3

ಡೇನಿಯಲ್ ಸಂಕಲಿಸಿದ ‘ಕಥಾಸಂಗ್ರಹ’

Published:
Updated:
ಡೇನಿಯಲ್ ಸಂಕಲಿಸಿದ ‘ಕಥಾಸಂಗ್ರಹ’

‘ಕಥಾಸಂಗ್ರಹ ಆರ್ ಕ್ಯಾನರೀಸ್ ಸೆಲೆಕ್ಷನ್ಸ್’ ಎನ್ನುವುದು ವೆಸ್ಲಿಯನ್ ಮಿಷನರಿಯಾದ ಡೇನಿಯಲ್ ಸ್ಯಾಂಡರ್ಸನ್ ಸಂಪಾದಿತ ಕೃತಿ. 1863ರಲ್ಲಿ ಮೊದಲ ಬಾರಿಗೆ ಮುದ್ರಣಗೊಂಡ ಈ ಕೃತಿಯನ್ನು (560 ಪುಟಗಳು) ಬೆಂಗಳೂರಿನ ‘ವೆಸ್ಲಿಯನ್ ಮಿಷನ್ ಪ್ರೆಸ್‌’ನ ಡಬ್ಲ್ಯು.ಡಬ್ಲ್ಯು. ಗೌಂಟ್ ಮುದ್ರಿಸಿರುತ್ತಾರೆ.

ಸ್ಯಾಂಡರ್‌ಸನ್ ಬಹುಶ್ರುತ ಸಂಸ್ಕೃತ–ಕನ್ನಡ ವಿದ್ವಾಂಸ. 5000 ಪುಟಗಳಷ್ಟು ಸಾಹಿತ್ಯ ರಚನೆ ಇವನದು. ಆ ಕಾಲದ ಪತ್ರಿಕೆಗಳಾದ, ‘ವೃತ್ತಾಂತ ಬೋಧಿನಿ’ ಹಾಗೂ ‘ವಾಗ್ವಿಧಾಯಿನಿ’ಗಳಲ್ಲಿ ಇವನ ಬೈಬಲ್ ಸೂಕ್ತಿಗಳು, ಗೀತೆಗಳು ಹಾಗೂ ಹಲವಾರು ವಿಚಾರ ಪೂರ್ಣಲೇಖನಗಳು ಪ್ರಕಟವಾಗಿವೆ. ಕನ್ನಡ ವ್ಯಾಕರಣ ಧಾರಾವಾಹಿಯಾಗಿ ಪ್ರಕಟವಾಗಿದೆ. ‘ಏಸುವಿನ ಬಳಿಗೆ ಬಾ’ (1841), Village dialogues in canarese (1858), ‘ಕಥಾಸಂಗ್ರಹ’ (1863) ಅವರ ಪ್ರಸಿದ್ಧ ಕೃತಿಗಳು.

1810ರಲ್ಲಿ ಹುಟ್ಟಿದ ಡೇನಿಯಲ್ ಸ್ಯಾಂಡರ್‌ಸನ್, ಜರ್ಮನಿಯಿಂದ ಕರ್ನಾಟಕಕ್ಕೆ ಬಂದ ಕೂಡಲೇ ಕನ್ನಡ ಸಾಹಿತ್ಯ ಸೇವೆಯನ್ನು ಆರಂಭಿಸಿದನು. ಮುಖ್ಯವಾಗಿ ಸ್ಯಾಂಡರ್‌ಸನ್ ಕನ್ನಡ ಅಕ್ಷರಗಳ ಸುಧಾರಣೆಯಲ್ಲಿ ಕೆಲಸ ಮಾಡಿದ್ದನು. ವೆಸ್ಲಿಯನ್ ಮುದ್ರಣಾಲಯಕ್ಕೆ ಲಂಡನ್ನಿನಿಂದ ಕನ್ನಡಾಕ್ಷರಗಳ ಮೊಳೆಗಳನ್ನು ಸ್ಯಾಂಡರ್‌ಸನ್ ತರಿಸಲು ಪಟ್ಟ ಪ್ರಯತ್ನ ವಿಫಲವಾಯಿತು. ಸ್ವತಃ ತಾನೇ ಪ್ರಯೋಗಗಳನ್ನು ಮಾಡಿ ಸ್ವಂತ ಪ್ರಯತ್ನದಿಂದ ಕನ್ನಡಾಕ್ಷರ ಮೊಳೆಗಳ 10 ಪಾಯಿಂಟಿನ ಕಿರಿಯ ಆಕಾರದ ಮೊಳೆಗಳನ್ನು ಮೊದಲಿಗೆ ತಯಾರಿಸಿ ರೂಪಿಸಿದ ಕೀರ್ತಿ ಸ್ಯಾಂಡರ್‌ಸನ್‌ಗೆ ಸಲ್ಲುತ್ತದೆ.

‘ಸುಲಭ ಗದ್ಯದ ಕಥೆಗಳು’, ‘ಸುಲಭ ಪದ್ಯದ ಕಥೆಗಳು’, ‘ಹಳಗನ್ನಡ ಶೈಲಿಯ ಪದ್ಯ ಕಥನಗಳು’ ಕೃತಿಗಳನ್ನು ಬರೆದ ಸ್ಯಾಂಡರ್‌ಸನ್ 1863ರಲ್ಲಿ ಐದು ಸಂಪುಟಗಳಲ್ಲಿ ‘ಕಥಾಸಂಗ್ರಹ’ ಮಾಲಿಕೆಯನ್ನು ಪ್ರಕಟಿಸಿದನು. ಈ ಸಂಪುಟಗಳಲ್ಲಿ ಪಂಚತಂತ್ರ, ಕೀರ್ತಿಕಥಾಮೃತ, ತೆನ್ನಾಲಿ ರಾಮಕೃಷ್ಣನ ಕಥೆಗಳು, ಶಿವಪುರಾಣದ ಕಥೆಗಳು, ಅಮೃತ ಮಥನ, ಹಿಡಿಂಬ ವಧೆ, ದುಷ್ಯಂತೋಪಾಖ್ಯಾನ, ರಾಮಾಯಣದ ಕಥೆಗಳು ಹಾಗೂ ದಶಾವತಾರದ ಕಥೆಗಳು ಅಡಕವಾಗಿವೆ. ‘ಕಥಾಸಂಗ್ರಹ’ ಪುಸ್ತಕವು ಹಲವಾರು ವರ್ಷಗಳ ಕಾಲ ಐ.ಸಿ.ಎಸ್. ಪರೀಕ್ಷೆಗಳಿಗೆ ಪಠ್ಯವಾಗಿತ್ತು.

ಪ್ರಸಕ್ತ ಕೃತಿಯ ಪ್ರಿಫೇಸಿನಲ್ಲಿ ಸ್ಯಾಂಡರ್ಸನ್ ಈ ಕೃತಿ ಪ್ರಕಟಣೆಗೆ ಕಾರಣ ನೀಡುತ್ತಾನೆ. ‘ಕನ್ನಡ ಕಲಿಯುವ ಯೂರೋಪಿಯನ್ ವಿದ್ಯಾರ್ಥಿಗಳಿಗೆಂದು ನಿರ್ಮಿತಿಯಾದ ಪುಸ್ತಕ ಇದು. ಹೀಗೆಂದು ಕನ್ನಡಿಗರು ಓದಬಾರದೆಂದಲ್ಲ. ಪ್ರಾಚೀನ ಕಥಾಕೃತಿಗಳಿಂದ ಈ ಕತೆಗಳ ಸಂಗ್ರಹ ನಡೆದಿದೆ’ ಎಂದಿದ್ದಾನೆ.

ಈ ಕತಾಸಂಗ್ರಹದಲ್ಲಿ ಐದು ಭಾಗಗಳಿಂದ ಒಟ್ಟು 84 ಕತೆಗಳಿವೆ. ಕೊನೆಯ ಭಾಗವಾದ ಆರನೆಯ ಭಾಗದಲ್ಲಿ ಕನ್ನಡದಲ್ಲಿ ಅಂದಿನ ಕಾಲಘಟ್ಟದಲ್ಲಿ ಬಳಕೆಯಲ್ಲಿದ್ದ ಮುನ್ನೂರ ಇಪ್ಪತ್ತೆರಡು ಗಾದೆಗಳ ಪಟ್ಟಿ ಇದ್ದು ಸಂಶೋಧಕರಿಗೆ ಉಪಯುಕ್ತವಾಗಿದೆ. ಮೊದಲನೆಯ ಭಾಗದಲ್ಲಿ ಪಂಚತಂತ್ರ ಹಾಗೂ ಇತರ ಮೂಲ ಆಕರಗಳಿಂದ ಸಂಕಲಿಸಿದ ಐವತ್ತು ಕತೆಗಳಿವೆ. ಎರಡನೆಯ ಭಾಗದಲ್ಲಿ ಶಿವ ಪುರಾಣದಿಂದ ಆಯ್ಕೆ ಮಾಡಿದ ನಾಲ್ಕು ಕತೆಗಳಿದ್ದರೆ, ಮೂರನೆಯ ಭಾಗದಲ್ಲಿ ಮಹಾಭಾರತದಿಂದ ಸಂಗ್ರಹಿಸಿದ ಹತ್ತು ಕತೆಗಳಿವೆ. ನಾಲ್ಕನೆಯ ಭಾಗದಲ್ಲಿ ರಾಮಾಯಣದಿಂದ ಆರಿಸಿದ ಹತ್ತು ಕತೆಗಳೂ, ಐದನೆಯ ಭಾಗದಲ್ಲಿ ದಶಾವತಾರದ ಹತ್ತು ಕತೆಗಳೂ ಇವೆ.

ವಿದ್ಯಾರ್ಥಿಗಳಿಗೆ ಉಪಯುಕ್ತವೂ, ಭೋದಪ್ರದವೂ, ದಿನನಿತ್ಯದ ವ್ಯವಹಾರಕ್ಕೆ ಸ್ಫೂರ್ತಿಯನ್ನು ನೀಡಬಹುದಾದ ಸಾಹಿತ್ಯಕ ಹಾಗೂ ಚಮತ್ಕಾರಿಕ ಕತೆಗಳನ್ನು ಆರಿಸುವುದರಲ್ಲಿ ಸ್ಯಾಂಡರ್ಸನ್ ಅಪಾರವಾದ ಶ್ರದ್ಧೆ ಹಾಗೂ ವಿವೇಕವನ್ನು ತೋರಿದ್ದಾನೆ. ಅಚ್ಚರಿಯೆಂದರೆ, ವರ್ಣಾಶ್ರಮ ಧರ್ಮ ಹಾಗೂ ಸ್ತ್ರೀಯರನ್ನು ಕುರಿತ ಭಾರತೀಯ ಯಥಾಸ್ಥಿತಿವಾದಿಗಳ ಧೋರಣೆಯನ್ನೇ ಇವನು ಆರಿಸಿರುವ ಕತೆಗಳಲ್ಲಿ ಗಮನಿಸಬಹುದು. ಆ ಕಾಲಘಟ್ಟದಲ್ಲಿ ಬಂದ ಇತರ ಜರ್ಮನ್ ಪಾದ್ರಿಗಳ ಪ್ರಗತಿಪರ, ನೂತನ ಹಾಗೂ ಸಾಮಾಜಿಕ ಸುಧಾರಣಾ ಮನೋಧರ್ಮ ಇವನಲ್ಲಿ ಕಂಡುಬರದಿರುವುದು ಸೋಜಿಗ.

‘ಹುಲಿಯನ್ನೂ ಮನುಷ್ಯನನ್ನೂ ಕುರಿತು’ ಎನ್ನುವ ಕತೆಯು ಈ ಕೃತಿಯಲ್ಲಿನ ಅತ್ಯಂತ ಚಿಕ್ಕ ಕತೆಯಾಗಿದ್ದು, ಒಂಬತ್ತು ಸಾಲುಗಳ ಈ ಕತೆ ಐದು ವಾಕ್ಯಗಳನ್ನು ಒಳಗೊಂಡಿದೆ. ‘ರಾವಣನ ದಿಗ್ವಿಜಯ’ ಅತ್ಯಂತ ದೊಡ್ಡ ಕತೆಯಾಗಿದ್ದು 33 ಪುಟಗಳಷ್ಟು ದೊಡ್ಡದಾಗಿದೆ.

‘ಹುಲಿಯನ್ನೂ ಮನುಷ್ಯನನ್ನೂ ಕುರಿತು’ ಕತೆ ಹೀಗಿದೆ:

‘‘ಒಂದು ಊರಿನಲ್ಲಿ ಒಬ್ಬ ಮನುಷ್ಯನೂ  ಒಂದು ಹುಲಿಯೂ ಸ್ನೇಹಿತರಾಗಿದ್ದು, ಒಂದು ಮಶೀತಿಗೆ ಹೋದರು. ಆ ಮಶೀತಿಯಲ್ಲಿ ಒಂದು ಹುಲಿಯನ್ನು ಒಬ್ಬ ಮನುಷ್ಯನು ಏರಿಕೊಂಡು, ಕಠಾರಿಯಿಂದ ತಿವಿಯುತ್ತಾ ಇರುವದಾಗಿ ಚಿತ್ರದಲ್ಲಿ ಬರೆದಿತ್ತು. ಅದನ್ನು ಈ ಮನುಷ್ಯನು ನೋಡಿ, ಐಯ್ಯಾ ಹುಲಿರಾಯನೇ, ನೋಡು! ಈ ಮನುಷ್ಯನು ಎಷ್ಟು ಘಟ್ಟಿಗನು! ಇಂಥಾ ಕ್ರೂರವಾದ ಹುಲಿಯನ್ನು ತಾನು ಹತ್ತಿಕೊಂಡು, ಕಠಾರಿಯಿಂದ ಇರಿಯುತ್ತಾನೆ ಎಂದು, ಹೇಳಲು; ಅದಕ್ಕೆ ಆ ಹುಲಿಯು – ಈ ಚಿತ್ರವನ್ನು ಮನುಷ್ಯ ಬರೆದು ಇದ್ದಾನೆ, ಹುಲಿಯು ಎಂದಿಗೂ ಹೀಗೆ ಬರೆಯಲಾರದು ಎಂದು ಹೇಳಿದ್ದರಿಂದ, ಮನುಷ್ಯನು ನಾಚಿಕೊಂಡು, ಸುಮ್ಮನಾದನು’’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry