ಗುರುವಾರ , ಡಿಸೆಂಬರ್ 5, 2019
20 °C

ತಲ್ಲೂರು ಕೆರೆ ತಳದಲ್ಲಿ ಜಿನುಗುತ್ತಿರುವ ಅಂತರ್ಜಲ

Published:
Updated:
ತಲ್ಲೂರು ಕೆರೆ ತಳದಲ್ಲಿ ಜಿನುಗುತ್ತಿರುವ ಅಂತರ್ಜಲ

ಕುಷ್ಟಗಿ: ಜಿಲ್ಲೆಯ ತಲ್ಲೂರು ಗ್ರಾಮದ ಕೆರೆ ರಾಜ್ಯದ ಗಮನ ಸೆಳೆದಿದೆ. ಮಾದರಿ ಪ್ರಯೋಗಕ್ಕೆ ರೈತರೊಂದಿಗೆ ಕೈಜೋಡಿಸಿರುವ ಚಲನಚಿತ್ರ ನಟ ಯಶ್‌ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಈ ಕೆರೆ ಕಾಯಕ ಯೋಜನೆ ಯಾವ ರೀತಿ ಫಲ ನೀಡಬಹುದು ಎಂಬ ಬಗ್ಗೆ ಬಹಳಷ್ಟು ಜನ ಕುತೂಹಲದಿಂದ ಕಾಯುತ್ತಿದ್ದಾರೆ.

ಬೆಂಗಳೂರಿನ ಯಶೋಮಾರ್ಗ ಫೌಂಡೇಶನ್‌ ವತಿಯಿಂದ ಸುಮಾರು ₹4 ಕೋಟಿ ಅಂದಾಜು ವೆಚ್ಚದಲ್ಲಿ ಕೆರೆ ಹೂಳು ತೆಗೆದು ಅಭಿವೃದ್ಧಿಪಡಿಸುವ ಜಲ ಸಂರಕ್ಷಣೆ ಕೆಲಸಕ್ಕೆ ಸರಿಯಾಗಿ ಒಂದು ತಿಂಗಳ ಹಿಂದೆ ಸ್ವತಃ ಯಶ್‌ ಮತ್ತು ಪತ್ನಿ ರಾಧಿಕಾ ಪಂಡಿತ್‌ ಚಾಲನೆ ನೀಡಿದ್ದರು.

ಬಿಡುವಿಲ್ಲದ ರೀತಿಯಲ್ಲಿ ಕೆಲಸ ನಡೆಯುತ್ತಿದ್ದು ದಿನಕ್ಕೆ ಸರಾಸರಿ 250 ಟ್ರ್ಯಾಕ್ಟರ್‌ಗಳಂತೆ ತಿಂಗಳ ಅವಧಿಯಲ್ಲಿ  7 ಸಾವಿರ ಟ್ರ್ಯಾಕ್ಟರ್‌ ಹೂಳನ್ನು ತೆಗೆದು ರೈತರ ಹೊಲಗದ್ದೆಗಳಿಗೆ ಸಾಗಿಸಲಾಗಿದೆ. ಕೆರೆಯು 96 ಎಕರೆ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ ಸುಮಾರು 50 ಎಕರೆ ವ್ಯಾಪ್ತಿಯಲ್ಲಿ ನೀರು ನಿಲ್ಲುತ್ತದೆ. 1972– 73ರಲ್ಲಿ ನಿರ್ಮಾಣಗೊಂಡಿರುವ ಈ ಕೆರೆಯ ಹೂಳು ತೆಗೆಯುತ್ತಿರುವುದು ಇದೇ ಮೊದಲು. 50 ಎಕರೆ ವ್ಯಾಪ್ತಿಯಲ್ಲಿ 8 ಅಡಿ ಆಳದಲ್ಲಿ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ.

ಕೆರೆಯಲ್ಲಿ ಜಿನುಗುವ ನೀರು: ಒಣಗಿದ್ದ ಕೆರೆಯಲ್ಲಿ ಎಂಟು ಅಡಿ ಆಳದಲ್ಲಿ ಹೂಳು ತೆಗೆದ ನಂತರ ನೀರು ಜಿನುಗುತ್ತಿದೆ. ಹೂಳೆತ್ತಿದ ಕೆರೆಯಂಗಳದಲ್ಲಿ ಸುಮಾರು ಎರಡು– ಮೂರು ಅಡಿಗಳಷ್ಟು ನೀರು ಸಂಗ್ರಹವಾಗಿದೆ. ನಿತ್ಯವೂ ನೀರಿನ ಪ್ರಮಾಣ ಏರುತ್ತಿದ್ದು ಕೆರೆ ತಳ ಸಮತಟ್ಟು ಮಾಡಿದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ ಎಂಬ ಆಶಾಭಾವನೆ ಕೆಲಸದಲ್ಲಿ ತೊಡಗಿರುವ ಕಾರ್ಯಕರ್ತರದ್ದು.

‘ಕೆರೆಯ ನೀರು ಶುದ್ಧವಾಗಿದ್ದು ಸುತ್ತಲಿನ ಜನರಿಗೆ ಅಷ್ಟೇ ಅಲ್ಲ ಪ್ರಾಣಿ ಪಕ್ಷಿಗಳು, ಜಾನುವಾರುಗಳಿಗೆ ಬೇಸಿಗೆಯಲ್ಲಿ ಪ್ರಮುಖ ನೀರಿನ ಆಸರೆಯಾಗಿದೆ’ ಎಂದು ಮದ್ಲೂರಿನ ರೈತ ಶರಣಪ್ಪ ಕುಡುಗುಂಟಿ, ಶರಣಪ್ಪ ತಲ್ಲೂರು ಹರ್ಷ ವ್ಯಕ್ತಪಡಿಸಿದರು.

‘ಯಶೋಮಾರ್ಗದ ಪ್ರಕಾರ 3 ತಿಂಗಳಲ್ಲಿ ಕೆರೆಯ ಹೂಳನ್ನು ಸಂಪೂರ್ಣ ತೆಗೆಯುವ ಅಂದಾಜಿದೆ. ಆದರೆ, ಬೃಹತ್‌ ಪ್ರಮಾಣದ ಹೂಳು ತೆಗೆಯುವ ಸವಾಲು ಮುಂದಿದೆ. ಸದ್ಯ ಸ್ಥಳದಲ್ಲಿ ಕಡಿಮೆ ಸಾಮರ್ಥ್ಯದ ಒಂದು ಹಿಟಾಚಿ, 1 ಜೆಸಿಬಿ ಮತ್ತು 2 ಟಿಪ್ಪರ್‌ಗಳಿದ್ದು ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ. ಅಂದಾಜಿನ ಪ್ರಕಾರ ತಿಂಗಳ ಅವಧಿಯಲ್ಲಿ 2 ಎಕರೆ ವಿಸ್ತೀರ್ಣದ ಶೇ 6ರಿಂದ 7ರಷ್ಟು ಮಾತ್ರ ಹೂಳು ತೆಗೆಯಲಾಗಿದೆ. ಇದೇ ಗತಿಯಲ್ಲಿ ಕೆಲಸ ಮುಂದುವರೆದರೆ ಹೂಳೆತ್ತಲು ಒಂದು ವರ್ಷ ಬೇಕಾಗಬಹುದು. ಮಳೆ ಬಂದರೆ ಕೆಲಸ ಸ್ಥಗಿತಗೊಳ್ಳುತ್ತದೆ, ಉದ್ದೇಶ ಈಡೇರುವುದಿಲ್ಲ. ಕೆರೆ ಭರ್ತಿಯಾದರೆ ಕನಿಷ್ಠ ಎರಡು ವರ್ಷವಾದರೂ ಹೂಳು ತೆಗೆಯಲು ಸಾಧ್ಯವಾಗುವುದಿಲ್ಲ’ ಎಂದು ತಲ್ಲೂರು ರೈತರು ಹೇಳಿದರು.

‘ಹೂಳು ತೆಗೆಯುವ ಯಂತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಕಾರಣ ಕೆಲವು ಬಾರಿ ರೈತರ ಟ್ರ್ಯಾಕ್ಟರ್‌ಗಳು ಸಾಲುಗಟ್ಟಿ ನಿಲ್ಲಬೇಕಾಗುವುದರಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.

‘ಯಂತ್ರಗಳು ಹೆಚ್ಚಾಗದಿದ್ದರೆ ಕೆಲಸ ವಿಳಂಬವಾಗಿ ನಿಗದಿತ ಉದ್ದೇಶ ಈಡೇರಲಿಕ್ಕಿಲ್ಲ’ ಎಂದು ಕೆಲಸದ ಉಸ್ತುವಾರಿ ವಹಿಸಿರುವ ಕಾರ್ಯಕರ್ತ ಈರಣ್ಣ ತೋಟದ ಹೇಳಿದರು.

**

ಕೆಲವು ಬಾರಿ ಹಿಟಾಚಿ ಯಂತ್ರ ಕೆಲಸ ಮಾಡಿದರೂ ರೈತರ ಟ್ರ್ಯಾಕ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದಿಲ್ಲ. ಹಾಗಾಗಿ ಯಂತ್ರಗಳ ಸಂಖ್ಯೆ ಹೆಚ್ಚಿಸಿಲ್ಲ.

-ಗೌತಮ್‌, ಕರ್ತವ್ಯ ಅಧಿಕಾರಿ,

ಯಶೋಮಾರ್ಗ ಫೌಂಡೇಶನ್‌

ಪ್ರತಿಕ್ರಿಯಿಸಿ (+)