ಭಾನುವಾರ, ಮಾರ್ಚ್ 29, 2020
19 °C

ನೋಡು ಬಾರ, ‘ಮಸಾಯಿ ಮಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೋಡು ಬಾರ, ‘ಮಸಾಯಿ ಮಾರ’

–ಪ್ರಜ್ಞಾ ಶಾಸ್ತ್ರಿ, ಕೀನ್ಯಾ

*

ಊರಿಂದ ಬಂದ ಅಮ್ಮನಿಗೆ ‘ಮಸಾಯಿ ಮಾರ’ದ ದರ್ಶನ ಮಾಡಿಸುವಾ ಎಂದುಕೊಂಡು ಬೆಳಿಗ್ಗೆ ಏಳು ಗಂಟೆಗೆಲ್ಲ ಮನೆ ಬಿಟ್ಟಿದ್ದೆವು. ನ್ಯಾರೋಕ್ ತಲುಪುವಷ್ಟರಲ್ಲಿ ನಮ್ಮ ಗ್ರಹಚಾರಕ್ಕೆ ಅದೇ ದಿನ ನ್ಯಾರೋಕ್–ಸೆಕಿನೇನಿ ರಸ್ತೆ ರಿಪೇರಿಯನ್ನು ಆಗ್ರಹಿಸಿ ನ್ಯಾರೋಕ್  ಕೌಂಟಿಯ ಜನ ರಸ್ತೆ ತಡೆ ಹಮ್ಮಿಕೊಂಡುಬಿಟ್ಟಿದ್ದರು. ಎರಡು ಗಂಟೆಗಳ ಕಾಲ ಮಾರ ಕಡೆಗೆ ಹೋಗುವ ಎಲ್ಲಾ ವಾಹನಗಳೂ ನ್ಯಾರೋಕ್‌ನ ಕಿರಿದಾದ ರಸ್ತೆಯಲ್ಲಿ ಒಂದರ ಹಿಂದೊಂದು ಜಮಾಯಿಸಿಬಿಟ್ಟಿದ್ದವು. ಅವರ ಪ್ರತಿಭಟನೆ ಕೊನೆಗೊಂಡು ನಾವು ಮುಂದೆ ಹೊರಟ ನಂತರ ನಮಗೆ ರಸ್ತೆಯ ಅವಸ್ಥೆ ಗೊತ್ತಾಗಿದ್ದು.

‘ಜಗತ್ಪ್ರಸಿದ್ಧ ವನ್ಯಜೀವಿ ಅಭಯಾರಣ್ಯವೊಂದರ ರಸ್ತೆ ಇಂಥಾ ದುಸ್ಥಿತಿಯಲ್ಲಿದೆಯೆ?’ ಎಂದು ಬೈದುಕೊಳ್ಳುತ್ತಲೇ ನಾವು ಸೆಕಿನೇನಿ ದ್ವಾರವನ್ನು ತಲುಪಿದೆವು.

ಕೀನ್ಯಾದ ರಾಜಧಾನಿ ನೈರೋಬಿಯಿಂದ ಮಸಾಯಿ ಮಾರಕ್ಕೆ ಹೋಗಲು ಐದರಿಂದ ಆರು ತಾಸು ಬೇಕು. ನೈರೋಬಿಯಿಂದ ನ್ಯಾರೋಕ್ ಪಟ್ಟಣದವರೆಗೆ ಉತ್ತಮ ರಸ್ತೆ ಇದೆ. ಆದರೆ ನ್ಯಾರೋಕ್‌ನಿಂದ ಮಾರದವರೆಗೆ ಇರುವ ಸುಮಾರು 80 ಕಿ.ಮೀ. ಉದ್ದದ ಕಚ್ಚಾ ರಸ್ತೆ ಮಾತ್ರ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ. 

ಒಳಗೆ ತಿರುಗಾಡಲು ಸಫಾರಿ ವಾಹನಗಳಲ್ಲದೇ ನಮ್ಮ ಸ್ವಂತ ವಾಹನಗಳನ್ನೂ ಒಯ್ಯಬಹುದು. ಆ ದಿನ ಆಗಲೇ ತಡವಾದ್ದರಿಂದ ನಾವು ಅರ್ಧ ದಿನದ ಸಫಾರಿಗೆ ನಮ್ಮ ಕಾರಿನಲ್ಲೇ ಒಬ್ಬ ಸ್ಥಳೀಯ ಗೈಡ್‌ನನ್ನೂ ಕೂರಿಸಿಕೊಂಡು ಹೊರಟೆವು.

ನಾನು ಮೊದಲಿನಿಂದಲೂ ಈ ಬಗೆಯ ಸಫಾರಿಗಳ ಬಗ್ಗೆ ಅತೀವ ಉತ್ಸಾಹಿಯೇನೂ ಅಲ್ಲ. ಪ್ರಾಣಿಗಳು ಕಾಣದಿದ್ದರೂ ತೊಂದರೆಯಿಲ್ಲ, ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಾಣುವ ಹುಲ್ಲಿನ ಬ್ಯಾಣ ನೋಡಿಯೇ ಸಂತೃಪ್ತಳಾಗಿಬಿಡುತ್ತೇನೆ. ಆದರೆ ನನ್ನ ಗಂಡ, ಮಗಳು ಮತ್ತು ವಿಶೇಷವಾಗಿ ನನ್ನ ಅಮ್ಮ ಅತ್ಯುತ್ಸಾಹದಲ್ಲಿದ್ದರು.

ದಾರಿಯಲ್ಲಿ ನಮ್ಮ ಗೈಡ್ ‘ಅಲ್ನೋಡಿ ಕಾಡೆಮ್ಮೆ, ತುಂಬಾ ಅಪಾಯಕಾರಿ’ ಎಂದು ದೂರದಲ್ಲಿ ಮೇಯುತ್ತಿದ್ದ ಕಾಡೆಮ್ಮೆಗಳ ಹಿಂಡಿನತ್ತ ಕೈ ತೋರಿಸಿದಾಗ, ಅಮ್ಮನ ಮುಖದಲ್ಲಿ ‘ಅಯ್ಯೋ ಎಮ್ಮೆಯನ್ನು ಏನು ನೋಡೋದು’ ಎಂಬ ಭಾವವಿತ್ತು. ಎಮ್ಮೆ ನಮ್ಮಲ್ಲಿ ಸಾಕು ಪ್ರಾಣಿ ಎಂದಾಗ ಗೈಡ್‌ಗೆ ಪರಮಾಶ್ಚರ್ಯ. ಇಲ್ಲಿ ಎಮ್ಮೆ ಸಾಕಿಯೇ ಗೊತ್ತಿಲ್ಲ! ನಂತರ ಕಾಡಾನೆಗಳ ಗುಂಪೊಂದು ನಮ್ಮೆದುರೇ ರಸ್ತೆ ದಾಟತೊಡಗಿತು. ಹಿಂಡಿನಲ್ಲಿದ್ದ ಒಂದು ಮರಿಯಾನೆ ಅಮ್ಮನ ಕೆಚ್ಚಲಿಗೆ ಬಾಯಿ ಹಾಕಿತ್ತು.

ಮುಂದೆ ಸಂಜೆಯ ಬಿಸಿಲಿಗೆ ಹೊಳೆಯುತ್ತಿದ್ದ ಹುಲ್ಲಿನ ಮೆದೆಯ ನಡುವೆ ತಲೆ ಹುದುಗಿಸಿ ಮೇಯುತ್ತಿದ್ದ ಒಂದಿಷ್ಟು ಝೀಬ್ರಾಗಳು, ಹರಿಣಗಳು, ಜೊತೆಗೆ ವೈಲ್ಡ್ ಬೀಸ್ಟ್‌ಗಳೂ ಕಂಡವು. ‘ಒಂದಾದರೂ ಸಿಂಹ ಕಾಣಬಾರದೆ?’ ಎಂದುಕೊಳ್ಳುವಾಗಲೇ ನಮ್ಮ ಗೈಡ್ – ‘ಸಿಂಹದ ಕುಟುಂಬವೊಂದು ಮಲಗಿದೆಯಂತೆ. ಅತ್ತ ನಡೆಯಿರಿ’ ಎಂದ. ಅವನಿಗೆ ಇತರ ವಾಹನಗಳಿಂದ ಸಂದೇಶ ದೊರೆತಿತ್ತು. ಅವನು ಕರೆದುಕೊಂಡ ಜಾಗದ ಬಳಿ ಹತ್ತಾರು ಸಫಾರಿ ವಾಹನಗಳು ಅದಾಗಲೇ ಮುತ್ತಿಬಿಟ್ಟಿದ್ದವು. ಉಸಿರು ಬಿಗಿ ಹಿಡಿದು ಒಂದು ಕುರುಚಲು ಪೊದೆಯತ್ತ ಗೋಣು ಉದ್ದ ಮಾಡಿ ನೋಡಿದರೆ ಹುಲ್ಲಿನ ರಾಶಿಯ ನಡುವಿನಿಂದ ಮೇಲೆದ್ದ ನಾಲ್ಕು ಕಾಲುಗಳು ಕಂಡವು. ಕಾಣಿಸಿದ್ದು ಒಂದೇ ಸಿಂಹ. ನಾವೆಲ್ಲ ಸುಮಾರು ಹತ್ತು ನಿಮಿಷ ಅಲ್ಲೇ ಕಾದ ಮೇಲೆ ಆ ಸಿಂಹ ಎದ್ದು ಆಕಳಿಸುತ್ತ ಪೊದೆಯ ಹೊರಗೆ ಬಂದಿತು.

ಎಲ್ಲಿದ್ದವೋ ಏನೋ ಅದರ ಹಿಂದಿನಿಂದ ಮತ್ತೆರಡು ಸಿಂಹಗಳೂ ಒಂದು ಸಿಂಹಿಣಿಯೂ ಹೊರಬಂದವು. ಅವುಗಳಿಗೆ ದಿನಾ ಈ ವಾಹನಗಳನ್ನು ನೋಡಿ ರೂಢಿಯಾಗಿಬಿಟ್ಟಿದೆ ಅನಿಸುತ್ತದೆ, ಒಂದು ಚೂರೂ ವಿಚಲಿತರಾಗದೇ ಆರಾಮಾಗಿ ನಮ್ಮ ಕಾರಿನ ಕಿಟಕಿಯ ಬಳಿಯೇ ಕೂತುಬಿಟ್ಟವು. ನನ್ನಮ್ಮನಂತೂ ‘ಎಷ್ಟು ಹತ್ತಿರ ಬಂದಿದೆಯೇ, ಮೈ ಸವರೋಣ ಎನಿಸುತ್ತಿದೆ’ ಎಂದೆಲ್ಲ ಹಲುಬತೊಡಗಿದ್ದಳು. ಅಂತಹ ದೃಶ್ಯದ ಮುಂದೆ ಒಬ್ಬ ಛಾಯಾಗ್ರಾಹಕನ ಮನ ಕುಣಿಯದಿದ್ದೀತೆ? ಆ ದಿನ ನಮಗೆ ನೋಡಲಿಕ್ಕೆ ಸಿಕ್ಕಿದ್ದು ಅಷ್ಟೆ, ನಂತರ ನಮ್ಮ ಟೆಂಟ್‌ಗೆ ಮರಳಿದೆವು. ಮರುದಿನ ಇಡೀ ದಿನದ ಸಫಾರಿಗೆಂದು ಸಫಾರಿ ವಾಹನ ಬುಕ್ ಆಗಿತ್ತು.

ಬೆಳಿಗ್ಗೆ ಕೆಂಪು ಚೌಕಳಿ ‘ಶುಕಾ’ ಧರಿಸಿದ ಇಂಗ್ಲಿಷ್ ಬಲ್ಲ ಮಸಾಯಿ ಡ್ರೈವರ್ ಹಾಜರಾಗಿದ್ದ. ಸೀದಾ ನಮ್ಮನ್ನು ಮಾರ ನದಿಯ ದಿಕ್ಕಿನತ್ತ ಕರೆದುಕೊಂಡು ಹೋದ. ನಾವು ಹೋಗುವ ಎರಡು ದಿನಗಳ ಮುಂಚೆಯಷ್ಟೇ ‘ವೈಲ್ಡ್ ಬೀಸ್ಟ್ ಮೈಗ್ರೇಶನ್’ ಆಗಿತ್ತಂತೆ. ಹಾಗಾಗಿ  ನದಿಯ ದಿಕ್ಕಿನಲ್ಲಿದ್ದ ಹುಲ್ಲಿನ ಬೆಟ್ಟಗಳಲ್ಲಿ ಎತ್ತ ನೋಡಿದರೂ ಹಿಂಡುಗಟ್ಟಲೆ ಝೀಬ್ರಾಗಳು ಮತ್ತು ನಮ್ಮ ಕಡೆ ಮಳೆಗಾಲಕ್ಕೆ ಮಂಡರಗಪ್ಪೆಗಳು ‘ವಟರ್’ ಅನ್ನುವ ಹಾಗೆ ವಿಚಿತ್ರವಾಗಿ ಹೂಂಕರಿಸುವ ವೈಲ್ಡ್ ಬೀಸ್ಟ್‌ಗಳು ಮೇಯುತ್ತಿರುವ ದೃಶ್ಯ. 

ನದಿ ದಾಟುವ ಒಂದು ದಿನ ಮುಂಚೆ ಈ ಬೀಸ್ಟ್‌ಗಳು ನದಿ ತೀರದತ್ತ ಜಮಾಯಿಸುತ್ತವಂತೆ. ಮತ್ತು ತಮ್ಮ ತಮ್ಮೊಳಗೇ ಹೂಂಕರಿಸುವಿಕೆಯಿಂದ ಸಂದೇಶ ರವಾನಿಸುತ್ತವಂತೆ. ಆಮೇಲೆ ಇದ್ದಕ್ಕಿದ್ದಂತೆ ನದಿ ದಾಟಲು ಶುರು ಮಾಡಿಬಿಡುತ್ತವೆ. ಇದನ್ನು ನಾನು ಹುಟ್ಟಿದಾಗಲಿಂದ ಪ್ರತಿ ವರ್ಷ ನೋಡುತ್ತಲೇ ಬಂದಿದ್ದೇನೆ ಎಂದು ನಮ್ಮೊಂದಿಗಿದ್ದ ಡ್ರೈವರ್ ಹೇಳಿದ್ದ. ಎಲ್ಲೆಂದರಲ್ಲಿ ಮೇಯುವ ಬಡಪಾಯಿ ವೈಲ್ಡ್ ಬೀಸ್ಟ್‌ಗಳು, ಝೀಬ್ರಾಗಳು ಮತ್ತು ಹರಿಣಗಳನ್ನು ಸಿಂಹಗಳು ಮತ್ತು ಚಿರತೆಗಳು ಹುಲ್ಲಿನ ಮರೆಯಲ್ಲಿ ಕಾದು ಎರಗುವ ರೋಚಕ ಬೇಟೆಗಳು ಈ ಸೀಸನ್ನಿನಲ್ಲಿ ಜಾಸ್ತಿ ಸಿಗುತ್ತದೆ. ‘ನ್ಯಾಶನಲ್ ಜಿಯೊಗ್ರಫಿಕ್ ಚಾನಲ್‌’ನಲ್ಲಿ ತೋರಿಸುವ ದೃಶ್ಯಗಳನ್ನು ಕಣ್ಣೆದುರಿಗೆ ಕಾಣಬಹುದು.

ಮಸಾಯಿಗಳ ಬದುಕು ಹೇಗಿರುತ್ತದೆ ಎಂಬ ಕುತೂಹಲ ನಿಮಗಿದ್ದರೆ ನೀವು ಅಲ್ಲಿನ ಮಸಾಯಿ ಹಳ್ಳಿಗಳಿಗೆ ಭೇಟಿ ನೀಡಬಹುದು. ಅದು ಉಚಿತವೇನೂ ಅಲ್ಲ. ಅವರ ಹಟ್ಟಿಗಳು, ಸಂಪ್ರದಾಯಗಳು, ದಿನನಿತ್ಯದ ಬದುಕು, ಹಾಡು–ಕುಣಿತ ಎಲ್ಲವನ್ನೂ ನಮಗೆ ತೋರಿಸುತ್ತಾರೆ. ಪ್ರವಾಸೋದ್ಯಮದ ವ್ಯಾಪಾರಿ ತಂತ್ರಕ್ಕನುಗುಣವಾಗಿ ಒಂದು ಸಿದ್ಧ ಮಾದರಿಯಲ್ಲಿ ಮಸಾಯಿಗಳ ವಿವರಣೆಗಳಿರುತ್ತವೆ. ಅದರ ಅರಿವಿದ್ದುಕೊಂಡು ನೋಡಲು ಹೋದರೆ ಒಳ್ಳೆಯದು. 

ತಾಂಝಾನಿಯಾದ ‘ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನ’ ಮತ್ತು ಕೀನ್ಯಾದ ‘ಮಸಾಯಿ ಮಾರ’ ರಾಷ್ಟ್ರೀಯ ವನ್ಯಜೀವಿ ಅಭಯಾರಣ್ಯ ಎರಡನ್ನೂ ಒಳಗೊಂಡ ಭೂಪ್ರದೇಶವು ಮೂಲತಃ ಮಸಾಯಿ ಸಮುದಾಯಕ್ಕೆ ಸೇರಿದ ಜಾಗವಾಗಿತ್ತು. ಅದರ ಒಟ್ಟೂ ವ್ಯಾಪ್ತಿ ಸುಮಾರು 25 ಸಾವಿರ ಚ.ಕಿ.ಮೀ. ಕೀನ್ಯಾಕ್ಕೆ ಸೇರಿದ ಜಾಗದೊಳಗೆ ಕಾಲು ಭಾಗ ವನ್ಯಜೀವಿಗಳ ಸಂರಕ್ಷಿತ ಪ್ರದೇಶವಾದರೆ, ಉಳಿದ ಮುಕ್ಕಾಲು ಭಾಗ ಮಸಾಯಿಗಳ ಹಿಡಿತದಲ್ಲಿದೆ. ತಮಗೆ ಸೇರಿದ ಜಾಗದಲ್ಲಿ ಸ್ಥಳದಿಂದ ಸ್ಥಳಕ್ಕೆ ಗುಳೆ ಹೋಗುವ ಗೋಪಾಲಕ ಮಸಾಯಿಗಳು ಈಗೀಗ ಕೃಷಿಯತ್ತ ವಾಲಿದ್ದಾರಂತೆ.

ನಾವು ಕೀನ್ಯಾದಲ್ಲಿ ಇದ್ದೇವೆ ಎಂದು ಗೊತ್ತಾದವರೆಲ್ಲ ‘ಮಸಾಯಿ ಮಾರ’ದ ಬಗ್ಗೆ ವಿಚಾರಿಸುತ್ತಾರೆ. ನಿಜ ಹೇಳಬೇಕೆಂದರೆ ಅದು ಅಷ್ಟೆಲ್ಲ ಜನಪ್ರಿಯವಾದ ತಾಣ ಎಂದು ನನಗೆ ಇಲ್ಲಿಗೆ ಬಂದಮೇಲೆಯೇ ಗೊತ್ತಾಯಿತು. ಹುಲಿಯೊಂದನ್ನು ಬಿಟ್ಟು ಉಳಿದೆಲ್ಲಾ ಕಾಡುಪ್ರಾಣಿಗಳನ್ನೂ ಈ ವನ್ಯಜೀವಿ ಅಭಯಾರಣ್ಯದಲ್ಲಿ ನೀವು ಕಾಣಬಹುದು. ಮುಖ್ಯವಾಗಿ ಸಿಂಹ, ಆನೆ, ಚಿರತೆ, ಕರಿ ರೈನೋಸರಸ್ ಮತ್ತು ಕಾಡೆಮ್ಮೆಗಳಿಗೆ ‘ಮಸಾಯಿ ಮಾರ’ ಪ್ರಖ್ಯಾತವಾಗಿದೆ.

ಜುಲೈನಿಂದ ಸೆಪ್ಟೆಂಬರ್‌ವರೆಗಿನ ತಿಂಗಳುಗಳಲ್ಲಿ ಪ್ರವಾಸಿಗರು ಜಾಸ್ತಿ. ಯಾಕೆಂದರೆ ಆ ಸಮಯದಲ್ಲೇ ತಾಂಝಾನಿಯಕ್ಕೆ ಸೇರಿದ ‘ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನ’ದಿಂದ ಲಕ್ಷಗಟ್ಟಲೆ ಕಾಡುಪ್ರಾಣಿಗಳು ಗಡಿಯಲ್ಲಿ ಹರಿಯುವ ಮಾರ ನದಿಯನ್ನು ದಾಟಿಕೊಂಡು ಇತ್ತಕಡೆಗೆ ವಲಸೆ ಬರುತ್ತವೆ. ಹೊಟ್ಟೆ ತುಂಬುವಷ್ಟು ತಿಂದ ಮೇಲೆ ಮರಳಿ ಹೋಗುತ್ತವೆ. ಈ ವಲಸೆಯ ಪ್ರಕ್ರಿಯೆ ವರ್ಷದ ಈ ಮೂರು ತಿಂಗಳುಗಳಲ್ಲಿ ನಿರಂತರವಾಗಿ ಆಗುತ್ತಲೇ ಇರುತ್ತದೆ. ಆ ಸಮಯದಲ್ಲಿ ಸೊಂಪಾದ ಹುಲ್ಲು ತಯಾರಾಗಿರುತ್ತದೆ. 

ತಾಂಝಾನಿಯ ಮತ್ತು ಕೀನ್ಯಾದ ಗಡಿಯಲ್ಲಿ ಹರಿಯುವ ಮಾರ ಮತ್ತು ಅದರ ಉಪನದಿಗಳಲ್ಲಿ ಯಮರಾಯನ ಏಜೆಂಟುಗಳಂತೆ ಕಾಯುವ ಮೊಸಳೆಗಳ ಬಾಯಿಂದ ತಪ್ಪಿಸಿಕೊಂಡು ನದಿ ದಾಟುವ ಕಾಡುಪ್ರಾಣಿಗಳಲ್ಲಿ ಹಿಂಡುಗಟ್ಟಲೇ ಝೀಬ್ರಾಗಳು ಮತ್ತು ವೈಲ್ಡ್ ಬೀಸ್ಟ್‌ಗಳು ಮಾತ್ರ ಇರುತ್ತವೆ. ನದಿ ದಾಟುವುದಕ್ಕೆ ನಿರ್ದಿಷ್ಟ ದಿನ ಅಥವಾ ಸಮಯ ಇರುವುದಿಲ್ಲ. ಆದ್ದರಿಂದ ಪ್ರಾಣಿಗಳು ನದಿ ದಾಟುವುದನ್ನು ನೀವು ನೋಡಲೇಬೇಕೆಂದರೆ ಅಥವಾ ನೀವೊಬ್ಬ ವೃತ್ತಿನಿರತ ಛಾಯಾಗ್ರಾಹಕರಾಗಿದ್ದರೆ ಆ ಸೀಸನ್ನಿನಲ್ಲಿ ಕನಿಷ್ಠ ಅಂದರೂ ಒಂದು ವಾರ ಇರಬೇಕು. ಈಗ ‘ಮೈಗ್ರೇಶನ್’ ಯಾವಾಗ, ಯಾವ ದಿಕ್ಕಿನಿಂದ ಸಂಭವಿಸಬಹುದು ಎಂಬುದನ್ನು ವರದಿ ಮಾಡುವುದಲ್ಲದೇ ಅದನ್ನು ‘ನೇರ ಪ್ರಸಾರ’ ಮಾಡುವ ಅಂತರ್ಜಾಲ ತಾಣಗಳೂ ಇವೆ.

ಭರ್ಜರಿ ಬೇಟೆ ಮುಗಿಸಿ ಹೊಟ್ಟೆ ಭಾರವಾಗಿ ಮರದ ಮೇಲೆ ಒರಗಿದ್ದ ಚಿರತೆ, ಪ್ರಣಯ ಕೇಳಿಯಲ್ಲಿ ತೊಡಗಿದ್ದ ಸಿಂಹದ ಒಂದು ಜೋಡಿ, ಪೊದೆಯೊಂದಕ್ಕೆ ಒಟ್ಟಿಗೇ ಲಗ್ಗೆ ಹಾಕಿದ್ದ ಏಳೆಂಟು ಜಿರಾಫೆಗಳು, ನದಿ ತಟದ ಮೇಲೆ ತೂಕಡಿಸುತ್ತಿದ್ದ ಮೊಸಳೆಗಳು, ಬೋಳು ಮರಗಳ ಮೇಲೆ ಕಾದು ಕುಳಿತಿದ್ದ ರಣಹದ್ದುಗಳು, ಕಿರುಬಗಳು, ಹತ್ತಿರದಲ್ಲೆಲ್ಲೋ ಸಿಂಹವಿದೆ ಎಂಬ ಜಾಡು ತಿಳಿದು ಓಡುವ ಝೀಬ್ರಾಗಳು, ಓಡಿ ಹೋದ ಝೀಬ್ರಾಗಳಲ್ಲಿ ಒಂದನ್ನೂ ಹಿಡಿಯಲಾಗಲಿಲ್ಲವಲ್ಲ ಎಂಬ ನಿರಾಸೆಯಲ್ಲಿ ಮರಳುವ ಸಿಂಹಿಣಿ, ಇವನ್ನೆಲ್ಲ ಕಣ್ಣಾರೆ ನೋಡುವುದು ಖಂಡಿತಕ್ಕೂ ಒಂದು ಅಪೂರ್ವ ಅನುಭವ.

***

ಪ್ರವೇಶಧನ ವಿದೇಶಿಯರಿಗೆ: 80 ಡಾಲರ್

ಸೂಕ್ತ ಕಾಲ: ಜುಲೈನಿಂದ ಅಕ್ಟೋಬರ್

ಸಫಾರಿ ಒಂದು ದಿನಕ್ಕೆ: 8,000 ರಿಂದ 10,000 ಶಿಲಿಂಗ್ಸ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)