7

ಒಂದು ಸಾಧಾರಣ ಚಟುವಟಿಕೆ ಲೆಕ್ಕಿಗ

ಯು.ಬಿ. ಪವನಜ
Published:
Updated:
ಒಂದು ಸಾಧಾರಣ ಚಟುವಟಿಕೆ ಲೆಕ್ಕಿಗ

ಇತ್ತೀಚೆಗೆ ಕೈಗೆ ಕಟ್ಟುವ ಆರೋಗ್ಯಪಟ್ಟಿಗಳು (health band) ಜನಪ್ರಿಯವಾಗುತ್ತಿವೆ. ಸಾಮಾನ್ಯವಾಗಿ ಕೈಗೆ ಕಟ್ಟಿಕೊಳ್ಳಲಾಗುವ ಈ ಪಟ್ಟಿಗಳು ಎಲ್ಲ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಿ ಸೂಕ್ತ ಕಿರುತಂತ್ರಾಂಶದ ಮೂಲಕ ಸ್ಮಾರ್ಟ್‌ಫೋನಿಗೆ ವರ್ಗಾಯಿಸುತ್ತವೆ. ಈ ಪಟ್ಟಿಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿರುವಂತಹ ಎಕ್ಸೆಲೆರೋಮೀಟರ್ ಮತ್ತು ಇನ್ನು ಕೆಲವು ಪಟ್ಟಿಗಳಲ್ಲಿ ಹೃದಯ ಬಡಿತವನ್ನು ದಾಖಲಿಸುವ ಸಂವೇದಕವೂ ಇರುತ್ತವೆ.

ಹೃದಯ ಬಡಿತ ದಾಖಲಿಸುವ ಸೌಲಭ್ಯವಿಲ್ಲದ ಪಟ್ಟಿಯನ್ನು ಚಟುವಟಿಕೆ ಲೆಕ್ಕಿಗ (activity tracker) ಎಂದು ಕರೆಯಬಹುದು. ಇದು ಸಂಗ್ರಹಿಸಿದ ಮಾಹಿತಿಗಳನ್ನು ವಿಶ್ಲೇಷಿಸಿ ಸಾಧನವನ್ನು ಧರಿಸಿದವನು ನಿದ್ರಿಸುತ್ತಿದ್ದಾನೆಯೇ, ನಡೆಯುತ್ತಿದ್ದಾನೆಯೇ, ಓಡುತ್ತಿದ್ದಾನೆಯೇ ಎಂದು ಲೆಕ್ಕ ಹಾಕುತ್ತದೆ, ಜೊತೆಗೆ ಎಷ್ಟು ಹೆಜ್ಜೆ ನಡೆದಿದ್ದಾನೆ ಅಥವಾ ಓಡಿದ್ದಾನೆ ಎಂದು ಲೆಕ್ಕಹಾಕುವುದರ ಜೊತೆ ಎಷ್ಟು ಕ್ಯಾಲೊರಿ ಖರ್ಚು ಮಾಡಿದ್ದಾರೆ ಎಂದೂ ತಿಳಿಸುತ್ತದೆ. ಇಂತಹ ಪಟ್ಟಿಗಳು ಮಾರುಕಟ್ಟೆಯಲ್ಲಿ ಹಲವಾರಿವೆ.

ಈ ಆರೋಗ್ಯಪಟ್ಟಿಗಳು ಮತ್ತು ಚಟುವಟಿಕೆ ಲೆಕ್ಕಿಗಗಳು ಧರಿಸಿದಾತ ನಡೆದ ಮತ್ತು ಓಡಿದ ಬಗ್ಗೆ ನೀಡುವ ಮಾಹಿತಿಗಳು ಬಹುಮಟ್ಟಿಗೆ ನಿಖರವಾಗಿರುತ್ತವೆ. ಆದರೆ ನಿದ್ರೆಯ ಮಟ್ಟಿಗಿನ ಮಾಹಿತಿಗಳು ಎಷ್ಟು ನಿಖರ ಎಂಬ ಬಗ್ಗೆ ಹಲವು ಚರ್ಚೆಗಳು ನಡೆದಿವೆ. ಧರಿಸಿದಾತ ಎಷ್ಟು ಗಂಟೆಗೆ ಮಲಗಿದ, ಎಷ್ಟು ಗಂಟೆಗೆ ಆತನಿಗೆ ನಿದ್ರೆ ಬಂತು, ಎಷ್ಟು ಗಂಟೆ ಆಳವಾಗಿ ನಿದ್ರಿಸಿದ ಎಂದೆಲ್ಲ ಅದು ಮಾಹಿತಿ ನೀಡುತ್ತದೆ. ಈ ಮಾಹಿತಿ ನೀಡುವುದು ಅದು ಧರಿಸಿದಾತನ ಕೈ ಭೂಮಿಗೆ ಸಮಾಂತರವಾಗಿ ಅಲುಗಾಡದೆ ಎಷ್ಟು ಕಾಲ ಇತ್ತು ಎಂಬುದನ್ನು ಆಧರಿಸಿ ಆಗಿರುತ್ತದೆ. ನೀವು ಕುಳಿತೇ ನಿದ್ರಿಸಿದ್ದರೆ? ಈ ಬಗ್ಗೆ ಇನ್ನೂ ಸರಿಯಾಗಿ ತೀರ್ಮಾನಕ್ಕೆ ಯಾರೂ ಬಂದಿಲ್ಲ.

ಕೆಲವು ಆರೋಗ್ಯಪಟ್ಟಿಗಳ ಬಗ್ಗೆ ಈ ಅಂಕಣದಲ್ಲಿ ಬರೆಯಲಾಗಿತ್ತು. ಈ ಸಲ ನಮ್ಮ ವಾರದ ಗ್ಯಾಜೆಟ್ ಟೈಟಾನ್ ಕಂಪೆನಿಯ ಫಾಸ್ಟ್‌ಟ್ರ್ಯಾಕ್ ರಿಫ್ಲೆಕ್ಸ್ (Fastrack Reflex) ಎಂಬ ಚಟುವಟಿಕೆ ಲೆಕ್ಕಿಗ.

ಗುಣವೈಶಿಷ್ಟ್ಯಗಳು

ಧರಿಸಬಲ್ಲ ಚಟುವಟಿಕೆ ಲೆಕ್ಕಿಗ, ಪಟ್ಟಿಯ ಮಧ್ಯದಲ್ಲಿ ಸಂವೇದಕ (sensor) ಇದೆ. ಸಂವೇದಕದ ಗಾತ್ರ 45 x 20 x10 ಮಿ.ಮೀ., ಸಂವೇದಕದ ಒಂದು ಭಾಗದಲ್ಲಿ ಚಾರ್ಜರ್‌ಗೆ ಸಂಪರ್ಕಿಸಲು ಯುಎಸ್‌ಬಿ ಕನೆಕ್ಟರ್‌ ಇದೆ, ಮೇಲ್ಭಾಗದಲ್ಲಿ 0.91 ಇಂಚು ಗಾತ್ರದ ಓಎಲ್‌ಇಡಿ ಪರದೆ ಇದೆ, ಇದರ ರೆಸೊಲೂಶನ್ 128 x 32 ಪಿಕ್ಸೆಲ್, ಬ್ಲೂಟೂತ್ ಸಂಪರ್ಕ, 70mAh ಶಕ್ತಿಯ ಲಿಥಿಯಂ ಅಯಾನ್ ಬ್ಯಾಟರಿ, ಯುಎಸ್‌ಬಿ ಚಾರ್ಜಿಂಗ್, ಚಾರ್ಜಿಂಗ್ ಸಮಯ 60 ನಿಮಿಷ, ಒಮ್ಮೆ ಚಾರ್ಜ್ ಮಾಡಿದರೆ ಸುಮಾರು 10-12 ದಿನ ಬಾಳಿಕೆ ಬರುತ್ತದೆ, ಮೂರು ಬಣ್ಣಗಳಲ್ಲಿ ಲಭ್ಯ, ಬೆಲೆ ₹1,995.

ಇದು ಪ್ರಮುಖವಾಗಿ ಯುವಜನಾಂಗವನ್ನು ಗುರಿಯಾಗಿಟ್ಟುಕೊಂಡು ತಯಾರಾದ ಸಾಧನ. ಅಂತೆಯೇ ಇದರ ಗಾತ್ರ ಇದೇ ರೀತಿಯ ಇತರೆ ಬಹುತೇಕ ಸಾಧನಗಳಿಗಿಂತ ಜಾಸ್ತಿ ಇದೆ. ಸ್ವಲ್ಪ ದಪ್ಪ ಎಂದೇ ಹೇಳಬಹುದು. ಸಂವೇದಕದ ಗಾತ್ರ ಮೇಲೆ ನೀಡಲಾಗಿದೆ. ಈ ಸಂವೇದಕವನ್ನು ಮೇಲೆ ಒಂದು ಬಣ್ಣ ಮತ್ತು ಒಳಗಡೆ ಇನ್ನೊಂದು ಬಣ್ಣ ಇರುವ ಪಟ್ಟಿಯಲ್ಲಿ ಅಳವಡಿಸಲಾಗಿದೆ. ಇದರ ಪ್ರಮುಖ ಭಾಗ, ಅಂದರೆ ಸಂವೇದಕವನ್ನು ಕುಳ್ಳಿರಿಸುವ ಭಾಗವು ಸುಮಾರು 15 ಮಿ.ಮೀ. ದಪ್ಪ ಇದ್ದು, ಅಗಲವು ಸುಮಾರು 25 ಮಿ.ಮೀ. ಇದೆ. ದೊಡ್ಡ ವಾಚ್‌ಗಳನ್ನು ಫ್ಯಾಶನ್‌ಗಾಗಿ ಕಟ್ಟಿಕೊಳ್ಳುವ ಯುವಜನಾಂಗಕ್ಕೆಂದೇ ಇದನ್ನು ಹೀಗೆ ದೊಡ್ಡದಾಗಿ ಇರುವಂತೆ ವಿನ್ಯಾಸ ಮಾಡಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಸಂವೇದಕದ ಮೇಲ್ಭಾಗದಲ್ಲಿ ಓಎಲ್‌ಇಡಿ ಪರದೆ ಇದೆ. ಸಂವೇದಕದ ದೇಹದ ಬಣ್ಣ ಕಪ್ಪು. ಆದುದರಿಂದ ಈ ಡಿಸ್‌ಪ್ಲೇ ಇದೆ ಎಂದು ಗೊತ್ತಾಗುವುದಿಲ್ಲ. ಸಂವೇದಕದ ಮೇಲ್ಭಾಗದ ಒಂದು ಬದಿಯಲ್ಲಿ ವೃತ್ತಾಕಾರದ ಸ್ವಲ್ಪ ಗುಂಡಿಯಾಕಾರದ ಸ್ಥಳ ಇದೆ. ಇದು ಬಟನ್ ಆಗಿ ಕೆಲಸ ಮಾಡುತ್ತದೆ. ಅದರ ಮೇಲೆ ತಟ್ಟಿದರೆ ಬೇರೆ ಬೇರೆ ಕೆಲಸಗಳನ್ನು ಅದು ಮಾಡುತ್ತದೆ.

ಉದಾಹರಣೆಗೆ, ಒಂದು ಸಲ ತಟ್ಟಿದರೆ ಗಂಟೆ, ಎರಡು ಸಲ ತಟ್ಟಿದರೆ ಎಷ್ಟು ಹೆಜ್ಜೆ ನಡೆದಿದ್ದೀರಿ ಎಂಬ ಮಾಹಿತಿ, ಮೂರು ಸಲ ತಟ್ಟಿದರೆ ಎಷ್ಟು ಕ್ಯಾಲೊರಿ ಖರ್ಚು ಮಾಡಿದ್ದೀರಿ, ನಾಲ್ಕು ಸಲ ತಟ್ಟಿದರೆ ಎಷ್ಟು ದೂರ ನಡೆದಿದ್ದೀರಿ ಎಂಬ ಮಾಹಿತಿ, ಹೀಗೆ ಹಲವು ಮಾಹಿತಿಗಳನ್ನು ತೋರಿಸುತ್ತದೆ. ಈ ಎಲ್ಲ ಮಾಹಿತಿಗಳು ಓಎಲ್‌ಇಡಿ ಪರದೆಯಲ್ಲಿ ನೀಲಿ ಅಕ್ಷರಗಳಲ್ಲಿ ಕಾಣಿಸುತ್ತವೆ. ಉಳಿದ ಸಮಯದಲ್ಲಿ ಅಲ್ಲೊಂದು ಪರದೆ/ಡಿಸ್‌ಪ್ಲೇ ಇರುವುದು ಗೊತ್ತೇ ಆಗುವುದಿಲ್ಲ.

ಟೈಟಾನ್ ಕಂಪೆನಿ ವಾಚ್ ತಯಾರಿಕೆಗೆ ಪ್ರಸಿದ್ಧ. ಇದೀಗ ಮೊದಲ ಬಾರಿಗೆ ಅವರು ಇಂತಹ ಸಾಧನ ತಯಾರಿಸಿದ್ದಾರೆ. ಇದರಲ್ಲಿ ಹೃದಯ ಬಡಿತವನ್ನು ಅಳೆದು ದಾಖಲಾತಿ ಮಾಡುವ ಸವಲತ್ತು ಇಲ್ಲ. ಈ ಸಾಧನದ ಪೂರ್ತಿ ಪ್ರಯೋಜನ ಪಡೆಯಬೇಕಿದ್ದರೆ ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಸೂಕ್ತ ಕಿರು ತಂತ್ರಾಂಶವನ್ನು (ಆ್ಯಪ್) ಹಾಕಿಕೊಳ್ಳಬೇಕು. ಈ ಕಿರುತಂತ್ರಾಂಶ ಮಾತ್ರ ಯಾರೋ ತಂತ್ರಾಂಶ ತಯಾರಿಯನ್ನು ಈಗಷ್ಟೆ ಕಲಿಯುತ್ತಿರುವವರು ತಯಾರಿಸಿದಂತಿದೆ. ಕೆಲವೊಮ್ಮೆ ಫೋನಿನ ಜೊತೆ ಸಂಪರ್ಕ ಆಗುವುದೇ ಇಲ್ಲ. ಸಂವೇದಕದಲ್ಲಿಯ ಮಾಹಿತಿ ತಾನಾಗಿಯೇ ಫೋನಿಗೆ ವರ್ಗಾವಣೆ ಆಗುವುದಿಲ್ಲ. ಆಗಾಗ ಅದನ್ನು ನವೀಕರಿಸುತ್ತಿರಬೇಕು (ರಿಫ್ರೆಶ್ ಮಾಡುತ್ತಿರಬೇಕು). ಕರೆ ಬಂದಾಗಲೂ ಎಲ್ಲ ಸಲ ತೋರಿಸುವುದಿಲ್ಲ.  ತನ್ನ ನಿದ್ದೆಯ ಸಮಯ ಯಾವುದು ಎಂದು ಧರಿಸಿದಾತನೇ ದಾಖಲಿಸಬೇಕು. ಇದು ಧರಿಸಿದಾತ ನಿದ್ದೆ ಮಾಡುತ್ತಿದ್ದಾನೆಯೇ ಎಂದು ತಾನಾಗಿಯೇ ದಾಖಲಿಸುವುದಿಲ್ಲ. ನನ್ನ ಒನ್‌ಪ್ಲಸ್ 3 ಫೋನಿನ ಜೊತೆ ಸಂಪರ್ಕ ಒಂದೇ ಸಲ ಆಗಿದ್ದು. ನಂತರ ಆಗಲೇ ಇಲ್ಲ. ಈ ಸಾಧನವನ್ನು ಮತ್ತು ಅದರ ಕಿರುತಂತ್ರಾಂಶವನ್ನು ಬಳಸುವುದು ಹೇಗೆ ಎಂಬುದನ್ನು ವಿವರಿಸುವ ಕೈಪಿಡಿಯನ್ನೂ ನೀಡಿಲ್ಲ.

ಇದೇ ಬೆಲೆಗೆ ದೊರೆಯುವ ಶಿಯೋಮಿಯವರ ಎಂಐ ಬ್ಯಾಂಡ್2 ಇದಕ್ಕಿಂತ ಉತ್ತಮ ಸಾಧನ ಎನ್ನಬಹುದು.

ಇದರ ವಿಡಿಯೊ ವಿಮರ್ಶೆ ನೋಡಬೇಕಿದ್ದರೆ bit.ly/gadgetloka271v ಜಾಲತಾಣಕ್ಕೆ ಭೇಟಿ ನೀಡಿ.

**

ವಾರದ ಆ್ಯಪ್: ಹೆಲಿಕಾಪ್ಟರ್ ಹಾರಿಸಿ

ಗಣಕ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಆಡಬಹುದಾದ ಹಲವು ಆಟಗಳಲ್ಲಿ ಪ್ರತ್ಯನುಕರಣೆಯ (simulation) ಆಟಗಳೂ ಸೇರಿವೆ. ಇಂತಹ ಆಟಗಳಲ್ಲಿ ಒಂದು ನೈಜ ಸನ್ನಿವೇಶವನ್ನು ಕೃತಕವಾಗಿ ಸೃಷ್ಟಿಸಿ ಅದನ್ನು ಆಡಲಾಗುತ್ತದೆ. Flight simulator ಈ ಮಾದರಿಯ ಆಟಗಳಲ್ಲಿ ತುಂಬ ಪ್ರಖ್ಯಾತವಾದುದು. ಈ ಮಾಲಿಕೆಯಲ್ಲಿ ಹೆಲಿಕಾಪ್ಟರ್ ಹಾರಿಸುವ ಆಟಗಳೂ ಸೇರಿವೆ. 

ಅಂತಹ ಒಂದು ಆಟ ಉಚಿತವಾಗಿ ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ Helicopter Simulator 2015 Free ಎಂದು ಹುಡುಕಬೇಕು ಅಥವಾ bit.ly/gadgetloka271 ಜಾಲತಾಣಕ್ಕೆ ಭೇಟಿ ನೀಡಿ ಅದನ್ನು ಹಾಕಿಕೊಳ್ಳಬೇಕು. ತುಂಬ ಉತ್ತಮ ಆಟ ಎಂದು ಹೇಳುವಂತಿಲ್ಲವಾದರೂ ಸಮಯ ಕಳೆಯಲು ತೊಂದರೆಯಿಲ್ಲ. ಎಲ್ಲ ಆಟಗಳಂತೆ ಇದರಲ್ಲೂ ಹಲವು ಹಂತಗಳು, ಹಲವು ಮಾದರಿಯ ಹೆಲಿಕಾಪ್ಟರ್‌ಗಳು ಇವೆ. ಕೆಲವನ್ನು ಮಾತ್ರ ಉಚಿತವಾಗಿ ಆಡಬಹುದು.

**

ಗ್ಯಾಜೆಟ್‌ ಸುದ್ದಿ: ಅಮೆಜಾನ್ ಇಕೊ ಬಳಸುವಾಗ ಎಚ್ಚರ

ಅಮೆಜಾನ್‌ನವರು ಇಕೊ ಎಂಬ ಸಾಧನ ತಯಾರಿಸಿದ್ದಾರೆ. ಅದಕ್ಕೆ ಧ್ವನಿಯ ಮೂಲಕ ಆಜ್ಞೆ ನೀಡಬಹುದು. ಧ್ವನಿ ಆದೇಶಗಳ ಮೂಲಕ  ಅಮೆಜಾನ್‌ನಿಂದ ಉತ್ಪನ್ನಗಳನ್ನೂ ಕೊಳ್ಳಬಹುದು. ಈ ಸವಲತ್ತನ್ನು ಬಳಸಿ ಅಮೆರಿಕದಲ್ಲಿ 6 ವರ್ಷದ ಬಾಲೆಯೊಬ್ಬಳು ಒಂದು ಬೊಂಬೆ ಮನೆಯನ್ನು ಪೋಷಕರಿಗೆ ಅರಿವಿಲ್ಲದೆ ತರಿಸಿದ್ದಳು. ಆದುದರಿಂದ ಅಮೆಜಾನ್ ಇಕೊ ಬಳಸುವವರು ಎಚ್ಚರಿಕೆಯಿಂದ ಇರುವುದು ಒಳಿತು.

**

ಗ್ಯಾಜೆಟ್‌ ಸಲಹೆ: ಮಾರ್ತಾಂಡ ರಾಜಾಪುರ ಅವರ ಪ್ರಶ್ನೆ: ₹12,000ಕ್ಕೆ ಉತ್ತಮ ಫೋನ್ ಯಾವುದು? ಕೆಲಸದ ವೇಗ ಉತ್ತಮವಾಗಿರಬೇಕು.

ಉ:  ಶಿಯೋಮಿ ರೆಡ್‌ಮಿ ನೋಟ್ 4.

***

ಗ್ಯಾಜೆಟ್‌ ತರ್ಲೆ

‘ಹಲೋ, ನಾವು ....ನಿಂದ ಫೋನ್ ಮಾಡ್ತಾ ಇರೋದು’

‘ಸರಿ, ಏನಾಗ್ಬೇಕಿತ್ತು?’

‘ಸಾರ್, ನಿಮ್ಮ ಫೋನಿಗೆ ಒಂದು ಒಳ್ಳೆ ಆಫರ್ ಇದೆ’

‘ಹೌದಾ, ಆದ್ರೆ ನನ್ನ ಫೋನ್‌ಗೆ ಯಾವ ಆಫರೂ ಬೇಕಾಗಿಲ್ಲ’

‘ನೋಡಿ ಸಾರ್, ಆಫರ್ ತುಂಬ ಚೆನ್ನಾಗಿದೆ’

‘ನೋಡಿ, ನನ್ನ ಫೋನಿಗೆ ಈಗಾಗ್ಲೆ ನಾನು ಬ್ಯಾಕ್ ಕವರ್, ಅದಕ್ಕೊಂದು ಹ್ಯಾಂಡಲ್, ಫ್ರಂಟ್‌ಗೆ ಟೆಂಪರ್ಡ್‌ ಗ್ಲಾಸ್, ಕಾರಲ್ಲಿಡಲು ಸ್ಟ್ಯಾಂಡ್ ಎಲ್ಲ ಇದೆ. ಇನ್ನು ಯಾವ ಆಫರೂ ನನಗೆ ಬೇಕಾಗಿಲ್ಲ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry