3

ಸನ್ಮಾನ್ಯ ಸಭಾಧ್ಯಕ್ಷರೇ ನಮ್ಮನ್ನು ಜೈಲಿಗೆ ಕಳಿಸಿಬಿಡಿ...

Published:
Updated:
ಸನ್ಮಾನ್ಯ ಸಭಾಧ್ಯಕ್ಷರೇ ನಮ್ಮನ್ನು ಜೈಲಿಗೆ ಕಳಿಸಿಬಿಡಿ...

ಇದೆಲ್ಲ ಅಷ್ಟು ಸರಳವಾಗಿಲ್ಲ, ಇದು ಒಬ್ಬಿಬ್ಬರು ಆಡಿದ ಮಾತಿನಂತೆಯೂ ಅನಿಸುವುದಿಲ್ಲ; ಇದರಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲರಿಗೂ ಸಹಮತ ಇರುವಂತೆ ಕಾಣುತ್ತದೆ. ಇಲ್ಲವಾಗಿದ್ದರೆ ಎಲ್ಲ ಬಿಟ್ಟು ಈ ವಿಷಯ ಚರ್ಚೆಗೆ ಬರುತ್ತಿರಲಿಲ್ಲ. ಬಂದರೂ ಅದು ನಾಲ್ಕು ಗಂಟೆ ಕಾಲ ವಿಸ್ತಾರವಾಗುತ್ತಿರಲಿಲ್ಲ. ಆದರೂ ಅದು ಏಕಮುಖ ಆಗಿ ಇರುತ್ತಿರಲಿಲ್ಲ.ಈಗ ನೋಡಿದರೆ ಯಾರೋ ಎತ್ತಿಕೊಟ್ಟಂತೆ ಕಾಣುತ್ತದೆ. ಮುನ್ನುಗ್ಗುವ ಕಾಲಾಳುಗಳನ್ನು ಸಿದ್ಧ ಮಾಡಿ ಅವರ ಬಾಲ ತಿರುವಿ ಹುರಿದುಂಬಿಸಿದಂತೆ ಅನಿಸುತ್ತದೆ. ಬಾಲ ತಿರುವಿದವರು ಒಂದೋ ಸದನದಲ್ಲಿ ಏನೂ ಕೇಳದವರಂತೆ ಸುಮ್ಮನೆ ಕುಳಿತಿದ್ದರು. ಅಥವಾ ಕೆಲವರು ಹೊರಗೆ ಉಳಿದರೂ ಉಳಿದಿದ್ದಿರಬಹುದು! ಆದರೆ, ಇಡೀ ಸದನದಲ್ಲಿ ಒಬ್ಬರನ್ನು ಬಿಟ್ಟರೆ ಎಲ್ಲರದೂ ಒಂದೇ ಅಭಿಪ್ರಾಯ ಇದ್ದಂತೆ ಇತ್ತು : ‘ಈ ಮಾಧ್ಯಮದವರದು ಜಾಸ್ತಿಯಾಯಿತು, ಮತ್ತು ಅವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು’. ಕಳೆದ ಮೂವತ್ತು ವರ್ಷಗಳಲ್ಲಿ ಹೀಗೆ  ಅಧಿವೇಶನದಲ್ಲಿ ನಾಲ್ಕು ಗಂಟೆಗಳಷ್ಟು ದೀರ್ಘ ಕಾಲ ಮಾಧ್ಯಮಗಳ ಮೇಲೆ ದಾಳಿ ನಡೆದುದು ನನಗೆ ನೆನಪು ಇಲ್ಲ. ನ್ಯಾಯಾಂಗದ ಮೇಲೆ ಇಂಥ ದಾಳಿ ಅನೇಕ ಸಾರಿ ನಡೆದಿದೆ. ಈಗ ಹೊಸದಾಗಿ ಮಾಧ್ಯಮದ ಸರದಿ ಶುರುವಾಗಿದೆ. ಇದು ಇನ್ನು ಮುಂದೆ  ಮತ್ತೆ ಮತ್ತೆ ನಡೆಯುವಂತೆ ಕಾಣುತ್ತದೆ.ಇರಬಹುದು. ಮಾಧ್ಯಮದಲ್ಲಿ ಇದ್ದವರು ಎಲ್ಲರೂ ಹರಿಶ್ಚಂದ್ರರೇ ಆಗಿಲ್ಲದೇ ಇರಬಹುದು. ಶಾಸಕರಲ್ಲಿ ಎಲ್ಲರೂ ಹರಿಶ್ಚಂದ್ರರೇ ಹೇಗೆ ಇಲ್ಲವೋ ಹಾಗೆಯೇ ಮಾಧ್ಯಮದಲ್ಲಿಯೂ ಕಳ್ಳರು, ಸುಳ್ಳರು, ವಸೂಲಿ ವೀರರು, ವರ್ಗಾವಣೆಯಲ್ಲಿ ದುಡ್ಡು ಮಾಡುವವರು, ಅಧಿಕಾರದಲ್ಲಿ ಇದ್ದವರ ಹಿಂದೆ ಮುಂದೆ ಓಡಾಡಿ ಹಲ್ಲು ಕಿರಿದು ಓಲೈಸುವವರು, ಮುಂದೆ  ಅಲ್ಲಿ ಯಾವುದೋ ಅಧಿಕಾರದ ಮೇಲೆ ಕಣ್ಣು ಹಾಕಿ ಈಗಲೇ ಅವರಿಗಾಗಿ ಪೆನ್ನನ್ನು ಮಾರಿಕೊಂಡವರು ಇರಬಹುದು. ನಿಜ. ಮಾಧ್ಯಮದಲ್ಲಿ ಎಲ್ಲವೂ ಸರಿ ಇಲ್ಲ. ಸಮಾಜವೇ ಹಾಗಿದೆ. ಇದು ಮಾದರಿಗಳು ಮತ್ತು ಆದರ್ಶಗಳು ಕಡಿಮೆ ಇರುವ ಕಾಲ. ಮುದ್ರಣ ಮಾಧ್ಯಮಕ್ಕೆ ವಯಸ್ಸಾಗಿದೆ. ಅಲ್ಲಿಯೂ ಸಮಸ್ಯೆಗಳು ಇದ್ದರೂ ಅದಕ್ಕೆ ಒಂದಿಷ್ಟು ಪ್ರಬುದ್ಧತೆ ಇದೆ. ಅಲ್ಲಿ ಒಂದಿಷ್ಟು ಮಾದರಿಗಳು, ಆದರ್ಶಗಳು ಇವೆ.ಎಲೆಕ್ಟ್ರಾನಿಕ್‌ ಮಾಧ್ಯಮ ಇನ್ನೂ ಹುಡುಗು ವಯಸ್ಸಿನದು. ಎಲ್ಲರಿಗೂ ಹದಿಹರಯ. ಬಂಡೆಗೂ ಡಿಕ್ಕಿ ಹೊಡೆಯಬೇಕು ಎನ್ನುವ ಹುರುಪು. ಹುಚ್ಚು.  ಅಲ್ಲಿನ ಕೆಲವರಿಗೆ ಅಪ್ರಬುದ್ಧತೆ, ಇನ್ನು ಕೆಲವರಿಗೆ ಅಹಂಕಾರ. ಹಾಗೆಂದು ಎಲ್ಲರೂ ಹೀಗೆಯೇ ಇಲ್ಲ. ಆದರೆ, ಅಪ್ರಬುದ್ಧರ, ಅಹಂಕಾರಿಗಳ ನಡುವೆ ಅವರ ದನಿ ಅಡಗಿದಂತೆ ಭಾಸವಾಗುತ್ತದೆ. ಯಾವಾಗಲೂ ಹಾಗೆಯೇ ಅಲ್ಲವೇ? ಮೆಲು ಮಾತಿನ ಸಜ್ಜನರ ಮಾತು ಕೇಳುವುದು ಕಷ್ಟ. ಅಪ್ರಬುದ್ಧರು ಮತ್ತು ಅಹಂಕಾರಿಗಳು ಮಾಧ್ಯಮದವರಾಗಿ ತಮಗೆ ಪ್ರಶ್ನೆ ಕೇಳುವ ಅಧಿಕಾರ ಮಾತ್ರ ಇದೆ ಎಂಬುದನ್ನು ಮರೆತಿದ್ದಾರೆ. ತಮಗೆ ವಿಚಾರಣೆ ಮಾಡುವ, ತೀರ್ಪು ನೀಡುವ ಅಧಿಕಾರ  ಇದೆ ಎಂದು ಅವರು ಅಂದುಕೊಂಡಿದ್ದಾರೆ.ಜನರನ್ನು ಒಂದೇ ಸಾರಿ ನೇಣಿಗೆ ಏರಿಸುವ ಅಧಿಕಾರವೂ ತಮಗೆ ಇದೆ ಎಂದು ಅವರು ತಮ್ಮಷ್ಟಕ್ಕೆ ತಾವೇ ಅಂದುಕೊಂಡಿದ್ದಾರೆ. ಸಮಸ್ಯೆಯಾಗಿರುವುದೇ ಇಲ್ಲಿ. ಮೊನ್ನೆ ನೋಡಿರಬೇಕು : ಶಿವಸೇನೆಯ ಸಂಸದ ವಿಮಾನದಲ್ಲಿ ಶುದ್ಧ ಗೂಂಡಾ ತರಹ ವರ್ತಿಸಿರಬಹುದು. ಆದರೆ, ಒಂದು ಚಾನೆಲ್‌ನವರು ‘ಆತನನ್ನು ಈ ಕ್ಷಣ ಬಂಧಿಸಬೇಕು’ ಎಂದು  ಒತ್ತಾಯಿಸುತ್ತಿದ್ದುದು ಬಾಲಿಶವಾಗಿತ್ತು. ಅವರ ಒತ್ತಡ ಹೆಚ್ಚಿದಷ್ಟು ಶಿವಸೇನೆಯ ಮುಖಂಡರು, ‘ಏನು ಆಗುತ್ತದೆ ನೋಡಿಯೇ ಬಿಡೋಣ’ ಎಂದು ಮೊಂಡು ಬಿದ್ದರು.ಇಲ್ಲಿಯೂ ಹಾಗೆಯೇ ಆಗಿರಬಹುದು. ಬಹುಶಃ ಶಾಸಕರು ಬಹಳ ದಿನಗಳಿಂದ ನಮ್ಮನ್ನೆಲ್ಲ ಬಡಿಯಬೇಕು ಎಂದುಕೊಂಡಿದ್ದರು ಎಂದು ಅನಿಸುತ್ತದೆ. ಬಿ.ಆರ್‌.ಪಾಟೀಲರಂತೂ ಕಳೆದ ಜೂನ್‌ ತಿಂಗಳಿನಲ್ಲಿ ರಾಜ್ಯಸಭೆ ಚುನಾವಣೆ ನಡೆದಾಗಿನಿಂದಲೇ ಕುದಿಯುತ್ತಿದ್ದರು. ಅವರನ್ನು ಒಂದು ಟೀವಿ ವಾಹಿನಿಯವರು ಮಾರುವೇಷದ ಕಾರ್ಯಾಚರಣೆಯಲ್ಲಿ ತೋರಿಸಿದ್ದರು. ಅದರಿಂದ ತಮಗೆ ಅನ್ಯಾಯವಾಯಿತು ಎಂದು ಅವರಿಗೆ ಅನಿಸಿತ್ತು. ಸುರೇಶಗೌಡರಿಗಂತೂ ಯಾವಾಗಲೂ ಸಿಟ್ಟು ಮೂಗಿನ ಮೇಲೆಯೇ ಇರುತ್ತದೆ. ಸದನದಲ್ಲಿ ಮಾತನಾಡಿದವರಿಗೆ  ಮಾತ್ರ ನಮ್ಮ ವಿರುದ್ಧ ಸಿಟ್ಟು ಇತ್ತು ಎಂದು ಹೇಗೆ ಅಂದುಕೊಳ್ಳುವುದು? ಮಾತನಾಡದೇ ಇರುವವರಿಗೂ ಬೇಕಾದಷ್ಟು ಸಿಟ್ಟು ಇದ್ದಿರಬಹುದು.ಸಭಾಧ್ಯಕ್ಷರಂತೂ ಅವಕಾಶಕ್ಕಾಗಿ ಕಾಯುತ್ತ ಇದ್ದಂತೆ  ಇತ್ತು. ಅವರೇ ಅಲ್ಲವೇ ಸದಸ್ಯರಿಗೆ ಮಾತನಾಡಲು ಅವಕಾಶ ಮಾಡಿಕೊಡುವುದು? ಒಂದೇ ಸೋಜಿಗ ಎಂದರೆ ಒಂದೇ ಸಾರಿ ಎರಡೂ ಸದನಗಳಲ್ಲಿ, ಮೊದಲೇ ಮಾತನಾಡಿಕೊಂಡವರಂತೆ ಒಂದೇ ವಿಷಯ ಚರ್ಚೆ  ಮಾಡಿದ್ದು. ‘ಬರ, ಗಿರ ಎಲ್ಲ ಸಾಮಾನ್ಯ ಸಂಗತಿಗಳು. ಪ್ರತಿ ವರ್ಷ ಇದ್ದೇ ಇರುತ್ತದಲ್ಲ. ಸಾಯುವ ಜನರನ್ನು ಉಳಿಸಲು ಆಗುತ್ತದೆಯೇ? ಮೊದಲು ಮಾಧ್ಯಮದವರನ್ನು ಬಡಿದು ಬಿಸಾಕೋಣ’ ಎಂದು ಅವರು ಎಲ್ಲರೂ ನಿರ್ಧರಿಸಿದಂತೆ  ಇತ್ತು!ಸದನದಲ್ಲಿ ಸದಸ್ಯರಿಗೆ ಅಸೀಮವಾದ ಅಧಿಕಾರ  ಇರುತ್ತದೆ. ಅವರು ಅಲ್ಲಿ ಏನು ಬೇಕಾದರೂ ಮಾತನಾಡಬಹುದು. ಅವರು ಅಲ್ಲಿ ಮಾನಹಾನಿಕರವಾದ ಮಾತುಗಳನ್ನು ಆಡಿದರೂ, ಆಪಾದನೆ ಮಾಡಿದರೂ ಹೊರಗೆ ಇದ್ದವರು ಏನೂ ಮಾಡುವಂತೆ  ಇಲ್ಲ. ಅದು ಅವರಿಗೆ ಸಂವಿಧಾನ ಕೊಟ್ಟ ರಕ್ಷಣೆ. ಮಾಧ್ಯಮದವರ ಮೇಲೆ ದಾಳಿ ನಡೆದಾಗ ಒಬ್ಬ ಸದಸ್ಯರು, ಸೂ.. ಮಕ್ಕಳು, ಬೋ.. ಮಕ್ಕಳು.. ಎಂದೆಲ್ಲ ಅಪ್ಪಟ ಅಸಂಸದೀಯ ಭಾಷೆಯಲ್ಲಿ ನಮಗೆ ಮಂಗಳಾರತಿ ಮಾಡಿದ್ದಾರೆ. ಇರಲಿ. ‘ನಿಂದಕರು ಇರಬೇಕು... ’ ಎಂದು ದಾಸರು ಹಾಡಿದ್ದಾರೆ. ಆದರೆ, ಸದನದ ನಡಾವಳಿಗಳಲ್ಲಿ ಕೆಲವು ಸೂಕ್ಷ್ಮಗಳು, ಸನ್ನಡತೆಗಳು ಇವೆ. ‘ಸದನದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲು ಆಗದವರ ಮೇಲೆ ಆರೋಪ ಮಾಡಬಾರದು’ ಎಂಬ ಸಂಪ್ರದಾಯವನ್ನು ನಮ್ಮ ಸಂಸದೀಯ ವ್ಯವಸ್ಥೆ ಕಾಪಾಡಿಕೊಂಡು ಬಂದಿದೆ.ಇಂಥ ಸಂಪ್ರದಾಯಗಳನ್ನು ಕಾಪಾಡುವ ಹೊಣೆಗಾರಿಕೆ ಸಭಾಧ್ಯಕ್ಷರಿಗೆ ಸೇರಿದ್ದು. ಮಾಧ್ಯಮದ ಮೇಲೆ ದಾಳಿ ನಡೆದಾಗ ಅವರು ಸುಮ್ಮನೆ ಇದ್ದುದು ಆಶ್ಚರ್ಯಕರ ಎನ್ನೋಣವೇ ಅಥವಾ ಅರ್ಥಪೂರ್ಣ ಎನ್ನೋಣವೇ? ಇನ್ನೊಬ್ಬ ಸದಸ್ಯರು, ಮಾಧ್ಯಮದವರನ್ನು ಜಿಲ್ಲೆ ಅಥವಾ ತಾಲ್ಲೂಕು ಪಂಚಾಯ್ತಿ ಚುನಾವಣೆಗೆ ನಿಲ್ಲಿಸಬೇಕು ಎಂದು ಹೇಳಿದ್ದೂ ಅಷ್ಟೇ ಆಶ್ಚರ್ಯಕರವಾಗಿದೆ. ಮಾಧ್ಯಮದಲ್ಲಿ ಇರುವ ನಾವೇನು ಯಾರಿಗಾದರೂ ನೀವು ವಿಧಾನಸಭೆಗೆ ಚುನಾವಣೆಗೆ ನಿಲ್ಲಿ ಎಂದು ಹೇಳಿದ್ದೇವೆಯೇ? ಒತ್ತಾಯಿಸಿದ್ದೇವೆಯೇ? ಅವರು ಚುನಾವಣೆಗೆ ಏಕೆ ನಿಂತರೋ ಯಾರಿಗೆ ಗೊತ್ತು? ಅವರವರ ಕಷ್ಟ ಅವರವರಿಗೆ. ನೀವು ‘ತಪ್ಪಿಲ್ಲದೇ ಮೂರು ಪ್ಯಾರಾ ಸುದ್ದಿ ಬರೆದು ತೋರಿಸಿ’ ಎಂದು ನಾವು ಶಾಸಕರಿಗೆ ಹೇಳಲು ಆಗುತ್ತದೆಯೇ?ಸಮಸ್ಯೆ ಏನಾಗಿರಬಹುದು ಎಂದರೆ ಮಾಧ್ಯಮ ಹೆಚ್ಚು ಸಕ್ರಿಯವಾಗಿದೆ ಎಂದು ಜನಪ್ರತಿನಿಧಿಗಳಿಗೆ ಅನಿಸುತ್ತ ಇರಬಹುದು. ಅವರು ನಗುತ್ತ ಇರುವುದನ್ನು ಮಾತ್ರ ನಾವು ತೋರಿಸುತ್ತ ಇಲ್ಲದೇ ಇರಬಹುದು. ಅವರ ತಪ್ಪುಗಳಿಗೆ ಕನ್ನಡಿ ಹಿಡಿಯುವುದು ಅವರಿಗೆ ಬೇಡ ಅನಿಸುತ್ತ ಇರಬಹುದು. ಕೆಲವರ ಅಕ್ರಮಗಳು, ಭ್ರಷ್ಟಾಚಾರಗಳು, ಸ್ವಜನಪಕ್ಷಪಾತಗಳು, ಅಧಿಕಾರದ ದುರ್ಬಳಕೆಗಳು  ಹೊರಗೆ ಬರುತ್ತಿರುವುದು ಅವರಿಗೆ  ಹಿಂಸೆ ಅನಿಸುತ್ತ ಇರಬಹುದು. ಒಂದು ಸಾರಿ ಇವರ  ಬಾಯಿ ಬಂದ್‌  ಮಾಡಿದರೆ ನಾವೆಲ್ಲ ಹಾಯಾಗಿ ಇರಬಹುದು ಎಂದು ಅವರು ಭ್ರಮಿಸುತ್ತ ಇರಬಹುದು.ಶಾಸಕಾಂಗಕ್ಕೆ ಸಂವಿಧಾನದತ್ತವಾದ ಸ್ಥಾನಮಾನ ಇದೆ. ಮಾಧ್ಯಮಕ್ಕೆ ಅದು ಇಲ್ಲ. ಸಂವಿಧಾನ ಪ್ರದಾನ ಮಾಡಿದ ವಾಕ್ ಸ್ವಾತಂತ್ರ್ಯದ ಅಡಿಯಲ್ಲಿಯೇ ಮಾಧ್ಯಮದ ಸ್ವಾತಂತ್ರ್ಯವೂ ಸೇರಿಕೊಂಡಿದೆ. ವಾಕ್ ಸ್ವಾತಂತ್ರ್ಯಕ್ಕೆ ಇರುವ ಮಿತಿಗಳು ಪತ್ರಿಕಾ ಸ್ವಾತಂತ್ರ್ಯಕ್ಕೂ ಸಲ್ಲುತ್ತವೆ. ಆದರೆ,  ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲಿ ಮಾಧ್ಯಮಕ್ಕೆ ನಾಲ್ಕನೇ ಸ್ತಂಭದ ಸ್ಥಾನಮಾನ ಸಿಕ್ಕಿದೆ. ಪ್ರಜಾಸತ್ತೆ ಕೇವಲ ಮೂರು ಕಂಬಗಳ ಮೇಲೆ ಮಾತ್ರ ಭದ್ರವಾಗಿ ನಿಲ್ಲಲು ಆಗುವುದಿಲ್ಲ. ಎಲ್ಲ ನಾಲ್ಕೂ ಅಂಗಗಳು ದಕ್ಷವಾಗಿ, ಸಮರ್ಥವಾಗಿ ಕೆಲಸ ಮಾಡಬೇಕು. ಸಂವಿಧಾನದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳು ದಕ್ಷವಾಗಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವ ಹೊಣೆಯನ್ನು ಮಾಧ್ಯಮ ನಿಭಾಯಿಸುತ್ತಿದೆ.ಅದು ಕಾವಲು ನಾಯಿಯ ಕೆಲಸ. ಅನೇಕ ಸಾರಿ ಕೃತಜ್ಞತೆ ಇಲ್ಲದ್ದು. ಆದರೆ, ತನ್ನ ತಪ್ಪನ್ನು ಯಾರೂ ತೋರಿಸಬಾರದು ಎಂದು ಎಲ್ಲರೂ ಬಯಸುತ್ತಾರೆ. ಮಾಧ್ಯಮಗಳೇ ಇಲ್ಲದೇ ಇದ್ದರೆ ಏನಾಗುತ್ತಿತ್ತು? ತುರ್ತು ಪರಿಸ್ಥಿತಿ ಎಲ್ಲರಿಗೂ ಮರೆತು ಹೋಗಿರಬಹುದು. ಶಾಸಕಾಂಗಕ್ಕೆ ತುರ್ತು ಸ್ಥಿತಿ ಹೇರುವ ಅಧಿಕಾರ ಇದೆ. ಕರ್ನಾಟಕದ ವಿಧಾನ ಮಂಡಲ ಈಗ ಅದನ್ನೇ ಮಾಡಲು ಹೊರಟಂತೆ  ಕಾಣುತ್ತದೆ. ಮಾಧ್ಯಮದವರಿಗೆ  ಹೇಗೆ ಮೂಗುದಾರ ಹಾಕಬೇಕು ಎಂದು ತೀರ್ಮಾನಿಸಲು ಅತಿ ಶೀಘ್ರದಲ್ಲಿ ಸದನ ಸಮಿತಿ ರಚನೆಯಾಗಲಿದೆ. ಅವರು ಏನೇನು ಶಿಫಾರಸು ಮಾಡುತ್ತಾರೋ ನೋಡೋಣ. ಆದರೆ, ಅದು ಮಾಧ್ಯಮಕ್ಕೆ ಹಿತವಾದುದು ಖಂಡಿತ ಆಗಿರಲಾರದು ಎಂದು ಈಗಲೇ ಊಹಿಸಬಹುದು. ಪ್ರಭುತ್ವ ಯಾವಾಗಲೂ ಹಾಗೆಯೇ ಇರುತ್ತದೆ.ತನ್ನ ಅಧಿಕಾರಕ್ಕೆ ಮಿತಿಗಳು ಇಲ್ಲ ಎಂದು ಅನಿಸಿದಾಗ ಅದು ಇನ್ನೂ ಕಠೋರವಾಗಿ ವರ್ತಿಸುತ್ತದೆ.  ಒಂದು ಸಾರಿ ಹಕ್ಕುಚ್ಯುತಿ ಆಪಾದನೆ ಮೇಲೆ ಅಧಿಕಾರಿಯೊಬ್ಬರನ್ನು ಕರೆಸಿ ಛೀಮಾರಿ ಹಾಕಬೇಕು ಎಂದು ನಿರ್ಣಯಿಸುವಾಗ, ‘ಸದನವು ಹೀಗೆ ನಿರಂಕುಶವಾಗಿ ನಡೆದುಕೊಳ್ಳಬಾರದು’ ಅಬ್ದುಲ್‌ ನಜೀರ್‌ ಸಾಹೇಬರು ಕಿವಿ ಮಾತು ಹೇಳಿದ್ದರು. ಈಗ ಹಾಗೆ ಹೇಳುವವರು ಯಾರೂ ಇದ್ದಂತೆ  ಕಾಣುವುದಿಲ್ಲ. ದ್ರೌಪದಿಯ ಸೀರೆ ಬಿಚ್ಚುವ ಕೆಲಸ ಮಹಾಭಾರತ ಕಾಲದಲ್ಲಿಯೇ ಶುರುವಾಗಿದೆಯಲ್ಲ! ಆಗಲೂ ಹಿರಿಯರು ಹೀಗೆಯೇ ಸುಮ್ಮನೆ ಕುಳಿತಿದ್ದರು.ಯಾವಾಗಲೂ ಸದನ ಬಳಸುವ ಬ್ರಹ್ಮಾಸ್ತ್ರ ಹಕ್ಕುಚ್ಯುತಿಯದು. ಅದು ಯಾರನ್ನಾದರೂ ಜೈಲಿಗೆ ಕಳಿಸುವ ಅಧಿಕಾರ. 2003ರ ನವೆಂಬರ್‌ನಲ್ಲಿ ತಮಿಳುನಾಡಿನ ವಿಧಾನಸಭೆ ‘ದಿ ಹಿಂದು’ ಪತ್ರಿಕೆಯ ಸಂಪಾದಕರನ್ನು ಮತ್ತು ಇತರ ಮೂವರನ್ನು 15 ದಿನಗಳ ಕಾಲ ಜೈಲಿಗೆ ಕಳಿಸಲು ನಿರ್ಣಯಿಸಿತ್ತು. ಆಗ ಜಯಲಲಿತಾ ಮುಖ್ಯಮಂತ್ರಿ.  ಇತ್ತ ಪತ್ರಿಕೆಯ 125ನೇ ಹುಟ್ಟು ಹಬ್ಬದ ಆಚರಣೆ ಬೆಂಗಳೂರಿನಲ್ಲಿ ನಡೆದಿತ್ತು. ಅದು ಶುಕ್ರವಾರ. ಅತ್ತ ವಿಧಾನಸಭೆ ನಿರ್ಣಯ ಅಂಗೀಕಾರ ಆಗುತ್ತಿದ್ದಂತೆಯೇ ಪೊಲೀಸರ ದೊಡ್ಡ ದಂಡು ‘ಹಿಂದು’ ಕಚೇರಿಯ ಮೇಲೆ ದಾಳಿ ಮಾಡಿತು. ಆದರೆ, ಅವರು ಯಾರನ್ನು ಬಂಧಿಸಬೇಕು ಎಂದುಕೊಂಡಿದ್ದರೋ ಅವರು ಯಾರೂ ಅಲ್ಲಿ ಇರಲಿಲ್ಲ! ಇದೆಲ್ಲ ನಡೆಯುವಾಗ ಶುಕ್ರವಾರ ಸಂಜೆಯಾಯಿತು. ನ್ಯಾಯಾಲಯಕ್ಕೆ ಹೋಗಿ ತಡೆ ತರಲೂ ಅವಕಾಶ ಇರಲಿಲ್ಲ. ಶುಕ್ರವಾರ ಈ ವಿಷಯವನ್ನು ಚರ್ಚೆಗೆ ಮತ್ತು ನಿರ್ಣಯಕ್ಕೆ ಇಟ್ಟುಕೊಳ್ಳುವಾಗ ಜಯಲಲಿತಾ ಅವರಿಗೆ ಅದೆಲ್ಲ ಗೊತ್ತಿರುವುದಿಲ್ಲವೇ?!ಆಗ  ಸುಪ್ರೀಂ ಕೋರ್ಟು, ‘ಶಾಸಕರ ಕೆಲಸಕ್ಕೆ ದೈಹಿಕ ಅಡ್ಡಿಯಾದಾಗ ಮಾತ್ರ ಹಕ್ಕುಚ್ಯುತಿ ಪ್ರಶ್ನೆಯನ್ನು ಎತ್ತಬೇಕೇ ಹೊರತು ಅವರನ್ನು ಟೀಕೆ ಅಥವಾ ವಿಮರ್ಶೆಯಿಂದ ರಕ್ಷಿಸಲು ಅಲ್ಲ’ ಎಂದು ಅಭಿಪ್ರಾಯ ಪಟ್ಟಿತ್ತು. ಆದರೆ, ಈಚಿನ ವರ್ಷಗಳಲ್ಲಿ ದಾಖಲೆಗಳನ್ನು ಇಟ್ಟುಕೊಂಡು ಶಾಸಕರ ವಿರುದ್ಧ ಟೀಕೆ ಮಾಡಿದರೂ ಅವರು ಹಕ್ಕುಚ್ಯುತಿಯ ಖಡ್ಗವನ್ನು ಬೀಸಲು ತರಾತುರಿ ಮಾಡುವಂತೆ ಕಾಣುತ್ತದೆ. ಆಶ್ಚರ್ಯ ಎಂದರೆ ಮಾಧ್ಯಮದ ಮೇಲೆ ಹೀಗೆ  ದಾಳಿ ನಡೆದಾಗಲೆಲ್ಲ ಬೌದ್ಧಿಕ ವಲಯ ಮೌನ ವಹಿಸಿ ತೆಪ್ಪಗೆ ಉಳಿದು ಬಿಡುತ್ತದೆ. ‘ ‘ಹಿಂದು’ ಪತ್ರಿಕೆಯ ಹಕ್ಕುಚ್ಯುತಿ ಪ್ರಕರಣದಲ್ಲಿ ಆಗ ಸಂಪಾದಕರಾಗಿದ್ದ ಎನ್.ರವಿ ಮತ್ತು ಇತರ ಮೂವರು ಜೈಲಿಗೆ  ಹೋಗಬೇಕಿತ್ತು ಮತ್ತು ಆ ಮೂಲಕ ಮಾಧ್ಯಮ ಎದುರಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಬಿಕ್ಕಟ್ಟನ್ನು ಜಗತ್ತಿನ ಮುಂದೆ ಬಿಚ್ಚಿ ಇಡಬೇಕಿತ್ತು’ ಎಂದು ಬಹಳ ಮಂದಿ ಅಭಿಪ್ರಾಯ ಪಟ್ಟಿದ್ದರು. ಅದು ನಿಜ ಎನಿಸುತ್ತದೆ. ಆಗ ಅವರು ಜೈಲಿಗೆ ಹೋಗಿದ್ದರೆ ಮತ್ತೆ ಮತ್ತೆ ಹಕ್ಕುಚ್ಯುತಿಯ ಬೆದರಿಕೆ ಅಥವಾ ಸದನ ಸಮಿತಿ ರಚಿಸಿ ಮೂಗುದಾರ ಹಾಕುವ ಎಚ್ಚರಿಕೆಗಳು ಬರುತ್ತಿರಲಿಲ್ಲವೇನೋ?1985ರಲ್ಲಿ ಕೇಂದ್ರ ಸರ್ಕಾರ ಮತ್ತು ‘ಇಂಡಿಯನ್‌  ಎಕ್ಸ್‌ಪ್ರೆಸ್‌’ ಪತ್ರಿಕೆಯ ನಡುವಣ ಪ್ರಕರಣದಲ್ಲಿ ಸುಪ್ರಿಂ  ಕೋರ್ಟು ಮಾಧ್ಯಮ ಸ್ವಾತಂತ್ರ್ಯದ ಪರವಾಗಿಯೇ ತನ್ನ ತೀರ್ಪು ನೀಡಿತ್ತು : ‘ಸಂವಿಧಾನದ 19ನೇ ವಿಧಿಯಲ್ಲಿ ಮಾಧ್ಯಮ ಸ್ವಾತಂತ್ರ್ಯದ ನೇರ  ಪ್ರಸ್ತಾಪ ಇಲ್ಲ. ಆದರೆ, ಅದು 19 (1) (ಎ) ವಿಧಿಯಲ್ಲಿ ಇದೆ. ಮಾಧ್ಯಮದ ಉದ್ದೇಶ ಏನು ಎಂದರೆ, ಅದು ಖಚಿತವಾದ ಸಂಗತಿಗಳನ್ನು ಮತ್ತು ನಿರ್ದುಷ್ಟವಾದ ಅಭಿಪ್ರಾಯಗಳನ್ನು ಮಂಡಿಸುವ ಮೂಲಕ ಸಾರ್ವಜನಿಕರ ಒಳಿತನ್ನು ಸಾಧಿಸಬೇಕು. ಇದರ ಗೈರು ಹಾಜರಿಯಲ್ಲಿ ಚುನಾಯಿತ ಪ್ರಜಾಪ್ರಭುತ್ವ ಜವಾಬ್ದಾರಿಯುತ ನಿರ್ಣಯಗಳನ್ನು ಮಾಡಲು ಆಗುವುದಿಲ್ಲ.’ ಸಂವಿಧಾನದ 19 (1) (ಎ) ವಿಧಿ ಇದೆ ಅಂಶವನ್ನು ಪ್ರಸ್ತಾಪಿಸುತ್ತದೆ. ಮತ್ತು ಇನ್ನಷ್ಟು ವಿಸ್ತರಿಸುತ್ತದೆ.ಪ್ರಜಾಪ್ರಭುತ್ವದ ಅರ್ಥವಂತಿಕೆಗಾಗಿ ಶಾಸಕಾಂಗ ಮತ್ತು ಮಾಧ್ಯಮಗಳ ನಡುವೆ ಸೌಹಾರ್ದ ಸಂಬಂಧ ಇರಬೇಕು. ಈ ಎರಡೂ ಅಂಗಗಳ ಕಾರ್ಯವೈಖರಿ ಬೇರೆ ಬೇರೆ ಆಗಿರಬಹುದು. ಆದರೆ, ಇವು  ಪ್ರಜಾಪ್ರಭುತ್ವವನ್ನು ಬಲಪಡಿಸುವುದಕ್ಕಾಗಿಯೇ ಇರುವಂಥ ಸಂಸ್ಥೆಗಳು. ಎರಡೂ ಸಂಸ್ಥೆಗಳಲ್ಲಿ ಇರುವವರಿಗೆ ತಿಳಿವಳಿಕೆ ಇರಬೇಕು. ಪರಸ್ಪರರ ಬಗೆಗೆ ಗೌರವ ಇರಬೇಕು. ಅವರವರ ಕಾರ್ಯಕ್ಷೇತ್ರಗಳ ಹೊಣೆಗಾರಿಕೆ ಕುರಿತು ಮೆಚ್ಚುಗೆ ಇರಬೇಕು. ಆದರೆ, ಈಗ ಏನಾಗಿದೆ ಎಂದರೆ ಸದನದ ಬಗೆಗೆ ಶಾಸಕರಿಗೇ ಗೌರವ ಇದೆ ಎಂದು ಹೊರಗೆ  ಇದ್ದವರಿಗೆ ಅನಿಸುವುದಿಲ್ಲ. ಅಧಿವೇಶನ ನಡೆಯುವಾಗ ಎರಡು ಸಾರಿ ರುಜು ಹಾಕಬೇಕು ಎಂದು ನಿಬಂಧನೆ ಹಾಕಿದರೆ ‘ನಾವೇನು ಶಾಲಾ ಮಕ್ಕಳೇ’ ಎಂಬ ಪ್ರಶ್ನೆ ಎದುರಾಗುತ್ತದೆ. ಅಂತಿಮವಾಗಿ ಹಾಜರಿಗೆ ರುಜು ಮಾಡುವುದು ಕಡ್ಡಾಯವಲ್ಲ ಎಂದೇ ತೀರ್ಮಾನವಾಗುತ್ತದೆ. ತಾವು ಯಾರಿಗೂ ಉತ್ತರದಾಯಿಯಲ್ಲ ಎಂದು ಶಾಸಕರು ಅಂದುಕೊಂಡಂತೆ ಕಾಣುತ್ತದೆ. ಅವರು ಅನೇಕರಿಗೆ ಉತ್ತರದಾಯಿಯಾಗಿದ್ದಾರೆ ಮತ್ತು ಅವರು ಟೀಕೆಗೆ ಹೊರತಾದವರು ಅಲ್ಲ ಎಂದು ಮಾಧ್ಯಮ ಹೇಳುತ್ತಿದೆ. ಮಾಧ್ಯಮ ಹಾಗೆ  ಹೇಳುತ್ತಿರುವುದು ಸಮಾಜದಲ್ಲಿ ಇರುವ ಕೊನೆಯ ಮನುಷ್ಯನ ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಂಡು. ಆದರೆ, ಮಾಧ್ಯಮದವರನ್ನು ಗಲ್ಲಿಗೆ ಏರಿಸಬೇಕು ಎಂದು ಶಾಸಕಾಂಗ ಹೊರಟಿರುವಾಗ ಸಮಾಜ ಮೌನವಾಗಿ ಕುಳಿತುಬಿಟ್ಟರೆ ಏನು ಹೇಳುವುದು?ಸದನ ಸಮಿತಿ ರಚಿಸಿ ಮಾಧ್ಯಮದವರನ್ನು ಜೈಲಿಗೆ ಅಟ್ಟಬೇಕು ಎಂದು ಶಾಸಕಾಂಗದವರು ನಿರ್ಣಯಿಸುತ್ತಾರೆ. ಅದಕ್ಕಿಂತ ಹೆಚ್ಚಿಗೆ ಅವರು ಇನ್ನೇನು ಮಾಡಲು ಸಾಧ್ಯ? ಜೈಲಿಗೆ  ಹೋಗೋಣ ಬಿಡಿ.  ಅದೂ ಆಗಿಯೇ ಬಿಡಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry