ಸೋಮವಾರ, ಡಿಸೆಂಬರ್ 9, 2019
17 °C

ಬೇಳೆಕಾಳು ಸಮೃದ್ಧ ಬೆಳೆ ನಿರೀಕ್ಷೆ: ಕೇಂದ್ರ

Published:
Updated:
ಬೇಳೆಕಾಳು ಸಮೃದ್ಧ ಬೆಳೆ ನಿರೀಕ್ಷೆ: ಕೇಂದ್ರ

ನವದೆಹಲಿ : ಪ್ರಸಕ್ತ ವರ್ಷ ಬೇಳೆಕಾಳುಗಳ ಉತ್ಪಾದನೆಯು ಸಮೃದ್ಧವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಬೇಳೆಕಾಳುಗಳ ಉತ್ಪಾದನೆಯು ಗರಿಷ್ಠ ಮಟ್ಟದಲ್ಲಿ ಇದ್ದರೂ, ದೇಶದಲ್ಲಿನ ಬೇಡಿಕೆ ಪೂರೈಸುವ ಮಟ್ಟದಲ್ಲಿ ಪೂರೈಕೆ ಇರುವುದಿಲ್ಲ. ಎರಡರಿಂದ ಮೂರು ವರ್ಷಗಳಲ್ಲಿ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಪೂರ್ವಭಾವಿ ಅಂದಾಜಿನ ಪ್ರಕಾರ, ಬೇಳೆಕಾಳುಗಳ ಉತ್ಪಾದನೆಯು 2.21 ಕೋಟಿ ಟನ್‌ಗಳಷ್ಟು ಇರಲಿದೆ. ಇದು ದೇಶದಲ್ಲಿನ ಬೇಡಿಕೆ ಪೂರೈಸಲು  ಸಾಲುವುದಿಲ್ಲ. ಹೀಗಾಗಿ ಆಮದು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

ದೇಶದ ಕೆಲ ಮಾರುಕಟ್ಟೆಗಳಲ್ಲಿ ಬೇಳೆಕಾಳುಗಳ ಬೆಲೆಗಳು ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಕಡಿಮೆ ಮಟ್ಟಕ್ಕೆ ಕುಸಿದಿವೆ ಎನ್ನುವ ವರದಿಗಳಲ್ಲಿ ಹುರುಳಿಲ್ಲ ಎಂದೂ ಸಚಿವರು ಸ್ಪಷ್ಟಪಡಿಸಿದರು. ‘ಬೆಲೆಗಳು ಸ್ಥಿರವಾಗಿರುವಂತೆ ನೋಡಿಕೊಳ್ಳಲಾಗುವುದು’ ಎಂದರು.

ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದರೆ ಬೇಳೆಕಾಳುಗಳ ಉತ್ಪಾದನೆಯೂ ಹೆಚ್ಚಲಿದೆ ಎನ್ನುವ ವಾದಕ್ಕೆ ಪ್ರತಿಕ್ರಿಯಿಸಿದ ಸಚಿವರು,  ‘ಎರಡು ವರ್ಷಗಳಲ್ಲಿ ಎರಡು ಬಾರಿ ಎಂಎಸ್‌ಪಿ ಹೆಚ್ಚಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲೇ ಇದು ಗರಿಷ್ಠ ಪ್ರಮಾಣದಲ್ಲಿ ಇದೆ’ ಎಂದರು. ‘ಬೇಳೆಕಾಳುಗಳ 20 ಲಕ್ಷ ಟನ್‌ಗಳಷ್ಟು ಕಾಪು ದಾಸ್ತಾನು ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದು ಆಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಹೇಳಿದರು.

ಪ್ರತಿಕ್ರಿಯಿಸಿ (+)