ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ನೆಲೆಯಲಿ ‘ಮದ್ದಿನ ಮನೆ’

Last Updated 27 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಇದು ಭಾರತದಲ್ಲಿಯೇ ಮೊದಲ ಯಶಸ್ವಿ ಪ್ರಯತ್ನ! 200 ವರ್ಷಗಳ ಹಿಂದಿನ ಸ್ಮಾರಕವೊಂದನ್ನು ಅಮೆರಿಕದ ವುಲ್ಫೆ ಮತ್ತು ನಮ್ಮದೇ ದೇಶದ ಪಿಎಸ್‌ಎಲ್‌ ಹೆಸರಿನ ಕಂಪೆನಿಗಳು ಜತೆಗೂಡಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸ್ಥಳಾಂತರಿಸಿವೆ. ಟಿಪ್ಪು ಸುಲ್ತಾನ್‌ ಕಾಲದ ಶಸ್ತ್ರಾಗಾರ ಸ್ಮಾರಕ ಮೂಲ ಸ್ಥಳದಿಂದ 130 ಮೀಟರ್‌ ದೂರದ ಮತ್ತೊಂದು ಸ್ಥಳಕ್ಕೆ ಲವಲೇಶವೂ ಮುಕ್ಕಾಗದಂತೆ ಪಲ್ಲಟಗೊಂಡಿದೆ.

ಬೆಂಗಳೂರು–ಮೈಸೂರು ಜೋಡಿ ರೈಲು ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿತ್ತು ಎಂಬ ಕಾರಣಕ್ಕೆ ಶ್ರೀರಂಗಪಟ್ಟಣದ ರೈಲು ನಿಲ್ದಾಣದ ಎದುರು ಇದ್ದ ಶಸ್ತ್ರಾಗಾರ (ಮದ್ದಿನ ಮನೆ) ವನ್ನು ರಾಜ್ಯ ಸರ್ಕಾರ ಮತ್ತು ಪ್ರಾಚ್ಯವಸ್ತು ಇಲಾಖೆಯ ಸಮ್ಮತಿ ಪಡೆದು ರೈಲ್ವೆ ಇಲಾಖೆ ಸ್ಥಳಾಂತರಿಸಿದೆ.

ನೆಲಮಟ್ಟದಿಂದ 20 ಅಡಿ ಆಳದಲ್ಲಿ ಕಾಲುವೆ ತೋಡಿ. ಅದರ ಮೇಲೆ ಬಲಶಾಲಿಯಾದ ಉಕ್ಕಿನ ತೊಲೆಗಳನ್ನು ಅಳವಡಿಸಿ, ವಿವಿಧ ಗಾತ್ರದ ಮತ್ತು ಉದ್ದದ ಬೀಮ್‌ಗಳ ಮೇಲೆ ಸ್ಮಾರಕವನ್ನು ಕೂರಿಸಿ ವಿದೇಶದ ‘ಯುನಿಫೈಡ್‌ ಜಾಕಿಂಗ್‌ ಸಿಸ್ಟಂ’ ಎಂಬ ವಿಶೇಷ ತಂತ್ರಜ್ಞಾನದ ಸಹಾಯದಿಂದ ಈ ಸ್ಮಾರಕವನ್ನು ನಿಗದಿತ ಸ್ಥಳಕ್ಕೆ ಮುನ್ನೂಕಲು ಯಶಸ್ವಿಯಾಗಿರುವ ರೈಲ್ವೆ ಇಲಾಖೆ ಗೆಲುವಿನ ನಗೆ ಬೀರಿದೆ.

130 ಮೀಟರ್‌ ದೂರಕ್ಕೆ ಸ್ಥಳಾಂತರ
ಈ ಸ್ಮಾರಕ ಮೊದಲಿದ್ದ ಸ್ಥಳದಿಂದ 130 ಮೀಟರ್‌ ದೂರಕ್ಕೆ ಸ್ಥಳಾಂತರಗೊಂಡಿದೆ. 90 ಡಿಗ್ರಿ ಕೋನದಲ್ಲಿ 100 ಮೀಟರ್‌ ಸಾಗಿಸಿ ಅಲ್ಲಿಂದ ಮತ್ತೆ ಬಲಕ್ಕೆ 30 ಮೀಟರ್‌ ದೂರ (ಇಂಗ್ಲಿಷ್‌ನ ‘ಎಲ್‌’ ಆಕಾರದಲ್ಲಿ) ತಳ್ಳಲಾಗಿದೆ. ಮೊದಲ ದಿನ (ಮಾರ್ಚ್‌ 6) 40 ಮೀಟರ್‌, ಎರಡನೇ ದಿನ 42 ಮೀಟರ್‌, 3ನೇ ದಿನ 18 ಮೀಟರ್‌ ಮತ್ತು 4ನೇ ಪ್ರಯತ್ನದಲ್ಲಿ 30 ಮೀಟರ್‌ ದೂರಕ್ಕೆ ಈ ಶಸ್ತ್ರಾಗಾರ ಕ್ರಮಿಸಿದೆ.

ಸ್ಮಾರಕದ ತಳಭಾಗದ ಕೆಲವು ಬೀಮ್‌ಗಳನ್ನು ಬೇರ್ಪಡಿಸುವ ಮತ್ತು ಅದರ ಸುತ್ತ ಕಾಂಪೌಂಡ್‌ ನಿರ್ಮಿಸುವ ಕೆಲಸ ಮಾತ್ರ ಬಾಕಿ ಉಳಿದಿದೆ. ಈ ಸ್ಮಾರಕ ಸ್ಥಳಾಂತರಕ್ಕೆ ಒಟ್ಟು 13.6 ಕೋಟಿ ವೆಚ್ಚವಾಗಿದ್ದು, ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆಯೇ ಭರಿಸಿದೆ.

ಈ ಸ್ಮಾರಕ ಸ್ಥಳಾಂತರಿಸುವ ಸಂಬಂಧ 2013, ಮಾರ್ಚ್‌ 14ರಂದು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಅನುಮತಿ ನೀಡಿತ್ತು. 2015ರ ಅಕ್ಟೋಬರ್‌ ತಿಂಗಳಲ್ಲಿ ಮದ್ದಿನ ಮನೆ ಸ್ಥಳಾಂತರಕ್ಕೆ ಟೆಂಡರ್‌ ಪ್ರಕ್ರಿಯೆ ನಡೆದಿತ್ತು. ಭಾರತದ ಪಿಎಸ್‌ಎಲ್‌ ಎಂಜಿನಿಯರಿಂಗ್‌ ಮತ್ತು ಅಮೆರಿಕದ ವುಲ್ಫೆ ಕಂಪೆನಿಗಳು ಜಂಟಿ ಹೊಣೆಗಾರಿಕೆಯಲ್ಲಿ ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆ ಆರಂಭಿಸಿದ್ದವು.

ಸ್ಮಾರಕವನ್ನು 3 ವಲಯವಾಗಿ ವಿಭಾಗಿಸಿ ಅದರ ಕೆಳಭಾಗವನ್ನು ಭೂಮಿಯಿಂದ ಬೇರ್ಪಡಿಸಿ ‘ಕ್ಯಾರಿ ಲೈನ್‌’ (ನೆಲದಿಂದ ಎರಡು ಅಡಿ ಎತ್ತರದ ರೇಖೆಗೆ)ಗೆ ತರಲಾಯಿತು. ಸ್ಮಾರಕದ ಕೆಳಗೆ 5 ಮುಖ್ಯ ಕಬ್ಬಿಣ ತೊಲೆಗಳು, 11 ಕ್ರಾಸ್‌ ಬೀಮ್‌ಗಳು ಮತ್ತು 31 ನೀಡಲ್‌ ಬೀಮ್‌ಗಳನ್ನು ಅಳವಡಿಸಲಾಗಿತ್ತು.

ಈ ಎಲ್ಲ ಬೀಮ್‌ಗಳನ್ನು ಜಬಲ್‌ಪುರದಿಂದ ತರಿಸಲಾಗಿತ್ತು. ಅವುಗಳಿಗೆ ಒಟ್ಟು 37 ಜಾಕ್‌ಗಳನ್ನು ಸೇರಿಸಿ ಮುನ್ನೂಕುವ ಪ್ರಕ್ರಿಯೆ ಆರಂಭಿಸಲಾಯಿತು. ಇಡೀ ಕಟ್ಟಡ ಒಮ್ಮೆಗೇ ಮುನ್ನಡೆಯುವಂತೆ ಮಾಡಲು ‘ಯೂನಿಫೈಡ್‌ ಜಾಕಿಂಗ್‌ ಸಿಸ್ಟಂ (ಯುಜೆಎಸ್‌)’ ಎಂಬ ವಿನೂತನ ತಂತ್ರಜ್ಞಾನವನ್ನು ಬಳಕೆ ಮಾಡಲಾಯಿತು.

ಕಬ್ಬಿಣದ ತೊಲೆಗಳ ಮಧ್ಯೆ ಮರದ ತುಂಡುಗಳನ್ನು ಹೈಡ್ರಾಲಿಕ್‌ ಬಾಡಿ ಪುಷ್‌ ರ‍್ಯಾಮ್‌ಗಳನ್ನಾಗಿ ಬಳಸಲಾಯಿತು. ಸಾಮಾನ್ಯ ಯಂತ್ರದಂತೆ ಕಾಣುವ ಯುಜೆಎಸ್‌ ಯಂತ್ರ ಇಲ್ಲಿ ಮುಖ್ಯ ಚಾಲಕಶಕ್ತಿಯಾಗಿ ಕೆಲಸ ಮಾಡಿದ್ದು ಗಮನಾರ್ಹ ಸಂಗತಿ.

ಶಸ್ತ್ರಾಗಾರ ಸ್ಥಳಾಂತರ ಪ್ರಕ್ರಿಯೆಗೆ ಅಮೆರಿಕದ ವುಲ್ಫೆ ಕಂಪೆನಿಯ ನಿರ್ವಾಹಕ ಜೇಮಿನ್‌ ಬಕಿಂಗ್‌ಹ್ಯಾಂ ಸೇರಿ 6 ಮಂದಿ, ಪಿಎಸ್‌ಎಲ್‌ ಕಂಪೆನಿಯ 20 ಜನ ತಜ್ಞರು ಹಾಗೂ ನೈರುತ್ಯ ರೈಲ್ವೆಯ 20 ಮಂದಿ ಮತ್ತು  ಪುರಾತತ್ವ ಇಲಾಖೆ ಸೇರಿ 50ಕ್ಕೂ ಹೆಚ್ಚು ಮಂದಿ ಒಂದೂವರೆ ತಿಂಗಳು ಸತತ ಕೆಲಸ ಮಾಡಿದ್ದಾರೆ.

10/13 ಮೀಟರ್‌ ಅಳತೆಯ, 900 ಮೆಟ್ರಿಕ್‌ ಟನ್‌ ತೂಕದ ಈ ಸ್ಮಾರಕವನ್ನು ಅದರ ಮೂಲನೆಲೆಯಿಂದ ರೈಲು ಹಳಿಗಳಿಂದ ಸಾಕಷ್ಟು ದೂರದಲ್ಲಿ ಗೊತ್ತುಪಡಿಸಿದ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸ್ಮಾರಕದ ಸ್ಥಳಾಂತರ ಪ್ರಕ್ರಿಯೆಗೂ ಮುನ್ನ ಅದು ಸಾಗುವ ಮಾರ್ಗದ ಉದ್ದಕ್ಕೂ 20 ಅಡಿ ಆಳದ ಕಾಲುವೆ ತೋಡಲಾಗಿತ್ತು.

ಹೀಗೆ ಹಳ್ಳ ತೋಡುವುದರಿಂದ ಈಗಾಗಲೇ ಇರುವ ಬ್ರಾಡ್‌ಗೇಜ್‌ ರೈಲು ಹಳಿಗಳು ಕುಸಿಯಬಹುದು ಎಂಬ ಕಾರಣಕ್ಕೆ ರೈಲು ಹಳಿಗಳಿಗೆ ಸಮಾನಾಂತರವಾಗಿ ಸಿಮೆಂಟ್‌ ಪಿಲ್ಲರ್‌ಗಳನ್ನು ನಿರ್ಮಿಸಿ ಎಚ್ಚರವಹಿಸಲಾಗಿತ್ತು. 

ಶಸ್ತ್ರಾಗಾರದ ರಚನೆ
ಶ್ರೀರಂಗಪಟ್ಟಣದಲ್ಲಿರುವ ಟಿಪ್ಪು ಸುಲ್ತಾನ್‌ ಕಾಲದ 8 ಶಸ್ತ್ರಾಗಾರಗಳ ಪೈಕಿ ಜೋಡಿ ರೈಲು ಮಾರ್ಗ ನಿರ್ಮಾಣ ಉದ್ದೇಶಕ್ಕೆ ಸ್ಥಳಾಂತರಗೊಂಡಿರುವ ಶಸ್ತ್ರಾಗಾರ ಷಡ್ಕೋನಾಕೃತಿಯ ಸ್ಮಾರಕ. ಈ ದ್ವೀಪ ಪಟ್ಟಣದ 3 ಸುತ್ತಿನ ಕೋಟೆಯ ಸುತ್ತ ಕಾವಲು ಕಾಯುವ ಸೈನಿಕರಿಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಸಲು ಇವುಗಳನ್ನು ಟಿಪ್ಪು ಸುಲ್ತಾನ್‌ ನಿರ್ಮಿಸಿದ್ದ.

ಚುರಕಿ ಗಾರೆಯಿಂದ (ಸುಣ್ಣ, ಸುಟ್ಟ ಇಟ್ಟಿಗೆ, ಮರವಜ್ರ ಮಿಶ್ರಣ) ಬಳಸಿ ಇದನ್ನು ನಿರ್ಮಿಸಲಾಗಿದೆ. ಸ್ಮಾರಕ ಗೋಡೆ ಒಂದು ಮೀಟರ್‌ ದಪ್ಪ ಇದೆ. ಮೇಲ್ಭಾಗದಲ್ಲಿ ಬೆಳಕಿಂಡಿ ಇಡಲಾಗಿದೆ.

ನೆಲಮಟ್ಟದಿಂದ ಕೆಳಗೆ ಸುಮಾರು 10 ಅಡಿ ಆಳದಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಲು ವ್ಯವಸ್ಥೆ ರೂಪಿಸಲಾಗಿದೆ. 200 ವರ್ಷಗಳ ಹಿಂದೆಯೇ ಜ್ಯಾಮಿತಿಯ ತತ್ವದ ಆಧಾರದ ಮೇಲೆ ಇಳಿಜಾರು ಚಾವಣಿ ಮಾದರಿಯಲ್ಲಿ ಈ ಶಸ್ತ್ರಾಗಾರ ನಿರ್ಮಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT