ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕೃತ ಹೆಚ್ಚಿಲ್ಲ; ಅನಧಿಕೃತವೇ ಎಲ್ಲ

Last Updated 31 ಮಾರ್ಚ್ 2017, 19:04 IST
ಅಕ್ಷರ ಗಾತ್ರ

‘ಅಧಿಕೃತ ಕಸಾಯಿಖಾನೆಗಳ ಮೇಲೆ ನಿಯಂತ್ರಣ ಹೇರಬಹುದು. ಅನಧಿಕೃತ ಕಸಾಯಿಖಾನೆಗಳ ಬಗ್ಗೆ ಕ್ರಮ ಕೈಗೊಳ್ಳುವುದಾದರೂ ಹೇಗೆ? ದೂರು ಬಂದಾಗಲೊಮ್ಮೆ ದಾಳಿ ನಡೆಸುತ್ತೇವೆ. ಪ್ರಕರಣ ದಾಖಲಿಸುತ್ತೇವೆ. ಕೆಲ ದಿನಗಳ ನಂತರ ಮತ್ತೆ ಅದೇ ಮುಂದುವರಿಯುತ್ತದೆ. ಇದೊಂದು ಮುಗಿಯಲಾರದ ಕಥೆ’.
ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರ ಈ ಮಾತು, ಕರಾವಳಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಸಾಯಿಖಾನೆಗಳ ಸ್ಥಿತಿಗತಿಯನ್ನು  ತೆರೆದಿಡುತ್ತದೆ. ಹಗಲು ಹೊತ್ತಿನಲ್ಲಿ ಸಣ್ಣ ಕೋಣೆಗಳಂತೆ ಕಾಣುವ ಕಟ್ಟಡಗಳು, ರಾತ್ರಿಯಾಗುತ್ತಲೇ ಕಸಾಯಿಖಾನೆಗಳಾಗಿ ಬದಲಾಗುತ್ತವೆ. ಇಂತಹ ಅದೆಷ್ಟೋ ಅನಧಿಕೃತ ಕಸಾಯಿಖಾನೆಗಳು ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಹಾಗೂ ಪಕ್ಕದ ಕೇರಳದಲ್ಲಿ ಕಾರ್ಯಾಚರಣೆ ಮಾಡುತ್ತಿವೆ.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಂದು ಕಸಾಯಿಖಾನೆಗೆ ಮಾತ್ರ ಅನುಮತಿ ನೀಡಲಾಗಿದೆ. ಸುಮಾರು ಏಳೆಂಟು ಕಸಾಯಿಖಾನೆಗಳು ಅನಧಿಕೃತವಾಗಿ ನಡೆಯುತ್ತಿವೆ. ಇಂತಹ ಘಟಕಗಳಿಂದ ದುರ್ವಾಸನೆ, ಪರಿಸರ ನೈರ್ಮಲ್ಯಕ್ಕೆ ತೊಂದರೆ ಎದುರಾದರೆ, ಅವುಗಳ ಬಗ್ಗೆ ದೂರು ನೀಡುವುದಕ್ಕೂ ಹಿಂದೇಟು ಹಾಕುವಂತಾಗಿದೆ. ಒಂದೊಮ್ಮೆ ಕೆಲ ಸಂಘಟನೆಗಳು ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಪ್ರತಿಭಟನೆಗೆ ಮುಂದಾದರೆ, ಕೋಮು ಬಣ್ಣ ಮೆತ್ತಿಕೊಳ್ಳುತ್ತದೆ!

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರವಾನಗಿ ಇರುವ ಒಂದೇ ಒಂದು ಕಸಾಯಿಖಾನೆ ಇಲ್ಲ. ಆದರೆ, ಅಧಿಕಾರಿಗಳೇ ಹೇಳುವಂತೆ 20 ಕಸಾಯಿಖಾನೆಗಳು ಅಕ್ರಮವಾಗಿ ನಡೆಯುತ್ತಿವೆ. ಉಡುಪಿ ಜಿಲ್ಲೆಯಲ್ಲೂ ಅಧಿಕೃತ ಕಸಾಯಿಖಾನೆ ಇಲ್ಲ. ಆದರೆ, ಮಾಂಸದ ಅಂಗಡಿಗಳೇ ಇಲ್ಲಿ ಸಣ್ಣ ಕಸಾಯಿಖಾನೆಗಳಾಗಿ ಮಾರ್ಪಟ್ಟಿವೆ.
‘ಅಧಿಕೃತ ಕಸಾಯಿಖಾನೆಗಳಿಗೆ ನಿಗದಿತ ಭೇಟಿ ನೀಡುವ ಮೂಲಕ ನಿಯಮಾವಳಿ ಪಾಲಿಸುವಂತೆ ಸೂಚನೆ ನೀಡಲಾಗುತ್ತದೆ. ನಿಯಮ ಪಾಲಿಸದಿದ್ದರೆ ನೋಟಿಸ್‌ ನೀಡಿ, ದಂಡ ವಿಧಿಸಲಾಗುತ್ತದೆ. ಇಷ್ಟು ಮಾತ್ರ ನಮ್ಮಿಂದ ಮಾಡಲು ಸಾಧ್ಯ’ ಎಂದು ಹೆಸರು ಹೇಳಲು ಇಚ್ಛಿಸದ ಪಾಲಿಕೆ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

‘ಮಂಗಳೂರು ನಗರದಲ್ಲಿ ಇರುವ, ಪರವಾನಗಿ ಪಡೆದ ಏಕೈಕ ಕಸಾಯಿಖಾನೆಯನ್ನು  ಹೊರವಲಯಕ್ಕೆ ಸ್ಥಳಾಂತರಿಸುವಂತೆ ಪರಿಸರ ಇಲಾಖೆ ಸೂಚಿಸಿದೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ, ಒಂದೆರಡು ಸ್ಥಳಗಳ ಪರಿಶೀಲನೆ ಮಾಡಿದ್ದು ಬಿಟ್ಟರೆ ಬೇರೇನೂ ಆಗಿಲ್ಲ. ಪರವಾನಗಿ ಪಡೆದ ಕಸಾಯಿಖಾನೆಯಲ್ಲಿಯೇ ಸಮರ್ಪಕ ಸೌಲಭ್ಯಗಳಿಲ್ಲ. ಇದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ’ ಎನ್ನುವುದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ಅವರ ಮಾತು.
‘ಸಂಘಟನೆಗಳು ಮಾಹಿತಿ ನೀಡಿದಾಗ ಮಾತ್ರ ಪೊಲೀಸರು ಅನಧಿಕೃತ ಕಸಾಯಿಖಾನೆಗಳ ಮೇಲೆ ದಾಳಿ ಮಾಡುತ್ತಾರೆ. ಮತ್ತೆ ಅದೇ ಸ್ಥಿತಿ ಮುಂದುವರಿಯುತ್ತದೆ. ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಅತ್ಯಂತ ಅವಶ್ಯಕ’ ಎಂದು ಹೇಳುತ್ತಾರೆ ಬಜರಂಗದಳ ಜಿಲ್ಲಾ ಘಟಕದ ಅಧ್ಯಕ್ಷ ಶರಣ್‌ ಪಂಪ್‌ವೆಲ್‌.

ಕರಾವಳಿಯಲ್ಲಿ ಜಾನುವಾರು ಕಳವು, ಅಕ್ರಮ ಕಸಾಯಿಖಾನೆಗಳ ಹಾವಳಿ ಹೆಚ್ಚುತ್ತಲೇ ಇದೆ. ಕಳವು ಮಾಡಿದ ಜಾನುವಾರುಗಳನ್ನು ಇಂತಹ ಕಸಾಯಿಖಾನೆಗಳಿಗೆ ಸಾಗಿಸುವ ಘಟನೆಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇಷ್ಟಾದರೂ, ಯಾರೂ ಕ್ರಮ ಕೈಗೊಳ್ಳುವ ಗೋಜಿಗೆ ಹೋಗುತ್ತಿಲ್ಲ. ದೂರು ನೀಡಿದರೆ ಕ್ರಮ ಕೈಗೊಳ್ಳಬಹುದು ಎನ್ನುವ ವಾದ ಪೊಲೀಸರದ್ದಾದರೆ, ದೂರು ನೀಡಲು ಹೋದರೆ ಜೀವಬೆದರಿಕೆ ಬರುತ್ತದೆ ಎನ್ನುವ ಮಾತು ಜನರಿಂದ ಕೇಳಿ ಬರುತ್ತಿದೆ. ಜಾನುವಾರು ಸಾಗಣೆ, ಕಸಾಯಿಖಾನೆಗಳ ಪ್ರಬಲ ಲಾಬಿಯಿಂದಾಗಿ ಕರಾವಳಿಯಲ್ಲಿ ಆಗಾಗ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ.

**

ನೆರೆ ರಾಜ್ಯಕ್ಕೆ ಸಾಗಣೆ

ಕೇರಳದಲ್ಲಿ ಬಹುತೇಕ ಹಬ್ಬದ ದಿನಗಳಲ್ಲಿ ಮಾಂಸದ ಊಟಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಆದರೆ ಅಲ್ಲಿ ಸಾಕಣೆ ಮಾಡುವ ಪ್ರಾಣಿಗಳು ರಾಜ್ಯದ ಜನರ ಅಗತ್ಯಕ್ಕೆ ಸಾಕಾಗುವುದಿಲ್ಲ. ಈ ಕಾರಣದಿಂದ ಮಾಂಸಕ್ಕಾಗಿ ಅನ್ಯರಾಜ್ಯಗಳಲ್ಲಿನ ಪ್ರಾಣಿಗಳನ್ನು ಆಶ್ರಯಿಸಬೇಕಾಗುತ್ತದೆ. ಅದರಲ್ಲೂ ಪ್ರಮುಖವಾಗಿ ಕರ್ನಾಟಕದ ಕರಾವಳಿ ಮೂಲಕ ಸರಬರಾಜಾಗುವ ಜಾನುವಾರುಗಳೇ ಕೇರಳದ ಕಸಾಯಿಖಾನೆಗೆ ಮುಖ್ಯ ಸರಕು  ಎನಿಸಿವೆ.

ಇದರ ಪರಿಣಾಮವಾಗಿ ಕರಾವಳಿ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗೋಕಳ್ಳರ ಹಾವಳಿ ವಿಪರೀತವಾಗಿದೆ. ಜಾನುವಾರುಗಳನ್ನು ಸಾಗಿಸಲು ಅವಸರದಿಂದ ಚಾಲನೆ ಮಾಡುವಾಗ ಚರಂಡಿಗೆ ಬಿದ್ದ ವಾಹನದ ಒಳಗಿದ್ದವು, ಸಾರ್ವಜನಿಕರು ಹಿಡಿದುಕೊಟ್ಟ ವಾಹನದಲ್ಲಿದ್ದ ಜಾನುವಾರುಗಳು ಮಾತ್ರ ಪೊಲೀಸರ ವಶಕ್ಕೆ ಸಿಗುತ್ತವೆ. ಗೋವಾ, ಗೋಹತ್ಯೆ ನಿಷೇಧವಾಗಿರುವ ಮಹಾರಾಷ್ಟ್ರದ ಕಸಾಯಿಖಾನೆಗಳು ಸಹ ಕರಾವಳಿ ಜಿಲ್ಲೆಯ ಜಾನುವಾರುಗಳನ್ನು ಅವಲಂಬಿಸಿವೆ.

ಕೇರಳದಲ್ಲಿ ಪರವಾನಗಿ ಹೊಂದಿದ ಕಸಾಯಿಖಾನೆಗಳ ಪೈಕಿ, ಮೂರರಲ್ಲಿ ಮಾತ್ರವೇ ಆಧುನಿಕ ಸೌಕರ್ಯಗಳಿವೆ ಎಂದು ಅಲ್ಲಿನ ಪಶು ಸಂರಕ್ಷಣಾ ಇಲಾಖೆ ಹೇಳಿದೆ. ಅನ್ಯ ರಾಜ್ಯಗಳಿಂದ ಬರುವ ಜಾನುವಾರುಗಳ ಆರೋಗ್ಯ ತಪಾಸಣೆ ಸಮರ್ಪಕವಾಗಿ ನಡೆಯುವುದಿಲ್ಲ. ವಿಷಯುಕ್ತವಾದ ತರಕಾರಿಗಳಂತೆ, ರೋಗಪೀಡಿತ ಜಾನುವಾರುಗಳ ಮಾಂಸವನ್ನು ಕೇರಳದ ಜನ ಸೇವಿಸುವಂತಾಗಿದೆ ಎಂದು ಇಲಾಖೆಯ ವರದಿ ಹೇಳಿದೆ.

**

ಮನೆಯೇ ಕಸಾಯಿಖಾನೆ!

ಮಂಗಳೂರು ನಗರದ ಹೊರವಲಯದಲ್ಲಂತೂ ಮನೆಗಳೇ ಅನಧಿಕೃತ ಕಸಾಯಿಖಾನೆಗಳಾಗಿ ಮಾರ್ಪಟ್ಟಿವೆ. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಕಳವು ಮಾಡಿದ ಜಾನುವಾರುಗಳನ್ನು ಈ ಕಸಾಯಿಖಾನೆಗಳಿಗೆ ತರಲಾಗುತ್ತದೆ. ಸಂಘಟನೆಗಳಿಂದ ಒತ್ತಡ ಬಂದಾಗ ಮಾತ್ರ ಪೊಲೀಸರು ದಾಳಿ ನಡೆಸುತ್ತಾರೆ.

ಉಳಿದ ದಿನಗಳಲ್ಲಿ ಈ ಕಸಾಯಿಖಾನೆಗಳು ಎಗ್ಗಿಲ್ಲದೆ ನಡೆಯುತ್ತವೆ. ದಾಳಿಯಾದಾಗಲೊಮ್ಮೆ ಈ ಕಸಾಯಿಖಾನೆಗಳಲ್ಲಿ ಕಾಣಸಿಗುವ ಹರಿದ ರಕ್ತ, ಚರ್ಮ, ತಲೆಬುರುಡೆ ಅಲ್ಲಿನ ಅವ್ಯವಸ್ಥೆಗೆ ಸಾಕ್ಷಿಯಾಗುತ್ತವೆ.

*

-ಚಿದಂಬರ ಪ್ರಸಾದ
ಪ್ರಜಾವಾಣಿ, ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT