವಿದ್ಯಾಲಯಗಳು ಹಾಗೂ ಅನುಮತಿ ಪಡೆಯದೆ ಎಂಜಿನಿಯರಿಂಗ್‌ ಸೇರಿದಂತೆ ಇತರ ತಾಂತ್ರಿಕ ಶಿಕ್ಷಣ ನೀಡುತ್ತಿರುವ 279 ನಕಲಿ ಸಂಸ್ಥೆಗಳನ್ನು ಗುರುತಿಸಲಾಗಿದೆ (ಪ್ರ.ವಾ., ಮಾರ್ಚ್‌ 20). ಇದು, ವಿದ್ಯಾರ್ಥಿಗಳ ಜೀವನದಲ್ಲಿ ಆಟವಾಡುವ ಆತಂಕಕಾರಿ ಬೆಳವಣಿಗೆ.
ಇಂಥ ಸಂಸ್ಥೆಗಳು ಶಿಕ್ಷಣ ಕ್ಷೇತ್ರವನ್ನು ವ್ಯಾಪಾರವನ್ನಾಗಿ ಮಾಡಿಕೊಳ್ಳುತ್ತಿವೆ. ಉನ್ನತ ಅಧ್ಯಯನ ಪಡೆಯಬಯಸುವ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕಾಗಿದೆ. ಸಂಬಂಧಪಟ್ಟ ಇಲಾಖೆಗಳು ಸಹ ಈ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. 
ಸುದರ್ಶನ ಬಾಳನಾಯ್ಕ, ಚಿಕ್ಕೋಡಿ
 
ಧನ್ಯತೆ!
ಟ್ರಂಪ್‌ ಸಲಹೆಗಾರ್ತಿ ಕೆಲಿಯಾನ್‌ ಕಾನ್ವೆ ಸೋಫಾದ ಮೇಲೆ ಮಂಡಿಯೂರಿ ಕುಳಿತಿರುವ (ವಿ)ಚಿತ್ರ (ಪ್ರ.ವಾ., ಮಾರ್ಚ್‌ 1). ಅಮೆರಿಕ ಯಾರ ಮುಂದೆಯೂ ಮಂಡಿಯೂರುವುದಿಲ್ಲ ಎಂಬುದನ್ನು ತನ್ಮೂಲಕ ಅಕ್ಷರಶಃ, ಆದರೆ ನಕಾರಾತ್ಮಕವಾಗಿ ತೋರಿಸುವ ಉದ್ದೇಶವೆ ಅವರದು? ಅಥವಾ, ಪಾಪ, ಏನೋ ಮಂಡಿ(ಡೆ)ಯ ತೊಂದರೆಯಿರಬಹುದೆ? (ಅಂತೂ ನೂತನಾಧ್ಯಕ್ಷರಿಗೆ ತಕ್ಕ ಸಲಹೆಗಾತಿ; ಸಂಗಾತಿ ಅಲ್ಲದಿರಬಹುದು). ಅಂದಹಾಗೆ, ಎಂಥೆಂಥ ಗಣ್ಯಾತಿಗಣ್ಯರು ಕಾನ್ವೆಯವರ ವಿ–ಶಿಷ್ಟ ಅಂ(ಲಂ)ಗ ಭಂಗಿಯನ್ನು ಕೆಕ್ಕರಿಸಿ, ಕಣ್ಣರಳಿಸಿ (ಕೆಲವರು ಸನ್ಮಿತರಾಗಿ) ವೀಕ್ಷಿಸುತ್ತಿದ್ದಾರೆ! ಧನ್ಯೆ ಕಾನ್ವೆ!
ಸಿ.ಪಿ.ಕೆ., ಮೈಸೂರು
 
ಮರೆತುಬಿಡಿ...
ಎಸ್‌ಪಿಬಿಗೆ ನೋಟಿಸ್(ಪ್ರ.ವಾ.,ಮಾರ್ಚ್‌ 20).
ಇಳಯರಾಜರೇ, ನೀವು ವಸಂತವಾದರೆ
ಎಸ್‌ಪಿಬಿ ಕೋಗಿಲೆಯಂತೆ
ವಸಂತವು ಮೈದುಂಬಿದರೆ ತಾನೆ
ಕೋಗಿಲೆ ಮೈಮರೆತು ಹಾಡುವುದು?
ಆದರೆ ವಸಂತವೇ ಕೋಗಿಲೆಗೆ
ನೋಟಿಸ್‌ ನೀಡಿಬಿಟ್ಟರೆ
ಕೋಗಿಲೆಯ ವಕಾಲತ್ತು ವಹಿಸುವವರಾರು?
ಗಾನಸುಧೆಯುಂಡು ನಲಿಯುತ್ತಿದ್ದ
ಕೋಟಿಕೋಟಿ ಶ್ರೋತೃಗಳ ಗತಿ ಏನು?
‘ಸಂತೋಷಕ್ಕೆ ಹಾಡು ಸಂತೋಷಕ್ಕೆ’
ಎಂದು ನೀವೇ ರಾಗ ಸಂಯೋಜಿಸಿದ
ಹಾಡನ್ನು ಮರೆತಿರಾ?
ಮರೆಯಲಾರದಂಥಾದ್ದೇನೇ ಆಗಿದ್ದರೂ
ಸಂಗೀತ ರಸಿಕರಿಗಾಗಿ ಮರೆತುಬಿಡಿ
ಮರೆತು ಕೋಗಿಲೆಗೆ ಸ್ಫೂರ್ತಿ ನೀಡಿ.
‘ಜೊತೆಯಲಿ ಜೊತೆ ಜೊತೆಯಲಿ
ಇರುವೆ’ನೆಂದು ಹೇಳಿಬಿಡಿ.
ಜೆ.ಬಿ.ಮಂಜುನಾಥ, ಪಾಂಡವಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT