7

ನದಿ ನೋಡಲು ಹೋಗಿ ಇರುಳಲ್ಲಿ ದಾರಿ ತಪ್ಪಿದ್ದೆವು!

Published:
Updated:

ನಾವು ಹದಿನಾಲ್ಕು ಗೆಳತಿಯರು ಆಸ್ಟ್ರೇಲಿಯ, ನ್ಯೂಜಿಲೆಂಡ್ ಮತ್ತು ಓಕ್ಲೆಂಡ್ ಪ್ರವಾಸ ಹಮ್ಮಿಕೊಂಡಿದ್ದೆವು. ಆಸ್ಟ್ರೇಲಿಯಾದ ಸುಂದರ ತಾಣಗಳನ್ನು ನೋಡಿ ನ್ಯೂಜಿಲೆಂಡ್‌ಗೆ ಹೊರಟೆವು. ದೊಡ್ಡ ಬಸ್ಸಿನಲ್ಲಿ ಕುಳಿತು ಇಕ್ಕೆಲಗಳ ನಯನ ಮನೋಹರವಾದ ದೃಶ್ಯಗಳನ್ನು ವೀಕ್ಷಿಸುತ್ತ – ಅಲ್ಲಲ್ಲಿ ಸಿಗುವ ಚೆರ್ರಿಹಣ್ಣುಗಳ ಗಿಡಗಳೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುತ್ತ ‘ಕ್ವೀನ್ಸ್ ಲ್ಯಾಂಡ್’ ಎಂಬ ಪ್ರದೇಶಕ್ಕೆ ಬಂದೆವು.ರಾತ್ರಿ ನಾರ್ತ್ ಇಂಡಿಯನ್ ಕ್ಯುಸಿನೆಯಲ್ಲಿ ಊಟ ಮುಗಿಸಿ ‘ಡಬ್ಬಲ್ ಟ್ರೀ’ ಎಂಬ ಹೋಟೆಲಿನಲ್ಲಿ ತಂಗಿದೆವು. ಮುಂಜಾನೆ, ‘ಕ್ವೀನ್ಸ್ ಟೌನ್ ಟ್ರಿಪಲ್ ಫ್ಲೋರ್ ಗಾರ್ಡನ್’ ನೋಡಿಕೊಂಡು ರೂಮ್ ಸೇರಿದಾಗ ಸಂಜೆ ನಾಲ್ಕು ಗಂಟೆಯಾಗಿತ್ತು. ಕೆಲವರು ಶಾಪಿಂಗ್‌ಗಾಗಿ ಹೊರಹೊರಟರು, ಮತ್ತೆ ಕೆಲವರು ರೆಸ್ಟ್ ಮಾಡಲು ರೂಮಿನಲ್ಲೇ ಉಳಿದರು.ಹಿಂದಿನ ದಿನ ನಾವು ‘ಕ್ವೀನ್ಸ್ ಲ್ಯಾಂಡ್’ಗೆ ಬರುವಾಗ ರಸ್ತೆ ಬದಿಯ ಪಾರ್ಕಿನ ಪಕ್ಕದಲ್ಲಿ ‘ವಾಕಾಟೀಪು ನದಿ’ ಹರಿಯುತ್ತದೆ ಎಂದು ಗೈಡ್ ತೋರಿಸಿದ್ದ. ಆ ನದಿಯನ್ನು ನೋಡಲಿಕ್ಕೆಂದು ನಾವಿಬ್ಬರೂ ರೂಮಿನಿಂದ ಹೊರಬಂದೆವು.

ನದಿಯ ಪಕ್ಕದಲ್ಲೇ ನಡೆಯುತ್ತ, ಹರಿಯುವ ನೀರನ್ನು ನೋಡಿ ಆನಂದಪಡುತ್ತ ಒಂದು ಗಂಟೆ ನಡೆದೆವು. ನಂತರ ಹಿಂದಿರುಗುತ್ತ ಅಲ್ಲೇ ಪಾರ್ಕಿನಲ್ಲಿ ಕುಳಿತು ಫೋಟೊ ಕ್ಲಿಕ್ಕಿಸಿಕೊಳ್ಳುವ ವೇಳೆಗೆ ಕತ್ತಲಾಗತೊಡಗಿತು.

ಇಬ್ಬರೂ ಲಗುಬಗೆಯಿಂದ ಹೆಜ್ಜೆಹಾಕುತ್ತಾ ಬಂದದಾರಿಯಲ್ಲೇ ನಡೆದು, ನೆನಪಿಟ್ಟುಕೊಂಡ ರಸ್ತೆಯಲ್ಲೇ ಕ್ರಾಸ್ ಮಾಡಿದೆವು. ಆದರೆ ಅಲ್ಲಿ ನಮ್ಮ ಹೋಟೆಲ್ ಕಾಣಲಿಲ್ಲ. ಗಾಬರಿಯಾಗಿ ಇನ್ನೊಂದು ರಸ್ತೆಗೆ ಬಂದೆವು. ಚಿಕ್ಕದಾದ ರಸ್ತೆಗಳ ತಿರುವು ಎಲ್ಲೆಡೆ ಒಂದೇ ರೀತಿ ಕಾಣುತ್ತಿತ್ತು.ನಾವು ದಾರಿ ತಪ್ಪಿದ್ದೆವು. ನನ್ನ ಗೆಳತಿ ಅಳತೊಡಗಿದಳು. ಹೋಟೆಲ್ ಹೆಸರಷ್ಟೇ ನಮಗೆ ಗೊತ್ತಿತ್ತು. ಪೊಲೀಸ್ ಸ್ಟೇಷನ್ ಎಲ್ಲಿದೆಯೋ ಗೊತ್ತಿಲ್ಲ. ಆಗಲೇ ಕತ್ತಲಾಗುತ್ತಿತ್ತು.ನನ್ನ ಗೆಳತಿ ‘ನೀನೇ ಕರೆದುಕೊಂಡು ಬಂದೆ’ ಎಂದು ನನ್ನನ್ನು ಬೈಯುತ್ತ, ಎಲ್ಲ ದೇವರನ್ನೂ ಪ್ರಾರ್ಥಿಸತೊಡಗಿದಳು. ಅವಳ ಪ್ರಾರ್ಥನೆಯ ಫಲವೋ ಎಂಬಂತೆ ಆ ಕತ್ತಲೆಯನ್ನು ಸೀಳುತ್ತಾ ಎತ್ತರದ ಬೆಳ್ಳನೆಯ ಯುವತಿಯೂಬ್ಬಳು ಜಾಗಿಂಗ್ ಮಾಡುತ್ತಾ ನಮ್ಮ ಮುಂದೆಯೇ ಬಂದಳು.

ನನಗೆ ದೇವತೆಯೇ ಬಂದಂತೆನಿಸಿತು. ‘ಹಲೋ ಎಕ್ಸ್ ಕ್ಯೂಸ್ ಮಿ’ ಎಂದೆ. ಆದರೆ, ಕಿವಿಗೆ ಹಾಕಿಕೊಂಡಿದ್ದ  ಇಯರ್ ಫೋನ್ ಹಾಡಿನಿಂದ ನನ್ನ ಧ್ವನಿ ಕೇಳಿಸದೆ ಅವಳು ಓಡತೊಡಗಿದಳು. ನಾವಿಬ್ಬರೂ ಅವಳ ಹಿಂದೆಯೇ ಓಡುತ್ತ  ‘ಹಲೋ ಹಲೋ’ ಎಂದು ಅವಳನ್ನು ಸಮೀಪಿಸುವಲ್ಲಿ ಯಶಸ್ವಿಯಾದೆವು.ನಾನು ನನಗೆ ಗೊತ್ತಿದ್ದ ಇಂಗ್ಲಿಷ್‌ ಎಲ್ಲ ಉಪಯೋಗಿಸಿ ಅವಳಿಗೆ ಪರಿಸ್ಥಿತಿ ಅರ್ಥ ಮಾಡಿಸಿದೆ. ‘ಅಡ್ರಸ್’ ಎಂದಳು. ನಮ್ಮ ಅಸಹಾಯಕತೆ ಅರ್ಥ ಮಾಡಿಕೊಂಡು ತಲೆಯಾಡಿಸುತ್ತಾ – ತನ್ನ ಫೋನಲ್ಲಿ ಗೂಗಲ್ ಮ್ಯಾಪ್ ಜಾಲಾಡತೊಡಗಿದಳು. ‘ಲುಕ್ ಹಿಯರ್’ ಎನ್ನುತ್ತಾ ದೂರದ ರಸ್ತೆಯ ತಿರುವಿನತ್ತ ಕೈ ತೋರಿ – ‘ನೇರವಾಗಿ ಹೋಗಿ ಎಡಕ್ಕೆ ತಿರುಗಿ, ಅಲ್ಲಿಂದ ಐದು ನಿಮಿಷದ ನಡಿಗೆ’ ಎಂದು ಇಂಗ್ಲಿಷ್‌ನಲ್ಲಿ ಹೇಳಿದಳು.

ಅವಳಿಗೆ ವಂದಿಸಿ, ಆಕೆ ಸೂಚಿಸಿದ ರಸ್ತೆಯಲ್ಲೇ ಚಾಚೂ ತಪ್ಪದಂತೆ ನಡೆದೆವು. ಅನತಿ ದೂರದಲ್ಲಿ ನಮ್ಮ ಹೋಟೆಲ್ ಕಾಣಿಸಿತು. ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ.

–ಎಸ್. ವಿಜಯಗುರುರಾಜ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry