ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್‌ಸಿ ದಾಳಿಗೂ ಮುನ್ನ ಮೂರು ಕಡೆ ಸಂಚು!

Last Updated 24 ಮಾರ್ಚ್ 2017, 20:28 IST
ಅಕ್ಷರ ಗಾತ್ರ

ಬೆಂಗಳೂರು: ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆ ಸದಸ್ಯರು 2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೇಲೆ ದಾಳಿ ನಡೆಸುವುದಕ್ಕೂ ಮೊದಲು ಸ್ಯಾಂಕಿ ರಸ್ತೆಯ ಲೀ ಮೆರಿಡಿಯನ್ ಹೋಟೆಲ್, ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜು ಹಾಗೂ ಬನ್ನೇರುಘಟ್ಟ ರಸ್ತೆಯ ಐಐಎಂಬಿ ಮೇಲೆ ದಾಳಿ ನಡೆಸಲು ಸಂಚು ನಡೆಸಿದ್ದರು.

ಶಂಕಿತ ಉಗ್ರ ಹಬೀಬ್ ಮಿಯಾ ಪೊಲೀಸ್ ವಿಚಾರಣೆ ವೇಳೆ ಈ ಸಂಗತಿ ಬಾಯ್ಬಿಟ್ಟಿದ್ದಾನೆ. ‘ಸಂಘಟನೆ ಕಮಾಂಡರ್‌ನ ಸೂಚನೆಯಂತೆ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಲು ಸಂಚು ರೂಪಿಸಿದ್ದೆವು. ಬಿಹಾರದಲ್ಲಿ ಓದುತ್ತಿದ್ದ ನೂರುಲ್ಲಾ ಖಾನ್ ಅಲಿಯಾಸ್ ಶಬಾವುದ್ದೀನ್, ದಾಳಿ ಮಾಡುವ ಉದ್ದೇಶದಿಂದ ವಿದ್ಯಾರ್ಥಿಯಾಗಿ 2005ರಲ್ಲಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜನ್ನು ಸೇರಿಕೊಂಡಿದ್ದ’ ಎಂದು ಆತ ಹೇಳಿದ್ದಾನೆ.

‘ದಾಳಿ ನಡೆಸುವಂತೆ 2005ರ ಡಿಸೆಂಬರ್‌ನಲ್ಲಿ ಕಮಾಂಡರ್‌ನಿಂದ ಆದೇಶ ಬಂತು. ಅಂತರ್ಜಾಲದಲ್ಲಿ ಶೋಧ ನಡೆಸಿ, ಗಣ್ಯರು ಹೆಚ್ಚಾಗಿ ಸೇರುವಂಥ ಕಾರ್ಯಕ್ರಮಗಳು ಎಲ್ಲೆಲ್ಲಿವೆ ಎಂಬ  ಪಟ್ಟಿ ಸಿದ್ಧಪಡಿಸಿಕೊಂಡೆವು.’

‘ರಾಷ್ಟ್ರೀಯ ಸಾಫ್ಟ್‌ವೇರ್‌ ಮತ್ತು ಸೇವಾ ಕಂಪೆನಿಗಳ ಒಕ್ಕೂಟವು (ನಾಸ್ಕಾಂ) ಡಿ.15 ರಿಂದ 17ರವರೆಗೆ  ಲೀ ಮೆರಿಡಿಯನ್ ಹೋಟೆಲ್‌ನಲ್ಲಿ ವಿಚಾರ ಸಂಕಿರಣ ಹಮ್ಮಿಕೊಂಡಿತ್ತು. ಆ ಹೋಟೆಲ್ ಮೇಲೆ ದಾಳಿ ನಡೆಸಲು ನಿರ್ಧರಿಸಿದ ಶಬಾವುದ್ದೀನ್, ತ್ರಿಪುರ ಹಾಗೂ ಹೈದರಾಬಾದ್‌ನಲ್ಲಿದ್ದ ಸಂಘಟನೆ ಸದಸ್ಯರನ್ನು ಕಳುಹಿಸಿಕೊಡುವಂತೆ ಸೂಚಿಸಿದ್ದ. ಅದರಂತೆ, ನಾನು ನಾಲ್ಕು ಮಂದಿಯನ್ನು ಕಳುಹಿಸಿಕೊಟ್ಟಿದ್ದೆ. ಎಲ್ಲರೂ ಹೆಬ್ಬಾಳದ ಕೆಂಪಾಪುರದಲ್ಲಿ ಉಳಿದುಕೊಂಡಿದ್ದರು.’

ಗಣ್ಯರು ಬರಲಿಲ್ಲ: ‘ವಿಚಾರ ಸಂಕಿರಣಕ್ಕೆ ಬಹುತೇಕ ಗಣ್ಯರು ಗೈರಾಗಿದ್ದರಿಂದ, ಕೊನೆ ಕ್ಷಣದಲ್ಲಿ ಯೋಜನೆ ಕೈಬಿಡಲಾಯಿತು. ಡಿ.17ರಿಂದ  19ರವರೆಗೆ ಪಿಇಎಸ್ ಕಾಲೇಜಿನಲ್ಲಿ ವಿಚಾರಸಂಕಿರಣ ಏರ್ಪಾಡಾಗಿತ್ತು. ಡಿ.17ರ ರಾತ್ರಿಯೇ ಕಾಲೇಜು ಬಳಿ ಹೋಗಿ ಬಂದಿದ್ದ ಶಬಾವುದ್ದೀನ್, ದಾಳಿ ನಡೆಸಿ ಹೊರ ಹೋಗುವುದು ಕಷ್ಟವೆಂದಿದ್ದ.  ಹೀಗಾಗಿ, ಆ ಸಂಚೂ ಈಡೇರಲಿಲ್ಲ.’

ದಟ್ಟಣೆಯಲ್ಲಿ ಸಿಲುಕಿದರು: ‘ಡಿ.22 ರಿಂದ ಇಂಡಿಯನ್‌ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂಬಿ) ವಿಚಾರಸಂಕಿರಣ ಆರಂಭವಾಯಿತು. ಕಾರ್ಯಕ್ರಮದ ಕಡೆ ದಿನವಾದ ಡಿ.25ರಂದು, ಪೂರ್ವಸಿದ್ಧತೆ ಇಲ್ಲದೆ ಹೊರಟ ಶಬಾವುದ್ದೀನ್ ಹಾಗೂ ಸದಸ್ಯರು ಸಂಚಾರದಟ್ಟಣೆಯಲ್ಲಿ ಸಿಲುಕಿಕೊಂಡರು. ಅವರು ಐಐಎಂಬಿ ತಲುಪುವಷ್ಟರಲ್ಲಿ ವಿಚಾರಸಂಕಿರಣ ಮುಗಿದೇ ಹೋಗಿತ್ತು.’

‘ಹೀಗೆ, ಮೂರೂ ಸಂಚುಗಳು ಈಡೇರದಿದ್ದಾಗ ಕಮಾಂಡರ್ ಕುಪಿತಗೊಂಡಿದ್ದರು. ನಂತರ ವ್ಯವಸ್ಥಿತವಾಗಿ ಯೋಜನೆ ರೂಪಿಸಿ ಐಐಎಸ್‌ಸಿ ಮೇಲೆ ದಾಳಿ ನಡೆಸಿದ್ದೆವು. ನಾನು ಸ್ಥಳಕ್ಕೆ ಹೋಗಿರಲಿಲ್ಲ. ಆದರೆ, ಅಲ್ಲಿ ನಡೆದ ವಿದ್ಯಮಾನಗಳನ್ನು ಇತರೆ ಸದಸ್ಯರ ಮೂಲಕ ಕಮಾಂಡರ್‌ ಗಮನಕ್ಕೆ ತರುತ್ತಿದ್ದೆ’ ಎಂದು ಹಬೀಬ್ ಹೇಳಿದ್ದಾನೆ.

‘ಸರಕು ಸಾಗಣೆ ಆಟೊ ಚಾಲಕನಾಗಿದ್ದ ಅಗರ್ತಲದ ಹಬೀಬ್, ಕೊಳಾಯಿ ರಿಪೇರಿ ಕೆಲಸವನ್ನೂ ಮಾಡುತ್ತಿದ್ದ. ಅಗರ್ತಲದಿಂದ ಹಲಸಿನ ಹಣ್ಣುಗಳನ್ನು ಬಾಂಗ್ಲಾ ಗಡಿಯಲ್ಲಿರುವ ಕೊಮಾಯಿ ಗ್ರಾಮಕ್ಕೆ ಸಾಗಿಸುತ್ತಿದ್ದ ಈತ, ಅಲ್ಲಿಂದ ಅನಾನಸ್‌ ಹಣ್ಣುಗಳನ್ನು ತನ್ನೂರಿನ ಸಗಟು ವ್ಯಾಪಾರಿಗಳಿಗೆ ಪೂರೈಸುತ್ತಿದ್ದ. ಈ ವಿಚಾರ ತಿಳಿದ ಶಬಾವುದ್ದೀನ್, ಪಾಕಿಸ್ತಾನದಲ್ಲಿದ್ದ ಕಮಾಂಡರ್‌ನನ್ನು ಭೇಟಿಯಾಗಲು ಹಬೀಬ್‌ನ ನೆರವು ಪಡೆಯಲು ನಿರ್ಧರಿಸಿದ್ದ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಡಿ ದಾಟುತ್ತಿದ್ದ: ‘2003ರಲ್ಲಿ ಮಸೀದಿಯಲ್ಲಿ ಪ್ರಾರ್ಥನೆ ಮಾಡುತ್ತಿದ್ದಾಗ, ಶಬಾವುದ್ದೀನ್ ನನ್ನ ಪಕ್ಕದಲ್ಲಿ ಬಂದು ಕುಳಿತುಕೊಂಡ. ನಂತರ ಹಣದ ಆಮಿಷವೊಡ್ಡಿ ಎಲ್‌ಇಟಿ ಸದಸ್ಯನನ್ನಾಗಿ ಮಾಡಿಕೊಂಡ.  ನಾನು ಸರಕು ಸಾಗಣೆ ವಾಹನದಲ್ಲಿ ಬಾಂಗ್ಲಾದೇಶಕ್ಕೆ ಹೋಗುವಾಗ, ಹಲಸಿನ ಹಣ್ಣುಗಳ ಮಧ್ಯದಲ್ಲಿ ಆತನನ್ನೂ ಕೂರಿಸಿಕೊಂಡು ಗಡಿ ದಾಟಿಸಿ ಬರುತ್ತಿದ್ದೆ. ಅಲ್ಲಿಂದ ಆತ ವಿಮಾನದಲ್ಲಿ ಪಾಕಿಸ್ತಾನಕ್ಕೆ ಹೋಗುತ್ತಿದ್ದ. ಕ್ರಮೇಣ ನನಗೆ ಕಮಾಂಡರ್‌ ಅವರ ಸಂಪರ್ಕವೂ ಬೆಳೆಯಿತು’ ಎಂದು ಹಬೀಬ್ ಮಿಯಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ಟ್ರಿಗರ್ ತೆಗೆಯದೆ ಗ್ರೆನೇಡ್‌ ಎಸೆದೆ’
ಸ್ಫೋಟ ಪ್ರಕರಣದಲ್ಲಿ ಸದ್ಯ ಮುಂಬೈ ಜೈಲಿನಲ್ಲಿರುವ ಶಬಾವುದ್ದಿನ್‌ನನ್ನು ಸಿಸಿಬಿ ಅಧಿಕಾರಿಗಳು ಇತ್ತೀಚೆಗೆ ವಿಚಾರಣೆ ನಡೆಸಿ ಬಂದಿದ್ದಾರೆ. ಐಐಎಸ್‌ಸಿ ಮೇಲೆ ನಡೆಸಿದ ದಾಳಿ ಬಗ್ಗೆ ಆತ ವಿವರವಾಗಿ ಹೇಳಿದ್ದಾನೆ.

‘2005ರ ಡಿ.28ರಂದು ಕಾಂಪೌಂಡ್ ಜಿಗಿದು ಐಐಎಸ್‌ಸಿ ಆವರಣಕ್ಕೆ ನುಗ್ಗಿದ ನಾನು, ವಿಚಾರ ಸಂಕಿರಣ ಮುಗಿಸಿ ಹೊರಬರುತ್ತಿದ್ದ ವಿಜ್ಞಾನಿಗಳತ್ತ ಗ್ರೆನೇಡ್ ಎಸೆದೆ. ಆದರೆ, ತರಾತುರಿಯಲ್ಲಿ ಟ್ರಿಗರ್ ತೆಗೆಯದೆ ಎಸೆದಿದ್ದರಿಂದ ಅದು ಸ್ಫೋಟಗೊಳ್ಳಲಿಲ್ಲ.  ಅಲ್ಲದೆ,  ಎ.ಕೆ.56 ಬಂದೂಕಿನ ಟ್ರಿಗರ್ ಕೂಡ ಜಾಮ್ ಆಗಿದ್ದರಿಂದ ಗುಂಡು ಹಾರಿಸಲು ಆಗಲಿಲ್ಲ’ ಎಂದು ಶಬಾವುದ್ದೀನ್ ಹೇಳಿದ್ದಾಗಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತರೆ ಸದಸ್ಯರು ನಡೆಸಿದ ಗುಂಡಿನ ದಾಳಿಯಲ್ಲಿ ಒಬ್ಬರು (ಗಣಿತ ಪ್ರಾಧ್ಯಾಪಕ ಮನೀಷ್ ಚಂದ್ರಪುರಿ) ಹತ್ಯೆಯಾದರು. ಕೂಡಲೇ ಅಲ್ಲಿಂದ ಆಟೊದಲ್ಲಿ ಯಶವಂತಪುರಕ್ಕೆ ಬಂದು, ರೈಲಿನಲ್ಲಿ ಹೈದರಾಬಾದ್‌ಗೆ ಹೋದೆ. ನಂತರ ಕೋಲ್ಕತ್ತ ಮೂಲಕ ಅಗರ್ತಲಕ್ಕೆ ತೆರಳುವಾಗ ಪೊಲೀಸರಿಗೆ ಸಿಕ್ಕಿ ಬಿದ್ದೆ’ ಎಂದು ತಿಳಿಸಿದ್ದಾನೆ.

‘ಏಕೀ ಆದ್ಮಿ ಮಾರಾ’
‘ಇತ್ನಾ ದೂರ್ ಜಾಕೆ, ಇತ್ನಾ ಮೆಹ್ನತ್ ಕರ್ಕೆ, ಏಕೀ ಆದ್ಮಿ ಮಾರಾ..’ (ಅಷ್ಟು ದೂರ ಹೋಗಿ, ಅಷ್ಟು ಕಷ್ಟ ಪಟ್ಟು, ಕೇವಲ ಒಬ್ಬನನ್ನು ಸಾಯಿಸಿದ್ದೀಯ) ಎಂದು ಶಬಾವುದ್ದೀನ್‌ಗೆ ಎಲ್‌ಐಟಿ ಕಮಾಂಡರ್ ಬೈದಿದ್ದ ಸಂಗತಿ ಹಬೀಬ್‌ನ ವಿಚಾರಣೆಯಿಂದ ಗೊತ್ತಾಗಿದೆ.  ‘ಕಮಾಂಡರ್‌ನ ವಿಶ್ವಾಸವನ್ನು ಮತ್ತೆ ಗಿಟ್ಟಿಸಿಕೊಳ್ಳಲೆಂದೇ ಆತ ಸದಸ್ಯರ ಜತೆಗೂಡಿ 2007ರಲ್ಲಿ ಉತ್ತರ ಪ್ರದೇಶದಲ್ಲಿ ದೊಡ್ಡ ಮಟ್ಟದ ದಾಳಿ ನಡೆಸಿದ್ದ. ಅದರಲ್ಲಿ 20 ಮಂದಿ ಮೃತಪಟ್ಟಿದ್ದರು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT