ಹೊಸ ದಿಸೆಯತ್ತ ಯುವ ಕುಸ್ತಿ

7

ಹೊಸ ದಿಸೆಯತ್ತ ಯುವ ಕುಸ್ತಿ

Published:
Updated:
ಹೊಸ ದಿಸೆಯತ್ತ ಯುವ ಕುಸ್ತಿ

ಧಾರವಾಡದಲ್ಲಿ ನಡೆದ ರಾಜ್ಯ ಒಲಿಂಪಿಕ್ಸ್‌ನ ಕುಸ್ತಿಯಲ್ಲಿ ಐದು ಚಿನ್ನ ಸೇರಿದಂತೆ ಒಟ್ಟು 12 ಪದಕಗಳನ್ನು ಬಾಚಿದ ಭಾರತೀಯ ಕ್ರೀಡಾ ಪ್ರಾಧಿಕಾರ ಧಾರವಾಡ ಕೇಂದ್ರದ ಪೈಲ್ವಾನರು ಸಂಭ್ರಮಪಡುತ್ತಿರುವಾಗಲೇ ಈ ಭಾಗದ ಪ್ರತಿಭಾವಂತ ಕುಸ್ತಿಪಟು ಸಂತೋಷ ಹೊಸಮನಿ ಅವರ ದುರಂತ ಸಾವು ಇಲ್ಲಿನ ಕುಸ್ತಿ ಕ್ಷೇತ್ರವನ್ನು ನಿರಾಸೆಯ ಕಡಲಿಗೆ ತಳ್ಳಿತ್ತು.ಸಂಭ್ರಮ ಮತ್ತು ವೇದನೆಯ ಈ ಎರಡು ಪ್ರಸಂಗಗಳ ಮೊದಲು ಮತ್ತು ನಂತರ ಸಾಯ್‌ ಕೇಂದ್ರದ ಪೈಲ್ವಾನರು ರಾಷ್ಟ್ರಮಟ್ಟದಲ್ಲಿ  ಬೆಳಗಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ನಿಂದ ಈ ವರ್ಷ ಫೆಬ್ರುವರಿ ವರೆಗೆ ನಡೆದ ವಿವಿಧ ಸ್ಪರ್ಧೆಗಳ ವಿಭಿನ್ನ ವಯೋಮಾನದ ವಿಭಾಗಗಳಲ್ಲಿ ಒಟ್ಟು ಎಂಟು ಪದಕಗಳನ್ನು ಗೆದ್ದು ಭರವಸೆಯನ್ನು ಮೂಡಿಸಿದ್ದಾರೆ. 

 

ಅಖಿಲ ಭಾರತೀಯ ಅಂತರ ವಿಶ್ವವಿದ್ಯಾಲಯ ಸ್ಪರ್ಧೆ, ಅಖಿಲ ಭಾರತ ಅಂತರ ಶಾಲಾ ಕ್ರೀಡಾಕೂಟ ಮತ್ತು ಕುಸ್ತಿ ಫೆಡರೇಷನ್ ನಡೆಸುವ ಸ್ಪರ್ಧೆಗಳಲ್ಲಿ ವಿವಿಧ ವಯೋಮಾನದವರು ಪದಕ ಬಾಚಿದ್ದಾರೆ. ಫ್ರೀಸ್ಟೈಲ್‌ ಮತ್ತು ಗ್ರೀಕೊ ರೋಮನ್‌ ಮಾತ್ರವಲ್ಲದೆ ಇತ್ತೀಚೆಗೆ ಇಲ್ಲಿ ಪ್ರಚಲಿತವಾಗುತ್ತಿರುವ ಬೆಲ್ಟ್ ಕುಸ್ತಿಯಲ್ಲೂ ಪ್ರಶಸ್ತಿ ಗೆದ್ದು ಮಿಂಚಿದ್ದಾರೆ.ಸಾಯ್‌ನಲ್ಲಿ ತರಬೇತಿ ಪಡೆಯುತ್ತಿರುವ ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ ‘ಜೂನಿಯರ್‌’ ಕುಸ್ತಿಪಟುಗಳು ಈ ಸಾಧನೆ ಮಾಡಿದ್ದು ಉತ್ತರ ಕರ್ನಾಟಕದಲ್ಲಿ ಕುಸ್ತಿಗೆ ಪ್ರವೇಶಿಸಲು ಕಾಯುತ್ತಿರುವ ಯುವ ಪೀಳಿಗೆಗೆ ಇದು ಹುಮ್ಮಸ್ಸು ತುಂಬಲಿದೆ ಎಂಬುದು ಈ ಭಾಗದ ತರಬೇತುದಾರರ ಅನಿಸಿಕೆ. 

 

ಸಹೋದರರು ಮಾಡಿದ ಕಮಾಲ್‌ 

ಗದಗ ನಗರದ ಕುಸ್ತಿ ಕೋಚ್‌ ಶರಣಪ್ಪ ಅವರ ಪುತ್ರರಾದ ಫಾಲಾಕ್ಷಗೌಡ ಮತ್ತು ಪ್ರಶಾಂತಗೌಡ, ಸಾಯ್ ತರಬೇತಿ ಕೇಂದ್ರದಲ್ಲಿದ್ದು ಪದಕಗಳ ಬೇಟೆಯಾಡಿದ್ದಾರೆ.ಪಟ್ನಾದಲ್ಲಿ ನಡೆದ ಜೂನಿಯರ್‌ ವಿಭಾಗದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 65 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿರುವ ಫಾಲಾಕ್ಷ ನಂತರ ಅಖಿಲ ಭಾರತ ಅಂತರ ವಿವಿ ಕುಸ್ತಿಯಲ್ಲಿ ಬೆಳ್ಳಿ ಗೆದ್ದಿದ್ದಾರೆ.ಜೂನಿಯರ್ ವಿಭಾಗದ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆಯಾಗಿರುವ ಅವರು ಏಷ್ಯಾ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕನಸು ಹೊತ್ತಿದ್ದಾರೆ. ಪ್ರಶಾಂತಗೌಡ ಕೂಡ ಈ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ 56ಕೆಜಿ ವಿಭಾಗದಲ್ಲಿ ಪ್ರಶಾಂತಗೌಡ ಕಂಚು ಗೆದ್ದಿದ್ದರು. 

 

ಮುಧೋಳದ ಚಿನ್ನ: ಕಳೆದ ಕೆಲವು ವರ್ಷಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಬಾಗಲಕೋಟೆ ಜಿಲ್ಲೆ ಮುಧೋಳದ ಸಹೋದರರಾದ ಸಚಿನ್ ಫಡತರೆ ಮತ್ತು ಸತೀಶ ಫಡತರೆ ಅವರ ಹಾದಿಯಲ್ಲೇ ಸಾಗುತ್ತಿರುವ ಇವರಿಬ್ಬರ ಕಿರಿಯ ಸಹೋದರ ಸುನೀಲ ಫಡತರೆ ಸಾಯ್‌ಗೆ ಪದಕಗಳನ್ನು ತಂದುಕೊಟ್ಟಿದ್ದಾರೆ.ಡಿಸೆಂಬರ್‌ನಲ್ಲಿ ನಡೆದ ಅಖಿಲ ಭಾರತ ಶಾಲಾ ವಿದ್ಯಾರ್ಥಿಗಳ ಕುಸ್ತಿಯ 76 ಕೆಜಿ ವಿಭಾಗದಲ್ಲಿ ಚಿನ್ನಕ್ಕೆ ಮುತ್ತು ನೀಡಿದ್ದ ಅವರು ಫೆಬ್ರುವರಿಯಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್‌ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದು ರಾಷ್ಟ್ರೀಯ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. 

 

ಕಳೆದ ವರ್ಷ ಅಖಿಲ ಭಾರತ ಶಾಲಾ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದಿದ್ದ ಮುಧೋಳದ ರಮೇಶ ಹೊಸಕೋಟೆ ಅವರ ಸಹೋದರ ಸುನೀಲ ಹೊಸಕೋಟೆ ಅಖಿಲ ಭಾರತ ಶಾಲಾ ಕುಸ್ತಿಯ 74 ಕೆಜಿ ವಿಭಾಗದಲ್ಲಿ ಬೆಳ್ಳಿ ಗೆದ್ದ ಬೆನ್ನಲ್ಲೇ ಬೆಲ್ಟ್ ಕುಸ್ತಿಯಲ್ಲೂ ಸಾಧನೆ ಮಾಡಿದ್ದು ಚಿನ್ನದ ನಗೆ ಬೀರಿದ್ದಾರೆ.ಉತ್ತರ ಕನ್ನಡ ಜಿಲ್ಲೆ ಹಳಿಯಾಳದ ಮಹೇಶ ಪಿ.ಗೌಡ ಕೂಡ ಅಖಿಲ ಭಾರತ ಅಂತರ ಶಾಲಾ ಕುಸ್ತಿಯ 55 ಕೆಜಿ ವಿಭಾಗದ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಈ ಸಾಧಕರ ಪೈಕಿ ಮಹೇಶ ಗೌಡ ಮತ್ತು ಸುನೀಲ ಹೊಕೋಟೆ ಗ್ರೀಕೊ ರೋಮನ್‌ ಶೈಲಿಯಲ್ಲಿ ಪದಕಗಳನ್ನು ಗೆದ್ದಿದ್ದರೆ, ಉಳಿದವರೆಲ್ಲರೂ ಫ್ರೀಸ್ಟೈಲ್ ಕುಸ್ತಿಪಟುಗಳು.

 

ಕೆ.ಶ್ರೀನಿವಾಸಗೌಡ ಮತ್ತು ಬಿ.ಶಂಕರಪ್ಪ ಅವರ ‘ಗರಡಿ’ಯಲ್ಲಿ ಪಳಗುತ್ತಿರುವ ಈ ಪೈಲ್ವಾನರು ತಂದುಕೊಟ್ಟ ಪದಕಗಳು ಇತ್ತೀಚಿನ ವರ್ಷಗಳಲ್ಲಿ ಸಾಯ್‌ಯ ಗರಿಷ್ಠ ಸಾಧನೆಗೆ ಕಾರಣವಾಗಿವೆ.‘ಕಳೆದ ಬಾರಿ ಒಟ್ಟು ಐದು ಪದಕಗಳನ್ನು ಸಾಯ್‌ ಪೈಲ್ವಾನರು ಗೆದಿದ್ದರು. ಈ ಹಿಂದಿನ ಗರಿಷ್ಠ ಸಾಧನೆ ಆರು ಪದಕಗಳು. ಈಗ ಈ ಸಂಖ್ಯೆ ಎಂಟಕ್ಕೆ ಏರಿರುವುದು ಸಂಭ್ರಮ ತಂದಿದೆ’ ಎನ್ನುತ್ತಾರೆ ತರಬೇತುದಾರರು. 

 

***

ಕುಸ್ತಿಯಲ್ಲಿ ಭವಿಷ್ಯವಿದೆ ಎಂಬ ವಿಶ್ವಾಸ ಪೈಲ್ವಾನರಿಗೆ ಬಂದಿದೆ. ಸೇನೆ ಮತ್ತು ಇತರ ಕ್ಷೇತ್ರಗಳಲ್ಲಿ ಕುಸ್ತಿಪಟುಗಳಿಗೆ ಉದ್ಯೋಗ ಸಿಗುತ್ತಿದೆ. ಅವರನ್ನು ಚೆನ್ನಾಗಿ ನಡೆಸಿಕೊಳ್ಳಲಾಗುತ್ತದೆ. ಕುಸ್ತಿಯನ್ನು ಮನೆತನದ ಮತ್ತು ಊರಿನ ಗೌರವ ಎಂದು ತಿಳಿದುಕೊಂಡವರೂ ಸಾಕಷ್ಟು ಮಂದಿ ಇದ್ದಾರೆ.ಈ ಎಲ್ಲ ಕಾರಣಗಳು ಇದರತ್ತ ಜನರ ಒಲವು ಹೆಚ್ಚಲು ನೆರವಾಗಿವೆ. ಮಕ್ಕಳನ್ನು ಕುಸ್ತಿ ಅಖಾಡಗಳತ್ತ ಕಳುಹಿಸಲು ಪಾಲಕರು ಮುತುವರ್ಜಿ ವಹಿಸುತ್ತಿದ್ದಾರೆ. ಹೀಗಾಗಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ಕೂಡ ಈ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದಾರೆ. ಈ ಬಾರಿ ಪದಕಗಳನ್ನು ಬಾಚಿದ ಸಾಯ್‌ ಕುಸ್ತಿಪಟುಗಳು ತಮ್ಮ ಹಿರಿಯರನ್ನು ಕಂಡು ಬೆಳೆದವರು. ಅವರ ಹಾದಿಯಲ್ಲೇ ಹಜ್ಜೆ ಹಾಕುತ್ತಿರುವವರು.

–ಬಿ.ಶಂಕರಪ್ಪ, ಭಾರತೀಯ ಕ್ರೀಡಾ ಪ್ರಾಧಿಕಾರ ಧಾರವಾಡ ಕೇಂದ್ರದ ಕುಸ್ತಿ ಕೋಚ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry