ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.15 ಲಕ್ಷ ಕೋಟಿ ಸಾಲ ಯೋಜನೆ

Last Updated 28 ಮಾರ್ಚ್ 2017, 20:09 IST
ಅಕ್ಷರ ಗಾತ್ರ

ಬೆಂಗಳೂರು: 2017–18ನೇ ಸಾಲಿಗೆ ಜಿಲ್ಲೆಯ ಬ್ಯಾಂಕುಗಳ ಮೂಲಕ ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಕಲ್ಪಿಸಲು ಕೆನರಾ ಬ್ಯಾಂಕ್ ₹ 1.15 ಲಕ್ಷ ಕೋಟಿ ಸಾಲ ಯೋಜನೆಯನ್ನು ಸಿದ್ಧಪಡಿಸಿದೆ.

ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್‌. ಮಂಜುಶ್ರೀ ಅವರು ಮಂಗಳವಾರ ಜಿಲ್ಲಾ ಸಾಲ ಯೋಜನೆ ವಿವರಗಳನ್ನೊಳಗೊಂಡ ಪುಸ್ತಕ ಬಿಡುಗಡೆ ಮಾಡಿದರು.

‘ನಗರದಲ್ಲಿಯೇ ಅತಿ ಹೆಚ್ಚು ಶಾಲಾ, ಕಾಲೇಜುಗಳಿವೆ. ಆದರೂ, ಇಲ್ಲಿ ಶೈಕ್ಷಣಿಕ ಸಾಧನೆ ಕಡಿಮೆ. ಹಾಗಾಗಿ ಈ ಬಾರಿ ಸಾಲ ಯೋಜನೆಯಲ್ಲಿ ಶಿಕ್ಷಣ ಕ್ಷೇತ್ರ ಹೆಚ್ಚು ಒತ್ತು ನೀಡಲಾಗಿದ್ದು, ₹1,150 ಕೋಟಿ ಮೀಸಲಿರಿಸಲಾಗಿದೆ’ ಎಂದು ತಿಳಿಸಿದರು.

‘ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಎಲ್ಲ ಅಧಿಕಾರಿಗಳು ಮುಂದಾಗಬೇಕು. ನೋಟು ರದ್ದತಿಯಿಂದ ಬ್ಯಾಂಕ್‌ ಸಿಬ್ಬಂದಿ ಹೆಚ್ಚು ಒತ್ತಡಕ್ಕೆ ಸಿಲುಕಿದ್ದರೂ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ’ ಎಂದು ಬ್ಯಾಂಕ್ ಅಧಿಕಾರಿಗಳನ್ನು ಶ್ಲಾಘಿಸಿದರು.

‘ರೈತರನ್ನು ಪದೇ ಪದೇ ಬ್ಯಾಂಕ್‌ಗೆ ಅಲೆಯುವಂತೆ ಮಾಡಬಾರದು. ಸಾಲ ವಿತರಣೆಯಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಸಾಲ ವಿತರಣೆ ಗುರಿ ಸಾಧನೆಗೆ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು’ ಎಂದು ತಿಳಿಸಿದರು.

ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಕೆ.ಎಸ್‌. ಗುರುದತ್‌ ಮಾತನಾಡಿ, ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ಉದ್ಯಮಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ₹ 16,900 ಕೋಟಿ ಮೀಸಲಿರಿಸಲಾಗಿದೆ. ಕೃಷಿ ಕ್ಷೇತ್ರಕ್ಕೆ ಸಾಲ ಪ್ರಮಾಣವನ್ನು ಹೆಚ್ಚಿಸಲಾಗಿದೆ’ ಎಂದು ಹೇಳಿದರು.

‘₹1.15 ಲಕ್ಷ ಕೋಟಿ ಸಾಲ ಸಾಮರ್ಥ್ಯಕ್ಕೆ ಅನುಗುಣವಾಗಿ ಜಿಲ್ಲೆಯ ಬ್ಯಾಂಕುಗಳು ಆದ್ಯತಾ ವಲಯಕ್ಕೆ ₹32,605 ಕೋಟಿ ಯೋಜನೆ ರೂಪಿಸಿವೆ. ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆದ್ಯತಾ ವಲಯಕ್ಕೆ ಇಟ್ಟಿರುವ ಹಣದಲ್ಲಿ ಶೇ 21.11ರಷ್ಟು ಹೆಚ್ಚಾಗಿದೆ’ ಎಂದರು.

‘ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆಗೆ (ಪಿಎಂಇಜಿಪಿ) ₹108 ಕೋಟಿ ಗುರಿ ನೀಡಲಾಗಿತ್ತು. ಖಾದಿ ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಅದನ್ನು ದಾಟಿ ₹110 ಕೋಟಿ ಸಾಧಿಸಿದೆ’ ಎಂದು ಕೆವಿಐಸಿ ಸಹಾಯಕ ನಿರ್ದೇಶಕ ಕೆ.ಪಿ. ವೇಣುಗೋಪಾಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT