ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿ ವಿಸ್ಮಯದ ಎರಡು ಪ್ರಶ್ನೆಗಳು

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

1. ಕೀಟಗಳಲ್ಲಿ ಎಷ್ಟು ವಿಧ? ಎಷ್ಟು ಪ್ರಭೇದ?
ಕೀಟ–ಅದು ಪ್ರಾಣಿ ಸಾಮ್ರಾಜ್ಯದ ಪರಮ ಸೋಜಿಗದ ಒಂದು ಸೃಷ್ಟಿ. ಧರೆಯಲ್ಲಿ ಸರ್ವಾಂತರ್ಯಾಮಿಯಾಗಿ, ಕುಬ್ಜಗಾತ್ರಕ್ಕೆ ಸಮಾನಾರ್ಥಕವಾಗಿ, ಬಹುಮಹತ್ವದ ಪ್ರಾಣಿಯಾಗಿ, ಪಿಡುಗು ಕಾರಕವಾಗಿಯೂ ಖ್ಯಾತವಾಗಿ... ಅಷ್ಟೇ ಅಲ್ಲದೆ ಧರೆಯ ಜೀವಜಾಲದಲ್ಲಿ ವೈವಿಧ್ಯದಲ್ಲೂ, ‘ಜನಸಂಖ್ಯೆ’ಯಲ್ಲೂ ಗರಿಷ್ಠತಮ ವಿಶ್ವದಾಖಲೆಗಳನ್ನು ಸೃಜಿಸಿರುವ ಸೃಷ್ಟಿ ಅದು. ‘ಮೂರು ಖಂಡಗಳ ಶರೀರ, ಆರು ಕಾಲುಗಳು, ಎರಡು ಕುಡಿಮೀಸೆಗಳು ಮತ್ತು ಸಂಯುಕ್ತಾಕ್ಷಿಗಳು’– ಇವು ಕೀಟಗಳ ಶರೀರದ ವಿಶಿಷ್ಟ ಲಕ್ಷಣಗಳು. ಎಲ್ಲೆಲ್ಲೂ ಕಾಣಸಿಗುವ, ಎಲ್ಲರ ಗಮನ ಸೆಳೆವ, ಎಲ್ಲರನ್ನೂ ಒಂದಲ್ಲ ಇನ್ನೊಂದು ವಿಧದಲ್ಲಿ ಆಕರ್ಷಿಸಿರುವ ಇಲ್ಲವೇ ಪೀಡಿಸಿರುವ... ಹಾಗೆಲ್ಲ ಆಗಿ ಸರ್ವರಿಗೂ ಪರಿಚಿತವಾಗಿರುವ ಜೀವಿಗಳು ಇವೇ. ಜೇನ್ನೊಣ, ದುಂಬಿ, ಮಿಡತೆ, ಪತಂಗ, ಪಾತರಗಿತ್ತಿ, ಇರುವೆ, ಗೆದಲು, ಜಿರಳೆ, ಸೊಳ್ಳೆ, ನೊಣ... ಅದೊಂದು ಮುಗಿಯದ ಪಟ್ಟಿ (ಚಿತ್ರಗಳಲ್ಲಿ ಗಮನಿಸಿ).

ಪೃಥ್ವಿಯಲ್ಲಿ ಕೀಟಗಳದು ನಾಲ್ಕು ನೂರು ದಶಲಕ್ಷ ವರ್ಷಗಳ ಇತಿಹಾಸ. ಪ್ರಸ್ತುತಿ ಧರೆಯಲ್ಲಿರುವ ಎಲ್ಲ ಕೀಟಗಳನ್ನೂ ಎರಡು ವಿಧಗಳನ್ನಾಗಿ ವಿಂಗಡಿಸಲಾಗಿದೆ: ರೆಕ್ಕೆಗಳಿಲ್ಲದ ‘ಆ್ಯಪ್ಟೆರಿಗೋಟಾ’ ಮತ್ತು ರೆಕ್ಕೆಗಳಿಂದ ಕೂಡಿದ ‘ಟೆರಿಗೋಟಾ’. ಆ್ಯಪ್ಟೆರಿಗೋಟಾ ವಂಶದ ಎಲ್ಲ ಕೀಟಗಳದೂ ಬಹಳ ಪ್ರಾಚೀನತೆ. ಹಳೆಯ ಕಾಗದಗಳ–ಪುಸ್ತಕಗಳ ರಾಶಿಗಳಲ್ಲಿ ಕಾಣಿಸಿಗುವ ‘ಬೆಳ್ಳಿಮೀನು’ ಈ ಗುಂಪಿನ ಕೀಟಗಳಿಗೆ ಒಂದು ಉದಾಹರಣೆ. ಆ್ಯಪ್ಟೆರಿಗೋಟಾಗಳಲ್ಲಿ ನಾಲ್ಕು ವರ್ಗಗಳಿವೆ; ನಾಲ್ಕು–ಐದು ಸಾವಿರ ಪ್ರಭೇದಗಳಿವೆ. ಇದೊಂದು ಪುಟ್ಟ ಗುಂಪು. ತದ್ವಿರುದ್ಧವಾಗಿ ‘ಟೆರಿಗೋಟಾ’ ಗುಂಪಿನಲ್ಲಿ ಇಪ್ಪತ್ತೈದು ವರ್ಗಗಳಿವೆ ಲಕ್ಷಾಂತರ ಪ್ರಭೇದಗಳಿವೆ.
ಪರಮ ಸೋಜಿಗದ ಕೀಟ ಸಾಮ್ರಾಜ್ಯದಲ್ಲಿರುವ ಪ್ರಭೇದ ವೈವಿಧ್ಯ ಕುರಿತ ವಾಸ್ತವದ ಮಹದಚ್ಚರಿಯ ಪ್ರಮುಖ ಅಂಶಗಳು:

* ಕೀಟಗಳಲ್ಲಿ ಈ ವರೆಗೆ ಗುರುತಿಸಿ, ವರ್ಗೀಕರಿಸಿ, ಹೆಸರಿಸಲಾಗಿರುವ ಪ್ರಭೇದಗಳ ಒಟ್ಟು ಸಂಖ್ಯೆ ಸಮೀಪ ಹತ್ತು ಲಕ್ಷ! ಈ ವರೆಗೆ ಗುರುತಿಸಲಾಗಿರುವ ಸರ್ವವಿಧ ಪ್ರಾಣಿ ಪ್ರಭೇದಗಳ ಸಂಖ್ಯೆ ಹದಿನಾಲ್ಕು ಲಕ್ಷ, ಹಾಗೆಂದರೆ ಪ್ರಾಣಿ ಸಾಮ್ರಾಜ್ಯದಲ್ಲಿ ಕೀಟಗಳದೇ ಶತಾಂಶ ಎಪ್ಪತ್ತೊಂದು ಭಾಗ ಎಂದಾಯಿತಲ್ಲ?

* ವಿಶೇಷ ಏನೆಂದರೆ ಕೀಟಗಳ ಇಷ್ಟೂ ಪ್ರಭೇದಗಳ ಗರಿಷ್ಠ ಭಾಗ ಟೆರಿಗೋಟಾ ಗುಂಪಿನ ನಾಲ್ಕು ವರ್ಗಗಳಿಗೇ ಸೇರಿಹೋಗಿದೆ: ‘ದುಂಬಿಗಳು ಮತ್ತು ವೀವಿಲ್‌ಗಳ ‘ಕೋಲಿಯಾಪ್ಟೆರಾ’ ವರ್ಗ (ನಾಲ್ಕು ಲಕ್ಷ ಪ್ರಭೇದಗಳು; ಸೊಳ್ಳೆ ನೊಣ ಇತ್ಯಾದಿಗಳ ‘ಡೈಪ್ಟೆರಾ’ ವರ್ಗ (1.5 ಲಕ್ಷ ಪ್ರಭೇದಗಳು); ಇರುವೆ ಜೇನ್ನೊಣ ಕಣಜ, ಕದಿರಿಬ್ಬೆ ಇತ್ಯಾದಿಗಳ ‘ಹೈಮನಾಪ್ಟೆರಾ’ ವರ್ಗ (1.25 ಲಕ್ಷ ಪ್ರಭೇದಗಳು); ಪತಂಗ ಪಾತರಗಿತ್ತಿಗಳ ‘ಲೆಪಿಡಾಪ್ಟೆರಾ ವರ್ಗ’ (1.2 ಲಕ್ಷ ಪ್ರಭೇದಗಳು). ‘ಸ್ಪಷ್ಟವಾಗಿಯೇ ಕೀಟ ಸಾಮ್ರಾಜ್ಯದಲ್ಲಿ ಈ ನಾಲ್ಕು ವರ್ಗಗಳದೇ ಸಮೀಪ ಎಂಟು ಲಕ್ಷ ಪ್ರಭೇದಗಳು; ಎಂದರೆ ಶೇಕಡ 80 ಭಾಗ!

* ಸರ್ವ ವಿಧ ಕೀಟಗಳಲ್ಲೂ ಗರಿಷ್ಠ ವೈವಿಧ್ಯದ ದಾಖಳೆ ‘ದುಂಬಿ’ಗಳದು. ಈ ವರೆಗೆ ತಿಳಿದಿರುವ ದುಂಬಿ ಪ್ರಭೇದಗಳು ಮೂರೂವರೆ ಲಕ್ಷ! ಆದ್ದರಿಂದಲೇ ಜೀವ ವಿಜ್ಞಾನಿಗಳು ನಮ್ಮ ಧರೆಯನ್ನು ‘ದಿ ಪ್ಲಾನೆಟ್‌ ಆಫ್‌ ದಿ ಬೀಟ್ಲ್ಸ್‌’ (ದುಂಬಿಗಳ ಗ್ರಹ) ಎಂದೂ ಕರೆಯುತ್ತಾರೆ.

* ಇನ್ನು ಕೀಟಗಳ ‘ಜನಸಂಖ್ಯೆ’ಯಂತೂ ಕಲ್ಪನಾತೀತ. ಸ್ವಲ್ಪವಾದರೂ ಗ್ರಹಿಸಲಾಗುವಂತೆ ನಿರೂಪಿಸಬೇಕೆಂದರೆ ಪ್ರಸ್ತುತ ಧರೆಯಲ್ಲಿರುವ ಏಳು ನೂರು ಕೋಟಿ ಮನುಷ್ಯರಿಗೆ ಪ್ರತಿಯೊಬ್ಬೊಬ್ಬರಿಗೂ ಇಪ್ಪತ್ತು ಕೋಟಿ ಕೀಟಗಳು ಲಭ್ಯ ಇವೆ! ಜಗದ ಒಟ್ಟೂ ಕೀಟಗಳ ತೂಕ ಸಕಲ ಮನುಷ್ಯರ ಒಟ್ಟು ತೂಕದ ಮುನ್ನೂರು ಮಡಿ ಆಗುವಷ್ಟಿದೆ!

* ತಮ್ಮ ಕುಬ್ಜ ಗಾತ್ರದಿಂದಾಗಿ ಕೀಟಗಳು ಎಷ್ಟೊಂದು ನಿಬಿಡವಾಗಿ ಬದುಕಬಲ್ಲವೆಂದರೆ ಆರು ಲಕ್ಷ ಇರುವೆಗಳಿರುವ ಒಂದೇ ಇರುವೆ ಗೂಡು, ಮೂರು ದಶಲಕ್ಷ ಸಂಖ್ಯೆಯ ಗೆದ್ದಲ ಕೀಟಗಳ ಒಂದೇ ಹುತ್ತ, ಒಂದೇ ಹಿಂಡಿನಲ್ಲಿ ಒಂದು ಶತಕೋಟಿ ಮಿಡತೆಗಳು... ಇಂಥವೆಲ್ಲ ಪತ್ತೆಯಾಗಿವೆ.

* ಕೀಟಗಳದೆಲ್ಲ ಕುಬ್ಜಗಾತ್ರವೇ ಆದರೂ ಭಾರೀ ಗಾತ್ರದ ಕೆಲವು ಪ್ರಭೇದಗಳೂ ಇವೆ. ಉದಾಹರಣೆಗೆ ‘ಟೈಟಾನ್‌ ದುಂಬಿ’ ಆರೂವರೆ ಅಂಗುಲ ಉದ್ದದ ದೇಹ ಹೊಂದಿದೆ; ‘ವಾಕಿಂಗ್‌ ಸ್ಟಿಕ್‌’ ಕಡ್ಡಿ ಕೀಟದ ಉದ್ದ ಎರಡು ಅಡಿ! ‘ಗೋಲಿಯತ್‌ ದುಂಬಿ’ಯದು ಒಂದು ನೂರು ಗ್ರಾಂ ತೂಖ! ‘ಅಟ್ಲಾಸ್‌ ಪತಂಗ’ದ ರೆಕ್ಕೆ ವಿಸ್ತಾರ ಒಂದು ಅಡಿ! ಹಾಗೆಯೇ ಇರುವೆಗಳಿಗೂ ಹೋಲಿಸಲಾಗದಷ್ಟು– ಬರಿಗಣ್ಣಿಗೆ ಸುಲಭವಾಗಿ ಗೋಚರವೇ ಆಗದಷ್ಟು– ಅಣು ಗಾತ್ರದ ಕೀಟ ಪ್ರಭೇದಗಳೂ ನೂರಾರಿವೆ. ಉದಾಹರಣೆಗೆ ‘ಫೇರೀ ನೋಣ’ಗಳ ಒಂದು ಪ್ರಭೇದದ ದೇಹದ ಉದ್ದ ಒಂದು ಮಿಲಿಮೀಟರ್‌ನ ಹತ್ತರ ಒಂದಂಶ ಅಷ್ಟೆ!

ಎಂಥ ಸೃಷ್ಟಿ! ಎಷ್ಟು ವೈವಿಧ್ಯ! ಎಂಥ ಸಂಖ್ಯೆ! ಅಲ್ಲವೇ?

2. ಇರುವೆಗಳಿಗೆ ‘ಆನೆ ಬಲ’ ಹೇಗೆ?

ಇರುವೆಗಳದು ‘ಆನೆ ಬಲ’ ಅಲ್ಲ. ವಾಸ್ತವವಾಗಿ ಯಾವ ಆನೆಗೂ ಇರುವೆಗಿರುವಂತಹ ದೇಹ ಬಲ ಇಲ್ಲ! ಶರೀರದ ತೂಕಕ್ಕೆ ಹೋಲಿಸಿದಂತೆ ನೋಡಿದರೆ ಇಡೀ ಪ್ರಾಣಿ ಸಾಮ್ರಾಜ್ಯದಲ್ಲಿ ಭಾರ ಎತ್ತುವ, ಭಾರ ಹೊರುವ, ಭಾರವನ್ನು ಎಳೆದು ಸಾಗಿಸುವ ಗರಿಷ್ಠ ಸಾಮರ್ಥ್ಯ ಇರುವುದೇ ಕೀಟಗಳಿಗೆ. ಅದು ಅರ್ಥವಾಗಲು ಈ ಕೆಲ ಹೋಲಿಕೆಗಳನ್ನು ನೀವೇ ಗಮನಿಸಿ:

ಒಂದು ಹುಲಿ ಅದರ ಶರೀರದ ಎರಡು ಪಟ್ಟು ತೂಕವನ್ನು ಎತ್ತುತ್ತದೆ, ಎಳೆದೊಯ್ಯುತ್ತದೆ. ಹದ್ದುಗಳು ತಮ್ಮ ದೇಹದ ನಾಲ್ಕು ಮಡಿ ತೂಕವನ್ನು ಹಿಡಿದು ಎತ್ತಿ ಹಾರುತ್ತವೆ. ಗೊರಿಲ್ಲಗಳು ತಮ್ಮ ತೂಕದ ಹತ್ತುಪಟ್ಟು ತೂಕ ಎತ್ತಬಲ್ಲವು. ಸಾಮಾನ್ಯ ಮನುಷ್ಯರಿಗೆ ಅವರ ತೂಕದ ಇಮ್ಮಡಿ ತೂಕ ಎತ್ತುವುದೂ ದುಸ್ಸಾಧ್ಯ. ಆನೆಗಳಿಗೂ ತೂಕಕ್ಕಿಂತ ಹೆಚ್ಚು ಭಾರ ಎತ್ತುವುದು, ಎಳೆಯುವುದು ಅಸಾಧ್ಯ.

ಅದೇ ಕೆಲ ಕೀಟಗಳ ಇದೇ ಸಾಮರ್ಥ್ಯಗಳನ್ನು ಗಮನಿಸಿ: ‘ಸಗಣಿ ದುಂಬಿ’ ಅದರ ತೂಕದ 1150 ಪಟ್ಟು ಭಾರವನ್ನು ಎಳೆಯಬಲ್ಲರು. ‘ಘೇಂಡಾ ದುಂಬಿ’ ಅದರ ತೂಕದ 850 ಪಟ್ಟು ತುಖವನ್ನು ಹಿಡಿದೆತ್ತಬಲ್ಲದು. ಇರುವೆಗಳು ತಮ್ಮ ಶರೀರದ 50 ರಿಂದ 100 ಮಡಿ ತೂಕದ ವಸ್ತುಗಳನ್ನು ಎಳೆದೊಯ್ಯುವ, ಎತ್ತಿ ಸಾಗಿಸುವ ಕೆಲಸಗಳನ್ನು ಸಲೀಸಾಗಿ ನಡೆಸುತ್ತವೆ (ಚಿತ್ರ 9,10,11,13,14). ಇರುವೆಗಳ ಈ ಅದ್ಭುತ ಸಾಮರ್ಥ್ಯವಷ್ಟೇ ಪರಿಚಿತ ಏಕೆಂದರೆ ಅವು ಭಾರೀ ಸಂಖ್ಯೆಯಲ್ಲಿ ನಮ್ಮ ಜೊತೆಗೇ ನೆಲಸಿವೆ; ಅವುಗಳ ಚಟುವಟಿಕೆಗಳು ನಮ್ಮ ಕಣ್ಣೆದುರಿಗೇ ನಡೆಯುತ್ತಿರುತ್ತದೆ.

ಇಂಥ ಬಲ ಇರುವೆಗಳಿಗೂ ಇತರ ಕೀಟಗಳಿಗೂ ಪ್ರಾಪ್ತವಾಗಿರುವುದು ಹೇಗೆ?

ಪ್ರಾಣಿಗಳ ಗಾತ್ರ ಹೆಚ್ಚಿದಂತೆಲ್ಲ ದೇಹದ ತೂಕವೂ ಹೆಚ್ಚುತ್ತದೆ. ಹಾಗಾಗಿ ಪ್ರಾಣಿಗಳು ದೊಡ್ಡ ಗಾತ್ರದವಾದಂತೆಲ್ಲ ಅವುಗಳ ಶರೀರದ ಸ್ನಾಯುಗಳ ಶಕ್ತಿಯ ಹೆಚ್ಚು ಹೆಚ್ಚು ಭಾಗ ಆಯಾ ಪ್ರಾಣಿಯ ಚಲನವಲನಗಳಿಗೇ, ಎಂದರೆ ನಿಲ್ಲುವ ನಡೆಯುವ ಏರುವ ಇತ್ಯಾದಿ ಕ್ರಿಯೆಗಳಿಗೇ ವ್ಯಯವಾಗಿ ಉಳಿದದ್ದಷ್ಟೇ ಬಾಹ್ಯ ಭಾರಗಳನ್ನು ಎತ್ತಲು ಹೊರಟು ಎಳೆಯಲು ಲಭ್ಯ. ಅದೇ ಕುಬ್ಜ ಕಾಯದ, ತೆಳ್ಳನೆಯ ಅಂಗಾಗಂಗಗಳ ಇರುವೆ ಇತ್ಯಾದಿ ಕೀಟಗಳಿಗೆ ಅವುಗಳ ಚಲನವಲನಗಳಿಗೆ ಅತ್ಯಲ್ಪ ಶಕ್ತಿಯೇ ಸಾಕಾಗಿ ಬಾಹ್ಯ ಕೆಲಸಗಳಿಗೆ ಅಧಿಕ ಶಕ್ತಿ ಉಳಿಯುತ್ತದೆ.

ಆದ್ದರಿಂದಲೇ ಇರುವೆಗಳಿಗೆ ಆನೆಗಳಿಗಿಂತ ಹೆಚ್ಚು ಬಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT