7

ಸಂಧಾನದಲ್ಲಿ ಸಹನೆ ಮತ್ತು ಮೌನದ ತಾಕತ್ತು

ರಾಮಚಂದ್ರ ಗುಹಾ
Published:
Updated:
ಸಂಧಾನದಲ್ಲಿ ಸಹನೆ ಮತ್ತು ಮೌನದ ತಾಕತ್ತು

ಹಲವು ಆಡಳಿತಗಾರರು ಮತ್ತು ರಾಜತಾಂತ್ರಿಕರು ನಿವೃತ್ತರಾದ ನಂತರ ಬರೆದ ಆತ್ಮಕತೆಗಳನ್ನು ನನ್ನ ಕೆಲಸದ ಸ್ವರೂಪದಿಂದಾಗಿ ನಾನು ಓದಬೇಕಾಗಿ ಬಂದಿದೆ.  ಇವುಗಳಲ್ಲಿ ಹೆಚ್ಚಿನವುಗಳ ಗದ್ಯ ನೀರಸವಾಗಿದ್ದು, ಕ್ಷಣಿಕ ಅಂಶಗಳು ಮತ್ತು ಶಾಶ್ವತವಾದವುಗಳ ನಡುವಣ ವ್ಯತ್ಯಾಸವನ್ನು ಗುರುತಿಸುವ ಸಾಮರ್ಥ್ಯ  ಹೊಂದಿಲ್ಲ; ತಪ್ಪುಗಳು ಅಥವಾ ಲೋಪಗಳನ್ನು ಒಪ್ಪಿಕೊಳ್ಳುವ ಮನಸ್ಥಿತಿಯೂ ಅಲ್ಲಿರಲಿಲ್ಲ. ಜತೆಗೆ, ಸ್ವಪ್ರತಿಷ್ಠೆಯ ಆಡಂಬರ.

ದಿವಂಗತ ವೈ.ಡಿ. ಗುಂಡೇವಿಯಾ ಅವರ ಆತ್ಮಕತೆ ‘ಔಟ್‌ಸೈಡ್ ದ ಆರ್ಚೈವ್ಸ್’ನಲ್ಲಿ ಇಂತಹ ಯಾವ ಲಕ್ಷಣಗಳನ್ನೂ ಗುರುತಿಸಲು ಸಾಧ್ಯವಿಲ್ಲ. ಮುಚ್ಚುಮರೆ ಇಲ್ಲದ ಶೈಲಿ, ಸ್ವತಃ ತಮಾಷೆ ಮಾಡಿಕೊಳ್ಳುವ ಹಾಸ್ಯಪ್ರಜ್ಞೆ, ರಾಜಕೀಯ ಮತ್ತು ರಾಜತಾಂತ್ರಿಕತೆಯ ಸಮೃದ್ಧ ಮತ್ತು ಗಾಢವಾದ ಗ್ರಹಿಕೆಗಳಿಂದಾಗಿ ಈ ಆತ್ಮಕತೆ ಚೇತೋಹಾರಿಯಾಗಿದೆ. ಈಗ, ಶಿವಶಂಕರ್ ಮೆನನ್ ಅವರ ‘ಚಾಯ್ಸಸ್’ ಕೃತಿಯನ್ನು ಗಮನಿಸೋಣ- ಹಾಗೆ ನೋಡಿದರೆ ಇದು ಪೂರ್ಣವಾಗಿ ಆತ್ಮಕತೆ ಅಲ್ಲ, ಬದಲಿಗೆ ಇತ್ತೀಚಿನ ಐದು ದಶಕಗಳ ಅವಧಿಯಲ್ಲಿ ಭಾರತ ಎದುರಿಸಿದ ವಿದೇಶಾಂಗ ನೀತಿಯ ಐದು ದ್ವಂದ್ವಗಳನ್ನು ಹತ್ತಿರದಿಂದ ನೋಡಿ ನಡೆಸಿದ ವಿಶ್ಲೇಷಣೆಯಾಗಿದೆ. ಗುಂಡೇವಿಯಾ ಅವರಂತೆಯೇ ಮೆನನ್ ಅವರೂ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಮೆನನ್ ಅವರ ಪುಸ್ತಕ ವಿಶ್ಲೇಷಣೆಯ ಸೂಕ್ಷ್ಮತೆ ಮತ್ತು ಗದ್ಯದ ಶೈಲಿಯಿಂದಾಗಿ ಭಾರತದಲ್ಲಿ ಅಧಿಕಾರಿಗಳು  ಬರೆದಿರುವ ಪುಸ್ತಕಗಳಿಂದ ಭಿನ್ನವಾಗಿ ನಿಲ್ಲುತ್ತದೆ.

‘ಸಚಿವರು ನನ್ನ ಮಾತು ಕೇಳಿದ್ದರೆ’ ಎಂಬುದು ಹೆಚ್ಚಿನ ಅಧಿಕಾರಿಗಳ ಆತ್ಮಕತೆಯಲ್ಲಿ ಕಂಡು ಬರುವ ಸಾಮಾನ್ಯ ಸಾಲು; ಅಧಿಕಾರಿಯು ಸೇವೆಯಲ್ಲಿದ್ದಾಗ ಆಗಿರುವ ಒಳ್ಳೆಯ ಕೆಲಸಗಳ ಖ್ಯಾತಿಯನ್ನು ಬಾಚಿಕೊಳ್ಳುವ ಆಕಾಂಕ್ಷೆಯನ್ನೂ ಅಲ್ಲಿ ಕಾಣಬಹುದು. ಆದರೆ, ಮೆನನ್ ಅವರು ತಮ್ಮ ಸಹವರ್ತಿಗಳು ಮತ್ತು ಸಹೋದ್ಯೋಗಿಗಳ ಬಗ್ಗೆ ಅತ್ಯಂತ ಉದಾರಿ. ಅವರು ಭಾರತದ ರಾಜತಾಂತ್ರಿಕರು ಮತ್ತು ಸಂಧಾನಕಾರರು ಮಾಡಿದ ಕೆಲಸಗಳನ್ನು ಹೊಗಳಿದ್ದಾರೆ.

ಮೆನನ್ ಅವರ ಪುಸ್ತಕದಲ್ಲಿ ಸ್ವವಿಮರ್ಶೆಯನ್ನೂ ಕಾಣಬಹುದು, ಆತ್ಮಕತೆಯ ಪ್ರಕಾರದಲ್ಲಿ ಇಂತಹ ಅಂಶಗಳು ಕಾಣಸಿಗುವುದು ಬಹಳ ವಿರಳ. ಭಾರತ ಮತ್ತು ಅಮೆರಿಕದ ನಡುವಣ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿ ತಾವು ಮತ್ತು ತಮ್ಮ ಜತೆಗಿನ ಸಂಧಾನಕಾರರು ಒಂದು ಅಂಶವನ್ನು ಗುರುತಿಸುವಲ್ಲಿ ವಿಫಲವಾದೆವು ಎಂದು ಮೆನನ್ ಬರೆಯುತ್ತಾರೆ. ಭಾರಿ ಶ್ಲಾಘನೆಗೆ ಒಳಗಾದ ಈ ಒಪ್ಪಂದವನ್ನು ಚೀನಾ ಒಂದು ಬೆದರಿಕೆಯಾಗಿ ಕಾಣಬಹುದು ಮತ್ತು ಅದರ ಪರಿಣಾಮವಾಗಿ ಪಾಕಿಸ್ತಾನಕ್ಕೆ ಇನ್ನಷ್ಟು ಹತ್ತಿರವಾಗಬಹುದು ಎಂಬುದು ಈ ಅಂಶವಾಗಿದೆ. ಆರ್ಥಿಕ ಅವಕಾಶಗಳಿಂದಾಗಿ ಭಾರತದತ್ತ ಚೀನಾ ಆಕರ್ಷಿತವಾಗಬಹುದು ಎಂಬ ಭೀತಿ 2005ರಲ್ಲಿ ಪಾಕಿಸ್ತಾನಕ್ಕೆ ಇತ್ತು. ಆದರೆ ಪರಮಾಣು ಒಪ್ಪಂದದ ಕಾರಣಕ್ಕೆ ಈಗ ಚೀನಾ ಮತ್ತು ಪಾಕಿಸ್ತಾನ ಒಂದಾಗಿವೆ.

ಪಾಕಿಸ್ತಾನದಲ್ಲಿ ತರಬೇತಿ ಪಡೆದ, ಪಾಕಿಸ್ತಾನ ಸೇನೆ ಮತ್ತು ಸರ್ಕಾರದ ಪ್ರಾಯೋಜಕತ್ವದ ಲಷ್ಕರ್ ಎ ತಯಬಾ ಉಗ್ರರ ಗುಂಪು 2008ರ ನವೆಂಬರ್‌ನಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ್ದರ ಬಗೆಗಿನ ಮಾತುಗಳಲ್ಲಿಯೂ ಮೆನನ್ ಅವರ ಬೌದ್ಧಿಕ ಪ್ರಾಮಾಣಿಕತೆ ಕಾಣಿಸುತ್ತದೆ. ಆಗ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಮೆನನ್ ಹೀಗೆ ಬರೆಯುತ್ತಾರೆ: ‘ನನ್ನ ಪ್ರಕಾರ, ಪಾಕಿಸ್ತಾನ ಲಕ್ಷ್ಮಣ ರೇಖೆ ದಾಟಿದೆ. ಅದಕ್ಕಾಗಿ ಸಾಮಾನ್ಯ ಪ್ರತಿಕ್ರಿಯೆಗೆ ಮೀರಿದ ಕ್ರಮವೊಂದರ ಅಗತ್ಯ ಇದೆ. ಮುರಿದ್ಕೆಯಲ್ಲಿರುವ ಲಷ್ಕರ್ ಕೇಂದ್ರ ಸ್ಥಾನದ ಮೇಲೆ ಅಥವಾ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಲಷ್ಕರ್ ಶಿಬಿರಗಳ ಮೇಲೆ ಮತ್ತು ಈ ಉಗ್ರಗಾಮಿ ಸಂಘಟನೆಯ ಪ್ರಾಯೋಜಕರಾದ ಐಎಸ್‍ಐ ಮೇಲೆ ಜಗತ್ತಿಗೆ ಗೊತ್ತಾಗುವ ರೀತಿಯ ದಾಳಿ ನಡೆಸಬೇಕು. ಆಗ ವಿದೇಶಾಂಗ ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರೂ ನನ್ನ ಮಾತನ್ನು ಒಪ್ಪಿದ್ದರು. ಹಾಗಾಗಿಯೇ ಅವರು ಬಹಿರಂಗವಾಗಿಯೇ ನಮ್ಮ ಎಲ್ಲ ಆಯ್ಕೆಗಳೂ ಮುಕ್ತವಾಗಿವೆ ಎಂದು ಹೇಳಿದ್ದರು’.

ಅಂತಿಮವಾಗಿ ನಮ್ಮ ಸಂಯಮವೇ ಮೇಲುಗೈ ಪಡೆಯಿತು. ಪ್ರತೀಕಾರದ ಯಾವ ಕ್ರಮವೂ ನಡೆಯಲಿಲ್ಲ. ದಾಳಿಗೆ ಪ್ರತೀಕಾರ ತೆಗೆದುಕೊಳ್ಳದಿರುವುದು ಮೆನನ್ ಅವರಿಗೆ ಮೊದಲಿಗೆ ಒಪ್ಪಿಗೆ ಇರಲಿಲ್ಲ. ಆದರೆ ಅದುವೇ ಸರಿಯಾದ ಕ್ರಮವಾಗಿತ್ತು ಎಂದು ನಂತರ ಅವರು ಪುಸ್ತಕದಲ್ಲಿ ಹೇಳಿದ್ದಾರೆ. ಅದು ಸರಿ ಎಂಬುದಕ್ಕೆ ಒಂದು ಕಾರಣ, ‘ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ ಆಗಲೇ ದೇಶದೊಳಗೆ ಕೆಟ್ಟ ಹೆಸರು ಸಂಪಾದಿಸಿದ್ದ ಪಾಕಿಸ್ತಾನ ಸೇನೆಯ ಹಿಂದೆ ಇಡೀ ಪಾಕಿಸ್ತಾನ ಒಗ್ಗಟ್ಟಾಗಿ ನಿಲ್ಲುತ್ತಿತ್ತು’ ಎಂಬುದಾಗಿದೆ. ಭಾರತ ದಾಳಿ ನಡೆಸಿದ್ದರೆ ಆಗಷ್ಟೇ ಚುನಾಯಿತವಾಗಿದ್ದ ಪಾಕಿಸ್ತಾನದ ನಾಗರಿಕ ಸರ್ಕಾರ ದುರ್ಬಲವಾಗುತ್ತಿತ್ತು. ಪಾಕಿಸ್ತಾನದ ಸೇನೆಯು ಇರಿಸಿಕೊಳ್ಳಲು ಬಯಸುವುದಕ್ಕಿಂತ ಹೆಚ್ಚಿನ ಮಟ್ಟದ ಸಂಬಂಧವನ್ನು ಭಾರತದ ಜತೆ ಇರಿಸಿಕೊಳ್ಳುವ ಇಚ್ಛೆಯನ್ನು ಹೊಸ ಸರ್ಕಾರ ಹೊಂದಿತ್ತು.

ಪ್ರತೀಕಾರ ಕೈಗೊಳ್ಳದೆ ಇರುವ ಮೂಲಕ ಜಗತ್ತಿನ ಎದುರಿನಲ್ಲಿ ಪಾಕಿಸ್ತಾನವನ್ನು ಸಣ್ಣದಾಗಿಸುವುದು ಭಾರತಕ್ಕೆ ಸಾಧ್ಯವಾಯಿತು. ಪಾಕಿಸ್ತಾನವು ತನ್ನ ವರ್ತನೆಗೆ ತಕ್ಕ ಬೆಲೆ ತೆರಬೇಕು ಎಂದು ಅಂತರರಾಷ್ಟ್ರೀಯ ಸಮುದಾಯ ಕೇಳತೊಡಗಿತು ಮತ್ತು ಅಂತಹ ಇನ್ನೊಂದು ದಾಳಿ ನಡೆಯದಿರುವ ಸಾಧ್ಯತೆ ಇನ್ನಷ್ಟು ಬಲವಾಯಿತು.

ಚಾಯ್ಸಸ್‌ನ ಕೊನೆಯ ಅಧ್ಯಾಯದಲ್ಲಿ ಮೆನನ್ ಅವರು ರಾಜತಾಂತ್ರಿಕ ಕೌಶಲಗಳ ಕೆಲವು ಅಂಶಗಳ ಬಗ್ಗೆಯೂ ವಿಶ್ಲೇಷಣೆ ನಡೆಸಿದ್ದಾರೆ. ಮೊದಲನೆಯದು ಮತ್ತು ಅತ್ಯಂತ ಮುಖ್ಯವಾದುದು, ವಿದೇಶಾಂಗ ನೀತಿಯಿಂದ ಹೊರಹೊಮ್ಮುವ ಯಾವುದೇ ಪ್ರಶ್ನೆಗೆ ಒಂದು ಸರಿಯಾದ ಉತ್ತರ ಎಂಬುದಿಲ್ಲ, ಒಂದು ಉತ್ತರ ಎಲ್ಲ ಸಂದರ್ಭಗಳಿಗೆ ಸರಿ ಹೊಂದುವುದೂ ಇಲ್ಲ. ಹಾಗಾಗಿ, ಈ ಕ್ಷೇತ್ರದಲ್ಲಿರುವ ವ್ಯಕ್ತಿ, ಆಯ್ಕೆಯ ಸಾಧ್ಯತೆಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಮುಕ್ತವಾಗಿರಬೇಕು... ಕಾರ್ಯತಂತ್ರ ಎಂಬುದು ಒಂದು ವಾಸ್ತವಿಕವಾದ ವ್ಯವಹಾರ; ಇದು ಲಭ್ಯ ಇರುವ ದಾರಿಗಳ ಮೂಲಕ ಗುರಿಯನ್ನು ಈಡೇರಿಸಿಕೊಳ್ಳುವುದಾಗಿದೆ.

ಎರಡನೆಯದಾಗಿ, ಸಂಧಾನ ನಡೆಸಲೇಬೇಕು ಮತ್ತು ‘ಯುದ್ಧಕ್ಕೆ ಅವಕಾಶ ಕೊಡಲು ನಿರ್ದಿಷ್ಟ ಸಮಯ ಮತ್ತು ಸ್ಥಳಗಳಿರುತ್ತವೆ’. ರಾಜತಾಂತ್ರಿಕ ವ್ಯವಹಾರ ನೈತಿಕ ದ್ವಂದ್ವಗಳ ಸವಾಲನ್ನು ಮುಂದೊಡ್ಡುತ್ತದೆ: ಕೆಲವೊಮ್ಮೆ, ಮುಗ್ಧ ಜನರ ಸಾವನ್ನು ಯುದ್ಧವು ತಡೆಯಬಹುದು ಅಥವಾ ಸಾವಿನ ಪ್ರಮಾಣವನ್ನು ಕಡಿಮೆ ಮಾಡಬಹುದು. ನಿರ್ದಿಷ್ಟ ಸಂಘರ್ಷದಲ್ಲಿ ದೇಶಗಳ ಮಧ್ಯಪ್ರವೇಶ ಆ ಸಂಘರ್ಷ ಕೊನೆಯಾಗಲು ಕಾರಣವಾಗಬಹುದು (1990ರ ದಶಕದಲ್ಲಿ ಬೋಸ್ನಿಯಾ, 1970ರ ದಶಕದಲ್ಲಿ ಬಾಂಗ್ಲಾದೇಶ ಇದಕ್ಕೆ ಕೆಲವು ಉದಾಹರಣೆಗಳು).

ಮೂರನೆಯದಾಗಿ, ವಿದೇಶಾಂಗ ನೀತಿ ರೂಪುಗೊಳ್ಳುವಲ್ಲಿ ‘ವ್ಯಕ್ತಿತ್ವಗಳು ಮಹತ್ವದ ಪಾತ್ರ ವಹಿಸುತ್ತವೆ’. ಯಾವುದೇ ಒಂದು ಇಲಾಖೆಯಲ್ಲಿ ಅತಿಯಾದ ಅಧಿಕಾರ ಕೇಂದ್ರೀಕೃತವಾಗುವುದನ್ನು ತಡೆಯಲು ಪ್ರಜ್ಞಾಪೂರ್ವಕವಾಗಿ ಪರಿಮಿತಿಗಳನ್ನು ಹೇರಲಾಗಿರುವ ಅಮೆರಿಕದಲ್ಲಿ ಕೂಡ ಇತರ ಇಲಾಖೆಗಳಿಗೆ ಹೋಲಿಸಿದರೆ ವಿದೇಶಾಂಗ ನೀತಿಗೆ ಸಂಬಂಧಿಸಿ ಅಧ್ಯಕ್ಷರ ವರ್ಚಸ್ಸು ಮತ್ತು ಅವರು ಹೇರುವ ಪರಿಮಿತಿಗಳಿಗೆ ಹೆಚ್ಚಿನ ಮಹತ್ವ ಇದೆ. ಭಾರತದಲ್ಲಿ ಕೂಡ, ನೆಹರೂ ಅವರ ಕಾಲದಿಂದಲೇ ವಿದೇಶಾಂಗ ಸಚಿವಾಲಯವನ್ನು ನೇರವಾಗಿ ಪ್ರಧಾನಿಯೇ ನಿರ್ವಹಿಸಿದ್ದಾರೆ. ಪ್ರಣವ್ ಮುಖರ್ಜಿ ಅವರಂತಹ ಪ್ರಭಾವಿ ವಿದೇಶಾಂಗ ಸಚಿವರು ಮಾತ್ರ ಇದಕ್ಕೆ ಅಪವಾದ ಎಂದು ತಮ್ಮ ಪುಸ್ತಕದಲ್ಲಿ ಮೆನನ್ ಪ್ರತಿಪಾದಿಸಿದ್ದಾರೆ.

ವ್ಯಕ್ತಿಗಳ ವರ್ಚಸ್ಸಿಗೆ ಮಹತ್ವ ಇದೆ, ಆದರೆ ಅದು ಎಷ್ಟರ ಮಟ್ಟಿಗೆ ಇರುತ್ತದೆ? ಅಧಿಕಾರ ಮತ್ತು ದುರಹಂಕಾರದ ನಡುವಣ ಗೆರೆ ಅತ್ಯಂತ ತೆಳುವಾದುದು ಎಂಬುದನ್ನು ಹಿಂದಿನ ಕೆಲವು ಪ್ರಧಾನ ಮಂತ್ರಿಗಳು ಸ್ಪಷ್ಟವಾಗಿ ಅರಿತಿದ್ದರು. ಮೂವರು ಪ್ರಧಾನಿಗಳ ಜತೆ ಕೆಲಸ ಮಾಡಿದ ಅನುಭವವನ್ನು ಮೆನನ್ ಅವರು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ಮೂವರು ಪ್ರಧಾನಿಗಳೆಂದರೆ, ಪಿ.ವಿ. ನರಸಿಂಹ ರಾವ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್. ಈ ಮೂವರೂ ‘ಅಧಿಕಾರ ವಹಿಸಿಕೊಳ್ಳುವುದಕ್ಕೆ ಮೊದಲೇ ವಿದೇಶಾಂಗ ನೀತಿಯ ಬಗ್ಗೆ ಸಾಕಷ್ಟು ಚಿಂತನೆ ನಡೆಸಿದವರು; ಬದಲಾದ ಸನ್ನಿವೇಶಕ್ಕೆ ಭಾರತದ ನೀತಿ ಹೊಂದಿಕೆಯಾಗುವಂತೆ ಮಾಡಲು ಇವರು ತಮ್ಮ ಅಪಾರ ಬೌದ್ಧಿಕ ಸಾಮರ್ಥ್ಯವನ್ನು ಧಾರೆ ಎರೆದಿದ್ದಾರೆ’. ಈ ಮೂವರು ಪ್ರಧಾನಿಗಳ ಅವಧಿಯಲ್ಲಿ ಹಿಂದಿನ ನೀತಿಗಳ ಮುಂದುವರಿಕೆಯ ಬಗ್ಗೆ ಮೆನನ್ ಮಾತನಾಡುತ್ತಾರೆ. ಈ ಮೂವರೂ ತಮ್ಮ ‘ಹಿಂದಿನವರ ಕೆಲಸವನ್ನು ಮುಂದುವರಿಸುತ್ತಾರೆ, ಅವರು ಕೊಟ್ಟ ಕೊಡುಗೆಯನ್ನು ಸ್ಮರಿಸುತ್ತಾರೆ’. ಇತರ ದೇಶಗಳ ಜತೆ ಮಹತ್ವದ ಸಂಧಾನದ ಸಂದರ್ಭದಲ್ಲಿ ಇವರು ವಿರೋಧ ಪಕ್ಷಗಳ ಮುಖಂಡರ ಜತೆ ಸಮಾಲೋಚನೆ ನಡೆಸಿ ಅವರನ್ನೂ ಜತೆಗೆ ಒಯ್ಯಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲ ಮಾಧ್ಯಮದ ಸಂಪಾದಕರಿಗೂ ನಿಯತವಾಗಿ ಮಾಹಿತಿ ನೀಡುವ ಕೆಲಸ ಮಾಡಿದ್ದಾರೆ.ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖವಾಗಿಲ್ಲ; ಆದರೆ ಈ ಸಾಲುಗಳನ್ನು ಓದುತ್ತಿದ್ದಂತೆಯೇ ಭೂತ ಮತ್ತು ಭವಿಷ್ಯದ ನಡುವೆ ಭಾರಿ ವ್ಯತ್ಯಾಸ ಇಲ್ಲವೇ ಎಂಬ ಪ್ರಶ್ನೆ ನನ್ನನ್ನು ಕಾಡಿದೆ. ವಿದೇಶಾಂಗ ನೀತಿಗೆ ಸಂಬಂಧಿಸಿ ರಾವ್, ವಾಜಪೇಯಿ ಅಥವಾ ಸಿಂಗ್ ಅವರಂತಲ್ಲದೆ, ಮೋದಿ ಅವರು ತಮ್ಮ ಸ್ವಭಾವಕ್ಕೆ ಅನುಗುಣವಾದ ನಿರ್ಧಾರ ಕೈಗೊಳ್ಳುತ್ತಾರೆ. ಅದು ಚಿಂತನೆ ಅಥವಾ ಅನುಭವದಿಂದ ಮೂಡಿ ಬಂದ  ನಿರ್ಧಾರಗಳಾಗಿರುವುದಿಲ್ಲ. ಅವರ ವಿದೇಶಾಂಗ ನೀತಿ ಧೋರಣೆಯು ಬಹುತೇಕ ಏಕಪಕ್ಷೀಯವೇ ಹೊರತು ಸಮಾಲೋಚನಾತ್ಮಕ ಅಲ್ಲ. ವಿದೇಶಗಳಲ್ಲಿ ಮಾತನಾಡುವಾಗಲೂ ಮೋದಿ ಅವರು ಕಾಂಗ್ರೆಸ್ ಸರ್ಕಾರದ ಪ್ರಧಾನಿಗಳ ಬಗ್ಗೆ ಕಠಿಣ ಪದಗಳನ್ನು ಆಡಿದ್ದಾರೆ; ಅಷ್ಟೇ ಅಲ್ಲ ವಾಜಪೇಯಿ ಅವರನ್ನು ಕೂಡ ಮೋದಿ ಎಂದೂ ಹೊಗಳಿದ್ದಿಲ್ಲ. ‘ತಕ್ಷಣದ ಪಕ್ಷ ರಾಜಕಾರಣದ ಲಾಭಕ್ಕಿಂತ ದೂರಗಾಮಿ ಪರಿಣಾಮಗಳ ಬಗ್ಗೆ ವಾಜಪೇಯಿ ಅವರು ಯಾವಾಗಲೂ ಯೋಚಿಸುತ್ತಿದ್ದರು’ ಎಂದು ಮೆನನ್ ಬರೆದಿದ್ದಾರೆ. ಇದೇ ಮಾತನ್ನು ಮೋದಿ ಅವರ ಬಗ್ಗೆ ಹೇಳಲು ಸಾಧ್ಯವೇ?

ನಾಲ್ಕನೆಯದಾಗಿ, ರಾಜಕೀಯ ನಾಯಕರ ಆಡಂಬರದ ಭಾಷಣಗಳು ಅಥವಾ ಸಂಪಾದಕರು ಮತ್ತು ಸುದ್ದಿ ನಿರೂಪಕರ ಅತಿದೇಶಭಕ್ತಿಯ ಉದ್ದ ಭಾಷಣಗಳಿಗಿಂತ ವಿದೇಶಾಂಗ ನೀತಿಯ ಯಶಸ್ಸು ಅಡಗಿರುವುದು ಸದ್ದಿಲ್ಲದೆ ತಾಳ್ಮೆಯಿಂದ ತೆರೆಯ ಹಿಂದೆ ಮಾಡುವ ಕೆಲಸದಲ್ಲಿ ಎಂದು ಮೆನನ್ ವಿವರಿಸಿದ್ದಾರೆ. ಭಾರತ ಮತ್ತು ಚೀನಾ ನಡುವಣ ಗಡಿ ಸಮಸ್ಯೆ ಅಧಿಕೃತವಾಗಿ ತೀರ್ಮಾನವಾಗದೇ ಇದ್ದರೂ ಎರಡೂ ದೇಶಗಳ ನಡುವೆ ಏರ್ಪಟ್ಟ ಸಹಮತಿಯ ವ್ಯವಸ್ಥೆಯನ್ನು ಅವರು ನಿದರ್ಶನವಾಗಿ ನೀಡುತ್ತಾರೆ. ಹಿಂಸಾತ್ಮಕ ಘಟನೆಗಳು ಅಥವಾ ಅತಿಕ್ರಮಣಗಳಿಗೆ ಸಂಬಂಧಿಸಿ ಹೇಳುವುದಾದರೆ ಭಾರತ-ಚೀನಾ ಗಡಿ ಹೆಚ್ಚು ಶಾಂತಿಯುತ. ಅಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಇರುವಷ್ಟು  ಸಂಘರ್ಷ ಇಲ್ಲ. ಅಷ್ಟೇಕೆ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಇರುವಷ್ಟು ಉದ್ವಿಗ್ನತೆಯೂ ಇಲ್ಲ. ‘ಭಾರತ ಮತ್ತು ಚೀನಾ ನಡುವೆ ಗಡಿಗಿಂತ ಹೆಚ್ಚು ಮುಖ್ಯವಾದ ಹಲವು ವಿಷಯಗಳಿವೆ’. ದ್ವಿಪಕ್ಷೀಯ ವ್ಯಾಪಾರ ಸತತವಾಗಿ ಬೆಳೆದಿದೆ, ಕಳೆದ ಎರಡು ದಶಕಗಳಲ್ಲಿ ಎಪ್ಪತ್ತು ಪಟ್ಟು ಹೆಚ್ಚಿದೆ. ಭಾರತ-ಚೀನಾ ಜಂಟಿ ಸೇನಾ ಸಮರಾಭ್ಯಾಸವೂ ನಡೆದಿದೆ. ಚೀನಾದಲ್ಲಿ ಭಾರತದ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಈ ಸಹಮತ ಹೇಗೆ ಸಾಧ್ಯವಾಯಿತು ಎಂಬುದರ ಬಗ್ಗೆ ಮೆನನ್ ಅವರ ವಿವರಣೆ ಹೀಗಿದೆ: ‘ಯಶಸ್ಸು ಪಡೆಯುವುದಕ್ಕೆ ಇರುವ ಮುಖ್ಯ ಅಂಶವೆಂದರೆ, ಸಾರ್ವಜನಿಕ ಚರ್ಚೆ ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳುವುದು, ದೃಢತೆ ಪ್ರದರ್ಶನ, ನಾವು ಬಯಸುವ ಪರಿಹಾರವೇ ವಿರೋಧಿಗಳಿಗೆ ಇರುವ ಏಕೈಕ ದಾರಿ ಎಂಬುದನ್ನು ಮನಗಾಣಿಸುವುದು. 2013ರ ಮೇ ತಿಂಗಳ ಮೂರು ವಾರಗಳಲ್ಲಿ ಭಾರತದ ಕೆಲ ಸುದ್ದಿವಾಹಿನಿಗಳು ಮತ್ತು ಅದರ ನಿರೂಪಕರು ಮಾಡಿದಂತೆ ಟ್ವೀಟ್ ಮಾಡುವುದು ಅಥವಾ ಸಾರ್ವಜನಿಕವಾಗಿ ಗೋಳು ತೋಡಿಕೊಳ್ಳುವುದು, ಅಣ್ವಸ್ತ್ರಗಳನ್ನು ಝಳಪಿಸುವುದು ಅಥವಾ ಯುದ್ಧದ ಬೆದರಿಕೆ ಒಡ್ಡುವುದರಿಂದ ಸಮಸ್ಯೆ ಪರಿಹಾರ ಆಗದು (2013ರ ಮೇಯಲ್ಲಿ ಚೀನಾ ಸೇನೆ ದೆಪ್ಸಾಂಗ್‌ನಲ್ಲಿ ಅತಿಕ್ರಮಣ ನಡೆಸಿತ್ತು. ಚೀನಾ ಜತೆಗಿನ ಗಡಿಯಲ್ಲಿ ಇಂಥ ಅತಿಕ್ರಮಣ ಅತಿ ವಿರಳ).

ಪುಸ್ತಕದ ಕೊನೆಯಲ್ಲಿ ಮೆನನ್ ಅವರು ಹೀಗೆ ಹೇಳುತ್ತಾರೆ: ‘ಸೌಮ್ಯವಾಗಿ ಮಾತನಾಡುತ್ತಿದ್ದರೂ ಕೈಯಲ್ಲಿ ದೊಡ್ಡ ದೊಣ್ಣೆ ಹಿಡಿದಿರಬೇಕು ಎಂಬುದು ನನ್ನ ನಂಬಿಕೆ. ಚೀನಾದ ಪ್ರಗತಿಯಿಂದಾಗುವ ಪರಿಣಾಮಗಳನ್ನು ನಿಭಾಯಿಸುವುದು ಮತ್ತು ನಮ್ಮ ಸುತ್ತಲಿನ ಇತರ ಬದಲಾವಣೆಗಳನ್ನು ನಿಭಾಯಿಸಲು ಭಾರತ ಅನುಸರಿಸಬಹುದಾದ ಅತ್ಯಂತ ಉಪಯುಕ್ತ ನೀತಿ ಇದು. ಶರಶಯ್ಯೆಯಲ್ಲಿ ಸಾಯುವ ಸ್ಥಿತಿಯಲ್ಲಿದ್ದ ಭೀಷ್ಮ ಸುತ್ತಲೂ ಸೇರಿದ್ದ ರಾಜರನ್ನು ಉದ್ದೇಶಿಸಿ ಹೀಗೆ ಹೇಳುತ್ತಾನೆ: ‘ಮೌನವಾಗಿ ಯಾರು ಇರುತ್ತಾರೋ ಅವರನ್ನು ಇತರರು ಅನುಸರಿಸುತ್ತಾರೆ. ಸಂಯಮದಿಂದ ಇರುವವರೇ ಜೀವನದ ಎಲ್ಲವನ್ನೂ ಅನುಭವಿಸುತ್ತಾರೆ’. ಈ ಮಾತನ್ನು ಭಾರತದ ನಾಯಕರು ಮಾತ್ರವಲ್ಲ, ಇತರ ದೇಶಗಳ ನಾಯಕರೂ ಅರಿತುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry