ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಐಎಸ್‌ಸಿ ದೇಶದ ನಂ.1 ಶಿಕ್ಷಣ ಸಂಸ್ಥೆ

ಉನ್ನತ ಶಿಕ್ಷಣ ಸಂಸ್ಥೆಗಳ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಎರಡನೇ ವರ್ಷವೂ ಬೆಂಗಳೂರಿನ ಸಂಸ್ಥೆಗೆ ಮೊದಲ ಸ್ಥಾನ
Last Updated 3 ಏಪ್ರಿಲ್ 2017, 19:18 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂಬ ಹಿರಿಮೆಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ  (ಐಐಎಸ್‌ಸಿ) ಸತತ ಎರಡನೇ ವರ್ಷವೂ ಪಾತ್ರವಾಗಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳ ವಾರ್ಷಿಕ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಐಐಎಸ್‌ಸಿ ಮೊದಲ ಸ್ಥಾನಗಳಿಸಿದೆ.

ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮೊದಲ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು) 9ನೇ ಸ್ಥಾನ ಮತ್ತು ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ 10ನೇ ಸ್ಥಾನ ಗಳಿಸಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಅವರು ಎರಡನೇ ಆವೃತ್ತಿಯ ರ‍್ಯಾಂಕಿಂಗ್‌ ಅನ್ನು ಸೋಮವಾರ ಪ್ರಕಟಿಸಿದರು.

ಕಳೆದ ತಿಂಗಳು ಬಿಡುಗಡೆಯಾದ ಜಗತ್ತಿನ ಮೊದಲ ಹತ್ತು ಅತ್ಯುನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿಯೂ ಐಐಎಸ್‌ಸಿ ಸ್ಥಾನ ಪಡೆದಿತ್ತು. ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುವ ‘ಟೈಮ್ಸ್‌ ಉನ್ನತ ಶಿಕ್ಷಣ ರ್‌್ಯಾಂಕಿಂಗ್‌’ನಲ್ಲಿ ಐಐಎಸ್‌ಸಿ ಎಂಟನೇ ಸ್ಥಾನ ಗಳಿಸಿತ್ತು. 

ಆ ಮೂಲಕ, ಅಮೆರಿಕದ ಕ್ಯಾಲಿಫೋರ್ನಿಯಾ ತಂತ್ರಜ್ಞಾನ ಸಂಸ್ಥೆ, ದಕ್ಷಿಣ ಕೊರಿಯಾದ ಪೊಹಾಂಗ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿ ಸೇರಿದಂತೆ ಜಗತ್ತಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಸಾಲಿಗೆ ಅದು ಸೇರಿತ್ತು.

ಹೆಚ್ಚು ಅನುದಾನ ಸ್ವಾಯತ್ತೆ:  ವಾರ್ಷಿಕ ರ‍್ಯಾಂಕಿಂಗ್‌ನಲ್ಲಿ ಅತ್ಯುತ್ತಮ ಸ್ಥಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸಚಿವಾಲಯವು ಹೆಚ್ಚು ಅನುದಾನ, ಹೆಚ್ಚಿನ ಸ್ವಾಯತ್ತೆ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸಲಿದೆ ಎಂದು  ಪ್ರಕಾಶ್‌ ಜಾವಡೇಕರ್‌ ಹೇಳಿದರು.

ಆರು ವಿಭಾಗಗಳಲ್ಲಿ ರ‍್ಯಾಂಕ್‌
ಈ ವರ್ಷ ಆರು ವಿಭಾಗಗಳಲ್ಲಿ ರ‍್ಯಾಂಕ್‌ ನೀಡಲಾಗಿದೆ.

ಸಮಗ್ರ, ಕಾಲೇಜುಗಳು, ವಿಶ್ವವಿದ್ಯಾಲಯಗಳು, ಮ್ಯಾನೇಜ್‌ಮೆಂಟ್‌, ಎಂಜಿನಿಯರಿಂಗ್‌ ಮತ್ತು ಫಾರ್ಮಸಿ ವಿಭಾಗಗಳಲ್ಲಿ ರ‍್ಯಾಂಕ್‌ ನೀಡಲಾಗಿದೆ.
ಐಐಎಸ್‌ಸಿಯು ಸಮಗ್ರ ಮತ್ತು ವಿಶ್ವವಿದ್ಯಾಲಯ ವಿಭಾಗಗಳಲ್ಲಿ ಮೊದಲ ಸ್ಥಾನ ಗಳಿಸಿದೆ. ಕಳೆದ ವರ್ಷ ವಿವಿ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಎನ್‌ಯು ಈ ಬಾರಿ ಎರಡನೇ ಸ್ಥಾನಕ್ಕೆ ಏರಿದೆ. ಸಮಗ್ರ ವಿಭಾಗದಲ್ಲಿ ಆರನೇ ರ‍್ಯಾಂಕ್‌ ಗಳಿಸಿದೆ.

ಆಯ್ಕೆ ಹೇಗೆ?
ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ಅಡಿಯಲ್ಲಿ ರ‍್ಯಾಕಿಂಗ್‌ ನೀಡಲಾಗುತ್ತದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಚಿಸಿರುವ ಪ್ರಮುಖರ ಸಮಿತಿ ಮಾಡುವ ಶಿಫಾರಸುಗಳ ಮೇಲೆ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಲಾಗುತ್ತದೆ.

ಐಐಎಂಬಿಗೆ 2ನೇ ಸ್ಥಾನ
ಮ್ಯಾನೇಜ್‌ಮೆಂಟ್‌ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಈ ಬಾರಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಕಳೆದ ವರ್ಷ 2ನೇ ಸ್ಥಾನದಲ್ಲಿದ್ದ ಅಹಮದಾಬಾದ್‌ನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಮೊದಲ ಸ್ಥಾನ ಗಳಿಸಿದೆ.

ಎಂಜಿನಿಯರಿಂಗ್‌ ವಿಭಾಗದಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆ–ಮದ್ರಾಸ್‌ (ಐಐಟಿ–ಮದ್ರಾಸ್‌) ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.

ಮಾನದಂಡಗಳು

* ಶಿಕ್ಷಣ ಸಂಸ್ಥೆಗಳಲ್ಲಿರುವ ಸಂಪನ್ಮೂಲ, ಬೋಧನಾ ವಿಧಾನ ಮತ್ತು ಕಲಿಕಾ ಪ್ರಕ್ರಿಯೆ
* ಅಧ್ಯಯನ ಮತ್ತು ವೃತ್ತಿಪರ ನಡಾವಳಿಗಳು
* ವಿದ್ಯಾರ್ಥಿಗಳ ತೇರ್ಗಡೆ ಪ್ರಮಾಣ
* ಶಿಕ್ಷಣ ಸಂಸ್ಥೆಯ ವ್ಯಾಪ್ತಿ ಮತ್ತು ಒಳಗೊಳ್ಳುವಿಕೆ
* ಗ್ರಹಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT