ನಗೆಗೆ ಬೇಕಿದೆ ನೈಜ ಚಿಕಿತ್ಸೆ

7

ನಗೆಗೆ ಬೇಕಿದೆ ನೈಜ ಚಿಕಿತ್ಸೆ

Published:
Updated:

ಈಚೆಗೆ ನಾನೊಂದು ವಿನೋದೋತ್ಸವದಲ್ಲಿ ಭಾಗಿಯಾಗಿದ್ದೆ. ವೇದಿಕೆಯಲ್ಲಿದ್ದ ಅತಿಥಿಗಳ ಸರದಿ ನಂತರ ಪ್ರೇಕ್ಷಕರೂ ನಗಿಸಲು ಮುಂದೆ ಬರಬಹುದೆಂದು ಸಂಘಟಕರು ಪ್ರಕಟಿಸಿದರು. ಕೆಲವರು ತಕ್ಕಮಟ್ಟಿಗೆ ಕರತಾಡನಕ್ಕೆ ಪಾತ್ರರಾದರು. ಒಬ್ಬರು ‘ನಾನು ಹಾಸ್ಯ ಮಾಡುತ್ತಿರುವುದು ಇದೇ ಮೊದಲು.

ದಯವಿಟ್ಟು ನಗಬೇಡಿ’ ಎಂದಾಗ ಕ್ಷಣ ಹೊತ್ತು ಸಭೆ ತಬ್ಬಿಬ್ಬುಗೊಂಡಿತು. ಎಲ್ಲರಿಗಿಂತ ಜೋರಾಗಿ ಚಪ್ಪಾಳೆಯಾಗಿದ್ದು ಅವರಿಗೇ! ತಮಾಷೆ ಅರ್ಥವಾದರೆ ಸಣ್ಣ ಕರತಾಡನ, ಅರ್ಥವಾಗದಿದ್ದರೆ ದೊಡ್ಡ ಕರತಾಡನ ಎಂಬ ಅನುಭವೋಕ್ತಿ ಉಂಟು. ನಮ್ಮಲ್ಲಿ ಇಂದು ಹಾಸ್ಯ ಕಾರ್ಯಕ್ರಮಗಳು ಹಿಂದೆಂದೂ ಇಲ್ಲದಷ್ಟು ಸಂಖ್ಯೆಯಲ್ಲಿ ನೆರವೇರುತ್ತವೆ. ಟಿ.ವಿ. ಚಾನೆಲ್‌ಗಳಂತೂ ನಿಯಮಿತವಾಗಿ ಅವನ್ನು ಬಿತ್ತರಿಸುತ್ತವೆ.

ನಗುವವರಿಗೂ ಬರವಿಲ್ಲ. ಇಂಥ ಚಟಾಕಿ, ಪ್ರಸಂಗ ಹೇಳಿ ಅಂತ ಒತ್ತಾಯಗಳೂ ಬರುತ್ತವೆ. ಆದರೆ ನಗಿಸುವುದು, ನಗುವುದು ಕೇವಲ ಯಾಂತ್ರಿಕವಾಗಿದೆ.

ಹೇಳಿದ್ದನ್ನೇ ಹೇಳುವ ನಗೆಪಟುಗಳು. ನಕ್ಕಿದ್ದನ್ನೇ ನಗುವ ಶ್ರೋತೃಗಳು. ಹಾಸ್ಯಾನುಸಂಧಾನ ತವಡು ಕುಟ್ಟುವ ಕೆಲಸವಾಗಿದೆ. ಯಾರದೋ ಅನುಭವಗಳನ್ನು ತಮ್ಮದೆನ್ನುವಂತೆ ಬಿಂಬಿಸಿ ನಗಿಸಲೆತ್ನಿಸುವುದಿದೆ.ಇದಕ್ಕೆ ಅಪವಾದಗಳು ಬೆರಳೆಣಿಕೆಯಷ್ಟು ಮಾತ್ರ. ಹಾಸ್ಯಪ್ರವೃತ್ತಿಯೆಂದರೆ ಸಂಗತಿಗಳನ್ನು ವಿವಿಧ ಕೋನ, ಮಗ್ಗುಲುಗಳಿಂದ ವಿವಿಧ ಬಗೆಗಳಲ್ಲಿ ನೋಡುವುದು. ಸಮಯಸ್ಫೂರ್ತಿಯಿಂದ ವಿನೋದ ಪುಟಿಯದಿದ್ದರೆ ಅದು ಕೃತ್ರಿಮವಾಗುತ್ತದೆ. ಅಶ್ಲೀಲ, ಕ್ರೌರ್ಯದ ಹಾದಿಗೆ ಹೊರಳುತ್ತದೆ.ಹಾಸ್ಯದ ಮೂಲ ಎಡವಟ್ಟು. ಶುದ್ಧ ವಿನೋದದ ಹಿಂದೆ ಇರುವುದು ನೋವೇ ಪರಂತು ಹಿಗ್ಗಲ್ಲ. ಅದರ ಮುಂದೆ ನೀತಿಯಿರುತ್ತದೆ. ಸಮಯೋಚಿತವಾಗಿ ಅರಳುವ ಹಾಸ್ಯ ಕಾಲಾತೀತ. ಬ್ರಿಟನ್ನಿನ ಪ್ರಸಿದ್ಧ ಕಾದಂಬರಿಕಾರ, ಹಾಸ್ಯಪಟು ಪಿ. ಜಿ. ವೋಡೌಸ್  ಒಮ್ಮೆ ಮಹಡಿಯಿಂದ ಇಳಿದು ಬರುತ್ತಿರುತ್ತಾರೆ. ಅವರಿಗೆ ಎದಿರಾಗಿ ಅವರ ಪರಿಚಿತರೊಬ್ಬರು ಮೆಟ್ಟಿಲೇರುತ್ತಿರುತ್ತಾರೆ. ಅದೇಕೋ ಆತ ‘ನಾನು, ದಡ್ಡರಿಗೆ ಹಾದಿ ಬಿಡುವುದಿಲ್ಲ’ ಎನ್ನುತ್ತಾರೆ.ಸ್ವಲ್ಪವೂ ವಿಚಲಿತರಾಗದೆ ವೋಡೌಸ್ ‘ಆದರೆ ನಾನು ಹಾದಿ ಬಿಡುತ್ತೇನೆ’ ಎನ್ನುವರು! ಪರಿಚಿತ ಮತ್ತಷ್ಟು ಆಪ್ತನಾಗಲು ಅವರ ಈ ಉದ್ಗಾರಕ್ಕಿಂತ ಬೇಕೆ?

ಹಾಸ್ಯಕ್ಕೆ ಇಂತಹುದೇ ವಸ್ತು ಬೇಕೆಂದಿಲ್ಲ. ಅದು ಬಯಸುವುದು ಹೊಸ ಹೊಸ ನಿರಾಳಗಳ ಸಾಧ್ಯತೆಯನ್ನು.

ಬೀಚಿಯವರು ಹೊರಗೆ ಬಿಡುವ ಪಾದರಕ್ಷೆಗಳ ಕಳವಿಗೆ ಒಂದು ಪರಿಹಾರ ಸೂಚಿಸುತ್ತಾರೆ: ‘ಮದುವೆ ಮನೆಗೆ ಹೋಗುವಾಗ ಚಪ್ಪಲಿ ಧರಿಸಿ ಹೋಗಬೇಡಿ. ಬರುವಾಗ ಹಾಕ್ಕೊಂಡು ಬನ್ನಿ!’ ಅಂತೆಯೆ ಕವಿ ಪರಮೇಶ್ವರ ಭಟ್ಟರು ಸೊಗಸಾಗಿ ಪೊರಕೆಯನ್ನು ಮುಕ್ತ ಕಂಠದಿಂದ ‘ಧ್ವಜವೆತ್ತಿ ಹೊರಟಿದೆ ನೋಡಿ ಪೊರಕೆ ಜಗದ ಶುದ್ಧೀಕರಣಕ್ಕೆ’ ಎಂದು ಪ್ರಶಂಸಿಸುತ್ತಾರೆ.ರಾಜರತ್ನಂ ಏನು ಕಡಿಮೆ ನಗಿಸಿದ್ದಾರೆಯೇ? ‘ನೋಡಪ್ಪ ನಂಗೆ ಯಾವುದೇ ಪ್ರಶಸ್ತಿ, ಗೌರವ ಬಂದರೂ ಅವರಿವರು ಬಹಳ ತಡವಾಗಿ ಬಂತು, ಯಾವಾಗ್ಲೊ ನಿಮ್ಗೆ ಬರಬೇಕಿತ್ತು ಅಂತಾರೆ. ನಾಳೆ ನಾನು ಈ ಲೋಕ ಬಿಟ್ಟ ಮೇಲೂ ಖಂಡಿತ ಹೇಳೋರೆ ಯಾವತ್ತೊ ನಾನು...’ ಎಂದು ಅವರು ಮಾತು ನಿಲ್ಲಿಸುತ್ತಿದ್ದರು!ಅಂತೂ ಇಂತೂ ‘ರಾತ್ರಿ ಒಂದು ಗುಳಿಗೆ, ಬೆಳಗ್ಗೆ ಎದ್ರೆ ಇನ್ನೊಂದು’ ಎಂಬ ವೈದ್ಯರ ಸಲಹೆ. ಹೋಟೆಲ್ಲಿನಲ್ಲಿ ಗಿರಾಕಿ ನಿನ್ನೆ ವಡೆ ಎಷ್ಟು ಗರಿಮುರಿ, ಇವೊತ್ತ್ಯಾಕೆ ಹೀಗೆ ಎನ್ನಲು ಪರಿಚಾರಕನಿಂದ ‘ಇದೂ ನಿನ್ನೆಯದೇ ಸಾರ್’ ಎಂಬ ಸಮಜಾಯಿಷಿ. ‘ನಮ್ಮ ಮನೆ ಆಳು ಎಂಥ ಮಳೆ ಸುರೀತಿದ್ರೂ ಗಿಡಗಳಿಗೆ ನೀರು ಹಾಕೋದ್ನ ತಪ್ಪಿಸೊಲ್ಲ’ ಎಂಬ ಮನೆ ಮಾಲೀಕನ ಬೀಗು-ಇವೇ ಮುಂತಾದ ಚಟಾಕಿಗಳು ಅನವರತ ಸಿಡಿಯುತ್ತವೆ ಎನ್ನೋಣ.ವೇದಿಕೆಯಲ್ಲಿ ಕಾಣಿಸಿಕೊಂಡು ಪೈಪೋಟಿಯಲ್ಲಿ ಜಮಾಯಿಸಿದವರ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುವುದೆ ಹಾಸ್ಯಪಟುತ್ವವೆನ್ನಿಸುವುದು ವಿಪರ್ಯಾಸ. ಪ್ರಹಸನ ಬ್ರಹ್ಮ ಟಿ.ಪಿ. ಕೈಲಾಸಂ ತಮ್ಮ ನಗೆಯಾನದಾದ್ಯಂತ ಅಪ್ಪಿತಪ್ಪಿಯೂ ಪರನಿಂದನೆಗಿಳಿಯಲಿಲ್ಲ. ಬದಲಿಗೆ ಸ್ವಯಂ ತಮ್ಮನ್ನೇ ನಗಿಸುವ ಧರ್ಮಕ್ಕೆ ಬಳಸಿಕೊಂಡರು.‘ನೀವು ಇಷ್ಟೊಂದು ಧೂಮಪಾನ ಮಾಡುವಿರಲ್ಲ, ನಿಮ್ಮ ಆರೋಗ್ಯ ಅಪ್‌ಸೆಟ್ ಆಗದೆ’ ಅಂತ ಸಂವಾದವೊಂದರಲ್ಲಿ ಕೇಳಿದಾಗ ಕೈಲಾಸಂ ‘ಇಲ್ಲ ಸೆಟ್‌ಅಪ್ ಆಗುತ್ತೆ’  ಎಂದರಂತೆ! ಬದುಕಿನ ಜಂಜಡ, ಒತ್ತಡ ತುಸುವಾದರೂ ಶಮನಗೊಳ್ಳಲು ನಮ್ಮನ್ನು ನಗಿಸಬೇಕಾದ್ದು ಇಂಥ ಮೆಲುಕು ಹಾಕುವಂಥ ಮೊನಚುಗಳು. ಸಿದ್ಧ ಮಾದರಿಯ ನಗೆ ಕೇವಲ ಬಟ್ಟಲಿನಲ್ಲಿ ಏಳುವ ಬಿರುಗಾಳಿ. ಅದು ಕ್ಷಣಿಕ.

ನೆನಪಿಸಿಕೊಂಡಷ್ಟೂ ನಗೆಯುಕ್ಕಿಸುವ ಪ್ರಖರತೆ ಸಾಂದರ್ಭಿಕ ಹಾಸ್ಯಕ್ಕಿದೆ. ವಿನೋದದ ಸಂವಹನಕ್ಕೆ ಮಾತು ಅನಿವಾರ್ಯ ಅಂಬಾರಿಯೇನೂ ಅಲ್ಲ. ಸನ್ನೆ, ಹಾವಭಾವಗಳಿಂದಲೇ ಗಂಭೀರ ವಿನೋದ ಪ್ರವಹಿಸುವುದನ್ನು ಕಂಡಿದ್ದೇವೆ. ಅಷ್ಟಕ್ಕೂ ಮಾತು, ಭಾಷೆಗೆ ಪ್ರೇರಣೆಯಾದುದು ಮೂಕತನವೇ ತಾನೆ? ಸಂಸ್ಕೃತ ಸಾಹಿತ್ಯದಲ್ಲಿನ ಹಾಸ್ಯ ಬಹುತೇಕ ಮಂದಗತಿಯದಾದರೂ ಅತ್ಯಂತ ಆಳವಾಗಿ ಪ್ರಭಾವಿಸುವಂಥದ್ದು:‘ಗುರವೋ ಬಹವೋ ಸಂತಿ ಶಿಷ್ಯವಿತ್ತಾಪಹಾರಕಾಃ ಗುರವೋ ವಿರಲಾಸ್ಸಂತಿ ಶಿಷ್ಯಚಿತ್ತಾಪಹಾರಕಾಃ’ (ಶಿಷ್ಯರ ಹಣ ಅಪಹರಿಸುವ ಗುರುಗಳು ಬಹಳ. ಆದರೆ ಅವರ ಮನಸ್ಸು ಅಪಹರಿಸುವ ಗುರುಗಳು ವಿರಳ). ಮಹಾಭಾರತದ ‘ಶಾಂತಿ ಪರ್ವ’ದಲ್ಲಿ ದಡ್ಡರು ಮನೆ ಕಟ್ಟುವರು. ಬುದ್ಧಿವಂತರು ಅದರಲ್ಲಿ ವಾಸಿಸುವರು ಎನ್ನುವ ಇಂಗಿತವಿದೆ. ಇಂದಿಗೂ ಪ್ರಸ್ತುತವೆನ್ನಿಸುವ ವಿಡಂಬನೆಯಿದು, ಅ ಕಾಲದ ಸಾಮಾಜಿಕ ಪರಿಸ್ಥಿತಿಗೆ ಕನ್ನಡಿ ಹಿಡಿಯುತ್ತದೆ.ನಗೆ ಹುಟ್ಟು– ಸಾವನ್ನು ಸಮನಾಗಿ, ಸಹಜವಾಗಿ ಪರಿಭಾವಿಸುತ್ತದೆ. ಯಾತ್ರೆ ಹೋಗಿ ಸ್ವಂತ ಊರಿಗೆ ಇಬ್ಬರು ವೈದ್ಯ ಸಹೋದರರು ಮರಳುತ್ತಿದ್ದರಂತೆ. ಮಸಣದಲ್ಲಿ ದಟ್ಟ ಹೊಗೆ ಕಾಣಿಸುತ್ತದೆ. ಅಣ್ಣನ ಸ್ವಗತ ಸ್ವಾರಸ್ಯ ವಾಗಿದೆ: ‘ನಾನು ಇಷ್ಟು ದಿನ ಊರಿನಲ್ಲಿರಲಿಲ್ಲ. ನನ್ನ ತಮ್ಮನೂ ಸಹ ಊರಿನಲ್ಲಿರಲಿಲ್ಲ. ಹಾಗಿದ್ದರೂ ಇದು ಯಾರ ಕೈವಾಡ?!’ ಮುಸ್ಸಂಜೆ ಬೆಂಗಳೂರಿನ ಜಯನಗರದ ಬಸ್ ನಿಲ್ದಾಣದಲ್ಲಿ ಅರವತ್ತರ ವೃದ್ಧರು ಹೂವಿನ ಹಾರವಿದ್ದ ಚೀಲ ಹಿಡಿದು ಕಸಿವಿಸಿಯಿಂದ ಶತಪಥ ಅಡ್ಡಾಡುವರು.

ಅವರ ಗೆಳೆಯರೊಬ್ಬರು ಅವರನ್ನು ಗುರುತಿಸಿ ‘ಇದೇನು ನೀವಿಲ್ಲಿ? ಯಾರನ್ನಾದರೂ ನೋಡಬೇಕಿತ್ತೆ?’ ಅಂತ ಪ್ರಶ್ನಿಸುತ್ತಾರೆ. ವೃದ್ಧರು ಮುಚ್ಚುಮರೆಯಿಲ್ಲದೆ ನಿಜ ಹೇಳಿಬಿಡೋಣವೆಂದು ನಿರ್ಧರಿಸಿದ್ದು ವಿಶೇಷ. ‘ಏನೂ ಇಲ್ಲಪ್ಪ. ಇಲ್ಲೇ ಒಬ್ಬರ ಬಂಧುಗಳ ಮನೆಗೆ ಹೋಗಿದ್ದೆ. ಅಲ್ಲೇ ಡಾಕ್ಟರೂ ಇದ್ರು.ಇನ್ನೂ ಮೂರು ದಿನವಾದ್ರೂ ಬೇಕು ಅಂದ್ರು. ಬಂದ ಕೆಲಸವಾಗಲಿಲ್ಲ ಅಂದ್ಮೇಲೆ ನಾನು ನನ್ನೂರು ಕಡೆಗೆ ಹೋಗೋದೇ ಅಲ್ವೆ ಹೇಳಿ’ ಎಂದರು ಹಿರಿಯ ಪ್ರಜೆ! ನಗುವುದು ಸಹಜ ಧರ್ಮವಾಗಲು ನೈಜತೆಯೇ ನಗಿಸಲು ಬೇರು, ಜೀವಾಳ. ನಗೆಯ ಹಾಯಿ ದೋಣಿಗೆ ಆಗಿಂದಾಗ್ಗೆ ಯುಕ್ತ ಸಂಕಲ್ಪ, ಚಿಕಿತ್ಸೆ ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry