ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಜ್ಞಾನ ಸ್ವಂತದ್ದಲ್ಲ!

Last Updated 25 ಮಾರ್ಚ್ 2017, 5:15 IST
ಅಕ್ಷರ ಗಾತ್ರ

ಯಾವುದೇ ವಸ್ತು, ವಿಷಯ, ಜ್ಞಾನದ ಬಗ್ಗೆ ಅಧಿಕಾರವನ್ನಾಗಲೀ ಸ್ವಾಮ್ಯವನ್ನಾಗಲೀ ಸಾಧಿಸುವುದು ಅಥವಾ ಹೊಂದುವುದು ಪ್ರಾಚೀನ ಭಾರತೀಯ ಮಾನಸಿಕತೆಗೆ ಹೊರತಾದದ್ದು. ವೇದಕಾಲದಿಂದಲೂ ಇಂಥ ಮನೋಧರ್ಮ ಎಚ್ಚರವಾಗಿದ್ದುದು ಸ್ಪಷ್ಟ. ಇದಕ್ಕೆ ನಿದರ್ಶನವಾಗಿ ಈಶಾವಾಸ್ಯ ಉಪನಿಷತ್ತಿನ ಆರಂಭವನ್ನೇ ನೋಡಬಹುದು: ‘ಈಶಾವಾಸ್ಯಮಿದಂ ಸರ್ವಮ್‌’– ಸೃಷ್ಟಿಯೆಲ್ಲವೂ ಭಗವಂತನಿಗೆ ಸೇರಿದ್ದು.

ಭಾರತೀಯ ಚಿಂತನೆಯ ಮೂಲನೆಲೆಯನ್ನು ಈ ಮಂತ್ರದಲ್ಲಿ ಗುರುತಿಸಬಹುದು. ಭಾರತೀಯವಾದ ಎಲ್ಲ ಜ್ಞಾನದ ಆಕರವನ್ನಾಗಿಯೂ ಮೂಲವನ್ನಾಗಿಯೂ ‘ವೇದ’ವನ್ನು ಎಣಿಸಲಾಗಿದೆ. ವೇದವನ್ನು ‘ಅಪೌರುಷೇಯ’ ಎನ್ನುತ್ತದೆ ಪರಂಪರೆ. ‘ಮನುಷ್ಯರಿಂದ ಉಂಟಾದದ್ದು ಅಲ್ಲ’ ಎಂದು ಇದರರ್ಥ.  ಹೀಗೆ ಎಲ್ಲ ರೀತಿಯ ಜ್ಞಾನವೂ ಅಪೌರುಷೇಯವಾದದ್ದರಿಂದ ನಾವು ಯಾವುದೇ ಜ್ಞಾನ, ವಿದ್ಯೆಯ ಬಗ್ಗೆ ಹಕ್ಕನ್ನು ಚಲಾಯಿಸುವುದು ತಪ್ಪು ಎಂಬುದು ಇಲ್ಲಿರುವ ತಾತ್ಪರ್ಯ. ಪ್ರಾಚೀನ ಕವಿ, ಋಷಿ, ದಾರ್ಶನಿಕ, ಶಾಸ್ತ್ರಕಾರರಲ್ಲಿ ಈ ಮನೋಧರ್ಮ ಸಹಜವಾಗಿರುವುದನ್ನು ಕಾಣಬಹುದು. (ಇದಕ್ಕೆ ಅಪವಾದಗಳೂ ಇವೆಯಾದರೂ ಅಂಥವು ತೀರ ಕಡಿಮೆ.)

ಕೃತಜ್ಞತೆ ಸಹಜಗುಣವಾಗಿರಬೇಕು ಎಂಬ ನೈತಿಕಪ್ರಜ್ಞೆಗೆ ಸಮಾಜದಲ್ಲಿ ಹೆಚ್ಚಿನ ಮನ್ನಣೆಯಿದ್ದಿತು. ರಾಮನ ಗುಣಗಳನ್ನು ಪಟ್ಟಿಮಾಡುವಾಗ ಅವನು ‘ಕೃತಜ್ಞ’ ಎನ್ನುವುದನ್ನು ವಿಶೇಷವಾಗಿಯೇ ಹೇಳಲಾಗಿದೆ. ಯಾವುದೇ ಒಂದು ಕೆಲಸ, ಅದು ಒಳ್ಳೆಯದ್ದಾಗಿರಲಿ ಅಥವಾ ಕೆಟ್ಟದ್ದಾಗಿರಲಿ – ಅದನ್ನು ಮಾಡುವವನಷ್ಟೇ ಅಲ್ಲ, ಮಾಡಲು ಅವಕಾಶ ಒದಗಿಸಿದವನು, ಪ್ರೇರಣೆ ಕೊಟ್ಟವನು, ಒಪ್ಪಿದವನು– ಈ ನಾಲ್ಕು ಜನರು ಅದರ ಫಲಾಫಲಗಳಲ್ಲಿ ಸಮಭಾಗಿಗಳು ಎನ್ನುವುದನ್ನು ಶಾಸ್ತ್ರಗಳು ಎತ್ತಿಹಿಡಿಯುತ್ತವೆ. ಎಲ್ಲ ರೀತಿಯ ಸಾಮಾಜಿಕ, ಬೌದ್ಧಿಕ ಚಟುವಟಿಕೆಗಳು ಸಾಮೂಹಿಕವಾದವು ಎಂಬ ಧ್ವನಿಯನ್ನು ಇಲ್ಲಿ ನೋಡಬಹುದು.

ಅಭಿನವ ಗುಪ್ತನಂಥ ಮಹಾಪ್ರತಿಭಾಶಾಲಿ ಕೂಡ ‘ನಾನು ನನ್ನ ಹಿಂದಿನವರ ಪರಿಶ್ರಮದ ಮೆಟ್ಟಿಲುಗಳ ಮೇಲೆ ನಿಂತಿರುವೆ’ ಎನ್ನುತ್ತಾನೆ. ‘ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎಂಬ ಮಾತು ಪೇಟೆಂಟ್‌, ಕಾಪಿರೈಟ್ ಮತ್ತು ಹಕ್ಕುಸ್ವಾಮ್ಯಗಳ ಎಲ್ಲ ಪ್ರತಿಪಾದನೆಗಳಿಗೆ ಒಟ್ಟು ಭಾರತೀಯ ಪ್ರತಿಕ್ರಿಯೆ ಎನ್ನುವಂತಿದೆ. ಪ್ರಾಚೀನ ಕವಿಗಳು ಅವರ ವೈಯಕ್ತಿಕ ವಿವರಗಳ ಬಗ್ಗೆ ಮೌನವಾಗಿರುವುದು ಕೂಡ ಇಲ್ಲಿ ಉಲ್ಲೇಖಾರ್ಹ. ಹೀಗಾಗಿಯೇ ಎಷ್ಟೋ ಪ್ರಾಚೀನ ಕವಿ ಮತ್ತು ಶಾಸ್ತ್ರಕಾರರ ಬಗ್ಗೆ ನಮಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಪ್ರಾಚೀನರ ಇಂಥ ಮೌನವನ್ನು ಸಾಮಾನ್ಯವಾಗಿ ‘ಇತಿಹಾಸಪ್ರಜ್ಞೆಯ ಕೊರತೆ’ ಎಂದೇ ವಿಶ್ಲೇಷಿಸಲಾಗುತ್ತದೆ. ಆದರೆ ವೈಯಕ್ತಿಕ ವಿವರಗಳನ್ನು ಹೇಳಬಾರದು ಎಂಬ ವ್ರತಬುದ್ಧಿಯೇ ಇಲ್ಲಿ ಕೆಲಸ ಮಾಡಿರುವುದು ಎನ್ನುವುದನ್ನು ಗಮನಿಸಬೇಕು. ‘ಭಾವಚಿತ್ರ’ವನ್ನು ಬರೆಯುವುದು ಅಥವಾ ಬರೆಯಿಸಿಕೊಳ್ಳುವುದೇ ಪಾಪ ಎಂಬ ನಂಬಿಕೆ ಭಾರತೀಯ ಕಲಾತತ್ವದ ಶ್ರದ್ಧೆಯಾಗಿತ್ತು.

ಸ್ವಂತ ವಿವರಗಳನ್ನು ದಾಖಲಿಸುವುದೂ ಭಾವಚಿತ್ರವನ್ನು ರಚಿಸುವುದೂ ‘ಅಸ್ವರ್ಗ್ಯ’ ಎಂದು ಕಲಾದಾರ್ಶನಿಕ ಆನಂದ ಕುಮಾರಸ್ವಾಮಿ ಅವರು ಪ್ರತಿಪಾದಿಸಿರುವುದು ಭಾರತೀಯ ಚಿಂತನೆಯೇ ಹೌದು. ‘ನಾನು ಹೇಳುತ್ತಿರುವ ಯಾವ ಸಿದ್ಧಾಂತವೂ ನನ್ನದಲ್ಲ; ಅವೆಲ್ಲವೂ ಪರಂಪರೆಗೆ ಸೇರಿದ್ದು; ಅದನ್ನು ನೆನಪಿಗೆ ತರುವ ಮಾಧ್ಯಮವಷ್ಟೆ ನಾನು’ ಎಂದರು ಆನಂದ ಕುಮಾರಸ್ವಾಮಿ. ‘ಹೀಗಾಗಿ ನನ್ನ ಕೃತಿಗಳಿಗೆ ಕಾಪಿರೈಟ್‌ ಇಲ್ಲ’ ಎಂದೂ ಅವರು ಘೋಷಿಸಿದ್ದು ಪರಂಪರೆಯ ಮುಂದುವರಿಕೆಯಾಗಿಯೇ. ಮೇಡಂ ಕ್ಯೂರಿ ತಮ್ಮ ಸಂಶೋಧನೆಗೆ ಪೇಟೆಂಟ್‌ ಪಡೆಯದೇ ಇದ್ದದ್ದು ಇಂದು ಜಗತ್ತಿನ ಪ್ರಸಿದ್ಧ ವಿದ್ಯಮಾನವಾಗಿದೆ.

ಕ್ಯೂರಿಗೆ ಇದಕ್ಕೆ ಸ್ಫೂರ್ತಿಯಾದದ್ದೇ ಆನಂದ ಕುಮಾರಸ್ವಾಮಿ ಅವರ ಚಿಂತನೆ. ಜಗತ್ತಿನ ಎಲ್ಲ ಅರಿವೂ ಎಂದಿನಿಂದಲೂ ಇರುವಂಥದ್ದು; ಎಂದೂ ಇರುವಂಥದ್ದು. ಹೀಗಾಗಿ ನಮ್ಮದು ಎನ್ನುವುದು ಯಾವ ಅರಿವೂ ಇಲ್ಲ. ನಮ್ಮ ಸಾಧನೆಯೆಲ್ಲ ಕೇವಲ ಮತ್ತೆ ನೆನಪಿಸಿಕೊಳ್ಳುವುದಷ್ಟೆ. ಇದು ಕಲೆ, ಸಾಹಿತ್ಯ, ವಿಜ್ಞಾನ – ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಈ ಕಲ್ಪನೆಯನ್ನೇ ಭಾರತೀಯ ದರ್ಶನದಲ್ಲಿ ‘ಪ್ರತ್ಯಭಿಜ್ಞಾನ’ ಎಂದು ಕರೆದದ್ದು. ನಮ್ಮದಲ್ಲದ ಸಾಧನೆಗೆ ನಮ್ಮ ಹೆಸರನ್ನು ಅಂಟಿಸಿಕೊಳ್ಳುವುದು ಸರಿಯಲ್ಲ ಎನ್ನುವುದು ಪ್ರಾಚೀನ ಭಾರತೀಯ ಮನಃಸ್ಥಿತಿ. ‘ನಾನು’ ಎನ್ನುವ ಎಲ್ಲ ಗ್ರಹಿಕೆಗಳನ್ನೂ ಭಾರತೀಯ ಪರಂಪರೆ ನಿರಾಕರಿಸುತ್ತದೆ. ಆದರೆ ಇಂಥ ಆದರ್ಶ ಇಂದಿನ ವ್ಯವಹಾರ ಜಗತ್ತಿನಲ್ಲಿ ಎಷ್ಟು ಪ್ರಸ್ತುತ ಎನ್ನುವುದೇ ದೊಡ್ಡ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT