ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

7

ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

Published:
Updated:
ಏಷ್ಯನ್‌ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿ: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ಯಾಂಗಾನ್‌: ತವರಿನ ಅಂಗಳದಲ್ಲಿ ಆಡಲಿರುವ ಮ್ಯಾನ್ಮಾರ್ ಬಳಗವನ್ನು ಮಣಿಸುವ ಮೂಲಕ ಭಾರತ  ಫುಟ್‌ಬಾಲ್‌ ತಂಡ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ಮಂಗಳವಾರ ಗೆಲುವಿನ ಆರಂಭ ಪಡೆಯುವ ನಿರೀಕ್ಷೆಯಲ್ಲಿದೆ.

ಭಾರತಕ್ಕೆ ಮ್ಯಾನ್ಮಾರ್ ಸುಲಭದ ಎದುರಾಳಿ ಅಲ್ಲ.  ಫಿಫಾ ರ್‍ಯಾಂಕಿಂಗ್‌ನಲ್ಲಿ ಈ ತಂಡ ಭಾರತಕ್ಕಿಂತ 40 ಸ್ಥಾನಗಳಲ್ಲಿ ಕೆಳಗಿದೆ. ಆದರೆ ಎರಡೂ ತಂಡಗಳ ನಡುವೆ 2013ರಲ್ಲಿ  ನಡೆದ ಪಂದ್ಯದಲ್ಲಿ ಭಾರತ 0–1 ಗೋಲುಗಳಲ್ಲಿ ಸೋಲು ಕಂಡಿತ್ತು.

ಕೊಲಂಬಿಯಾ ವಿರುದ್ಧ ಹೋದ ವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಭಾರತ 3–2ರಲ್ಲಿ ಜಯಗಳಿಸಿರುವುದು ಭಾರತ ತಂಡದ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ.  ಸುನಿಲ್ ಚೆಟ್ರಿ ಬಳಗ ಈ ಪಂದ್ಯವನ್ನು ಗೆದ್ದುಕೊಂಡರೆ  ಮೂರು ಪಾಯಿಂಟ್ಸ್ ಗಳಿಸಲಿದೆ.

ಟೂರ್ನಿಯಲ್ಲಿ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಇದೇ ಗುಂಪಿನಲ್ಲಿ ಮ್ಯಾನ್ಮಾರ್, ಕಿರ್ಗಿಸ್ತಾನ್‌ ಹಾಗೂ ಮಕಾವ್ ತಂಡಗಳೂ ಇವೆ.

‘ಇಲ್ಲಿಯವರೆಗೂ ಭಾರತದ ಎದುರು ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿರುವ ಇತಿಹಾಸ ಮ್ಯಾನ್ಮಾರ್‌ ತಂಡಕ್ಕಿದೆ. ಈಗ ತವರಿನ ಅಭಿಮಾನಿಗಳ ಎದುರು ಆಡುತ್ತಿದೆ. ಈ ದಾಖಲೆಗಳು ನಮ್ಮ ತಂಡದ ಶಕ್ತಿಯನ್ನು ಕುಗ್ಗಿಸುವುದಿಲ್ಲ. ನಾವು ಎದುರಾಳಿಯನ್ನು ಮಣಿಸುವಷ್ಟು ಸಮರ್ಥರಿದ್ದೇವೆ’ ಎಂದು ಭಾರತ ತಂಡದ ಕೋಚ್ ಸ್ಟೀಫನ್ ಕಾನ್ಸ್‌ಟಂಟೈನ್ ಹೇಳಿದ್ದಾರೆ.

‘ಮಂಗಳವಾರದ ಪಂದ್ಯ ಪ್ರಬಲ ಪೈಪೋಟಿಯಿಂದ ಕೂಡಿರುವ ನಿರೀಕ್ಷೆ ಇದೆ. ಪ್ರಧಾನ ಸುತ್ತು ತಲುಪುವ ಅರ್ಹತೆ ನಮ್ಮ ತಂಡಕ್ಕಿದೆ. ತವರಿನಲ್ಲಿ ನಡೆಯುವ ಮುಂದಿನ ಪಂದ್ಯಗಳಲ್ಲಿ ಭಾರತಕ್ಕೆ ಗೆಲ್ಲುವ ಅವಕಾಶ ಇದೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಬೇಸರವಿಲ್ಲ’ ಎಂದು ಕೋಚ್ ಹೇಳಿದ್ದಾರೆ.

‘ಈ ಪಂದ್ಯದ ಬಳಿಕ ತವರಿನಲ್ಲಿ ನಡೆಯುವ ಪಂದ್ಯಗಳ ಕಡೆ ಗಮನ ನೀಡುತ್ತೇವೆ. 2019ರ ಟೂರ್ನಿಗೆ ಪೂರ್ಣ ಒಂಬತ್ತು ಪಾಯಿಂಟ್ಸ್ ಪಡೆದುಕೊಂಡು ಅರ್ಹತೆ ಪಡೆಯುವುದು ನಮ್ಮ ಕನಸು’ ಎಂದು ಹೇಳಿದ್ದಾರೆ.

‘ಹಿಂದಿನ ದಾಖಲೆಗಳನ್ನು ತಲೆಗೆ ಹಚ್ಚಿಕೊಳ್ಳುವುದಿಲ್ಲ. ಮ್ಯಾನ್ಮಾರ್ ತಂಡದ ಆಟದ ತಂತ್ರಗಳನ್ನು ವಿಡಿಯೋ ಮೂಲಕ ನೋಡಿದ್ದೇವೆ. ಎದುರಾಳಿ ಯನ್ನು ಸುಲಭದಲ್ಲಿ ಪರಿಗಣಿಸಿಲ್ಲ. ಆದರೆ ಗೆಲುವು ದಾಖಲಿಸುವುದು ಕಷ್ಟ ಎಂದೂ ಅನ್ನಿಸಿಲ್ಲ. ಮೂರು ಪಾಯಿಂಟ್ಸ್ ಪಡೆದು ಕೊಂಡೇ ಭಾರತಕ್ಕೆ ಮರಳುತ್ತೇವೆ’ ಎಂದು ತಂಡದ ನಾಯಕ ಸುನಿಲ್ ಚೆಟ್ರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry